ಫಿಂಗರ್ ಬೌಲೂ ಪ್ರಸಂಗಾವಧಾನವೂ

To prevent automated spam submissions leave this field empty.

ಹತ್ತೊಂಬತ್ತನೆ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ನಡೆದ ಘಟನೆಯಿದು.

ರಾಣಿ ವಿಕ್ಟೋರಿಯಳ ಉಪಸ್ಥಿತಿಯಲ್ಲೊಮ್ಮೆ ಉನ್ನತ ಮಟ್ಟದ ಔತಣವೊಂದು ನಡೆಯಿತು. ನಾಜೂಕು ವರ್ಗದ ಸುಮಾರು ೫೦೦ಜನ ಅಂದು ಆಮಂತ್ರಿತರು. ಆ ಔತಣದ ಮುಖ್ಯ ಅತಿಥಿ ಆಫ್ರಿಕ ಖಂಡದ ಬುಡಕಟ್ಟೊಂದರ ನಾಯಕ. ಸರಿ, ಊಟ ಶುರುವಾಯಿತು, ಎಲ್ಲ ಸೊಗಸಾಗಿ ನಡೆದು ಕೊನೆಯ ಹಂತಕ್ಕೆ ಬಂದು ತಲುಪಿತು. ಕೈ ಎದ್ದಿ ತೊಳೆದುಕೊಳ್ಳಲು ನಿಂಬೆಹಣ್ಣಿನ ಸಹಿತ ಉಗುರು ಬೆಚ್ಚಗಿನ ನೀರಿನ ಚಿಕ್ಕ ಬಟ್ಟಲುಗಳು* ಬಂದವು. ಆತ ಎಂದೂ ಇದನ್ನೂ ನೋಡಿಯೇ ಇರಲಿಲ್ಲ, ನೀರೇ ಅಲ್ಲವೇ ಅಂದು ಕೊಂಡು ಆತನಿಗೆ ಇದರ ಬಗ್ಗೆ ಕೌತುಕವೂ ಮೂಡಲಿಲ್ಲ. ಇತರರಿಗೆ ಟೈಮಿದ್ದಿಲ್ಲವೋ ಅಥವಾ ಅವರು ಅತಿಥಿಗೆ ಇದರಬಗ್ಗೆ ಗೊತ್ತಿರಬಹುದೆಂದು ತಿಳಿದರೋ, ಅಂತೂ ಅತಿಥಿಗೆ ಇದರ ಬಗ್ಗೆ ವಿವರಿಸಿರಲಿಲ್ಲ. ಆಫ್ರಿಕದ ಅತಿಥಿ ಬಟ್ಟಲನ್ನು ಎತ್ತಿ ನೀರನ್ನು ಗಂಟಲೊಳಗೆ ಗಟಗಟನೆ ಸುರಿದುಕೊಂಡರು.

ಒಂದು ಕ್ಷಣ!ನಾಜೂಕಿನವರ ಬಾಯಿಯಲ್ಲಿದ್ದ ಚಮಚೆಗಳು ಬಾಯಿಯಲ್ಲಿಯೇ, ತಿಂಡಿಯಲ್ಲಿ ಚುಚ್ಚಿಕೊಂಡಿದ್ದ ಚಮಚೆಗಳು ತಿಂಡಿಯಲ್ಲಿಯೇ, ಇನ್ನೇನು ಬಾಯೊಳಗೆ ಹಾಕಿಕೊಳ್ಳಬೇಕು ಎನ್ನುವ ಚಮಚೆಗಳು ಬಾಯಿಯ ಮುಂದೆಯೇ ಸ್ಥಬ್ಧವಾಗಿ ಹೋದವು! ಜೋರಾಗಿ ಮಾತನಾಡೋಣವೆಂದರೆ ರಾಣಿ ವಿಕ್ಟೋರಿಯ ಸಹ ಅಲ್ಲಿಯೇ ಇದ್ದಳು. ಯಾರಿಗೂ ಧೈರ್ಯ ಸಾಲಲಿಲ್ಲ. ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತ , ನಡೆದ ಪ್ರಮಾದದ ಬಗ್ಗೆ ಹುಬ್ಬಿನಿಂದಲೇ ಮಾತನಾಡಿಕೊಳ್ಳತೊಡಗಿದರು. ಹುಬ್ಬಿನ ಸದ್ದು ಹೆಚ್ಚು ಮುಂದುವರೆಯಲಿಲ್ಲ. ಊಟದ ಮಂದಿರದಲ್ಲಿದ್ದವರ ಪ್ರಪಂಚ ನಿಃಶಬ್ಧವಾಗಿ, ನಿಲುಗಡೆಯಾಗಿ  ಹೋಗಿತ್ತು. ಹೀಗಿರುವಾಗ ರಾಣಿ ತನ್ನ ಮುಂದಿದ್ದ ನೀರಿನ ಬಟ್ಟಲನ್ನು ಎತ್ತಿ ತಾನೂ ಅದರಲ್ಲಿದ್ದ ನೀರನ್ನು ತನ್ನ ಗಂಟಲೊಳಗೆ ಸುರಿದುಕೊಂಡಳು. ಮರುಕ್ಷಣವೇ ಎಲ್ಲ ಗಣ್ಯವ್ಯಕ್ತಿಗಳ ಬಟ್ಟಲಿನ ನೀರು ತಮ್ಮ ತಮ್ಮ ಯಜಮಾನರ ಹೊಟ್ಟೆಯನ್ನು ಸೇರಿತು. ಪ್ರಪಂಚ ಮತ್ತೆ ನಡೆಯತೊಡಗಿತು.

ವಿಕ್ಟೋರಿಯ ರಾಣಿಯ ಈ ಕೃತ್ಯ ನಾಜೂಕಿನವರ ಮಟ್ಟಿಗೆ ಅಸಂಪ್ರದಾಯವೆನಿಸಿದರೂ, ಆಕೆಯ ಅಸಧಾರಣವಾದ ಸಮಯಪ್ರಜ್ಞೆ, ಅತಿಥಿಯು ಮುಜುಗರಕ್ಕೀಡಾಗುವುದನ್ನು ತಪ್ಪಿಸಿತು. ಸಾಮಾನ್ಯವಾಗಿ ಮನುಷ್ಯನ ಸಹಜಗುಣವೆಂದರೆ, ಯಾರಾದರೂ ತಪ್ಪು ಮಾಡಿದಾಗ ಅವರನ್ನು ಅವಹೇಳನ ಮಾಡುವುದೋ ಅಥವಾ ಅದರತ್ತ ನೋಡದೆ ತಟಸ್ಥರಾಗಿಯೋ ಇದ್ದುಬಿಡುವುದು. ಗಂಭೀರವಾದ ಸಭೆಯಂತಹ ಪ್ರಸಂಗದಲ್ಲಿ ಅವರ ತಪ್ಪನ್ನೇ ತಾವೂ ಅನುಸರಿಸಿ, ಜೊತೆಗಾರರನ್ನು ಮುಜುಗರದಿಂದ ತಪ್ಪಿಸಲು ಸಮಯಪ್ರಜ್ಞೆ  ಇದ್ದರಷ್ಟೇ ಸಾಧ್ಯ. ಅತ್ಯಂತ ಪರಿಣಾಮಾಕಾರಿಯಾದ ಇಂತಹ  ಪ್ರಸಂಗಾವಧಾನವನ್ನು ನೈಜವಾದ ನಾಯಕರೇ ಪ್ರದರ್ಶಿಸಬಲ್ಲರು.

*ಫಿಂಗರ್ ಬೌಲ್

ಲೇಖನ ವರ್ಗ (Category):