ಫುಲ್ ಆಕ್ಸನ್ - ಹಾಸ್ಯ ಸಿನಿಮಾ, ಇಂದೇ ನೋಡಿರಿ

To prevent automated spam submissions leave this field empty.

ನಿರ್ದೇಸನ, ಸಾಹಿತ್ಯ, ಸಂಭಾಷಣೆ, ಸಂಗೀತ, ಕಲೆ, ಪ್ರಚಾರ, ಲೈಟ್ ಬಾಯ್ - ಶ್ರೀ ಶ್ರೀ ಶ್ರೀ ಗುಬ್ಬುನಾಥ ಗೌಡಪ್ಪ.

ಹಿಗೊಂದು ರಟ್ಟಿನ ಮೇಲೆ ಬರೆದ ಬೋಲ್ಡು ಗೌಡಪ್ಪನ ಮುಂದೆ ನೇತಾಡ್ತಾ ಇತ್ತು. ಏನ್ರೀ ಇದು ಗೌಡ್ರೆ. ಲೇ ಕೋಮಲಾ ಸಿನಿಮಾ ಡೈರೆಕ್ಟ್ ಮಾಡ್ತಾ ಇವ್ನಿ. ಅದಕ್ಕೆ ಅಂತಾ ನಮ್ಮ ಎರಡನೆ ಹೆಂಡರ ಬೆಂಗಳೂರು ಮನೆಯಾ ಮಾರೀವ್ನಿ ಅಂದಾ ಗೌಡಪ್ಪ, ಹಡಬಿದು ಅಂದರೆ ಹಿಂಗೆಯಾ , ಪಿಚ್ಚರ್ ಫ್ಲಾಪ್ ಆದ್ರೆ ವರದಕ್ಸಿಣೆ ಕೇಸು ಹಾಕ್ತೀನಿ ಅಂದ್ಲು ಒಳಗಿದ್ದ ಹೆಂಡರು. ಹೆಗಲು ಮೇಲೆ ಗಬ್ಬು ಟವಲ್, ತಲೆಗೆ ಪ್ಲಾಸ್ಟಿಕ್ ಟೋಪಿ. ನೋಡ್ಲಾ ಕೋಮಲ್ ಲೋ ಬಜೆಟ್ ಪಿಚ್ಚರ್, ಸುಬ್ಬನ್ನ ಹೀರೋ, ಬಯಲು ನಾಟಕದ ಹಲ್ಲು ಉಬ್ಬು ಸುಂದರಿನಾ ಹೀರೋಯಿನ್ ಮಾಡೀವ್ನಿ. ಕುಟುಂಬ ಸಮೇತ ಟಾಕೀಸಿಗೆ ಬಂದು, ಎದ್ದು ಹೋಗುವಾಗ ಚಿತ್ರ ಅರ್ಥ ಆಗದೇ ಹೋದ್ರು ಕನಿಷ್ಠ ಪಕ್ಸ ಮೂರು ಗಂಟೆ ನೆಮ್ಮದಿಯಿಂದ ಜನ ನಿದ್ದೆ ಮಾಡಬೇಕು ಅನ್ನೋದೆ ನನ್ನ ಆಸೆ. ಹಳ್ಯಾಗೆ ಸೂಟಿಂಗ್ ಅಂದ. ಅಷ್ಟರೊಳಗೆ ಸುಗರ್ ಲೆಸ್ ಚಾ ಬಂತು ಕುಡಿದು ಹೊಂಟೆ.

ಬೆಳಗ್ಗೆ ಸಿದ್ದೇಸನ ಗುಡ್ಯಾಗೆ ಮುಹೂರ್ತ. ಗೌಡಪ್ಪ ಸ್ನಾನ ಮಾಡದೆ ಅಂಗೇ ಹಣೆಗೆ ವಿಭೂತಿ ಹೊಡಕಂಡು ಬಂದಿದ್ದ. ಸ್ವಾಮೇರು ಪೂಜೆ ಮಾಡಿದ್ರು. ಕಾಯಿ ಒಡೀರಿ ಅಂದ ಪೂಜಾರಪ್ಪ. ಸಿಪ್ಪೆ ಕಾಯಿ ತಂದಿದ್ದ ಗೌಡಪ್ಪ. ನೆಲದ ಮ್ಯಾಕೆ ಕೂತು ಬಿಡಿಸ್ದ. ಬೆವರಿಗೆ ಸಲ್ಟು ಒದ್ದೆಯಾಗಿತ್ತು. ಹಣೆ ಒರೆಸಿಕೊಂಡು ವಿಭೂತಿ ಅಳಸೋಯ್ತು. ಕಾಯಿ ಮ್ಯಾಕೆ ಒಂದು ಪ್ಯಾಕೆಟ್ ಕರ್ಪೂರ, ಗೌಡಪ್ಪನ ಕೈ ಸುಟ್ಟು ಹೋಗಿ,ಮುಖ ಎಲ್ಲಾ ಕಪ್ಪಾಗಿತ್ತು. ಅವನು ಕಪ್ಪಾಗಿದ್ದಕ್ಕೆ ಕಾಣ್ತಾ ಇರ್ಲಿಲ್ಲ ಬುಡಿ.  ಸರಿ ಕಾಯಿನಾ ಎತ್ತಿ ಹೊಡೆದ. ಹೈಕ್ಳೆಲ್ಲಾ ಕಾಯಿ ಆರ್ಸಕಳಕ್ಕೆ ಅಂತಾ ಹೋದ್ರೆ ಕಾಯೇ ಇಲ್ಲ. ಮಗಂದು ನಿಂಬೆಗಾತ್ರದ ಕಾಯಿ ಪುಟಿದು ಗೌಡಪ್ಪನ ಹೆಂಡತಿಗೆ ಹೊಡೆದು ಕ್ಯಾಮೆರಾ ಗ್ಲಾಸ್ಗೆ ಹೊಡೆದಿತ್ತು. ಅವನ ಹೆಂಡರಿಗೆ ಅರಿಸಿನ ಬಳದ್ರೆ ಥೇಟ್ ಆದಿಸಕ್ತಿ ಆದಂಗೆ ಆಗಿದ್ಲು. ಗ್ಲಾಸ್ ಒಡೆದಿದ್ದಕ್ಕೆ ಗೌಡಪ್ಪ ದಂಡ ಕಟ್ಟಿದ್ದ.

ಸರಿ ಸೂಟಿಂಗ್ ಸರುವಾಯ್ತು. ಅಟ್ಟೊತ್ತಿಗೆ ಗಾಡ್ಯಾಗೆ ಒಂದು ಮೂಟೆ ಅರಿಸಿನ ತಂದು ಇಳಿಸಿ. ಗೌಡ್ರೆ ಬಾಡಿಗೆ ಕೊಡ್ರಿ ಅಂದಾ ನಿಂಗಾ. ಯಾಕಲಾ, ಅರಿಸಿನದ ಮೂಟೆ. ಇಷ್ಟೊಂದು ಯಾಕಲಾ. ಏ ಪಿಚ್ಚರ್ ಮುಗಿಯೋ ಗಂಟ ಬೇಕಾಯ್ತದೆ. ಲೇ ಅರಿಸಿನ ಹಚ್ಚಿ, ಹಚ್ಚಿ ನನ್ನ ಮನೆ ತೊಳಿದು ಬಿಡ್ರಿ ಅಂದ. ಒಳ್ಳೆ ಮಳೆಗಾಲ, ಮಣ್ಣಿನ ನೆಲ ಜಾರಿಕೆ ಬೇರೆ. ಎಲ್ಲಾವು ಉಸಾರಾಗೆ ಬರೋವು. ಗೌಡಪ್ಪ ಸ್ಪೈಕ್ ಸೂ ಹಾಕಿದ್ದ, ಬೀಳ್ ಬಾರದು ಅಂತಾ. ಮರೆತು ನಿಂಗನ ಕಾಲ ಮೇಲೆ ಕಾಲಿಟ್ಟ ನೋಡಿ. ಹಸೀ ಮರಕ್ಕೆ ಗುನ್ನ ಹೊಡದಂಗೆ ಆಗಿತ್ತು. ಅವನ ತಂದಿದ್ದ ಅರಿಸಿನ ಅವನೇ ಬಳ್ಕಂಡ. 

ಸುಬ್ಬಂಗೆ ಬಯಲು ನಾಟಕದ ಬಬ್ಬೂರನ ತರಾ ಮೇಕಪ್ ಮಾಡಿದ್ರು. ಗುರುತು ಹಿಡಿಯೋದು ಕಷ್ಟ ಆಗಿ, ಎಲ್ರೂ ಸಾ, ಸಾ ಅನ್ನೋವು. ಸುಬ್ಬ ಅಂತಾ ಗೊತ್ತಾಗ್ತಿದ್ದಾಗೆನೇ ಏ ಥೂ ಅನ್ನೋರು. ಸುಂದರಿ ಹಿಂದಿನ ದಿನ ಗೌಡಪ್ಪನ ಮನ್ಯಾಗೆ ಸಾನೆ ಮೂಳೆ ಕಡಿದಿದ್ಲು. ಬಡ್ಡೆ ಹತ್ತದ್ದು ಅರ್ಜೆಂಟಿಗೆ ಹಲ್ಲು ಉಜ್ಜದೆ, ಅಂಗೇ ಬಾಯಿ ಮುಕ್ಕಳಿಸಿ ಬಂದಿದ್ಲು. ಸುಬ್ಬಂದು ಅವಳದು ಕ್ಲೋಸ್ ಅಪ್ ಷಾಟ್. ಆಕ್ಸನ್ ಅಂದಾ ಗೌಡಪ್ಪ. ಸುಂದರಿ " ನಾನು ನಿನ್ನ ಪಿರುತಿ ಮಾಡುತ್ತೇನೆ. ಸುಬ್ಬ ಅಂತಾ ಲಚಕ್ ಅಂತಾ ಕಿಸ್ ಹೊಡದೇ ಬಿಟ್ಲು. ಅವಳು ಸೈಡಿಗೆ ಬಂದರೆ ಸುಬ್ಬನ ಕೆನ್ಯಾಗೆ ರಕ್ತ. ಹಲ್ಲಿನ ಗುರುತು ಅಂಗೇ ಇತ್ತು. ಒಂದು 100ಗ್ರಾಂ ಮಾಂಸ ಹೊರ ಬಂದಿತ್ತು. ಅರಿಸಿನ ಅಂದರೆ, ಗೌಡಪ್ಪ ಲೇ ಇದು ಮೈಲಾರ ದೇವರು ಪಿಚ್ಚರ್ ಅಲ್ಲಾ ಕನ್ರಲಾ ಅಂದ.

ಸುಬ್ಬ ಲೇ ಅವಳು ಹಲ್ಲು ಉಜ್ಜಿಲ್ಲ ಕಲಾ ಸಾನೆ ವಾಸನೆ ಬತ್ತದೆ. ತಡೆಯಕ್ಕೆ ಆಯಕ್ಕಿಲ್ಲ. ಅವಳಿಗೊಂದು ಕ್ಲೋರೋಮಿಂಟ್ ಆದ್ರೂ ಕೊಡ್ರಲಾ. ಸರಿ ಸುಬ್ಬ, ಸುಂದರಿ ಓಡಿ ಬಂದು ತಬ್ಗಳೋ ಸೀನ್. ಆ ರಸ್ತೆ ತುದಿಯಾಗೆ ಸುಬ್ಬ, ಈ ರಸ್ತೆ ತುದಿಯಾಗೆ ಸುಂದರಿ, ಆಕ್ಸನ್. ಯಾರು ಬರ್ಲೇ ಇಲ್ಲ. ಕೊನೆಗೆ ಟವಲ್ ಎತ್ತಿ ತೋರಿಸದ ಮ್ಯಾಕೆ ಓಡೋಕ್ಕೆ ಸುರು ಮಾಡಿದ್ವು. ಸುಮಾರು ಅರ್ಧ ಕಿ.ಮೀ ಇತ್ತು. ಇದಕ್ಕೆ ಮೂರು ರೀಲ್ ಆಯ್ತದೆ ಅಂದ ಕಟ್ಟಿಗೆ ಒಡಿಯೋ ಕಿಸ್ನ. ರನ್ನಿಂಗ್ ರೇಸ್ನಾಗೆ ಬಂದಂಗೆ ಬಂದ್ವು. ಧಿಡೀರ್ ಅಂತಾ ಸುಬ್ಬನ ಕಾಲು 1 1/2 ಆಗಿ. ಒಸಿ ದೂರದಾಗೆ ಅಂಗೇ ನಿಂತ. ಬಾರಲಾ ಸುಬ್ಬ. ಹಿಂದಿನ ದಿನ ರಾತ್ರಿ ಒಳಚೆರಂಡಿ ಕೆಲಸ ಮಾಡ್ದೋರು ಗುಂಡಿ ಹೊಡೆದು ಸರಿ ಮುಚ್ಚೇ ಇಲ್ಲ. ಸುಬ್ಬನ ಕಾಲು ಸಿಕ್ಕಾಕಂಡ್ ಬಿಟ್ಟೈತೆ ಗೌಡ್ರೆ. ಎತ್ರಲಾ. ಮೊದಲು ನೀರು ಕೊಡ್ರಲಾ ಓಡಿ ಸಾನೆ ಸುಸ್ತಾಗೈತೆ ಅಂದಾ ಸುಬ್ಬ. ಅಲ್ಲೇ ನಲ್ಯಾಗೆ ಮರ್ತಿದ್ದ ನೀರು ಬಾಯಿಗೆ ಹುಯ್ದ್ವಿ. ಸುಂದರಿ ಮಾತ್ರ ಪಿಟಿ ಉಸಾನ ತರಾ ಓಡಿ ಬಂದೋಳೆ ನಿಲ್ಲೋಕೆ ಆಗದೆ, ಸುಬ್ಬನ ಮ್ಯಾಕೆ ಜಂಪ್ ಮಾಡ್ ಕಂಡ್ ಹೋಗಿ ಆ ಕಡೆ ನಿಂತ್ಲು.  ಏನ್ಲಾ ಇವಳು ಇದನ್ನೇನು ಸ್ಟೇಡಿಯಂ ಅಂದ್ಕೊಂಡ್ಳಾ ಅಂದಾ ಗೌಡಪ್ಪ.

ಸರಿ ಈಗ ಫೈಟಿಂಗ್ ಸೀನ್. ನೋಡಮ್ಮಾ ಸುಂದರಿ. ಇನ್ನೊಂದು ವಾರ ನಿನ್ನ ಸೀನ್ ಇಲ್ಲ. ನೀನು ಮತ್ತೆ ಹಳ್ಯಾಗೆ ಹೋಗಿ ಬಯಲು ನಾಟಕದಾಗೆ ಪಾತ್ರ ಮಾಡು. ಹಲ್ಲು ಉಸಾರವ್ವಾ, ಕಂಟ್ಯುನಿಟಿ ಹೋಯ್ತದೆ. ಆಯ್ತು ಗೌಂಡ್ರೆ, ಏ ಥೂ ಹೋಗು ಅಂದ ಗೌಡಪ್ಪ. ಸರಿ ಸುಬ್ಬ ಚೆಡ್ಡಿ ಮ್ಯಾಕೆ ನಿಂತ. ಮೇಲಿಂದ ಮಳೆ. ಹೊಡಿರಲಾ ಸುಬ್ಬಂಗೆ ಅಂತಿದ್ದಾಗೆನೇ ಹಳ್ಯಾವು ನಾಯಿ ಹೊಡದಂಗೆ ಹೊಡದ್ರು. ಲೇ ನೀವ್ ಯಾಕ್ರಲಾ ಹೊಡುದ್ರಿ. ಸುಬ್ಬ ಓಡಿ ಬಂದು ಈ ಕೇಡಿಗೆ ಜಾಡಿಸಿ ಒದೆಯಲಾ ಅಂದಾ ಗೌಡಪ್ಪ. ಆಕ್ಸನ್. ಸುಬ್ಬ ಓಡಿಬಂದೋನೆ ಜಾರಿದ. ಕ್ಯಾಮೆರಾ ಕೆಳಗಿಂದ ಹೋಗಿ, ಸೀದಾ ಗೌಡಪ್ಪನ ಕಾಲ್ಗೆ ಹೊಡೆದ್ರೆ. ಗೌಡಪ್ಪ ಮಕಾಡೆ ಬಿದ್ದ. ಸುಬ್ಬನ ಕಾಲು ಚೇರ್ನಾಗೆ ಸಿಕ್ಕಾಕೊಂಡಿತ್ತು. ಕಟ್  ಅಂತಾ ಅರ್ಧ ಗಂಟೆಯಾದ್ರೂ ಯಾರು ಹೇಳಿಲ್ಲ. ಅಂತಾ ಒಂದು 4 ರೀಲ್ ಸುಮ್ನೆ ಸುತ್ತಿತ್ತು. ಅರಿಸಿನ ಹಚ್ಚವಾ ಅಂದ್ರೆ ಮಳೆ. ಅದಕ್ಕೆ ಅಂಗೇ ಬಿಟ್ವಿ. ಲೇ ಸುಬ್ಬಾ ಅಂತಾ ಗೌಡಪ್ಪ ಹಲ್ಲು ಕಡಿಯೋನು.

ಮುಂದುವರೆಯುತ್ತದೆ.....

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು