ಮನೆ, ಕಂಪೌಂಡ್ ನಮಗಷ್ಟೇ ಸೀಮಿತ..ದೊರವಾಯನ ಹಕ್ಕಿಗಲ್ಲ!

To prevent automated spam submissions leave this field empty.

ಅಳಿವಿನ ಅಂಚಿನಲ್ಲಿರುವ ದೊರವಾಯನ ಹಕ್ಕಿ ಆರ್ಥಾತ್ The Great Indian Bustard.

 

ನಮ್ಮ ಜೀವನ ರೀತಿ ತನ್ನ ಪರಿಸರದ ಮಿತಿಯೊಳಗೆ ಅರಳಬೇಕು. ಸಹಜ ಗತಿಯಲ್ಲಿ ಅದು ವಿಕಾಸ ಹೊಂದಬೇಕು. ಅದು ದೇಸಿ ಜೀವನ ವಿಧಾನ. ಆದರೆ ನಮ್ಮ ಆಧುನಿಕ ಜೀವನ ವಿಧಾನ ಪರಿಸರದ ಮಿತಿಯನ್ನು ಮೀರಿ ಬೆಳೆಯುತ್ತಿದೆ. ಅಸಹಜ ಗತಿಯಲ್ಲಿ ಬದಲಾವಣೆ ಹೊಂದುತ್ತಿದೆ.

ಹೆಗ್ಗೋಡಿನ ಪ್ರಸನ್ನ ಅವರು ಹೇಳುವಂತೆ, "ಹಿಮಾಲಯದ ಸೇಬು ಹಣ್ಣು, ಬಳ್ಳಾರಿಯ ಉರಿ ಬಿಸಿಲಿನಲ್ಲಿ ಮಾರಾಟಕ್ಕೆ ಸಿಗುವುದು; ಚೀನಿಯರ ನೂಡಲ್ಸ್ ಹಾಗೂ ಗೋಭಿ ಮಂಚೂರಿ ಭಾರತೀಯರಿಗೆ ಪ್ರಿಯವಾದ ತಿನಿಸಾಗಿರುವುದು, ಅಮೇರಿಕೆಯ ಮ್ಯಾಕ್ ಡೊನಾಲ್ಡ್ ಕಂಪೆನಿ ತನ್ನ ‘ಹ್ಯಾಂಬರ್ಗರ್’ ಮತ್ತು ‘ಪಿಜ್ಜಾ’ ಮೊದಲಾದವನ್ನು ಜಗತ್ತಿನಾದ್ಯಂತ ಉಣ ಬಡಿಸುವುದು, ಮೈಕೆಲ್ ಜಾಕ್ಸನ್ ತನ್ನ ಡಾನ್ಸ್ ನ ಆಂಗಿಕ ಅಭಿನಯದ ಭಾಗವಾಗಿ ‘ಕಾಕ್ ಪುಲ್ಲಿಂಗ್’ ಮಾಡಿದರೆ ಪ್ರಪಂಚಾದ್ಯಂತ ಇರುವ ಕೋಟ್ಯಂತರ ಯುವಕರು ವಿವೇಚನೆಯ ವಿವೇಕ ಮರೆತು ಅವರನ್ನು ಅನುಕರಿಸಿ ನರ್ತಿಸುವುದು ಪರಿಸರದ ಮಿತಿಯನ್ನು ಮೀರುವ ಉದಾಹರಣೆಗಳು."

 

ಗಣಿ ಕುಖ್ಯಾತಿಯ ಬಳ್ಳಾರಿ ಜಿಲ್ಲೆಯ ಕಟ್ಟ ಕಡೆಯ ಹಳ್ಳಿಯೊಂದರಲ್ಲಿ ಇತ್ತೀಚೆಗೆ ದೊರವಾಯನ ಹಕ್ಕಿ -The Great Indian Bustard ಮೊಟ್ಟೆ ಅನಾಥವಾಗಿ ಹೊಲವೊಂದರಲ್ಲಿ ಸಿಕ್ಕಿತ್ತು. ಸ್ಥಳೀಯರ ಕೋಳಿ ಗೂಡಿನಲ್ಲಿ ಈ ಮೊಟ್ಟೆಯನ್ನು ಮರಿ ಮಾಡಲು ಇಟ್ಟು ತನ್ಮಯತೆಯಿಂದ ಕಾಯ್ದಿದ್ದಾಯಿತು. ಆದರೆ ಮೊನ್ನೆ ಮೊಟ್ಟೆಗೆ ಕಾವು ಕೊಡುತ್ತಿದ್ದ ಕೋಳಿ ಆ ಮೊಟ್ಟೆಯನ್ನು ಒಡೆದು ಹಾಳು ಮಾಡಿತು. ಬದುಕಿಸಿಕೊಳ್ಳಬಹುದು ಎಂಬ ಯೋಚನೆ ಇದ್ದ ಪರಿಸರ ಪ್ರೇಮಿಗಳ ಆಶಯಕ್ಕೆ ತಣ್ಣೀರು ಎರೆಚಿದಂತಾಯಿತು.

 

ದೊರವಾಯನ ಹಕ್ಕಿ ರಾಣೆಬೆನ್ನೂರಿನ ಕೃಷ್ಣ ಮೃಗಗಳ ಧಾಮದಲ್ಲಿ ಸಂಚರಿಸುತ್ತಿರುವಾಗ.

 

ಕಳೆದ ನಾಲ್ಕು ವರುಷಗಳ ಹಿಂದೆ, ೨೦೦೬ ರಲ್ಲಿ ದೊರವಾಯನ ಹಕ್ಕಿ ಬಳ್ಳಾರಿ ಸಮೀಪದ ಹಳ್ಳಿಯೊಂದರಲ್ಲಿ ಕಂಡುಬಂದಿತ್ತು. ವಿನಾಶ  ಹೊಂದಿದೆ ಎಂದು ನಂಬಲಾಗಿದ್ದ ಈ ಹಕ್ಕಿ ‘ವಿನಾಶದ ಅಂಚಿನಲ್ಲಿದೆ’ ಎಂಬುದನ್ನು ಸಾಬೀತು ಪಡಿಸಿ ಸಂತಸ ಮೂಡಿಸಿತ್ತು. ಆದರೆ ಗಣಿ ಒತ್ತುವರಿ, ಮನುಷ್ಯರ ನಿರಂತರ ಓಡಾಟ, ವಾಹನಗಳ ಭರಾಟೆ ಬದುಕುಳಿದಿದ್ದ ಒಂದು ಹಕ್ಕಿಯ ಬದುಕನ್ನೂ ಸಂಕಷ್ಟಕ್ಕೆ ನೂಕಿತು.

 

ಬಳ್ಳಾರಿಯ ಪರಿಸರವಾದಿ ಹಾಗೂ ವನ್ಯಜೀವಿ ವಾರ್ಡನ್ ಮಾರ್ಟಿನ್ ಅವರ ಪ್ರಕಾರ, "ದೊರವಾಯನ ಹಕ್ಕಿ ಈ ರೀತಿ ತನ್ನ ಮೊಟ್ಟೆಯನ್ನು ತ್ಯಜಿಸುವುದು ಸುಲಭ ಸಾಧ್ಯವಲ್ಲ. ಬಹಶ: ಯಾರೋ ಮಾಂಸದ ಆಸೆಗಾಗಿ ಕಾಡು ಕೋಳಿ ಎಂದು ತಪ್ಪಾಗಿ ಪರಭಾವಿಸಿ ಕೊಂದಿರಬಹುದು. ಆದರೆ ಪಕ್ಕಾ ಕಾರಣಗಳು ತಿಳಿದಿಲ್ಲ." ಆದರೆ, ಧಾರವಾಡದ ವನ್ಯ ಜೀವಿ ವಾರ್ಡನ್  ಪ್ರೊ. ಗಂಗಾಧರ್ ಕಲ್ಲೂರ್ ಅವರ ಪ್ರಕಾರ.."ಗಂಡಿನ ಸಂಯೋಗವಾಗದೇ ಹೆಣ್ಣು ಕೇವಲ ಮೊಟ್ಟೆ ಇಟ್ಟಿರಬಹುದು. ಅದೊಂದು ನೈಸರ್ಗಿಕ ಕ್ರಿಯೆ. ಫಲಪ್ರದವಾಗದ ಮೊಟ್ಟೆಯಿಂದ ಮರಿ ಹುಟ್ಟಲು ಸಾಧ್ಯವಿಲ್ಲ. ಹಾಗಾಗಿ ಕೋಳಿ ದೊರವಾಯನ ಹಕ್ಕಿಯ ಮೊಟ್ಟೆಯನ್ನು ಮರಿ ಮಾಡಿಸಲಾಗದೇ ಕೊನೆಗೆ ಒಡೆದಿರಬಹುದು" ಎನ್ನುತ್ತಾರೆ.

 

೧೯೮೦ ರಲ್ಲಿ ಮೊದಲ ಬಾರಿಗೆ ರಾಣೇಬೆನ್ನೂರಿನಲ್ಲಿ ದೊರವಾಯನ ಹಕ್ಕಿಯ ಮೊಟ್ಟೆಯನ್ನು ಮರಿ ಮಾಡಿಸುವ ಪ್ರಯೋಗ ನಡೆದಿತ್ತು. ಆ ಪ್ರಯೋಗ ಯಶಸ್ವಿ ಕೂಡ ಆಗಿತ್ತು. ಬಳ್ಳಾರಿಯ ಈ ಪ್ರಯೋಗ ಯಶಸ್ವಿಯಾಗಿದ್ದರೆ ಎರಡನೇ ಬಾರಿ ಅನೈಸರ್ಗಿಕವಾಗಿ ಮೊಟ್ಟೆ ಒಡೆಸಿ ಮರಿ ಹೊರ ತೆಗೆಸುವಲ್ಲಿ ನಾವು ಯಶಸ್ವಿಯಾಗುತ್ತಿದ್ದೆವು. ಸದ್ಯ ಜಾಗತಿಕವಾಗಿ ನಡೆಸಿದ ಗಣತಿಯ ಪ್ರಕಾರ ಕೇವಲ ೩೦೦ ದೊರವಾಯನ ಹಕ್ಕಿಗಳು ಬದುಕಿರಬಹುದು ಎಂದು ಅಂದಾಜಿಸಲಾಗಿದೆ. 

 

ಗಂಡು ದೊರವಾಯನ ಹಕ್ಕಿ ಹೆಣ್ಣನ್ನು ಆಕರ್ಷಿಸುವಾಗ ನರ್ತಿಸುವ ಆಕರ್ಷಕ ಭಂಗಿ.

 

ಈ ಜೀವಿ ವೈವಿಧ್ಯವನ್ನು ಸರಿಯಾಗಿ ಅರಿತುಕೊಳ್ಳದೇ ನಾವು ಎಡವಿದ್ದೇ, ಹಲವಾರು ಪ್ರಮಾದಗಳಿಗೆ ಕಾರಣವಾಗಿದೆ. ಉದಾಹರಣೆಗೆ,  ಈಗಿನ ರಾಣೆಬೆನ್ನೂರಿನ ಕೃಷ್ಣ ಮೃಗಗಳ ಧಾಮದಲ್ಲಿ -ಅಂದರೆ ಈ ಧಾಮ ಘೋಷಣೆಯಾಗುವ ಮೊದಲೇ ಅಲ್ಲಿ ‘ದೊರವಾಯನ’ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿ ಕಾಣಸಿಗುತ್ತಿತ್ತು. ದೊರವಾಯನ ಹಕ್ಕಿ ಅತ್ಯಂತ ಅಂಜುಬುರುಕ. ಮನುಷ್ಯರನ್ನು ಕಂಡರೆ ನಾಚಿದಂತೆ ಕಣ್ತಪ್ಪಿಸಿ ನಡೆಯುವ ಸ್ವಭಾವದ್ದು. ಇದು ನೆಲದ ಮೇಲೆಯೇ ಸಂಚರಿಸುವ ಹಕ್ಕಿ. ಅಪಾಯ ಎದುರಾದರೆ ಮಾತ್ರ ಹಾರುವ ಕಷ್ಟ ಅದು ಮೈಮೇಲೆ ಎಳೆದುಕೊಳ್ಳುತ್ತದೆ! ಆದರೆ ಹೆಚ್ಚಿನ ಸಮಯ ಅದು ನೆಲದ ಮೇಲೆಯೇ ಆಶ್ರಯ ಪಡೆದಿರುತ್ತದೆ.

 

ಆದರೆ ಅರಣ್ಯ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ವನ್ಯಧಾಮಕ್ಕೆ ಸಂಪೂರ್ಣ ರಕ್ಷಣೆ ಕೊಡಲು ಮುಂದಾದಾಗ ಅಲ್ಲಿ ಯಥೇಚ್ಚವಾಗಿ ಹುಲ್ಲು ಬೆಳೆಯಿತು. ಆಗ ಗಮನಾರ್ಹವಾಗಿ ದೊರವಾಯನ ಹಕ್ಕಿಗಳ ಸಂಖ್ಯೆ ಕಳವಳಕಾರಿ ಮಟ್ಟಕ್ಕೆ ಕುಸಿಯಿತು.  ಈ ಬೆಳವಣಿಗೆಗೆ ಕಾರಣವೇನೆಂದರೆ, ದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿ ತಾನು ನಿಂತಾಗ ಸುತ್ತಲೂ ಇರುವ ಹುಲ್ಲು ಅದರ ಕಣ್ಣಿನ ನೋಟದ ಕೆಳಗಡೆ ವರೆಗೆ ಮಾತ್ರ ಬೆಳೆದಿದ್ದರೆ ತನ್ನನ್ನು ಇತರೇ ಪ್ರಾಣಿಗಳಿಂದ ಕಾಪಾಡಿಕೊಳ್ಳಲು ಸಾಧ್ಯ. ಆದರೆ ಅದರ ಕಣ್ಣಿನ ದೃಷ್ಟಿಯ ರೇಖೆಗಿಂತ ಮೇಲೆ ಹುಲ್ಲು ಬೆಳೆದಂತಹ ಸಮಯದಲ್ಲಿ ಸಹಜವಾಗಿಯೇ ಅದಕ್ಕೆ ತನ್ನ ಮುಂದೆ ಏನಿದೆ ಎಂಬುದು ಕಾಣದಾಯಿತು. ಹಕ್ಕಿಯ ಮನದಲ್ಲಿ ನಿರಂತರ ಆತಂಕ ಮನೆ ಮಾಡಿತು; ನಿತ್ಯ ಒತ್ತಡ ಅದಕ್ಕೆ ‘ಇನಸ್ಟಾಲಮೆಂಟ್ ಡೆತ್’ ತಂದಿತ್ತಿತು..

 

ನೆಲಕ್ಕೆ ಬಗ್ಗಿ ಕೀಟಗಳನ್ನು, ಬೀಜಗಳನ್ನು ಹೆಕ್ಕುವುದು ಅದಕ್ಕೆ ಖುಷಿಯ ವಿಚಾರ. ಈ ಕೆಲಸವನ್ನು ಅದು ಯಾರ ಹೆದರಿಕೆ ಮತ್ತು ಹಂಗಿಲ್ಲದೇ ಮಾಡಬಯಸುತ್ತದೆ. ಆದರೆ ತನಗಿಂತಲೂ ಎತ್ತರಕ್ಕೆ ಬೆಳೆದು ನಿಂತ ಹುಲ್ಲಿನ ಮಧ್ಯೆ ಅದು ಆಗಾಗ ಕತ್ತೆತ್ತಿ ನೋಡಿದಾಗಲೂ ತನ್ನನ್ನು ಬೇಟೆಯಾಡಲು ಬರಬಹುದಾದ ತೋಳ, ನರಿ, ನಾಯಿಗಳು ಕಾಣಿಸದಂತಾಯಿತು. ಹಾಗೆ ನೋಡಿದಾಗ ಏನೂ ಅಪಾಯವಿಲ್ಲ ಎಂದು ಖಚಿತವಾದ ಮೇಲೆ ಮತ್ತೆ ತನ್ನ ಕತ್ತನ್ನು ಬಾಗಿಸಿ ಆಹಾರ ಹೆಕ್ಕುವುದರಲ್ಲಿ ಮಗ್ನವಾಗುತ್ತಿದ್ದ ಅದಕ್ಕೆ, ಇದು ಧರ್ಮಸಂಕಟದ ಬೆಳವಣಿಗೆಯಾಗಿ ಪರಿಣಮಿಸಿತು. ಯಾವಾಗ ಜಿಂಕೆಗಳ ಉದರಂಭರಣಕ್ಕಾಗಿ , ಅವು ಅಕ್ಕ-ಪಕ್ಕದ ಹೊಲಗಳಿಗೆ ನುಗ್ಗದಂತೆ ದಟ್ಟವಾದ ಹುಲ್ಲು ಬೆಳೆಸಲಾಯಿತೋ..ದೊರವಾಯನ ಹಕ್ಕಿಯ ಕಣ್ಣಿನ ರೇಖೆಯ ಮಟ್ಟವನ್ನು ಮೀರಿ ಅದು ಬೆಳೆಯಿತು. ಆಗ ದೊರವಾಯನ ಅಲ್ಲಿಂದ ಜಾಗೆ ಖಾಲಿ ಮಾಡಿ ಹುಲ್ಲಿನ ಎತ್ತರ ಕಡಿಮೆ ಇರುವ ಪ್ರದೇಶಕ್ಕೆ ವಲಸೆ ಹೋಗಲು ಪ್ರಾರಂಭಿಸಿತು. ಹಾಗೆ ಮಾಡುವಾಗ ತೆರೆದ ಬಯಲು ಪ್ರದೇಶದಲ್ಲಿ ಅವು ಕ್ರಮೇಣ ನಾಯಿ, ನರಿಗಳಿಗೆ ಸುಲಭವಾಗಿ ತುತ್ತಾಗುವಂತಾಯಿತು.

 

ಹೀಗೆ ವನ್ಯಜೀವಿ ಸಂರಕ್ಷಣೆಯಲ್ಲಿ ಅಥವಾ ನಿರ್ವಹಣೆ ವಿಷಯದಲ್ಲಿ ಯಾವಾಗಲೂ ಒಂದು ಪ್ರಾಣಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಮಾನವ ತನ್ನ ಮೂಗಿನ ನೇರಕ್ಕೆ ವ್ಯವಹರಿಸಿದಲ್ಲಿ ಇನ್ಯಾವುದೋ ಜಾತಿಯ ಪ್ರಾಣಿಪ್ರಜಾತಿಗೆ ತೊಂದರೆ ಒದಗುವ ಸ್ಥಿತಿ ಬಂದೊದಗುತ್ತದೆ. ದೊರವಾಯನ ಹಕ್ಕಿ ಇದಕ್ಕೊಂದು ಸ್ಪಷ್ಟ ನಿದರ್ಶನ. ಕಾಡು, ವನ್ಯಜೀವಿ ನಿರ್ವಹಣೆ ಹಂತದಲ್ಲಿ ಇಂತಹ ತಪ್ಪುಗಳು ನಮ್ಮ ಕಣ್ಣು ಇಂದಿಗೂ ತೆರೆಸದಿರುವುದು, ಶಾಸ್ತ್ರೀಯ ಅಧ್ಯಯನಕ್ಕೆ ಎಡೆಮಾಡಿಕೊಡದಿರುವುದು ಮಾತ್ರ ದುರಂತ. ಕರ್ನಾಟಕ, ಗುಜರಾತ, ಮಧ್ಯಪ್ರದೇಶ, ರಾಜಸ್ಥಾನ್, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ದೊರವಾಯನ ಹಕ್ಕಿಗಳು  ಅವುಗಳಿಗೆಂದೇ ಮೀಸಲಾಗಿಟ್ಟು ರೂಪಿಸಲಾದ ಅಭಯಾರಣ್ಯ ತ್ಯಜಿಸಿ ಈಗಾಗಲೇ ಬಹು ದಿನಗಳಾಗಿವೆ.

 

ಮನೆ, ಮಠ, ಕಂಪೌಂಡು, ಬೇಲಿ-ಪಾಲು ಹಾಗಂತ ಯೋಚಿಸುವ, ಯೋಜಿಸುವ ಸಂಕುಚಿತ ಬುದ್ಧಿ ನಮಗಷ್ಟೇ ಸೀಮಿತ ಅಲ್ಲವೇ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸರ್, ವಿನಾಶದಂಚಿನಲ್ಲಿರುವ ಹಕ್ಕಿಯ ಬಗ್ಗೆ ತಿಳಿದು ಬೇಸರವಾಯಿತು. ಅಂದಹಾಗೆ ಲೇಖನದಲ್ಲಿರುವ ಮೂರೂ ಚಿತ್ರಗಳು ಅದೇ ಹಕ್ಕಿಯದೇ ?

ಹರ್ಷವರ್ಧನರವರೆ, ವನ್ಯಜೀವಿ ಸಂರಕ್ಷಣೆ/ನಿರ್ವಹಣೆ ವಿಷಯದಲ್ಲಿ ಎಲ್ಲೆಲ್ಲಿ ತಪ್ಪುತ್ತಿದ್ದೇವೆ ಎಂದು ಚೆನ್ನಾಗಿ ವಿವರಿಸಿದ್ದೀರಿ. ಇಲಾಖೆಯವರು ಮುಂದಾದರೂ ಜಾಗ್ರತೆ ವಹಿಸಲಿ. ೩೦೦ ದೊರವಾಯನ ಹಕ್ಕಿಗಳು ೩೦೦೦+ ಆಗಿ ಮುಂದುವರಿಯಲಿ.. -ಗಣೇಶ.

ಅವಸಾನದ ಅಂಚಿನಲ್ಲಿರುವ ದೊರವಾಯನ ಹಕ್ಕಿಯ ಬಗ್ಗೆ ತಿಳಿದು ತುಂಬಾ ಬೇಸರವಾಯಿತು. ನಿಮ್ಮ ಲೇಖನಗಳು ಇಲಾಖೆಯ ಕೈಗೆ ಸಿಗುವಂತಾಗಲಿ ಅದರಿಂದಾದರೂ ಈ ಹಕ್ಕಿಗಳ ಸಂರಕ್ಷಣೆಯಾಗಲಿ ಎಂದು ಆಶಿಸುತ್ತೇನೆ. ಕಳಕಳಿಯ ಲೇಖನ ಹರ್ಷವರ್ಧನರೆ... ಧನ್ಯವಾದಗಳೊಂದಿಗೆ ಕಾರ್ತಿಕ್

ಹರ್ಷವರ್ದನ್ ರವರೆ ಅಪರೂಪದ ಚಿತ್ರದೊಂದಿಗೆ ಅರ್ಥಪೂರ್ಣ ವಿವರಣೆ ನೀಡಿದ್ದೀರ ಈ ವಿಷಯ ಸೇರಬೇಕಾದವರ ಗಮನಕ್ಕೆ ಬಂದರೆ ತುಂಬಾ ಸನ್ತೋಷ (ಸಂತೋಷ)

ಬಹುಷ ಮನುಷ್ಯನನ್ನು ಉಳಿದು ಎಲ್ಲ ಜೀವಿಗಳು ನಿದಾನವಾಗಿ ವಿನಾಶದ ಅಂಚಿಗೆ ಸರಿಯುತ್ತಿವೆ ಒಂದರ ಹಿಂದೆ ಒಂದು..... ಕಡೆಗೆ ನಮಗೆ ಉಳಿಯುವುದು ಇಷ್ಟೆ ಹಣ ಮತ್ತು ಒಂದಿಷ್ಟು ದೂಳು (ಗಣಿಯದು)

ನಿಮ್ಮ ಕಳಕಳಿ ಅಭಿನ೦ದನೀಯ ಶೀಲವ೦ತರೇ. ಒಳ್ಳೆಯ ಮನಮುಟ್ಟುವ ಲೇಖನ. ಸೃಷ್ಟಿಯೇ ಹಾಗೆ. ಇಲ್ಲಿ ಪ್ರತಿಯೊ೦ದೂ ಸರಪಳಿ ಇದ್ದ ಹಾಗೆ. ಒ೦ದು ಕಡೆಯ ಕೊ೦ಡಿ ಕಳಚಿದರೂ ಮುಗಿಯಿತು! ನಿಮ್ಮ ಕಾಳಜಿ ಮನಮುಟ್ಟಿತು. ಎ೦ದಿನ೦ತೆ ಮಾಹಿತಿಯುಕ್ತ ಪರಿಸರ ಕಾಳಜಿಯ ಲೇಖನ ನಿಮ್ಮಿ೦ದ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.