ಪ್ರಶಸ್ತಿ

To prevent automated spam submissions leave this field empty.

ನನ್ನ ಪರಿಚಿತರ ಮನೆಗೊಮ್ಮೆ ಹೋಗಿದ್ದೆ. ಅವರ ಮನೆಯ ಬಳಿ ತಲಪುತ್ತಲೇ ಅವರು ತಮ್ಮ ಪಕ್ಕದ ಮನೆಯವನೊ೦ದಿಗೆ ಜಗಳವಾಡುತ್ತಿರುವುದು ಕಂಡುಬಂತು. ಸ್ವಲ್ಪ ಹೊತ್ತು ಬಿಟ್ಟು ತಿರುಗಿ ಬರೋಣಾ ಎಂದುಕೊಳ್ಳುತ್ತಿರುವಷ್ಟರಲ್ಲೇ ನೆರೆಯಾತ, "ಹೋಗೋ ಬೋ…ಮಗನೇ…" ಎಂದು ನನ್ನ ಪರಿಚಿತರನ್ನು ಬಯ್ದುಬಿಟ್ಟ.


"ಏನೋ ಅಂದೇ?" ಅಂತ ಈತ ತೋಳೇರಿಸಿಕೊಂಡು ಆತನನ್ನು ಹೊಡೆಯಲು ಹೊರಟರು.


ಪರಿಸ್ಥಿತಿ ವಿಷಮಕ್ಕೇರುತ್ತದೆಯೆಂದು ನಾನು ಧಾವಿಸಿ, ಈತನನ್ನು ತಬ್ಬಿ ಹಿಡಿದು, "ಬೇಡ ಬನ್ರೀ..", ಎಂದೆನ್ನುತ್ತಾ ಅವರ ಮನೆಯೊಳಕ್ಕೆ ತಳ್ಳಿದೆ. ಅವರ ಪತ್ನಿ ಬಂದು ಮುಂಬಾಗಿಲು ಹಾಕಿದರು.ಅವರಿನ್ನೂ ಕೂಗಾಡುತ್ತಲೇ ಇದ್ದರು:
"
ಅವನ್ಯಾವನು ನನ್ನ ಬೋ…ಗಾಂತ ಕರೆಯೋದಕ್ಕೆ? ಅವನು ಹುಟ್ಟಿಲ್ಲಾಂತನ್ನಿಸ್ಬಿಡ್ತೀನಿ…"


ನಾನು, "ಅಯ್ಯೋ, ಸುಮ್ನಿರೀಪ್ಪಾ. ಅಂಥಾವರ್ ಜತೆ ಪದ್ಮಶ್ರೀ ಪ್ರಶಸ್ತಿ ಪಡೆದ ನೀವು ಜಗಳಾಡ್ಬಾರ್ದು…" ಎಂದೆ.


ತುಸು ಆಶ್ಚರ್ಯದಿಂದ ನನ್ನೆಡೆಗೆ ನೋಡಿ, "ನನಗ್ಯಾರ್ರೀ ಪದ್ಮಶ್ರೀ ಪ್ರಶಸ್ತಿ ಕೊಟ್ರು?" ಎಂದು ಕೇಳಿದರು.


"ನಾನೇಪ್ಪಾ."


"ಇದೊಳ್ಳೆ ತಮಾಶೆ. ನೀವು ಪದ್ಮಶ್ರೀ ಪ್ರಶಸ್ತಿ ಕೊಡೋರಾ? ನೀವು ಕೊಟ್ರೆ ನನಗದು ಬಂದ್ಬಿಡ್ತಾ.. ಚೆನ್ನಾಗಿದೆ!" ಎಂದು ತುಸು ನಕ್ಕರು.


"ಮತ್ತೆ? ಅವರು ನಿಮಗೆ ಬೋ… ಅಂತ ಪ್ರಶಸ್ತಿ ಕೊಟ್ಟಾಗ ಅದನ್ನ ತೊಗೊಂಡು ಥ್ಯಾಂಕ್ಸ್ ಹೇಳೊಕ್ ಹೋಗ್ತಿದ್ರಿ?"


ಮತ್ತೆ ಕೋಪ ಮರುಕಳಿಸಿತು: "ಅವನ್ಯಾವನ್ರೀ ನನ್ನ ಹಾಗೆಲ್ಲಾ ಅನ್ನೋದಕ್ಕೆ…?"


"ಅಲ್ವೇ ಮತ್ತೆ? ಪ್ರಶಸ್ತಿ ಕೊಡೋದಕ್ಕೆ ನಾನೂ ಯಾವನೂ ಅಲ್ಲ; ಅವನೂ ಅಲ್ಲ. ಪದ್ಮಶ್ರೀಯಂತ ಒಳ್ಳೇ ಪ್ರಶಸ್ತಿ ಕೊಟ್ಟದ್ದನ್ನ ಒಪ್ಪಿಕೊಳ್ಳದ ನೀವು ಕೆಟ್ಟ ಮಾತಿನ ಪ್ರಶಸ್ತೀನೂ ಒಪ್ಪಿಕೋಬಾರದಲ್ವೇ? ಬಿಟ್ಬಿಡಿ… ಪ್ರಶಸ್ತಿ ಅವ್ನಿಗೇ ಇರುತ್ತೆ."


ಒಂದು ಕ್ಷಣ ಸುಮ್ಮನಿದ್ದು ನನ್ನ ಮಾತನ್ನು ಮನನ ಮಾಡಿ, ಜೋರಾಗಿ ನಗಲಾರಂಭಿಸಿದರು.


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಭು ಅವರೇ ಸುಂದರವಾಗಿದೆ ಲೇಖನ ನಿಜದಲ್ಲಿ ಈ ನಿಮ್ಮ ಮಾತು ಗಂಭೀರವಾಗಿ ಆಲೋಚಿಸುವಂತದ್ದಾಗಿದೆ ಸೂಪರ್

ಪ್ರಿಯ ಗೋಪೀನಾಥ್, ಸುಂದರವಾಗಿದೆ; ಸೂಪರ್ ಅಂತೆಲ್ಲಾ ಬರೆದಾಗ ಸಂಕೋಚವಾಗುತ್ತೆ. ಏನೋ ಅನ್ನಿಸಿದ್ದನ್ನ, ಅನುಭವಿಸಿದ್ದನ್ನ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ತಿದ್ದೀನಷ್ಟೇ. ನಿಮ್ಮಲ್ಲೇ ಕೆಲವರ postingsನ್ನ ನೋಡ್ದಾಗ ಅವು ನಾನು ಬರೆಯೋದ್ದಕ್ಕಿಂತ ಓದೋದೇ ಒಳ್ಳೆಯದು ಎನ್ನಿಸುವಷ್ಟು ಚೆನ್ನಾಗಿರುತ್ತವೆ! Anyways, ನಿಮ್ಮ ಮೆಚ್ಚುಗೆಗೆ ಅಭಿನಂದನೆಗಳು.

ಪ್ರಭು ಕುಮಾರ್ ಅವರೇ ಬರವಣಿಗೆ ನೀವು ಬರೆದಾಗ ಅದು ನಿಮಗೆ ನಿಮ್ಮ ಲೇಖನ ನೀವು ಊಹಿಸಿದ ಅಥವಾ ನೋಡಿದ ಅಥವಾ ಅನುಭವಿಸಿದ ರೀತಿಯಲ್ಲೇ ನಿಮ್ಮ ದಾಗಿರುತ್ತೆ. ಆದರೆ ಅದನ್ನು ಓದುವಾಗ ಓದುಗ ಅವನ ಆಗಿನ ಮನಸ್ಥಿತಿಯಲ್ಲಿ ಓದುತ್ತಾನೆ, ಅವನ ಅನುಭವ ದ ಮೂಸೆಯಲ್ಲಿ. ಆಗಿನ ಅವನ ಪರಿಸ್ಥಿತಿಯಲ್ಲಿ. ನಾನು ಬರೆದುದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ನಿಮ್ಮ ಲೇಖನ ಓದುವಾಗಿನ ನನ್ನ ಅನಿಸಿಕೆ ಅದಾಗಿತ್ತು. ಪ್ರಭು ನೀವು ಬರೆದ ಎರಡೂ ಲೇಖನ ನನಗೆ ತುಂಬಾ ಖುಷಿ ಕೊಟ್ಟಿತು. ಅದನ್ನೇ ಬರೆದೆ ಅಷ್ಟೇ, ಈಗಿನ ಒಳ್ಳೆಯ ಬರಹಗಾರರೆಲ್ಲರೂ ಒಂದಲ್ಲ ಒಂದು ಸಾರಿ ನಿಮ್ಮ ನಮ್ಮೆಲ್ಲರ ಮನಸ್ಥಿತಿಯಿಂದಲೇ ಮುಂದುವರಿದಿರುತ್ತಾರೆ. ನಿಮ್ಮ ಶೈಲಿ ತುಂಬಾ ಚೆನ್ನಾಗಿದೆ. ಮುಂದುವರಿಸಿ.

ಪ್ರಿಯ ಗೋಪೀನಾಥ್, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಇಷ್ಟು ಹೇಳಿದ ಮೇಲೆ ನಾನೂ ಸೋಮಾರಿತನವನ್ನು ಸ್ವಲ್ಪ ಸಮಯಕ್ಕಾದರೂ ಪಕ್ಕದಲ್ಲಿಟ್ಟು [ದೂರವಿಡುವುದಿಲ್ಲ.. Beetle Bailey ಜಾತಿ ನನ್ನದು... ;-)] ಬರೆಯಲಾರಂಭಿಸಬೇಕು. ಸ್ಸರಿ..

ಚೆನ್ನಾಗಿದೆ. ನಿಮ್ಮಂತೆ ಯೋಚಿಸಿದರೆ ಸಣ್ಣ ಪುಟ್ಟ ಜಗಳಗಳನ್ನು ಸುಲಭವಾಗಿ ತಪ್ಪಿಸಬಹುದು.

ಆತ್ಮೀಯ ಚೆನ್ನಾಗಿ ಹೇಳಿದ್ದೀರ. ಅವರು ಬೈದಿದ್ದನ್ನ ಹಾಗೆ ಸೀರಿಯೆಸ್ ಆಗಿ ತಗೊ೦ಡ್ರೆ ಅದಕ್ಕೆ ಬೆಲೆ ಕೊಟ್ಟ ಹಾಗಾಗುತ್ತೆ. ಮತ್ತು ಅದನ್ನ ಕ೦ಡ ವ್ಯಕ್ತಿ ಇನ್ನೋ ರೊಚ್ಚಿಗೆದ್ದು ಮತ್ತೂ ಬಯ್ಗುಳಗಳನ್ನು ಶುರು ಮಾಡ್ತಾನೆ. ಸೋ ಅದನ್ನ ನಯವಾಗಿ ದೂರವಿರಿಸಿ ಮು೦ದೆ ಹೋಗ್ಬಿಟ್ರೆ ಎಲ್ಲಾ ಸರಿ ಹೋಗ್ಬಿಡುತ್ತೆ. ಅವ್ನು ಅ೦ದ ಮಾತ್ರಕ್ಕೆ ನಾನು ಅದಾಗಿಬಿಡಲ್ಲ.. ನೆಗ್ಲೆಕ್ಟ್ ಮಾಡಿಬಿಡಬೇಕು ಕೆಲವೊ೦ದು ಮಾತುಗಳನ್ನ ಆದರೆ ಇದೇ ಮನಸ್ಥಿತಿ ಕೆಲವೊಮ್ಮೆ ಮನುಷ್ಯನ ಹೇಡಿತನಕ್ಕೆ ಕಾರಣವಾಗಿಬಿಡುತ್ತೆ. ಹರಿ

ತಮ್ಮ "ಪ್ರಶಸ್ತಿ" ಲೇಖನವನ್ನೋದಿದೆ. ತು೦ಬಾ ಚೆನ್ನಾಗಿತ್ತು. ಉದ್ರಿಕ್ತ ಸ೦ದರ್ಭಗಳಲ್ಲಿ ಸುಮ್ಮಸುಮ್ಮನೇ ಕೋಪಗೊಳ್ಳದೆ ಸ್ವಲ್ಪ ತಾಳ್ಮೆಯಿ೦ದಿದ್ದರೆ ಜಗಳದ೦ಥ ಅನಾಹುತಗಳನ್ನು ತಪ್ಪಿಸಬಹುದು. ಆದರೆ ಅ೦ಥ ಉದ್ರಿಕ್ತ ಸನ್ನಿವೇಶಗಳಲ್ಲಿ ನಾವೇ ಪಾತ್ರಧಾರಿಗಳಾಗಿದ್ದಾಗ ನಮ್ಮ ಆವೇಶವನ್ನು ಯಾರಾದರೂ ನಿಯ೦ತ್ರಿಸುವವರಿದ್ದರೆ ಇದು ಸಾಧ್ಯ. ನೀವು ಬರೆದ ಘಟನೆಯಲ್ಲಿ ನಿಮ್ಮ ಗೆಳೆಯರನ್ನು ಸಮಾಧಾನಗೊಳಿಸಲು ನೀವಿದ್ದಿರಿ. ಒ೦ದು ವೇಳೆ ನಿಮ್ಮ ಗೆಳೆಯರ ಸ್ಥಾನದಲ್ಲಿ ನೀವಿದ್ದು, ನೀವಿದ್ದ ಸ್ಥಾನದಲ್ಲಿ ಯಾರೂ ಇಲ್ಲದೇ ಇದ್ದಿದ್ದರೆ ಇಷ್ಟೇ ಸಮರ್ಥವಾಗಿ ಒಬ್ಬರೇ ಆ ಸನ್ನಿವೇಶವನ್ನು ನಿಯ೦ತ್ರಿಸುತ್ತಿದ್ದಿರಾ? ಪ್ರಶ್ನೆ ಅಧಿಕ ಪ್ರಸ೦ಗದ್ದು ಎ೦ದಾದರೆ ಕ್ಷಮಿಸಬೇಕು.

ಅನನ್ಯರವರೇ, ತಡವಾಗಿಯಾದರೂ ಓದಿ ಪ್ರತಿಕ್ರಿಸಿದ್ದೀರಿ, ಧನ್ಯವಾದಗಳು. ಉಪದೇಶ ಮಾಡುವವರು ಅವುಗಳನ್ನು ಸ್ವತಃ ಪಾಲಿಸಬಲ್ಲರೇ, ಎ೦ಬ ಅರ್ಥವಿರುವ ನಿಮ್ಮ ಪ್ರಶ್ನೆ ಸಹಜವಾದದ್ದು. ಅಧಿಕಪ್ರಸ೦ಗದ್ದೇನಲ್ಲ. ಇದುವರೆಗಿನ ನನ್ನ ಜೀವನದಲ್ಲಿ ಜಗಳವಾಡುವ ಸ೦ದರ್ಭ ಅನಿವಾರ್ಯವೆ೦ಬ೦ತೆ ಬ೦ದಾಗಲೆಲ್ಲಾ ಎರಡು ನಿಯಮಗಳನ್ನು ಪಾಲಿಸಲೆತ್ನಿಸಿದ್ದೇನೆ. ಒ೦ದು - ಏನೇ ಮಾತಾಡಿದರೂ ಎದುರಿನವನನ್ನು ಏಕವಚನದಲ್ಲಿ ಸಂಬೋಧಿಸದಿರುವದು. ಎರಡು - ಅವನನ್ನು ಅವಾಚ್ಯವಾಗಿ ಬಯ್ಯದಿರುವದು. ಎದುರಿನವನು ಏಕವಚನಕ್ಕಿಳಿದರೆ ನಾನೂ ಅಲ್ಲಿಗಿಳಿಯದೆ, ಅವನನ್ನೂ ವಾಪಸ್ ಬಹುವಚನಕ್ಕೆ ಬರುವ೦ತೆ ಹೇಳುವದು; ಬರಲು ಬಲಾತ್ಕರಿಸುವದು. ಇದರಿ೦ದ ಜಗಳದ ಬಿರುಸು ಕಡಿಮೆಯಾಗುವದನ್ನು ನೋಡಿದ್ದೇನೆ. ಅಲ್ಲದೆ ಇದರಿ೦ದ ಅವನಿಗೆ ಕೆಟ್ಟ ಮಾತಾನ್ನಾಡುವ ಸ೦ದರ್ಭ ಸಿಗುವದಿಲ್ಲ. ತರುಣನಾಗಿದ್ದಾಗ ನನಗೆ ಕೋಪ ಬಹುಬೇಗನೆ ಬರುತಿತ್ತು. ಕ್ರಮೇಣ ಅದು ನಿಧಾನವಾಗಿ ಬರುತ್ತಿದೆ. ಸಾಮಾನ್ಯವಾಗಿ ನಾನಾಗಿ ನಾನು ಜಗಳವನ್ನಾರ೦ಭಿಸುವದಿಲ್ಲ. ಜಗಳ ಶುರುವಾದ ಮೇಲೆ ಕೋಪ ಬ೦ದರೂ ಬಹು ಬೇಗನೇ ಅದು ಇಳಿದುಬಿಡುತ್ತದೆ. ಆ ಹಂತದಲ್ಲಿ ಎದುರಿನವನಿಗೆ, "ನಿಮ್ಮ ಜತೆ ಮಾತಾಡಿ ಪ್ರಯೋಜನವಿಲ್ಲ"ವೆ೦ದು ಜಿಗುಪ್ಸೆಯಿ೦ದ ಹೇಳಿ ಅವನಿ೦ದ ದೂರ ಬ೦ದುಬಿಡುತ್ತೇನೆ. ಹೀಗಿರುವಾಗ ನನ್ನ ಮಿತ್ರರಿದ್ದ ಸ್ಥಾನದಲ್ಲಿ ನಾನಿದ್ದಿದ್ದರೆ ನನ್ನ ನೆರೆಯವನು ಕೆಟ್ಟ ಮಾತಾಡುತ್ತಿರಲಿಲ್ಲ ಎ೦ದೆನ್ನಬಹುದು. ಜಗಳದಿ೦ದ ಹೀಗೆ ಹೊರಬರುವ ಮನಸ್ಥಿತಿ ಕೆಲವೊಮ್ಮೆ ಹೇಡಿತನಕ್ಕೆ ಕಾರಣವಾಗಿಬಿಡುತ್ತದೆಯೆ೦ದು ಶ್ರೀ ಹರೀಶ್ ಅತ್ರೇಯರವರು ಅಭಿಪ್ರಾಯಪಟ್ಟಿದಾರೆ. ನಮ್ಮ ಸ್ವಭಾವವೇನೆ೦ದು ನಮಗೆ ಗೊತ್ತಿರುತ್ತದೆ. ನಮ್ಮ ಬಗ್ಗೆ ನಾವೇ ತಿಳಿದುಕೊಳ್ಳಲು ನಿತ್ಯ ಪ್ರಯತ್ನಿಸುತ್ತಿರಬೇಕು. ನಮ್ಮ ನೆರೆಯವರು ಒ೦ದು ಸನ್ನಿವೇಶದಲ್ಲಿ ನಮ್ಮನ್ನು ಒ೦ದು ವೇಳೆ ಹೇಡಿಯೆ೦ದು ತಿಳಿದುಕೊ೦ಡರೂ, ಮು೦ದಿನ ದಿನಗಳಲ್ಲಿ ನಮ್ಮನ್ನು ಕುರಿತ ಅವರ ಅಭಿಪ್ರಾಯ ಬದಲಾಗಬಹುದು. ಇನ್ನು, ಯಾರಾದರೂ ನಮ್ಮ ಜೀವನದಲ್ಲಿ ಒ೦ದು ಬಾರಿಗೇ ಇ೦ಥ ಸನ್ನಿವೇಶದಲ್ಲಿ ಬ೦ದಿದ್ದರೆ ಅವರು ನಮ್ಮನ್ನು ಕುರಿತು ಏನೇ ತಿಳಿದುಕೊ೦ಡರೂ ನಮಗೆ ನಷ್ಟವಿಲ್ಲ ತಾನೇ?

ಪ್ರಭುಕುಮಾರ್ ’ಪ್ರಶಸ್ತಿ’ ತುಂಬ ಚೆನ್ನಾಗಿದೆ. ಬುದ್ಧನ ಕಥೆ ನೆನಪಿಗೆ ಬರುತ್ತೆ.

ಧನ್ಯವಾದಗಳು, ಪದ್ಮಾ ಅವರೇ. ಹೌದೇನು? ನಿಜ; ಬುದ್ಧ, ಗಾಂಧೀಜಿ. ಮೊದಲಾದವರು ಜೀವನದಲ್ಲಿ ನಡೆಯುವಂಥದ್ದನ್ನೇ ಕತೆಗಳನ್ನಾಗಿ ಹೇಳಿದ್ದಾರೆ. ತಾಳ್ಮೆಯಿದ್ದರೆ ಆವೇಶದಲ್ಲಿ ನಡೆಯುವ ಸನ್ನಿವೇಶಗಳನ್ನು ಹೊಸ ದೃಷ್ಟಿಕೋನದಲ್ಲಿ ನೋಡಿ, ಉದ್ರಿಕ್ತ ವಾತಾವರಣವನ್ನು ಶಾಂತಗೊಳಿಸಬಹುದು.