ಉಲ್ಟಾ ಬಾವುಟ ಹಾರಿಸಿ - ದಂಡ ತೆತ್ತರು.

To prevent automated spam submissions leave this field empty.

ನೋಡ್ಲಾ ಕೋಮಲ್, ಪ್ರತೀ ವರ್ಷ ಶಾಲೆ ಮುಂದೆ ಬಾವುಟ ಹಾರುಸ್ತೀವಿ. ಆದರೆ ಈ ಬಾರಿ ನಮ್ಮ ಮನೆ ಮಂದೆನೇ ಧ್ವಜಾರೋಹಣ, ಹೆಂಗೆ ಬಾವುಟ ಹಾರಬೇಕು ಅಂದರೆ ಇಡೀ ಹಳ್ಳಿಗೆ ಕಾಣಬೇಕು ಅಂಗೆ ಇರಬೇಕು ಸ್ವಾಸಂತ್ರ ದಿನಾಚರಣೆ ಅಂದಾ ನಮ್ಮೂರು ಗೌಡಪ್ಪ. ನಿಮಗೆಲ್ಲರಿಗೂ ಟೋಪಿ, ಚಡ್ಡಿ ಹಂಗೇ ಅಂಗಿನೂ ನಾನೇ ಕೊಡಿಸ್ತೀನಿ. ಆಮೇಲೆ ಮಕ್ಕಳಿಗೆ ಎಲ್ಲಾ ಸಿಹಿ ಹಂಚಬೇಕು. ಒಟ್ಟಾರೆ ಸ್ವಾಸಂತ್ರ ದಿನಾಚರಣೆ ಅದ್ದೂರಿಯಾಗಿರಬೇಕು ಆಟೆಯಾ ಅಂದ ಗೌಡಪ್ಪ. ನೋಡ್ಲಾ ಕಾರ್ಯಕ್ರಮಕ್ಕೆ ತಹಸೀಲ್ದಾರ್, ಗ್ರಾ.ಪಂ ಅಧ್ಯಕ್ಸರು, ಮುಖಂಡರು ಎಲ್ಲಾರೂ ಬತ್ತಾರೆ. ಸಂದಾಗಿ ಸಿಂಗಾರ ಮಾಡ್ರಲಾ ಅಂದು ಗೌಡಪ್ಪ ನಡೆದ. ಎಂದಿನಂತೆ ಸುಗರ್ ಲೆಸ್ ಚಾ ಕೊಟ್ಲು ಗೌಡಪ್ಪನ ಹೆಂಡರು. ಯಾಕವ್ವಾ ಕಪ್ಪಾಗಿದಿಯಾ. ಆ ಯಾಕೆ ಏನಾಗ್ಬೇಕಿತ್ತು. ಕುಡಿದು ಲೋಟ ತೊಳೆದು ಹೋಗ್ರೀ ಅಂತು ಗೌಡಪ್ಪನ ಹೆಂಡರು.

ಮನೆ ಮುಂದೆ ಇದ್ದ ಒಂದು 18ಅಡಿ ನೀಲಗಿರಿ ಪೋಲ್ ಕಟ್ ಮಾಡಿಸಿ ಕಿಸ್ನಂಗೆ ಮನೆ ಮುಂದೆ ಹುಗಿಯಕ್ಕೆ ಹೇಳಿದ. ಸರಿ  ನಾನು, ಸುಬ್ಬ, ತಂಬೂರಿ ತಮ್ಮಯ್ಯ, ತಂತಿ ಪಕಡು ಸೀತು, ಸಿರ್ ಪಕಡು ರಾಜ,ಪಟಾಲಾಂ ಪಾಂಡು, ಬಯಲುನಾಟಕದ ಸುಬ್ಬಿ, ಟೇಲರ್ ರಂಗ, ಇಸ್ಮಾಯಿಲ್  ಎಲ್ಲಾ ಮಾವಿನ ಸೊಪ್ಪು, ಹೂವು, ಹಂಗೇ ಶಾಲೆ ಮಕ್ಕಳಿಗೆ ಹೇಳಬರಕ್ಕೆ ಅಂತಾ ಹೋದ್ವಿ. ಸೊಪ್ಪೆಲ್ಲಾ  ಕಿತ್ತ ಮೇಲೆ ತಂಬೂರಿ ತಮ್ಮಯ್ಯ ಕೆಂಪಗೆ ದಪ್ಪಗೆ ಆಗಿದ್ದ. ಯಾಕಲಾ. ಲೇ ಸಾನೇ ಕೆಂಪು ಇರುವೆ ಕಲಾ ಅಂದ. ಸೆಪ್ಟಿಕ್ ಆಗೈತೆ ಅಂದ. ಸರಿ ಅಲ್ಲೇ ಇದ್ದ ತುರ್ಚಿ ಸೊಪ್ಪಿನ ರಸ, ತೊಗಂಡು ಹೋಗಿದ್ದ ಅರಿಸಿನ ಬಳಕೊಂಡು ಕರಗ ಮೆರವಣಿಗೆ ಮಾಡಿದಂಗೆ ಮಾಡಕೊಂಡು ಬಂದ್ವಿ. ಸುಬ್ಬಿ ನಮ್ಮ ನಾಟಕದಾಗೂ ಹಿಂಗೆ ಪಾಲ್ಟು ಮಾತ್ತೀವಿ ಅಂಸ್ಲು. ಶಾಲೆಗೆ ಹೋದ್ರೆ ತಂತಿ ಪಕಡು ಸೀತು ನೋಡಿ ಶಿಕ್ಷಣಾಧಿಕಾರಿ ಬಂದಿದಾರೆ ಅಂತಾ ಹೆಡ್ ಮೇಸ್ಟ್ರು ನಮಸ್ಕಾರ ಸಾರ್  ಅಂದು ಸೀಟು ಬಿಟ್ಟುಕೊಟ್ಟ. ಸೀತು ಫಕ್ಕನೆ ನಕ್ಕ. ಎಲ್ಲಾ ಮಕ್ಕಳು ಬಂದಿದಾರೇನ್ರಿ. ಹೂಂ ಸಾರ್. ಸರಿ ನಡೀರಲಾ ಎಲ್ರಿಗೂ ಹೇಳ್ ಬರವಾ ಅಂತು ಸೀತು. ಹಂಗಾದ್ರೆ ನೀವು ಶಿಕ್ಷಣಾಧಿಕಾರಿ ಅಲ್ವಾ. ಯಾವ ನನ್ಮಗ ಅಂಗಂತ ಹೇಳ್ದೋನು. ನಾವು  ಮಕ್ಕಳಿಗೆ ಸ್ವಾಸಂತ್ರ ದಿನಾಚರಣೆಗೆ ಕರೆಯೋಕ್ಕೆ ಬಂದಿದೀವಿ ಅಂತಿದಾಗೆನೇ ಹೆಡ್ ಮೇಸ್ಟ್ರು ಮಗನೇ ಹೊರಗೆ ಸಿಗು ಅಂದ.   ಅಲ್ಲಿರೋ ಮೇಡಂ ಬಗ್ಗೆ ಸುಬ್ಬ ಕೇಳ್ತಾ ಇದ್ದ. ಯಾಕಲಾ ಮದುವೆ ಯಾದ್ರೆ ಸರ್ಕಾರಿ ಸಂಬಳ ಲೈಫ್ ಸೆಟ್ಲ್ ಕಲಾ. ಮಗನೇ ಅವಳ ಗಂಡ ಇಲ್ಲೇ ಪೊಲೀಸ್ ಅಂತಿದ್ದಾಗೆನೇ ಅಕ್ಕ ಆಮ್ಯಾಕೆ ಬತ್ತೀನಿ ಅಂದಾ ಮಗಾ. ಶಾಲೆ ಸದಸ್ಯರು ಮಕ್ಕಳು ಜೊತೆಗೆ ಊಟ ಕತ್ತಿರುಸುತ್ತಾ ಇದ್ವು. ನಿಮ್ಮ ಜನ್ಮಕ್ಕೆ ಬೆಂಕಿ ಹಾಕ. ದೇಸ ಉದ್ದಾರ ಆಗು ಅಂದ್ರೆ ಎಲ್ಲಿ ಆಯ್ತದೆ ಅಂದ ತಂಬೂರಿ ತಮ್ಮಯ್ಯ.

ಸರಿ ಸಂಜೆ ಮನೆತಾವ ಮಾವಿನ ಸೊಪ್ಪಿನ ತೋರಣ ಎಲ್ಲಾ ಕಟ್ಟಿದ್ವಿ. ಮಗಾ ನಿಂಗ ಲೈಟ್ ಕಂಬಕ್ಕೆ ಕಟ್ಟಕ್ಕೆ ಹೋಗಿ ಕರೆಂಟ್ ಹೊಡಿಸ್ಕೊಂಡು ಸುಟ್ಟ ಕಾಗೆ ಆದಂಗೆ ಆಗಿದ್ದ.  ಇಸ್ಮಾಯಿಲ್ ಒಟ್ಟಿಗೇ ನಾಕು ಬೀಡಿ ಸೇದ್ತಾ ಇದ್ದ. ಯಾಕಲಾ, ರಂಜಾನ್ ಕಲಾ ಆಮ್ಯಾಕೆ ಸೇದಂಗಿಲ್ಲ ಅಂದ. ಮಗಂದು ಸಣ್ಣ ಫ್ಯಾಕ್ಟರಿ ಆದಂಗೆ ಆಗಿತ್ತು. ಒಳಗಿರೋ ಗೌಡಪ್ಪನ ಹೆಂಡರು ಗುಕ್ಕು, ಗುಕ್ಕು ಅಂತಾ ಕೆಮ್ತಾ ಇದ್ವು. ಬೆಳಗ್ಗೆ ಬಿರ್ರನೆ ಬರ್ರಲಾ ಅಂದ ಗೌಡಪ್ಪ. ಸರಿ ಬೆಳಗ್ಗೆ ಎಲ್ಲಾರೂ ಬಿಳಿ ಟೋಪಿ, ದೊಗಲೆ ಚಡ್ಡಿ, ಸಲ್ಟು, ಬೂಟ್ಸ್ ಹಾಕ್ಕೊಂಡು ಗೌಡನ ಮನೆತಾವ ಹೋದ್ವಿ.  ಲೇ ಯಾಕ್ರಲಾ ಟೋಪಿ ಕುಲಾವಿ ಕಟ್ಟಿದಂಗೆ ಕಟ್ಟಿದೀರಿ. ನಿಮ್ಮ ತಲೆ ಮುಂದೆ ದೊಡ್ಡದಾದರೆ ಸರಿ ಆಗ್ತತೆ ಅಂತಾ ಟೇಲರ್ ರಂಗಾ ಹಿಂಗೆ ಲಾಡಿ ಕೊಟ್ಟು ಹೊಲಿದಿದಾನೆ ಅಂದ ತಮ್ಮಯ್ಯ. ಲೇ ನೀವೇನು ಮಕ್ಕಳು ಏನ್ರಲಾ. ಒಳ್ಳೆ ಪಾಂಡುರಂಗನ ಭಕ್ತರು ಕಂಡಂಗೆ ಕಾಂಣ್ತಿದ್ವಿ. ಅಲ್ಲೇ ಇದ್ದ ನಿಂಗವ್ವ ಕಿಸ್ನನ ಕಾಲಿಗೆ ಉದ್ದಂಡ ನಮಸ್ಕಾರ ಮಾಡಿದ್ಲು. ನೀವೇಲ್ಲಾ ನಿಂತೇ ಇರಿ. ಯಾರು ಕೂರಿಬೇಡಿ ಎಂದು ಗೌಡಪ್ಪ ಆಜ್ಞೆ ಹೊರಡಿಸಿದ. ಯಾಕ್ರೀ ಗೌಡ್ರೆ, ಚಡ್ಡಿ ಅಂಗೈತೆ ಅಂದ. ಕಿಸ್ನಂಗೆ ಬೂಟ್ಸ್ ಕಚ್ಚೋದು, ಮಗಾ ಗೌಡಪ್ಪ ಪೊಲೀಸ್ ಸ್ಟೇಷನ್ ನಿಂದ ಸೆಕೆಂಡ್ ಹ್ಯಾಂಡ್ ತಂದಿದ್ದ. 2ಕೆಜಿ ಒಂದೊಂದು ಬೂಟ್, ಬೂಟ್ಸಿಗೆ ಹರಳೆಣ್ಣೆ ಬಳಿದು, ಅವನ ಟೋಪಿನೇ ಬೂಟ್ಸ್ ಪ್ಯಾಕಿಂಗ್ ಗೆ ಕೊಟ್ವಿ. ಗಾಯಕ್ಕೆ  ಅರಿಸಿನ ಹಚ್ಚಿದ ಮೇಲೆ ಈಗ ಹಿತ ಆತು ಅಂದ ಕಿಸ್ನ. ಎಲ್ಲಿ ಕಟ್ಟೆ ಕಂಡರೂ ಹಂಗೇ ಕೂರೋನು.ಮಗಾ ಗೌಡ 10ಮೀ ಉದ್ದ, 3ಮೀ ಎತ್ತರದ ಖಾದಿ ಬಾವುಟ ಮಾಡಿಸ್ಕೊಂಡು ಬಂದಿದ್ದ. ಸಾನೇ ಖುಸಿಯಾಗಿದ್ದ. ಸರಿ ಧ್ವಜದ ಕಂಬ ಎಲ್ರಲಾ ಅಂದ ಗೌಡಪ್ಪ. ಕಿಸ್ನ ಕಂಬ ತೋರಿಸಿದರೆ ಅದಕ್ಕೆ ಎರಡು ಎಮ್ಮೆ ಕಟ್ಟಿದ್ರು. ಲೇ 18 ಅಡಿ ಪೋಲ್ಸ್ ಏನಲಾ ಮಾಡಿದೆ. ಯಾರು ಗುಂಡಿ ಹೊಡೆಯೋರು ಅಂತಾ ಕಿಸ್ನ ಬೋರ್ ವೆಲ್ ಲಾರಿಯೋರನ್ನ ಕರೆಸಿ ಗುಂಡಿ ಹೊಡೆಸಿದ್ದ. ನೆಲದಾಗೆ 13 ಅಡಿ ಇತ್ತು. ಮೇಲೆ ಬರೀ 5ಅಡಿ ಉಳಿದಿತ್ತು.  ಕಂಬ ಗೌಡಪ್ಪನ ಎದೆಗೆ ಬರೋದು . ಎಮ್ಮೆ ಸಗಣಿ ಬೇರೆ ಹಾಕಿತ್ತು. ವೇಸ್ಟ್ ಯಾಕೆ ಮಾಡಬೇಕು ಅಂತಾ. ಅದಕ್ಕೆ ನೀರು ಹಾಕಿ ಕಡ್ಡಿ ಪರಕೆ ತಗೊಂಡು ಸಾರಿಸಿದ್ವಿ. ಮನೆ ಮುಂದೆ ಬರೀ ಸಗಣಿಯೆ.

ಸರೀ ಬಾವುಟ ಕಟ್ಟಿದ್ದಾತು. ಜನ ಎಲ್ಲಾ ಬಂದ್ರು. ಈಗ ಧ್ವಜಾರೋಹಣ ಅಂತಿದ್ದಾಗೆನೇ ಗೌಡಪ್ಪನ ನೆಲದ ಮ್ಯಾಕೆ ಮಕ್ಕೊಂಡು ಹಗ್ಗ ಎಳೆದ. ಬಾವುಟದಿಂದ ಬಿದ್ದ ಹೂವು ಗೌಡಪ್ಪನ ಮೇಲೆ. ಹೆಣದ ಮೇಲೆ ಹೂವು ಹಾಕಿದಂಗೆ ಕಾಣೋದು. ಕಿಸ್ನನ್ನ ನೋಡಿ ಹಲ್ಲು ಕಡಿಯೋನು.ದೇಸ ಭಕ್ತಿ ಗೀತೆ ಹೇಳಬೇಕಾದ್ರೂ ಗೌಡಪ್ಪ ಮಕ್ಕೊಂಡೇ ಸೆಲ್ಯೂಟ್ ಹೊಡೆದ. ಬೆನ್ನೆಲ್ಲಾ ಸಗಣಿ ಮಯಾ. ತಹಸೀಲ್ದಾರ್ ಏ ಥೂ ಸೈಡಿಗೆ ಹೋಗ್ರೀ ಅಂತು.

ಸರಿ ಎಲ್ರಿಗೂ ಸಿಹಿ ಹಂಚಿರಿ ಅಂತಾ ಐಕ್ಳಿಗೆ ನಿಂಬೆ ಹುಳಿ ಪೆಪ್ಪರ್ ಮೆಂಟ್ ಕೊಟ್ವಿ. ಪೆಪ್ಪರ್ ಮೆಂಟ್ ಗುಂಡಗೆ ಇದ್ದ ಕಾರಣ ಐಕ್ಳು ಗೌಡಪ್ಪ ಗೋಲಿ ಕೊಟ್ಯಾನೆ ಅಂತಾ ಆಟ ಆಡಕ್ಕೆ ಹೋದ್ವು. ನಮಗೆಲ್ಲಾ ಒಳಗಡೆ ತಿಂಡಿ. ಅದೂ ಸುಗರ್ ಲೆಸ್ ಕೇಸರಿ ಬಾತ್, ಖಾರ ಇಲ್ಲದೇ ಇರೋ ಉಪ್ಪಿಟ್ಟು. ಗೌಡಪ್ಪಂಗೆ ಇತ್ತೀಚಗೆ ಪೈಲ್ಸ್ ಬಂದೈತೆ ಅಂತೆ. ತಿಂಡಿಗೆ ಕೂರುತ್ತಿದ್ದಾಗೆನೇ ಮಳೆ ಬಂತು. ನೋಡ್ರಲಾ ನಾನು ಧ್ವಜಾರೋಹಣ ಮಾಡ್ತಿದ್ದಾಗೆನೇ ಹೆಂಗಲಾ. ಸಿದ್ದೇಸ, ಎಲ್ಲಾ ನಿನ್ನ ದಯೆ ಅಂದಾ ಗೌಡಪ್ಪ. ಹೊರಗೆ ಹೋಗಿ ನೋಡಿದ್ರೆ ಬಾವುಟದ ಬಣ್ಣಾ ಎಲ್ಲಾ ಹೋಗಿ ಬಿಳೀ ಬಟ್ಟೆ ಒದ್ದೆಯಿಂದ ಮುದುರಿತ್ತು. ಗೌಡಪ್ಪ ಏನಲಾ ಇದು. ಖಾದಿ ಮಹಾತ್ಮೆ. ಅವನ ಹೆಂಡರ ಹೊಸಾ ಹಸಿರು ಸೀರೆ, ಸಿದ್ದೇಸನ ಗುಡಿ ಸ್ವಾಮೀಜಿ ಕಾವಿ ಹಂಗೇ ಹೆಣಕ್ಕೆ ಹಾಕೋ ಬಿಳೀ ಬಟ್ಟೆ ತಂದು ಬಿರ್ರನೆ ಬಾವುಟ ಮಾಡಿಸಿ ಮತ್ತೆ ಮಕ್ಕೊಂಡು ಧ್ವಜಾ ರೋಹಣ ಮಾಡಿದ. ತಹಸೀಲ್ದಾರ್ ನಿನ್ನ ಮೊಕ್ಕೆ ದೋಸೆ ಹುಯ್ಯಾ ಅಂದು ಗೌಡಪ್ಪಂಗೆ ಬಯ್ದು ಹೋದ್ರು. ನೋಡಿದ್ರೆ ಬಾವುಟ ಉಲ್ಟಾ ಹಾರ್ತಿತ್ತು. ಆಮ್ಯಾಕೆ ಸರಿ ಮಾಡಿದ್ವಿ ಅನ್ನಿ. ಬೆಳಗ್ಗೆ ಪೇಪರ್ನಾಗೆ ಗೌಡಪ್ಪನ ಪೋಟೋ ಜೊತೆ ವಿಸಯ. ಉಲ್ಟಾ ಬಾವುಟ ಹಾರಿಸಿದ್ದಕ್ಕೆ ದಂಡ ಅಂತಾ. ಸುಬ್ಬ ಬಾವುಟದಾಗೆ ಬಿಳೀದು ನಾಕು  ಚಡ್ಡಿ ಹೊಲಸ್ಕಂಡಿದ್ದ. ಲೇ ಕೋಮಲ್ಲು, ಇನ್ ಮ್ಯಾಕೆ ಸಾಲೇಗೆ ಸ್ವಾಸಂತ್ರ ದಿನಾಚರಣೆ ಮಾಡುವ ಅಂದೋನು ಸುಬ್ಬಂಗೆ ಬಟ್ಟೇದು 50ರೂಪಾಯಿ ಆಮ್ಯಾಕೆ ಕೊಡು ಅಂದು ಎದ್ದು ಹೋದ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಗುಂಡಿ ಹೊಡೆಯೋಕೆ ಕಿಸ್ನನ ಬೋರ್‌‌ವೆಲ್ ಲಾರಿ ಐಡಿಯ ಸೂಪರ್‍. ನಕ್ಕೂ ನಕ್ಕೂ ಸಾಕಾಯ್ತು. ಅಂಗೇ ಗೌಡಪ್ಪನ್ ಭಾಷ್ಣನೂ ಇದ್ದಿದ್ರೆ ಸಂದಾಗಿರ್ತಿತ್ತು. :) -ಪ್ರಸನ್ನ.ಎಸ್.ಪಿ

ಯಾಕೆ? ಕೋಮಲ್ ಬ್ಲಾಗ್ ಇನ್ನು ಬಂದಿಲ್ಲ ಅಂತ ನೋಡ್ತಿದ್ದೆ..ಖಂಡಿತ ಸ್ವಾತಂತ್ರನದಬಗ್ಗೆ ಹಾಸ್ಯ ಲೇಕನ ಇರುತ್ತೆ ಅಂತ ಗೊತ್ತಿತ್ತು..ನಕ್ಕು ನಕ್ಕು ಸಕಾಯ್ತು..