ಶೋಷಿತರಾದೆವು ಎಂದುಕೊಳ್ಳುವ ಮುನ್ನ

To prevent automated spam submissions leave this field empty.

ಅಬ್ಬಾಬ್ಬ ಅದೇನು ಚೀರಾಟ ಹಾರಾಟ. ಮನೆಯಲ್ಲ್ಲೂ ಕವಲು . ಪತ್ರಿಕೆಯಲ್ಲೂ ಕವಲು. ಬ್ಲಾಗಿನಲ್ಲೂ ಕವಲು . ಕವಲು ಓದಿದಾಗಲೆ ಬಹಳಷ್ಟು ಪುರುಷರಿಗೆ ತಾವು ಶೋಷಿತರಾಗಿದ್ದು ಗೊತ್ತಾಯಿತಂತೆ. ಹೆಣ್ಣೊಬ್ಬಳು ತನ್ನ ಹಕ್ಕನ್ನ ಚಲಾಯಿಸಲಾರಂಭಿಸಿದ ಕೂಡಲೆ ಅದು ಕವಲು   ಕಾದಂಬರಿಯ ಮತ್ತೊಂದು ಕವಲಾಗಿಬಿಡುತ್ತದೆ.


 


ಸಹಸ್ರಾರು ವರ್ಷಗಳಿಂದ ಹೆಂಗಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಇಲ್ಲಿ ನಗಣ್ಯವಾಗಿಬಿಟ್ಟಿದೆ  .


ಎಷ್ಟೊಂದು ಘಟನೆಗಳು  ಸದ್ದಿಲ್ಲದೆ ಅಡಗಿಹೋಗಿವೆ


 


 ನನಗೆ ತುಂಬಾ ಆಪ್ತರಾದವರ ಕತೆಯೊಂದನ್ನು  ನಿಮ್ಮ ಮುಂದಿಡುತ್ತಿದ್ದೇನೆ .


ಇದು ಸುಮಾರು ೬೫ ವರ್ಷಗಳ ಹಿಂದೆ ನಡೆದದ್ದು


ಆ ಮನೆಯಲ್ಲಿ ಸಾಲು ಸಾಲು ಹೆಣ್ಣು ಮಕ್ಕಳು ಹದಿನಾಲ್ಕು ಮಕ್ಕಳು  . ಮೂವರಿಗೆ ಮದುವೆ ಆಗಿತ್ತು ಮೂರನೆಯವಳಿಗೆ  ನಾಲ್ಕನೇ ಹೆರಿಗೆಯಾಗಿತ್ತು. ತವರಿಗೆ ಬಂದಿದ್ದಳು  ಅವಳ ತಂಗಿ ಇನ್ನೂ ಹದಿಮೂರರ ಪುಟ್ಟ ಪೋರಿ.


ಮೂರನೆಯವಳ ಗಂಡ ಬಂದ ಅತ್ತೆ ಮನೆಗೆ   . ಹೆಂಡತಿ ಇನ್ನೂ ಹಸಿ ಬಾಣಂತಿ .


ಎಷ್ಟು ಹಸಿದಿದ್ದನೋ ಆ ಪುಟ್ಟ ಪೋರಿಯ ಮೇಲೆ ಕಣ್ಣು ಬಿದ್ದಿತ್ತು.


ಅದ್ಯಾವ ಸಮಯದಲ್ಲೋ  ಪೋರಿಯ ಬದುಕು ಮೂರಾಬಟ್ಟೆಯಾಗಿತ್ತು.


ಗಂಡನ ಹೆಸರನ್ನು ಕೆಡಿಸಲು ಬಯಸದ ಅಕ್ಕ, ಅಳಿಯನಿಗೇನಾದರೂ ಅಂದರೆ ಮಗಳ ಭವಿಷ್ಯವೇನಾಗಿಬಿಡುವುದು ಎಂದು ಹೆದರಿದ ಅಪ್ಪ ಅಮ್ಮ. ಬಾಯಿ ಬಿಟ್ಟರೆ ತಮ್ಮ ಮದುವೆ ಕನಸಿನ ಮಾತು ಎಂದು ಬೆದರಿದ ತಂಗಿಯರು ಈ ವಿಷಯವನ್ನು ಹೊರಹಾಕಲಿಲ್ಲ . ಇಲ್ಲಿ ಎಲ್ಲರೂ ಶೋಷಕರಾಗಿದ್ದರು


ಹುಡುಗಿ ಗರ್ಭಿಣಿಯಾದಳು . ದೂರದ ಊರೊಂದರಲ್ಲಿ  ಅವಳನ್ನು ಇರಿಸಿದರು. ಸರಿಯಾದ ಆರೈಕೆ ಪೂರೈಕೆಗಳಿಲ್ಲದೆ ಹುಡುಗಿ ಸೊರಗಿದ್ದಳು. ತನ್ನದಲ್ಲದ ತಪ್ಪಿಗೆ ತನ್ನವರಿಂದ ದೂರಾಗಿದ್ದಳು


ಕೊನೆಗೆ ಒಂದು ಹೆಣ್ಣು ಮಗುವನ್ನು ಹೆತ್ತು  ಉಸಿರೆಳೆದಳು..


ಹುಡುಗಿ ಪ್ಲೇಗ್ ಬಂದು ಸತ್ತಳೆಂದು ಊರಲ್ಲಾ ಸುದ್ದಿ ಹಬ್ಬಿಸಿದರು.


ಆ ಹೆಣ್ಣು ಮಗುವನ್ನು ತನ್ನದೇ ಮಗುವೆಂದು  ಅಕ್ಕ ಸಾರಿದಳು


 ಆ ಮಗುವೂ ಅವಳನ್ನೇ ತನ್ನ ಅಮ್ಮ ಎಂದು ಕೊಂಡು ಇಷ್ಟು ವರ್ಷ ( ಅರವತ್ತೈದು ವರ್ಷ )ನಂಬಿತ್ತು


ಇತ್ತೀಚಿಗೆ ಆ ಮಗು(ಈಗ ಅರವತ್ತೈದರ ವೃದ್ದೆ )ವಿಗೆ ಪಾಲಿನ ವಿಷಯ ಬಂದಾಗ ತಿಳಿಯಿತು. ಯಾರನ್ನು ತನ್ನವರೆಂದು ತಿಳಿದಿದ್ದರೋ ಅವರೆಲಾ ಈಗ  ಇವರನ್ನು ದೂರ ಮಾಡಿದ್ದಾರೆ.


ಇಂತಹ ಎಷ್ಟೊಂದು ಘಟನೆಗಳು ಬೆಳಕಿಗೆ ಬರದೇ ಇದ್ದಾವೋ.


 


 ಇಷ್ಟೊಂದು ವರ್ಷಗಳಿಂದ ಮೌನವಾಗಿ  ತಾಳಿಕೊಂಡಿದ್ದಳು ಹೆಣ್ಣು


ಅಂತಹ ಹೆಣ್ಣು ದನಿಯೆತ್ತಿದ ಕೂಡಲೆ ಅದನ್ನು ತಾಳಲಾರದೇ ಶೋಷಿತನಾದೆ ಎಂದು ಹಲುಬುವುದು ಸರಿಯಾ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಗಂಡಸರನ್ನು ಶೋಷಿಸುತ್ತಿರುವ ಇಂತ ಬೇಕಾದಷ್ಟು ಉದಾಹರಣೆಗಳು ನನ್ನ ಬಳಿ ಇವೆ, ಕಾಲ ಒಂದೇ ತರ ಇರೋದಿಲ್ಲ , ಸತ್ಯ ಅಂದರೆ ಈಗಿರುವ ಕಾನೂನು ಮಹಿಳೆಯರ ಪರವಾಗಿರುವು ಮಾತು ಅದನ್ನು ಬಹಳಷ್ಟು ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿರುವುದು

ಹೌದು ಕಾನೂನು ಪರವಾಗಿ ನಿಂತಿದೆ ಆದರೆ ಅದರ ಪ್ರಯೋಜನ ನಿಜಕ್ಕೂ ಅಗತ್ಯ ಇರುವವರಿಗೆ ಆಗುತ್ತಿದೆಯೇ ಎಂಬುದು ಮುಖ್ಯ. ಅಥವ ಈ ಕಾನೂನುಗಳು ಬಂದ ಮೇಲೆ ಹೆಂಗಳೆಯರ ಮೇಲಿನ ಶೋಷಣೆ ನಿಂತಿದೆಯೇ ಎಂಬುದೂ ಮುಖ್ಯ . ಕೆಳಗಿನವುಗಳು ಕೇವಲ ಉದಾಹರಣೆ ಮಾತ್ರ ಮದುವೆಯಾದ ಏಳು ತಿಂಗಳಲ್ಲಿ ಏಳು ಜನ್ಮಕ್ಕಾಗುವಷ್ಟು ಕಷ್ಟ ಅನುಭವಿಸಿದ ಲಕ್ಷ್ಮಿಯಂತಹ ಹುಡುಗಿಯರು, ಹದಿನಾಲ್ಕಕ್ಕೆ ವೇಶ್ಯಾವಾಟಿಕೆ ಇಳಿದಿರುವ ಮಂಗಳರಾಂತಹ ಮುಗ್ಧೆಯರು ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಬೆಂಗಳೂರಿನ ಬಾಲೆಯೊಬ್ಬಳಂತಹ ಕಂದಮ್ಮಗಳು , ಗಂಡನ ಮೇಲಿನ ಅತಿ ನಂಬಿಕೆ ಇಟ್ಟು ಅವನಿಂದಲೇ ಪ್ರಾಣ ಕಳೆದುಕೊಂಡ ಪ್ರಿಯಾಂಕ ಪ್ರೀತಿಸಿದವನಿಂದಲೇ ಬ್ಲೂ ಫಿಲಂ ಶೋಷಣೆಗೆ ಒಳಗಾದ ಮುಗ್ಧ ತರುಣಿ ಇನ್ನೂ ಅನೇಕರು ಇವೆಲ್ಲಾ ಬೆಳಕಿಗೆ ಬಂದವುಗಳು ಬೆಳಕಿಗೆ ಬಾರದಂತಹವುಗಳು ಬೇಕಾದಷ್ಟು ಇವೆ. ಹೆಣ್ಣಿನ ಪರ ಕಾನೂನನ್ನು ವಿರೋಧಿಸುವವರ ಮನಸ್ಥಿತಿ ಹಾಗು ಹೆಣ್ಣಗೆ ಮೀಸಲಾತಿ ಬೇಡವೆನ್ನುವವರ ಮನಸ್ಥಿತಿ ಒಂದೇ ಎಂಬುದು ನನ್ನ ಅಭಿಪ್ರಾಯ. ನಗರ ಪ್ರದೇಶದಲ್ಲಿನ ಬೆರಳೆಣಿಕೆಯ ಹೈಟೆಕ್ ಹೆಣ್ಣುಗಳು ಮಾಡುವ ನಖರಾಗಳಿಗೆ ಶೋಷಣೆ ಎಂಬ ದೊಡ್ಡ ಹೆಸರು ಕೊಡುವುದು ಅದನ್ನು ಹೆಣ್ಣು ಅನುಭವಿಸಿದ ಕಷ್ಟಗಳಿಗೆಲ್ಲಾ ಸಮೀಕರಿಸುವುದು ಸರಿಯಲ್ಲ ಎಂಬುದು ನನ್ನ ಭಾವನೆ

ಬಹಳಷ್ಟು ಸಾರಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವುದು ಮತ್ತೊಂದು ಹೆಣ್ನಿನಂದಲೇ ಅನ್ನುವುದು ಮರೆಯಬೇಡಿ, ಇವುಗಳ ಮಧ್ಯೆ ಗಂಡು ಪಡುವ ಮಾನಸಿಕ ತೊಳಲಾಟ ಯಾರಿಗೂ ತಿಳಿಯುವುದಿಲ್ಲ. ಬಹಳಷ್ಟು ಕಡೆ ಸೊಸೆಗೆ ಕಷ್ಟ ಕೊಡುವುದು ಅತ್ತೆ ( ಹೆಣ್ಣು ) ಅತ್ತೆ ಮಾವಂದಿರನ್ನು ಹೊರಗೆ ಹಾಕಿಸುವುದು ( ಹೆಣ್ಣು ) ಪರಪುರುಷನ ಸಂಗ ಮಾಡುವುದು ( ಹೆಣ್ಣು ) ಈ ಮೇಲಿನ ಎಲ್ಲ ಅಪವಾದಗಳು ಇದ್ದರು ಹೆಣ್ಣಿಗೆ ಶಿಕ್ಷೆ ಇಲ್ಲ. ಹೆಂಡತಿ ಆತ್ಮಹತ್ಯೆ ಮಾಡಿಕೊಂಡರೆ ಗಂಡ ಮತ್ತು ಅವನ ಮನೆಯವರಿಗೆ ( ವಿಚಾರಣೆ ) ಇಲ್ಲದೆ ಜೈಲು. ಅದೇ ಗಂಡ ಆತ್ಮಹತ್ಯೆ ಮಾಡಿಕೊಂಡರೆ ಹೆಂಡತಿ ಮತ್ತು ಮನೆಯವರಿಗೆ ಶಿಕ್ಷೆ ಯಾಕಿಲ್ಲ. ನನ್ನೊಬ್ಬ ಸ್ನೇಹಿತನ ಹೆಂಡತಿ ಕಡೆಯವರು ವರದಕ್ಷಿಣೆ ಕೇಸ್ ಹಾಕ್ತಿವಿ ಅಂತ ಬ್ಲಾಕ್ ಮೇಲ್ ಮಾಡಿದ್ದನ್ನ ಕಣ್ಣಾರೆ ನೋಡಿದ್ದೇನೆ. ಸಮಾನ ಹಕ್ಕುಗಳನ್ನು ಕೇಳುತ್ತಿರುವ ಹೆಂಗಸರು ಶಿಕ್ಷೆ ಮತ್ತು ವಿಚಾರಣೆಯನ್ನು ಸಮಾನವಾಗಿ ಹಂಚಿಕೊಳ್ಳಿ. <<ಹೆಣ್ಣಿನ ಪರ ಕಾನೂನನ್ನು ವಿರೋಧಿಸುವವರ ಮನಸ್ಥಿತಿ ಹಾಗು ಹೆಣ್ಣಗೆ ಮೀಸಲಾತಿ ಬೇಡವೆನ್ನುವವರ ಮನಸ್ಥಿತಿ ಒಂದೇ ಎಂಬುದು ನನ್ನ ಅಭಿಪ್ರಾಯ.>> ವಿಷಯ ಚರ್ಚೆಗೆ ಬಿದ್ದಾಗ ನೀವು ತೀರ್ಪು ಕೊಡುವುದು ತಪ್ಪು. ಮೇಲಿನ ವಾಕ್ಯ ತೀರ್ಪಿನ ರೀತಿಯಲ್ಲಿದೆ. ನಾನಿಲ್ಲಿ ಹೆಣ್ಣಿನ ಪರ ಕಾನೂನನ್ನು ವಿರೋದಿಸುತ್ತಿಲ್ಲ ಅದರಲ್ಲಿರುವ ನ್ಯುನತನೆಗಳನ್ನು ತಿಳಿಸಿದೆ. ಕಾನೂನು ತಪ್ಪು ಮಾಡುವರಿಗೆ ಎಚ್ಚರಿಕೆಯಾಗಬೇಕೆ ಹೊರತು ದಾರಿಯಾಗಬಾರದು ... ನಿಮ್ಮ ಕುತೂಹಲಕ್ಕಾಗಿ ತಿಳಿಸುತ್ತಿದ್ದೇನೆ www.savefamily.org ಇಲ್ಲಿಗೆ ಬೇಟಿ ಕೊಡಿ ಹೆಣ್ಣಿನ ಪರವಾದ ಕಾನೂನುಗಳು ಹೇಗೆ ದುರ್ಬಳಕೆಯಾಗುತ್ತಿವೆ ಎಂದು ತಿಳಿಯುತ್ತೆ

<<ಹೆಣ್ಣಿನ ಪರ ಕಾನೂನನ್ನು ವಿರೋಧಿಸುವವರ ಮನಸ್ಥಿತಿ ಹಾಗು ಹೆಣ್ಣಗೆ ಮೀಸಲಾತಿ ಬೇಡವೆನ್ನುವವರ ಮನಸ್ಥಿತಿ ಒಂದೇ ಎಂಬುದು ನನ್ನ ಅಭಿಪ್ರಾಯ.>> ಮೇಲೆ ಸರಳವಾಗಿ ಹೇಳಿದ್ದೇನೆ ಇದು ನನ್ನ ಅಭಿಪ್ರಾಯ. ಅಭಿಪ್ರಾಯಕ್ಕೂ ತೀರ್ಪಿಗೂ ವ್ಯತ್ಯಾಸವಿದೆ ಎಂದು ಭಾವಿಸುತ್ತೇನೆ ಬಹಳಷ್ಟು ಕಡೆ ಸೊಸೆಗೆ ಕಷ್ಟ ಕೊಡುವುದು ಅತ್ತೆ ( ಹೆಣ್ಣು ) ಅತ್ತೆ ಮಾವಂದಿರನ್ನು ಹೊರಗೆ ಹಾಕಿಸುವುದು ( ಹೆಣ್ಣು ) ಮೇಲಿನೆರೆಡು ವಿಷಯಗಳನ್ನು ಒಪ್ಪುಬಹುದು >>ಈ ಮೇಲಿನ ಎಲ್ಲ ಅಪವಾದಗಳು ಇದ್ದರು ಹೆಣ್ಣಿಗೆ ಶಿಕ್ಷೆ ಇಲ್ಲ. ದೂರು ಕೊಟ್ಟರಲ್ಲವೇ ವಿಚಾರಣೆ ನಡೆದು ಶಿಕ್ಷೆ ಸಿಗುವುದು? >>ಹೆಂಡತಿ ಆತ್ಮಹತ್ಯೆ ಮಾಡಿಕೊಂಡರೆ ಗಂಡ ಮತ್ತು ಅವನ ಮನೆಯವರಿಗೆ ( ವಿಚಾರಣೆ ) ಇಲ್ಲದೆ ಜೈಲು. ಅದೇ ಗಂಡ ಆತ್ಮಹತ್ಯೆ ಮಾಡಿಕೊಂಡರೆ ಹೆಂಡತಿ ಮತ್ತು ಮನೆಯವರಿಗೆ ಶಿಕ್ಷೆ ಯಾಕಿಲ್ಲ . ಸಂಶಯ ಬಂದರೆ ಎಲ್ಲರನ್ನೂ ವಿಚಾರಣೆಗೆ ಒಳಪಡಿಸುವ ಅಧಿಕಾರ ಕಾನೂನಿಗೆ ಇದೆ . >>ನನ್ನೊಬ್ಬ ಸ್ನೇಹಿತನ ಹೆಂಡತಿ ಕಡೆಯವರು ವರದಕ್ಷಿಣೆ ಕೇಸ್ ಹಾಕ್ತಿವಿ ಅಂತ ಬ್ಲಾಕ್ ಮೇಲ್ ಮಾಡಿದ್ದನ್ನ ಕಣ್ಣಾರೆ ನೋಡಿದ್ದೇನೆ. ಕೈ ಹಿಡಿದ ಹೆಂಡತಿಯನ್ನು ಮನೆ ಬಿಟ್ಟು ಓಡಿಸುವಂತಹ ಉದಾಹರಣೆಗಳೂ ಬೇಕಾದಷ್ಟು ಇವೆ ಇನ್ನು ನಾನೇನೂ ಪುರುಷದ್ವೇಷಿಯಲ್ಲ . ಕವಲು ಓದಿ ಮನಸು ಆತಂಕೊಗೊಂಡಿದ್ದೂ ಉಂಟು ನಮ್ಮ ನಾಗರೀಕತೆ ಎಲ್ಲಿಗೆ ಮುಟ್ಟುತ್ತಿದೆ ಎಂಬ ಯೋಚನೆಯೂ ಮೂಡಿತ್ತು. ಆದರೂ ಎಲ್ಲೋ ಹೆಣ್ಣಿನ ಹಕ್ಕಿಗೆ ಚ್ಯುತಿ ತರುವಂತಹ ಪರಿಸ್ಥಿತಿಗಳು ಬೇಕೆಂದೇ ಸೃಷ್ಟಿ ಗೊಳ್ಳುತ್ತಿವೆ ಎಂಬುದು ನನ್ನ ಅನಿಸಿಕೆ(ತೀರ್ಪಲ್ಲ )

ರೂಪಾ ಅವರೇ, ನಿಮ್ಮಂತೆಯೇ ಎಲ್ಲರೂ ಯೋಚಿಸಿದರೆ ಸಮಾಜದಲ್ಲಿ ಏನು ಉಳಿಯುತ್ತದೆ? ಗಂಡಸರಾಗಲಿ ಹೆಂಗಸರಾಗಲಿ ತಪ್ಪು ತಪ್ಪೇ ಎನ್ನಬೇಕೇ ಹೊರತು ಹೆಣ್ಣನ್ನು ಸಾವಿರ ವರ್ಷ ಶೋಷಿಸಿದ್ದಕ್ಕಾಗಿ ಈಗ ಗಂಡನ್ನು ಶೋಷಿಸುವುದು ತಪ್ಪಲ್ಲ ಎಂದರೆ ಹೇಗೆ?

<< ಈಗಲೂ ಆಗುತ್ತಿರುವುದು ಹೆಣ್ಣಿನದೇ >> ಹೆಣ್ಣಿನಿಂದಾಗಿ ಇಡೀ ಸಂಸಾರವೇ ಹಾಳಾದ ದುರಂತ ನನ್ನ ಕಣ್ಣ ಮುಂದೆಯೇ ಇದೆ, ನನ್ನ ಪರಿವಾರದಲ್ಲೇ. ಆಕೆಯ ದಬ್ಬಾಳಿಕೆಗೆ ಗಂಡನೂ ಸೇರಿ ಎಲ್ಲರೂ ಸೋತು ಸುಣ್ಣವಾಗಿದ್ದಾರೆ. ತನ್ನದೇ ಪತಿಯ ಮೇಲೆ ಕೈಮಾಡುವ ಆಕೆಯ ಬಗ್ಗೆ ಏನು ಹೇಳುತ್ತೀರಿ ಮೇಡಮ್?? ಈಗಲೂ ಆಗುತ್ತಿರುವುದು ಹೆಣ್ಣಿನದೇ ಅಂತ ಸುಲಭವಾಗಿ ತೀರ್ಪು ಕೊಟ್ಟುಬಿಟ್ಟಿರಲ್ಲ?? ಆ ಹೆಣ್ಣಿನ ದಬ್ಬಾಳಿಕೆ ಕೊನೆಗೊಳಿಸಲು ಯಾವ ದಾರಿಯಿದೆ? ಹಾಗೆಯೇ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆಯುವ ಸಂಸಾರಗಳೂ ನನಗೆ ಗೊತ್ತಿವೆ. ಆದರೆ ನಿಮ್ಮಂತೆ ತೀರ್ಪು ಕೊಡಲು ನನಗೆ ಬರದು.

ದಬ್ಬಾಳಿಕೆ ಎರೆಡೂ ಕಡೆ ನಡೆಯುತ್ತದೆ ಎಂಬುದು ನಿಜವಾದರೂ ಅನುಪಾತ ಮುಖ್ಯ x:nx ಼ ಎನ್ನುವುದು ಹೆಣ್ಣಿನ ದಬ್ಬಾಳಿಕೆ ಆಗಿದ್ದಲ್ಲಿ ಎನ್ನುವುದು ಅದರ n ರಷ್ಟು ದಬ್ಬಾಳಿಕೆ ದೌರ್ಜನ್ಯ ಹೆಣ್ಣಿನ ಮೇಲೆ ಆಗುತ್ತದೆ ಆ n ಎಷ್ಟು ಎಂಬುದು ಮುಖ್ಯ ಅಲ್ಲವೇ? ಎಲ್ಲೋ ಒಂದು ನೂರು ಅಥವ ಸಾವಿರ ಘಟನೆಗಳಲ್ಲಿ ಹೆಣ್ಣು ದಬ್ಬಾಳಿಕೆ ನಡೆಸುತ್ತಾಳೆಂದರೂ ಲಕ್ಷ ಲಕ್ಷ ಹೆಂಗಳೆಯರು ಗಂಡಸರಿಂದ ಅನುಭವಿಸುವ/ತ್ತಿರುವ ನೋವಿಗೆ ಅದು ಸಾಟಿಯೇ? ದಬ್ಬಾಳಿಕೆ ಶೋಷಣೆ ಎಂದ ಕ್ಷಣ ನೀವೇಕೆ ಮೇಲ್ವರ್ಗವನ್ನೇ ಗಮನದಲ್ಲಿಟ್ಟುಕೊಳ್ಳುತ್ತೀರಾ? ಕೊಂಚ ನಿಮಗಿಂತ ಕೆಳಗಿರುವವರನ್ನು ನೋಡಿ ಗಮನಕ್ಕೂ ಬಾರದೆ ದಿನ ದಿನ ಸಾಯುವ ಕೆಳವರ್ಗದ ಕೂಲಿ ಹೆಣ್ಣುಗಳ ಲೆಕ್ಕ ಇಟ್ಟೀದ್ದೀರಾ.? ಗಾರ್ಮೆಂಟ್ಸ್‌ನಲ್ಲಿ ಸೂಪರ್ವೈಸರ್ನ ಅಂಗ ಚೇಷ್ಟೇಗೆ ವಿರೋಧಿಸಿದರೆ ಕೆಲಸ ಎಲ್ಲಿ ಹೋಗುತ್ತದೆಯೋ ಎಂಬ ಭಯದಿಂದ ಕಲ್ಲಿನಂತೆ ನಿಂತು ಕಲ್ಲಾಗಿ ಹೋಗಿರುವ ಹುಡುಗಿಯರ ಲೆಕ್ಕ ಇಟ್ಟಿದ್ದೀರಾ? ಕುಡಿದು ಬಂದ ಗಂಡ ಒದ್ದರೂ ಚೆಂಡಾಡಿದರೂ ಮತ್ತೆ ಅವನಾಸೆ ತಣಿಸಲೇಬೇಕಾದ ಅನಿವಾರ್ಯತೆ ಇರುವ ಮನೆಗೆಲಸದ ಹೆಂಗಸರ ಲೆಕ್ಕ ಇಟ್ಟಿದ್ದೀರಾ ನಿಜವಾಗಲೂ ಸರಿ ಸಮಾನತೆ ಬೇಕಿರುವುದು ಇಂತಹ ವರ್ಗಗಳಿಗೆ . ಅಂತಹ ವರ್ಗಗಳಿಗೆ ಈ ಕಾನೂನಿನ ನಿಜವಾದ ಪ್ರಯೋಜನ ಬೇಕಿದೆ .

<< ದಬ್ಬಾಳಿಕೆ ಶೋಷಣೆ ಎಂದ ಕ್ಷಣ ನೀವೇಕೆ ಮೇಲ್ವರ್ಗವನ್ನೇ ಗಮನದಲ್ಲಿಟ್ಟುಕೊಳ್ಳುತ್ತೀರಾ? ಕೊಂಚ ನಿಮಗಿಂತ ಕೆಳಗಿರುವವರನ್ನು ನೋಡಿ >> ನೀವು ಕವಲು ಕಾದಂಬರಿಯನ್ನು ಪ್ರಸ್ತಾಪಿಸಿದ್ದರಿಂದ ನಾನು ಹಾಗೆ ಹೇಳಬೇಕಾಯಿತು. ಅದರಲ್ಲಿ ಬರುವುದು ಮೇಲ್ವರ್ಗದ ಹೆಣ್ಣು ನಡೆಸುವ ಶೋಷಣೆ. ಕೆಳವರ್ಗದಲ್ಲಿ ಹೆಣ್ಣಿನ ಮೇಲೆಯೇ ದೌರ್ಜನ್ಯ ಹೆಚ್ಚು ಎಂಬುದು ನಿಜ. ಹಾಗಂತ ಕೆಳವರ್ಗಕ್ಕೊಂದು ಕಾನೂನು ಮೇಲ್ವರ್ಗಕ್ಕೊಂದು ಕಾನೂನು ಮಾಡಲಾಗದು ಅಲ್ಲವೇ? << ನಿಜವಾಗಲೂ ಸರಿ ಸಮಾನತೆ ಬೇಕಿರುವುದು ಇಂತಹ ವರ್ಗಗಳಿಗೆ . ಅಂತಹ ವರ್ಗಗಳಿಗೆ ಈ ಕಾನೂನಿನ ನಿಜವಾದ ಪ್ರಯೋಜನ ಬೇಕಿದೆ >> ಕಾನೂನು ಬೇಡ ಎಂದು ಯಾರೂ ಹೇಳುತ್ತಿಲ್ಲ. ಅದರಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಎಂದಷ್ಟೇ ಹೇಳುತ್ತಿರುವುದು.

ನಿಮ್ಮ ಈ ವಾದ ಆಳವಿಲ್ಲದ್ದು. ೧. ನೀವು ಹೇಳಿದ ಕಥೆ ೬೫ ವರ್ಷ ಹಳೆಯದ್ದು!! ೬೫ ವರ್ಷಗಳಲ್ಲಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಎಷ್ಟೊಂದು ಮುಂದುವರೆದಿದ್ದೇವೆ! ಯಾವುದು ಅದೃಷ್ಟವೋ ಅದು ಈಗ ಹಕ್ಕು. ಈ ಕಥೆಗೂ "ಕವಲು" ಕಾದಂಬರಿಯ ಕಥಾವಸ್ತುವಿಗೂ ಹೇಗೆ ಸಂಬಂಧ ಕಲ್ಪಿಸುತ್ತೀರಿ? ೨. ಹೆಂಗಳೆಯರ ಮೇಲೆ ದಬ್ಬಾಳಿಕೆ ನಡೆದಿದೆ. ಇಂದಿಗೂ ಕೆಲವೆಡೆ ನಡಿದಿದೆ. ಆದರೆ ಈಗ ಅವರಿಗೂ ಸಮಾನ ಹಕ್ಕುಗಳಿವೆ! ಅಷ್ಟೇ ಅಲ್ಲದೆ ಸಮಾಜ ಕಟ್ಟಲು ಗಂಡಸಿನಷ್ಟೇ ಸಮಾನವಾದ ಜವಾಬ್ದಾರಿಗಳಿವೆ ಅಲ್ಲವೇ? ನೂರು ವರ್ಷಗಳ ಹಿಂದೆ ಅಷ್ಟು ಹಕ್ಕುಗಳಿರಲಿಲ್ಲ, ದಬ್ಬಾಳಿಕೆ ನಡೆದಿತ್ತು, ಈಗ ನಾವು ದಬ್ಬಾಳಿಕೆ ನಡೆಸಲು ಬಿಡಬೇಕು ಅನ್ನುವುದು ಹಾಸ್ಯಾಸ್ಪದ! ಸಾಮಾಜಿಕ ನ್ಯಾಯಕ್ಕೆ ವಿರೋಧ.

ಕವಲು ಹಾಗು ಈ ಕಥೆಗೂ ಸಂಬಂಧ ಕಲ್ಪಿಸಿಲ್ಲ ಅದರಲ್ಲಿ ಚಿತ್ರಿತ ವಾಗಿರುವ ಹೆಣ್ಣುಗಳು ಅಪರೂಪವೇ. ಆದರೆ ಕವಲು ಕಥೆಯ ಎಳೆ ಹಿಡಿದುಕೊಂಡು ಹೆಣ್ಣು ತಿರುಗಿಸಿ ಮಾತಾಡಿದರೆ ತಪ್ಪು ಎನ್ನುವ ಮಾತು ಸರಿಯಲ್ಲ . ಹಾಗೆ ನೋಡಿದಲ್ಲಿ ಕವಲಿನ ಜಯಕುಮಾರನು ಶೋಷಿತ ವರ್ಗಕ್ಕೆ ಸೇರುವವನಲ್ಲ ಅದು ಅವನ ಸ್ವಯಂಕೃತ ಅಪರಾಧ. ಅವನ ತೆವಲಿಗಾಗಿ ಹೆಣ್ಣೊಬ್ಬಳನ್ನು ಬಳಸಿಕೊಳ್ಳುತ್ತಾನಾದರೂ ಅವಳನ್ನು ಪತ್ನಿಯಾಗಿ ಸ್ವೀಕರಿಸುವ ಮನೋಭಾವ ಅವನಲ್ಲಿ ಕಾಣುವುದಿಲ್ಲ . ಹಾಗೆ ನೋಡಿದಲ್ಲಿ ಕವಲಿನಲ್ಲೂ ಆಗಿದ್ದು ಹೆಣ್ಣಿನ ಶೋಷಣೆಯೇ. ಆದರೆ ವಿಜ್ರಂಭಿಸುವುದು ಗಂಡಿನ ಪರಿತಾಪ ಮಾತ್ರ. ದಬ್ಬಾಳಿಕೆ ನಡೆಸಲು ಬಿಡಿ ಎಂದು ಕೇಳುತ್ತಿಲ್ಲ ದಬ್ಬಾಳಿಕೆಗೆ ಪ್ರತಿ ಉತ್ತರ ಕೊಡುವ ಹೆಣ್ಣಿನ ಭಾವನೆಗೆ ಬೆಲೆ ಕೊಡಿ ಎಂದಷ್ಟೇ ಕೇಳಿದ್ದು. ಸಾಮಾಜಿಕ ನ್ಯಾಯದ ಬಗ್ಗೆ ಹೇಳುವ ನೀವು ಮೇಲೆ ರಘುರವರ ಪ್ರತಿಕ್ರಿಯೆಗೆ ನಾನು ಕೊಟ್ಟ ಉದಾಹರಣೆಗಳಿಗೆ ಯಾವ ನ್ಯಾಯ ಒದಗಿಸುತ್ತೀರಾ. ಅಥವ ಸಾಮಾಜಿಕ ನ್ಯಾಯದ ಅಗತ್ಯ ಪುರುಷವರ್ಗಕ್ಕೆ ಮಾತ್ರ ಸೀಮಿತವಾಗಿದೆಯೇ?

<< ಅವನ ತೆವಲಿಗಾಗಿ ಹೆಣ್ಣೊಬ್ಬಳನ್ನು ಬಳಸಿಕೊಳ್ಳುತ್ತಾನಾದರೂ ಅವಳನ್ನು ಪತ್ನಿಯಾಗಿ ಸ್ವೀಕರಿಸುವ ಮನೋಭಾವ ಅವನಲ್ಲಿ ಕಾಣುವುದಿಲ್ಲ >> ಅವರಿಬ್ಬರ ಸಂಬಂಧ ಶುರುವಾದದ್ದೇ ತೆವಲಿನಲ್ಲಿ. ತೆವಲಿನಲ್ಲಿ ಶುರುವಾದ ಸಂಬಂಧಗಳೆಲ್ಲ ಮದುವೆಯಲ್ಲಿ ಸಮಾಪ್ತಿಯಾಗುವುದೇ? ಪ್ರೀತಿಸಿ ಒಂದಾಗುವುದಕ್ಕೂ ತೆವಲಿಗೆ ಸೇರುವುದಕ್ಕೂ ವ್ಯತ್ಯಾಸವಿಲ್ಲವೇ? << ದಬ್ಬಾಳಿಕೆ ನಡೆಸಲು ಬಿಡಿ ಎಂದು ಕೇಳುತ್ತಿಲ್ಲ ದಬ್ಬಾಳಿಕೆಗೆ ಪ್ರತಿ ಉತ್ತರ ಕೊಡುವ ಹೆಣ್ಣಿನ ಭಾವನೆಗೆ ಬೆಲೆ ಕೊಡಿ ಎಂದಷ್ಟೇ ಕೇಳಿದ್ದು >> ದಬ್ಬಾಳಿಕೆಗೆ ಪ್ರತಿ ಉತ್ತರ ದಬ್ಬಾಳಿಕೆ ನಡೆಸುವವನ ಮೇಲೆ ಆಗಬೇಕೆ ಹೊರತು ದಬ್ಬಾಳಿಕೆ ನಡೆಸುವ ಲಿಂಗದ (ಹೆಣ್ಣಿರಲಿ ಗಂಡಿರಲಿ) ಮೇಲಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರ ಎಳೆದಂತೆ ಇದೆ ನಿಮ್ಮ ಮಾತು.

ಹಾಗಿದ್ದಲ್ಲಿ ತೆವಲಿಗಾಗಿ ತನ್ನ ಕೈಕೆಳಗೆ ಕೆಲಸ ಮಾಡುವವರನ್ನೆಲ್ಲಾ ಹಾಸಿಗೆಗೆ ಕರೆಯಬಹುದಾ? ಸೋ ತೆವಲಿಗಾಗಿ ಒಬ್ಬಳು ಮದುವೆಗಾಗಿ ಒಬ್ಬಳು ಎಂಬ ಹೊಸ ನಾಗರೀಕತೆಗೆ ನಾಂದಿಯೇ ನಿಮ್ಮ ನುಡಿ? ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕಾಗಿತ್ತು ಹಾಗೆಯೇ ಮಂಗಳೆಗೂ ತಾನು ಮಾಡಿದ ತಪ್ಪಿಗೆ ಅವಳಿಗೂ ಶಿಕ್ಷೆಯಾಗಿದೆ >>ದಬ್ಬಾಳಿಕೆಗೆ ಪ್ರತಿ ಉತ್ತರ ದಬ್ಬಾಳಿಕೆ ನಡೆಸುವವನ ಮೇಲೆ ಆಗಬೇಕೆ ಹೊರತು ದಬ್ಬಾಳಿಕೆ ನಡೆಸುವ ಲಿಂಗದ (ಹೆಣ್ಣಿರಲಿ ಗಂಡಿರಲಿ) ಮೇಲಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರ ಎಳೆದಂತೆ ಇದೆ ನಿಮ್ಮ ಮಾತು. ತನ್ನ ಗಂಡ ದಬ್ಬಾಳಿಕೆ ನಡೆಸಿದರೆ ಅವನನ್ನು ಪ್ರಶ್ನಿಸುತ್ತಾಳೆಯೇ ಹೊರತು ಮತ್ತೊಬ್ಬರನ್ನಲ್ಲ. ದಬ್ಬಾಳಿಕೆ ಸಹಿಸಲಾರದಲ್ಲಿ ಮಾತ್ರ ಕಾನೂನಿನ ಮೊರೆ ಹೋಗುತ್ತಾಳೆ ಹೆಣ್ಣು. ಪ್ರೀತಿ ವಿಶ್ವಾಸ ಮಮತೆ ಇನ್ನೂ ಉಳಿದಿದೆ ಎಂದಾದಲ್ಲಿ ಅದು ಹೆಣ್ಣಿಂದ ಮಾತ್ರ ಅಂತಹ ಹೆಣ್ಣು ಸುಖಾ ಸುಮ್ಮನೇ ಕಾನೂನಿಗೆ ಮೊರೆ ಹೋಗುವುದಿಲ್ಲ ಇನ್ನು ಅಕಸ್ಮಾತ್ ಹೆಣ್ಣು ಸುಮ್ಮ ಸುಮ್ಮನೆ ಕಾನೂನಿನ ಮೊರೆ ಹೋಗುತ್ತಾಳೆಂದರೆ ಅಲ್ಲಿ ಅವರಿಬ್ಬರ ಸಂಬಂಧಕ್ಕೆ ಅರ್ಥವೇ ಇಲ್ಲ ಇಬ್ಬರಲ್ಲಿ ಒಬ್ಬರು ಸಂಬಂಧ ಕಿತ್ತೊಗೆದು ಬರಬೇಕಷ್ಟೇ

<< ಹಾಗಿದ್ದಲ್ಲಿ ತೆವಲಿಗಾಗಿ ತನ್ನ ಕೈಕೆಳಗೆ ಕೆಲಸ ಮಾಡುವವರನ್ನೆಲ್ಲಾ ಹಾಸಿಗೆಗೆ ಕರೆಯಬಹುದಾ? >> ಹಾಗೆಲ್ಲಿ ಹೇಳಿದೆ ನಾನು? ನಿಮ್ಮ ಮಾತು ಜಯಕುಮಾರ ಮಂಗಳೆಯನ್ನು ಬಲವಂತವಾಗಿ ಅಥವಾ ಕುಟಿಲ ಉಪಾಯದ ಮೂಲಕ ಬಲೆಗೆ ಹಾಕಿಕೊಂಡಿದ್ದಲ್ಲ. ಅವರಿಬ್ಬರೂ ಒಂದೇ ಮನಸ್ಥಿತಿಯವರಾಗಿದ್ದರು - ಅಂದರೆ ತೆವಲಿನ ಸಂಬಂಧ ಅವರಿಗಿಬ್ಬರಿಗೂ ಬೇಕಿತ್ತು - ಎಂದು ಹೇಳಿದೆ ಅಷ್ಟೆ. ಹಾಗಂತ ಎಲ್ಲಾ ಸಂದರ್ಭಗಳಲ್ಲೂ ಅದೇ ರೀತಿ ಇರಬೇಕಾಗಿಲ್ಲ. ಅಮಾಯಕ ಹೆಣ್ಣುಮಕ್ಕಳನ್ನು ಕೆಲಸ ತೆಗೆಸುವ ಬೆದರಿಕೆ ಒಡ್ಡಿ ಸಂಬಂಧ ಬೆಳೆಸುವವರುಬೇಕಾಷ್ಟಿದ್ದಾರೆ. ಆದರೆ ಕವಲು ಕಾದಂಬರಿಯಲ್ಲಿ ಆ ಥರ ಇರಲಿಲ್ಲ ಎಂದಷ್ಟೇ ಹೇಳಿದ್ದು. ನೀವು ಹೆಣ್ಣಿನ ಶೋಷಣೆಯನ್ನೂ ಕವಲನ್ನೂ ಒಂದೇ ಚರ್ಚೆಯಲ್ಲಿ ತಂದು ತಪ್ಪು ಮಾಡಿದ್ದೀರಿ. ಕವಲು ಹೇಳುವುದು ವರದಕ್ಷಿಣೆ ಕಾನೂನಿನ ದುರುಪಯೋಗದ ಬಗ್ಗೆ ಮಾತ್ರ. ಆ ಕಾನೂನು ಬೇಡವೇ ಬೇಡ ಎಂದೋ ಅಥವಾ ಜಗತ್ತಿನಲ್ಲಿರುವ ಶೋಷಣೆಗಳೆಲ್ಲೆಲ್ಲಾ ಗಂಡಿನ ಶೋಷಣೆ ಹೆಚ್ಚು ಎಂದೆಲ್ಲಾ ಹೇಳುವುದಿಲ್ಲ. ಹಾಗಾಗಿ ಕವಲಿನ ವಿಷಯ ಇಲ್ಲಿ ಅಪ್ರಸ್ತುತ. ಅದರ ಹೊರತಾಗಿ ನಿಮ್ಮ ವಾದವನ್ನು ಒಪ್ಪಬಹುದು. << ಸೋ ತೆವಲಿಗಾಗಿ ಒಬ್ಬಳು ಮದುವೆಗಾಗಿ ಒಬ್ಬಳು ಎಂಬ ಹೊಸ ನಾಗರೀಕತೆಗೆ ನಾಂದಿಯೇ ನಿಮ್ಮ ನುಡಿ? >> ಅಲ್ಲ. << ತನ್ನ ಗಂಡ ದಬ್ಬಾಳಿಕೆ ನಡೆಸಿದರೆ ಅವನನ್ನು ಪ್ರಶ್ನಿಸುತ್ತಾಳೆಯೇ ಹೊರತು ಮತ್ತೊಬ್ಬರನ್ನಲ್ಲ. ದಬ್ಬಾಳಿಕೆ ಸಹಿಸಲಾರದಲ್ಲಿ ಮಾತ್ರ ಕಾನೂನಿನ ಮೊರೆ ಹೋಗುತ್ತಾಳೆ ಹೆಣ್ಣು >> ಮೇಡಮ್, ನೀವು ಹೇಳಿದ ಕೆಳವರ್ಗದ ಹೆಣ್ಣು ಶೋಷಿತಳು ಎಂದಿಟ್ಟುಕೊಳ್ಳಿ. ಅದಕ್ಕಾಗಿ ಅವಳ ಗಂಡನಿಗೆ ಶಿಕ್ಷೆಯಾಗಬೇಕೋ ಅಥವಾ ಮೇಲ್ವರ್ಗದ ಕುಟುಂಬವೊಂದರಲ್ಲಿ ವರದಕ್ಷಿಣೆ ಕಾನೂನಿನ ಕೈಯಲ್ಲಿ ಸಿಕ್ಕಿ ನರಳುತ್ತಿರುವ ಗಂಡನಿಗೆ ಶಿಕ್ಷೆಯಾಗಬೇಕೋ? ಈ ವೈರುಧ್ಯವನ್ನೇ ನಾನು ಹೇಳಿದ್ದು. << ಪ್ರೀತಿ ವಿಶ್ವಾಸ ಮಮತೆ ಇನ್ನೂ ಉಳಿದಿದೆ ಎಂದಾದಲ್ಲಿ ಅದು ಹೆಣ್ಣಿಂದ ಮಾತ್ರ >> ಅಂದರೆ ಗಂಡು ಪ್ರೀತಿ ವಿಶ್ವಾಸ ತೋರಿಸಲು ಅನರ್ಹ ಎಂದಾಯಿತು. ನಿಮ್ಮ ವಾದದಂತೆ ಪ್ರೀತಿ ವಿಶ್ವಾಸ ತೋರಿಸದಿರುವುದೇ ಗಂಡಿನ ಗುಣವೇ, ಹಾಗಿದ್ದಲ್ಲಿ ಹೆಣ್ಣಿನ ಶೋಷಣೆಯೂ ಸಹಜ ಎಂದಾಯಿತಲ್ಲವೇ? << ಇನ್ನು ಅಕಸ್ಮಾತ್ ಹೆಣ್ಣು ಸುಮ್ಮ ಸುಮ್ಮನೆ ಕಾನೂನಿನ ಮೊರೆ ಹೋಗುತ್ತಾಳೆಂದರೆ ಅಲ್ಲಿ ಅವರಿಬ್ಬರ ಸಂಬಂಧಕ್ಕೆ ಅರ್ಥವೇ ಇಲ್ಲ ಇಬ್ಬರಲ್ಲಿ ಒಬ್ಬರು ಸಂಬಂಧ ಕಿತ್ತೊಗೆದು ಬರಬೇಕಷ್ಟೇ >> ಅದು ಹೇಗೆ ಹೊರಬರುವುದು ಸ್ವಲ್ಪ ಹೇಳ್ತೀರಾ? ಹೆಂಡತಿ ಕೇಳುವ ಕಾಂಪನ್ಸೇಶನ್ ಕೊಡಲು ಗಂಡನಿಗೆ ಸಾಧ್ಯವಾಗದಿದ್ದರೆ ಆತ ಏನು ಮಾಡಬೇಕು? ಈ ಸೂಕ್ಷ್ಮಗಳ ಚರ್ಚೆಯೇ ಕವಲು ಕಾದಂಬರಿಯಲ್ಲಿರುವುದು. ಅದನ್ನು ಆ ಹಿನ್ನೆಲೆಯಲ್ಲಿಯೇ ಓದಿ. ಬೇಕಿದ್ದರೆ ಹೆಣ್ಣಿನ ಶೋಷಣೆ ಬಗ್ಗೆಯೇ ಇನ್ನೊಂದು ಕಾದಂಬರಿ ಬರೆಯಲು (ಇದಕ್ಕಿಂತ ಹೆಚ್ಚು ಪುಟಗಳಿರುವ) ಹೇಳಬಹುದು.

ಕ್ಷಮಿಸಿ ಇದು ರೂಪ ರವರಿಗೆ ಪ್ರತಿಕ್ರಿಯೆ , ಅವಸರದಲ್ಲಿ ತಪ್ಪಾಯಿತು ನಾನು ಮೇಲೆ ಕೊಟ್ಟಿರುವ ಕೊಂಡಿಯನ್ನು ಓದಿದಿರಾ ತಿಳಿಸಿ, ಕವಲಿನಲ್ಲಿ ಪ್ರಸ್ತಾಪಿಸಿರುವ ವರದಕ್ಷಿಣೆ ಕಿರುಕುಳಗಳ ಬಗ್ಗೆ ಸಾಕಷ್ಟು ಜೀವಂತ ನಿದರ್ಶನಗಳು ಈ ಕೊಂಡಿಯಲ್ಲಿ ನಿಮಗೆ ಸಿಗುತ್ತವೆ. ನಿಮ್ಮ ಅರಿವಿಗೆ ಇರಲಿ ಎಂದು ತಿಳಿಸುತ್ತಿದ್ದೇನೆ IPC೩೦೪ಬಿ ಎಂಬ ಸೆಕ್ಷನ್ ತಂದದ್ದೇ ಮಹಿಳೆಯರ ಮೇಲಿನ ಶೋಷಣೆಯನ್ನು ನಿಲ್ಲಿಸುವುದಕ್ಕೆ ಆದರೆ, ಆದರ ಉಪಯೋಗ ಯಾವ ರೀತಿಯಲ್ಲಿ ಆಗುತ್ತಿದೆ ಎಂದು ಮೇಲೆ ಹೇಳಿರುವ ಕೊಂಡಿಯಲ್ಲಿ ನೋಡಿ, ಇದನ್ನು ನೋಡಿದ ಮೇಲೆ ನಿಮ್ಮ ಅಭಿಪ್ರಾಯ ಬದಲಾಗಬಹುದೆಂದು ನಂಬಿಕೆ. <<ಗಾರ್ಮೆಂಟ್ಸ್‌ನಲ್ಲಿ ಸೂಪರ್ವೈಸರ್ನ ಅಂಗ ಚೇಷ್ಟೇಗೆ ವಿರೋಧಿಸಿದರೆ ಕೆಲಸ ಎಲ್ಲಿ ಹೋಗುತ್ತದೆಯೋ ಎಂಬ ಭಯದಿಂದ ಕಲ್ಲಿನಂತೆ ನಿಂತು ಕಲ್ಲಾಗಿ ಹೋಗಿರುವ ಹುಡುಗಿಯರ ಲೆಕ್ಕ ಇಟ್ಟಿದ್ದೀರಾ?>> ಈ ನಿಮ್ಮ ಮೇಲಿನ ಸಾಲಿಗೆ ಉತ್ತರವಾಗಿ , ಈ ತರದ ಶೋಷಣೆ ಬರೀ ಹೆಣ್ಣಿಗೆ ಮಾತ್ರವಲ್ಲ , ಗಂಡಸಿಗೂ ಇದೆ . ಇತ್ತೀಚಿಗೆ siliconindia.com ಎಂಬ ಕಂಪನಿ ನಡೆಸಿದ ಸರ್ವೇ ಪ್ರಕಾರ ಗಂಡಸರಿಗಿಂತ ಮಹಿಳೆಯರು ತನ್ನ ಕೈ ಕೆಳಗೆ ಕೆಲಸ ಮಾಡುತ್ತಿರುವ ಗಂಡಸರನ್ನು ಜಾಸ್ತಿ ಶೋಷಣೆ ಮಾಡುತ್ತಾರೆಂದು ತಿಳಿದು ಬಂದಿದೆ. ಟೆಕ್ಕಿ ಗಳನ್ನೂ ಕೇಳಿ ನೋಡಿ ಅವರ ಬಾಸ್ ಮಹಿಳೆಯಾಗಿದ್ದಾರೆ ಅವರು ಪಡುವ ಪಾಡು ಎಂತದ್ದು ಅಂತ ತಿಳಿಯುತ್ತೆ.

ಎರಡು ಕೈ ಸೇರಿದರೆ ಚಪ್ಪಾಳೆ , ಅಲ್ಲಿ ಅವರಿಬ್ಬರೂ ಸೇರಿದ್ದು ಅದಕ್ಕೆ ಎಂದ ಮೇಲೆ ಶೋಷಣೆ ಎಲ್ಲಿಂದ ಬಂತು. ಪ್ರೀತಿಗೂ ಹಾದರಕ್ಕು ವ್ಯತ್ಯಾಸವಿದೆ .