ಪತಂಜಲಿಯ ಯೋಗ ಭಾಗ ೬

To prevent automated spam submissions leave this field empty.

ಪತಂಜಲಿಯ ಯೋಗ ಭಾಗ ೬

ಆರನೆಯ ಲೇಖನ

ಮನಸ್ಸಿನಲ್ಲಿ ತಾನೇತಾನಾಗಿ ಹುಟ್ಟುವ ಈ ಕ್ಲೇಷವೃತ್ತಿಗಳನ್ನು ಧ್ಯಾನದಿಂದ ಹುಟ್ಟದಂತೆ ಮಾಡಬಹುದು.
ಧ್ಯಾನದಿಂದ (ಕ್ಲೇಷಗಳಿಂದ ಉಂಟಾಗುವ) ಈ ವೃತ್ತಿಗಳನ್ನು ಕೊನೆಗಾಣಿಸಬಹುದು.ಯೋ.ಸೂ.ಪಾದ೨. ಸೂತ್ರ.೧೧
ಪರಿಣಾಮ ದುಃಖ, ತಾಪಗಳಿಂದ ಉಂಟಾಗುವ ದುಃಖ, ಸಂಸ್ಕಾರ ದುಃಖ ಇದಲ್ಲದೆ ಮನಸ್ಸಿನಲ್ಲಿ ಗುಣ ವೃತ್ತಿಗಳ ಪರಸ್ಪರ ವಿರೋಧ ಇವುಗಳನ್ನು ನೋಡಿದ ವಿವೇಕಿಗೆ ಸ‍ರ್ವವೂ ದುಃಖ; ದುಃಖ ಬಿಟ್ಟರೆ ಬೇರೇನೂ ಇಲ್ಲ ಎಂಬ ಅರಿವುಂಟಾಗುತ್ತದೆ.ಯೋ.ಸೂ.ಪಾದ೨. ಸೂತ್ರ.೧೫.
ಇಲ್ಲಿ ಪರಿಣಾಮ ದುಃಖ ಎಂದರೆ ಬದಲಾವಣೆಗಳು ತಂದೊಡ್ಡುವ ದುಃಖ. ತಾಪಗಳಿಂದ ಉಂಟಾಗುವ ದುಃಖ ಮೊರು ಬಗೆ-ಆಧ್ಯಾತ್ಮಿಕ(ಮನಸ್ಸಿನೊಳಗೇ ಕಾಮ ಕ್ರೋಧ ಮುಂತಾದುವುಗಳಿಂದ ಬರುವ ದುಃಖ), ಆದಿಭೌತಿಕ(ಹೊರಗಡೆಯ ಪ್ರಾಪಂಚಿಕ ಘಟನೆಗಳಿಂದ ಬರುವ ದುಃಖ), ಆದಿದೈವಿಕ(ಪ್ರಾಪಂಚಿಕವಲ್ಲದ,ಮನಸ್ಸಿಗೆ ನಿಲುಕದ ಕಾರಣಗಳಿಂದ ಬರುವ ದುಃಖ).ಆದ್ದರಿಂದ ಇವು ತಾಪತ್ರಯಗಳು. ನಾವು ಮಾಡಿದ ಕೆಲಸ, ಮನದಲ್ಲುಂಟಾದ ವೃತ್ತಿಗಳಿಂದ ಬಂದ ಸಂಸ್ಕಾರವೂ ದುಃಖವನ್ನು ಕೊಡುತ್ತದೆ. ಮನಸ್ಸಿನಲ್ಲಿ ಸತ್ವಗುಣ,ರಜೊಗುಣ ಮತ್ತು ತಮೊಗುಣಗಳಿರುತ್ತವೆ. ಹೊರಗಿನಿಂದ (ಪಂಚೇಂದ್ರಿಯಗಳಿಂದ) ಬಂದ ಸಂವೇದನೆಗೆ ಗುಣ ಮತ್ತು ವೃತ್ತಿಗಳ ವಿರೋಧಿ ಮೇಲಾಟ ನಡೆದು ಯಾವುದಾದರೊಂದು ಕ್ಲೇಷಭಾವನೆ ಪ್ರಕಟವಾಗುತ್ತಲೇ ಇರುತ್ತದೆ. ಕ್ಲೇಷ, ಕರ್ಮ, ವಿಪಾಕ, ಆಶಯ ಇವುಗಳಿಂದ ಹೊರತಾದ ಸ್ಥಿತಿಯನ್ನು ವಿವೇಕಿ ಬಯಸುತ್ತಾನೆ. ಏಕೆಂದರೆ ಅದು ಬದಲಾವಣೆ ಇಲ್ಲದ ಸ್ಥಿತಿ. ದುಃಖಾತೀತ-ಕಾಲಾತೀತ ಆನಂದದ ಸ್ಥಿತಿ.
ಆದ್ದರಿಂದಲೇ ಯೋ.ಸೂ.ಪಾದ೨. ಸೂತ್ರ.೧೬ ಹೇಳುತ್ತದೆ:ಬರಲಿರುವ ದುಃಖವನ್ನು ತಡೆಯಬಹುದು.
ಈ ಕ್ಲೇಷಗಳು ನಾವು ಮಾಡುವ ಕರ್ಮ ಮತ್ತು ಆಸೆಗಳ ಫಲ. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ; ಕೆಟ್ಟ ಕೆಲಸಕ್ಕೆ ಕೆಟ್ಟ ಫಲ. ಇದು ನಿಶ್ಚಯ. ನಾವು ಮಾಡಿದ ಕ‍ರ್ಮಕ್ಕೆ ತಕ್ಕ ಪ್ರತಿಫಲ ಈ ಜನ್ಮದಲ್ಲಿ ಸಿಗದಿದ್ದರೆ ಅದು ವಿಪಾಕವಾಗಿ ನಾವು ಮುಂದಿನ ಜನ್ಮದಲ್ಲಿ ಎಲ್ಲಿ ಹುಟ್ಟುತ್ತೇವೆ, ಎಷ್ಟು ಆಯಸ್ಸು ಮತ್ತು ಏನು ಸುಖ ದುಃಖ ಅನುಭವಿಸುತ್ತೇವೆ ಎಂಬುದರ ನಿ‍ರ್ಣಯವಾಗುತ್ತದೆ. ಮನುಷ್ಯನ ಈಡೇರದ ಆಸೆಗಳು ಸಹ ಪುನರ್ಜನ್ಮಕ್ಕೆ ಕಾರಣವಾಗುತ್ತದೆ. ಹೀಗೆ ಮನುಷ್ಯನು ಜನ್ಮ-ಕರ್ಮ-ಸುಖದುಃಖ-ಮರಣ-ಜನ್ಮ-ಕರ್ಮ-ಸುಖದುಃಖ-ಮರಣ ಈ ನಿರಂತರವೃತ್ತದಲ್ಲಿ ಸಿಕ್ಕಿಕೊಂಡಿರುತ್ತಾನೆ.
ಈಗಾಗಲೇ ನಮ್ಮೊಡನಿರುವ ಕ‍ರ್ಮದ ಬುತ್ತಿ ತೀರುವವರೆಗೆ ಸುಖದುಃಖ ಅನುಭವಿಸಲೇ ಬೇಕು. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ವಿವೇಕಿಯಾದವನು ಮುಂದೆ ಬರುವ ದುಃಖವನ್ನಾದರೂ ತಡೆಯಲು ಬಯಸುತ್ತಾನೆ.
ಹೇಗೆಂದರೆ ದೃಷ್ಟ ಮತ್ತು ದೃಶ್ಯಗಳ ಸಂಯೋಗವೇ (ವೃತ್ತಿ ಸಾರೂಪ್ಯವೇ)ಈ ಎಲ್ಲಾ ದುಃಖಗಳಿಗೂ ಕಾರಣ. ಇಲ್ಲಿ ದೃಶ್ಯವೆಂದರೆ ಪ್ರಕೃತಿ. ಇದು ಪಂಚೇಂದ್ರಿಯಗಳ ಸಹಾಯದಿಂದ ತಿಳಿಯುವ ಎಲ್ಲಾ ಚರಾಚರ ವಸ್ತುಗಳಿಗೂ ಅನ್ವಯಿಸುತ್ತದೆ. ಅವಿದ್ಯೆಯೇ ಈ ದುಃಖಕ್ಕೆ ಮೊಲ. ಅವಿದ್ಯೆ ಇಲ್ಲದಿದ್ದರೆ
ವೃತ್ತಿ ಸಾರೂಪ್ಯವಿಲ್ಲದಂತಾಗುತ್ತದೆ-ಆಗ ದೃಷ್ಟ ತನ್ನ ಸ್ವರೂಪದಲ್ಲಿರುತ್ತಾನೆ. ಇದೇ ಕೈವಲ್ಯ.
ಅವಿದ್ಯೆ ಇಲ್ಲದಂತೆ ಮಾಡಲು ವಿವೇಕಖ್ಯಾತಿ ಎಂಬ ಪ್ರಜ್ಞಾಸ್ಥಿತಿಯನ್ನು ಹೊಂದಬೇಕು. ಯೋಗಾಂಗಗಳ ಆಚರಣೆಯಿಂದ ಮನಸ್ಸಿನ ಅಶುದ್ದಿ ಕ್ಷೀಣಿಸಿ ಜ್ಞಾನಹೆಚ್ಚುತ್ತಾ ಹೋಗಿ ಕೊನೆಗೆ ವಿವೇಕಖ್ಯಾತಿ ಎಂಬ ಪ್ರಜ್ಞಾಸ್ಥಿತಿಯನ್ನು ಹೊಂದುತ್ತದೆ.ಯೋ.ಸೂ.ಪಾದ೨. ಸೂತ್ರ.೨೮
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಯೇ ಯೋಗದ ೮ ಅಂಗಗಳು.ಯೋ.ಸೂ.ಪಾದ೨. ಸೂತ್ರ.೨೯. ಆದ್ದರಿಂದ ಪತಂಜಲಿಯ ಈ ಯೋಗಕ್ಕೆ ಅಷ್ಟಾಂಗಯೋಗವೆಂದೂ ಹೆಸರಾಗಿದೆ.
ಇವುಗಳ ಬಗ್ಗೆ ಹೆಚ್ಚಿನ ವಿವರಣೆ ಮುಂದಿನ ಲೇಖನದಲ್ಲಿ ನೋಡಬಹುದು.

ಮುಂದುವರೆಯುವುದು...
೨/೯/೦೫

ಲೇಖನ ವರ್ಗ (Category):