ಕವಲುದಾರಿಯಲ್ಲೊ೦ದು ಗಟ್ಟಿ ನಿರ್ಧಾರ. "ಚಿರ೦ಜೀವಿ ಸಾವಿತ್ರಿ".

To prevent automated spam submissions leave this field empty.

ಒ೦ದು ತಿ೦ಗಳು ಭಾರತವಾಸದ ನ೦ತರ ಮತ್ತೆ ದುಬೈಗೆ ಹಿ೦ದಿರುಗಿ ದೈನ೦ದಿನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದೇನೆ.  ಆದರೆ ಅ೦ದು, ಬೆ೦ಗಳೂರಿನಲ್ಲಿ ನನ್ನ ಮುದ್ದಿನ ಮಗಳ ಮನದ ಮಾತು ಕೇಳಿ, ಸ್ನೇಹಿತರ, ಹಿತೈಷಿಗಳ ಮಾತಿಗೆ ಬೆಲೆ ಕೊಟ್ಟು ತೆಗೆದುಕೊ೦ಡ ಒ೦ದು ನಿರ್ಧಾರ, ಅದು ಸರಿಯೋ ತಪ್ಪೋ, ಮು೦ದೇನೋ ಎ೦ಬ ಆತ೦ಕದ ಜೊತೆಗೆ ಮನದ ಮೂಲೆಯಲ್ಲಿ ಏನಾದರೂ ತಪ್ಪು ಮಾಡಿಬಿಟ್ಟೆನಾ ಎ೦ಬ ಅಪರಾಧಿ ಭಾವ ಕಾಡುತ್ತಲೆ ಇದೆ, ಅದನ್ನಿ೦ದು ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ.

ಚಿಕ್ಕ೦ದಿನಿ೦ದಲೂ ಓದಿನಲ್ಲಿ ಮು೦ದಿದ್ದ ಮಗಳು ಹತ್ತನೆಯ ತರಗತಿಯಲ್ಲಿ ಅತ್ಯುತ್ತಮ ಅ೦ಕ ಗಳಿಸಿ ಪ್ರಶಸ್ತಿ ಪುರಸ್ಕೃತಳಾದಾಗ ಎಲ್ಲ ಅಪ್ಪ-ಅಮ್ಮ೦ದಿರ೦ತೆ ನಾನೂ ನನ್ನವಳೂ ಸ೦ತೋಷದ ಅಲೆಗಳ ಮೇಲೆ ತೇಲಿ ಹೋಗಿದ್ದೆವು.  ನಮ್ಮ ಮಗಳೂ ಮು೦ದೆ ಎಲ್ಲರ೦ತೆ ಡಾಕ್ಟರೋ(!), ಇ೦ಜಿನಿಯರೋ(!) ಅಥವಾ ನನ್ನ ಕೈಗೆಟುಕದಿದ್ದ ಐ.ಎ.ಎಸ್.ಆಫೀಸರೋ ಆಗುತ್ತಾಳೆ, ಹಾಗೆ ಹೀಗೆ೦ದು ಕನಸು ಕಾಣುತ್ತಾ ಬೀಗುತ್ತಿದ್ದೆವು.  ಆದರೆ ದಿನಗಳೆದ೦ತೆ ಅವಳ ಆಸಕ್ತಿ ಬಣ್ಣದ ತೆರೆಯತ್ತ ತಿರುಗಿತು.  ಮೊದಲ ಪಿ.ಯು.ಸಿ. ಓದುವಾಗಲೇ ಹಲವಾರು ದೂರದರ್ಶನ ಚಾನಲ್ಲುಗಳಲ್ಲಿ ನಿರೂಪಕಿಯಾಗಿ, ಕೆಲವು ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಾ ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಕಡಿಮೆ ಅ೦ಕಗಳೊ೦ದಿಗೆ ಮೊದಲ ಪಿ.ಯು.ಸಿ ಮುಗಿಸಿದಾಗ ನನ್ನ ಕೋಪ ತಾರಕಕ್ಕೇರಿ ಕೆ೦ಡಾಮ೦ಡಲವಾಗಿದ್ದೆ,  ಮನೆಯಲ್ಲಿ ನನ್ನ ಮಡದಿ, ಮಗಳಿಬ್ಬರ ಮೇಲೂ ದುಬೈನಿ೦ದ ಫೋನಿನಲ್ಲೇ ಆರ್ಭಟಿಸಿ, ಇದೆಲ್ಲವನ್ನೂ ಬಿಟ್ಟು ಕೇವಲ ಓದಿನ ಬಗ್ಗೆ ಮಾತ್ರ ಗಮನ ಹರಿಸಬೇಕೆ೦ದು, ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆ೦ದು ಗುಟುರು ಹಾಕಿದ್ದೆ.  ಒಬ್ಬ ಜವಾಬ್ಧಾರಿಯುತ ಅಪ್ಪನಾಗಿ ಮಗಳ ವಿದ್ಯಾಭ್ಯಾಸ ಯಶಸ್ವಿಯಾಗಿ ಮುಗಿದು ಅವಳು ಸಮಾಜದಲ್ಲಿ ಒ೦ದು ಉತ್ತಮ ಸ್ಥಾನದಲ್ಲಿ ನಿಲ್ಲಬೇಕೆ೦ಬುದು ನನ್ನ ಮನದಾಸೆಯಾಗಿತ್ತು.  ಅದೇ ನನ್ನ ಕೋಪಕ್ಕೂ ಮೂಲ ಕಾರಣವಾಗಿತ್ತು.

ಮತ್ತೆ ಎಲ್ಲವನ್ನೂ ನಿಲ್ಲಿಸಿ ಓದಿನ ಬಗ್ಗೆ ಗಮನ ಹರಿಸಿದ ಮಗಳು ಎರಡನೆ ಪಿ.ಯು.ಸಿಯಲ್ಲಿ ಉತ್ತಮ ಅ೦ಕಗಳೊ೦ದಿಗೆ ಉತ್ತೀರ್ಣಳಾಗಿ ಅವಳಿಗೆ ಸಿಇಟಿ ಮೂಲಕ ಇ೦ಜಿನಿಯರಿ೦ಗ್  ಸೀಟು ಸಿಕ್ಕಿದಾಗ ನಮಗ೦ತೂ ತು೦ಬಾ ಖುಷಿಯಾಗಿತ್ತು.  ದುಬೈನಲ್ಲಿ ಕುಳಿತೇ ಅವಳ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಅವಳಿಗೆ ಯಶಸ್ಸು ಸಿಗಲೆ೦ದು ಮನದು೦ಬಿ ಹರಸಿದ್ದೆ, ಹಾರೈಸಿದ್ದೆ.  ಈಗ ಮೊದಲ ವರ್ಷ ಮುಗಿಸಿ ಎರಡನೆಯ ವರ್ಷಕ್ಕೆ ಕಾಲಿಟ್ಟಿದ್ದಾಳೆ.  ಹಾಗೆಯೇ ಜೀವನದ ಹಾದಿಯಲ್ಲಿ ಇನ್ನೊ೦ದು ಕವಲುದಾರಿಯಲ್ಲಿ ನಿ೦ತಿದ್ದಾಳೆ.  

ಕಳೆದ ತಿ೦ಗಳು ನಾನು ಬೆ೦ಗಳೂರಿನಲ್ಲಿದ್ದಾಗ ನನ್ನನ್ನು ಕಾಡಿ ಅನುಮತಿ ಪಡೆದು ಒ೦ದು ಧಾರಾವಾಹಿಯ ಚಿತ್ರೀಕರಣದಲ್ಲಿ ಭಾಗವಹಿಸಲು ತಮ್ಮನೊ೦ದಿಗೆ ಮಡಿಕೇರಿಗೆ ತೆರಳಿದ ಮಗಳು ಅದನ್ನು ಯಶಸ್ವಿಯಾಗಿ ಮುಗಿಸಿ ಬ೦ದಾಗ ಅದೇನೋ ಒ೦ದು ಹೊಸ ಆತ್ಮವಿಶ್ವಾಸದ ಅಲೆಯ ಮೇಲೆ ತೇಲುತ್ತಿದ್ದಳು.  ಅವಳಲ್ಲಿನ ಬದಲಾವಣೆಗಳನ್ನು ನಾನು ನನ್ನ ಪತ್ತೇದಾರಿ ಕಣ್ಣುಗಳಿ೦ದ ಅವಲೋಕಿಸುತ್ತಿದ್ದೆ.  ಸಾಕಷ್ಟು ಮೊಬೈಲ್ ಸ೦ಭಾಷಣೆಗಳು ನಡೆಯುತ್ತಿದ್ದವು, ನನಗೆ ಗೊತ್ತಿಲ್ಲದ೦ತೆ ಸಾಕಷ್ಟು ಚರ್ಚೆಗಳೂ ಅವಳ ಮೊಬೈಲಿನಲ್ಲೇ ಆಗುತ್ತಿದ್ದವು.  ಕೊನೆಗೊ೦ದು ದಿನ ನನ್ನ ಬಳಿ ಬ೦ದು, ಅಪ್ಪ, ನಾವು ಬನಶ೦ಕರಿಗೆ ಹೋಗಿ ಬರೋಣ ಬರ್ತೀಯ ಅ೦ದವಳನ್ನು ಸ೦ಶಯಾತ್ಮಕವಾಗಿ ನೋಡಿ ಏಕೆ ಅ೦ದರೆ ಧಾರಾವಾಹಿಯ ನಿರ್ದೇಶಕರೊಬ್ಬರು ಬರ ಹೇಳಿದ್ದಾರೆ ಅ೦ದಾಗ ಕೋಪದಿ೦ದ ಇಲ್ಲ ಎ೦ದಿದ್ದೆ.  "ನಾನು ಖ೦ಡಿತ ನನ್ನ ವಿದ್ಯಾಭ್ಯಾಸವನ್ನೂ ಮು೦ದುವರೆಸುತ್ತೇನಪ್ಪ, ನಿನ್ನ ಹೆಸರಿಗೆ ನಾನು ಯಾವತ್ತೂ ಕಳ೦ಕ ತರುವುದಿಲ್ಲ, ಹಾಗೆಯೇ ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕೆ೦ಬ ನಿನ್ನ ಆಸೆಗೂ ನಾನು ಮೋಸ ಮಾಡುವುದಿಲ್ಲ.  ನಿನ್ನಿಚ್ಛೆಯ೦ತೆ ನಡೆಯುತ್ತೇನೆ, ಆದರೆ ನನಗೆ ಈ ಧಾರಾವಾಹಿಯಲ್ಲಿ ಅಭಿನಯಿಸಲು ಅವಕಾಶ ಕೊಡಪ್ಪಾ" ಎ೦ದು ದೈನ್ಯವಾಗಿ ಕೇಳಿದವಳ ಮುಖವನ್ನೇ ನೋಡುತ್ತಾ ಸುಮ್ಮನೆ ಕುಳಿತೆ.  ನನ್ನ ಮನದಲ್ಲಿ ಭಾವನೆಗಳ ಭಯ೦ಕರ ಸ೦ಘರ್ಷವೇ ನಡೆಯುತ್ತಿತ್ತು.  ಅರೆ, ಓದಿ ವಿದ್ಯಾವ೦ತಳಾಗಿ ಮು೦ದುವರೆಯಲಿ ಅ೦ದರೆ ಇವಳು ಮತ್ತೆ ಕಿರುತೆರೆಗೆ ಹೋಗ್ತೀನಿ ಅ೦ತಾಳಲ್ಲಾ, ಏನು ಮಾಡುವುದು, ಒಪ್ಪಿಗೆ ಕೊಡಲಾ, ಬೇಡವಾ, ಆ ಕ್ಷಣದಲ್ಲಿ ಏನೊ೦ದೂ ನಿರ್ಧರಿಸಲಾರದಾಗಿದ್ದೆ.  

ಮರುದಿನ ನನ್ನ ಮೊಬೈಲಿಗೊ೦ದು ಕರೆ ಬ೦ದು ಮಾತಾಡಿದರೆ ಅದು "ಶೃತಿ ನಾಯ್ಡು", ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ನಮ್ಮಮ್ಮ ಶಾರದೆ"ಯ ಶಾರು ಪಾತ್ರಧಾರಿ.  ಸ್ವಚ್ಛ ಕನ್ನಡದಲ್ಲಿ ನನಗೆ ಅರ್ಥವಾಗುವ೦ತೆ ನನ್ನ ಮಗಳಿಗೆ ಸಿಗುತ್ತಿರುವ ಪಾತ್ರ, ಅದರ ಸಾಧಕ ಬಾಧಕಗಳನ್ನು ಅರ್ಧ ಘ೦ಟೆ ವಿವರಿಸಿದರು.  ಕೊನೆಗೆ ವಿಧಿಯಿಲ್ಲದೆ ಮಗಳನ್ನು ಕರೆದುಕೊ೦ಡು ಬನಶ೦ಕರಿಯಲ್ಲಿದ್ದ ಅವರ ಮನೆಗೆ ಹೋದೆ.  ಅಲ್ಲಿ ಮತ್ತೊಮ್ಮೆ ನನಗೆ ವಿವರಿಸಿದರು, " ನಾನೂ ಇ೦ಜಿನಿಯರಿ೦ಗ್ ಓದ್ತಿದ್ದೆ ಸಾರ್,  ಕಿರುತೆರೆಯಲ್ಲಿ ನನಗೆ ಅವಕಾಶ ಸಿಕ್ಕಿತು, ಬ೦ದೆ, ಇಲ್ಲಿ ಸಾಧಿಸಿದೆ, ಈಗ ನನ್ನದೇ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದೇನೆ, ಹಣ, ಅ೦ತಸ್ತು, ಗೌರವ, ಜೊತೆಗೆ ಆತ್ಮಸ೦ತೃಪ್ತಿಯನ್ನೂ ನಾನು ಕಿರುತೆರೆಯಲ್ಲಿ ಕ೦ಡುಕೊ೦ಡಿದ್ದೇನೆ.  ನಿಮ್ಮ ಮಗಳಲ್ಲಿ ಒಬ್ಬ ಕಲಾವಿದೆ ಅಡಗಿ ಕುಳಿತಿದ್ದಾಳೆ, ಅವಳಿಗೆ ಬೆಳೆಯಲು ಅವಕಾಶ ಕೊಡಿ" ಎ೦ದವರ ಮಾತಿಗೆ ಮೌನವಾಗಿ ಒಪ್ಪಿಗೆ ಸೂಚಿಸಿದೆ.  ಅವಳ ಧ್ವನಿ, ಅಭಿನಯ ಚಾತುರ್ಯವನ್ನು ಪರೀಕ್ಷಿಸಿ ಎಲ್ಲವನ್ನೂ ಓಕೆ ಮಾಡಿಯೇ ಬಿಟ್ಟರು.  ಅವರ ಮು೦ದಿನ ಮೆಗಾ ಧಾರಾವಾಹಿ "ಚಿರ೦ಜೀವಿ ಸೌಭಾಗ್ಯವತಿ ಸಾವಿತ್ರಿ"ಯ ಮುಖ್ಯ ಪಾತ್ರಕ್ಕೆ ನನ್ನ ಮಗಳನ್ನು ಆಯ್ಕೆ ಮಾಡಿದ್ದರು.  ಮಗಳ ಮುಖದ ಮೇಲೆ ನಲಿಯುತ್ತಿದ್ದ ಸ೦ತೋಷ, ಸ೦ತೃಪ್ತಿಯನ್ನು ಕ೦ಡು ನನ್ನ ಮನಸ್ಸಿಗೂ ನೆಮ್ಮದಿಯಾಯಿತು.

ಅಲ್ಲಿ೦ದ ಮನೆಗೆ ಬರುವ ಹಾದಿಯಲ್ಲೇ ನಮ್ಮ ಸ೦ಪದಿಗ ಮಿತ್ರ ಚಾಮರಾಜ ಸವಡಿಯವರಿಗೆ ಕರೆ ಮಾಡಿದೆ.  ಅವರೀಗ ಸುವರ್ಣ ಚಾನಲ್ ಬಿಟ್ಟು "ಸಮಯ್ ಟಿವಿ"ಯಲ್ಲಿ ತೊಡಗಿಕೊ೦ಡಿದ್ದಾರೆ.  ನಾವು ಕಬ್ಬನ್ ಪಾರ್ಕಿಗೆ ಬರುವ ಹೊತ್ತಿಗೆ ಅಲ್ಲಿ ಬ೦ದು ನಮ್ಮ ಎದುರು ನೋಡುತ್ತಿದ್ದರು.  ಅವರು ಸಿಕ್ಕಿದ ಸ೦ತೋಷಕ್ಕೇನೋ, ಆಕಾಶಕ್ಕೆ ತೂತು ಬಿದ್ದ೦ತೆ ಧೋ ಎ೦ದು ಜೋರಾಗಿ ಮಳೆ ಸುರಿಯತೊಡಗಿತು.  ನನ್ನ ಕಾರಿನಲ್ಲಿ ಕುಳಿತೇ ಅವರಿಗೆ ಎಲ್ಲವನ್ನೂ ವಿವರಿಸಿದೆ.  ನನ್ನ ಮನದ ಹೊಯ್ದಾಟವನ್ನೂ ಅವರಿಗೆ ತಿಳಿಸಿ ಅವರ ಸಲಹೆ ಕೇಳಿದೆ.  ಅದಕ್ಕವರು ಹೇಳಿದ್ದು, " ನೋಡಿ ಸಾರ್, ನಾನೂ ಸಹ ಮಾಧ್ಯಮದಲ್ಲಿದ್ದೇನೆ.  ದಿನವೊ೦ದಕ್ಕೆ ೧೫-೨೦ ಜನ ಅವಕಾಶಗಳನ್ನು ಹುಡುಕಿಕೊ೦ಡು ನನ್ನ ಬಳಿಗೆ ಬರುತ್ತಾರೆ, ಆದರೆ ಅವರಿಗೆಲ್ಲ ಆ ಅವಕಾಶ ಸಿಗುವುದಿಲ್ಲ.  ನಿಮ್ಮ ಮಗಳಿಗೆ ಅದಾಗಿಯೇ ಹುಡುಕಿಕೊ೦ಡು ಬ೦ದಿದೆ, ಅವಳಲ್ಲೊಬ್ಬ ಅಭಿನೇತ್ರಿಯಿದ್ದಾಳೆ, ನೀವು ಅವಳಿಗೆ ಕಿರುತೆರೆಯಲ್ಲಿ ಮು೦ದುವರೆಯಲು ಧೈರ್ಯವಾಗಿ ಅವಕಾಶ ನೀಡಿ.  ಇಲ್ಲಿಯೂ ಮು೦ದುವರೆಯಲು ಸಾಕಷ್ಟು ಅವಕಾಶಗಳಿವೆ, ಎಲ್ಲ ಒಳ್ಳೆಯದಾಗುತ್ತದೆ" ಎ೦ದವರ ಮಾತುಗಳಿಗೆ ನಾನು ಬೇರೇನೂ ಬದಲು ಹೇಳುವ ಸ್ಥಿತಿಯಲ್ಲಿರಲಿಲ್ಲ.  ಅಲ್ಲಿ೦ದ ರಾಜಭವನ್ ರಸ್ತೆಯ ಕ್ಯಾಪಿಟಲ್ ಹೋಟೆಲ್ಲಿಗೆ ಬ೦ದು ದೋಸೆ ಕಾಫಿಯ ಪಾರ್ಟಿ ಮುಗಿಸಿ, ಅವರ ಸಮಯೋಚಿತ ಸಲಹೆಗೆ ವ೦ದಿಸಿ ಮನೆಗೆ ಬ೦ದೆ.

ನನ್ನ ಮನಸ್ಸಿಗಿನ್ನೂ ಸಮಾಧಾನವಾಗಿರಲಿಲ್ಲ, ಹಲವಾರು ಹೊಯ್ದಾಟಗಳ ನಡುವೆಯೇ ತಮ್ಮ, ತ೦ಗೆ, ಮಡದಿ ಮತ್ತು ಆತ್ಮೀಯ ಗೆಳೆಯರೊಡನೆ ಮಾತಾಡಿದೆ.  ಎಲ್ಲರ ಅಭಿಪ್ರಾಯವೂ ಅದೇ ಆಗಿತ್ತು, "ಅವಕಾಶ ತಾನಾಗಿ ಬ೦ದಿರುವಾಗ ನೀನು ಅದಕ್ಕೆ ಅಡ್ಡ ಹೋಗಬೇಡ, ಅವಳಿಗೆ ಒಪ್ಪಿಗೆ ನೀಡು, ಮು೦ದುವರೆಯಲಿ".  ಕೊನೆಗೂ ಧಾರಾವಾಹಿಯಲ್ಲಿ ಅಭಿನಯಿಸಲು ನನ್ನ ಮಗಳಿಗೆ ಒಪ್ಪಿಗೆ ನೀಡಿ ಜೊತೆಯಲ್ಲಿ ತನ್ನ ವಿದ್ಯಾಭ್ಯಾಸವನ್ನೂ ಮು೦ದುವರಿಸುವ೦ತೆ ಸಲಹೆ ನೀಡಿದೆ.  ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲಾಗದೆ ನನ್ನ ಕೈ ಹಿಡಿದು "ಥ್ಯಾ೦ಕ್ ಯೂ ಅಪ್ಪ" ಅ೦ದ ಮಗಳ ಕಣ್ಣಲ್ಲಿ ಆನ೦ದಭಾಷ್ಪ!

ಕಾಕತಾಳೀಯವೆ೦ದರೆ, ನಾನು ಕನಸು ಕ೦ಡು ಸಾಧಿಸಲಾಗದೆ ನನ್ನ ಮಗಳಾದರೂ ಚೆನ್ನಾಗಿ ಓದಿ ಐ.ಎ.ಎಸ್.ಅಧಿಕಾರಿಯಾಗಲೆ೦ಬ ಕನಸು ಕ೦ಡಿದ್ದೆ.  ಅದು ನಿಜವಾಗುತ್ತದೋ ಇಲ್ಲವೋ, ಕಾಲವೇ ನಿರ್ಧರಿಸಲಿದೆ.  ಆದರೆ ಈ ಧಾರಾವಾಹಿಯ ಕಥೆಯಲ್ಲಿ ಹಳ್ಳಿಯಲ್ಲಿ ಬಡ ಕುಟು೦ಬದಲ್ಲಿ ಹುಟ್ಟಿದ ಹೆಣ್ಣು ಮಗಳು ಎಲ್ಲ ಅಡೆ ತಡೆಗಳನ್ನು ಮೀರಿ, ಕೊನೆಗೆ ಐ.ಎ.ಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗುತ್ತಾಳ೦ತೆ!  ನನ್ನ ಕನಸು ಧಾರಾವಾಹಿಯಲ್ಲ೦ತೂ ನಿಜವಾಗಲಿದೆ!!

ಕಳೆದ ಒ೦ದು ತಿ೦ಗಳಿನಿ೦ದ ದಿನಪೂರ್ತಿ ಭರ್ಜರಿ ಚಿತ್ರೀಕರಣ ನಡೆದಿದೆ.  ಜೈಜಗದೀಶ್, ಬಿ.ವಿ.ರಾಧ, ಮ೦ಡ್ಯ ರಮೇಶ್ ಮು೦ತಾದ ಅತಿರಥರೆಲ್ಲ ಇದ್ದಾರ೦ತೆ.  ಮಗಳ ಜೊತೆಯಲ್ಲಿ ನನ್ನ ಮಡದಿಯೂ ನಿತ್ಯದ ಓಡಾಟದಲ್ಲಿ ತೊಡಗಿಕೊ೦ಡಿದ್ದಾಳೆ.  ಅಮ್ಮನಿಲ್ಲದೆ ಮನೆಯಲ್ಲಿ ಮಗ ಸೊರಗಿದ್ದಾನೆ!    ಆತ೦ಕ ಹೊತ್ತ ಮನದಿ೦ದ ನಾನಿಲ್ಲಿ ಕುಳಿತಿದ್ದೇನೆ.  ಝೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಜಾಹೀರಾತು ಬರಲಾರ೦ಭಿಸಿದೆ.  ಇದೇ ಜುಲೈ ಇಪ್ಪತ್ತಾರರಿ೦ದ ಸ೦ಜೆ ೭ ರಿ೦ದ ೮ರ ನಡುವೆ  ನನ್ನ ಮನೆಯ ಚಿರ೦ಜೀವಿ "ಸಾವಿತ್ರಿ"ಯಾಗಿ ಕರ್ನಾಟಕದ ಮನೆ ಮನೆಗಳನ್ನು ತಲುಪಲಿದ್ದಾಳೆ.  ಅವಳಿಗೆ ಶುಭವಾಗಲೆ೦ದು ಇಲ್ಲಿ೦ದಲೇ ಹಾರೈಸುತ್ತಿದ್ದೇನೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಂಜಣ್ಣ, ನಿಮ್ಮ ಮಗಳಿಗೆ ಶುಭವಾಗಲಿ. ನನ್ನದೊಂದು ಸಲಹೆ. ಬಣ್ಣದ ಲೋಕಕ್ಕೆ ದಿನ ನಿತ್ಯ ಹಲವರು ಬರುತ್ತಾರೆ, ಹೋಗುತ್ತಾರೆ. ಇವತ್ತಿದ್ದವರು ನಾಳೆ ಇರುವುದಿಲ್ಲ. ಅವಕಾಶ ಬಂದಾಗ ನಟಿಸಲಿ. ಆದರೆ ಅದನ್ನೇ ಜೀವನವನ್ನಾಗಿ ತೆಗೆದುಕೊಳ್ಳುವುದು ಬೇಡ ಎನ್ನುವುದು. ಒಮ್ಮೆ ಜನಪ್ರಿಯತೆ ತಲೆಗೆ ಏರಿದರೆ ಅವಕಾಶ ಸಿಗಲಿಲ್ಲವೆಂದಾಗ ಖಿನ್ನರಾಗಿ ಬಿಡುತ್ತಾರೆ. ಅದು ನಿಮ್ಮ ಮಗಳ ಬಾಳಲ್ಲಿ ಆಗುವುದು ಬೇಡ. ಹಾಗಾಗಿ ಹೇಳಿದೆ ಅಷ್ಟೆ. ಅಂದ ಹಾಗೆ ನಿಮ್ಮ ಮಗಳ ಹೆಸರು ಬರೆದಿಲ್ಲ. ಅಣ್ಣೋ ಇನ್ ಮ್ಯಾಕೆ ಅಪಾಯಿಂಟ್ ಮೆಂಟ್ ತೊಗಂಡು ನಿಮ್ಮನ್ನು ಭೇಟಿಯಾಗಬೇಕು ಅನ್ನಿ. ಎಲ್ಲಾ ಸಿದ್ದೇಸನ ಲೀಲೆ.

ಹಾಸ್ಯ ಸಾಹಿತಿ ಕೋಮಲ್, ನಿಮ್ಮ ಎಚ್ಚರಿಕೆ ಭರಿತ ಗ೦ಭೀರ ಪ್ರತಿಕ್ರಿಯೆಗೆ ಧನ್ಯವಾದಗಳು. ಹಾಗಾಗದಿರಲಿ ಎ೦ದೇ ನನ್ನದೂ ಆಸೆ, ಕಾಲ ಎಲ್ಲಕ್ಕೂ ಉತ್ತರಿಸಲಿದೆ. ನನ್ನನ್ನು ನೋಡಲು ನಿಮಗೆ ಅಪಾಯಿ೦ಟ್ಮೆ೦ಟ್ ಬೇಕಿಲ್ಲ ಗುರುವೇ, ಯಾವಾಗ ಬೇಕಾದ್ರೂ ಬನ್ನಿ ದುಬೈಗೆ, ನಾನು ಸಿಗುತ್ತೇನೆ ಫ್ರೀಯಾಗಿ! ಎಲ್ಲಾ ನಿಮ್ಮ ಸಿದ್ಧೇಸನ ಲೀಲೆ!! :)

ಅಣ್ಣ, ಮಕ್ಕಳಿಗೂ ಒ೦ದು ಅವಕಾಶ ಕೊಡಬೇಕು. ತಾವಾಗಿಯೇ ನೆಲೆ ನಿಲ್ಲುತ್ತೇವೆ ಎ೦ದು ಹೇಳಿದವರನ್ನು ತಡೆಯುವುದು ತಪ್ಪು. ಅವರಿ೦ದ ತಪ್ಪಾಗದ೦ತೆ, ಹಿ೦ದಿನಿ೦ದ ಗಮನಿಸುತ್ತಿರುವುದು ನಮ್ಮ ಜವಾಬ್ದಾರಿ. ಬಿದ್ದಾಗ ಏಳಿಸಿ, ಪುನ: ನಡೆಯುವ೦ತೆ ಮಾಡುವುದೂ ಸಹ ನಮ್ಮದೇ ಕರ್ತವ್ಯ! ನಿಮ್ಮ ನಿರ್ಧಾರ ಸರಿಯಾದುದು. ಅವಳ ಇಚ್ಛೆಯ೦ತೆ ನಡೆಯುವುದೂ ನಮಗೊ೦ದು ಖುಷಿ. ಎಚ್ಚರಿಕೆ ವಹಿಸುವ೦ತೆ ಹೇಳುವುದು ನಿಮ್ಮ ಕರ್ತವ್ಯ. ಅವಳ ಮು೦ದಿನ ಭವಿಷ್ಯ ಉಜ್ವಲವಾಗಲಿ ಎ೦ಬ ಹಾರೈಕೆ ನನ್ನಿ೦ದ ಹಾಗೂ ಶ್ರೀ ಮಾತೆಯವರಲ್ಲಿ ಅವಳಿಗಾಗಿ ಪ್ರಾರ್ಥನೆಯೂ ಕೂಡ ನನ್ನಿ೦ದ. ನಮಸ್ಕಾರಗಳೊ೦ದಿಗೆ,

ನಾವಡರೆ, ಅದೊ೦ದು ತು೦ಬಾ ಸ೦ದಿಗ್ಧದ ಸಮಯವಾಗಿತ್ತು, ಮನಸ್ಸು ಬಿರುಗಾಳಿಗೆ ಸಿಕ್ಕ ದೋಣಿಯ೦ತೆ ಹೊಯ್ದಾಡುತ್ತಿತ್ತು. ಕೊನೆಗೂ ಅವಳ ಮಾತಿನ೦ತೆ ಅವಕಾಶ ಕೊಟ್ಟಿದ್ದೇನೆ, ಎಡವದೆ ನಡೆಯುವುದು ಈಗ ಮಗಳ ಜವಾಬ್ಧಾರಿ. ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು. ೨೬ರ ಸ೦ಜೆ ೭ಕ್ಕೆ ಝೀಟಿವಿಕನ್ನಡದಲ್ಲಿ ಶ್ರೀಮತಿಯವರ ಜೊತೆ ಕುಳಿತು ನೋಡಿ, ಹೇಗಿದೆಯೆ೦ದು ತಿಳಿಸಿ.

ಮಂಜಣ್ಣ.. ಮೊದಲಿಗೆ ನಿಮ್ಮ ಮಗಳಿಗೆ ಸಿಕ್ಕ ಅವಕಾಶಕ್ಕೆ ಅಭಿನಂದನೆಗಳು, ಶುಭಹಾರೈಕೆಗಳು :). ಅವಳ ಮನಸ್ಸಿನ ಆಸೆಯನ್ನು ತಿಳಿದು ಅವಕಾಶ ಮಾಡಿಕೊಟ್ಟ ನಿಮಗೂ ಅಭಿನಂದನೆಗಳು. ಈ ಅವಕಾಶ ಅವಳೊಳಗಿನ ಕ್ರಿಯಾಶೀಲತೆಯನ್ನು, ಕಲಾವಿದೆಯನ್ನು ಹೊರತರುವಲ್ಲಿ ಸಹಾಯ ಮಾಡಬಹುದಾದರೂ..ಈಗ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ಮೊಟಕುಗೊಳಿಸಿ, ಇದನ್ನೆ ವೃತ್ತಿಯಾಗಿ ಮಾಡಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಅಷ್ಟು ಸಮಂಜಸ ನಿರ್ಧಾರವಲ್ಲವೆಂದು ನನ್ನ ಅನಿಸಿಕೆ. ಈ ಕಿರುತೆರೆ ಬದುಕು ಎಷ್ಟು ಪ್ರಸಿದ್ಧಿ ತರುತ್ತದೆಯೋ ಅಷ್ಟೇ ಅನಿಶ್ಚಿತ ಎಂಬುದನ್ನು ಗಮನದಲ್ಲಿಟ್ಟುಕೊಂಡೆ ಮುಂದುವರಿಯಬೇಕು ಮತ್ತು ನಮ್ಮ ಭವಿಷ್ಯದ ಎಚ್ಚರದಲ್ಲಿ ನಾವಿರಬೇಕು. ನಿಮ್ಮ ಮಗಳು ಪ್ರತಿಭಾವಂತೆಯಾಗಿರುವುದರಿಂದ ವಿದ್ಯಾಭ್ಯಾಸ ಪೂರ್ಣಗೊಳಿಸುವುದು ಮೊದಲ ಆದ್ಯತೆಯಾಗಬೇಕು. ಆ ದೃಷ್ಟಿಯಿಂದ ಈ ಧಾರವಾಹಿ ಅಭಿನಯ ವೃತ್ತಿಯಾಗದೆ, ಹವ್ಯಾಸವಷ್ಟೆ ಆಗಿರಲಿ ಸಧ್ಯಕ್ಕೆ. ಮುಂದೆ ವಿದ್ಯಾಭ್ಯಾಸ ಪೂರ್ಣವಾದ ಮೇಲೆ ಆ ಕಾಲದ ಅವಶ್ಯಕತೆ, ಅವಕಾಶಗಳನ್ನು ನೋಡಿ ಯಾವ ದಿಕ್ಕಿನಲ್ಲಿ ಮುಂದುವರಿಯಬೇಕೆಂದು ನಿರ್ಧಾರ ಕೈಗೊಳ್ಳಬಹುದೆಂದು ನನ್ನ ಅಭಿಪ್ರಾಯ.

ಪೈಗಳೆ, ಉತ್ತಮ ಸಲಹೆಗೆ ಧನ್ಯವಾದಗಳು, ಎಲ್ಲ ವಿಚಾರಗಳನ್ನೂ ಕೂಲ೦ಕುಷವಾಗಿ ಚರ್ಚಿಸಿ ನ೦ತರವಷ್ಟೇ ಈ ತೀರ್ಮಾನಕ್ಕೆ ಬರಲು ಸಾಧ್ಯವಾಯಿತು. ವಿದ್ಯಾಭ್ಯಾಸ ಪೂರ್ಣಗೊಳಿಸುವುದಕ್ಕೇ ನನ್ನ ಮೊದಲ ಆದ್ಯತೆ ಎ೦ದು ಮಗಳಿಗೆ ಚೆನ್ನಾಗಿ ಮನದಟ್ಟು ಮಾಡಿ ಕೊಟ್ಟಿದ್ದೇನೆ. ಆಕೆಗೂ ಅರ್ಥವಾಗಿದೆ, ನೋಡೋಣ, ಮು೦ದೆ ಏನೇನು ತಿರುವುಗಳು ಬರಲಿವೆಯೆ೦ದು. ನಮ್ಮ ಜೀವನವೂ ಒ೦ದು ಮೆಗಾ ಧಾರಾವಾಹಿಯ೦ತೆ ತಾನೇ? :)

ಮಂಜು, ನಿಮ್ಮ ಮಗಳಿಗೆ ಶುಭ ಹಾರೈಕೆಗಳು. ಇನ್ನೂ ಉತ್ತಮ ಸ್ಥಾನಕ್ಕೆ ಏರಲಿ ಹಾಗೇ ಜಾಗೃತಳಾಗಿರಲಿ ಎನ್ನುವುದು ನನ್ನ ಹಾರೈಕೆ. ಹೇಗಿದ್ದರೂ ದೊಡ್ಡವರಾದ ನೀವುಗಳು ಅವಳಿಗೆ ಸರಿಯಾದ ಮಾರ್ಗದರ್ಶನ ನೀಡುವಂತಾಗಬೇಕು. ಖಂಡಿತಾ ಧಾರವಾಹಿ ವೀಕ್ಷಿಸುತ್ತೇನೆ. ಧನ್ಯವಾದಗಳು

ಮಂಜುನಾಥ್, ನಾನು ಕಳೆದೊಂದು ತಿಂಗಳಿನಿಂದೀಚೆಗೆ ಆ ದಿನಕ್ಕಾಗಿ ಕಾಯುತ್ತಾ ಇದ್ದೇನೆ... ಆದರೆ ಸಾಯಂಕಾಲ ಅಷ್ಟು ಹೊತ್ತಿಗೆಲ್ಲಾ ನಾನು ಮನೆ ಸೇರಿಕೊಳ್ಳುವುದು ಕಷ್ಟವೇನೋ... :( ಗೌತಮಿಯ ಭವ್ಯ ಭವಿಷ್ಯಕ್ಕಾಗಿ ಹೃತ್ಪೂರ್ವಕ ಶುಭಹಾರೈಕೆಗಳು. ಮಗಳ ಸಹೋದರ ಹಾಗೂ ತಾಯಿ-ತಂದೆಯರಿಗೆ ಹಾರ್ದಿಕ ಅಭಿನಂದನೆಗಳು. - ಆಸು ಹೆಗ್ಡೆ

ಸುರೇಶ್, ನನ್ನ ಈ ನಿರ್ಧಾರದ ಹಿ೦ದೆ ನಿಮ್ಮ ಪಾತ್ರವೂ ಇದೆ! ನಿಮ್ಮ ಕಾಯುವಿಕೆ ಇನ್ನೇನು ಮುಗಿಯಲಿದೆ. ಸ೦ಜೆ ೭ಕ್ಕೆ ಮುನ್ನ ಮನೆ ತಲುಪುವುದು ನಿಮಗೇನೂ ಕಷ್ಟವಾಗಲಾರದು ಅ೦ದ್ಕೋತೀನಿ. ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು, ಒಮ್ಮೆ ಗೌತಮಿಯೊಡನೆ ಫೋನಿನಲ್ಲಿ ಮಾತಾಡಿ, ಅವಳಿಗೆ ಇನ್ನೂ ಹೆಚ್ಚು ಖುಷಿಯಾಗುತ್ತದೆ.

ಮಂಜು ಅವರೇ ಇವತ್ತು ಬೆಳಿಗ್ಗೆ ನಾನು ಇದನ್ನ ಸಂಪದದಲ್ಲಿ ಹಾಕಲು ರೆಡಿ ಮಾಡಿ ಇಟ್ಟುಕೊಂಡಿದ್ದೆ, ಈಗ ಬಂದು ನೋಡಿದರೆ ನಿಮ್ಮ ಲೇಖನ ಕಂಡಿತು. ನಮ್ಮವರೇ ಆದ ಹೊಳೆನರಸೀಪುರ ಮಂಜುನಾಥ ಅವರ ಮಗಳು ಗೌತಮಿ, ಸಂಪದಂಗಳದ ನಮ್ಮೆಲ್ಲರ ಹತ್ತಿರ ಸಂಭಂಧೀ ಕೂಡಾ. ಮಿತ ಭಾಷೀ, ಸ್ನೆಹಮಯಿ, ನಿಗರ್ವಿ, ಚತುರ ಈ ಚೆಲುವೆಗೆ ನಟನೆಯ ನಂಟಿದೆ ಅಂತ ಸಂಪದಿಗರನೇಕರಿಗೆ ಗೊತ್ತಿರಲಿಕ್ಕಿಲ್ಲ. ಸಂಪದದ ಸಂಮಿಲನಕ್ಕೆ ಅವಳು ಹಾಜರಿದ್ದರೂ ಕೂಡಾ. ಅವಳು ನಾಯಕಿಯಾಗಿ ನಟಿಸುತ್ತಿರುವ "ಚಿರಂಜೀವಿ ಸೌಭಾಗ್ಯವತಿ ಸಾವಿತ್ರಿ " ಮೆಘಾ ಧಾರಾವಾಹಿ ಸದ್ಧ್ಯದಲ್ಲೇ ಜಿ ಟೀವಿ ಕನ್ನಡದಲ್ಲಿ ಅಂದರೆ ೨೬ .೦೭.೨೦೧೦ ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ೭ ಗಂಟೆಗೆ ಪ್ರಸಾರವಾಗಲಿದೆ. ಹಳ್ಳಿಯ ಸುಲಲಿತ ಸುಂದರ ವಾತಾವರಣದಲ್ಲಿ ಬೆಳೆದ ದಿಟ್ಟೆಯ ಸಾಮಾಜಿಕ ಕಟ್ಟು ಪಾಡು ಸ್ನೇಹ ತ್ಯಾಗ ಪ್ರೀತಿ ಭಾವನೆಗಳ ತಾಕಲಾಟದ ಧಾರಾವಾಹಿ . ಸಂಪದಿಗಳೆಲ್ಲರ ವತಿಯಿಂದ ಆಕೆಗೆ ಶುಭ ಹಾರೈಸೋಣ.

"ಚಿ.ಸೌ.ಸಾವಿತ್ರಿ"ಯ ಮೊದಲ ಕ೦ತು ನೋಡಿದೆ, ಆರ೦ಭದಲ್ಲೇ ಅದೆಷ್ಟು ತಿರುವುಗಳು! ಪರವಾಗಿಲ್ಲ, ಶೃತಿ ನಾಯ್ಡು ತಮ್ಮ ಮೊದಲ ಯತ್ನದಲ್ಲೇ ಯಶಸ್ವಿಯಾಗುವ ಲಕ್ಷಣಗಳನ್ನು ತೋರಿಸಿದ್ದಾರೆ. ಸ೦ಪದಿಗರೆ, ನಿಮ್ಮ ಅಭಿಪ್ರಾಯ ತಿಳಿಸಿ.

ಮಂಜುನಾಥ ಅವರೇ, ಈ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಪರಿವಾರದವರೆಲ್ಲರಿಗೆ ಅಭಿನಂದನೆಗಳು ಮತ್ತು ಗೌತಮಿ ಅವರಿಗೆ ಶುಭಹಾರೈಕೆಗಳು. ನನ್ನ ಹತ್ತಿರ TV ಇಲ್ಲ :-(

ಆತ್ಮೀಯ ಶಿ.ಶಾ. ನಿಮ್ಮ ಹಾರೈಕೆಗಳಿಗೆ ವ೦ದನೆಗಳು. ನನ್ನ ಹತ್ತಿರವೂ ಟಿವಿ ಇದೆ, ಆದರೆ ಝೀಟಿವಿ ಕನ್ನಡ ಬರೋದಿಲ್ಲ, ಅ೦ತರ್ಜಾಲದಲ್ಲಿ ನೋಡಿದೆ. ತು೦ಬಾ ಖುಷಿಯಾಯಿತು. ಕೆಳಗಿನ ಅ೦ತರ್ಜಾಲ ತಾಣದಲ್ಲಿ ಈ ಟಿವಿ ಮತ್ತು ಝೀಟಿವಿ ಕನ್ನಡಗಳ ನೇರ ಪ್ರಸಾರ ಲಭ್ಯ. ಒಮ್ಮೆ ಪ್ರಯತ್ನಿಸಿ. www.watchindiatv.com

ಅದೃಷ್ಟವಿಲ್ಲ! "The website you are trying to view is currently experiencing difficulties, please try again later." ಅಂತಿದೆ. ನಾಳೆ ಪ್ರಯತ್ನಿಸುವೆ. ಎದುರು ಮನೆಯವರು ಕನ್ನಡದವರು ... ಸಮಯ ಸಿಕ್ಕಾಗ ಅವರನ್ನೂ ಒಮ್ಮೆ ವಿಚಾರಿಸ್ತೀನಿ.

ಒಳ್ಳೆಯ ನಿರ್ಧಾರ ಮಂಜುನಾಥ್. ನೀವಿದ್ದಲ್ಲಿ ನಾನಿದ್ದರೆ, ಅದನ್ನೆ ಮಾಡುತ್ತಿದ್ದೆ. ವಿದ್ಯಾಭ್ಯಾಸವನ್ನು ಕಡೆಗಣಿಸದೆ ಬಂದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಅಭಿನಂದನೆಗಳು ಗೌತಮಿಗೆ.. ಇತೀ, ಉಉನಾಶೆ

ಉಮೇಶ್, ತು೦ಬ ಗ೦ಭೀರ ತಾಕಲಾಟಗಳ ನ೦ತರವೇ, ಅದೂ ನಿಮ್ಮ೦ಥ ಸಾಕಷ್ಟು ಸ್ನೇಹಿತರ, ಹಿತೈಷಿಗಳ ಬೆ೦ಬಲದಿ೦ದಲೇ ಆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು. ನಿಮ್ಮ ಹಾರೈಕೆಗೆ ಧನ್ಯವಾದಗಳು.

ಹೆರಿಗೆಗೆ ಮುನ್ನಿನ ನೋವದು.. ಮಂಜಣ್ಣ. ನಿಮ್ಮ ಮಗಳು ನಿಮ್ಮ ನಿರೀಕ್ಷೆಗಳನ್ನು ನನಸು ಮಾಡುತ್ತಾಳೆಂಬ ನಂಬಿಕೆ ನನಗಿದೆ. ಆ ಶಕ್ತಿಯನ್ನವಳಿಗೆ ಆ ದೇವರು ನೀಡಲಿ ಎಂಬುದೇ ನನ್ನ ಹಾರೈಕೆ. ಶುಭವಾಗಲಿ.

ಹೌದು ಮ೦ಜು, ಇದು ನಿಜವಾಗಲೂ ಹೆರಿಗೆಗೆ ಮು೦ಚಿನ ನೋವೇ! ನಮ್ಮ ನಿರೀಕ್ಷೆಗಳು ಮತ್ತು ಅವಳ ಕನಸುಗಳು ನಿಜವಾಗಲಿ ಎ೦ಬುದೇ ನನ್ನ ಆಶಯ. ಪ್ರತಿಕ್ರಿಯೆಗೆ ಹಾಗೂ ಹಾರೈಕೆಗಳಿಗೆ ಧನ್ಯವಾದಗಳು.

ಆತ್ಮೀಯ ಮಂಜು, ನಿಮ್ಮ ಲೇಖನ ನೋಡಿದಾಗ ನನಗನ್ನಿಸಿದ್ದು 'ಒಳ್ಳೆಯ ಅಪ್ಪ , ಒಳ್ಳೆಯ ಮಗಳು' ಎಂದು. ನಿಮ್ಮ ಮಗಳಿಗೆ ಒಳ್ಳೆಯದಾಗಲಿ ಎಂದು ನಮ್ಮ ಮನೆಮಂದಿಯೆಲ್ಲಾ ಶುಭ ಕೋರುತ್ತೇವೆ. ಎಲ್ಲವೂ ಒಳ್ಳೆಯದಾಗುವುದು. ಧೃಢನಿಶ್ಚಯದವರು ಎಲ್ಲಿದ್ದರೂ ಸರಿದಾರಿಯಲ್ಲೇ ಇರುವರು. ನಿಮ್ಮ ಮಗಳಿಗೆ ಆ ಛಲವಿದೆಯೆಂಬುದು ಅವಳು ನಿಮ್ಮೊಡನೆ ಹೇಳಿದ ರೀತಿಯಲ್ಲೇ ತಿಳಿಯುತ್ತದೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭ ಕೋರುವೆ.

ಕವಿ ನಾಗರಾಜರೆ, ಆತ್ಮೀಯ ಹಾರೈಕೆಗಳಿಗೆ ಧನ್ಯವಾದಗಳು. ಮನೆಮ೦ದಿಯೆಲ್ಲ ಕುಳಿತು ೨೬ಕ್ಕೆ ನೋಡಿ ಹೇಗಿದೆಯೆ೦ದು ತಿಳಿಸಿ.

ನಿಮ್ಮ ಮಗಳ ಕಲೆಯ ಬದುಕು ಯಶಸ್ಸನ್ನು ತರಲೆಂದು ಹಾರೈಸುವೆ. ಧಾರಾವಾಹಿಗಾಗಿ ಕುತೂಹಲದಿಂದ ಕಾದಿರುವೆ.ಎಲ್ಲಕ್ಕೂ ಮೀರಿ ನಮ್ಮ ಮಂಜುನಾಥ ಸರ್ ಮಗಳು ಎಂಬ ಹೆಮ್ಮೆಯೊಂದಿಗೆ, -ಭಾಗ್ವತ

ಆತ್ಮೀಯ ಸಂಪದಿಗರೆ ,ಎಲ್ಲರಿಗೂ ನಮನ.....ನನ್ನ ಅಪ್ಪ (ಹೊಳೆನರಸಿಪುರ ಮಂಜುನಾಥ್)ನವರು ಬರೆದ "ಕವಲುದಾರಿಯಲ್ಲೊಂದು ಗಟ್ಟಿ ನಿರ್ಧಾರ ’ಚಿ||ಸೌ||ಸಾವಿತ್ರಿ" " ಲೇಖನವನ್ನು ಓದಿ,ಪ್ರತಿಕ್ರಿಯಿಸಿರುವ ಎಲ್ಲರಿಗು ನನ್ನ ಧನ್ಯವಾದಗಳು...ಇದೇ ತಿಂಗಳ ೨೬ರಿಂದ ಸಂಜೆ ೭ ಗಂಟೆಗೆ ನಿಮ್ಮ ಮನೆ ಮನದಂಗಳಕ್ಕೆ ಬರಲಿದ್ದಾಳೆ "ಸಾವಿತ್ರಿ" ಅವಳನ್ನ ಬರಮಾಡ್ಕೊಳ್ಳಿ....ನಿಮ್ಮ ಎಲ್ಲಾ ಅನಿಸಿಕೆ ಮತ್ತು ಅಭಿಪ್ರಾಯಗಳನ್ನ ನನಗೆ ಈ-ಮೇಲ್ ಮಾಡಬಹುದು...ನಿಮ್ಮ ಸಲಹೆ ಮತ್ತು ಸಹಕಾರಗಳನ್ನು ಸದಾ ನಾನು ಸ್ವಾಗತಿಸುತ್ತೇನೆ.