ಪ್ರೀತಿಸಿದರೆ.........!

To prevent automated spam submissions leave this field empty.

ಮೊನ್ನೆ ಸೋಮವಾರ ಆಫೀಸಿಗೆ ಹೋದಾಗ ನಂಗೆ  ಆಘಾತ ಕಾದಿತ್ತು..ನನ್ನ ಜೊತೇನೆ ಜಾಯಿನ್ ಆಗಿದ್ದ ಸ್ನೇಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು ..ಕಾರಣ  ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಕೊಡಲು ಮನೆಯವರು  ಒಪ್ಪಲಿಲ್ವಂತೆ ..ತಂದೆ ತಾಯಿಯ ಮೇಲಿನ ಸಿಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು ..!ಎತ್ತ ಸಾಗುತ್ತಿದೆ ಇಂತಹ ಕುರುಡು ಪ್ರೀತಿ.. ಇವಳಿಗೆ ನಾವು ಏನು ಕಮ್ಮಿ ಮಾಡಿದ್ದೇವೋ ಅನ್ನೋ ಅವಳ ಅಪ್ಪನ ಅಳು ಇನ್ನೂ ಕಿವಿಯಲ್ಲಿದೆ.. ಬಹುಶಃ ಅವರಿಗೆ ಗೊತ್ತಿರಲ್ಲಿಕ್ಕಿಲ್ಲ,  ಏನೂ ಕಮ್ಮಿ ಮಾಡಿಲ್ಲ ಆದ್ದರಿಂದಲೇ ಹೀಗಾಗಿದ್ದು ಅಂತ  ..ಮುದ್ದು ಸ್ವಲ್ಪ ಕಮ್ಮಿ ಮಾಡಿದ್ದಿದ್ದರೆ ಹೊರಗಿನ ಪ್ರೀತಿಯನ್ನು ಹೀಗೆ ಸತ್ತು ಹೋಗುವಷ್ಟು ಹಚ್ಚಿಕೊಂಡಿರುತ್ತಿರಲಿಲ್ಲವೇನೋ  .. ಸಾಮನ್ಯವಾಗಿ ಯಾವ ಪ್ರೀತಿ ಸಿಗೊದಿಲ್ಲವೋ ಅದನ್ನೇ ಹುಡುಕಿಕೊಂಡು ಹೋಗುತ್ತದೆ ಮನಸ್ಸು..ಹೆತ್ತವರ ಪ್ರೀತಿ ಸ್ವಲ್ಪ ಕಡಿಮೆಯಾಗಿದ್ದರೆ ಮನಸ್ಸು ಅದಕ್ಕೆ ಹಾತೊರೆಯುತಿತ್ತೇನೋ..!

 

ಮೊದಲೆಲ್ಲ ಪ್ರೀತಿ ಪ್ರೇಮಕ್ಕೆ ಅದರದೇ ಆದ ಅರ್ಥ, ವ್ಯಾಖ್ಯಾನ ಇದ್ದಿತ್ತು ...ಪವಿತ್ರ ಪ್ರೇಮದ ಹಿನ್ನಲೆಯಲ್ಲಿ ಅದೆಷ್ಟೋ ದಂತ ಕಥೆಗಳಿವೆ ,ಗ್ರಂಥಗಳಿವೆ .ಮರೆಯಲಾಗದ ಹಾಡುಗಳಿವೆ ,ಶ್ರೇಷ್ಠ ಚಿತ್ರ ಗಳಿವೆ, ಅದ್ಭುತ ಸ್ಮಾರಕಗಳಿವೆ  ... ಪ್ರೀತಿಸಿ ಅವರನ್ನು ಪಡೆಯುವ ಅಥವಾ ಅದರ ಅಡೆ ತಡೆಗಳನ್ನು ಎದುರಿಸುವ ಅಥವಾ ಅಳಿದು ಅಮರರಾದ ಹಿನ್ನಲೆಗಳವು..ಈಗಿನ ಪ್ರೀತಿಯೋ ಅದರ ಸ್ಥಿತಿಯೋ ಅವರಿಗೆ ಪ್ರೀತಿಯಾಗಬೇಕು.. ಪ್ರೀತಿ  ಅಂದರೆ ದಿನಕ್ಕೊಂದು ಕಡೆ ಪಾರ್ಕು ,ಸಿನೆಮಾ, ಔಟಿಂಗ್, ಡೇಟಿಂಗ್ ಅಂತ ಬಾಯ್ ಫ್ರೆಂಡ್ಸ್ /ಗರ್ಲ್ ಫ್ರೆಂಡ್ಸ್ ಗಳೊಂದಿಗೆ ಸುತ್ತಾಡಿ ,ರಾತ್ರಿ ಇಡೀ ಚಾಟ್ ಮಾಡಿ ಇನ್ ಬಾಕ್ಸ್ ಗೆ  ಮಿಸ್ ಯು ಗಳನ್ನು ಕಳಿಸೋದಾ?,ಕಾಲೇಜಲ್ಲೋ ಅಥವಾ ಆಫಿಸಲ್ಲೋ ಹಿಂದಿನ ಸಲದ ಮಾತು ,ನೋಟ,ಸ್ಪರ್ಶ, ಚಿಕ್ಕ ಜಗಳ ಗಳ ನೆನಪಿಸಿಕೊಳ್ಳುತ್ತಾ  ಮೊಬೈಲಿನ  ಸ್ಕ್ರೀನ್ ಸೇವೆರ್ ನಲ್ಲಿನ ಅವರ ಫೋಟೋವನ್ನೇ ನೋಡೋದಾ? ಅಥವಾ ಊಟ ನಿದ್ದೆಯ ಪರಿವೆ ಇರದೇ ಅವರನ್ನೇ ಧ್ಯಾನಿಸುತ್ತ ಕೂರೋದಾ ?

 

ಇನ್ನೊಂದು ನನಗೆ ಅರ್ಥವಾಗದ ವಿಷಯ."ಲವ್ ಅಟ್ ಫಸ್ಟ್ ಸೈಟ್ " ಅನ್ನೋದು ..ಹಾಗಂದ್ರೇನು ? ಮೊದಲ ನೋಟಕ್ಕೆ ಪ್ರೀತಿ ಮೊಳೆತು ಬಿಡುತ್ತಾ? ಹಾಗಾದ್ರೆ ಒಂದ್ವೇಳೆ ಅವರಿಗೆ ಮದುವೆ ಆಗಿದ್ದಿದ್ರೆ ????!( ಯಾಕೆಂದರೆ ಇಲ್ಲಿ ಮದುವೆ ಆದವರಿಗೂ ಆಗದೆ ಇರುವವರಿಗೂ ವ್ಯತ್ಯಾಸವೇ ಕಾಣಿಸಲ್ಲ,.) ಹಾಗೇನಾದರೂ ಆದರೆ ಮೊಳೆತ ಪ್ರೀತಿ ಮತ್ತೆ ಮಾಯವಾಗಿಬಿಡುತ್ತ? ಅಥವಾ ಕೊನೆಯವರೆಗೂ ಕಾಡುತ್ತಲೇ ಇರುತ್ತಾ? ಬಲ್ಲವರೇ ಗೊತ್ತಿದ್ದರೆ ತಿಳಿಸಿ :) 'ಅವಳನ್ನು ನೋಡಿದ ಕೂಡಲೇ ಮರುಳಾಗಿಬಿಟ್ಟೆ ..ರಾತ್ರಿ ಇಡೀ ಅವಳ ಮುಖವೇ ಎದುರಿಗೆ ಬರ್ತಿತ್ತು ..ಇವತ್ ಎಲ್ಲಿ ಸಿಕ್ಕಿದ್ಲೋ ನಾಳೆನೂ ಅಲ್ಲೇ ಹೋಗ್ಬೇಕು..ಪ್ರೊಪೋಸ್ ಮಾಡ್ತೀನಿ' ಅಂತ ನನ್ನ ಇನ್ನೊಬ್ಬ ಸಹೋದ್ಯೋಗಿ ಅವತ್ತು ನೋಡಿದ್ದ ಹುಡುಗಿ ಬಗ್ಗೆ ಹೇಳ್ತಿದ್ದ..ನಾನು ಹೌದೇನೋ ಆಲ್ ದಿ ಬೆಸ್ಟ್ , ಆದ್ರೆ ಅವಳಿಗೆ ಮದುವೆ ಆಗಿದ್ಯೋ ಇಲ್ವೋ ಗೊತ್ತ ಅಂತ ಕೇಳಿದ್ರೆ ತಾಳಿ ಕಾಲುಂಗುರ ಇರ್ಲಿಲ್ಲ ಅಂದ..ಮಗನೆ, ಇದು ಬೆಂಗಳೂರು. ಇಲ್ಲಿ ಎಲ್ಲರೂ ಅವನ್ನೆಲ್ಲಾ  ಹಾಕ್ಕೊಳ್ಳೋದಿಲ್ಲ ಅಂತ ಪಕ್ಕದಲ್ಲಿದ್ದ ಟೀಂ ಲೀಡರ್ ಹೇಳಿದಾಗ  ಇವನ ಮುಖ ಪೆಚ್ಚಾಗಿತ್ತು. .

 

ಇರಲಿ, ವಿಷಯಕ್ಕೆ ಬರೋಣ ,ಸಿಗದ ಪ್ರೇಮಿಗಾಗಿ ನಡೆದ ಹಾಗೂ ನಡೆಯುತ್ತಿರುವ ಕೊಲೆ , ಆತ್ಮ ಹತ್ಯೆಗಳು ,ನಮಗೆ ಹೊಸ ವಿಷಯವೇನಲ್ಲ. ಮನೆಯಲ್ಲಿ ಯಾರ ಮಾತು ಕೇಳದಿದ್ದರೂ ಪ್ರೀತಿಗಾಗಿ ತಮ್ಮ ದಿನಚರಿ, ಮಾತಿನ ವೈಖರಿ, ಜೀವನ ಶೈಲಿ ಬದಲಾಯಿಸಿಕೊಂಡವರೆಷ್ಟೋ .. ಫಾಲಿತಾಂಶ ಸುಖಾಂತವಾದರೆ ಸಂತೋಷವೇ ….ಆದರೆ ಹತ್ತವರಿಗೆ ನೋವು ಕೊಡದೆ ಪ್ರೀತಿಯನ್ನು ಪಡೆದುಕೊಂಡ ಉದಾಹರಣೆಗಳು ನಮ್ಮಲ್ಲಿ  ತುಂಬಾ ಕಮ್ಮಿ. ನಮ್ಮ ಲೈಫ್ ನಮ್ಮಿಷ್ಟ ಅಂತ ಪ್ರೀತಿಸಿ ಮುಂದೊಂದು ದಿನ ಏನಾದರೂ ತೊಂದರೆ ಬಂದಾಗ ಸಂತೈಸುವ ಹಿರಿಯರಿರದಿದ್ದಾಗ,ಆಗ ತಿಳಿಯುತ್ತದೆ ಜೀವನ ಎಂದರೇನೆಂದು!

 

ಪ್ರೇಮಿಯ ಕಣ್ಣೀರಿಗೆ ಕರಗಿಬಿಡುವ ಇವರ ಹೃದಯಕ್ಕೆ ಮನೆಯವರ ದುಃಖದ ಅರಿವಾಗುವುದಿಲ್ಲ .ಪ್ರೀತಿಸಿ ಮನೆಯಿಂದ ದೂರಾಗಿ ಬೇರೆಯೇ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಮನೆಯವರು ಅನುಭವಿಸಬಹುದಾದ ನೋವಿನ ನೆನಪಾಗದಷ್ಟು ಸ್ವಾರ್ಥವೇ ಪ್ರೀತಿಅನ್ನೋದು ? ಸ್ವಾರ್ಥ ಇದ್ದರೆ ಅದು ಪ್ರೀತಿ ಹೇಗಾಗತ್ತೋ ..? ಕೇಶವ ರೆಡ್ಡಿ ಹಂದ್ರಾಳರ ಕಥೆಯಲ್ಲಿ  ಓದಿದ ನೆನಪು "ವಯಸ್ಸು ಮತ್ತೊಂದಷ್ಟು ದಿನದ ಭ್ರಮೆ ಕಳಚಿದ ಕೂಡಲೇ ವಾಸ್ತವ ಅಸಹ್ಯವಾಗಿಬಿಡುತ್ತೆ."…ನನ್ನ ನಿಲುವಿಗೆ ತೀವ್ರ ವಿರೋಧ ವ್ಯಕ್ತ ಪಡಿಸುವ ನನ್ನ ಗೆಳತಿ ಹೇಳೋದು, 'ಹೀಗೆ ಪ್ರೀತಿ ಸುಳ್ಳು ಪೊಳ್ಳು ಅಂತ ಹೇಳೋರೆ ಕೊನೆಗೊಂದು ದಿನ ಲವ್ ಮ್ಯಾರೇಜ್ ಆಗೋದು' ಅಂತ... ಸರಿ ಹೋಯ್ತು !ಲವ್ ಮ್ಯಾರೇಜ್ ಆಗಬೇಡಿ ಅಂತ ಯಾರ್ರೀ ಹೇಳಿದ್ದು ??ಪ್ರೀತಿಸಿ,. ಯಾರೂ ಬೇಡ ಅನ್ನೋಲ್ಲ .. ಈ ಜಗತ್ತೇ ಪ್ರೀತಿಯ , ನಂಬಿಕೆಯ ಮೇಲೆ ನಿಂತಿದೆ...ಆದರೆ ಅದರೊಂದಿಗೆ ನಿಮ್ಮನ್ನು ಪ್ರೀತಿಸುವ ನಿಮ್ಮ ಮನೆಯವರನ್ನೂ ಪ್ರೀತಿಸಿ..... ಸಾಕಿದವರಿಗೆ ನೋವು ಕೊಟ್ಟು ಓಡಿ ಹೋಗಬೇಡಿ ಅಥವಾ ಸಿಗದ ಪ್ರೀತಿಗಾಗಿ ಪ್ರಾಣ ತರಬೇಡಿ ಅಷ್ಟೇ ..ನೀವೇನಂತೀರಿ??

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವಾಣಿ, <<ಸಾಮನ್ಯವಾಗಿ ಯಾವ ಪ್ರೀತಿ ಸಿಗೊದಿಲ್ಲವೋ ಅದನ್ನೇ ಹುಡುಕಿಕೊಂಡು ಹೋಗುತ್ತದೆ ಮನಸ್ಸು..ಹೆತ್ತವರ ಪ್ರೀತಿ ಸ್ವಲ್ಪ ಕಡಿಮೆಯಾಗಿದ್ದರೆ ಮನಸ್ಸು ಅದಕ್ಕೆ ಹಾತೊರೆಯುತಿತ್ತೇನೋ..!>> ಈ ದೃಷ್ಟಿಕೋನ ನನಗೇಕೋ ಹೊಸದೆನಿಸಿತು. ಹಾಗಾಗಿ ಮನಸ್ಸಿಗೆ ಹಿಡಿಸಿತು. ಈ ಭಾವನೆ ಮನದೊಳಗೆ ತಳವೂರಿರಬೇಕಾದರೆ ಅದರ ಹಿಂದಡಗಿರುವ ಅನುಭವದ ಅರಿವೂ ಆಯಿತು. <<ಪ್ರೀತಿಸಿ,. ಯಾರೂ ಬೇಡ ಅನ್ನೋಲ್ಲ .. ಈ ಜಗತ್ತೇ ಪ್ರೀತಿಯ , ನಂಬಿಕೆಯ ಮೇಲೆ ನಿಂತಿದೆ...ಆದರೆ ಅದರೊಂದಿಗೆ ನಿಮ್ಮನ್ನು ಪ್ರೀತಿಸುವ ನಿಮ್ಮ ಮನೆಯವರನ್ನೂ ಪ್ರೀತಿಸಿ..... ಸಾಕಿದವರಿಗೆ ನೋವು ಕೊಟ್ಟು ಓಡಿ ಹೋಗಬೇಡಿ ಅಥವಾ ಸಿಗದ ಪ್ರೀತಿಗಾಗಿ ಪ್ರಾಣ ತರಬೇಡಿ ಅಷ್ಟೇ ..ನೀವೇನಂತೀರಿ??>> ನಾನೂ ಹೂಂ... ಅಂತೀನಿ! - ಆಸು ಹೆಗ್ಡೆ

ಊಹಿಸಿದಕ್ಕಿಂತ ಹೆಚ್ಚಾಗಿಯೇ ನನ್ನನ್ನೂ , ನನ್ನ ವಾಕ್ಯಗಳನ್ನು ಅರ್ಥ ಮಾಡಿಕೊಂಡಿದ್ದಿರಿ...ಹ್ಮ್.. ಥ್ಯಾಂಕ್ಸ್ ಥ್ಯಾಂಕ್ಸ್ ಥ್ಯಾಂಕ್ಸ್..ಸರ್ ! :) ಸದಾ ನಿಮ್ಮ ಪ್ರೋತ್ಸಾಹ ಬಯಸುವ ನಿಮ್ಮ ವಾಣಿ ಶೆಟ್ಟಿ

ನಿಮ್ಮ ಪ್ರಶ್ನೆಗಳನ್ನು ಲವ್ ಗುರುವಿಗೆ ಕೇಳಿದೆ. ಆ ಸ್ವಾಮಿಗಳ ಉತ್ತರ ಹೀಗಿದೆ - ಮೊದಲ ನೋಟಕ್ಕೆ ಪ್ರೀತಿ ಮೊಳೆತು ಬಿಡುತ್ತಾ - ಮೊಳೆತು ಬಿಡಲ್ಲ, ಕೆಲವೊಮ್ಮೆ ಬೀಜ ಬಿತ್ತತ್ತೆ ಹಾಗಾದ್ರೆ ಒಂದ್ವೇಳೆ ಅವರಿಗೆ ಮದುವೆ ಆಗಿದ್ದಿದ್ರೆ - ಸಮಸ್ಯೆ ಇಲ್ಲ. ಆದರೆ ಮದುವೆ ಆದವರೂ ಇನ್ನೊಂದು ಸಂಬಂಧ ಬೆಳೆಸಿಕೊಂಡರೆ ಸಮಸ್ಯೆ ಕೊನೆಯವರೆಗೂ ಕಾಡುತ್ತಲೇ ಇರುತ್ತಾ - ಮುಂದಿನ ಪ್ರೇಮ ಕಥೆ ಪ್ರಾರಂಭವಾಗುವ ತನಕ ಕಾಡತ್ತೆ. ಎಲ್ಲಾ ಪ್ರೇಮಿಗಳಿಗೆ ಲವ್ ಗುರುವಿನ ಕಿವಿಮಾತು - ಪ್ರೀತಿಸಿ ಓಡಿ ಹೋಗಬೇಡಿ ನಡೆದುಕೊಂಡು ಹೋಗಿ ಸುಮ್ನೆ ಇಬ್ರಿಗೂ ಸುಸ್ತು!!! :)

ಸ್ವಾಮಿಗಳಿಗೊಂದು ನನ್ನ ಪ್ರೀತಿಯ(!) ನಮಸ್ಕಾರ ತಿಳಿಸಿಬಿಡಿ ... ಬೀಜ ಬಿತ್ತತ್ತೆ ಎಂದರು ,ಪುಣ್ಯ , ಮರವಾಗಿರತ್ತೆ ಅನ್ಲಿಲ್ಲ ...! ಅವರಿಗೆ ಹೇಳಿ ನಡೆದುಕೊಂಡು ಜಾಸ್ತಿ ಹೋಗೋದಕ್ಕೆ ಆಗಲ್ಲ ...೧೦-೧೫ ಕಿಲೋ ಮೀಟರ್ ತಲುಪೋದರೊಳಗೆ ಹುಡುಕಿಕೊಂಡು ಬಂದಿರ್ತಾರೆ ಇಬ್ಬರ ಮನೆಯಲ್ಲೂ ಅಂತ... ಥ್ಯಾಂಕ್ಸ್ ಸಂತೋಷ್ ಪ್ರತಿಕ್ರಿಯೆಗೆ ... ನಿಮ್ಮ ವಾಣಿ ಶೆಟ್ಟಿ

ಪ್ರಿಯ ವಾಣಿ! ಈಗಷ್ಟೇ B Com ಮುಗಿಸಿ ಬ೦ದವರಿಗೆ ತು೦ಬ ಎತ್ತರದ ವಿಚಾರಧಾರೆ! ಮೆಚ್ಚಿದೆ. ಈ ಪ್ರೀತಿ ಅನ್ನೋದು ನೋಡಿ: ಒ೦ದು weeknessಉ. ಮನುಷ್ಯ ಒ೦ಟಿಯಾಗಿರಲಾರ; ಅದಕ್ಕೇ ಸಮಾಜವನ್ನು ಕಟ್ಟಿದ. ಒಬ್ಬರಿಗೊಬ್ಬರು ಹೊ೦ದಿಕೊ೦ಡಿರಬೇಕೂ೦ತ rules ಮಾಡಿದ. ಇದರ ನಡುವೆ ನಿಸರ್ಗಕ್ಕೆ ಜೀವಪುನರುತ್ಪತ್ತಿಯ requirement ಬೇರೆ ಸೇರ್ಕೊ೦ಡ್ತು. ಹೆಣ್ಣು-ಗ೦ಡುಗಳ ಪರಸ್ಪರ ಆಕರ್ಷಣೆ ಸ್ವಾಭಾವಿಕವಾಯ್ತು. ಇದನ್ನು ಪ್ರೀತೀ ಅ೦ತ romantic ಆಗಿ ಕರೆದರು. ಕತೆ, ಕಾವ್ಯ, ನಾಟಕ, ... ನಿರ್ಮಿಸಿದರು. ಬಲಿಯದ ಬುದ್ಧಿಯ ಬಾಲ-ಬಾಲೆಯರು ಪ್ರೀತಿಯೆ೦ದರೆ ಇದು ಎ೦ದು ತಪ್ಪು ತಿಳಿದರು. ಕಯಾಮತ್ ಸೇ ಕಯಾಮತ್ ತಕ್ ಇದು ನಡೆಯುತ್ತಾ ಬ೦ದಿದೆ... ನಮಗರಿವಿಲ್ಲದೇ, ಅರಿತರೂ ಅರಗಿಸಿಕೊಳ್ಳಲಿಚ್ಚಿಸದೆಯೇ, ನಾವೂ ಇದೇ ಮಾರ್ಗದಲ್ಲಿ ಸಾಗಿ ಬ೦ದಿದ್ದೇವೆ; ಮು೦ದೆ ಕೂಡಾ ಸಾಗಿ ಹೋಗುತ್ತಲಿರುತ್ತೇವೆ..

""ನಮಗರಿವಿಲ್ಲದೇ, ಅರಿತರೂ ಅರಗಿಸಿಕೊಳ್ಳಲಿಚ್ಚಿಸದೆಯೇ, ನಾವೂ ಇದೇ ಮಾರ್ಗದಲ್ಲಿ ಸಾಗಿ ಬ೦ದಿದ್ದೇವೆ; ಮು೦ದೆ ಕೂಡಾ ಸಾಗಿ ಹೋಗುತ್ತಲಿರುತ್ತೇವೆ."" ನಿಮ್ಮ ಈ ಮಾತು ಸಂಪೂರ್ಣ ಸತ್ಯ ...ಸರಿದ ಕಾಲದ ಜೊತೆ ಅಗತ್ಯ ,ಅನಿವಾರ್ಯತೆ, ಆಕರ್ಷಣೆ,ಹೀಗೆ ಎಷ್ಟೇ ಹೆಸರನ್ನದು ಹೊದ್ದುಕೊಂಡಿದ್ದರೂ ಬೇಸರವಿಲ್ಲ ..ಆದರೆ ಅದೊಂದು ಫ್ಯಾಶನ್ ಆಗಿಬಿಟ್ಟಿದ್ದು ಸರಿಯಲ್ಲ..ಅಲ್ವಾ ? ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕೆ ತುಂಬಾ ಧನ್ಯವಾದಗಳು ಪ್ರಭು ಅವರೇ ... ವಂದನೆಗಳೊಂದಿಗೆ ವಾಣಿ ಶೆಟ್ಟಿ

ವಾಣಿ ಅವರೇ...ಮೊದಲ ನೋಟದಲ್ಲೇ ಹುಟ್ಟುವುದು ಕೇವಲ ಆಕರ್ಷಣೆ...ಅದು ಪ್ರೀತಿ ಅಲ್ಲ..ಇದೆಲ್ಲ ಸಿನಿಮಾ ಪ್ರಭಾವ ಅಷ್ಟೇ ಕಣ್ರೀ... ಇವರಿಗೆ ವಾಸ್ತವದ ಅರಿವಾಗುವ ಹೊತ್ತಿಗೆ ಸಮಯ ಮೀರಿ ಹೋಗಿರುತ್ತದೆ...

ಕರೆಕ್ಟ್ ! ಹಾಗಾದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ "ಅಟ್ರಾಕ್ಷನ್ ಅಟ್ ಫಸ್ಟ್ ಸೈಟ್" :) ಹೌದು ,ವಾಸ್ತವದ ಅರಿವಾಗುವ ಹೊತ್ತಿಗೆ ಸಮಯ ಮೀರಿ ಅಥವಾ ಪ್ರಾಣ ಹಾರಿ ಹೋಗಿರುತ್ತದೆ ..! ಪ್ರತಿಕ್ರಿಯೆಗೆ ಧನ್ಯವಾದಗಳು ಜಯಂತ್ ರವರೆ . ವಂದನೆಗಳೊಂದಿಗೆ ವಾಣಿ ಶೆಟ್ಟಿ

"ಕಯಾಮತ್ ಸೇ ಕಯಾಮತ್ ತಕ್ ಇದು ನಡೆಯುತ್ತಾ ಬ೦ದಿದೆ" ಹೀಗಂದ್ರೆ ಅರ್ಥ ಏನು, ಸ್ವಲ್ಪ ಬಿಡಿಸಿ ಹೇಳ್ತೀರಾ?

ಪ್ರಿಯ ಆಸು ಹೆಗ್ಡೆಯವರೇ, ನಿಮ್ಮ ಪ್ರತಿಕ್ರಿಯೆಯನ್ನೆಲ್ಲೋ ಗಮನಿಸಲಿಲ್ಲ. ಕಯಾಮತ್ ಎ೦ದರೆ ಪ್ರಳಯ; ಇಸ್ಲಾಮಿನ ಪ್ರಕಾರ ಈ ಅ೦ತ್ಯಕಾಲದ ಪ್ರಳಯದ ಬಳಿಕ ದೇವರೆದುರು ಸಕಲ ಜೀವಜ೦ತುಗಳ ಪಾಪ-ಪುಣ್ಯಗಳ ಲೆಕ್ಕಾಚಾರ ನಡೆಯುತ್ತ೦ತೆ. ಕಯಾಮತ್ ಸೇ ಕಯಾಮತ್ ಸೃಷ್ಟಿಯ ಮೊದಲ ಪ್ರಳಯದಿ೦ದ ಕೊನೆಯ ಪ್ರಳಯದವರೆಗೆ ಅ೦ತ ಒ೦ದು ಪಡಿನುಡಿ. ಈ ಪ್ರೀತಿ, ಪ್ರೇಮ ಇತ್ಯಾದಿ ಗ೦ಡು-ಹೆಣ್ಣಿನ ನಡುವಿನ ಆಕರ್ಷಣೆ ಅನಾದಿ ಕಾಲದಿ೦ದಲೂ ಇದೆ; ಮು೦ದೂ ಇರುತ್ತದೆ ಎ೦ದು ನನ್ನ ಅಭಿಪ್ರಾಯ.

ವಾಣಿಯವರೇ , ಉತ್ತಮ ಲೇಖನ. ನಿಜಕ್ಕೂ ಪ್ರೇಮಿಗಳಿಗೆ ಆ ಸಂದರ್ಭದಲ್ಲಿ ಮನೆಯವರು ಶತ್ರು ಗಳಂತೆ ಕಾಣುತಿರುತ್ತಾರೆ,ಅವರ ಯಾವುದೇ ಮಾತನ್ನು ಕೇಳಲು ತಯಾರಿರುವುದಿಲ್ಲ, ಮನೆಯವರನ್ನು ವರಿಸಿಕೊಳ್ಳಲೂ ತಯಾರಿರುವುದಿಲ್ಲ. ಮನೆಯವರು ಅವನನ್ನು ಇಲ್ಲ ಅವಳನ್ನು ಭಂದನದಲ್ಲಿರಿಸಿದರೆ ಆತ್ಮಹತ್ಯೆಯೇ ಪರಿಹಾರ ಎಂದ ಉದಾಹರಣೆ ನೋಡಿದ್ದೇನೆ, ಜೊತೆಗೆ ಮನೆಯವರಿಗೆ ನಂಬಿಕೆ ತರಿಸಿ ಅವರಿಂದ ಎಲ್ಲ ಸ್ವಾತಂತ್ರ್ಯ ಪಡೆದು ಕೊನೆಗೆ ತನ್ನ ಪ್ರೇಯಸಿ ಇಲ್ಲ ಪ್ರಿಯಕರನ ಜೊತೆಗೆ ಒಂದು ದಿನ ಹೇಳದೆ ಓಡಿಹೋಗಿ ಮನೆಯವರ ವಿಶ್ವಾಸದ ಒಟ್ಟಿಗೆ ಆಟವಾಡಿದ ಕಥೆಗೂ ಸಾಕ್ಷಿಯಾಗಿದ್ದೇನೆ,ಅದಲ್ಲದೆ ಮನೆಯವರನ್ನು ವರಿಸಿ ಅವನನ್ನೇ ಇಲ್ಲ ಅವಳನ್ನೇ ಮದುವೆಯಾಗಿ ಎಲ್ಲರೊಂದಿಗೆ ಸುಖವಾಗಿ ಜೀವನ ನಡೆಸುತ್ತಿರುವ ಹಳೇ ಪ್ರೆಮಿಗಳನ್ನು ನೋಡಿದ್ದೇನೆ,ಮನೆಯವರ ಮಾತು ದಿಕ್ಕರಿಸಿ ಪ್ರೀತಿಯಾಗಿ ಓದು ನಡುವಲ್ಲೇ ಬಿಟ್ಟು, ಅದೇ ಜೀವನ ಎಂದು ಅತುರತೆಯ ನಿರ್ಧಾರತಕೊಂಡು ಎರಡೇ ವರುಷದಲ್ಲಿ ಅತ್ತ ತನ್ನನ್ನು ನಂಬಿ ಬಂದ ಪ್ರೇಯಸಿಗೆ ಉತ್ತಮ ಗಂಡನಾಗದೆ ಮನೆಯವರಿಗೆ ಉತ್ತಮ ಮಗನಾಗದೆ ಜೀವನ ವ್ಯರ್ಥ ಮಾಡಿಕೊಂಡ ಅದೆಷ್ಟೋ ಜನರಿದ್ದಾರೆ. ಪ್ರೀತಿಸುವುದು ತಪ್ಪಲ್ಲ, ಪ್ರೀತಿಸಿ ಆದರೆ ಮನೆಯವರ ಮನ ನೋಯಿಸಿ ಎರಡುದಿನ ಹಿಂದೆ ಬಂದಿರುವ ಹುಡುಗ ಇಲ್ಲ ಹುಡುಗಿಯೇ ಸರ್ವಸ್ವ ಹೇಳುವುದನ್ನು ನಿಲ್ಲಿಸಿ , ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಮನೆಯವರು ಏತಕ್ಕಾಗಿ ತನ್ನ ಪ್ರೀತಿಯನ್ನು ವಿರೋಧಿಸುತ್ತಿರುವರು ಎಂದು ಕೂಲಂಕುಷವಾಗಿ ತಿಳಿದುಕೊಳ್ಳಿ, ಕ್ಷುಲ್ಲಕ ಕಾರಣಗಳಿದ್ದರೆ ಬಗೆಹರಿಸಿಕೊಳ್ಳಿ, ಸಕಾರಾತ್ಮಕ ಕಾರಣ ಗಳಿದ್ದರೆ ನಿಮ್ಮ ನಿರ್ಧಾರದ ಮುಂಚೆ ಆ ಬಗ್ಗೆ ಆಲೋಚಿಸಿ. ಆ ಹುಡುಗಿ ಇಲ್ಲ ಹುಡುಗ ಉತ್ತಮ ಗುಣ ನಡತೆಯ ಮತ್ತು ತನ್ನನ್ನು ನಂಬಿ ಬಂದವನಿಗೆ/ಬಂದವಳಿಗೆ ನೆಮ್ಮದಿಯಲ್ಲಿ ಇರಿಸುತ್ತಾನೆ / ಳೆ ಎಂಬ ಖಾತರಿ ಮನೆಯವರಿಗಿದ್ದರೆ ಮನೆಯವರು ಎಂದು ಆ ಪ್ರೀತಿಯನ್ನು ವಿರೋಧಿಸುವುದಿಲ್ಲ. ನಮ್ಮ ಬಗೆಗಿನ ಹೆಚ್ಚಿನ ಕಾಳಜಿಯೇ ಮನೆಯವರು ಕೆಲವೊಮ್ಮೆ ನಮ್ಮ ನಿರ್ಧಾರವನ್ನು ವಿರೋಧಿಸುವಂತೆ ಮಾಡಿರುತ್ತದೆ. ನಿಮ್ಮ ಕಾಮತ್ ಕುಂಬ್ಳೆ

ನನ್ನ ಪ್ರಕಾರ,ಪ್ರೀತಿಸಿದವರಿಗೆ ತಮ್ಮ ಹುಡುಗ / ಹುಡುಗಿ ಯಲ್ಲಿರುವ ಹೊಂದಿಕೊಳ್ಳಲಾಗದ ಗುಣದ ಪರಿಚಯ ಮದುವೆ ಆಗುವ ತನಕ ಅರಿವಾಗುವುದಿಲ್ಲ ..ಯಾಕೆಂದರೆ ಮೊದ ಮೊದಲು ಇಬ್ಬರೂ ತಮ್ಮ ಗುಣದ ಹೊಳಪಿನ ಭಾಗವನ್ನಷ್ಟೇ ಪ್ರದರ್ಶಿಸುತ್ತಾರಂತೆ (ಯಂಡಮೂರಿಯವರ ಕಾದಂಬರಿ ಯಲ್ಲಿ ಓದಿದ್ದು ).ಕೆಲವೊಮ್ಮೆ ನೋಡಲು ಅಂದವಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಇಡೀ ಭವಿಷ್ಯ ವನ್ನು ಅವರೊಂದಿಗೆ ಕಳೆಯಲು ತೀರ್ಮಾನಿಸಿಬಿಡುತ್ತದೆ ಮನಸ್ಸು ....ಆಗ ಹೆತ್ತವರ ಕಾಳಜಿ ಇವರಿಗೆ ಹಗೆಯಾಗಿ ಗೋಚರಿಸುವುದು ಸಾಮಾನ್ಯವೇ ಬಿಡಿ ! ಪ್ರತಿಕ್ರಿಯೆಗೆ ಧನ್ಯವಾದಗಳು :) ವಂದನೆಗಳೊಂದಿಗೆ ವಾಣಿ ಶೆಟ್ಟಿ

ನಮಸ್ಕಾರ ವಾಣಿ, ತಂದೆ, ತಾಯಿಯ ಮೇಲಿನ ಸಿಟ್ಟಿಗೆ ಆತ್ಮಹತ್ಯೆ? ಹೊತ್ತು, ಹೆತ್ತು ಸಾಕಿದ ತಂದೆ-ತಾಯಿಗಳಿಗೆ ಇತ್ತ ಬಹುಮಾನವಿದು, ಆಜನ್ಮ ಕೊರಗು. ಒಮ್ಮೆ ಯೋಚಿಸಿದ್ದರೆ ಈ ಅನಾಹುತ ಆಗುತ್ತಿರಲಿಲ್ಲವೇನೋ? ಹೋದವಳು ಹೊರಟೇ ಹೋದಳು, ಒಮ್ಮೆಯೂ ತಿರುಗಿ ನೋಡದೆ... ಅನ್ಯಾಯ ರೀ, ಈ ತರಹ ಜೀವನ ಹಾಳು ಮಾಡಿಕೊಂಡವರ ಬಗ್ಗೆ ಮರುಕ ಹುಟ್ಟುವುದಿಲ್ಲ.... ಬಗೆ ಹರಿಸಲಾಗದ ಸಮಸ್ಯೇ ಏನಲ್ಲ? ಪ್ರೀತಿ ಅನ್ನೋದು ಒಂದು ಅನುಭೂತಿ, ಅದು ಏಕ ಮುಖವಲ್ಲ. ನೋವು ನಲಿವುಗಳ ಸಮಪಾಕವೇ ‘ಪ್ರೀತಿ’. ಪ್ರೀತಿ ಎಂಬುದು ಹೃದಯ ರಾಗದ ಮಧುರ ಗೀತೆ... ಅರಿಯುವ ಮುನ್ನವೆ ಅರಳುವ ಚೆಂದನೆಯ ಕವಿತೆ. ಏನಿದು ಹೀಗೆ ಎನಿಸಿದಾಗ ಆ ಪ್ರೀತಿಯಲಿ ಎನಿಸಿತು ಇದು ಪ್ರೀತಿ ಆಕಾಶದಷ್ಟು ಎತ್ತರ, ಸಾಗರದಷ್ಟು ವಿಸ್ತಾರ, ಮನಸ್ಸಿನಷ್ಟು ಆಳ, ಕನಸಿನಷ್ಟು ಅಪರಿಮಿತ, ಅದಕ್ಕಾಗಿಯೇ ನಿಜವಾದ ಪ್ರೀತಿ ಎಲ್ಲರ ಕೈಗೂ ಎಟುಕಲಾರದು. ವಿಶ್ವಾಸಿ ವಾಣಿ, ಸಿಂಗಪುರ

ಹೌದು ವಾಣಿ ಯವರೇ .. ಪ್ರೀತಿಸಿ ಸತ್ತರೆ ತಮ್ಮ ದು ಅಮರ ಪ್ರೇಮ ಅಂತ ಜನರು ಹೇಳಬಹುದು ಅಂದುಕೊಳ್ತಾರೆನೋ ??? ಹಾಗೆ ಸತ್ತರೆ ಅನುಕಂಪದ ಬದಲು ತಾತ್ಸಾರ ಬರತ್ತೆ ಅಷ್ಟೇ ... "ಪ್ರೀತಿ ಎಂಬುದು ಹೃದಯ ರಾಗದ ಮಧುರ ಗೀತೆ... ಅರಿಯುವ ಮುನ್ನವೆ ಅರಳುವ ಚೆಂದನೆಯ ಕವಿತೆ. ಏನಿದು ಹೀಗೆ ಎನಿಸಿದಾಗ ಆ ಪ್ರೀತಿಯಲಿ ಎನಿಸಿತು ಇದು ಪ್ರೀತಿ ಆಕಾಶದಷ್ಟು ಎತ್ತರ, ಸಾಗರದಷ್ಟು ವಿಸ್ತಾರ, ಮನಸ್ಸಿನಷ್ಟು ಆಳ, ಕನಸಿನಷ್ಟು ಅಪರಿಮಿತ, " ನಿಮ್ಮ ಈ ಮಾತು ನಿಜವೇ ...ಪ್ರೀತಿ ಅನ್ನೋದು ಮಾತಿಗೆ ಸಿಲುಕದ್ದು ಬರಹಕ್ಕೆ ನಿಲುಕದ್ದು .ಅದೊಂದು ಮೃದು ಭಾವಗಳ ಧೃಡ ಚಿತ್ತಾರ ..ಬೀಸುವ ತಂಪು ಗಾಳಿಯಂತೆ ನಿರ್ಮಲ ..!ಆದರೆ ವಿಷಾದವೆಂದರೆ ಇದ್ಯಾವುದನ್ನೂ ಅರಿಯದೆ, ಅನುಭವಿಸದೆ ಸುಮ್ಮನೆ" ಪ್ರೀತಿ " ಹೆಸರಲ್ಲಿ ಇಂತದೆಲ್ಲಾ ನಾಟಕ ಮಾಡೋದು !ಕೊನೆಗೊಂದು ದಿನ ಏನೂ ಸಾಧಿಸದೆ ಸಾಯೋದು. ಇಷ್ಟೇನಾ ಪ್ರೀತಿ ,ಇಷ್ಟೇನಾ ಬದುಕು ಅನ್ನಿಸಿಬಿಡುತ್ತೆ ಅಲ್ವಾ ? ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ :) ನಿಮ್ಮ ವಾಣಿ ಶೆಟ್ಟಿ

ನನ್ನ ಪ್ರಕಾರ ಜಗತ್ತಿನಲ್ಲಿ ಇರುವುದು ಎರಡೇ ತರಹದ ಪ್ರೀತಿ: ೧. ನಮ್ಮನ್ನು ನಾವೇ ಪ್ರೀತಿಸುವಷ್ಟು(ಪ್ರಾಣ-ಭಯ!!) ಮತ್ತ್ಯಾರನ್ನೂ ಪ್ರೀತಿಸುವುದಿಲ್ಲ( ಇದಕ್ಕೆ ವಿರೋಧಾಭಾಸಗಳಿದ್ದರೂ ಇದು ಕಟು ಸತ್ಯ). ೨. ತಂದೆ-ತಾಯಿ ಮಕ್ಕಳಿಗೆ ತೋರುವ ಪ್ರೀತಿ (ವಿಶೇಷವಾಗಿ ತಾಯಿ ಪ್ರೀತಿ). ಉಳಿದಹಾಗೆ ಮಾನವೀಯತೆಯೇ ಪ್ರೀತಿಯ ತಳಹದಿ (ಬಹಳಷ್ಟು ಜನ ಇದನ್ನೇ ಪ್ರೀತಿಯೆಂದು ಭಾವಿಸುತ್ತಾರೆ!!). ಮತ್ತೆ ಈಗಿನ ಕಾಲದ ಸಂಭಂದಗಳಿಗೆ ’ಪ್ರೀತಿ’ ಅಂತಾರಂತೆ!! ಹೌದೇ?? ಗೊತ್ತಿದ್ದರೆ ತಿಳಿಸಿ... ನಿಮ್ಮವ ನಾಗರಾಜ ಸಾಠೆ ಹಾರಗದ್ದೆ, ಬೆಂಗಳೂರು.

ಪ್ರತಿಕ್ರಿಯೆಗೆ ಧನ್ಯವಾದಗಳು ನಾಗರಾಜ ರವರೆ ..! ನಿಜ...ನಮ್ಮನ್ನು ನಾವು ಪ್ರೀತಿಸುವಷ್ಟು ಬೇರಾರು ನಮ್ಮನ್ನು ಪ್ರೀತಿಸರು...ಹಾಗೆ ತಮ್ಮನ್ನು ತಾವು ಪ್ರೀತಿಸದೇ ಇರುವವರು ಬೇರೆಯವರನ್ನು ಅದ್ಹ್ಯಾಗೆ ಪ್ರೀತಿಸಬಲ್ಲರು ಅಲ್ವಾ.. ಇನ್ನು ಮಾನವೀಯತೆಯ ಪ್ರೀತಿ...ನನ್ನ ಪ್ರಕಾರ ಕಾಳಜಿ ಮತ್ತೆ ಪ್ರೀತಿ ಎರಡೂ ಒಂದೇ ...ಇನ್ನೊಬ್ಬರ ಬಗ್ಗೆ ನಮಗಿರುವ ಕೇರ್ ಪ್ರೀತಿಯೆನ್ನಿಸಿಕೊಳ್ಳತ್ತಷ್ಟೇ.. ಈಗಿನ ಕಾಲದ ಯಾವ ಸಂಭದಕ್ಕೆ ಪ್ರೀತಿ ಅಂತಾರೆ ??? ವಂದನೆಗಳೊಂದಿಗೆ ವಾಣಿ ಶೆಟ್ಟಿ

ವಾಣಿ ಶೆಟ್ಟಿಯವರೆ, ಹ್ಯಾಟ್ಸಾಫ್, ಚಿಕ್ಕ ವಯಸ್ಸಿಗೇ ಜೀವನವನ್ನು ತು೦ಬ ಚೆನ್ನಾಗಿ ಅರ್ಥ ಮಾಡಿಕೊ೦ಡಿದ್ದೀರಿ. ಶುಭವಾಗಲಿ ನಿಮಗೆ.

ಅರ್ಥ ಮಾಡಿಕೊಳ್ಳೋದು ಇನ್ನೂ ಬೇಕಾದಷ್ಟಿದೆ.ಏನಂತೀರಿ??? ಪ್ರತಿಕ್ರಿಯಿಸಿ ಹಾರೈಸಿದ್ದಕ್ಕೆ ಧನ್ಯವಾದಗಳು ಸರ್ :) ನಿಮ್ಮ ವಾಣಿ ಶೆಟ್ಟಿ