ಋಷ್ಯಶೃಂಗ ಮುನಿಯೂ ಆನಂದರಾಮ ಶಾಸ್ತ್ರಿಯೂ

To prevent automated spam submissions leave this field empty.

 

  ಋಷ್ಯಶೃಂಗ ಮುನಿಗಳು ಯಾವುದಾದರೂ ಊರಿಗೆ ಹೋಗಿ ಆತಿಥ್ಯ ಸ್ವೀಕರಿಸಿದರೆಂದರೆ ಆ ಊರಿನಲ್ಲಿ ಮಳೆ ಬರುತ್ತಿತ್ತು.
  ೮೦ರ ದಶಕದಲ್ಲಿ ನಾನು ಆಂಧ್ರದಲ್ಲಿದ್ದೆ. ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ರಾಜಕಾರಣಿಗಳನ್ನು ವಿಡಂಬಿಸಿ ಕನ್ನಡ ಮತ್ತು ಆಂಗ್ಲ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದೆ. ಅದೇ ಸಂದರ್ಭದಲ್ಲಿ ಹೊರನಾಡ ಕನ್ನಡಿಗರ ನಿಯೋಗವೊಂದನ್ನು ಕರೆದುಕೊಂಡು ಅಂದಿನ ನಮ್ಮ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ, ಸಚಿವ ಎಂ.ಪಿ. ಪ್ರಕಾಶ್ ಮೊದಲಾದವರನ್ನು ಪ್ರತ್ಯೇಕವಾಗಿ ಭೆಟ್ಟಿಯಾಗಿ ಹೊರನಾಡ ಕನ್ನಡಿಗರಿಗೆ ಮೆಡಿಕಲ್ ಮತ್ತು ಎಂಜಿನೀರಿಂಗ್ ಶಿಕ್ಷಣದಲ್ಲಿ ಮೀಸಲಾತಿ, ಹೊರನಾಡಿನ ಕನ್ನಡ ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು, ಹೊರನಾಡಿನ ಸಂಘಸಂಸ್ಥೆಗಳಿಗೆ ಆರ್ಥಿಕ ನೆರವು ಮುಂತಾದ ಬೇಡಿಕೆಗಳನ್ನು ಇಟ್ಟೆ(ವು). ಸುದೀರ್ಘ ಯತ್ನದ ನಂತರ ಬೇಡಿಕೆಗಳು ಈಡೇರಿದವು. ಅದೇ ಸಮಯದಲ್ಲಿ ನನಗೆ ಭಾರತ ಸರ್ಕಾರದ ಘೋಷಣಾಸ್ಪರ್ಧೆಯೊಂದರಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಪುರಸ್ಕಾರ ಲಭ್ಯವಾಗಿತ್ತು. ಈ ಎಲ್ಲ ’ಸಾಧನೆ’ಗಳನ್ನು ಪರಿಗಣಿಸಿ ನನಗೊಂದು ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭ ಚೆನ್ನಾಗಿ ನಡೆಯಿತು. ಅದೇ ದಿನ ರಾಮಕೃಷ್ಣ ಹೆಗ್ಡೆಯವರ ಸರ್ಕಾರ ಪದಚ್ಯುತಿ ಹೊಂದಿತು.
  ೧೯೯೭ನೇ ಇಸವಿ. ನಾನು ಉತ್ತರ ಕರ್ನಾಟಕದಲ್ಲಿದ್ದೆ. ’ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ಸುದೀರ್ಘಕಾಲ ನಾನು ಬರೆದಿದ್ದ ’ಅಧಿಕಪ್ರಸಂಗ’ ರಾಜಕೀಯ ವಿಡಂಬನಾ ಅಂಕಣ ಉತ್ತರ ಕರ್ನಾಟಕದಲ್ಲಾಗ ಮನೆಮಾತಾಗಿತ್ತು. ಹಾಗಾಗಿ ನನಗಲ್ಲಿ ಅಭಿಮಾನಿಗಳು ಸತ್ಕಾರಕೂಟವೊಂದನ್ನು ಇಟ್ಟುಕೊಂಡರು. ನನಗೆ ಗುಜರಾತ್‌ಗೆ ವರ್ಗವಾಗಲಿದ್ದುದರಿಂದ ಅದು ಬೀಳ್ಕೊಡುಗೆಯ ಕೂಟವೂ ಆಗಿತ್ತು. ಆ ಸಮಾರಂಭದಲ್ಲಿ ನಾನು ಎಂದಿನ ನನ್ನ ಹರಿತ ಶೈಲಿಯಲ್ಲಿ ರಾಜಕಾರಣಿಗಳ ಜನ್ಮ ಜಾಲಾಡಿದೆ. ಸಮಾರಂಭ ಮುಗಿಸಿ ಮನೆಗೆ ಬಂದು ಮಲಗಿದೆ. ಮರುದಿನ ದೇವೇಗೌಡರು ಪ್ರಧಾನಿ ಪದವಿ ಕಳೆದುಕೊಂಡರು.
  ಆರೇಳು ವರ್ಷಗಳ ಕೆಳಗೊಂದು ದಿನ ನನ್ನನ್ನು ದೆಹಲಿಯ ಸಮಾರಂಭವೊಂದಕ್ಕೆ ಒತ್ತಾಯಪೂರ್ವಕವಾಗಿ ಒಪ್ಪಿಸಲಾಯಿತು. ದೆಹಲಿಯಲ್ಲಿ ಕೆಲ ತಿಂಗಳುಗಳ ಬಳಿಕ ನಡೆಯಲಿದ್ದ ಕನ್ನಡ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲು ನಾನು ಒಪ್ಪಿಕೊಂಡೆ. ಅದೇ ಸಮ್ಮೇಳನದಲ್ಲಿ ನನಗೆ ಸನ್ಮಾನವನ್ನೂ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದ ಮಂತ್ರಿಯೊಬ್ಬರು ಅಂದು ನನ್ನೊಡನೆ ವೇದಿಕೆ ಹಂಚಿಕೊಳ್ಳಬೇಕಿತ್ತು. ಅವರ ಬಗ್ಗೆ ಮತ್ತು ಆ ದಿನಗಳ ರಾಜ್ಯಾಡಳಿತದ ಬಗ್ಗೆ ನಾನು ಪತ್ರಿಕೆಗಳಲ್ಲಿ, ’ವಿಜಯ ಕರ್ನಾಟಕ’ ದಿನಪತ್ರಿಕೆಯ ’ಕಂಡದ್ದು ಕಾಣದ್ದು’ ಶಿರೋನಾಮೆಯ ನನ್ನ ಅಂಕಣದಲ್ಲಿ ಸಾಕಷ್ಟು ಲೇವಡಿ ಮಾಡಿದ್ದೆ. ಅಂದು ದೆಹಲಿಯ ಸಮಾರಂಭಕ್ಕೆ ಆ ಮಹನೀಯರು ಬರಲೇ ಇಲ್ಲ. ಅವರು ಬರದಿದ್ದುದು ನನ್ನನ್ನು ಎದುರಿಸಲಾರದೇ ಅಲ್ಲ, ಯಾವ ಮುಹೂರ್ತದಲ್ಲಿ ನನ್ನ ಉಪಸ್ಥಿತಿಯ ಆ ಸಮಾರಂಭಕ್ಕೆ ಆಗಮಿಸಲು ಅವರು ಒಪ್ಪಿದರೋ, ಅನತಿ ದಿನಗಳಲ್ಲಿ ಅವರ ಮಂತ್ರಿ ಪದವಿಯೇ ಹೊರಟುಹೋಗಿತ್ತು.
  ೨೦೦೬ರ ಜನವರಿ ೨೭. ಬೀದರದಲ್ಲಿ ೭೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ. ಉದ್ಘಾಟಿಸಬೇಕಿದ್ದವರು ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರು. ಉದ್ಘಾಟನಾ ಸಮಾರಂಭದ ನಿರೂಪಕ ನಾನು. ಪತ್ರಿಕಾ ಬರಹಗಳಲ್ಲಿ ಮತ್ತು ಅಂಕಣಗಳಲ್ಲಿ ಅದಾಗಲೇ ನಾನು ಧರ್ಮಸಿಂಗರನ್ನು ಸಾಕಷ್ಟು ತೊಳೆದಿದ್ದೆ. ಬೀದರದಲ್ಲಿ ಅಂದು ಅವರೂ ನಾನೂ ಮುಖಾಮುಖಿಯಾಗಲಿದ್ದೆವು. ಆದರೆ ಧರ್ಮಸಿಂಗ್ ಅವರು ಸಮಾರಂಭಕ್ಕೆ ಬರಲೇ ಇಲ್ಲ. ಏಕೆಂದರೆ, ಅದೇ ದಿನ ರಾಜಧಾನಿಯಲ್ಲಿ ಅವರ ಸರ್ಕಾರದ ಭವಿಷ್ಯ ನಿರ್ಧಾರವಾಗುತ್ತಿತ್ತು. ಮರುದಿನ ಅವರ ಸರ್ಕಾರ ಬಿದ್ದುಹೋಯಿತು.
  ಮೊನ್ನೆ, ಅಂದರೆ ಇದೇ ಮಂಗಳವಾರ, ೧೨ನೇ ತಾರೀಖು, ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದಾವಣಗೆರೆಯಲ್ಲಿ ನನಗೆ ೨೦೦೯ನೇ ಸಾಲಿನ ’ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿ’ಯ ಪ್ರದಾನ ಸಮಾರಂಭ. ಜೊತೆಗೆ ಸನ್ಮಾನ ಕೂಡ. ಅದೇ ದಿನ ರಾಜ್ಯ ಸರ್ಕಾರದ ಸ್ಥಿತಿ ಡೋಲಾಯಮಾನ. ಧಾರಾವಾಹಿಯನ್ನು ಕಿರುತೆರೆಯಮೇಲೆ ಇನ್ನೂ ನೋಡುತ್ತಿದ್ದೀರಿ.
  ಋಷ್ಯಶೃಂಗ ಮುನಿಗಳು ಯಾವುದಾದರೂ ಊರಿಗೆ ಹೋಗಿ ಆತಿಥ್ಯ ಸ್ವೀಕರಿಸಿದರೆಂದರೆ ಆ ಊರಿನಲ್ಲಿ ಮಳೆ ಬರುತ್ತಿತ್ತು. ಆನಂದರಾಮ ಶಾಸ್ತ್ರಿ ವೇದಿಕೆ ಏರಿ ಸನ್ಮಾನ ಸ್ವೀಕರಿಸಿದರೆ ಯಾವನಾದರೂ ರಾಜಕಾರಣಿಯ ಪದಚ್ಯುತಿಯಾಗುತ್ತದೆ ಅಥವಾ ಸರ್ಕಾರವೇ ಬಿದ್ದುಹೋಗುತ್ತದೆ, ಇಲ್ಲವೇ, ಸರ್ಕಾರವನ್ನು ಬೀಳಿಸಲಿಚ್ಛಿಸುವ ವಿರೋಧಿಗಳ ಆಶಾಸೌಧ ಕುಸಿಯುತ್ತದೆ.
  (ನಾನು ’ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿ’ಯನ್ನು ಸ್ವೀಕರಿಸಿದ ದಿನ ’ಸಂಪದ’ದಲ್ಲಿ ಮಿತ್ರರೆಲ್ಲ ನನ್ನನ್ನು ಅಭಿನಂದಿಸಿದ್ದೀರಿ, ಶುಭ ಹಾರೈಸಿದ್ದೀರಿ. ಮಿತ್ರ ಹೊಳೆನರಸೀಪುರ ಮಂಜುನಾಥ ಅವರ ಶುಭಹಾರೈಕೆಯ ಲೇಖನ ಮತ್ತು ಪ್ರತಿಕ್ರಿಯಿಸಿರುವ ಮಿತ್ರರೆಲ್ಲರ ಅಭಿನಂದನೆ-ಹಾರೈಕೆ ಇವು ನನಗೆ ಅತೀವ ಸಂತಸ ನೀಡಿವೆ. ಆ ಎಲ್ಲ ಮಿತ್ರರಿಗೂ ಮತ್ತು ಆ ಲೇಖನ ಗಮನಿಸಿದ ಎಲ್ಲ ಸಂಪದಿಗ ಸ್ನೇಹಿತರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಕತ್ ಸಾರ್. ಅಪ್ಪಿ ತಪ್ಪಿ ನಿಮ್ಮ ಲೇಖನ ರಾಜಕೀಯ ಪಕ್ಷಗಳಿಗೆ ಗೊತ್ತಾದರೆ? ಈ ರೀತಿ ವಿಶ್ವಾಸ ಮತ ಯಾಚನೆ ಹಿಂದಿನ ದಿನ ನಿಮನ್ನ ಬಲವಂತವಾಗಿ ಯಾದರೂ ಸರಿ ಕರೆದು ಕೊಂಡು ಹೋಗಿ ಸನ್ಮಾನ ಮಾಡಿ ಬಿಡುತ್ತಾರೆ :)

ನನಗೇನಾದರೂ, ದುರಾದೃಷ್ಟವಶಾತ್, ಈ ನಾಡಿನ ಯಾವುದೇ ಅಧಿಕಾರ ಲಭಿಸಿದರೆ, ನನ್ನ ಅಧಿಕಾರದ ಅವಧಿಯಲ್ಲಿ ತಮಗೆ ಯಾವುದೇ ಸನ್ಮಾನ ಮಾಡಾರದೆಂದೂ ಅಲ್ಲದೇ ತಮ್ಮನ್ನು ಯಾವುದೇ ಕಾರ್ಯಕ್ರಮಕ್ಕೆ ನಿರೂಪಕನಾಗಿ ನೇಮಿಸಬಾರದೆಂದೂ ಆದೇಶ ಹೊರಡಿಸುತ್ತೇನೆ. :)

ನಾನು ಮುಖ್ಯಮಂತ್ರಿಯಾದರೆ ನಿಮಗೆ ದಿನವೂ ಸನ್ಮಾನ ಮಾಡಿಸಿನೋಡುತ್ತೇನೆ. ಮೇಲೆ ನೀವು ಹೇಳಿರುವ ಯಾವುದೆ ಪ್ರಸಂಗದಲ್ಲಿ ನಿಮ್ಮ ಹೊಣೆ ಏನಿಲ್ಲ , ಅವರವರ ಸ್ವಯಂಕೃತ ಕರ್ಮಗಳು ಅವರನ್ನು ಕೆಳಗೆ ಎಳೆದಿವೆ.

ಶಾಸ್ತ್ರಿಗಳೆ, ನೀವು ಇದನ್ನು ಮೊದಲೇ ಹೇಳಬಾರದಿತ್ತೇ? ನಾನು ಇನ್ನೂ ಸ್ವಲ್ಪ ಹೆಚ್ಚು ಮಸಾಲೆ ಸೇರಿಸಿ ನಿಮ್ಮನ್ನು ತೊಳೆಯುತ್ತಿದ್ದೆ ಅಲ್ಲಲ್ಲ ಹೊಗಳುತ್ತಿದ್ದೆ! ಅ೦ತೂ ನೀವು ತು೦ಬಾ ಶಕ್ತಿಶಾಲಿಯಾದ ಕೋಲ್ಮಿ೦ಚಿನ೦ತೆ ಝಳಪಿಸುವ೦ಥವರು ಎ೦ದು ತೋರಿಸಿದ್ದೀರಿ, ಹಿ೦ದಿನ ಉದಾಹರಣೆಗಳ ಸಹಿತ, ಆದರೆ ಈ ಬಾರಿ ನಿಮ್ಮ ಪ್ರಶಸ್ತಿ ಪ್ರಧಾನ ಸಮಾರ೦ಭದ ಮು೦ಚಿನ ದಿನ ಮತ್ತೆ ಮರು ದಿನ ಯಡ್ಯೂರಪ್ಪ ಗೆದ್ದಿದ್ದಾರೆ. ಅ೦ದರೆ ನಿಮ್ಮ ಎಲ್ಲಾ ಶಕ್ತಿ ಕಾ೦ಗ್ರೆಸ್ ಮತ್ತು ಜನತಾದಳಗಳನ್ನು ಮಾತ್ರ ಧೂಳೀಪಟ ಮಾಡ ಬಲ್ಲುದು ಎ೦ದು ಅರ್ಥೈಸಲೇ??- - - ತಮಾಷೆಗೆ----- :-)

ಹುಷಾರಾಗಿರಿ ಸರ್! ಈಗಲ್‍ಟನ್ ರಿಸಾರ್ಟ್‍ ಅಥವಾ ಚಾನ್ಸೆರಿ ಹೋಟೆಲ್ ಗೋ ನಿಮ್ಮ ಅಪಹರಣವಾದೀತು! ಪುಣ್ಯಕ್ಕೆ ನಿಮಗೆ ಸನ್ಮಾನ ಮಾಡುವ ಯಾವುದೇ ಸಮಾರಂಭಕ್ಕೂ ವೇದಿಕೆ ಹಂಚಿಕೊಳ್ಳಲು ನನಗೆ ಆಹ್ವಾನ ಬಂದಿಲ್ಲ, ಮಹಲಿಂಗರಂಗನ ಕೃಪೆಯಿಂದ ;)

ಹಾಲ್ದೊಡ್ಡೇರಿ ಸುಧೀಂದ್ರ, ಸಂಪದದಂಗಳದಲ್ಲಿ ತಮಗೆ ಆದರದ ಸ್ವಾಗತವನ್ನು ಕೋರುತ್ತೇನೆ! ಇಲ್ಲಿ ಹೊಸಬರ ಆಗಮನವಾಗುತ್ತಿರುವುದಕ್ಕೆ ಸಂತಸ ಪಡುತ್ತೇನೆ! - ಆಸು ಹೆಗ್ಡೆ

:-)))) ಈ ಲೇಖನದ ವಿಷಯ ಹರಡಿ, ಸಿದ್ದು ಅಥವಾ ಕುಮಾರೂ ನಿಮ್ಮ ಮನೆ ಬಾಗಿಲು ಬಡಿದು, ಶಾಸ್ತ್ರಿಗಳೇ ನಿಮಗೆ ಸನ್ಮಾನ ಮಾಡ್ತೀವಿ ಎಂದರೆ ಆಶ್ಚರ್ಯವಿಲ್ಲ :-)) ಕತ್ತಿಗಿಂತ ಲೇಖನಿ ಹರಿತ ಅಂತ ಮತ್ತೊಮ್ಮೆ ಸಾಬೀತಾಯ್ತು !

ಮಿತ್ರ, ಅಂಕಣಕಾರ ಹಾಲ್ದೊಡ್ಡೇರಿ ಸುಧೀಂದ್ರ ಅವರಿಗೆ ಸ್ವಾಗತ. ಮಿತ್ರರೆಲ್ಲರೂ ಸಖತ್ತಾಗಿ ಪ್ರತಿಕ್ರಿಯಿಸಿದ್ದೀರಿ. ಹಾಸ್ಯ, ವಿಡಂಬನೆಗಳ ಹೊನಲು ಹರಿಸಿದ್ದೀರಿ. ಈ ದೇಶದ ನೇತಾರರ ತಲೆಯುಳಿಸಲು, ತಲೆಯಳಿಸಲು, ತಲೆ ತಿನ್ನಲು, ತಲೆ ತುಂಬಲು, ಕಾಲೆಳೆಯಲು, ಕೈಮುರಿಯಲು, ಕೈಮುಗಿಯಲು, ಎದೆ ಬಗಿಯಲು, ಈ ಈಡಿಯಟ್ಟರಿಗೆ ಐಡಿಯಾ ಕೊಡಲು, ಇಂಡಿಯಾ ಏನೆಂದರುಹಲು ನಾವು ಬಹಳ ಮಂದಿ ಇದ್ದೇವೆ ಎಂಬುದಿಲ್ಲಿ ದೃಢವಾಯಿತು. ’ಜೈ ಸಂಪದ’.