ಸುಬ್ಬನ ಹೆಣ್ಣು ನೋಡಕ್ಕೆ ಮ್ಯಾರಾಥಾನ್

To prevent automated spam submissions leave this field empty.

ಸಾನೇ ದಿನ ಆದ್ ಮ್ಯಾಕೆ ಸುಬ್ಬಂಗೆ ಒಂದು ಹೆಣ್ಣು ಬಂದಿತ್ತು. ಅದೂ ನಮ್ಮ ಹಳ್ಳಿಂದ 10ಕಿ.ಮೀ ದೂರ ಆಟೆಯಾ. ಹುಡುಗಿ ಸಂದಾಗವ್ಳೆ. ಆದ್ರೆ ಅಮವಾಸ್ಯಗೆ ಹಲ್ಲು ಬಿಟ್ಟರೆ ಮಾತ್ರ ಕಾಣೋದು ಅಂದಿದ್ದ ತಂತಿ ಪಕಡು ಸೀತು. ನೋಡ್ರಲಾ ನೀವು ಬರ್ರಲಾ ನಂಗೇ ಒಬ್ಬನಿಗೆ ಹೋಗಕ್ಕೆ ಹೆದರಿಕೆ ಆಯ್ತದೆ. ಅಂಗೇ ಒಂದು ಕಾರು ಮಾತ್ತೀನಿ ಅಂದಾ ಸುಬ್ಬ. ಏನು ಬೇಡ ಕಲಾ ನಮ್ಮ ಬೈಕ್ನಾಗೆ ನಾನು,ನೀನು ಹಂಗೇ ಕೋಮಲ್.ಮೂರು ಜನ ತ್ರಿಬ್ಸ್ ಹೋಗೋಣ.  ಹೆಂಗಿದ್ರೂ ಹತ್ತೇ ಕಿ.ಮೀ ಐತೆ. ಸುಮ್ನೆ ಯಾಕಲಾ ಕಾಸು ಖರ್ಚು ಮಾತ್ತೀಯಾ. ಅದೇ ಕಾಸಿದ್ರೆ ಮದುವೆಗೆ 4ಚೆಡ್ಡಿ ಹೊಲಸಕ್ಕೆ ಆಯ್ತದೆ ಅಂದ. ಮಿಕ್ಕದವೆಲ್ಲಾ ನಮ್ಮ ಬೈಕು ಹಿಂದೆ ಓಡಿ ಬರಲಿ ಅಂದಾ ಗೌಡಪ್ಪ. ಸರಿ ಗೌಡ್ರೆ ನೀವು ಹೆಂಗಂತೀರೋ ಅಂಗೆ.


ಸರಿ ಬೆಳಗ್ಗೆ 10ಗಂಟೆಗೆ ಹೊಂಟ್ವಿ. ಕೆಟ್ಟ ಬಿಸಿಲು. ನಾವು ಮೂರು ಜನಾ ಬೈಕ್ನಾಗೆ ಹೊಂಟ್ವಿ. ಬೆವರಿಗೆ ಗೌಡಪ್ಪನ ಮೈಯಿಂದ ಒಂದು ತರಾ ಕೊಳತೋದು ಮೊಸರು ವಾಸನೆ ಬರೋದು.  ನಮ್ಮ ಹಿಂದೆ ಮ್ಯಾರಾಥಾನ್ ರೇಸ್ ತರಾ ಸುಬ್ಬನ ಅವ್ವ, ತಂಗಿ, ನನ್ನ ಹೆಂಡರು, ದೊನ್ನೆ ಸೀನ,ಗೌಡನ ಹೆಂಡರು, ತಂಬಿಟ್ಟು ರಾಮ ಹಿಂಗೆ ನೂರಾರು ಜನ ತಲೆ ಮೇಲೆ ಟವಲ್ ಹಾಕ್ಕೊಂಡು ಬೈಕಿಂದೆ ಓಡಕ್ಕೆ ಸುರು ಮಾಡಿದ್ರು. ಅದ್ರಾಗೆ ಹೆಂಗಸರು ದಪ್ ದಪ್ ಅಂತಾ ಕಾಲಿಗೆ ಸೀರೆ ಸಿಕ್ಕಾಕಂಡು ಬೀಳೋವು. ಗೌಡ ತನ್ನ ಹೆಂಡರು ಎಲ್ಲಿ ಅಂತಾ ತಿರುಗಿ ನೋಡಕ್ಕೆ ಹೋಗಿ ಸೇತುವೆ ಕಟ್ಟೆಗೆ ಬೈಕ್ ಗುದ್ದಿದ್ದ. ಮದುವೆ ಗಂಡು ಸುಬ್ಬನ ತುಟಿ ಒಂದು ಕಡೆ ಹರಿದಿತ್ತು. ಅರಿಸಿನ ಹಚ್ಚಿದ್ರೆ. ಕರಗದಾಗೆ ಬಾಯಿಗೆ ಕಬ್ಬಿಣ ಚುಚ್ಕಂಡಂಗೆ ಕಾಣೋನು. ಸುಬ್ಬನ ತಂಗಿ ಕಳಸಗಿತ್ತಿ ಅಂತಾ ದೊಡ್ಡ ತಟ್ಯಾಗೆ 5ಕಾಯಿ ಒಂದು 6ಕೆಜಿ ಹಣ್ನು ಎಲ್ಲಾ ಮಡಗಿದ್ರು. ಅದು ಅಲ್ಲಲ್ಲೇ ಕೂತು ಎದ್ದು ಮತ್ತೆ ಓಡೋದು. ಸುಬ್ಬನ ಅವ್ವ ಇಂತಾ ವಧು ಪರೀಕ್ಸೆ ನನ್ನ ಜಲ್ಮದಾಗೆ ನೋಡಿಲ್ಲ ಅಂತಿದ್ಲು. ತಂತಿ ಪಕಡು ಸೀತುಗೆ ಅಸ್ತಮ ಬೇರೆ ಓಡೋಬೇಕಾದ್ರೆ ಸೊಯ್ ಸೊಯ್ ಅಂತಾ ಸವಂಡ್ ಬರೋದು. ಜನಿವಾರ ಅಡ್ಡ ಅಡ್ಡ ಬರೋದು. ಅದನ್ನು ಸೊಂಟಕ್ಕೆ ಕಟ್ಟಿದ್ದ. ಜೇನು ನೊಣ ಏನಾದರೂ ಬಂತಾ ಅಂತಾ ಎಲ್ಲಾ ತಿರುಗಿ ನೋಡೋವು. ಸುಬ್ಬನ ಅಪ್ಪ ಮರದ ಕೆಳಗೆ ಕಿಸ್ಕಂಡಿದ್ದ. ನೀರು ಕುಡಿಸಿ ಓಡಕ್ಕೆ ಹಚ್ಚಿದ್ವಿ. ದಾರ್ಯಾಗೆ ಮ್ಯಾರಾಥಾನ್ ಓಟ ಅಂತಾ ಮಧ್ಯ ಮಧ್ಯ ಪಾನಕ ಬೇರೆ. ಹೊಟ್ಟೆ ತೊಳಿಸಿತು ಅಂತಾ ವಾಂತಿ ಮಾಡೋವು. ಗೌಡಪ್ಪ ಮಾತ್ರ 20 ಕಿ.ಮೀ ಮ್ಯಾಕೆ ಬೈಕ್ ಓಡಿಸ್ತಾ ಇರ್ಲಿಲ್ಲ. ಯಾಕೇಂದ್ರ ಎಲ್ಲಾವು ನಮ್ಮ ಹಿಂದೆ ಬತ್ತಾ ಇದೋರೋ ಇಲ್ಲೋ, ಅಥವಾ ಅಂಗೇ ಕೆರೆತಾವ ಹೋಯ್ತಾರೋ ಅಂತಾ ಪರೀಕ್ಸೆ ಮಾಡಕ್ಕೆ. ಮಗಾ ಬೈಕ್ಗೆ ಸೇವಿಂಗ್ ಮಾಡೋ ಕನ್ನಡಿ ಮಡಗಿದ್ದ.
ಹೆಣ್ಣಿನ ಮನೆ ಬೀದೀಲಿ ಇವು ಓಡ್ತಾ ಇದ್ರೆ. ಅಕ್ಕಪಕ್ಕದ ಮನೆಯೋರು ನೋಡ್ರಲಾ ಗಂಡು ಕಟ್ಟು ಮಸ್ತಾಗವ್ನೆ ಅನ್ನೋವು. ಸುಬ್ಬ ಮಾತ್ರ ಬೆವರು ಒರೆಸ್ಕಂತಾ ಇದ್ದ. ಹಣ್ಯಾಗೆ ಇದ್ದ ಕುಂಕುಮ, ತುಟ್ಯಾಗೆ ಇದ್ದ ಅರಿಸಿನ ಎಲ್ಲಾ ಮುಖಕ್ಕೆ ಬಂದು ಒಳ್ಳೆ ಸಂತ್ಯಾಗೆ ಚಾಟಿ ಹೊಡ್ಕಳೋರು ತರಾ ಕಾಣೋನು. ಸರಿ ಹೆಣ್ಣಿನ ಮನೆ ಬಂತು. ವರಾಂಡದಾಗೆ ಎಲ್ಲಾ ಹುಸ್ಸಪ್ಪಾ ಅಂತಾ ಕಿಸ್ಕಂಡ್ವು. ಹುಡುಗಿ ಅಪ್ಪ ಗೌಡಪ್ಪಂಗೆ ಸೈಡಿಗೆ ಕರೆದುಕೊಂಡು ಹೋಗಿ ಕಿವ್ಯಾಗೆ ಏನೋ ಹೇಳ್ದ. ಗೌಡ್ರೆ ಏನ್ರೀ ಅವನು ಹೇಳಿದ್ದು. ನಿಮ್ಮ ಜುಗ್ಗ ತನಕ್ಕೆ ಬೆಂಕಿ ಹಾಕ. ವ್ಯಾನ್ ಮಾಡ್ಕಂಡು ಬರಕ್ಕೆ ಆಗಲಿಲ್ವಾ ಅಂತಾ ಉಗಿದ ಕನ್ಲಾ ಅಂದ ಗೌಡಪ್ಪ.
ಸರಿ ಹೋಗ್ತಿದ್ದಂಗೆನೇ ಚುರುಮುರಿ, ಚಾ ಕೊಟ್ರು. ಏನಲಾ ಉಪ್ಪಿಟ್ಟು ಕೇಸರಿಬಾತ್ ಇಲ್ವೇನ್ಲಾ ಸುಬ್ಬ. ನೋಡಲಾ ಹೆಣ್ಣು ಒಪ್ಪಿದ್ದರೆ ಮಾತ್ರ ಅವೆಲ್ಲಾ. ಇಲ್ಲಾಂದ್ರೆ ಇಟೆಯಾ ಅಂದ ಸೀತು. ಮತ್ತೆ ಅದು ಉಳಿದ್ರೆ. ಅವರದು ಕ್ಯಾಂಟೀನ್ ಐತೆ ಆಮ್ಯಾಕೆ ಮತ್ತೆ ಬಿಸಿ ಮಾಡಿ ಅಲ್ಲಿ ಮಾರ್ತಾರೆ ಕನ್ಲಾ ಅಂದ. ಪ್ಲೇಟಿಗೆ 10ರೂಪಾಯಿ ಒಂದು ಬೋಂಡಾ ಫ್ರೀ ಅಂದ. ಸರಿ ತಿಂದು ಸ್ವಲ್ಪ ಹೊತ್ತಿಗೇನೇ ಎಲ್ಲಾ ಗೊರ್ ಅಂತಾ ಗೊರಕೆ ಹೊಡಿತಾ ಇದ್ವು. ಓಡಿದ್ದು ಸುಸ್ತು ಬೇರೆ. ಮಕ್ಕಳ್ಲಿ ಬಿಡಲಾ ಅಂದ ಗೌಡಪ್ಪ. ಬೀದ್ಯಾಗೆ ಭಿಕ್ಸುಕರು ಮಲಗ್ದಂಗೆ ಮಲಗಿದ್ರು. ಏ ಥೂ ಅಂದಾ ಸುಬ್ಬ. ಸರಿ ಹೆಣ್ಣು ಕರೆಸಿರಿ ಅಂದಾ ನಮ್ಮ ತಂತಿ ಸೀತು.
ಹೆಣ್ಣು ಎರಡೇ ಸೆಂಕೆಂಡ್ನಾಗೆ ರೊಯ್ ಅಂತಾ ಆ ರೂಮಿಂದ ಈ ರೂಮಿಗೆ ಹೋದ್ಲು. ಏನ್ಲಾ ಸೀತು ಹೆಣ್ಣು ನೋಡ್ಲೇ ಇಲ್ಲ ಅಂದಾ ಸುಬ್ಬ. ಮತ್ತೆ ಹಂಗೇ ಮಾಡಿದ್ಲು. ಕಡೆಗೆ ಮೊಬೈಲ್ನಾಗೆ ಷೂಟ್ ಮಾಡ್ಕಂಡ್ ಸ್ಲೋ ಮೋಸನಾಗೆ ನೋಡಿದ್ರೆ ಕೈನಾಗೆ ಒಂದು ಕೋಲು ಮಡಿಕ್ಕಂಡ್ ರೊಯ್ ಅಂತಾ ಓಡಹೋಗದು ಕಾಣ್ತು. ಆಮ್ಯಾಕೆ ಗೊತ್ತಾಗಿದ್ದು ಅವಳು ರಿಲೇಯಲ್ಲಿ ಸ್ಟೇಟ್ ಲೆವೆಲ್ ಚಾಂಪಿಯನ್ ಅಂತಾ. ಸಾನೇ ಜನಾ ಇದ್ದಿದ್ದಕ್ಕೆ ಒಬ್ಬಳಿಗೇ ಚಾ ಕೊಡಕ್ಕೆ ಆಗಕ್ಕಿಲ್ಲಾ ಅಂತಾ ಇಬ್ಬರು ಹೆಣ್ಣು ಮಕ್ಕಳು ಚಾ ತಗೊಂಡು ಬಂದ್ವು. ನಮ್ಮ ಗೌಡಪ್ಪ ಇದರಾಗೆ ಯಾರು ಮದುವೆ ಹೆಣ್ಣು ಅಂದ . ನೀವೇ ಹೇಳಿ ನೋಡೋಣ ಅಂದಾ ಹುಡುಗಿ ಅಪ್ಪ. ಲೇ ನಾವೇನೂ ಕ್ವಿಜ್ ಕಾರ್ಯಕ್ರಮಕ್ಕಾ ಬಂದಿದೀವಿ. ನೀನೇ ಹೇಳಲಾ ಅಂದ್ ಮ್ಯಾಕೆ, ಆಪ್ಷನ್ ಕೊತ್ತೀನಿ ಅಂದ. ಹೇಳ್ತೀಯೋ ಇಲ್ಲಾ ಎದ್ದು ಹೋಗಣವೋ, ಬಾರಲಾ ತಿಪ್ಪೇಸಿ ಹೋಗುವಾ, ತಿಪ್ಪೇಸಿ ಯಾರು. ನಮ್ಮ ಮನೆ ಸಗಣಿ ತೆಗೆಯೋನೇ ತಿಪ್ಪೇಸಿ. ಮತ್ತೆ ಮನೆ ಮುಂದೆ ಕಸ ಹೊಡೆಯೋನು, ಅವನು ಪರ್ಕೇಸಿ ಅಂದಾ ಗೌಡಪ್ಪ. ಸರಿ ಮೆಳ್ಳುಗಣ್ಣು ಐತಲ್ಲಾ ಅದೇ ಹುಡುಗಿ ಅಂದಾ ಅವರ ಅಪ್ಪ. ಆ ಹುಡುಗಿ ಸುಬ್ಬನ ನೋಡಿದ್ರೆ ತಂಬಿಟ್ಟು ರಾಮನ್ನ ನೋಡ್ದಂಗೆ ಕಾಣೋದು. ನೋಡಮ್ಮಾ ನೀನು ತಂಬಿಟ್ಟು ರಾಮನ್ನ ನೋಡು ಅಂದಾ ಗೌಡಪ್ಪ. ಅವನನ್ನ ನೋಡಿದ್ರೆ ದೊನ್ನೆ ಸೀನನ್ನ ನೋಡ್ದಂಗೆ ಕಾಣೋದು.
ಸರಿ ಸುಬ್ಬ ಹುಡುಗಿ ಕಿತಾ ಒಸಿ ಮಾತಡ್ಬೇಕು ಅಂದ. ಒಂದೇ ರೂಮ್ನಾಗೆ ಬಿಟ್ಟು ಸ್ವಲ್ಪ ಹೊತ್ತಾದ ಮ್ಯಾಕೆ ಸುಬ್ಬ ಹೊರ ಬಂದು ಹೆಣ್ಣು ಬೇಡ ಅಂದ. ಯಾಕಲಾ, ಆಮ್ಯಾಕೆ ಹೇಳ್ತೀನಿ ನಡೀರಿ. ಅಂದು ಎಂದಿನಂತೆ ನಾವು ಮೂರು ಜನಾ ತ್ರಿಬ್ಸ್ ನಮ್ಮ ಹಿಂದೆ ಊರ್ನೋರು ಮ್ಯಾರಾಥಾನ್ ಓಟದಲ್ಲಿ. ಹುಡುಗಿ ಅಪ್ಪ ಆಗಲೇ ಉಪ್ಪಿಟ್ಟು ಕೇಸರಿಬಾತ್ ಹೋಟಲ್ಗೆ ತಲೆ ಮ್ಯಾಕೆ ಇಟ್ಕಂಡು ತಗೊಂಡು ಹೋಗ್ತಾ ಇದ್ದ. ಕೆಲವೊಂದಿಷ್ಟು ಕಾಲು ನೋವು ಅಂತಾ ಕುಂತ್ಕಂಡು ಸಂಜೆ ತಾವ ಬಂದ್ವು. ನಿಂಗ ಫಸ್ಟ್ ಬಂದೋರಿಗೆ ಚೊಂಬು ಫ್ರೀ ಅಂದಿದ್ದ. ಮಗಾ ಪಟಾಲಾಂ ಪಾಂಡು ಫಸ್ಟ್ ಬಂದಿದ್ದ.
ಯಾಕಲಾ ಸುಬ್ಬ ಹುಡುಗಿ ಬೇಡ ಅಂದ್ಯಲಾ ಅಂದಾ ಗೌಡಪ್ಪ. ನಾನು ಬೆಳಗ್ಗೆ ಅವಳು ಜೊತೆ ಕೋಲು ಹಿಡ್ಕಂಡು ಗುಲ್ ಕೋಸ್, ಟವಲ್ ತಗೊಂಡು ಓಡಬೇಕಂತೆ. ಅಂಗೇ ಅವಳು ಸೀಟಿ ಹೊಡಿದರೆ ಮಾತ್ರ ಕೆಲಸ ಮಾಡೋದು ಅಂತೆ. ಕೆಲಸ ಇಲ್ದೇ ಇದ್ದಾಗ ಅವರ ಹೋಟೆಲ್ನಾಗೆ ತಟ್ಟೆ ಲೋಟ ತೊಳೀಬೇಕಂತೆ. ಆಮ್ಯಾಕೆ ಬೇಡ ಬುಡ್ರೀ. ಏ ಹೇಳಲಾ. ಅವರ ಮನ್ಯಾಕೆ ಒಂದು ಗುಜರಿ ಹಾಕೋ ಅಜ್ಜಿ ಐತಂತೆ ಅದನ್ನ ದಿನಾ ನಾನೇ ಕೆರೆತಾವ ಕರ್ಕಂಡು ಹೋಗ್ಬೇಕಂತೆ ಅಂದಾ. ಗೌಡಾ ಟವಲ್ ಮುಚ್ಕಂಡು ಕಿಸ ಕಿಸ ನಗೋನು. ಲೇ ಸುಬ್ಬ ನಿಂಗೆ ಈ ಜಮದಗ್ನಿಲ್ಲಿ ಮದುವೆ ಆಗಕ್ಕಿಲ್ಲಾ. ಸುಮ್ನೆ ಸಿದ್ದೇಸನ ಗುಡೀಲಿ ಸ್ವಾಮೀಜಿ ಆಗಲಾ. ಆಮ್ಯಾಕೆ ಪೆಟ್ರೋಲ್ ಕಾಸು 100ರೂಪಾಯಿ ಕೊಡಲಾ ಅಂದ. ಯಾಕ್ರೀ. ನಮ್ಮ ಗಾಡಿ ಲೀಟರಿಗೆ ಬರೇ 10ಕಿ.ಮೀ ಕೊಡ್ತತೆ ಕಲಾ ಅಂದ. ಸುಬ್ಬ ಹಲ್ಲು ಕಡಿಯೋನು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

[[ಸುಬ್ಬನ ಅವ್ವ ಇಂತಾ ವಧು ಪರೀಕ್ಸೆ ನನ್ನ ಜಲ್ಮದಾಗೆ ನೋಡಿಲ್ಲ ಅಂತಿದ್ಲು.]] ನಾನೂ ಇಂತಹದ್ದನ್ನು ಕೇಳಿರಲಿಲ್ಲ. ಖುಷಿ ಕೊಟ್ಟ ಹಾಸ್ಯ, ಕೋಮಲ್.

ಸರ್ ನಿಮ್ಮಂತವರ ಪ್ರೋತ್ಸಾಹವೇ, ಇಂದು ನನ್ನಿಂದ ಹಲವಾರು ಹಾಸ್ಯ ಲೇಖನಗಳು ಬರಲು ಸಾಧ್ಯವಾಗಿದೆ. ನಾಗರಾಜರೆ ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

ಸುಬ್ಬಂಗೆ ಹುಬ್ಬಳಿ ಧಾರವಾಡದ ಕಡೆ ಹೆಣ್ಣು ನೋಡಬಹುದು. ಇವನು ಆಡೋ ಆಟಕ್ಕೆ ಅಲ್ಲಿ ನಾಯಿ ಹೊಡೆದಂಗೆ ಹೊಡೆದರೆ ಕಷ್ಟ. ಅಯ್ಯೋ ನಮ್ಮ ಗೌಡಪ್ಪ ಸಾನೇ ಪೇಮಸ್. ಒಂದ್ಸಾರಿ ನಾನೇ ಕರ್ಕಂಡ್ ಬಂದು ಭೇಟಿ ಮಾಡಿಸ್ತೀನಿ. ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ ಧನ್ಯವಾದಗಳು. http://www.komal1231...

"ಅತ್ಯಧ್ಭುತ" ... ಹಾಸ್ಯಭರಿತವಾದ ಲೇಖನ .. ಹೊಟ್ಟೆ ಹುಣ್ಣಾಗುವಷ್ಟು ನಕ್ಕೆ .. ನಿಮ್ಮ ಗ್ರಾಮ್ಯ ಭಾಷೆಯ ನಿರೂಪಣೆ ಹಾಗು ಕಾಮಿಡಿ ಟೈಮಿಂಗ್ ಬಹಳ ಚೆನ್ನಾಗಿದೆ .. ಹೀಗೆ ಬರೆಯುತ್ತಿರಿ, ನಗಿಸುತ್ತಿರಿ.. ಧನ್ಯವಾದ