ಹಬ್ಬದ ದಿನ ಬ್ಯಾಚುಲರ್ ಬದುಕು ಇನ್ ಬೆಂಗಳೂರು…

To prevent automated spam submissions leave this field empty.

 

`ಏನು…? ನಾಳೆ ಹಬ್ಬಾನ? ಯಾವ್ ಹಬ್ಬ…!?’ ದೇವರಾಣೆ ಈ ಪ್ರಶ್ನೆನ ನಾನು ನಿನ್ನೆ ರಾತ್ರಿ ನನ್ನ ಗೆಳತಿ ಚೇತನಾಗೆ ಕೇಳಿದ್ದೆ. ಆಶ್ಚರ್ಯ ಏನಿಲ್ಲ… ಈ ಬೆಂಗಳೂರಲ್ಲಿ ನಾಲ್ಕು ಗೋಡೆಯ ನಡುವಿನ ಬದುಕು ವಾರ, ದಿನಾಂಕವನ್ನೆ ಮರೆಸಿಬಿಡುತ್ತವೆ. ಅಂತದ್ರಲ್ಲಿ ಹಬ್ಬದ ನೆನಪಾದ್ರೂ ಹೇಗೆ ಆಗೋಕೆ ಸಾಧ್ಯ. ನೋ ಚಾನ್ಸ್.. ಅಟ್ ಲೀಸ್ಟ್  ಅಮ್ಮ, ತಂಗೀನಾದ್ರೂ ಫೋನ್ ಮಾಡಿ ಹಬ್ಬಕ್ಕೆ ಬರಲ್ವ ಅಂತ ಕೇಳಿರ್ತಿದ್ರು. ಆದ್ರೆ ಊರಿಗೆ ಕರೆದಾಗಲೆಲ್ಲಾ  ನನ್ನ ಹತ್ರ ಬೈಸಿಕೊಂಡು ಅವರೂ ಸುಮ್ನಾಗಿ ಹೋಗಿದಾರೆ. ಹಂಗಾಗಿ ಅವರೂ ಕರೆಯಲ್ಲ, ನಾನೂ ಹೋಗಲ್ಲ… ನಂದೂ ಒಂದು ಬದುಕು…

ಅಂದಹಾಗೆ ಇವತ್ತಿನ ಹಬ್ಬ ಆಯುಧ ಪೂಜೆ ಅಲ್ವ? ಅದೇ 8 -10 ವರ್ಷಗಳ ಹಿಂದೆ ನಮ್ಮೂರ ರೈಸ್ ಮಿಲ್ ಎದುರು ಕುಂಬಳಕಾಯಿ ಒಡೆದಾಗ ಅದೊರಳಗೆ ಅವಿತು ಕೂತ ಕುಂಕುಮ ತುಂಬಿದ ಕಾಯಿನ್ ಗಳಿಗಾಗಿ ಕೈ ನುಗ್ಗಿಸಿ ಕಿತಾಡ್ತಾ ಇದ್ವಲ್ಲ ಅದೇ ಹಬ್ಬ ತಾನೇ… ಅದೇ ಅದೇ.. ಯಾಕಂದ್ರೆ ನಮ್ ಆಫೀಸ್ ನಲ್ಲೂ ಇವತ್ತು ಕ್ಯಾಮರಾ, ಲೈಟು, ಕಂಪ್ಯೂಟರ್ ಗೆಲ್ಲಾ ಪೂಜೆ ಮಾಡಿ ಅಂತದ್ದೇ ಕುಂಬಳಕಾಯಿಯನ್ನ ಹೊರಗೆ ಓಡೀತಾ ಇದ್ರು… ಅದೇನೇ ಇರ್ಲಿ ನಾನ್ ಹೇಳೋಕೆ ಹೊರಟಿರೋದು ಬ್ಯಾಚುಲರ್ ಗಳ ಹಬ್ಬಗಳು ಈ ಬೆಂಗಳೂರಲ್ಲಿ ಹೇಗಿರುತ್ತೆ ಅಂತ… ನಾನು ಬೆಂಗಳೂರಿನಲ್ಲಿ 4 ವರ್ಷದಿಂದ ಬ್ಯಾಚುಲರ್.. ಹಂಗಾಗಿ ಅನುಭವದ ಮೇಲೆ ಇವೆಲ್ಲಾ ಹೇಳ್ತೀನಿ ಕೇಳಿ… ನಾನು ಮನೆಗೆ ಹೋಗಿ ಇವತ್ತಿಗೆ ಏಳು ದಿನ ಆಗಿತ್ತು. ಆಫೀಸ್-ಶೂಟಿಂಗ್ ಮನೆ ಇಷ್ಟೇ ನನ್ನ ಬದುಕು… ಆದ್ರೆ ಇವತ್ತು ಹಬ್ಬ ಅನ್ನೋ ಕಾರಣಕ್ಕೆ ನನ್ನನ್ನ ಅಪರೂಪಕ್ಕೆ ನೋಡೋ ನನ್ನ ರೂಮಿಗೆ ಹೋಗಿ ನನ್ನ ಬಾತ್ ರೂಂಗೆ ನನ್ನ ಕೊಳಕು ಮೈ ತೋರಿಸಿ, ಡವ್ ಸೋಪೇ ಕಪ್ಪಾಗೋ ಹಾಗೇ ಮೈ ತಿಕ್ಕಿ ಸ್ನಾನ ಮಾಡಿ ಬಂದೆ… ಅದೊಂದೇ ಇವತ್ತಿನ ಮಟ್ಟಿಗೆ ನಾನು ಹಬ್ಬಕ್ಕೆ ಕೊಟ್ಟ ಉಡುಗೊರೆ. ಆಫಿಸಿಗೆ ಬಂದ್ರೆ ಎಲ್ಲರ ಬೈಕುಗಳೂ ಲಕ ಲಕ ಮಿಂಚ್ತಾ ಇದೆ. ನನ್ನ ಬೈಕು ಮಾತ್ರ ನಿನ್ನೆ ಮೊನ್ನೆ ಗಂಡನನ್ನ ಕಳೆದುಕೊಂಡವಳ ಹಾಗೆ ಮಂಕಾಗಿದೆ… `ನೀನ್ ಮಾತ್ರ ಸ್ನಾನ ಮಾಡಿ ಬಂದೆ ಕನಿಷ್ಠ ನನ್ನ ಹೊದ್ದುಕೊಂಡಿರೋ ಧೂಳಾದ್ರು ಒರೆಸು’ ಅಂತ ಬೇಡ್ಕೊಳ್ತಾ ಇರೋ ಹಾಗಿತ್ತು ನನ್ನ ಬೈಕ್…’ ಆದ್ರೆ ನಾನು ಆ ವಿಚಾರದಲ್ಲಿ ನಿಷ್ಕರುಣಿ. `ಮಳೆ ಬಂದ್ರೆ ಮಾತ್ರ ನಿಂಗೆ ಸ್ನಾನ’ ಅಂತ ಹೇಳಿ ಅದರ ಬೆನ್ನು ಎಳೆದು ಸ್ಟ್ಯಾಂಡ್ ಹಾಕಿ ಆಫೀಸ್ ಒಳಗೆ ಬಂದ್ರೆ ಎಲ್ಲೆಲ್ಲೂ ಕಲರ್ ಕಲರ್ ಕಲರ್.. ಹುಡುಗೀರು ಸೀರೆಯುಟ್ಟು ಮಿಂಚ್ತಾ ಇದಾರೆ, ಹುಡುಗರೆಲ್ಲಾ ಹೊಸ ಬಟ್ಟೆಯಲ್ಲಿ ಶೈನಿಂಗ್.. ಅದೃಷ್ಟಕ್ಕೆ ನಾನಿವತ್ತು ಮನುಷ್ಯನ ಹಾಗೆ ನೀಟಾಗಿ ಫಾರ್ಮಲ್ ಹಾಕ್ಕೊಂಡು ಬಂದಿದ್ದೆ. ಮರ್ಯಾದೆ ಉಳೀತು.ಅವರನ್ನೆಲ್ಲ ನೋಡಿದ ಮೇಲೆ ನಂಗೂ ಗ್ಯಾರಂಟಿ ಆಯ್ತು,  ಇವತ್ತು ನಿಜವಾಗಲೂ ಹಬ್ಬ ಅಂತ… !

ಆದರೂ ನಮ್ಮದೇನು ಬದುಕು ಅಂತೀನಿ…? ಹಬ್ಬ ಇಲ್ಲ, ಹರಿದಿನ ಇಲ್ಲ… ಎಲ್ಲಾ ದಿನಾನೂ ಒಂದೇ.. ಆ ಕಾಲ ಎಷ್ಟ್ ಸಕ್ಕತ್ತಾಗಿತ್ತು.. ಇವತ್ ಹೆಂಗಿದೆ…? ಇವತ್ತು ಯಾರೋ ತಂದು ಕಳ್ಳೆಪುರಿ ಕೊಟ್ರು. ಅವತ್ತು ಕವರ್ ಹಿಡ್ಕೊಂಡು ಅಂಗಡಿ ಅಂಗಡಿಲಿ ಕಳ್ಳೆಪುರಿ ಕಲೆಕ್ಷನ್ ಮಾಡ್ತಾ ಇದ್ದಿದ್ದು ನೆನಪಾಯ್ತು.. ದುಡಿಮೆಯ ಹೆಸರಲ್ಲಿ ಹಬ್ಬ, ಸಂಸ್ಕೃತಿ, ಆಚರಣೆ ಮರೆತ ಈ ಬದುಕಿಗಿಂತ ಆ ಬದುಕೇ ಸಕ್ಕತ್ತಾಗಿತ್ತು ಅನ್ಸುತ್ತೆ… ಅಮ್ಮ ಮಾಡ್ತಿದ್ದ ಹೋಳಿಗೆ, ಕದ್ದು ತಿಂತಿದ್ದ ಹೂರಣ, ಅಪ್ಪ ತರ್ತಿದ್ದ ಜಿಲೇಬಿ, ಒಟ್ಟಿಗೆ ಕೂತು ಮಾಡ್ತಿದ್ದ ಊಟ.. ವಾ ವಾ.. ಮತ್ಯಾವತ್ತೂ ಆ ಲೈಫ್ ಸಿಗೋಕೆ ಚಾನ್ಸೇ ಇಲ್ಲ… ಇವತ್ತು ನಮ್ಮ ಪರಿಸ್ಥಿತಿ ನೋಡಿ, ಎಂತಹ ಸ್ಪೆಷಲ್ ಡೇ ಆದರೂ ನಮಗೆ ಆಫೀಸ್ ಪಕ್ಕದ ಹೋಟೆಲ್ಲೇ ಗತಿ. ಅಲ್ಲಿ ಸಿಗೋ ಮಿನಿ ಇಡ್ಲಿ, ವಾಂಗಿಬಾತೆ ಶ್ರೇಷ್ಠ… ಎಲ್ಲಾ ಬ್ಯಾಚುಲರ್ಸ್ ಬದುಕೂ ಹೀಗೇನ ಅಂತ ಡೌಟ್ ಇತ್ತು ನಂಗೆ. ಪಕ್ಕದ ಹೋಟೆಲ್ ಹುಡುಗನ್ನ ಕೇಳಿದೆ, `ಊರಿಗೆ ಹೊಗಿಲ್ವೇನ್ರಿ’  ಅಂತ.. `ಅಯ್ಯೋ ಯಜಮಾನ್ರು ರಜಾ ಕೊಡಲಿಲ್ಲ ‘ ಅಂದ ಅವನು… ನಿಂದೂ ನನ್ನ ತರದ್ದೇ ಬದುಕು ಬಿಡು ಅನ್ಕೊಂಡೆ… ನಮ್ಮ ಆಫೀಸಿನ ಗುಂಡುರಾವ್ ` ನಮಗ್ಯಾವ ಹಬ್ಬ ಬಿಡು ಗುರು, ಇನ್ನೂ ಎಪಿಸೋಡ್ ಹೋಗಿಲ್ಲ’ ಅಂತ ಯಾರಿಗೋ ಹೇಳ್ತಾ ಇದ್ದಿದ್ದು ಕಿವಿಗೆ ಬಿತ್ತು… ಮದುವೆಯಾಗಿರೋ ಅನಿಲ್  ಹಬ್ಬದ ಹೆಸರಲ್ಲಿ ರಜಾ ಹಾಕಿ ಇಷ್ಟು ಹೊತ್ತಿಗೆ ಊರಲ್ಲಿ ಸೆಟಲ್ ಆಗಿರ್ತಾನೆ. ಇನ್ನುಳಿದಂತೆ ಬ್ಯಾಚುಲರ್ ಗಳು ಮಾತ್ರ ಎಂದಿನಂತೆ ಕೆಲಸದಲ್ಲಿ ಫುಲ್ ಬ್ಯುಸಿ…. ಏನಾದ್ರೂ ಆಗ್ಲಿ ಅಂತ ಸಂಜೆ ಪಕ್ಕದ ಹೋಟೆಲ್ ಗೆ ಹೋದೆ, ಅಲ್ಲಿ ಸಿಗೋ ಕಾಯಿ ಹೊಲಿಗೆನಾದ್ರೂ ತಿಂದು ಬರೋಣ ಅಂತ… ಗ್ರಹಚಾರಕ್ಕೆ ಅದೂ ಬಾಗಿಲು ಹಾಕಿತ್ತು. ವಾಪಸ್ ಬರಬೇಕಾದ್ರೆ ನನ್ನ ಬೈಕ್ ಕಡೆ ಕಣ್ಣು ಹಾಯಿಸ್ದೆ… ಎಲ್ಲಾ ಸಿಂಗಾರಗೊಂಡ ಬೈಕುಗಳ ನಡುವೆ ಅದು ಅನಾಥ ಪ್ರಜ್ಞೆ ಹೊತ್ತು ಅಲ್ಲೇ ನಿಂತಿತ್ತು.. `ದೀಪಾವಳಿಗೆ ನಾನೇ ಸ್ನಾನ ಮಾಡಿಸ್ತೀನಿ, ಡೋಂಟ್ ವರಿ…’  ಅಂತ ಹೇಳಿ ಲಿಫ್ಟ್ ಹತ್ತಿ ನನ್ನ ಸಿಸ್ಟಂ ಎದುರು ಕೂತು ಈ ಶೋಕ ಕಥನ ಬರೀತಾ ಇದೀನಿ.. ನೀವು ಓದು ಮುಗಿಸಿ ಮುಗುಳ್ನಗ್ತಾ  ಇದೀರಿ… ಇಷ್ಟೇ ಬ್ಯಾಚುಲರ್ ಬದುಕು…
ವಿಶೇಷ ಸೂಚನೆ : 7 -8 ದಿನ ಮನೆಗೆ ಹೋಗದೆ ಇದ್ರೂ, ಶೂಟಿಂಗ್ ಮನೆಯಲ್ಲಿ ನಾನು ಸ್ನಾನ ಮಾಡ್ಕೊಂಡಿದ್ದೆ.. ಆದ್ರೆ ಸರಿಯಾಗಿ ಮಾಡೋಕ್ ಆಗಿರಲಿಲ್ಲ ಅಷ್ಟೇ… !!!!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕೀರ್ತಿಯವರೇ ಕಳೆದ ನಾಲ್ಕು ವರ್ಷದಿಂದ ಬ್ಯಾಚುಲರ್ ಅಂತ ಬರೆದಿದ್ದೀರಲ್ಲಾ... ಅದಕ್ಕಿಂತ ಮೊದಲು ...? ಚೆನ್ನಾಗಿದೆ ನಿಮ್ಮ ಬ್ಯಾಚುಲರ್ ಕಥನ

ನಿಮ್ಮ ಬರಹ ಸೂಪರ್ ಆಗಿದೆ ಕೀರ್ತಿ ರವರೆ. ನಿಮ್ ಬರಹ ಓದಿ ಮುಗುಳ್ನಕ್ಕಿದ್ದು ಮಾತ್ರ ಸುಳ್ಳಲ್ಲ. ಬೆಂಗಳೂರು ನಿಜ್ವಾಗ್ಲೂ ತುಂಬಾ ಬಿಸೀ ಊರು. ದೀಪಾವಳಿ ಹಬ್ಬಕ್ಕೆ ನಿಮ್ ಬೈಕ್ಗೆ ಸ್ನಾನ ಮಾಡ್ಸೋದ್ ಮಾತ್ರ ಮರೀಬೇಡಿ. ಇಲ್ಲಾಂದ್ರೆ ಅದು ನಿಮ್ ಮೇಲೆ ಮುನಿಸಿಕೋಬಹುದು.