ಕುಂ. ವೀರಭದ್ರಪ್ಪನವರ ಆತ್ಮಕಥೆ: ಗಾಂಧಿ ಕ್ಲಾಸು

To prevent automated spam submissions leave this field empty.

ಸಾಹಿತ್ಯ ಅಕಾಡೆಮಿ (ಕೇಂದ್ರ ಹಾಗೂ ರಾಜ್ಯ) ಪ್ರಶಸ್ತಿ ವಿಜೇತ ಲೇಖಕ ಕುಂ. ವೀರಭದ್ರಪ್ಪನವರು ಕನ್ನಡದ ಸಾಹಿತ್ಯ ಲೋಕದ ಒಬ್ಬ ಅತಿ ವಿಶಿಷ್ಟ ಲೇಖಕರು. ದಶಕಗಳ ಕಾಲ ಬಳ್ಳಾರಿ ಹಾಗೂ ಆಂಧ್ರ ಗಡಿಯ ಕುಗ್ರಾಮಗಳಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸಿ ಆ ಸಮಯದ ಅನುಭವಗಳನ್ನು ಹಾಗೂ ಆ ಭಾಗದ ಜನಜೀವನವನ್ನು ತಮ್ಮ ಜನ್ಮಜಾತ ಪ್ರತಿಭೆಯಿಂದ ಅತಿ ವಿನೂತನ ರೀತಿಯ ಪದಪ್ರಯೋಗ, ವಾಕ್ಯಸಂರಚನೆಗಳಿಂದ ನಿರೂಪಿಸಿ ಗಮನ ಸೆಳೆಯುತ್ತಾರೆ. ನಗರದಲ್ಲಿ ವಾಸಿಸುವವರ ಗಮನಕ್ಕೇ ಬಾರದಂಥ ಲೋಕವೊಂದು ಇವರ ಬರಹಗಳಲ್ಲಿ ಅನಾವರಣಗೊಳ್ಳುತ್ತದೆ. ನಾನು ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗ ಇವರ "ದೇವರ ಹೆಣ" ಎಂಬ ವಿಶಿಷ್ಟ ಕಥೆ ಒಂದು ಪಾಠವಾಗಿತ್ತು. ಅದರಲ್ಲಿ ಬರುವ ಠೊಣ್ಣಿ ಎಂಬ ವಿಚಿತ್ರ ಹೆಸರಿನ ದಲಿತ ಬಾಲಕನ, ಆತನ ಕುಟುಂಬದ, ಹಾಗೂ ಗ್ರಾಮೀಣ ದಲಿತ ಸಮುದಾಯದ  ಕಥೆ ಮನ ಕಲಕುವಂಥದ್ದು. ಆ ಪಾಠವನ್ನು ಓದಿದ ದಿನದಿಂದಲೇ ನನಗೆ ಇವರ ಕಥನ ಶೈಲಿ ತುಂಬಾ ಮೆಚ್ಚಿಕೆಯಾಗಿತ್ತು. ಇದೀಗ ಇವರ ಆತ್ಮಕಥೆ "ಗಾಂಧಿ ಕ್ಲಾಸು" (ಸಪ್ನ ಬುಕ್ ಹೌಸ್ ಮುದ್ರಣ) ಬಿಡುಗಡೆಯಾಗಿದೆ. ಸಂಬಂಧಿಕರೊಬ್ಬರಲ್ಲಿ ವಿಶೇಷವಾಗಿ ಹೇಳಿ ಈ ಕಾದಂಬರಿ ತರಿಸಿ ಓದಿದೆ. ತುಂಬಾ ಚೆನ್ನಾದ ಪುಸ್ತಕ. ತಮ್ಮ ಜೀವನದ ಅತಿ ವಿಶಿಷ್ಟ ಘಟನೆಗಳನ್ನು ದಾಖಲಿಸಿದ್ದಾರೆ. ಇದರಲ್ಲಿರುವ ಕೆಲವು ಮೆಚ್ಚಿಗೆಯಾದ ವಾಕ್ಯಗಳನ್ನು ಇಲ್ಲಿ ಉದ್ಧರಿಸಿದ್ದೇನೆ.

 

ಈಗ ಹತ್ತಿರವಿರುವ ಅದೋನಿ ಎಂಬ ಶಹರ ಆ ಕಾಲದಲ್ಲಿ ಹಲವು ಯೋಜನ ದೂರದಲ್ಲಿತ್ತು. ಈಗ ಎರಡು ಕಿಲೋಮೀಟರು ದೂರದಲ್ಲಿರುವ ಕೊಟ್ಟೂರು ಆಗ ಹಲವು ಯೋಜನ ದೂರದಲ್ಲಿತ್ತಷ್ಟೆ.

 

ಎಲ್ಲರಂತೆ ತನ್ನ ಗಂಡ ಅಕಾಲ ಮರಣಕ್ಕೆ ತುತ್ತಾದ ಕಾರಣಕ್ಕೆ ಆಕೆ ಗೌರವ್ವ, ಕೊಟ್ರವ್ವ ಎಂಬ ಹೆಸರಿನ ತನ್ನೆರಡು ಹೆಣ್ಣುಮಕ್ಕಳನ್ನು ಉಡಿಯಲ್ಲಿ ಕಟ್ಟಿಕೊಂಡು ಅಲ್ಲಿಂದ ವಲಸೆ ಹೊರಟು ಬಂದು ಕೋಡಿಹಳ್ಳಿ ಸೇರಿಕೊಂಡಿದ್ದಳು.

 

ಪೌಡರ್-ಗೆ ಪರ್ಯಾಯವಾಗಿ ಇಬತ್ತಿಉಂಡೆಯ ಪುಡಿಯನ್ನು ಅಕ್ಕ ಲೇಪಿಸಿದ್ದರಿಂದಾಗಿ ನನ್ನ ಕಪ್ಪನೆಯ ಮುಖ ದೇಹದಿಂದ ಬೇರ್ಪಟ್ಟಿರುವಂತೆ ಭಾಸವಾಗುತ್ತಲಿತ್ತು.

 

ಅದೂ ಅಲ್ಲದೇ ನನ್ನ ಕೈಬರಹ ಅವರಿವರು ಅಪಹರಿಸುವಷ್ಟು ಸುಂದರವಾಗಿತ್ತು. “ಶ್ರೀಗುರಕೊಟ್ಟೂರೇಶ್ವರಾಯನಮಃ” ಎಂದು ವಾರವಿಡೀ ಬರೆಯುವ ಮೂಲಕ ನನ್ನ ಕೈಬರಹವನ್ನು ಸಾಕಷ್ಟು ಸುಧಾರಿಸಿಕೊಂಡಿದ್ದೆನು.

 

ಕಥೆಗಳೂ ಮನುಷ್ಯರಂತೆ ಆಹಾರ ಮತ್ತು ಹದವರಿತ ಭಾಷೆ ಬಯಸುವವೆಂಬುದು ಕ್ರಮೇಣ ತಿಳಿಯಿತು, ಅದೂ ನನಗರಿವಿಲ್ಲದಂತೆ.

 

ಕೋನಪ್ಪ ಅವರ ಮುಖದಲ್ಲಿ ಮುಖವಿರಿಸಿ “ಸಾಹೇಬರೇ ರಜೆ ಕೊಡ್ತೀರೋ ಇಲ್ಲೋ” ಎಂದು ಆವಾಜ್ ಹಾಕುವುದರ ಮೂಲಕ ತಾನು "ತೀರ್ಥಂಕರ" ಪದವಿಗೇರಿರುವುದನ್ನು ಸಾಬೀತು ಪಡಿಸಿದ.

 

“ಇರುವ ಒಂಚೂರು ಇಡ್ಲಿ ತುಂಡನ್ನು ಹಲವು ತಾಸುಗಳವರೆಗೆ ಅರಗದಂತೆ ನೋಡಿಕೋ” ಎಂದು ದಯಾಮಯನಾದ ಭಗವಂತನಲ್ಲಿ ಕೇಳಿಕೊಂಡೆ. ಸರ್ವಶಕ್ತನಾದ ಅವನು ಹಸಿವೆಯ ವಿಷಯದಲ್ಲಿ ಅಸಹಾಯಕನೆಂಬ ಸಂಗತಿ ಗೊತ್ತಿದ್ದರೂ.

 

ನಮ್ಮ ಪತ್ರಿಕಾ ಅಭಿಮಾನಿಗಳ ಪೈಕಿ ಕೆಲವರು ಪತ್ತೆದಾರಿಕೆಗೆ ಇಳಿದು ಸರ್ಕಾರಿ ಕೃಪಾಪೋಷಿತ ಖದೀಮರನ್ನು ಪತ್ತೆ ಹಚ್ಚಿ ವರದಿ ಮಾಡಲಾರಂಭಿಸಿದರು. ಅದಕ್ಕೆ ಪ್ರತಿಯಾಗಿ ಅವರಿಗೆ ರುದ್ರಪ್ಪನ ಹೋಟಲಲ್ಲಿ ಮಂಡಾಳೊಗ್ಗರಣೆ, ಮೆಣಸಿನಕಾಯಿ ರೂಪದಲ್ಲಿ ಗೌರವಧನ ಸಂದಾಯ ಮಾಡುತ್ತಿದ್ದೆವು.

 

ಆ ದಿವಸ ನಮ್ಮಂಥ ಅಪಾಪೋಲಿಗಳಿಗೆ ತೊಂದರೆ ಕೊಡಬಾರದೆಂಬ ಉದ್ದೇಶದಿಂದ ಹುಟ್ಟಲು ಸೂರ್ಯ ಮಿಜಿಮಿಜಿ ಮಾಡುತಲಿದ್ದ.

 

ತುರ್ತುಪರಿಸ್ಥಿತಿ ಸಾಹಿತ್ಯಕ್ಕೆ ಸಲ್ಲಿಸಿದ ಅಮೂಲ್ಯ ಕೊಡುಗೆಯೆಂದರೆ ನಾಡಿನಾದ್ಯಂತ ಅಪಾರ ಸಂಖ್ಯೆಯಲ್ಲಿ ಕವಿಗಳನ್ನು ಸೃಷ್ಟಿಸಿದ್ದು, ಮತ್ತು ಕಸ್ತೂರಿಯಂತೆ ಕಂಗೊಳಿಸುತ್ತಿದ್ದ ಭಾಷೆಯ ಗೋಣಿಯೊಳಗೆ ತ್ಯಾಜ್ಯ ಸರಕನ್ನು ತುರುಕಿದ್ದು. ಕೊಟ್ರೇಶಿ, ಅಪಾರಿ, ಬಾಲ್ರಾಜ, ಸಿದ್ದ, ಮಾದೇವ, ಮಂಜ ಮೊದಲಾದವರು ಬರೆಯುತ್ತಿದ್ದ ಪದ್ಯಗಳಂತೂ ಆಟಂಬಾಂಬುಗಳಿಗೆ ಸರಿಸಾಟಿಯಾಗಿರುತ್ತಿದ್ದವು.

 

ಪ್ರಪಂಚದ ಎಲ್ಲಾ ಕಂದಕಗಳೂ, ಹಿಮವದ್-ಕೇದಾರ ಪರ್ವತಗಳೆಲ್ಲ ಲೋಕೋಪಯೋಗಿ ರಸ್ತೆ ಮೇಲೆ ಮೂಡಿ ಅಸಹಕಾರ ಚಳವಳಿ ನಡೆಸಿದ್ದರಿಂದಾಗಿ ಯಾವುದೇ ವಾಹನ ಹದಿನೈದು ಕಿಲೋಮೀಟರಿಗಿಂತ ವೇಗವಾಗಿ ಚಲಿಸುತ್ತಿರಲಿಲ್ಲ. ಹೀಗಾಗಿ ಬಡಪಾಯಿ ಪ್ರಯಾಣಿಕರು ಶಬರಿಯೋಪಾದಿಯಲ್ಲಿ ಕಾಯುತ್ತಿದ್ದುದು ಮಾಮೂಲು ದೃಶ್ಯವಾಗಿತ್ತು.

 

ಕಪ್ಪಟ್ರಾಳ್ ಊರು ಸಮೀಪಿಸಿತೇನೋ ನಿಜ, ಅಗಸೆಬಾಗಿಲು ದಾಟಿದ ಬಳಿಕವೇ ಊರು ಈ ಕಾಲದ್ದಲ್ಲವೆಂದೂ, ಕುಷಾಣರ ಕಾಲದ್ದೆಂದೂ ಅರ್ಥವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.

 

ಬೆಳಗ್ಗೆ ಆರಂಭಗೊಂಡ ನೀರಿಗೆ ಸಂಬಂಧಿಸಿದ ರಸವತ್ತಾದ ಸನ್ನಿವೇಶಕ್ಕೆ ಕ್ಲೈಮ್ಯಾಕ್ಸ್ ಪ್ರಾಪ್ತವಾಗುತ್ತಿತಿದ್ದುದು ಮಟಮಟ ಮಧ್ಯಾಹ್ನ ಹನ್ನೆರಡರ ಸುಮಾರಿಗೆ. ನೀರು ಇನ್ನೊಂದೆರಡು ಕಿಲೋಮೀಟರ್ ದೂರವಿದ್ದಾಗಲೇ ಕೊಳಾಯಿಗಳು ಸರ್ ಪುಸ್ ಎಂದು ನೇಪಥ್ಯ ಸಂಗೀತವನ್ನೊದಗಿಸುತ್ತ ಹೆರಿಗೆ ಬೇನೆಯನ್ನು ಕರ್ಣಾನಂದಕರವಾಗಿ ಮಾಡತೊಡಗಿದೊಡನೆ ಹತ್ತಾರು ಮಂದಿಯಾಗುತ್ತಿದ್ದುದೋ, ಹತ್ತಾರು ಮಂದಿ ನೂರಾರು ಮಂದಿಯಾಗುತ್ತಿದ್ದುದೋ, ನೂರಾರು ಮಂದಿ ಸಾವಿರಾರು ಸಂಖ್ಯೆಯವರಾಗುತ್ತಿದ್ದುದೋ, ತಮ್ಮ ದೈಹಿಕ ಅವಸ್ಥೆಗಳನ್ನು ಲೆಕ್ಕಿಸದೆ ಓಡೋಡಿ ಬಂದು ಕುಣಿಯೊಳಗೆ ಜಿಗಿಯುತ್ತಿದ್ದುದೋ, ಅವರ ತಲೆಗೂದಲನ್ನಿವರೂ, ಇವರ ತಲೆಗೂದಲನ್ನವರೂ ಹಿಡಿದುಕೊಳ್ಳುತ್ತಿದ್ದುದೋ, ತಮ್ಮ ಬಾಯಿಗಳೆಂಬ ವಿಶ್ವವಿದ್ಯಾಲಯಗಳಿಂದ ಅಕ್ಷೋಹಿಣಿ ಅಕ್ಷೋಹಿಣಿ ಬಯ್ಗಳನ್ನು ಓತಪ್ರೋತವಾಗಿ ಉದುರಿಸುತ್ತಿದ್ದುದೋ..

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು