ಬಂತು ಮತ್ತೊಮ್ಮೆ ವ್ರತಾಚರಣೆಯ ಮಾಸ

To prevent automated spam submissions leave this field empty.

ರಮದಾನ್, ಇಸ್ಲಾಮೀ ಪಂಚಾಂಗದ ಒಂಭತ್ತನೆ ತಿಂಗಳು ಮತ್ತು ಇಸ್ಲಾಮಿನ ಐದು ಸ್ಥಂಭಗಳಲ್ಲಿ ಮೂರನೆಯ ಸ್ಥಂಭವಾದ ರಮದಾನ್ ತಿಂಗಳಿನಲ್ಲಿ ಜಗತ್ತಿನ ಮುಸ್ಲಿಮರು ದಿನವಿಡೀ ಉಪವಾಸವಿದ್ದು ವಿಶೇಷ ಆರಾಧನೆಯಲ್ಲೂ, ಪವಿತ್ರ ಕುರಾನ್ ಪಾರಾಯಣದಲ್ಲೂ ತಮ್ಮ ಸಮಯ ಕಳೆಯುತ್ತಾರೆ. ಈ ಕಾರಣಕ್ಕಾಗಿ ಈ ಮಾಸವನ್ನು ದಾನದ, ಧ್ಯಾನದ ಮತ್ತು ಚಿಂತನೆಯ ಮಾಸವೆಂದು ಕರೆಯುತ್ತಾರೆ (month of charity, contemplation, and reflection). ಚಂದ್ರ ದರ್ಶನದೊಂದಿಗೆ ಆರಂಭವಾಗುವ ೩೦ ದಿನಗಳ ಈ ಉಪವಾಸ ವ್ರತ ಮುಸ್ಲಿಮ್ ಜಗತ್ತಿಗೆ ಹೊಸ ಚೈತನ್ಯವನ್ನೂ, ಧಾರ್ಮಿಕತೆಯನ್ನೂ ತುಂಬುತ್ತದೆ.

ನಮ್ಮನ್ನು ಸೃಷ್ಟಿಸಿದ ದೇವರಿಗೆ ಆರಾಧನೆ ಸಲ್ಲಿಸುವುದಕ್ಕೆ, ಪ್ರಾಮುಖ್ಯತೆ ಹೆಚ್ಚು. ಯಾವುದೇ ಪರಿಸ್ಥಿತಿಯಲ್ಲೂ ಐದು ಹೊತ್ತಿನ ನಮಾಜನ್ನು ನಿರ್ವಹಿಸಲೇಬೇಕು. ನಮಾಜ್ ಜೊತೆಗೆ ಕುರಾನ್ ಸೂಕ್ತಗಳನ್ನು ಪಠಿಸುವುದು, ಹಜ್ ಯಾತ್ರೆ, ಇವೂ ಸಹ ಆರಾಧನೆಯಲ್ಲೇ ಒಳಗೊಳ್ಳುತ್ತದೆ. ಆದರೆ ನಮಾಜ್, ಕುರಾನ್ ಪಠಣ, ಹಜ್ ಇತ್ಯಾದಿಗಳು  ತೋರಿಕೆಯ ಆರಾಧನೆಯಾಗಿಯೂ ಮಾರ್ಪಡಬಹುದು. ನಾನು ಧರ್ಮಿಷ್ಠ ಎಂದು ತೋರಿಸಲು ಎಲ್ಲರಿಗೂ ಕಾಣುವಂತೆ ಮಸ್ಜಿದ್ ಗೆ ಹೋಗುವುದು, ಹಜ್ ಯಾತ್ರೆ ಮಾಡುವುದು ಹೀಗೆ. ಆದರೆ ವ್ರತಾಚಾರಣೆ ಹಾಗಲ್ಲ. ಇದೊಂದು ರಹಸ್ಯ ಆರಾಧನೆ. ಉಪವಾಸವಿರುವವನ ಮತ್ತು ಅವನ ಪ್ರಭುವಿಗೆ ಮಾತ್ರ ತಿಳಿಯುವ ಆರಾಧನೆ. ಮೂರನೆಯ ವ್ಯಕ್ತಿಗೆ ಇದರ ಅರಿವಿರುವುದಿಲ್ಲ; ಹಾಗಾಗಿ ವ್ರತಾಚರಣೆಗೆ ಹೆಚ್ಚು ಮಹತ್ವ.    

ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೆ ಉಪವಾಸದ ಅವಧಿ. ಅರುಣೋದಯದ "ಪ್ರಾರ್ಥನೆಯ ಕರೆ" ( "ಅದಾನ್" ) ಕಿವಿಗೆ ಬಿದ್ದ ಕೂಡಲೇ ಆಹಾರ, ಪಾನೀಯಗಳು ನಿಷಿದ್ಧವಾಗುತ್ತವೆ. ಅದೇ ರೀತಿ ಸೂರ್ಯಾಸ್ತದ ಪ್ರಾರ್ಥನೆಯ ಕರೆ ಕೇಳಿದ ಕೂಡಲೇ ಸ್ವಲ್ಪ ನೀರು ಮತ್ತು ಖರ್ಜೂರದ ಸಹಾಯದಿಂದ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ. ಇಡೀ ದಿನದ ಉಪವಾಸದಿಂದ ಶರೀರದ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಆಗಬಾರದು ಎಂದು ಮಧ್ಯ ರಾತ್ರಿಯ ನಂತರ ಅಥವಾ ಅರುಣೋದಯದ ಸ್ವಲ್ಪ ಮೊದಲು ಸ್ವಲ್ಪವಾದರೂ ಆಹಾರ (ಇದಕ್ಕೆ "ಸುಹೂರ್" ಎಂದು ಕರೆಯುತ್ತಾರೆ) ತೆಗೆದು ಕೊಳ್ಳಲೇಬೇಕು. ಅದೇ ರೀತಿ ದಿನವಿಡೀ ಒಂದು ತೊಟ್ಟೂ ನೀರಿಲ್ಲದೆ, ತಮ್ಮ ದಿನಚರಿಗೆ ಯಾವುದೇ ಧಕ್ಕೆ ಬಾರದಂತೆ ತಮ್ಮ ಕೆಲಸ, ಧಂಧೆ ಮಾಡುತ್ತಾ ಉಪವಾಸವಿದ್ದು ಸೂರ್ಯಾಸ್ತಕ್ಕೆ ಒಂದು ಗುಟುಕು ನೀರು ಮತ್ತು ಒಂದು ತುಂಡು ಖರ್ಜೂರದ ಸಹಾಯದಿಂದ ಉಪವಾಸ ಕೊನೆಗೊಳಿಸುವುದಕ್ಕೆ  "ಇಫ್ತಾರ್" ಎಂದು ಕರೆಯುತ್ತಾರೆ. ಇಫ್ತಾರ್ ಪದವನ್ನು ತಾವು ಕೇಳಿರಲೇಬೇಕು, ನಮ್ಮ ರಾಜಕಾರಣಿಗಳು ಮುಸ್ಲಿಂ ಗೆಳೆಯರಿಗೆ ಏರ್ಪಡಿಸುವ ಔತಣ. ಪ್ರಾಯಕ್ಕೆ ಬಂದ ಪ್ರತೀ ಮುಸ್ಲಿಮ್ ಉಪವಾಸ ವ್ರತ ಆಚರಿಸಲೇಬೇಕು ಎಂದು ಕಡ್ಡಾಯವಾದ ನಿಯಮ. ಖಾಯಿಲೆಯಿಂದ ಬಳಲುವವರಿಗೆ ಮತ್ತು ಯಾತ್ರಿಗಳಿಗೆ ಇದರಿಂದ ವಿನಾಯಿತಿ ಇದ್ದು ಯಾತ್ರೆ ಮುಗಿದ ನಂತರ, ಮತ್ತು ಖಾಯಿಲೆಯಿಂದ ಗುಣಮಮುಖರಾದ ನಂತರ ತಪ್ಪಿಹೋದ ಉಪವಾಸ ದಿನಗಳನ್ನು ಉಪವಾಸ ಇರುವ ಮೂಲಕ ತೀರಿಸಬೇಕು,ಅದೂ ಸಾಧ್ಯವಾಗದಿದ್ದರೆ ತಪ್ಪಿ ಹೋದ ದಿನಗಳಿಗೆ ಪ್ರಾಯಶ್ಚಿತ್ತವಾಗಿ ಬಡ ಬಗ್ಗರಿಗೆ ಅನ್ನದಾನ ಮಾಡಬೇಕು.

ರಮದಾನ್ ಮಾಸದ ಮಹತ್ವದ ಬಗ್ಗೆ ಹೇಳುತ್ತಾ ಪ್ರವಾದಿಗಳು ಹೇಳಿದ್ದು, ರಮದಾನ್ ಮಾಸ ೭೦,೦೦೦ ತಿಂಗಳು ಗಳಿಗೆ ಸಮಾನ ಎಂದು. ಅದೂ ಅಲ್ಲದೆ ಇದೇ ತಿಂಗಳಿನಲ್ಲಿ ಪವಿತ್ರ ಕುರಾನ್ ನ ಸೂಕ್ತಗಳು ಅವತೀರ್ಣವಾಗಿದ್ದು.  ಈ ಕಾರಣಕ್ಕಾಗಿ ಜಗದಾದ್ಯಂತ ಮುಸ್ಲಿಮರು ಈ ತಿಂಗಳ ತಮ್ಮ ಬಿಡುವಿನ ವೇಳೆಯಲ್ಲಿ ಮತ್ತು ಹೆಚ್ಚು ಸಮಯ ಕುರಾನ್ ಪಾರಾಯಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹಾಗೆಯೆ ಈ ತಿಂಗಳಿನಲ್ಲಿ ರಾತ್ರಿಯಲ್ಲಿ "ತರಾವೀಹ್" ಎಂದು ಕರೆಯಲ್ಪಡುವ ವಿಶೇಷ ಪ್ರಾರ್ಥನೆಗಳು ಸಹ ನಡೆಯುತ್ತವೆ. ಪ್ರತೀ ಆರಾಧನೆ, ದಾನ, ಒಳ್ಳೆಯ ಮಾತು, ಕೃತಿ ಇವುಗಳಿಗೆ ಪ್ರತಿಫಲ ಸಹ ೭೦,೦೦೦ ಪ್ರತಿಫಲದ ರೀತಿಯಲ್ಲಿ ದೇವರು ಕೊಡುವನೆಂದೂ ಮುಸ್ಲಿಮ್ ವಿಧ್ವಾಂಸರು ಹೇಳುತ್ತಾರೆ.      

ರಮದಾನ್ ತಿಂಗಳಿನಲ್ಲಿ ನಾವು ಮಾಡುವ ಪ್ರತೀ ಕೆಲಸವೂ ಇಸ್ಲಾಮೀ ಆದರ್ಶಗಳಿಗೆ ಪೂರಕವಾಗಿರಬೇಕೆಂದು ವಿಧ್ವಾಂಸರುಗಳು ಎಚ್ಚರಿಸುತ್ತಾರೆ. ಈ ಮಾಸದಲ್ಲಿ ಉದ್ರೇಕ ಪಡುವುದಾಗಲೀ,ಕೆರಳುವುದಾಗಲೀ ಮಾಡಬಾರದು. ಹಾಗೇನಾದರೂ ಯಾರಾದರೂ ಉದ್ರೇಕಿಸಿದರೆ "ನಾನು ವ್ರತಾಚರಣೆ ಮಾಡುತ್ತಿದ್ದೇನೆ" ಎಂದು ಹೇಳಿ ಮೌನವಾಗಿರಬೇಕು ಎಂದು ಸಲಹೆ ನೀಡುತ್ತಾರೆ. ಜ್ಞಾನಾರ್ಜನೆ, ಮತ್ತು ಸಂಯಮ ಪಾಲನೆ ರಮದಾನ್ ತಿಂಗಳ ವೈಶಿಷ್ಟ್ಯ ಎನ್ನಬಹುದು. ವ್ರತಾಚರಣೆಯ ಮೂಲಕ ರಮದಾನ್ ತಿಂಗಳು ನಮಗೆ "ಸ್ವ ನಿಗ್ರಹ" ದ ಗುಣವನ್ನೂ, ಸಂಯಮ ಶೀಲತೆಯನ್ನೂ ಕಲಿಸುತ್ತದೆ. ಈ ತೆರನಾದ ನಡವಳಿಕೆ ಮುಸ್ಲಿಮರು ಬರೀ ರಮದಾನ್ ಮಾಸಕ್ಕೆ ಸೀಮಿತಗೊಳಿಸದೆ ತಮ್ಮ ಬದುಕಿನ ಪ್ರತೀ ಘಳಿಗೆಯಲ್ಲೂ ಪಾಲಿಸಿದರೆ ದೇವರು ಯಶಸ್ಸನ್ನು ದಯಪಾಲಿಸುತ್ತಾನೆ ಸಮಾಜಕ್ಕೆ ಆದರ್ಶಪ್ರಾಯನಾಗಿ ಬದುಕುತ್ತಾನೆ.  

ಪ್ರತೀ ಮುಸ್ಲಿಂ ಮನೆಯಲ್ಲೂ ರಮದಾನ್ ಒಂದು ವಿಶೇಷ ತಿಂಗಳಾಗಿರುತ್ತದೆ. ಅದರಲ್ಲೂ ಮಕ್ಕಳಿಗೆ ಒಂದು ರೀತಿಯ ಸಂತಸ. ಐದು ವರ್ಷದ ಮೇಲ್ಪಟ್ಟ ಮಕ್ಕಳೂ ಸಹ ಪೂರ್ತಿ ತಿಂಗಳಲ್ಲದಿದ್ದರೂ ಸಾಧ್ಯವಾದಷ್ಟು ದಿಂದ ಉಪವಾಸ ಆಚರಿಸಲು ಯತ್ನಿಸುತ್ತಾರೆ. ನನ್ನ ಆರು ವರ್ಷದ ಮಗ ಕಳೆದ ಎರಡು ವರ್ಷಗಳಿಂದ ೮ – ೧೦ ದಿನ ಉಪವಾಸವಿದ್ದನು. ಸಂಜೆಯಾಗುತ್ತಿದ್ದಂತೆ ಮಕ್ಕಳು ಕಾತುರದಿಂದ ಮಸ್ಜಿದ್ ಗಳ ಗೋಪುರಗಳು ಹೊರಡಿಸುವ ಅದಾನ್ ಗಾಗಿ ಕಾದು ನಿಂತು "ಅಲಾಹು ಅಕ್ಬರ್" (ದೇವರು ಸರ್ವಶ್ರೇಷ್ಠ ) ಎನ್ನುವುದನ್ನು ಕೇಳುತ್ತಲೇ ಓಡಿ ಬಂದು ಅಮ್ಮಾ, ಅಪ್ಪಾ, ಅದಾನ್ ಆಗುತ್ತಿದೆ, ಬೇಗ ನೀರು ಕುಡಿಯಿರಿ ಎಂದು ಉತ್ತೇಜಿಸುತ್ತಾರೆ.

೩೦ ದಿನಗಳ ಉಪವಾಸ ಮುಗಿದ ನಂತರ ಚಂದ್ರ ದರ್ಶನ ವಾಗುತ್ತಲೇ "ಈದ್" ಸಂಭ್ರಮ ಎಲ್ಲೆಡೆ. ಚಂದ್ರ ದರ್ಶನ ಆಗುತ್ತಲೇ ಮಾರನೆ ದಿನದ ಈದ್ ನಂದು ಯಾರೂ ತಿನ್ನಲು ಇಲ್ಲದೆ ಬಳಲಬಾರದು ಎಂದು ಬಡಬಗ್ಗರಿಗೆ ಅಕ್ಕಿ ದಾನ ಮಾಡುತ್ತಾರೆ. ಈ ದಾನದಿಂದಾಗಿಯೇ ಈದ್ ಹಬ್ಬಕ್ಕೆ "ಈದ್ ಅಲ್ ಫಿತ್ರ್" ಎಂದು ಹೆಸರು.         

ಸೌದಿ ಅರೇಬಿಯಾದಲ್ಲಿ ರಮದಾನ್ ತುಂಬಾ ಸೊಗಸು. ಇಡೀ ತಿಂಗಳು ಮತ್ತು ಅದರ ನಂತರ ಬರುವ ಸುಮಾರು ಹತ್ತು ದಿನಗಳ ಈದ್ ಸಂಭ್ರಮ. ಇಡೀ ನಗರವೇ ಅಲಂಕಾರದಲ್ಲಿ ಮುಳುಗಿರುತ್ತದೆ. ಎಲ್ಲೆಲ್ಲೂ ವಿಶೇಷ offer ಗಳು, ಬಹುಮಾನಗಳು, ರಸ್ತೆ ಬದಿಯಲ್ಲಿ ಉಪವಾಸವಿಟ್ಟುಕೊಂಡು ಪ್ರಯಾಣ ಮಾಡುವವರಿಗೆ ಪುಕ್ಕಟೆ ತಿಂಡಿ ತೀರ್ಥಗಳ ವಿತರಣೆ, ನಿರ್ಗತಿಕರಿಗೆ, ಕೆಳಸ್ತರದ ಉದ್ಯೋಗ ಮಾಡುವವರಿಗೆ ದಾನ ಮಾಡುವಲ್ಲಿ ಪೈಪೋಟಿ, ಹೀಗೆ ನಾನಾ ರೀತಿಯ ಚಟುವಟಿಗಳನ್ನು ಕಾಣಬಹುದು. ಕೆಲಸದ ಸಮಯವೂ ನಾಲ್ಕು ಅಥವಾ ಐದು ಘಂಟೆಗಳು. ಹಾಗಾಗಿ ಉಪವಾಸವಿರುವುದು ಬಹಳ ಸುಲಭ ಅರೇಬಿಯಾದಲ್ಲಿ.

ಈ ಲೇಖನ ಬರೆಯುತ್ತಿದ್ದಂತೆ ಸೌದಿ ಅರೇಬಿಯಾದ ರಾಜಧಾನಿ  ರಿಯಾಧ್ ನಗರದಲ್ಲಿ ಚಂದ್ರ ದರ್ಶನವಾಗಿದ್ದು ಅರೇಬಿಯಾದ್ಯಂತ ನಾಳೆಯಿಂದ ಉಪವಾಸ ವ್ರತ ಆರಂಭವಾಗುತ್ತದೆ.

ಈ ಶುಭ ಸಂದರ್ಭದಲ್ಲಿ ನಲ್ಮೆಯ ಸಂಪದಿಗರೆಲ್ಲರಿಗೂ, ದೇಶವಾಸಿಗಳಿಗೂ, ಎಲ್ಲರಿಗೂ ಪವಿತ್ರ ರಮದಾನ್ ತಿಂಗಳ ಹಾರ್ದಿಕ ಶುಭ ಹಾರೈಕೆಗಳು.

 

ಚಿತ್ರ ಕೃಪೆ: http://www.spacew.com/gallery/image006059.jpg

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರಮದಾನ್ ಬಗ್ಗೆ ಸೂಕ್ತ ಮಾಹಿತಿಗಳನ್ನು ನೀಡಿದ್ದೀರಿ, ಧನ್ಯವಾದಗಳು ಅಬ್ದುಲ್ಲರೇ, ನನ್ನ ಸ್ನೇಹಿತರಿಗೆ ಎಷ್ಟು ಗೋಳು ಹೊಯ್ದುಕೊಂಡರೂ ರಮದಾನ್ ಬಗ್ಗೆ ಸರಿಯಾದ ಮಾಹಿತಿ ಕೊಡುತ್ತಿರಲಿಲ್ಲ! :) ಚೆಂದದ ಚಿತ್ರ. -ಪ್ರಸನ್ನ.ಎಸ್.ಪಿ

ನಿಮಗೂ ಕೂಡ ಶುಭಾಶಯಗಳು. ಖುಷಿ ಕೊಟ್ಟ ಮಾಹಿತಿ. ಚಿತ್ರ ಸೊಗಸಾಗಿದೆ. ರಮ್ ದಾನ್ ಬಗ್ಗೆ ಇಷ್ಟೊ೦ದು ಮಾಹಿತಿ ಗೊತ್ತಿರಲಿಲ್ಲ. ನಮಸ್ಕಾರಗಳೊ೦ದಿಗೆ,

ನಮ್ಮ ಕಿವಿಗಳಿಗೆ "ರಮ್ ಜಾನ್ ... ರಮ್ ಜಾನ್" ಎಂದೇ ಕೇಳಿಸಿಕೊಳ್ಳುತ್ತಿದ್ದ ಈ ಪದ "ರಮದಾನ್" ಎಂಬುದರ ಅರಿವಾಯಿತು. ಈ ವ್ರತಾಚರಣೆಯ ಬಗ್ಗೆ ಕೂಲಂಕಷವಾದ ಮಾಹಿತಿಪೂರ್ಣ ಲೇಖನ, ತಂತಾನೇ ಓದಿಸಿಕೊಂಡು ಹೋಯಿತು. (ನಾನು ಇಲ್ಲಿನ ಸುದೀರ್ಘ ಲೇಖನಗಳನ್ನು ಓದುವುದು ಕಡಿಮೆಯೇ). ನಿಮ್ಮ ವ್ರತಾಚರಣೆಯೂ ಸಾಂಗವಾಗಿ ನಡೆಯಲಿ ಎಂದು ಆಶಿಸುತ್ತೇನೆ. - ಆಸು ಹೆಗ್ಡೆ

ಪವಿತ್ರ "ರಮದಾನ್" ಬಗ್ಗೆ ಉತ್ತಮ ಮಾಹಿತಿ ಅಬ್ದುಲ್, ದುಬೈನಲ್ಲಿಯು ಇ೦ದಿನಿ೦ದ ಉಪವಾಸ ವ್ರತಾಚರಣೆ ಆರ೦ಭವಾಗಿದೆ. ಇದು ನನ್ನ ನಾಲ್ಕನೆಯ ವರ್ಷ ಇಲ್ಲಿ, ಹಾಗು ನಾಲ್ಕನೆಯ ರಮದಾನ್ ಆಚರಣೆ ಕೂಡ! ನನ್ನ ಮುಸ್ಲಿ೦ ಗೆಳೆಯರು ದಿನವೆಲ್ಲ ಉಪವಾಸವಿರುವಾಗ ನಾವು ಸಹ ಅವರೊ೦ದಿಗೆ ಬೆರೆತು ಉಪವಾಸವಿದ್ದು ಸ೦ಜೆ ಮನೆಗೆ ಹೋದ ನ೦ತರವೇ ಏನಾದರು ತಿನ್ನುವ ಪರಿಪಾಠ ಬೆಳೆದು ಬ೦ದಿದೆ. ಸ೦ಜೆಯ ಪ್ರಾರ್ಥನೆಯ ನ೦ತರ ಆತ್ಮೀಯವಾಗಿ, ಎಲ್ಲ ಜಾತಿ, ಧರ್ಮ ಬೇಧಗಳನ್ನು ಮರೆತು, ಒಬ್ಬರನ್ನೊಬ್ಬರು ಆಲಿ೦ಗಿಸಿಕೊ೦ಡು ಇಫ್ತಾರ್ ನಲ್ಲಿ ಭಾಗವಹಿಸುವ ದೃಶ್ಯಗಳನ್ನು ನೋಡುವುದು ಬಹು ಆನ೦ದಮಯ ದೃಶ್ಯ. "ರಮದಾನ್ ಕರೀಂ". ಹೊಳೆ ನರಸೀಪುರ ಮ೦ಜುನಾಥ.

ಉಪವಾಸಕ್ಕೆ ಯಾವುದೇ ಅಡಚಣಿ ಇಲ್ಲದೇ ಅಲ್ಲಾಹುವಿನ ಪ್ರೀತಿಗೆ ಪಾತ್ರರಾಗಿರಿ ಎಂದು ಹಾರೈಸುತ್ತೇನೆ "ಯೇ ಹೈ ರಮಜಾನಕಾ ಮಹಿನಾ "ಎಂಬ ಹಾಡನ್ನು ಬಹಳಸಾರೆ ಕೇಳಿದ್ದೇನೆ. ' ರಮದಾನ' ನಿಜವಾದ ಪದ ಎಂಬುದು ತಮ್ಮಿಂದ ಗೊತ್ತಾಯಿತು. ಆ ಹಾಡು ಕೇಳಲು ಸಿಕ್ಕಿದರೆ ಸರಿಯಾಗಿ ಅಲಿಸಿ ಕೇಳುತ್ತೇನೆ

ಎಂದಿನಂತೆ ಚಂದದ ಬರಹ, ಅಬ್ದುಲ್ ಭಾಯಿ! ರಮದಾನೋ ಅಥವಾ ರಮಜಾನೋ? ಎರಡೂ ಸರಿ! ಅರಬಸ್ತಾನದ ರಮದಾನ್ ಪದ ಇರಾಕ್, ಟರ್ಕಿ ಮೂಲಕ ಹಿಂದೂಸ್ತಾನಕ್ಕೆ ಬರುವಾಗ ರಮಜಾನ್ ಹೇಗಾಯಿತು ಎಂಬ ಬಗ್ಗೆ ವಿವರಣೆ ಇಲ್ಲಿದೆ ಓದಿ. http://www.languageh... ಕನ್ನಡದ ಬರಹಗಾರ ರಮ್ಜಾನ್ ದರ್ಗಾರ ಹೆಸರು ನೆನಪಿಗೆ ಬಂತು.

ರಮದಾನ್ ಅದ್ಭುತ ಕಲ್ಪನೆ. ಇದರ ಜೊತೆಯಿರುವ ಸಾಮಾಜಿಕ ಕಾಳಜಿ ಅನುಕರಣೀಯ. ಇಂಥಹದೊಂದು ಆಚರಣೆಯನ್ನು ಕೊಟ್ಟ ಇಸ್ಲಾಂ ಪರಂಪರೆಗೆ ನನ್ನದೊಂದು ಸಲಾಂ. ಇಲ್ಲಿನ ವೈದಿಕರಲ್ಲಿ (ಮಾಧ್ವರಲ್ಲಿ ವಿಶೇಷವಾಗಿ)ಚಾತುರ್ಮಾಸ ಎಂಬ ಆಚರಣೆ ಇದೆ. ಆದರೆ ಸಾಮೂಹಿಕವಾಗಿ ಎಲ್ಲರೂ ಆಚರಿಸುವ ವ್ರತವಾಗಿ ಇದನ್ನು ನಾನು ಕಂಡಿಲ್ಲ. ಹಳಬರು ಇದನ್ನು ನಿಷ್ಠೆಯಿಂದ ಪಾಲಿಸುವುದನ್ನು ನೋಡಿದ್ದೇನೆ. ಅಯ್ಯಪ್ಪನ ಭಕ್ತರು ಈ ರೀತಿಯ ಸ್ವಯಂ ಕಟ್ಟುಪಾಡುಗಳನ್ನು ಹಾಕಿಕೊಂಡು ಪರಿಶುದ್ದರಾಗುವುದನ್ನು ಕಾಣುತ್ತೇವೆ. ನಿಜಕ್ಕೂ ಎಲ್ಲರೂ ಒಟ್ಟಾಗಿ ದೇಹದ - ಆತ್ಮದ ಶುದ್ದಿಯಲ್ಲಿ ಒಳಗಾಗುತ್ತಾ ಸೆಲಬ್ರೇಟ್ ಮಾಡುವ ಮುಸಲ್ಮಾನರ ಈ ಹಬ್ಬ ನಿಜಕ್ಕೂ ಹಬ್ಬವೇ. ಅಭಿನಂದನೆ ಅಬ್ದುಲ್.

ಉತ್ತಮವಾದ ಮಾಹಿತಿ ! ಆದರೆ ಈ ಹಬ್ಬದ ತಿಂಗಳಲ್ಲಿ ಮುಸ್ಲಿಂ ಜನಾಂಗ ಜಾಸ್ತಿ ತಿನ್ನುತ್ತಾರೆ ಎನ್ನುವುದು ಸಂಶೋಧನೆಯಿಂದ ತಿಳಿದು ಬಂದಿದೆ. ಈಜಿಪ್ಟ್ ದೇಶದ ಒಬ್ಬ ಹಬ್ಬದ ತಿಂಗಳಲ್ಲಿ ಮುಸ್ಲಿಂ ಜನರು ಜಾಸ್ತಿ ತಿನ್ನುವುದು, ಜಾಸ್ತಿ ಕರೆಂಟ್ ಬಳಸುವುದು, - ಹೀಗೆ ಮಿತಿ ಮೀರಿ ವರ್ತಿಸುವರು . ಇದರಿಂದ ಈ ತಿಂಗಳಲ್ಲಿ ರೋಗದಿಂದ ಒದ್ದಾಡುವ ಸಂಭವ ಜಾಸ್ತಿ ಎನ್ನುತ್ತಾನೆ. ಇದು ಸತ್ಯವೇ ? ಅಥವಾ ಮುಸ್ಲಿಂ ಆಚರಣೆಯ ವಿರುದ್ದ ಮಾಡಿರುವ ಸಂಶೋಧನೆಯೆ ದಯಮಾಡಿ ತಿಳಿಸಿ. ಕೊಂಡಿಯನ್ನು ಕೆಳಗೆ ಕೊಟ್ಟಿರುವೆ. ದುಬಾಯಿ ದೇಶದಲ್ಲಿ ಎಲ್ಲಾ ಪದಾರ್ಥಗಳ ಬೆಲೆ ಜಾಸ್ತಿಯಾಗುತಂತೆ ? ನಮ್ಮ ಹಿಂದೂ ಹಬ್ಬಗಳಲ್ಲಿ ಇದು ಒಪ್ಪಬಹುದು - ಕಾರಣ ಹಬ್ಬ ಅಂದರೆ ಒಬ್ಬಟ್ಟು + ಕಡುಬು + ...... ಅದರಿಂದ ಬೆಲೆ ಜಾಸ್ತಿಯಾಗುತ್ತೆ ಅನ್ನಬಹುದು. ಆದರೆ ಇಲ್ಲಿ ಫಲ ವ್ಯತಿರಿಕ್ತವಾಗಿದೆಯಲ್ಲಾ ? http://weekly.ahram.... http://www.droitshum... ಈ ಪ್ರಶ್ನೆಯನ್ನು ಕೇಳಿ ನಿಮ್ಮ ಮನಸ್ಸಿಗೆ ನೋವು ಉಂಟು ಮಾಡಿದ್ದರೆ ಕ್ಷಮೆ ಕೋರುತ್ತೇನೆ. -ಮುರಳೀ

ತಾವು ಹೇಳಿದ್ದು ನೂರಕ್ಕೆ ನೂರು ಸರಿ. ಧರ್ಮ ಹೇಳೋದು ಒಂದು, ಆಚರಿಸುವ ಜನ ಮಾಡೋದು ಮತ್ತೊಂದು. ಪ್ರತಿಯೊಂದರಲ್ಲೂ moderation ಬಯಸುವ ಇಸ್ಲಾಂ ಜನರ ಈ ನಡವಳಿಕೆಯನ್ನು ವಿರೋಧಿಸುತ್ತದೆ. ಪ್ರವಾದಿಗಳು ಕೇವಲ ಒಂದು ತುಂಡು ಖರ್ಜೂರ ಮತ್ತು ಸ್ವಲ್ಪ ನೀರಿನ ಸಹಾಯದಿಂದ ಉಪವಾಸ ವ್ರತ ಅಂತ್ಯಗೊಳಿಸಿದ್ದಕ್ಕೂ ಈಗಿನ ಜನರ ನಡತೆಗೂ ಅಜಗಜಾಂತರ ವ್ಯತ್ಯಾಸ.