ಅಪ್ಪ- ಒಂದು ಹೊಸ "ಹೆಜ್ಜೆ"; ಹೊಸ ಅನುಭವ.

To prevent automated spam submissions leave this field empty.


 ಹೆಜ್ಜೆ ತಂಡದ ಸದಸ್ಯನಾದಾಗ ನಾನು ಗಂಗೋತ್ರಿಯಲ್ಲಿದ್ದೆ. ಪೋನ್ ಕರೆಯಲ್ಲಿಯೇ ಜೆ ಪಿ ನನ್ನ ಸದಸ್ಯತ್ವವನ್ನು ಅಪ್ರೂವ್ ಮಾಡಿದರು.


 ನಾಟಕದಲ್ಲಿ ನನ್ನ ಅನುಭವ ಅಷ್ಟಕ್ಕಷ್ಟೇ! ಕಾಲೇಜಿನಲ್ಲಿ ರೂಪಕ, ಮ್ಯಾಡ್ ಆಡ್ ಗಳನ್ನು ಮಾಡಿದ್ದಷ್ಟೇ. ರಂಗಭೂಮಿಯದೇ ಅಂತ ಅನುಭವ ಇಲ್ಲ.


ಎಲ್ಲ ಹೊಸಬರನ್ನು ಹಾಕಿಕೊಂಡು ತಂಡವನ್ನು ಕಟ್ಟಿದ ಜೆಪಿಯವರನ್ನು ಈ ವೇಳೆಯಲ್ಲಿ ಅಭಿನಂದಿಸಲೇಬೇಕು.


ನಾಟಕ v/s ಬರಹ:

 

   ಬರಹ ಸ್ವಂತದ್ದು. ಎದೆಯಾಳದಿಂದ ಬರುವಂಥದ್ದು. ನನ್ನ ಅನಿಸಿಕೆಗಳು ಭಾವನೆಗಳಿಗೆ ಅಲ್ಲಿ ಬೆಲೆಯಿದೆ. ನನಗಿಷ್ಟ ಬಂದಂತೆ ಅದನ್ನು ಪ್ರಚುರಪಡಿಸಬಹುದು. ಅಲ್ಲಿ ನನ್ನತನಕ್ಕೊಂದು ತೂಕ ಇದೆ. ಬರಹ ಸಹಜ ಅಭಿವ್ಯಕ್ತಿ.

   ನಾಟಕ ಹಾಗಲ್ಲ, ಅದು ನಿರ್ದೇಶಕನ ಕೂಸು. ನಿರ್ದೇಶಕನ ಭಾವನೆಗಳು ಅನೇಕ ಬಾರಿ ನೋಡುಗರ ಭಾವನೆಗೆ ತಕ್ಕುನಾಗಿರುತ್ತದೆ. ಅಲ್ಲಿ ’ನಾನು’ ಎಂಬುದಕ್ಕೆ ಬೆಲೆಯಿಲ್ಲ. ನನಗೆ ನೀಡಿದ ಪಾತ್ರ ಮಾತ್ರ ನಾನು. ಆ ಪಾತ್ರದ ಭವನೆಗಳೇ ನನ್ನ ಭಾವನೆಗಳು. ಯಾರದೋ ಭಾವನೆಗೆ ತಕ್ಕಂತೆ ಮೊಗವನ್ನು, ನಡಿಗೆಯನ್ನು ಬದಲಿಸಿಕೊಳ್ಳಬೇಕು. ಎಲ್ಲವೂ ಕೃತಕ! ಇನ್ನೊಬ್ಬರ ತಾಳಕ್ಕೆ ನಾವು ಲಯವಾಗಬೇಕು.

 ಹಾಗಾಗಿ ನಾಟಕದ ಬಗ್ಗೆ ಮೊದಲು ನನಗಿದ್ದ ಒಲುಮೆ ಅಷ್ಟಕ್ಕಷ್ಟೇ! ನನ್ನ ’ಅಹಂ’ ಗೆ ಒಂದು ಬೆಲೆಯಿಲ್ಲದ ನೆಲೆ ನನಗಿಷ್ಟವಾಗುವುದಾದರೂ ಹೇಗೆ?


 ಜೆಪಿಯವರ ಸಂಗಡ ಈ ಬಗ್ಗೆ ಕಲಿತದ್ದು ಬಹಳ. ತನ್ನದಲ್ಲದ ಭಾವನೆಗಳನ್ನು, ವ್ಯಕ್ತಿತ್ವವನ್ನು ಒಳಗೆ ಆವಾಹಿಸಿಕೊಂಡು ಅದನ್ನು ನೂರಾರು ಜನರ ಮುಂದೆ ಅದು ತನ್ನ ಸ್ವಂತದ್ದೇ ಎಂಬಂತೆ ಬಿಂಬಿಸುವುದಿದೆಯಲ್ಲ, ಅದು ಸುಲಭವಲ್ಲ. ಅದೂ ಕಲೆ. ಅದು ಅಹಂಕಾರಿಗಳಿಗಲ್ಲ! ತನ್ನತನವನ್ನು ಮರೆತವರಿಗೆ ಮಾತ್ರ. ಆ ಪಾತ್ರದಿಂದ ತನಗಾಗಿ ಕೆಲವನ್ನು ಕಲಿಯುವವರಿಗಾಗಿ ಮಾತ್ರ. ಈ ಮನಸ್ಥಿತಿ ಇಲ್ಲದ ಕಾರಣದಿಂದಾಗಿಯೇ ಈ ಹೊತ್ತಿನಲ್ಲಿ ಉತ್ತಮ ನಟನಟಿಯರು ಕಾಣುವುದಿಲ್ಲ!

 

 ನನ್ನದೊಂದಿಷ್ಟು ಕೊಸರು:

 

 ನನಗೆ ಎಲ್ಲ ಕಡೆಯೂ ಪ್ರಶ್ನೆಗಳು ಹುಟ್ಟುತ್ತವೆ. ಪ್ರಶ್ನೆ ಕಾಡತೊಡಗಿದರೆ ಉತ್ತರ ದೊರೆಯುವವರೆಗೂ ಸಮಾಧಾನವಿಲ್ಲ. ನಾಟಕದ ವಿಷಯವೂ ಅಷ್ಟೇ! ಇಲ್ಲಿ ನನ್ನ ಅನುಭವಗಳೇ ನನಗೆ ಉತ್ತರ ದೊರಕಿಸಿಕೊಟ್ಟವು. ರಂಗದ ಬಗ್ಗೆ ಆಳವಾಗಿ ಇನ್ನೂ ತಿಳಿದಿಲ್ಲವಾದರೂ ಅದರ ಬಗ್ಗೆ ಚಿಕ್ಕ ಪಕ್ಷಿನೋಟವಂತೂ ಸಿಕ್ಕಿತು. ಇದಕ್ಕಾಗಿ ನಿರ್ದೇಶಕ ಅಶೋಕ್ ಬಾದರದಿನ್ನಿಯವರಿಗೆ ವಂದನೆಗಳು. "ನಿಮಗ ಏನು ಪ್ರಶ್ನಾ ಅದವೋ ಕೇಳ್ರಿ... ನನ್ನ ಹರಕೊಂಡು ತಿನ್ರಿ.." ಅಂತ ಪದೇ ಪದೇ ಹೇಳುತ್ತಿದ್ದರು. ತಮ್ಮ ಕಂಚಿನ ಕಂಠದಲ್ಲಿ ರಂಗಭೂಮಿಯ ಬಗ್ಗೆ ಅನುಭವಗಳನ್ನು ಹೇಳುತ್ತಿದ್ದರೆ ನಾವು ತುಟಿಪಿಟಿಕ್ಕೆನ್ನದೇ ಕೇಳುತ್ತಿದ್ದೆವು. ನನ್ನ ಎಲ್ಲ ಕುತೂಹಲಗಳನ್ನು ಅವರ ಮಾತುಗಳೇ ತಣಿಸುತ್ತಿದ್ದವು.

  ಜೆಪಿ ಬಗ್ಗೆ:


 ನಟ ಅಥವಾ ನಟಿ ಅಭಿನಯ ಕಲೆ ತಿಳಿದಿರುವವರು ಒಂದು ಪಾತ್ರವನ್ನು ಆವಾಹಿಸುವಾಗ ಭಾವನೆಗಳನ್ನು ಬಿಂಬಿಸಬೇಕು.ಇದು ಎಲ್ಲರಿಗೂ ತಿಳಿದಿರುವವದೇ. ನಾಟಕದ ನಡುವೆ ಕೆಲ scene ಗಳಲ್ಲಿ ಯಾವ ಭಾವನೆಯನ್ನೂ ಮುಖದ ಮೇಲೆ ತೋರ್ಪಡಿಸದೇ ಅಭಿನಯಿಸಬೇಕಾಗುತ್ತದೆ. ಇದು ಭಾವವನ್ನು ತೋರಿಸಿ ಅಭಿನಯಿಸುವುದಕ್ಕಿಂತ ಕಷ್ಟ! ತಮಿಳು ನಟ ವಿಕ್ರಂ ’ಪಿತಾಮಗನ್’ ಚಿತ್ರದಲ್ಲಿ ಇದನ್ನು ಸಾಧಿಸಿದ್ದಾರೆ. ನನಗನ್ನಿಸುವಂತೆ ವಿಕ್ರಂ ಬಿಟ್ಟರೆ ಇದನ್ನು ಸಾಧಿಸಿದ್ದು ಜೆ.ಪಿ ಮಾತ್ರ!


  "ರಾಜಕುಮಾರನ ಕಣ್ಣು ಕಿತ್ತುಕೊಂಡೆ.. ಗಲ್ಲ ಕಿತ್ತುಕೊಂಡೆ" ಸಂಭಾಷಣೆಯ ನಡುವಿನ ತೀವ್ರ ಭಾವಾವೇಶದ ಅಭಿನಯದ ಕೆಲವೇ ಕ್ಷಣಗಳಲ್ಲಿ ಬರುವ

"ಹೂವಿನ ಅಪ್ಪ ಯಾರು? ಬೀಜದ ಅಪ್ಪ ಯಾರು? .." ಸಂಭಾಷಣೆಯಲ್ಲಿ ನಿರ್ಲಿಪ್ತ ಮೊಗದಲ್ಲಿ (neutral face)ಅಭಿನಯಿಸಿದ್ದು ಜೆಪಿಯ ಅಭಿನಯ ಚಾತುರ್ಯಕ್ಕೆ ಉದಾಹರಣೆ. ನನ್ನ ಅಭಿಪ್ರಾಯದಲ್ಲಿ ಈ ಅಭಿನಯ ಇತಿಹಾಸದಲ್ಲಿ ದಾಖಲಾಗಬೇಕಾದ ಮಾಸ್ಟರ್ ಪೀಸ್!


 ಇದಕ್ಕಾಗಿ ಹ್ಯಾಟ್ಸಾಫ್ ಟು ಶ್ರೀಮತಿ ಜಯಲಕ್ಷ್ಮಿ ಪಾಟೀಲ್!!!


ನನ್ನ ಮತ್ತು ಅನಿಲ್ ರ ಎಲ್ಲಾ ತರಲೆಗಳನ್ನು ಸಹಿಸಿ ಮನ್ನಿಸಿದ್ದಕ್ಕೆ ಡಬಲ್ ಹ್ಯಾಟ್ಸಾಫ್!!!! ದೊಡ್ಡಬಸವ ನೀನಾಸಂ ನ ಹರೀಶ, ಚಿಕ್ಕ ಬಸವ ತೇಜಸ್, ಕುಲಕರ್ಣಿ ಮಾಸ್ತರು ಕಿರಣ್ ವಟಿ, ಚಂದ್ರಾರ ಅಪ್ಪ ದರ್ಶನ್, ಗೌಡರು ಅನಿಲ್ ರಮೇಶ ಇವರೆಲ್ಲರ ನೆನಪು ಸದಾ ಹಸಿರು. ಹಾಗೆಯೇ ನನ್ನ ಜೊತೆ ಸೇರಿ ಕೆಟ್ಟು ಹೋಗದಿದ್ದಕ್ಕೆ ಅಭಿನಂದನೆಗಳು!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮೆಲ್ಲರ ಹೆಸರು ಕೇಳಿ ನಾಟಕಕ್ಕೆ ಬರಲೇ ಬೇಕು ಅಂತಿದ್ದೆ, ಕಾರಣಾಂತರದಿಂದ ಬರಲಾಗಲಿಲ್ಲ, ಕ್ಷಮಿಸಿ ಇನ್ನೊಮ್ಮೆ ಖಂಡಿತಾ ಬರಲು ಪ್ರಯತ್ನಿಸುತ್ತೇನೆ

'ಹೆಜ್ಜೆ'ಯ ತಂಡದ ಜೊತೆಗೆ ತಮಗೂ ಹೊಸ ಅನುಭವಕ್ಕೆ ಅಭಿನಂದನೆಗಳು. ಪಾತ್ರ ಪರಿಚಯ ಮಾಡಿಸಿದಿರಿ..ನಾಟಕದ ಕೆಲವಾದರೂ ಸ್ಥಿರ ಚಿತ್ರಗಳನ್ನ ಹಾಕಿದ್ದರೆ ಚೆನ್ನಿತ್ತು..

ನಾಟಕದಲ್ಲಿ ಅಭಿನಯಿಸಿದ ನಿಮ್ಮ ಸನ್ನಿವೇಶದ ಹಾಗೂ ನಾಟಕದ ಕೆಲವು ಉತ್ತಮ ಸನ್ನಿವೇಶಗಳ ಚಿತ್ರಗಳನ್ನು ನಮಗೆ ನೀಡುವವರೆಗೂ ನನ್ನ ಆತ್ಮೀಯರಾದ ನಿಮ್ಮನ್ನು ಈ ವಿಚಾರದಲ್ಲಿ ನಾನು ಕ್ಷಮಿಸುವ ಮಾತೇ ಇಲ್ಲ. ಎ೦ಥಾ ಮೋಸ ಇದು? ನಿಮ್ಮ ನಟನಾ ಕಲ್ವೆಯ ಬಗ್ಗೆಯೇ ಅರಿವಿರಲಿಲ್ಲ. ಅ೦ದ ಮೇಲೆ ನಟಿಸಿದಿರಿ ಅ೦ತಾನೂ ಆಯ್ತು. ಅ೦ದ ಮೇಲೆ ಅದರ ಚಿತ್ರಗಳನ್ನು ಹಾಕದಿರಲು ನಾವೇನು ಮೋಸ ಮಾಡಿದ್ದೇವೆ ನಿಮಗೆ?

ಸ್ಟೇಜ್ ಮೇಲೆ ನಿಂತುಕೊಂಡು ಹೇಗೆ ಫೋಟೊ ತೆಗೆಯಲಿ? ಅಂಥಾ ದೊಡ್ಡ ನಟನೆ ಏನೂ ಮಾಡಿಲ್ಲ. ಏನೋ ಅಲ್ಪ ಸಲ್ಪ... ಮುಂದಿನ ಸಾರಿ ನೇರವಾಗಿಯೇ ಬಂದು ನೋಡಿ.. ;)

'ಅಪ್ಪ' ನಾಟಕ ಒಂದು ಸುಂದರ ಅನುಭವ. ನಾಟಕದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟ ಶ್ರೀಮತಿ ಜಯಲಕ್ಷ್ಮೀ ಪಾಟೀಲ್ ಅವರಿಗೆ, ನಿರ್ದೇಶನ ಮಾಡಿದ ಅಶೋಕ್ ಬಾದರದಿನ್ನಿ ಸರ್ ಅವರಿಗೆ ಮತ್ತು ಇಡೀ 'ಹೆಜ್ಜೆ' ತಂಡದ ಸದಸ್ಯರಾದ ಕಿರಣ್ ವಟಿ, ಶ್ರೀಹರ್ಷ ಸಾಲಿಮಠ, ಹರೀಶ್, ದರ್ಶನ್, ಮಾ| ತೇಜಸ್ ಅವರುಗಳಿಗೆ ತುಂಬಾ ಧನ್ಯವಾದಗಳು. 'ಹೆಜ್ಜೆ' ತಂಡದ ಚೊಚ್ಚಲ ಪ್ರಯತ್ನ 'ಅಪ್ಪ' ನಾಟಕವನ್ನು ವೀಕ್ಷಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು. 'ಹೆಜ್ಜೆ' ತಂಡಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು. ಅಪ್ಪ ನಾಟಕದ ಕೆಲವು ದೃಶ್ಯಗಳನ್ನು ಗೆಳೆಯರು ಸೆರೆಹಿಡಿದಿದ್ದಾರೆ. ಓಂ ಶಿವಪ್ರಕಾಶ್ ಸೆರೆಹಿಡಿದಿರುವ ಚಿತ್ರಗಳು ಅರವಿಂದ ಸೆರೆಹಿಡಿದಿರುವ ಚಿತ್ರಗಳು ಪವಿತ್ರ ಸೆರೆಹಿಡಿದಿರುವ ಚಿತ್ರಗಳು -ಅನಿಲ್.

ಜಯಲಕ್ಷ್ಮಿ ಪಾಟೀಲರಿ೦ದ ಉತ್ತಮ ಪ್ರಯತ್ನ. ಇದರ ಬಗ್ಗೆ ಅವರೇ ಬರೆದಿದ್ದನ್ನು ಸ೦ಪದದಲ್ಲಿ, ಫೇಸ್ ಬುಕ್ಕಿನಲ್ಲಿ ನೋಡಿದೆ. ಮತ್ತೊಮ್ಮೆ ಬೆ೦ಗಳೂರಿಗೆ ಬ೦ದಾಗ ನಾನೂ ಖ೦ಡಿತ ನೋಡುತ್ತೇನೆ. ವಿವರಣೆ ಚೆನ್ನಾಗಿದೆ ಶ್ರೀಹರ್ಷರೆ. ಅದರಲ್ಲೂ ಈ ಮಾತು <<ನಾಟಕದ ಬಗ್ಗೆ ಮೊದಲು ನನಗಿದ್ದ ಒಲುಮೆ ಅಷ್ಟಕ್ಕಷ್ಟೇ! ನನ್ನ ’ಅಹಂ’ ಗೆ ಒಂದು ಬೆಲೆಯಿಲ್ಲದ ನೆಲೆ ನನಗಿಷ್ಟವಾಗುವುದಾದರೂ ಹೇಗೆ?>>ತು೦ಬಾ ಹಿಡಿಸಿತು.

ನಾಟಕವೆಂಬ ಲೋಕಕ್ಕೆ ನಿಮ್ಮನ್ನು ತೆರೆದುಕೊಂಡ ಸಂಭ್ರಮದಲ್ಲಿ ನನ್ನನ್ನು ಸ್ವಲ್ಪ ಹೆಚ್ಚಿಗೇ ಹೊಗಳಿಬಿಟ್ಟೀದೀರಿ ಹರ್ಷ!!! ಆದರೆ ನಿಮಗೆ ಈ ಅಭಿನಯ ಲೋಕ ಖುಷಿ ಕೊಟ್ಟಿದ್ದು ನನಗೂ ಖುಷಿಕೊಡ್ತಿದೆ.:-) cheers!! ನಿಮ್ಮೆಲ್ಲರ ಸಹಕಾರ ಇಲ್ಲದಿದ್ದರೆ ‘ಅಪ್ಪ’ನ ಗತಿ ಅಧೋಗತಿ! ನಿಮ್ಮಗಳ ಸಹಕಾರ ಮತ್ತು ಆತ್ಮೀಯತೆಗೆ ನನ್ನದೊಂದು ಸಲಾಮ್! ‘ಹೆಜ್ಜೆ’ಯ ಜೊತೆಗೂಡಿ ಹೆಜ್ಜೆ ಹಾಕಬಯಸುವ ಸಂಪದಿಗರಿಗೆ ‘ಹೆಜ್ಜೆ’ಯು ತನ್ನ ದಾರಿಯಲ್ಲಿ ಸುಸ್ವಾಗತ ಫಲಕ ನೆಟ್ಟು ಸ್ವಾಗತಿಸುತ್ತಿದೆ. :-) ನಮ್ಮ ‘ಹೆಜ್ಜೆ’ ತಂಡ ಮುಂಬೈ ವಿಭಾಗದಿಂದ ಇಷ್ಟರಲ್ಲೇ ಮತ್ತೊಂದು ನಾಟಕ ಸಿದ್ಧವಾಗುತ್ತಿದೆ. ಸ್ವಲ್ಪ ದಿನಗಳಲ್ಲಿ ಅದರ ವಿವರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವೆ. :-)

ನಾಟಕವೆಂಬ ಲೋಕಕ್ಕೆ ನಿಮ್ಮನ್ನು ತೆರೆದುಕೊಂಡ ಸಂಭ್ರಮದಲ್ಲಿ ನನ್ನನ್ನು ಸ್ವಲ್ಪ ಹೆಚ್ಚಿಗೇ ಹೊಗಳಿಬಿಟ್ಟೀದೀರಿ ಹರ್ಷ!!! ಆದರೆ ನಿಮಗೆ ಈ ಅಭಿನಯ ಲೋಕ ಖುಷಿ ಕೊಟ್ಟಿದ್ದು ನನಗೂ ಖುಷಿಕೊಡ್ತಿದೆ.:-) cheers!! ನಿಮ್ಮೆಲ್ಲರ ಸಹಕಾರ ಇಲ್ಲದಿದ್ದರೆ ‘ಅಪ್ಪ’ನ ಗತಿ ಅಧೋಗತಿ! ನಿಮ್ಮಗಳ ಸಹಕಾರ ಮತ್ತು ಆತ್ಮೀಯತೆಗೆ ನನ್ನದೊಂದು ಸಲಾಮ್! ‘ಹೆಜ್ಜೆ’ಯ ಜೊತೆಗೂಡಿ ಹೆಜ್ಜೆ ಹಾಕಬಯಸುವ ಸಂಪದಿಗರಿಗೆ ‘ಹೆಜ್ಜೆ’ಯು ತನ್ನ ದಾರಿಯಲ್ಲಿ ಸುಸ್ವಾಗತ ಫಲಕ ನೆಟ್ಟು ಸ್ವಾಗತಿಸುತ್ತಿದೆ. :-) ನಮ್ಮ ‘ಹೆಜ್ಜೆ’ ತಂಡ ಮುಂಬೈ ವಿಭಾಗದಿಂದ ಇಷ್ಟರಲ್ಲೇ ಮತ್ತೊಂದು ನಾಟಕ ಸಿದ್ಧವಾಗುತ್ತಿದೆ. ಸ್ವಲ್ಪ ದಿನಗಳಲ್ಲಿ ಅದರ ವಿವರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವೆ. :-)

ಸಾಲಿಮಠ ಅವರಿಗೆ ನನ್ನ ಲೇಖನ ಅಪೂರ್ಣ ಎಂದಿರುವಿರಿ. ಅದು ಹೇಗೆ ಗೊತ್ತಿಲ್ಲ ಆರೋಪಿ ಅಂತ ಹೇಳಿರುವಿರಿ ಬ್ಯಾಸರಿಲ್ಲ. ನಾಟಕ ಛಲೋ ಇತ್ತು "ಜೆಪಿ" ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.

ನೀವು ಇನ್ನೊಂದಿಷ್ಟು ಬರೀಬೆಕಿತ್ತೆನೋ ಅನ್ನಿಸಿತು ಅದಕ್ಕೆ ಹಾಗಂದೆ! ನಮ್ಮ ನಾಟಕದ ಬಗ್ಗೆ ವೀಕ್ಷಕರ ಪ್ರತಿಕ್ರಿಯೆ ಹೇಗಿದೆ ತಿಳಿದುಕೊಳ್ಳೊ ಕುತೂಹಲ ಇರುತ್ತೆ ನೋಡಿ! ಅದಕ್ಕೆ. ಬ್ಯಾಸರ ಮಾಡಿಕೊಳ್ಳದ್ದಕ್ಕೆ ಶರಣು! :)

ಶ್ರೀಹರ್ಷ, "ಅಪ್ಪ"ದಲ್ಲಿ ಚಂಪಾ ಸೋತಂತೆ ಅನಿಸಿದ್ದರೂ, ಜಪಾ, ತೇಜಸ್ ಮತ್ತು ಹರೀಶ, ಅವರನ್ನು ಗೆಲ್ಲಿಸಿದ್ದರು ಅಂತ ನನಗೆ ಅನಿಸಿದ್ದು ಸುಳ್ಳಲ್ಲ. ಈ ಮೂವರ ಅಭಿನಯ ಮತ್ತು ಸಂಭಾಷಣೆ ನನ್ನನ್ನು ಹಿಡಿದಿಟ್ಟು ಕೂರಿಸುವಲ್ಲಿ ವಿಫಲವಾಗಿದಿದ್ದರೆ, ನಾನು ಅರ್ಧದಲ್ಲೇ ಎದ್ದು ಬರುತ್ತಿದ್ದೆ. ಏಕೆಂದರೆ ನನಗೆ ಕಥೆ ನಿಜವಾಗಿಯೂ ಹಿಡಿಸಿರಲೇ ಇಲ್ಲ. << "ರಾಜಕುಮಾರನ ಕಣ್ಣು ಕಿತ್ತುಕೊಂಡೆ.. ಗಲ್ಲ ಕಿತ್ತುಕೊಂಡೆ" ಸಂಭಾಷಣೆಯ ನಡುವಿನ ತೀವ್ರ ಭಾವಾವೇಶದ ಅಭಿನಯದ ಕೆಲವೇ ಕ್ಷಣಗಳಲ್ಲಿ ಬರುವ "ಹೂವಿನ ಅಪ್ಪ ಯಾರು? ಬೀಜದ ಅಪ್ಪ ಯಾರು? .." ಸಂಭಾಷಣೆಯಲ್ಲಿ ನಿರ್ಲಿಪ್ತ ಮೊಗದಲ್ಲಿ (neutral face)ಅಭಿನಯಿಸಿದ್ದು ಜೆಪಿಯ ಅಭಿನಯ ಚಾತುರ್ಯಕ್ಕೆ ಉದಾಹರಣೆ. ನನ್ನ ಅಭಿಪ್ರಾಯದಲ್ಲಿ ಈ ಅಭಿನಯ ಇತಿಹಾಸದಲ್ಲಿ ದಾಖಲಾಗಬೇಕಾದ ಮಾಸ್ಟರ್ ಪೀಸ್! >> ಶ್ರೀಮತಿ ಜಯಲಕ್ಷ್ಮೀ ಪಾಟೀಲರ ಅಭಿನಯ ನನಗೆ ಇಷ್ಟವಾಗಿತ್ತು ಎನ್ನುದರಲ್ಲಿ ಎರಡು ಮಾತಿಲ್ಲ. ಆದರೂ, ನಾಟಕಕ್ಕೆ ನಡೆಯುವ ಪೂರ್ವಸಿದ್ಧತೆಯಲ್ಲಿ ಓರ್ವ ಕಲಾವಿದ ಯಾವರೀತಿ ತಯಾರಿ ನಡೆಸಿದ್ದಾನೆ ಅನ್ನುವುದಕ್ಕೂ, ವೇದಿಕೆಯ ಮೇಲೆ ಅದೇ ಕಲಾವಿದ ಯಾವ ರೀತಿ ಭಾವಾಭಿನಯ ಮಾಡಿದ್ದಾನೆ ಎನ್ನುವುದಕ್ಕೂ ವ್ಯತ್ಯಾಸ ಇರುತ್ತದೆ. ತಯಾರಿಯ ಸಮಯದಲ್ಲಿ ಸಹಕಲಾವಿದನ ಕಣ್ಣಿಗೆ ಕಂಡ ಅಭಿನಯ, ವೇದಿಕೆಯ ಮುಂದೆ ಕೂತು ವೀಕ್ಷಿಸುವ ವೀಕ್ಷಕನ ಕಣ್ಣಿಗೆ ಕಾಣುವ ಅಭಿನಯಕ್ಕೂ ವ್ಯತ್ಯಾಸ ಇರಬಹುದು. ಓರ್ವ ವೀಕ್ಷಕನ ವಿಮರ್ಶೆಗೂ, ಸಹಕಲಾವಿದನ ವಿಮರ್ಶೆಗೂ ವ್ಯತ್ಯಾಸ ಇರುತ್ತದೆ. ಇಲ್ಲಿ ಈ ಸಹಕಲಾವಿದ ವೇದಿಕೆಗೆ ಬೆನ್ನುಮಾಡಿ, ವೀಕ್ಷಕರತ್ತ ಕಣ್ಣುನೆಟ್ಟು ನಿಂತಿರುವಾಗ, ವೇದಿಕೆಯ ಮೇಲೆ ಅನ್ಯ ಕಲಾವಿದರ ಅಭಿನಯ ಹೇಗಿತ್ತು ಎನ್ನುವುದರ ಅನುಭವ ಆತನಿಗೆ ಆಗಿತ್ತೇ ಎನ್ನುವುದೂ ಪ್ರಶ್ನಾರ್ಹ. ಯಾವುದೇ ಓರ್ವ ಪರಿಣತ ಕಲಾವಿದನಿಗೆ, ಈಗಷ್ಟೇ ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿರುವ ಓರ್ವ ಸಹಕಲಾವಿದನ ಬೆನ್ನುತಟ್ಟುವಿಕೆಯ ಮಾತುಗಳಿಗಿಂತ, ವೇದಿಕೆಯ ಮುಂದೆ ಕೂತು ನಾಟಕ ವೀಕ್ಷಿಸಿದ ವೀಕ್ಷಕರ ಹೊಗಳಿಕೆಗಳು, ಚಪ್ಪಾಳೆಗಳು, ವಿಮರ್ಶೆಗಳು, ಟೀಕೆಗಳು, ಇವೆಲ್ಲಾ ಜಾಸ್ತಿ ಬೆಲೆಯುಳ್ಳವು ಎಂದು ನನ್ನ ಅನಿಸಿಕೆ. ಈ ಮಾತಿನ ಅರಿವು ಮುಂದೊಂದು ದಿನ ನೀವು ರಂಗಭೂಮಿಯಲ್ಲಿ ಪಳಗಿದಾಗ ನಿಮಗೂ ಅರಿವಾದೀತು. ಆಗ ನಿಮಗೆ, ಇಂದು ನೀವು ಇಲ್ಲಿ ಬರೆದುದೆಲ್ಲಾ ಬಾಲಿಶವಾಗಿ ಕಂಡರೂ ವಿಶೇಷವಲ್ಲ. - ಆಸು ಹೆಗ್ಡೆ

ಇರಬಹುದು ಸರ್...!!! ನಾನು ಇಲ್ಲಿ ನನ್ನ ಅನುಭವ ಬರೆದೆ. ಅನಿಸಿಕೆ ಬರೆದೆ. ಅಷ್ಟೇ! ಈ ಲೇಖನದ ಮುಖ್ಯ ಕೇಂದ್ರ ನನ್ನ ಅನುಭವವೇ ಹೊರತು ಜೆಪಿಯಲ್ಲ. ರಂಗಭೂಮಿಯ ಮೊದಲ ಅನುಭವವನ್ನು ಇಲ್ಲಿ ಹಂಚಿಕೊಳ್ಳುವುದು ನನ್ನ ಉದ್ದೇಶವಾಗಿತ್ತು. ನನ್ನ ಅನುಭವಕ್ಕೆ ಸಿಕ್ಕಿದ್ದೆಷ್ಟೋ ಅಷ್ಟು ಬರೆದೆ. ಮುಂದೊಂದು ದಿನ ಇದು ಬಾಲಿಶವಾಗಿ ಕಂಡರೆ ಅದನ್ನೂ ಬರೆಯುವೆ ;) ನಿಮಗಿಷ್ಟವಾದರೆ ಅಥವಾ ಇಲ್ಲದಿದ್ದರೆ ಅದನ್ನು ಹಂಚಿಕೊಳ್ಳುವ ಟೀಕಿಸುವ ಹಕ್ಕು ನಿಮಗಿದ್ದೇ ಇದೆ. ಅದಕ್ಕೆ ಹೆಚ್ಚು ತೂಕವೂ ಇದೆ.