ವಿಶೇಷ ಗಣಪತಿ

To prevent automated spam submissions leave this field empty.

ಈ ಬಾರಿ ಗಣಪತಿ ಹಬ್ಬದ ಪಟ್ಟಿ ಬಿಡುಗಡೆ ಮಾಡಿದ್ವಿ. ಗೌಡಪ್ಪ ಅಧ್ಯಕ್ಸ, ನಾನು ಕಾರ್ಯದರ್ಸಿ,ಸುಬ್ಬ ಖಜಾಂಚಿ, ಇಸ್ಮಾಯಿಲ್,ಪಳನಿ ಮತ್ತಿತರರು ಸದಸ್ಯರು. ಶ್ರೀ ವಿನಾಯಕ ಸೇವಾ ಸಮಿತಿ ಅಂತಾ ಕರಪತ್ರ. ಕೆಳಗೆ ನೀರು ಉಳಿಸಿ, ನಾಡು ರಕ್ಸಿಸಿ. ಯಾಕ್ರೀ ಗೌಡ್ರೆ. ಹಿಂಗೆ ಹಾಕಿದರೆ ಗ್ರಾ.ಪಂಯೋರು ಒಂದು ಸಾವಿರ ಜಾಸ್ತಿ ಕೊಡ್ತಾರೆ ಕಲಾ ಅಂದ. ನೋಡ್ರಲಾ ನಾಳೆಯಿಂದ ಪಟ್ಟಿ ಎತ್ತಕ್ಕೆ ಹೋಗಬೇಕು. ಎಲ್ಲಾ ಸಂಜೆ 5ಕ್ಕೆ ನಿಂಗನ ಚಾ ಅಂಗಡಿ ಮುಂದೆ ಸೇರ್ರಲಾ ಅಂದಾ ಗೌಡಪ್ಪ. ಸರಿ ಸಂಜೆ ಎಲ್ಲಾ ಹೊಂಟ್ವಿ. ಮೊದಲು ಮನೆ ಕಲೆಕ್ಸನ್ ಮುಗಿಸೋಣ, ಆಮ್ಯಾಕೆ ಅಂಗಡೀದು ಮಾಡೋಣ ಅಂದಾ ಗೌಡಪ್ಪ. ನೀವು ಹೆಂಗೆ ಹೇಳ್ತೀರೋ ಹಂಗೆ ಅಂದೆ.

ಮೊದಲು ನಂಜನ ಮನೆಗೆ ಹೋದ್ವಿ. ಎಲ್ಲರಿಗೂ ಕೂರಿಸಿ ಚಾ ಕೊಟ್ಟ.  5ರೂಪಾಯಿ ತಗೋಳ್ರೀ ಅಂದ. ಲೇ ಹೋದ್ ಸಾರಿ ನೀನು 100ರೂಪಾಯಿ ಕೊಟ್ಟಿದ್ಯಲ್ಲೋ. ಚಾದ್ದು 95 ರುಪಾಯಿ, ಮೇಲೆ 5ರೂಪಾಯಿ ಸರಿ ಆಯ್ತಲ್ಲಾ ಅಂದಾ ನಂಜ. ಸರಿ ಮುಂದಿನ ತಿಪ್ಪಣ್ಣ ಮನೆಗೆ ಹೋದ್ರೆ 2ರೂಪಾಯಿ ಬರೆದುಕೊಳ್ರಿ ಅಂದ ತಿಪ್ಪಣ್ಣ. ಯಾಕಲಾ. ನಾನು ಕೊಡೋದಿ ಇಟೆಯಾ. ಆಮ್ಯಾಕೆ. ಇದಕ್ಕೆ ರಸೀದಿ ಕೊಡಬೇಕು. ಅಂಗೇ ಹೋದ ಬಾರಿ ಲೆಕ್ಕ ಕೊಡಬೇಕು. ಆಮ್ಯಾಕೆ ಈ ಬಾರಿ ಖರ್ಚು ವೆಚ್ಚ ತೋರಿಸಬೇಕು ಅಂದಾ ತಿಪ್ಪಣ್ಣ. ಮಗನೇ ನೀನು ಕೊಟ್ಟಿರೋ 2ರೂಪಾಯಿಗೆ ರಸೀದಿ ಕೊಡಬೇಕಾ. 1.50ರೂಪಾಯಿ ರಸೀದಿಗೆ ಆಗುತ್ತೆ. ಲೆಕ್ಕೆ ಎಲ್ಲಾ ಕೊಡ್ತೀವಿ. ನಾಳೆಯಿಂದ ಬಂದು ಪೆಂಡಾಲ್ ಗೆ ಗುಂಡಿ ಹೊಡಿ ಅಂದಾ ಗೌಡಪ್ಪ. ಏನಲಾ ಸುಬ್ಬ. ಎಲ್ಲಾರೂ ಎಂಟಾಣೆ, ಒಂದು ರೂಪಾಯಿ ಕೊಡ್ತಾರೆ. ಹಿಂಗಾದ್ರೆ ಮನ್ಯಾಗೆ ಇರೋ ಗಣಪತಿ ಇಡಬೇಕಾಯ್ತದೆ ಅಂದ ಗೌಡಪ್ಪ. ಸರಿ ಅಂಗಡಿಗೆ ಹೋದ್ರೆ ಹಫ್ತಾ ವಸೂಲಿ ಮಾಡಕ್ಕೆ ಬಂದಿದಾರೆ ಅಂತಾ ಕಂಪ್ಲೇಂಟ್ ಕೊಟ್ಟಿದ್ರು. ಪೊಲೀಸ್ನೋರು ನಮ್ಮನ್ನು ಕರ್ಕಂಡು ಹೋಗಿ ಯಾವ ಮಟ್ಟಕ್ಕೆ ವರ್ಕ್ ಮಾಡಿದ್ರು ಅಂದ್ರೆ ಕೈ, ಕಾಲು ನಮ್ದೇನಾ ಅನ್ನೋ ಮಟ್ಟಕ್ಕೆ ಅನುಮಾನ ಬಂದಿತ್ತು.

ಸರಿ ದುಡ್ಡು ಎಲ್ಲಾ ವಸೂಲಿ ಆಯ್ತು. 20ಅಡಿ ಗಣಪತಿ ಮಾಡಿಸಿದ್ವಿ. ಇಲಿನೇ ಹತ್ತತ್ರ 10ಕೆಜಿ ಇತ್ತು. ಇನ್ನು ಗಣಪತಿ ಹೆಂಗೆ ಇರಬೇಕು ಹೇಳಿ. ಗಣಪತಿ ಮಾಡೋನು ಹೊಸಬಾ ಅಂತೆ. ಹೊಟ್ಟೆಯೆಲ್ಲಾ ಟೊಳ್ಳು ಮಾಡೋ ಬದ್ಲು ಪೂರ್ತಿ ಮಣ್ಣಿಂದನೇ ಮಾಡಿದ್ದ. ಮನೆ ಹತ್ರಾ ಮಣ್ಣು ಹಾಕಸಕ್ಕೆ ಆಗಕ್ಕಿಲ್ಲಾ ಅಂತಾ ಮೈದಾನದಾಗೆ ಮಾಡಿದ್ನಂತೆ. ಏನ್ಲಾ ಮನೆ ಕಟ್ಟಿಸ್ತೀಯಾ ಅಂದ್ರೆ, ಇಲ್ಲಾ ಕಲಾ ಗಣಪತಿ ಮಾಡಕ್ಕೆ ಅನ್ನೋನು. ನಮ್ಮ ಗಣಪತಿ ಪೋಟೋ ಪೇಪರ್ನಾಗೆ ಬಂದಿತ್ತು. ಎರಡು ಲಾರಿ ಮಣ್ಣಿನ ಲೋಡ್ನಾಗೆ ಮಾಡಿದ ವಿಶೇಷ ಗಣಪತಿ ಅಂತ. ಗಣಪತಿಯನ್ನು ಜೇಸಿಬಿಯಿಂದ ತೆಗೆದು ಟ್ರಾಕ್ಟರ್ ಮೇಲೆ ಇಟ್ರೆ ಮುಂದೆ ಹಂಗೆ ಮೂಕು ಹಾರೋದು. ಬರೀ ಗಣಪತಿ ಬೆರಳು ತುಂಡಾಗಿ ಸೀನನ ತಲೆ ಮೇಲೆ ಬಿದ್ದಿದ್ದಕ್ಕೆ ಅಂಗೇ ರಕ್ತ. ಪೂಜೆಗೆ ಅಂತಾ ತೊಗೊಂಡು ಹೋಗಿದ್ದ ಅರಿಸಿನನೇ ಹಚ್ಚಿದ್ವಿ. ಡ್ರೈವರ್ ಇಸ್ಮಾಯಿಲ್ ಶೋಲೆ ಪಿಚ್ಚರ್ನಾಗೆ ಅಮಿತಾಬ್ ಕುದುರೆ ಹಾರಿಸದ ಹಾಗೆ ಕಾಣ್ತಾ ಇದ್ದ. ಕಡೆಗೆ ಟಿಪ್ಪರ್ ನಲ್ಲಿ ತಗೊಂಡು ಬಂದು ಇಟ್ವಿ. ಪೂಜಾರಪ್ಪ ಏಣಿ ಮೇಲೆ ಹತ್ತಿ ಪೂಜೆ ಮಾಡೋನು. ಏಣಿ ಹತ್ತು ಇಳಿದು ಪೂಜಾರಪ್ಪಂದು ಮಂಡಿ ಸವದೈತೆ ಅಂತಾ ಅವನ ಹೆಂಡರು ಸಾವಿರ ಎಕ್ಸಟ್ರಾ ಇಸ್ಕಂಡಿದ್ಲು. ದಿನಾ ಹಾರ ಹಾಕಕ್ಕೆ ಆಗಕ್ಕಿಲ್ಲಾ ಅಂತಾ ಪ್ಲಾಸ್ಟಿಕ್ ಹಾರ. ಕೋಲಿಗೆ ಊದಬತ್ತಿ ಸಿಗಸ್ಕಂಡು ಪೂಜೆ.

ಸರಿ ನಾಳೆ ಗಣಪತಿ ಬಿಡಬೇಕು. ಹಿಂದಿನ ದಿನನೇ ದಾರ್ಯಾಗೆ ಇರೋ ಲೈಟ್ ವೈರ್ ಎಲ್ಲಾ ತೆಗೆಸಿದ್ವಿ. ಬಡ್ಡೆ ಹತ್ತಾವು ಹೊಗೆ ಹಾಕಸ್ಕಂಡಾರು ಅಂತಾ.

ನಮ್ಮ ಗಣಪತಿ ಪಕ್ಕದ ಹಳ್ಯಾಗೆ ಎಲ್ಲಾ ಕಾಣೋದು. ಸರಿ ಮೆರವಣಿಗೆ ಹೊಂಡ್ತು. ಜನ ಗಣಪತಿನ ಮುಖ ನೋಡ್ತಿದ್ದಾಗೆನೇ ಆಕ್ಷಿ ಅನ್ನೋರು. ಸೂರ್ಯನ ಬೆಳಕು ಅಂಗೇ ಮೂಗಿಗೆ ಹೋಗೋದು. ಗಣಪತಿಯಿಂದ ಎಲ್ಲಾರೂ ಒಂದು 40 ಅಡಿ ದೂರದಲ್ಲಿ ಡ್ಯಾನ್ಸ್ ಯಾವನಿಗೆ ಬೇಕು ಬಿದ್ದರೆ ಅಂತಾ. ಸರಿ ಕೆರೆತಾವ ಜೆಸಿಬಿಯಿಂದ ಗಣಪತಿ ಇಳಿಸಿದ್ವಿ. ಸರಿ ತಂಬೂರಿ ತಮ್ಮಯ್ಯ. ಬಡಾ ಬಡಾ ಅಂತಾ ಚೆಡ್ಯಾಗೆ ಓಡಿ ಬಂದು ನೀರಿಗೆ ಡೈವ್ ಹೊಡೆದ. ಮೇಲೆ ಎದ್ದರೆ ರಕ್ತಮಯ. ಅಲ್ಲಿ ಇದ್ದಿದ್ದೇ 6 ಅಡಿ ನೀರು. ತಲೆ ಹೋಗಿ ಕಲ್ಲಿಗೆ ಹೊಡೆದಿತ್ತು. ಹಚ್ರಲಾ ಅರಿಸಿನ. ಕಮಿಟಿಯವರನ್ನ ಬಿಟ್ಟು ಯಾರೂ ಇಲ್ಲ. ಯಾಕೇಂದ್ರ ಮನೇಯಿಂದನೇ ಗಣಪತಿ ಬಿಡೋದು ಕಾಣ್ತದೆ ಅಂತಾ. ಪೂಜಾರಪ್ಪ ಎಲ್ಲಿ ಅಂತಾ ನೋಡಿದ್ರೆ. ಜೆಸಿಬಿ ಪಕ್ಕದಾಗೆ ನಿಂತಿದ್ದ. ಯಾಕ್ರೀ, ಇಲ್ಲಿಂದನೇ ಪೂಜೆ ಮಾಡ್ತೀನಿ ಅಂತು.  ಅಂತೂ ಗಣಪತಿ ತಗೊಂಡು ಕೆರ ಮಧ್ಯದಾಗೆ ಇಟ್ರೆ. 14 ಅಡಿ ಇನ್ನೂ ಮೇಲೆ ಇತ್ತು. ಅದು ಮೂರು ತಿಂಗಳು ಆದ ಮೇಲೆ ಕರಗ್ತು. ಗ್ರಾ.ಪಂಯವರು ನಮ್ಮ ಕಮಿಟಿಗೆ ನೊಟೀಸ್ ಕೊಟ್ಟಿದ್ರು. ಮೊನ್ನೆ ತಾನೆ ಹೂಳು ಎತ್ತಿಸಿದ್ವಿ. ಎರಡು ಲೋಡ್ ಮಣ್ಣು ಹಾಕಿದ್ದಕ್ಕೆ 10ಸಾವಿರ ದಂಡಾ ಅಂತಾ. ಈಗ ಗಣಪತಿ ಅಂದ್ರೆ ಬರೀ ಎರಡು ಅಡಿದೂ. ಮೊನ್ನೆ ಗಣಪತಿ ಮಾಡಿದೋನು ಬ್ಯಾಲೆನ್ಸ್ ಕೊಡಿರಿ ಅಂತಾ ಬಂದಿದ್ದ. ಸಾನೆ ಹೊಡೆದು ಕಳಿಸಿದೀವಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಾಸ್ಯ ಸೂಪರಾಗಿದೆ. ಆದರೆ ಗಣೇಶ ಚತುರ್ಥಿಯ ನಂತರ ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಇರಲಿ ಆ ಟೈಮಿಗೆ ಇನ್ನೊಂದು ಚೆಂದದ ಹಾಸ್ಯ ಲೇಖನ ಬರೆಯಿರಿ. ಕೊನೆಯ ಸಾಲಿನಲ್ಲಿ ಗಣಪರಿ ಆಗಿದೆ, ಅದನ್ನು ಗಣಪತಿ ಮಾಡಿ. -ಪ್ರಸನ್ನ.ಎಸ್.ಪಿ

ಧನ್ಯವಾದಗಳು ಪ್ರಸನ್ನ. ಸರಿಪಡಿಸಿದ್ದೇನೆ. ಹೊಸ ಹಬ್ಬಕ್ಕೆ ಹೊಸ ಲೇಖನದೊಂದಿಗೆ ಕೋಮಲ್

ಸೂಪರ್..ಹೌದು ಗಣಪತಿ ಹಬ್ಬಕ್ಕೆ ಹಾಕಿದ್ರೆ ಆಕ್ತಿತ್ತು..ಪ್ರಸನ್ನ ಅವ್ರು ಹೇಳ್ದಂಗೆ ಇನ್ನೊಂದು ಲೇಖನ ಬರಿರಿ..ಬಹುಶ ಇದು ಹೋದ್ ವರ್ಷದ ಗಣಪತಿ ಕಥೆ ಇರ್ಬೇಕು..ಈ ವರ್ಷ..ಎರಡಡಿ ಗಣಪತಿ ಕಥೆ ಇರ್ಬೇಕು..

ಧನ್ಯವಾದಗಳು ಮಾಲತಿ. ಹೌದು ಎರಡು ಅಡಿ ಗಣಪತಿ ಕತೆ ಬಹಳ ಇದೆ. ಅದನ್ನು ಬರೆಯುತ್ತೇನೆ.

ಮಂಜಣ್ಣ ಧನ್ಯವಾದಗಳು, ನಿಮ್ಮಂತವರ ಪ್ರೋತ್ಸಾಹವೇ ಬರೆಯುವುದಕ್ಕೆ ಸ್ಪೂರ್ತಿ.

>>ಸರಿ ಕೆರೆತಾವ ಜೆಸಿಬಿಯಿಂದ ಗಣಪತಿ ಇಳಿಸಿದ್ವಿ. ಸರಿ ತಂಬೂರಿ ತಮ್ಮಯ್ಯ. ಬಡಾ ಬಡಾ ಅಂತಾ ಚೆಡ್ಯಾಗೆ ಓಡಿ ಬಂದು ನೀರಿಗೆ ಡೈವ್ ಹೊಡೆದ. ಮೇಲೆ ಎದ್ದರೆ ರಕ್ತಮಯ. ಅಲ್ಲಿ ಇದ್ದಿದ್ದೇ 6 ಅಡಿ ನೀರು. ತಲೆ ಹೋಗಿ ಕಲ್ಲಿಗೆ ಹೊಡೆದಿತ್ತು. ಹಚ್ರಲಾ ಅರಿಸಿನ. ಕಮಿಟಿಯವರನ್ನ ಬಿಟ್ಟು ಯಾರೂ ಇಲ್ಲ. ಯಾಕೇಂದ್ರ ಮನೇಯಿಂದನೇ ಗಣಪತಿ ಬಿಡೋದು ಕಾಣ್ತದೆ ಅಂತಾ. ಪೂಜಾರಪ್ಪ ಎಲ್ಲಿ ಅಂತಾ ನೋಡಿದ್ರೆ. ಜೆಸಿಬಿ ಪಕ್ಕದಾಗೆ ನಿಂತಿದ್ದ. ಯಾಕ್ರೀ, ಇಲ್ಲಿಂದನೇ ಪೂಜೆ ಮಾಡ್ತೀನಿ ಅಂತು. ಅಂತೂ ಗಣಪತಿ ತಗೊಂಡು ಕೆರ ಮಧ್ಯದಾಗೆ ಇಟ್ರೆ. 14 ಅಡಿ ಇನ್ನೂ ಮೇಲೆ ಇತ್ತು. ಅದು ಮೂರು ತಿಂಗಳು ಆದ ಮೇಲೆ ಕರಗ್ತು. ಗ್ರಾ.ಪಂಯವರು ನಮ್ಮ ಕಮಿಟಿಗೆ ನೊಟೀಸ್ ಕೊಟ್ಟಿದ್ರು. ಮೊನ್ನೆ ತಾನೆ ಹೂಳು ಎತ್ತಿಸಿದ್ವಿ. ಎರಡು ಲೋಡ್ ಮಣ್ಣು ಹಾಕಿದ್ದಕ್ಕೆ 10ಸಾವಿರ ದಂಡಾ ಅಂತಾ. ಈಗ ಗಣಪತಿ ಅಂದ್ರೆ ಬರೀ ಎರಡು ಅಡಿದೂ<< ಸಕತ್.. ಕೋಮಲ್ ಮು೦ದುವರೆಸಿ ನಿಮ್ಮ ಹಾಸ್ಯ ರಸಾಯನಗಳನ್ನು. ನಮಸ್ಕಾರಗಳೊ೦ದಿಗೆ,

ನಾವಡರೆ ಹಾಗೂ ನಾಗರಾಜರಿಗೆ ಧನ್ಯವಾದಗಳು. ಖಂಡಿತಾ ಮತ್ತಷ್ಟು ಹಾಸ್ಯ ಸಂಗತಿಗಳನ್ನು ತಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತೇನೆ.