ತಿರುಪತಿ ಟೂರ್ - ತಲೆ ಬೋಳಿಸಿದ್ದು

To prevent automated spam submissions leave this field empty.

ನೋಡ್ರಲಾ ನನ್ನ ಹೆಂಡರು ಬಸಮ್ಮನ ಹರಕೆ ಐತಂತೆ. ಗಂಡು ಮಗಾ ಆದ್ರೆ ಬತ್ತೀನಿ ಅಂತಾ ಹೇಳಿ ಕಂಡಿದ್ಲಂತೆ. ತಿರುಪತಿ ವೆಂಕಟೇಸ ಅಂತೆ. ಅದಕ್ಕೆ ತಿರುಪತಿಗೆ ಹೋಗ್ತಾ ಇದೀನಿ ನೀವೂ ಬರ್ರಲಾ ಅಂದ ಗೌಡಪ್ಪ. ಏ ನಮ್ಮ ಹತ್ರ ಕಾಸು ಇಲ್ಲ ಬುಡಿ ಅಂದ ಸುಬ್ಬ. ನಾನು ಕೊತ್ತೀನಿ ಆಮೇಲೆ ಕೊಡೀರೊಂತೆ ಬರ್ರಲಾ. ಸರಿ ಯಾವಾಗ ಹೊರಡೋದು ಅಂದ ತಂಬಿಟ್ಟು ರಾಮ. ನಾಡಿದ್ದು ಬೆಳಗ್ಗೆನೇ ಬಸ್ಸಿಗೆ ಹೋಗೋಣ ಕನ್ರಲಾ ಅಂದ ಗೌಡಪ್ಪ.
ಸರಿ ಎಲ್ರೂ ಮನೇಲ್ಲೂ ಕೋಡುಬಳೆ, ಚಕ್ಕಲಿ ಅಂಗೇ ನಿಪ್ಪಟ್ಟು ಪ್ಯಾಕ್ ಮಾಡ್ಕಂಡ್ವಿ. ನಮ್ಮ ಲಗೇಜ್ ಬರೀ 3 ಇದ್ರೆ. ತಿಂಡಿದು ಒಂದು 10 ಬ್ಯಾಗ್ ಆಗಿತ್ತು. ಸರಿ ಬೆಳಗ್ಗೆ 6ಕ್ಕೆ ತಿರುಪತಿ ಬಸ್ ಹತ್ತು ಕುಂತ್ವಿ. ಗೌಡಪ್ಪ ಟಿಕೆಟ್್ಗೆ ಎಣೆಸಿ,ಎಣೆಸಿ 1ಸಾವಿರ ರೂಪಾಯಿ ಕಾಸು ಕೊಟ್ಟ. ಬಂದ್ ಮ್ಯಾಕ್ ಮತ್ತೆ ಕೊಡಬೇಕು ಕನ್ರಲಾ. ಇಲ್ಲಾ ನಿಮಗೆ ಪುಣ್ಯ ಬರಕ್ಕಿಲ್ಲ ಅಂತ ಕಥೆ ಕಟ್ಟಿದ್ದ. ಕಿಸ್ನಂಗೆ ಪಕ್ಕದಲ್ಲಿ ಕೂರಿಸಿಕೊಂಡು ಕಾಸು ಯಾವಾಗ ಕೊಡ್ತೀಯಾ, ಕಟ್ಟಿಗೆ ಒಡೆದು ಅಥವಾ ಸಗಣಿ ಸಾರಿಸಿ ತೀರುಸ್ತೀಯಾ ಅಂತಾ ಆಗಲೇ ತಲೆ ತಿನ್ತಾ ಇದ್ದ. ಮಗಾ ಕಿಸ್ನ, ಗೌಡಪ್ಪನ ಕಾಟ ತಡೆಯಲಾರದೆ, ಲಾಸ್ಟ್ ಸೀಟ್ನಾಗೆ ಕಂಡಕ್ಟರ್ ಪಕ್ಕ ಕುಂತಿದ್ದ. ಕಿಟಕಿಗೆ ಗ್ಲಾಸ್ ಇಲ್ದೇ ಇದ್ದದ್ದಕ್ಕೆ, ಬರೋ ಗಾಳಿಗೆ ಸೋಮಾಲಿಯಾದೋರು ತರಾ ಆಗಿದ್ದ. ಸರಿ ತಿರುಮಲ ಬಂತು,. ಬಸಮ್ಮ ಎಲ್ಲಾ ಇಳೀರಿ ಅಂದ್ಲು. ತಡೆಯವ್ವಾ ತಿರುಪತಿ ಇನ್ನು ಮ್ಯಾಕೆ ಐತೆ. ಏ ಮೆಟ್ಟಿಲು ಹತ್ಕಂಡ್ ಬತ್ತೀನಿ ಅಂತ ಹರಕೆ ಹೊತ್ತೀವ್ನಿ ಅಂದ್ಲು.


ಸರಿ ಲಗ್ಗೇಜ್ ತಗೊಂಡು ಇಳಿದ್ವಿ. ಲೇ ತಿಂಡಿ ಬ್ಯಾಗ್ ಬರೇ 8 ಐತಲಾ ಅಂದ ತಂಬಿಟ್ಟು ರಾಮ. ಕಿಸ್ನ ಕೆರೆತಾವ ಹೋಗಕ್ಕೆ ಕಾಸು ಬೇಕಾಯ್ತದೆ ಅಂತಾ ಬಸ್್ನಲ್ಲಿ ಒಂದು ರೂಪಾಯಂಗೆ ಕೋಡು ಬಳೆ ಮಾರಿದ್ದ. ನಿಪ್ಪಟ್ಟಿನ ಬ್ಯಾಗ್ ಎಲ್ಲಲಾ ಅಂತಾ ರಾತ್ರಿ ಕೇಳ್ತಾ ಇದ್ದ ಕಲಾ ಅಂದ ದೊನ್ನೆ ಸೀನ. ಏ ಥೂ. ಸರಿ ಮೆಟ್ಟಿಲು ಹತ್ತಕ್ಕೆ ಸುರು ಹಚ್ಕಂಡ್ವಿ. ಗೌಡಪ್ಪನ ಹೆಂಡರು ಬಸಮ್ಮ ಸಾನೇ ಬೇಗ ಹತ್ತುತಾ ಇದ್ಲು. ಹೆಂಗವ್ವಾ. ಏ ನಾನು ಸಣ್ಣಕ್ಕಿದ್ದಾಗ ಕಳ್ಳತನ ಮಾಡಿ ಮೇಲುಕೋಟೆ ಮೆಟ್ಟಿಲು ಹತ್ತಿ, ದೇವಸ್ಥಾನದಾಗೆ ಅಡಿಕಂತಾ ಇದ್ಲೆ ಅಂದ್ಲು ಬಸಮ್ಮ. ನೀನು ಒಂದು ತರಾ ಸಣ್ಣ ಚಂಬಲ್ ರಾಣಿ ಅಂದ ಸುಬ್ಬ. ಗೌಡಪ್ಪ ಅಮ್ಮಾ, ಅಪ್ಪಾ ಅಂತಾ ಸಂಬಂಧಿಕರನ್ನು ಎಲ್ಲಾ ನೆನಸ್ಕಂತಾ ಹತ್ತುತಾ ಇದ್ದ. ಕಿಸ್ನ ಮಾತ್ರ ಹತ್ತತ್ತು ನಿಮಿಸಕ್ಕೂ 2ರೂಪಾಯಿ ಇಸ್ಕಂಡು ಹೋಗೋನು. ಯಾಕಲಾ. ಬಂದೆ ತಡೆಯಲಾ ಅನ್ನೋನು. ಸುಬ್ಬ, ತಂಬಿಟ್ಟು ರಾಮ ಅಂಗೇ ನಿಂಗ ನೀವು ಮುಂದೆ ಹೋಗ್ತಾ ಇರ್ರಿ ಅಂದು ಬಸ್ಸಿಗೆ ಹೋಗಿದ್ರು. ಸರಿ ಬೆಳಗ್ಗೆ 12ಕ್ಕೆ ಬಿಟ್ಟೋರು. ರಾತ್ರಿ ಹತ್ತಕ್ಕೆ ಬೆಟ್ಟ ತಲುಪಿದ್ವಿ. ಕಿಸ್ನ ಬಂದು ಮತ್ತೆ 2ರೂಪಾಯಿ ಕೊಡಲಾ ಅಂದ, ಯಾಕಲಾ. ಕೆರೆತಾವ ಹೋಗಕ್ಕೆ ಅಂದ. ಮತ್ತೆ ಕೋಡು ಬಳೆ ಮಾರಿದ್ದು ಏನಲಾ ಮಾಡದೆ. ಏ ಅದು ಬೀಡಿಗಾತು ಅಂದ. ಮಗಾ ಬೆಟ್ಟ ಹತ್ತುವುದರೊಳಗೆ 30ರೂಪಾಯಿ ಇಸ್ಕಂಡಿದ್ದ. ಬೆಟ್ಟ ತಲುಪುತ್ತಿದ್ದಾಗೆನೇ ರೋಡ್ನಾಗೆ ಕಿಸ್ಕಂಡಿದ್ದ.
ಸುಬ್ಬ ನಮಗಿಂತ ಮುಂಚೆನೇ ಬಂದು ಕಾಯ್ತಾ ಇದ್ದ. ರೂಂ ಎಲ್ಲಲಾ. ಎಲ್ಲಾ ರೂಂನಾಗೂ ಕರ್ನಾಟಕದ ಶಾಸಕರೇ ಅವ್ರೆ ಕಲಾ ಅಂದ. ಲೇ ಅವರು ರೆಸಾರ್ಟ್್ನಾಗೆ ಇಲ್ವೇನ್ಲಾ. ಲೇ ಅಲ್ಲಿ ಹೋದ್ರೆ ಡೀಲ್ ಮಾಡದು ಟಿವಿಯೋರಿಗೆ ಗೊತ್ತಾಗುತ್ತೆ ಅಂತಾ ಇಲ್ಲಿ ಬಂದವ್ರಂತೆ ಅಂದ ಸುಬ್ಬ. ಏ ಥೂ. ತಿರುಪತಿಗೇ ಲಾಡುನಾ ಅಂದ ಗೌಡಪ್ಪ. ಕಡೆಗೆ ಅಲ್ಲೇ ರೋಡಲ್ಲಿ ಕಿಸ್ಕಂಡಿದ್ದಾತು. ಪೊಲೀಸ್ ಬಂದು ಎದ್ದಂಡಿ ಎದ್ದಂಡಿ ಅಂತಾ ಎಬ್ಬಿಸಿದ. ಕಿಸ್ನ ಅಂಗೇ ಮಕ್ಕಂಡಿದ್ದನ್ನು ನೋಡಿ ಸತ್ತು ಹೋಗವ್ನೆ ಅಂತಾ ಆಗಲೇ ಮುನ್ಸಿಪಾಲಿಟಿ ಲಾರಿ ತರಿಸಿದ್ದ. ಏ ವಾಳ್ಳು ಜೀವಂತ ಉಂಡಿ ಅಂದು ಸುಬ್ಬ ಎತ್ಕಂಡ. ಲೇ ಸುಬ್ಬ ನಿನಗೆ ತೆಲುಗು ಬತ್ತದೇನ್ಲಾ ಅಂದ ಗೌಡಪ್ಪ. ಸಾನೇ ಎನ್.ಟಿ.ಆರ್ ಪಿಚ್ಚರ್ ನೋಡಿ ಕಲ್ತೀವ್ನಿ ಅಂದ ಸುಬ್ಬ. ಅದೇನೋಪಾ ಅಂದ ಸೀನ.
ಸರಿ ದರುಸನಕ್ಕೆ ಅಂತ ಬೆಳಗ್ಗೆನೇ ನಿಂತ್ವಿ. ಗೌಡಪ್ಪನ ವಾಸನೆಗೆ. ಅಲ್ಲಿದ್ದೋವು. ಕೆಟ್ಟ ವಾಸನೆಯಂಡಿ ಅಂತಿದ್ವು. ಕಮಿಟಿಯೋರು ಸೌಚಾಲಯ ವಾಸನೆ ಇರಬೇಕು ಅಂತಾ. ಒಂದು ಹತ್ತು ಬಾಟ್ಲ್ ಪಿನಾಯಿಲ್ ಹಾಕ್ಸಿದ್ರು. ಶೌಚಾಲಯದ ಮೇಲೆ "ಸುಲಭ್ ಇಂಟರ್ ನ್ಯಾಷನಲ್ "ಅಂತ ಬರೆದಿದ್ದನ್ನ ನೋಡಿ ಯಾರೋ ಫಾರಿನ್ನೋರು ಇರಬೇಕು ಅಂತ ಸುಬ್ಬ ಹೋಗಿದ್ದ. ಯಾಕಲಾ. ಲೇ ಎಲ್ಲಾ ನಮ್ಮ ದೇಸದೋರೆ ಕಲಾ, 5ರೂಪಾಯಿ ಇಸ್ಕಂಡ್ರು ಅಂದ. ಏ ಥೂ. ಗೌಡಪ್ಪ ದೇವರು ಮುಂದೆ ನಿಂತು ಕಣ್ಣು ಮುಚ್ಚಿ ಭಾವ ಪರವಸ ಆಗಿದ್ದ. ಕಣ್ಣು ಬಿಟ್ಟರೆ ದೇವಸ್ಥಾನದ ಹೊರಗೆ ತಂದು ಬಿಟ್ಟಿದ್ರು. ನೋಡಲಾ ದೇವರು ಮಹಿಮೆ. ನಾನು ಅಲ್ಲಿ ಕಣ್ಣು ಮುಚ್ಚಿದ್ರೆ. ಹೊರಗೆ ಬಂದಿದೀನಿ ಅಂದ ಗೌಡಪ್ಪ. ಅದು ದೇವರ ಮಹಿಮೆ ಅಲ್ಲ. ಸೆಕ್ಯೂರಿಟಿ ಮಹಿಮೆ ಅಂದ ಸುಬ್ಬ. ಅಂತೂ ದರುಸನ ಆತು. ಗೌಡಪ್ಪ ದೇವರ ಬಗ್ಗೆ ಮಾತಾಡೋದು ಬಿಟ್ಟು. ಒಡವೆ ಬಗ್ಗೆ ಸಾನೇ ಮಾತಾಡ್ತಾ ಇದ್ದ. ಏ ಥೂ. ಲೇ ತಿಂಡಿ ಅಂತಾ ಎಲ್ಲಾರೂ ಒಂದು ಮೂರು ಲಾಡು ತಿಂದ್ವಿ. ಸರಿ ಈಗ ತಲೆ ಬೋಳಸಬೇಕು ಬೇಗ ನಡೀರಿ ಅಂದ್ಲು ಬಸಮ್ಮ. ಏ ನಾನು ಬೋಳಸಕ್ಕಿಲ್ಲಾ ಅಂದ ಗೌಡಪ್ಪ. ಮಗುವಿನ ಮೇಲೆ ಆಣೆ ಅಂತಿದ್ದಾಗೆನೇ,. ಬರ್ತೀನಿ ನಡೀರಿ ಅಂದ ಸುಬ್ಬ. ಲೇ ಅವಳು ನನಗಲಾ ಹೇಳಿದ್ದು.
ಸರಿ ಎಲ್ಲಾರೂ ಹೋದ್ವಿ. ಕಟಿಂಗ್ ಮಾಡೋನು ಗೌಡಪ್ಪನ ಹತ್ತಿರ ರಸೀದಿ ಇಸಕಂಡು 20ರೂಪಾಯಿ ಕೊಡ್ರಿ ಅಂದ. ಯಾಕಲಾ. ಕೊಡಲಿಲ್ಲಾ ಅಂದ್ರೆ ತುಕ್ಕು ಹಿಡಿದ ಬ್ಲೇಡ್್ಲ್ಲಿ ಕೆರಿತೀನಿ ಅಂದು ಬ್ಲೇಡ್ ಚೇಂಜ್ ಮಾಡ್ದ. ತಗೊಳಪ್ಪಾ 20ರೂಪಾಯಿ ಅಂತ ಕೊಟ್ಟ. ಗೌಡಪ್ಪನ್ನ ಕೂರಿಸ್ಕಂಡು ಚೊಂಬ್ನಾಗೆ ಇದ್ದ ನೀರು ಹಾಕಿ ಕೆರೆಯಕ್ಕೆ ಸುರು ಮಾಡ್ದ. ಗೌಡಪ್ಪನ ತಲೇಲಿ ರಕ್ತ ಬತ್ತಾ ಇದ್ರೆ. ಅರಿಸಿನ ಹಚ್ಚೋನು ಕೆರೆಯೋನು. ಲೇ ಹೊಸಾ ಬ್ಲೇಡ್ ಹಾಕಲಾ. ಹೊಸಾ ಬ್ಲೇಡ್ ತರಬೇಕು ಅಂದ್ರೆ ಬೆಟ್ಟದ ಕೆಳಿಕ್ಕೆ ಹೋಗಬೇಕು ಸುಮ್ನೆ ಕೂತ್ಕಳಲಾ ಅಂತಾ ಕೆರೆದ. ಲೇ ಈ ಕೂದಲು ಏನಲಾ ಮಾಡ್ತೀಯಾ. ಚೌರಿ ಇಲ್ಲಾ ವಿಗ್ ಮಾಡ್ತೀನಿ ಅಂದ.  ನೆಕ್ಸಟ್. ಸುಬ್ಬ ಕೂತು ಎರಡು ನಿಮಿಸಕ್ಕೆ ತಲೆ ಬೋಳಿಸಿದ್ದ. ಹೆಂಗಲಾ. ಮಗಾ ಹಿಂಗ್ ಮಾತ್ತಾನೆ ಅಂತಾ ಗೊತ್ತಿತ್ತು ಕಲಾ. ಅದಕ್ಕೆ ಆದಷ್ಟು ಕೈನಾಗೆ ಕಿತ್ತಿದ್ದೆ  ಅಂದ. ನೆಕ್ಸಟ್ ಕಿಸ್ನ ಕೂತ. ಎರಡು ಲೀಟರ್ ನೀರು ಹಾಕಿದ. ಯಾಕ್ರೀ. ಲೇ ಇದೇನು ಕೂದಲೋ ಇಲ್ಲಾ ಬೇಲಿಗೆ ಹಾಕೋ ತಂತಿನಾ ಅಂದ ಕಟಿಂಗ್ ಮಾಡೋನು. ಯಾಕಲಾ ಕಿಸ್ನ. ಹೋದ ದೀಪಾವಳಿಗೆ ಎಣ್ಣೆ ಹಚ್ಚಿದ್ದೆ ಕಲಾ ಅಂದ. ಏ ಥೂ. ರಕ್ತಾ ಬತ್ತಾ ಇತ್ತು. ನೋಡಿದ್ರೆ ಕೂದಲು ತಾಕಿ ಕಟಿಂಗ್ ಮಾಡೋನು ಕೈಯಲ್ಲಿ ರಕ್ತ. ಸರಿ ಬಸಮ್ಮನೂ ತಲೆ ಬೋಳಿಸ್ಕಂತು. ಸೀರೆ ಒಂದೇ ತಂದಿತ್ತಂತೆ. ಹಂಗಾಗಿ ಸುಬ್ಬನ ಲುಂಗಿ,. ಗೌಡಪ್ಪನ ಜುಬ್ಬ ಹಾಕ್ಕಂಡು ಬಂತು.
ಸುಬ್ಬ, ಸೀನ ಅನ್ಕಂಡು ಬಸಮ್ಮನ ಹೆಗಲ ಮೇಲೆ ಕೈ ಹಾಕೋನು. ಯಾಕಲಾ ಹೆಂಗೈತೆ ಮೈಗೆ ಅನ್ನೋಳು. ಸರಿ ಊರಿಗೆ ಹೊರಡಕ್ಕೆ ಅಂತಾ ಬಸ್ ಸ್ಟಾಂಡ್್ನಾಗೆ ನಿಂತಿದ್ವಿ. ಪೊಲೀಸ್ನೋರು ಬಂದು ನಮ್ಮೆಲ್ಲರನ್ನೂ ಎತ್ತಾಕಂಡು ಹೋದ್ರು. ಯಾಕ್ ಸಾ ಅಂದ ಸುಬ್ಬ. ಲೇ ನೀವೆಲ್ಲಾ ನಕ್ಸಲರು ಅಲ್ವಾ ಅಂದ ಇನ್ಸ್್ಪೆಕ್ಟರ್. ಇಲ್ಲಾ ಸಾ. ಮತ್ತೆ ಹುಬ್ಬು ಯಾಕೆ ಬೋಳ್ಸಿದೀರಿ ಅಂದ. ಮಗಾ ಕಟಿಂಗ್ ಮಾಡೋನು, ನಮ್ಮ ತಲೆ ಮತ್ತು ಮುಖನಾ ಕಿಲೀನ್ ಕಿಸ್ನಪ್ಪ ಮಾಡಿದ್ದ. ಸಾನೇ ವರ್ಕ್ ಮಾಡಿದ್ರು. ಒಪ್ಪಿಕೊಳ್ಳರಿ ಅಂತ. ಕಡೆಗೆ ನಮ್ಮ ಶಾಸಕ ಭೈರೇಗೌಡ ಪೋನ್ ಮಾಡಿದ್ ಮ್ಯಾಕೆ ಬಿಟ್ರು.
ಸರಿ ಬಸ್ ಸಾನೇ ರಸ್. ಗೌಡಪ್ಪ ಸುಬ್ಬ ಅಂತಾ ಯಾವನೋ ಹೆಗಲು ಮೇಲೆ ಕೈ ಹಾಕ್ದ. ಏಮರಾ, ನೀ,,, ಅಂತಿದ್ದಾಗೆನೇ ಗೌಡಪ್ಪ ಕೈ ತೆಗೆದ. ಲೇ ಎಲ್ಲಾರೂ ತಲೆ ಬೋಳಸವ್ರೆ ಹೆಂಗಲಾ ನಮ್ಮೋರು ಅಂತ ಕಂಡು ಹಿಡಿಯೋದು ಅಂದ ಗೌಡಪ್ಪ. ಅದಕ್ಕೆ ಕಿಸ್ನ ಒಂದು ಕೆಲಸ ಮಾತ್ತೀನಿ ಅಂತಾ ನಮ್ಮ ಎಲ್ಲರ ತಲೆ ಮೇಲೂ ಕುಂಕುಮ ಹಚ್ಚಿದ. ಇದು ಕನ್ಲಾ ಐಡಿರೀಯಾ ಅಂದ್ರೆ ಅಂದು ಗೌಡಪ್ಪ ಅಂಗೇ ನಿದ್ದೇ ಹೋದ. ಸರಿ ಕಂಡಕ್ಟರ್ ಟಿಕೆಟ್ ಅಂದ್ರೆ, ಬೋಳು ತಲೆ ಮೇಲೆ ಕುಂಕುಮ ಇರೋರುದು ಎಷ್ಟ ಲಾ ಅಂದ ಗೌಡಪ್ಪ. 6ಸಾವಿರ ರೂಪಾಯಿ ಕೊಡ್ರಿ ಅಂದು ಕಂಡಕ್ಟರ್ ಇಡೀ ಬಸ್ಸಿಗೆ ಟಿಕೆಟ್ ಹರಿದ. ಎಲ್ಲಾ ಊರು ಬಂತು ಬೇಗ ಇಳೀರಿ ಅಂತಿದ್ದ ಕಂಡಕ್ಟರ್. ಯೋ ಕಂಡಕ್ಟರ್  ಹೋಗೋಬೇಕಾದ್ರೆ ಬರೀ ಒಂದು ಸಾವಿರ ಬಸ್ ಚಾರ್ಜ್ ಆಗಿತ್ತು. ಬರೋಬೇಕಾದ್ರೆ ಹೆಂಗಲಾ 6ಸಾವಿರ ರೂಪಾಯಿ ಆಯ್ತದೆ ಅಂದ ಗೌಡಪ್ಪ. ನೀವೇ ಹೇಳಿದಲ್ರಿ ಕುಂಕುಮ ಯಾರ ತಲೆ ಮೇಲೆ ಐತೆ ಎಲ್ಲಾರದೂ ಟಿಕೆಟ್ ತಗೋ ಅಂತಾ. ಹೂಂ, ನಾವು ಮಾತ್ರ ಹಚ್ಚಿರೋದು ಅಂದ. ರೀ ಬಸ್ ಹೊಂಟು ಸ್ವಲ್ಪ ಹೊತ್ತಿಗೆ ನಾಗರಕಟ್ಟೆ ಹತ್ತಿರ ನಿಲ್ಸಿದ್ವಿ. ಅಲ್ಲಿನ ಪೂಜಾರಿ ಹಾವಿನ ತರಾ ಕುಂಕುಮ ಹಚ್ಕಬೇಕು ಅಂದಿದ್ದಕ್ಕೆ, ಎಲ್ಲಾ ಪ್ರಯಾಣಿಕರು ಹಣೆಯಿಂದ ನೆತ್ತಿ ತಂಕ ಹಚ್ಕಂಡಿದ್ರು. ನಿಮ್ಮೋರು ಯಾರು ಅಂತಾ ನಮಗೇನು ಕನಸು ಬಿದ್ದಿರುತ್ತಾ ಅಂದ ಕಂಡಕ್ಟರ್.    

ಬಸಮ್ಮ ದರುಸನ ಸಂದಾಗಾತು ಅಂತಾ ಖುಸಿ ಪಡ್ತಾ ಇದ್ಲು. ಅಯ್ಯೋ ನಿನ್ ಮಕ್ಕೆ ಚಾ ಚಲ್ಟಾ ಹುಯ್ಯಾ ಅಂದೋನು ಎಲ್ಲಲಾ ಕಿಸ್ನ ಅಂದ ಗೌಡಪ್ಪ. ಯಾಕ್ರೀ. ಅವನ ಐಡಿರೀಯಾಕ್ಕೆ ನನ್ನ ಹಳೇ ಎಕ್ಕಡ ಹಾಕ ಅಂದ. ಲೇ ನೀವೆಲ್ಲಾ ಎಷ್ಟು ಕೊತ್ತೀರಲಾ ಅಂದ ಗೌಡಪ್ಪ. ತಲೆಗೆ 200ರೂಪಾಯಿ ಅಂದ ಸುಬ್ಬ. ಅಟೊತ್ತಿಗೆ ಬಸಮ್ಮ ಮುಂದಿನ ವಾರ ಧರ್ಮಸ್ಥಳಕ್ಕೆ ಹೋಗುವಾ ಅಂತು. ಯಾಕೆ ಅಲ್ಲೂ ನನ್ ತಲೆ ಬೋಳಿಸಕ್ಕಾ ಅಂದ ಗೌಡಪ್ಪ. ಅದಿರಲಿ ಹಳೇ ಬ್ಲೇಡ್ ಹಾಕಿ ಕೆರದವ್ನೆ ಮೊದಲು ಸೆಪ್ಟಿಕ್ ಇಂಜೆಕ್ಸನ್ ಮಾಡ್ಸಕ್ಕಳಿ ಅಂದ ಕಿಸ್ನ. ಮಗನೆ ನಾಳೆ ಕೊಟ್ಟಿಗ್ಯಾಗೆ ಸಿಗು ಅಂತಿದ್ದ ಗೌಡಪ್ಪ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<<ಪೊಲೀಸ್ನೋರು ಬಂದು ನಮ್ಮೆಲ್ಲರನ್ನೂ ಎತ್ತಾಕಂಡು ಹೋದ್ರು. ಯಾಕ್ ಸಾ ಅಂದ ಸುಬ್ಬ. ಲೇ ನೀವೆಲ್ಲಾ ನಕ್ಸಲರು ಅಲ್ವಾ ಅಂದ ಇನ್ಸ್್ಪೆಕ್ಟರ್. ಇಲ್ಲಾ ಸಾ. ಮತ್ತೆ ಹುಬ್ಬು ಯಾಕೆ ಬೋಳ್ಸಿದೀರಿ ಅಂದ. ಮಗಾ ಕಟಿಂಗ್ ಮಾಡೋನು, ನಮ್ಮ ತಲೆ ಮತ್ತು ಮುಖನಾ ಕಿಲೀನ್ ಕಿಸ್ನಪ್ಪ ಮಾಡಿದ್ದ. ಸಾನೇ ವರ್ಕ್ ಮಾಡಿದ್ರು. ಒಪ್ಪಿಕೊಳ್ಳರಿ ಅಂತ>>ಕೋಮಲ್ ನಕ್ಕು ನಕ್ಕು ಸಾಕಾಯ್ತು...