ದಿನದ ನನ್ನ ಅನುಭವ

To prevent automated spam submissions leave this field empty.

 


ಇವತ್ತು ಮಧ್ಯಾನ್ಹ .......


ನಮ್ಮ ಪ್ರೊಫೆಸರ್ ಒಬ್ಬರು ಊಟಕ್ಕೆ ಕ್ಯಾಂಪಸ್ ನ ಕನ್ನಡ ಬಂಧುಗಳನ್ನೆಲ್ಲ ಕರೆದಿದ್ದರು. ಸವಿಯಾದ ಭೋಜನ ಸವಿದು ಅಮ್ಮನ ನೆನಪಾಗಿ ಎಲ್ಲರೂ ಭಾವುಕರಾಗಿದ್ದೆವು. ಸುಮಾರು ೪:೩೦ ಗೆ ಅವರ ಮನೆಯಿಂದ ಚಾರ್ಮಿನಾರ್ ನೋಡಲು ನಾವು ಕೆಲ ಗೆಳಯರು,ನಮ್ಮಿಬ್ಬರು ಪ್ರೊಫೆಸರಗಳು ಹೊರೆಟೆವು. ಅತಿಯಾದ ಜನ ಸಂದಣಿಯಿಂದಾಗಿ, ವಾಹನ ಸಂಚಾರದಿಂದಾಗಿ ಮಿನಾರು ಕಳೆಗುಂದಿದಂತೆ ನನಗೆ ಭಾಸವಾಯಿತು.ಸುತ್ತಲೂ ಜನ,ಜನ,ಜನ. ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರು, ಪ್ರವಾಸಕ್ಕೆಂದು ಬಂದ ವಿದೇಶಿಯರು, ಸುತ್ತಲಿನ ರಸ್ತೆಯಂಗಡಿಯ ವ್ಯಾಪರಿಗಳೊಂದಿಗೆ ಚೌಕಾಶಿಗಿಳಿದ 


ಮದ್ಯಮ ವರ್ಗದ ಹಿಂದೂ- ಮುಸ್ಲಿಂ ಹೆಣ್ಣುಮಕ್ಕಳು, ಅಲ್ಲೇ ಜೀಪಿನಲ್ಲಿ ಕುಳಿತ ಪೋಲಿಸ್ ಆಫೀಸರ್ ಮತ್ತು ಕನಿಷ್ಟಬಿಲ್ಲೆಗಳು. ಕೆಲ ವರ್ಷದ ಹಿಂದೆ ನನ್ನ ಸಹೋದರ ಪ್ರವಾಸಕ್ಕೆಂದು ಬಂದಾಗ ಅವನ ಗೆಳೆಯರೊಂದಿಗೆ ಮಿನಾರು ನೋಡಿ ಕೆಳಗಿಳಿದ ಕೆಲವೇ ನಿಮಿಷಗಳಲ್ಲಿ ಉಗ್ರರು ಅಡಗಿಸಿಟ್ಟ ಬಾಂಬು ಪತ್ತೆಯಾಗಿದ್ದರ ಕುರಿತು ಅವನ ಅನುಭವ ಕಥನ ನೆನಪಾಯಿತು. ಆದರೆ ನಾನು ಮಾತ್ರ ಮೇಲೇರದೆ ಕೆಳಗೆ ನಿಂತು ಇದನೆಲ್ಲ ಯೋಚಿಸುತ್ತಿದ್ದೆ. ಮಿನಾರಿನ ಕೆಳ ಭಾಗದಲ್ಲಿ ಒಂದು ಪುಟ್ಟ ಲಕ್ಷ್ಮಿ ಮಂದಿರ ಮತ್ತು ಇವತ್ತು ಹಬ್ಬದ ಪ್ರಯುಕ್ತ ಮೆರವಣಿಗೆಯೊಂದು ಮಿನಾರಿನ ಪ್ರದೇಶದಲ್ಲಿ ಸುತ್ತು ಹಾಕುತ್ತಿತ್ತು.ಪುಟ್ಟ ಹುಡುಗ ಹುಡುಗಿಯರು ಸಾಂಪ್ರದಾಯಿಕ ವೇಷ ತೊಟ್ಟು ಅಭಯ  ಮುದ್ರೆ ತೋರಿಸುತ್ತ  ಒತ್ತು ಬಂಡಿಗಳಲ್ಲಿ ಕುಳಿತು ಸಾಗುತ್ತಿರುವ ದೃಶ್ಯ. ಅಲ್ಲೇ ಪಕ್ಕದ ಮಸೀದಿಯಲ್ಲಿ ಆಜಾನಿನ ಕೂಗು ಮತ್ತು ಗಂಟೆ, ಜಾಗಟೆ, ವಾದ್ಯಗಳ ಗುಂಜನ....


 


 


ಸಂಜೆಯಾಗುತ್ತಿದಂತೆ.....


 


 ತುಂತುರು ಮಳೆ ಜಿನುಗತೊಡಗಿತು. ಗೆಳೆಯರೆಲ್ಲ ವಾಪಸ್ ಬಂದ ನಂತರ ಪಕ್ಕದಲ್ಲೇ ಇರುವ ಮಸೀದಿ ನೋಡಲು ಒಳ ಹೊಕ್ಕೆವು. ಮಸೀದಿಯ ಆವರಣದಲ್ಲಿ ಹಿಂಡು ಹಿಂಡು ಪಾರಿವಾಳಗಳ ದಂಡು. ಜನರೆಸೆಯುವ ಕಾಳುಗಳನ್ನು ಹೆಕ್ಕುತ್ತ ಬೆದರಿ ಹಾರುತ್ತಾ ಪಟ ಪಟನೆ ರೆಕ್ಕೆ ಸದ್ದು ಮಾಡುತ್ತಾ ಹಾರಿಹೋಗಿ ಮತ್ತೆ ಜನರ ಸಮೀಪಕ್ಕೆ ಬರುವ ಶಾಂತಿ ದೂತರು. ಮನಸು ಉಲ್ಲಸಿತವಾಯಿತು. ಹಾಗೆಯೇ ಮೊನ್ನೆ ನೋಡಿದ ' ಮತ್ತೆ ಮುಂಗಾರು' ಸಿನಿಮಾದಲ್ಲಿನ ಒಂದು ಸಂಭಾಷಣೆ ನೆನಪಾಯಿತು. ಅದೇನೆಂದರೆ, ಪಾಕಿಸ್ತಾನದ ಸೆರೆಯಲ್ಲಿ ಬಂಧಿಯಾದ ನಿಷ್ಪಾಪಿ ಮೀನುಗಾರರು ಹಸಿವೆಯಿಂದ, ಕತ್ತಲಿನಿಂದ, ಬೂಟುಗಾಲಿನ ಒದೆತದಿಂದ ಬೇಸತ್ತು ಮಾನಸಿಕ ಸ್ಥಿಮಿತವನ್ನು ಕಳೆದು ಕೊಳ್ಳುವ ಹಂತ. ಆ ಗುಂಪಿನಲ್ಲೊಬ್ಬ ಹಸಿವೆಯನ್ನು ತಾಳಲಾರದೆ ಜಿರಳೆ ಮತ್ತಿತರ ಹುಳುಗಳನ್ನು ತಿನ್ನುತ್ತಾನೆ. ಹಾಗೆಯೇ ಒಂದು ದಿನ ಪಾರಿವಾಳವೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತುಕೊಳ್ಳುತ್ತದೆ. ಈತ ಅದನ್ನು ಹಿಡಿದು ತಿಂದು ಬಿಡುವ ಹುನ್ನಾರದಲ್ಲಿದಾಗ ಅವನ ಸಹ ಮೀನುಗಾರನೊಬ್ಬ ಹೇಳುವ ಮಾತು: " ಗೆಳೆಯಾ ಅದನ್ನು ಮಾತ್ರ ದಯವಿಟ್ಟು ನೀನು ತಿನ್ನ ಕೂಡದು. ಪಾರಿವಾಳ  ಮನೆ, ಮಸೀದಿ, ಮಂದಿರ, ಚರ್ಚು - ಎಲ್ಲ ಕಡೆಗಳಲ್ಲಿ ಜೀವಿಸುತ್ತೆ.  ನಿಜವಾದ ಜಾತ್ಯತೀತ ಪಕ್ಷಿಯದು. ನಾವು ಮನುಷ್ಯರು ಮಾತ್ರ ಜಾತಿ, ಧರ್ಮ , ದೇಶ, ಭಾಷೆಯೆಂದು ಬಡಿದಾಡಿ ಸಾಯುತ್ತಿದ್ದೇವೆ. ಇಲ್ಲದಿದ್ದರೆ ನಾವೆಲ್ಲ ಇವತ್ತು ಆ ಹಕ್ಕಿಯಂತೆ ಸ್ವಾತಂತ್ರವಾಗಿರಬಹುದಾಗಿತ್ತು" (ಸುಮಾರು ಇದೆ ಅರ್ಥದಲ್ಲಿ ಸಂಭಾಷಣೆ ಇದೆ).


ಮಸೀದಿಯ ಒಳಗೆ ನಾನು ಮೊದಲ ಸಲ ಕಾಲಿಟ್ಟೆ. ಏನೋ ಒಂಥರಾ ಶಾಂತ ವಾತಾವರಣ. ಚಿಕ್ಕಂದಿನಲ್ಲಿ ನಾನು ಮುಸ್ಲಿಂ ಸಮುದಾಯದವರ ನಿಕಟದಲ್ಲೇ ಬೆಳದಿದ್ದರೂ ಕೂಡ  'ದೊಡ್ಡವರು' ಹೇಳಿಕೊಟ್ಟಿದ್ದ ಅವರ ಕುರಿತಾಗಿನ ಕಥೆಗಳನ್ನು ಕೇಳಿ ಮನೆಯ ಪಕ್ಕದಲ್ಲೇ ಮಸೀದಿಯಿದ್ದರೂ ಹೋಗುವ ಧೈರ್ಯವಾಗುತ್ತಿರಲಿಲ್ಲ. ಮಸೀದಿಯಲ್ಲಿನ ಆ ಶಾಂತ ವಾತಾವರಣವನ್ನು ಉಸಿರಾಡಿ ಹೊರ ಬಂದೆ. ಚಪ್ಪಲಿ ಬಿಟ್ಟಿದ್ದ ಸ್ಥಳದ ಪಕ್ಕದ ಕಟ್ಟೆಯ ಮೇಲೆ ಕಂದು ಬಣ್ಣದ ಪಾರಿವಾಳವೊಂದು ಕತ್ತಿಗೆ ಗಾಯವಾಗಿ ನರಳುತ್ತಾ ಸುಮ್ಮನೆ ಕೂತಿದ್ದನ್ನು ನೋಡಿದೆ. ಆ ಪಾರಿವಾಳ ನಮ್ಮೆಲ್ಲರ ವಿಶ್ವಾಸ, ಪ್ರೀತಿ, ನಂಬಿಕೆಗಳ ದ್ಯೋತಕವಾಗಿ ಕಂಡಿತು.


 


ಏಕೆಂದರೆ.............ಜಾತಿ, ಮತ, ಭಾಷೆ, ನೆಲ  ಮುಂತಾದ ವಿಷಗಳಿಗೆ/ ವಿಷಯಗಳಿಗೆ ನಾವುಗಳು ಈ ಬದುಕಿನ ಸುಂದರವಾದ ಕೆಲ ಭದ್ರ ಬುನಾದಿಗಳಾದ ಪ್ರೀತಿ, ವಿಶ್ವಾಸ, ಸಹಬಾಳ್ವೆ, ನoಬಿಕೆಗಳನ್ನು ಮರೆತು ಇನ್ನೊಬ್ಬ ಮನುಷ್ಯನಿಗೆ ದ್ರೋಹ ಬಗೆದಾಗ, ಕೇಡು  ಮಾಡಿದಾಗ   ನೋವು ಅನುಭವಿಸುವ ಪ್ರತಿ ಮನುಷ್ಯ ಕೂಡ ಆಂತರ್ಯದಲ್ಲಿ ಶಾಂತಿಗಾಗಿ ಹಂಬಲಿಸುವ ಒಂದು ಸುಂದರ ಪಾರಿವಾಳ ಅದಕ್ಕೆ.


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಈ ಲೇಖನಕ್ಕೆ ಪೂರಕ ಚಿತ್ರಗಳನ್ನು ಸೇರಿಸಿದ್ದೇನೆ. ಲೇಖನದಲ್ಲಿ ಸೇರಿಸಲು ಆಗಲಿಲ್ಲ. ಮತ್ತು ಒಂದು ಪದವನ್ನು ಸರಿಮಾಡಿದ್ದೇನೆ.

ರವಿಯವರೇ ಉತ್ತಮ ಲೇಖನ ನಿಮ್ಮ ಇನ್ನೊಂಡೆಡೆ ಕೊಟ್ಟ ಚಿತ್ರವನ್ನೇ ಬಲಗಡೆ ಕ್ಲಿಕ್ (right click) ಮಾಡಿ" ಕೋಪಿ ಇಮೇಜ್ ಲೊಕೇಶನ್"ಅಂತ ಬರತ್ತೆ ಅದನ್ನೇ ಕಾಪಿ ಮಾಡಿ , ನಿಮ್ಮ ಲೇಖನದ ಲ್ಲಿ "ಬದಲಾಯಿಸಿ" ಯನ್ನು ಒತ್ತಿ ಚಿತ್ರ ಸೇರಿಸಿ ಎಂಬಲ್ಲಿ ಈ ಕಾಪಿ ಮಾಡಿದ ಲೊಕೇಶನ್ ಅನ್ನು ಅಂಟಿಸಿ , ತುಂಬಾ ಸರಳ

ರಾಗೊಷಾ ರಿಗೆ ವಂದನೆಗಳು. ಮುಂದೆ ಯಾವುದಾದರೂ ಲೇಖನ ಬರೆದರೆ ಅದಕ್ಕೆ ನೀವು ಹೇಳಿದ ಹಾಗೆ ಚಿತ್ರ ಸೇರಿಸುವ ಪ್ರಯತ್ನ ಮಾಡುವೆ.