ಅರಬ್ಬರ ನಾಡಿನಲ್ಲಿ......೭.... ದುಬೈನಲ್ಲೊ೦ದು ಕುಲು -ಮನಾಲಿ!

To prevent automated spam submissions leave this field empty.

ನಮ್ಮ ದೇಶದ ಹಿಮಾಚಲ ಪ್ರದೇಶದಲ್ಲಿರುವ ಕುಲು, ಮನಾಲಿ ಗಿರಿಧಾಮಗಳು ಅತ್ಯ೦ತ ಪ್ರಸಿದ್ಧ.  ಹಿಮಾಲಯದ ತಪ್ಪಲಲ್ಲಿರುವ  ಈ ಪ್ರದೇಶ ಪ್ರವಾಸಿಗಳ ಸ್ವರ್ಗ, ನವ ವಿವಾಹಿತರ ಮಧುಚ೦ದ್ರಕ್ಕೆ, ಹೊಸಬಾಳಿನ ಸುಮಧುರ ನೆನಪುಗಳಿಗೆ ಮುನ್ನುಡಿ ಬರೆಯುವ ತಾಣ.  ಸದಾ ಸುರಿಯುವ  ಹೂವ ಹಾಸಿನ೦ತೆ ಕಾಲಡಿ ಸಿಗುವ ಹಿಮದ ಮೇಲೆ ಜಾರಾಟವಾಡುತ್ತಾ ಮಜಾ ಅನುಭವಿಸುತ್ತಿದ್ದರೆ ಅದು ಸ್ವರ್ಗವನ್ನು ನೆನಪಿಸುತ್ತದೆ ಅನ್ನುತ್ತಾರೆ ಅಲ್ಲಿ ಹೋಗಿ ಅನುಭವಿಸಿದವರು. 

 


ಮನಾಲಿಯ ಸು೦ದರ ಚಿತ್ರ: ಅ೦ತರ್ಜಾಲದಿ೦ದ.

 

ಇ೦ಥದ್ದೊ೦ದು ಸ್ವರ್ಗ ಸದೃಶ ತಾಣ, ಹಿಮದ ಮೇಲಿನ ಜಾರಾಟಕ್ಕೆ ಈ ಸುಡುವ ಮರಳುಗಾಡಿನಲ್ಲಿರಲು ಸಾಧ್ಯವೆ?  ಹೌದು, ಸಾಧ್ಯ!  ದುಬೈನ ವಿಶ್ವ ವಿಖ್ಯಾತ ಶೇಖ್ ಝಾಯದ್ ರಸ್ತೆಯಲ್ಲಿರುವ ’ಮಾಲ್ ಆಫ್ ದಿ ಎಮಿರೇಟ್ಸ್’ನಲ್ಲಿರುವ "ಸ್ಕಿ ದುಬೈ"ನಲ್ಲಿ ಈ ಸ್ವರ್ಗವನ್ನು ಕಾಣಬಹುದು.  ಇಡೀ ಗಲ್ಫ್ ರಾಷ್ಟ್ರಗಳಲ್ಲಿಯೇ ಮೊದಲ ಬಾರಿಗೆ ಒ೦ದು ಒಳಾಗಣ ಹಿಮದ ಮೇಲಿನ ಜಾರಾಟದ ತಾಣವನ್ನು ಹೊ೦ದಿರುವ ಖ್ಯಾತಿ ದುಬೈಗೆ ಸಲ್ಲುತ್ತದೆ.  ಇದರ ಹಿ೦ದೆ ಅಪಾರ ಜಾಣ್ಮೆಯಿದೆ, ಸಾಕಷ್ಟು ಮು೦ದುವರೆದ ತ೦ತ್ರಜ್ಞಾನವಿದೆ, ಬಹು ಜನರ ಶ್ರಮವಿದೆ.

 


ಚಿತ್ರ: ಅ೦ತರ್ಜಾಲದಿ೦ದ.

 

ಈಗ ಇಲ್ಲಿ ಸುಡುವ ಬೇಸಿಗೆ, ಮನೆಯಲ್ಲಿ, ಕಾರಿನಲ್ಲಿ, ಕಛೇರಿಯಲ್ಲಿ, ಹೋಟೆಲ್ಲಿನಲ್ಲಿ, ಚೌರದ೦ಗಡಿಯಲ್ಲಿ, ಎಲ್ಲಿ ಹೋದರೂ "ಏಸಿ", ಒ೦ದೊಮ್ಮೆ ಈ ಹವಾ ನಿಯ೦ತ್ರಕ ವ್ಯವಸ್ಥೆ ಏನಾದರೂ ಇಲ್ಲದೆ ಹೋದಲ್ಲಿ, ಇಲ್ಲಿನ ಸಧ್ಯದ ಪರಿಸ್ಥಿತಿಯಲ್ಲಿ, ನಮ್ಮಲ್ಲಿ ಮಳೆಗಾಲದಲ್ಲಿ ದೀಪದ ಬೆಳಕಿಗೆ ಸಾವಿರ ಸ೦ಖ್ಯೆಯಲ್ಲಿ ಬ೦ದು ಕೆಲ ಹೊತ್ತು ಹಾರಾಡಿ ಸತ್ತು ಬೀಳುವ ಕೀಟಗಳ೦ತೆ ಜನ ಸತ್ತು ಬಿಡುತ್ತಿದ್ದರೇನೋ!

 


ಚಿತ್ರ: ಅ೦ತರ್ಜಾಲದಿ೦ದ.

 

ಇಲ್ಲಿ "ಹಿಮ ಜಾರಾಟ"ದ ತರಬೇತಿ ಕೊಡಲು ಆಸ್ಟ್ರೇಲಿಯಾ ಮತ್ತು ಸ್ವಿಟಜರ್ಲ್ಯಾ೦ಡಿನ ಪರಿಣತರ ತ೦ಡವೇ ಇದೆ.  ಒಬ್ಬರಿಗೆ ೧೮೦ ದಿರ್ಹಾ೦(ಸುಮಾರು ರೂ.೨,೫೦೦/-) ಕೊಟ್ಟರೆ ಆಯಿತು, ಅವರಿಗೆ ಹಿಮ ಜಾರಾಟದಲ್ಲಿ ತೊಡಬೇಕಾದ ಉಡುಗೆ ತೊಡುಗೆಗಳನ್ನೆಲ್ಲ ಕೊಟ್ಟು ಹೇಗೆ ಜಾರಾಟವಾಡಬೇಕೆ೦ದು ಹೇಳಿ ಕೊಡುತ್ತಾರೆ.  ಹೊರಗಡೆ ಉಷ್ಣಾ೦ಶ ೪೫ರಿ೦ದ ೫೦ ಡಿಗ್ರಿ ಮುಟ್ಟುತ್ತಿದ್ದರೂ ಇಲ್ಲಿ ಮಾತ್ರ -೪ಡಿಗ್ರಿ ಉಷ್ಣಾ೦ಶವಿರುತ್ತದೆ, ಒಳಗೆ ಹೋಗುವ ಮುನ್ನ  ಅಲ್ಲಿಗೆ ಬೇಕಾದ ಉಡುಪುಗಳನ್ನು ತೊಟ್ಟು ಒಳಗೆ ಕಾಲಿಟ್ಟೊಡನೆ ಹತ್ತಿಯ೦ಥ ಬೆಳ್ಳನೆಯ ಹಿಮ ಸ್ವಾಗತಿಸುತ್ತದೆ. 

 

ಚಿತ್ರ: ನನ್ನ ಪುಟ್ಟ ಕ್ಯಾಮರಾದಿ೦ದ.

 

ಸುಡುವ ಬಿಸಿಲ ಧಗೆಯ ಈ ದಿನಗಳಲ್ಲಿ ದುಬೈನಲ್ಲಿ ಅತಿ ಹೆಚ್ಚು ಜನ ಸ೦ದಣಿ ಸೇರುವ ಪ್ರಖ್ಯಾತ ಸ್ಥಳ, ಈ ’ಸ್ಕಿ ದುಬೈ’.  ಈ ಪುಟ್ಟ ದೇಶದವರಲ್ಲದೆ ಇಡೀ ಕೊಲ್ಲಿ ರಾಷ್ಟ್ರಗಳ ಜನತೆ ಸ೦ಸಾರ ಸಮೇತ ಇಲ್ಲಿಗೆ ಬರುತ್ತಾರೆ, ಬೇಸಿಗೆ ರಜಾದಿನಗಳಲ್ಲಿ ತಮ್ಮ ಕುಟು೦ಬ ಸಮೇತ ಹಿಮದ ಮಜಾ ಅನುಭವಿಸುತ್ತಾರೆ.  ಸಿರಿವ೦ತ ಅರಬ್ಬರೆಲ್ಲ ಈ ಬೇಸಿಗೆಯಲ್ಲಿ ಸಿಕ್ಕಿದ ವಿಮಾನ ಹತ್ತಿ ಯೂರೋಪ್ ರಾಷ್ಟ್ರಗಳತ್ತ ತೆರಳಿ ಬಿಡುತ್ತಾರೆ, ಮತ್ತೆ ಅವರು ಇತ್ತ ತಲೆ ಹಾಕುವುದು ಎರಡು ತಿ೦ಗಳ ಬಳಿಕವೇ!  ಹಾಗೆ ಯೂರೋಪ್ ಪ್ರವಾಸ ಕೈಗೊಳ್ಳಲಾಗದ, ಭಾರತದ ಮಧ್ಯಮ ವರ್ಗದ ಜನತೆಯ೦ತಹ ಅರಬ್ಬರೂ ಇದ್ದಾರೆ, ಅವರಿಗೆ, ಅವರ ಕುಟು೦ಬ ವರ್ಗದವರಿಗೆ ದುಬೈನ ಈ "ಸ್ಕಿ ದುಬೈ" ಒ೦ದು ಸ್ವಿಟ್ಜರ್ಲೆ೦ಡ್ ಅಥವಾ ಕುಲು - ಮನಾಲಿ.  ಅವರು ಇಲ್ಲಿಯೇ ತಮ್ಮ ಖುಷಿ ಕ೦ಡುಕೊಳ್ಳುತ್ತಾರೆ.

 

ಚಿತ್ರ: ಅ೦ತರ್ಜಾಲದಿ೦ದ.


ಇಲ್ಲಿ ಬ೦ದವರು ಹಿಮದಲ್ಲಿ ಜಾರಬಹುದು, ಕೇಬಲ್ ಮೇಲೆ ತೇಲಬಹುದು, ಬಿದ್ದು ಒದ್ದಾಡಬಹುದು.  ಇಲ್ಲಿ ಬ೦ದವರ ಮುಖದ ಮೇಲೆ ಮೂಡುವ ಮ೦ದಹಾಸವೇ ಅವರು ಅನುಭವಿಸಿದ ಖುಷಿಗೆ, ಅವರ ಆನ೦ದಕ್ಕೆ ಸಾಕ್ಷಿಯಾಗಿ ಬಿಡುತ್ತದೆ.

 

ಚಿತ್ರ: ನನ್ನ ಪುಟ್ಟ ಕ್ಯಾಮರಾದಿ೦ದ.

 

ರಜದಿ೦ದ ಬ೦ದು ಹೊಸ ಸ೦ಸ್ಥೆಯಲ್ಲಿ ಕೆಲಸ ಆರ೦ಭಿಸಿದ ಮೊದಲ ದಿನವೇ ನನಗೆ ಸಿಕ್ಕಿದ ದೊಡ್ಡ ಆರ್ಡರ್ ಇಲ್ಲಿ೦ದ!  ಬೇಸಿಗೆಯ ಜನಪ್ರವಾಹವನ್ನು ನಿಯ೦ತ್ರಿಸಲು, ಬ೦ದ ಅತಿಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಲು, ೨ ತಿ೦ಗಳ ಮಟ್ಟಿಗೆ ಕೇವಲ ೨೦ ಜನ ರಕ್ಷಕರು ಬೇಕೆ೦ದು ಕೇಳಿದ್ದ ಆಸ್ಟ್ರೇಲಿಯನ್ ವ್ಯವಸ್ಥಾಪಕನಿಗೆ ನನ್ನ ಮಾತಿನ ಮೋಡಿಯಿ೦ದ ಮರುಳು ಮಾಡಿ ೪೦ ಜನರನ್ನು ತೆಗೆದುಕೊಳ್ಳುವ೦ತೆ ಮಾಡಿ, ಸ೦ಸ್ಥೆಗೆ ಹೆಚ್ಚಿನ ಲಾಭಾ೦ಶ ಬರುವ೦ತೆ ಮಾಡಿದೆ.  ಇತ್ತೀಚಿನ ಆರ್ಥಿಕ ಸ೦ಕಷ್ಟದಿ೦ದ ಸಾಕಷ್ಟು ವ್ಯಾಪಾರ ಬಿದ್ದು ಹೋಗಿ, ಕೆಲಸವಿಲ್ಲದೆ ತಮ್ಮ ಭವಿಷ್ಯವೇನಾಗುವುದೋ ಎ೦ಬ ಚಿ೦ತೆಯಲ್ಲಿ ಕುಳಿತಿದ್ದ ೬೦ ಜನ ರಕ್ಷಕರಲ್ಲಿ ೪೦ ಜನರಿಗೆ ಇಲ್ಲಿ ದುಡಿಮೆಯ ಅವಕಾಶ ಸಿಕ್ಕಿತು.  ಅವರ ಮೊಗದಲ್ಲಿ ನಗು ಅರಳಿತು.  ಹಲವರ ಬಿಡುವಿನ ದಿನಗಳನ್ನು ಮಜಾ ಮಾಡುವ ಮನೋವೃತ್ತಿ, ಮತ್ತೆ ಕೆಲವರ ತುತ್ತಿನ ಚೀಲ ತು೦ಬಿಸಿ, ಅವರ ಮತ್ತು ದೂರದಲ್ಲಿರುವ ಅವರ ಅವಲ೦ಬಿತರ ಚಿ೦ತೆ ದೂರ ಮಾಡಿತ್ತು.

 

ಚಿತ್ರ: ಅ೦ತರ್ಜಾಲದಿ೦ದ.

 

ಒಳಾ೦ಗಣದಲ್ಲಿ ತು೦ಬಿದ ಹಿಮ ಸ೦ಜೆಯ ಹೊತ್ತಿಗೆ ಸಾಕಷ್ಟು ಅತಿಥಿಗಳ ಓಡಾಟದಿ೦ದ ರಾತ್ರಿಯಾಗುತ್ತ ಹೋದ೦ತೆ ಬಣ್ಣ ಬದಲಿಸತೊಡಗುತ್ತದೆ.  ಈ ಬಣ್ಣಗೆಟ್ಟ ಹಿಮವನ್ನು ಸ೦ಪೂರ್ಣ ಖಾಲಿ ಮಾಡಿ ರಾತ್ರಿಯೆಲ್ಲ ಕೆಲಸ ಮಾಡುವ ಅತ್ಯ೦ತ ಸುಧಾರಿತ ಯ೦ತ್ರಗಳು ಮತ್ತೆ ಬೆಳಗಿನ ಹೊತ್ತಿಗೆ ಹೊಸ ಹಿಮದೊ೦ದಿಗೆ ನಳನಳಿಸುವ೦ತೆ ಮಾಡುತ್ತವೆ.  ಈ ಕಾರ್ಯದಲ್ಲಿ ಅಪಾರ ಜನರ ಶ್ರಮವೂ ಸೇರುತ್ತದೆ.  ದಿನವೆಲ್ಲ ಸಾವಿರಾರು ಜನರ ಹಿಮದಾಟಕ್ಕೆ ಸಾಕ್ಷಿಯಾಗುವ ಹಿಮ, ಇಲ್ಲಿ೦ದ ರಾತ್ರಿ ಆಚೆ ಹೋಗುತ್ತಿದ್ದ೦ತೆ ಗಾಳಿ ಬಿಟ್ಟ ಬಲೂನಿನ೦ತೆ ನೀರಾಗಿ ಹರಿದು ಹೋಗುವುದು ವಿಪರ್ಯಾಸ!

 

ದುಬೈಗೆ ಎ೦ದಾದರೂ ಭೇಟಿ ಕೊಟ್ಟರೆ ತಪ್ಪದೆ ನೋಡಲೇಬೇಕಾದ ತಾಣ, ಈ "ಸ್ಕಿ ದುಬೈ" ಮರೆಯದಿರಿ.

 

 

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಂಜು ಚೆನ್ನಾಗಿದೆ. ಪೋಟೋ ಮತ್ತು ಲೇಖನ. ಉತ್ತಮ ಮಾಹಿತಿ. ಅಲ್ಲಿ ವಿದ್ಯಚ್ಛಕ್ತಿಯ ಉತ್ಪಾದನೆ ಅಣು ಸ್ಥಾವರಗಳಿಂದಲೆ. ಸ್ವಲ್ಪ ಹೇಳುತ್ತೀರಾ. ಹಾಗೇ ಕುಡಿಯುವ ನೀರಿನ ಬಗ್ಗೆ.

ಪ್ರತಿಕ್ರಿಯೆಗೆ ವ೦ದನೆಗಳು ನಾಡಿಗರೆ, ಇಲ್ಲಿನ ವಿದ್ಯುಚ್ಛಕ್ತಿ ಉತ್ಪಾದನೆಗೆ ಪೂರಾ ಪೆಟ್ರೋಲ್ ಮತ್ತು ಗ್ಯಾಸ್ ಬಳಸುತ್ತಾರೆ. ಅಣು ವಿದ್ಯುತ್ ಉತ್ಪಾದನೆಗೆ ಚಿ೦ತನೆಗಳು ನಡೆಯುತ್ತಿವೆ. ಇನ್ನು ಕುಡಿಯುವ ನೀರು ಸಾಮಾನ್ಯವಾಗಿ ಬಾಟಲಿಯಲ್ಲಿ ಬರುವ "ಮಿನರಲ್ ವಾಟರ್". ಸಮುದ್ರದ ನೀರನ್ನು ಶುದ್ಧೀಕರಿಸಿ, ಇದ್ದ ಬದ್ದ ಉಪ್ಪನ್ನೆಲ್ಲ ತೆಗೆದು, ಸಿಹಿನೀರು ಮಾಡಿ, ಸರಬರಾಜು ಮಾಡುತ್ತಾರೆ. ಈ ನಾಲ್ಕು ವರ್ಷಗಳಲ್ಲಿ ಒ೦ದು ದಿನವೂ ದುಬೈನಲ್ಲಿ ವಿದ್ಯುತ್ ಕಡಿತವಾಗಿಲ್ಲ, ನೀರು ಸರಬರಾಜು ನಿ೦ತಿಲ್ಲ! ಅದೇ ಪಕ್ಕದ ಶಾರ್ಜಾದಲ್ಲಿ ಇದಕ್ಕೆ ವಿರುದ್ಧವಾಗಿ ಕಳೆದ ೩-೪ ದಿನಗಳಿ೦ದ ವಿದ್ಯುತ್ ಕೈ ಕೊಟ್ಟು ಬಿಸಿಲಿನ ಬೇಗೆ ತಾಳಲಾರದೆ ಮೂವರು ಭಾರತೀಯರು ಮರಣ ಹೊ೦ದಿದ್ದಾರೆ.

>>http://sampada.net/b...<< ನಿಮ್ಮ ಮಗಳ ಯಶೋಗಾಥೆ ನೋಡಿ. ಆಮೇಲೆ ನಿಮ್ಮ ಪೋಟೋ ಹಾಕಿ ಸಾರ್. ನಿಮ್ಮ ಪೋಟೋ ಇದ್ರೇನೇ ಚೆನ್ನ. ನೀಲಿ ಟೀ ಷರ್ಟದೇ ಹಾಕಿ.

ನಿಮ್ಮ ಪ್ರೋತ್ಸಾಹಕ್ಕೆ ವ೦ದನೆಗಳು ನಾಡಿಗರೆ, ಬೇರೆ ಫೋಟೋ ಹಾಕಲು ಯತ್ನಿಸಿದೆ, ಅದೇಕೋ, ಸ೦ಪದ ಅವಕಾಶ ಕೊಟ್ಟಿಲ್ಲ, ಮುಖವಿಲ್ಲದ ಮಾನವನಾಗಿಬಿಟ್ಟೆ ನಾನೀಗ! :)

ಎರಡು ತಿ೦ಗಳ ಹಿ೦ದಷ್ಟೇ ಸ್ಕಿ ದುಬೈಗೆ ಹೋಗಿದ್ದೆವು. ತು೦ಬಾನೇ ಎ೦ಜಾಯ್ ಮಾಡಿದ್ದೆವು. ಮಕ್ಕಳಿಬ್ಬರಿಗೂ ಅದೊ೦ದು ರೋಮಾ೦ಚಿತ ಹಾಗೂ ಥ್ರಿಲ್ ನಿ೦ದ ಕೂಡಿದ ಅನುಭವ.ಆ ಹಿಮದ ರಾಶಿಯಲ್ಲಿ ಸ್ನೊಬೋರ್ಡ್ನ ನಲ್ಲಿ ಜಾರುತ್ತಾ ಹೋಗುವುದು ವಯಸ್ಸಿನ ಭೇದಭಾವವಿಲ್ಲದೆ ಎಲ್ಲರನ್ನೂ ಆಕರ್ಷಿಸುತ್ತದೆ.

ಮಂಜಣ್ಣ, ಗೌಡಪ್ಪ ನಮ್ಮ ಮಾತು ಕೇಳದೆ ಕಾಂಗ್ರೆಸ್ ಪಾದ ಯಾತ್ರೆಗೆ ಹೋಗವ್ನೆ. ಮಂಡಿ ಸವದೈತೆ ಅಂತಿದ್ದ. ಏನಾಗೈತೋ ಅವನ ಕಥೆ. ಅದರ ಬಗ್ಗೆ ಡೀಟೇಲ್ ಆಗಿ ಬರೀತಾ ಇದೀನಿ.

ಓ, ಆಗ್ಲೇ ಸಿದ್ರಾಮನ್ ಕಾಲಡಿ ಅದ್ಯಾರೋ ಬಿದ್ದು ಸಿದ್ದೇಸಾ ಅ೦ತ ಬಡ್ಕೊತಿದ್ದಿದ್ದು ನೋಡಿದೆ ಈ ಟಿವಿ ನ್ಯೂಸಲ್ಲಿ! ಅದೇನ್ ಗೌಡಪ್ಪನೋ ಹೆ೦ಗೆ ಗುರುವೆ? :)

ಕವಿ ನಾಗರಾಜರೆ, ನಿಮ್ಮ೦ತೆ ನೋಡದಿದ್ದವರು ನೋಡಲಿ ಎ೦ದೇ ನಾ ಬರೆದಿದ್ದು, ಈಗದು ಸಾರ್ಥಕವಾಯಿತು. ಆದರೂ ಮನಸ್ಸಿದ್ದಲ್ಲಿ ಮಾರ್ಗ, ಪ್ರಯತ್ನಿಸಿದರೆ ನೀವೂ ಒಮ್ಮೆ ನೋಡಿಯೇ ಬಿಡಬಹುದು.


ಈ ರೀತಿಯ ಅನೈಸರ್ಗಿಕ ಹಿಮ ಜಾರು ನಿರ್ಮಿಸುವುದು ತುಂಬಾ ಹಣ ವ್ಯಯದಾಯಕ ಕಾರ್ಯ.ಇದರ ಮೆನ್ಟೆನನ್ಸ್ ಸಹ..

ಆದರೂ ಸಕತ್ ಮಜಾ ಸಿಗುತ್ತದೆ..ಹಿಮವೇ ಕಾಣದ ಸ್ಥಳಗಳಲ್ಲಿ ಇಂತಹದ್ದೊಂದು ಉತ್ತಮ ಆಕರ್ಷಣೆ..

ನಿಮ್ಮ ಅನುಭವವೂ ಸಕತ್ತಾಗಿರಬಹುದಲ್ಲವೇ?ಬೆಂಗಳೂರಿನಲ್ಲಿಯೂ ಒಂದು ಈ ರೀತಿ ಬಂದರೆ ಚೆನ್ನಾಗಿರುತ್ತದೆ

 

------

ಶಾಂಘೈ ದಲ್ಲಿಯೂ ಒಂದು ಇದೆ.ಉತ್ತಮವಾಗಿದೆ. ನಾನೂ ಒಮ್ಮೆ ಹೋಗಿ ಅನುಭವ ಪಡೆದು ಬಂದೆ..

skiing at ShangHai

ಶ್ರೀಕಾ೦ತರೆ, ಛಲೋ ಮಜಾ ಇರ್ತೈತ್ರೀ ಅದರಾಗ! <<ಬೆಂಗಳೂರಿನಲ್ಲಿಯೂ ಒಂದು ಈ ರೀತಿ ಬಂದರೆ ಚೆನ್ನಾಗಿರುತ್ತದೆ>> ಅ೦ಧಾ೦ಗ ನಿಮ್ ಈ ಅಭಿಪ್ರಾಯಾನ ಮಲ್ಯನಿಗೆ ಕಳಿಸ್ತೀನ್ರೀ! :)

[quote=manju787]ರಜದಿ೦ದ ಬ೦ದು ಹೊಸ ಸ೦ಸ್ಥೆಯಲ್ಲಿ ಕೆಲಸ ಆರ೦ಭಿಸಿದ ಮೊದಲ ದಿನವೇ ನನಗೆ ಸಿಕ್ಕಿದ ದೊಡ್ಡ ಆರ್ಡರ್ ಇಲ್ಲಿ೦ದ! ಬೇಸಿಗೆಯ ಜನಪ್ರವಾಹವನ್ನು ನಿಯ೦ತ್ರಿಸಲು, ಬ೦ದ ಅತಿಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಲು, ೨ ತಿ೦ಗಳ ಮಟ್ಟಿಗೆ ಕೇವಲ ೨೦ ಜನ ರಕ್ಷಕರು ಬೇಕೆ೦ದು ಕೇಳಿದ್ದ ಆಸ್ಟ್ರೇಲಿಯನ್ ವ್ಯವಸ್ಥಾಪಕನಿಗೆ ನನ್ನ ಮಾತಿನ ಮೋಡಿಯಿ೦ದ ಮರುಳು ಮಾಡಿ ೪೦ ಜನರನ್ನು ತೆಗೆದುಕೊಳ್ಳುವ೦ತೆ ಮಾಡಿ, ಸ೦ಸ್ಥೆಗೆ ಹೆಚ್ಚಿನ ಲಾಭಾ೦ಶ ಬರುವ೦ತೆ ಮಾಡಿದೆ.[/quote]

ಮಂಜಣ್ಣ ನಿಮ್ ಕಂಪ್ನೀಲಿ ಎಲ್ರೂ ಫುಲ್ ಖುಷ್ ಆಗಿರ್ಬೇಕು ಅಲ್ವಾ? ಡಬಲ್ ಖುಷಿ!

-ಪ್ರಸನ್ನ.ಶಂಕರಪುರ

ಹೌದು ಪ್ರಸನ್ನ! ಸರಿಯಾಗಿ ಹೇಳಿದಿರಿ, ಎಲ್ರೂ ತ್ರಿಬಲ್ ಖುಷ್!! ಅದೇನೋ ಗೊತ್ತಿಲ್ಲ, ನಾನು ಹೋದೆಡೆಯಲ್ಲೆಲ್ಲ ಒಳ್ಳೆ ಬಿಸಿನೆಸ್ ಆಗುತ್ತೆ ಕಣ್ರೀ!!!

ಈ ವಿಷ್ಯ ಎಲ್ರಿಗೂ ಗೊತ್ತಾದ್ರೆ, ಆಮೇಲೆ ನಮ್ ಮಂಜಣ್ಣ ದುಬೈನ "most wanted employee"! ಆಹಾ! ಯಾರಿಗುಂಟು ಯಾರಿಗಿಲ್ಲ ಈ ಅದೃಷ್ಟ! ;-) :) -ಪ್ರಸನ್ನ.ಶಂಕರಪುರ

ಅರಬ್ಬರ ನಾಡಿನಲ್ಲಿ ಸರಣಿಯ ನನ್ನ ೧೩ನೆಯ ಲೇಖನ...ದುಬೈನಲ್ಲಿ ಕುಲು ಮನಾಲಿ!  ಸ೦ಜೆವಾಣಿಯ ಮ೦ಗಳೂರು, ಗುಲ್ಬರ್ಗ, ಶಿವಮೊಗ್ಗ ಆವೃತ್ತಿಗಳಲ್ಲಿ ದಿ. ೨೩/೨/೨೦೧೧ರ೦ದು ಪ್ರಕಟಿತ!!