ಅಂಗಳದ ಮೆಣಸಿನಕಾಯಿ

To prevent automated spam submissions leave this field empty.

[ ಈ ಕಿರುಬರಹವನ್ನು ಹಿಂದೆ ನನ್ನ ಸ್ವಂತ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ಸಂಪದದ ಓದುಗರಿಗೆಂದು ಮತ್ತೆ ಇಲ್ಲಿ ಹಾಕುತ್ತಿದ್ದೇನೆ. - ವೆಂ ]

ನೆಲ್ಲಿಕಾಯಿಯ ಗಾತ್ರ. ಅಂಗೈಯಲ್ಲಿ ಹಿಡಿಯಲು ಸುಲಭಸಾಧ್ಯ. ಆದರೆ ಅದಕ್ಕೂ ಇದಕ್ಕೂ ಅಜಗಜಾಂತರ. ಇದೊ ಅಬನೇರೊ ([w:Habanero|Habanero]). [:node/289/#indian_tezpur|ಅಸ್ಸಾಮಿನ ಮೆಣಸಿನಕಾಯಿಯ] ಬಗ್ಗೆ ಇರುವ ಚರ್ಚೆ ಇಲ್ಲಿಲ್ಲ. ಸದ್ಯಕ್ಕಂತೂ ಇದರಷ್ಟು ಖಾರದ ಮೆಣಸಿನಕಾಯಿ ಜಗತ್ತಿನಲ್ಲಿ ಬೇರೆ ಇಲ್ಲ. ಎಷ್ಟು ಖಾರ? ಗುಂಟೂರಿನ ಕಾಯಿಯಷ್ಟೆ? ಎಂದೀರಿ. ಖಾರವನ್ನೂ ಅಳೆಯಬಹುದು ಗೊತ್ತ? ಸ್ಕೋವಿಲ್ ([w:Scoville|Scoville]) ಹೆಸರಿನ ವಿಜ್ಞಾನಿ, ಪುಣ್ಯಾತ್ಮ, ಒಂದಷ್ಟು ಜನರಿಗೆ ಅರೆದ ಮೆಣಸಿನಕಾಯಿಯನ್ನು ತಿನ್ನಿಸಿ ಅದರ ಬಾಯುರಿ ಕಡಿಮೆಯಾಗಲು ಎಷ್ಟು ಸಕ್ಕರೆ ನೀರು ಕುಡಿಯುತ್ತಾರೆ ಎನ್ನುವುದರ ಮೇಲೆ ಒಂದೊಂದು ಜಾತಿಯ ಕಾಯಿಗೆ ಒಂದೊಂದು ಅಂಕೆಯನ್ನು ಹಚ್ಚಿದ. ಅವನ ಪ್ರಕಾರ ದಪ್ಪ ಮೆಣಸಿನಕಾಯಿಯಲ್ಲಿ ಯಾವ ಖಾರವೂ ಇಲ್ಲವಾದ್ದರಿಂದ ಅದರ ಅಂಕೆ ೦. ಮೆಣಸಿನಕಾಯಿ ತಿನಿಸಿದ ಪುಣ್ಯ ಸ್ಕೋವಿಲ್‌ನಿಗೆ ಸೇರಬೇಕಾದ್ದರಿಂದ ಈ ಅಳತೆಗೆ ಸ್ಕೋವಿಲ್‌ನ ಹೆಸರನ್ನೆ ಇಡಲಾಗಿದೆ. ನಾವು ಸಾಮಾನ್ಯವಾಗಿ ಬಳಸುವ ಹಸಿಮೆಣಸಿನಕಾಯಿ ೫೦೦೦೦ ದಿಂದ ೨೦೦೦೦೦ ಸ್ಕೊವಿಲ್‌ಗಳಷ್ಟು ಖಾರವಂತೆ. ಅಬನೇರೊವಿನದ್ದು ೨೦೦೦೦೦ರಿಂದ ೩೫೦೦೦೦ ಎನ್ನುತ್ತಾರೆ.

Habanero
ಅಬನೇರೊ

ಅಂದಮೇಲೆ ಖಾರವೆ ಆಯಿತಲ್ಲ? ನನಗೇನೊ ಹಸಿಮೆಣಸನ್ನು ಹೆಚ್ಚುವಾಗ ಆಗದ ಕೈಯುರಿ ಅಬನೇರೊ
ಹೆಚ್ಚುವಾಗ ಆಗುತ್ತದೆ. ಹಸಿಮೆಣಸನ್ನು ಅಗೆದಷ್ಟು ಸುಲಭವಾಗಿ ಅಬನೇರೋ ಚೂರನ್ನು
ಅಗೆಯಲಾರೆ. ಆದ್ದರಿಂದ ಅಬನೇರೊ ಖಾರವೆ. ಇವಳೂ ಒಪ್ಪಿಕೊಳ್ಳುತ್ತಾಳೆ. ಅದಕ್ಕೆ ಅಬನೇರೊ
ಹಾಕಿ ಅಡುಗೆ ಮಾಡುತ್ತೇನೆ ಅಂತ ನನ್ನ ಬಾವಮೈದನನ್ನು ಹೆದರಿಸುತ್ತಲೆ ಇರುತ್ತೇನೆ. ಅವನೂ
ಹೆದರುತ್ತಾನೆ.

ಇದು ಯಾವುದೂ ಬೇಡ, ಮಜ್ಜಿಗೆ ಪಳದ್ಯಕ್ಕೆ ನಾಲ್ಕಾರು ಹಸಿಮೆಣಸಿನ ಕಾಯಿ ಹಾಕುವ ಕಡೆ
ಒಂದು ನೆಲ್ಲಿಕಾಯಿ ಗಾತ್ರದ ಅಬನೇರೊ ಸಾಕು. ಮೇಲೆ ಮಜ್ಜಿಗೆ ಹಾಕಿಕೊಂಡರೂ ತಡೆಯುವಷ್ಟು
ಖಾರವಗಿರುತ್ತದೆ. ಕಾಯಿ ಸಾಸಿವೆ ಗೊಜ್ಜಿಗಾಗಲಿ ಖಾರ ಅರೆದು ಹಾಕಿದ ಪಲ್ಯಕ್ಕಾಗಲಿ
ನಾಲ್ಕಕ್ಕೆ ಒಂದು ಸಮವಾಗಿರುತ್ತದೆ. ಈಗ ನೀವೇ ಹೇಳಿ ಖಾರವೊ ಅಲ್ಲವೊ. ಆದರೆ ನನ್ನಮ್ಮ?
ಮಧು, ನನ್ನ 'ಬಾಮೈದ', ಊರಿಗೆ ಹೋದಾಗ ಅವನ ಕೈಲಿ ಒಂದಷ್ಟು ಅಬನೇರೊವನ್ನು ನಮ್ಮ ಮನೆಗೆ
ಕಳುಹಿಸಿದೆ. ಫೋನಿನಲ್ಲಿ ಅದರ ಖಾರವನ್ನು ಸಾಕಷ್ಟು ಬಣ್ಣಿಸಿಯೂ ಇದ್ದೆ. ಅದನ್ನು ಬಳಸಿದ
ಮೇಲೆ "ನೀನು ಹೇಳುವಷ್ಟು ಖಾರವೇನೂ ಇಲ್ಲ" ಎಂದು ತೀರ್ಪು ಕೊಟ್ಟರು. ನಾನು ಎಲ್ಲರಿಗಿಂತ
ಹೆಚ್ಚಾಗಿ ಖಾರವನ್ನು ತಡೆಯಬಲ್ಲೆ ಎಂದು ಜಂಭ ಕೊಚ್ಚುತ್ತಿದ್ದೆ, ಆಯಿತಲ್ಲ?

ಇಷ್ಟೆಲ್ಲ ಪೀಠಿಕೆ ಯಾಕೆ ಅಂದರೆ, ನಮ್ಮ ಮನೆಯ ಅಂಗಳದಲ್ಲಿ ಅಬನೇರೊವಿನ ಗಿಡ
ಬೆಳೆಸುತ್ತಿದ್ದೇವೆ. ನೆಟ್ಟು ಎರಡು ವರ್ಷದ ಮೇಲಾಯಿತು. ಹೋದ ವರ್ಷ ಮೊದಲ ಬೆಳೆ ಬಂತು,
ದಿನಕ್ಕೆ ಮೂರು ನಾಲ್ಕು ನೆಲ್ಲಿ ಗಾತ್ರದ ಮೆಣಸಿನಕಾಯಿ. ದಿನಾಲೂ ತಪ್ಪದೆ ಕಿತ್ತು
ಫ್ರಿಜ್ಜಿನಲ್ಲು ಇಟ್ಟೆವು. ಖಾರದ ಅನುಭವವಾದ ಮೇಲೆ ಕೀಳುವುದು ಕಡಿಮೆಯಾಯಿತು. ಈಗ
ಮಾಗಿಯಲ್ಲಿ ಗಿಡದ ಎಲೆಗಳೆಲ್ಲ ಉದುರಿದ್ದರೂ ಮೈತುಂಬ ಮೆಣಸಿನಕಾಯಿ ತಳೆದು ನಿಂತಿರುವ
ಗಿಡ ಅಂಗಳದಲ್ಲಿ ನಿಂತಿದೆ. ಕೆಂಪಗಿನ ಅಬನೇರೊ ಅಲ್ಲಿಂದಲೆ ಅಣಕಿಸುತ್ತಿದೆ. ತಿನ್ನಲು
ಹೇಗಾದರೂ ಇರಲಿ ನೋಡಲಿಕ್ಕಂತೂ ಚೆನ್ನಾಗಿದೆ. ನಿಮಗೆ ಬೇಕಾದರೆ ಹೇಳಿ, ಕಿತ್ತು
ಕೊಡುತ್ತೇನೆ.

ಅಂದ ಹಾಗೆ ಗುಂಟೂರಿನ ಕಾಯಿ ೧೦೦೦೦೦ ಸ್ಕೋವಿಲ್‌ನಷ್ಟು ಖಾರವಂತೆ. ಅಬನೇರೊಗೆ ಹೋಲಿಸಿದರೆ
ಸಪ್ಪೆ. ನಂಬದಿದ್ದರೆ ನಾನು ಗುಂಟೂರು ಕಾಯಿ ತಿನ್ನುತ್ತೇನೆ, ನೀವು ಅಬನೇರೊ ತಿನ್ನಿ,
ಇಬ್ಬರೂ ಸಾಟಿಮಾಡಿ ನೋಡೋಣ.

** ಅಸ್ಸಾಮಿನಲ್ಲಿ "ರೆಡ್ ಸವೀನ" ಅಥವಾ "ಇಂಡಿಯನ್
ತೇಜ್‌ಪುರ್" ಹೆಸರಿನ ಮೆಣಸಿನಕಾಯಿ ರಖಮು ಬೆಳೆಯುತ್ತದೆಯಂತೆ. ಅದರದ್ದು ೫೦೦೦೦೦
ಸ್ಕೋವಿಲ್‌ಗೂ ಮೀರಿದ ಖಾರವಂತೆ. ಆದರೆ ಇದನ್ನು ಎಲ್ಲರೂ ಒಪ್ಪುವಂತೆ ಕಾಣೆ. ಅಲ್ಲದೆ
ಇದು ಹೆಚ್ಚಾಗಿ ಎಲ್ಲೂ ಕಂಡುಬಂದಿಲ್ಲ. ನನ್ನ ಹತ್ತಿರ ಈ ಗಿಡದ ಬೀಜಗಳಿವೆ. ಬಿತ್ತು
ನೋಡಬೇಕು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕನ್ನಡ ವಿಕಿಪೀಡಿಯದಲ್ಲಿ ಸ್ಕೋವಿಲ್ ಬಗ್ಗೆ ಈಗ ತಾನೆ ಒಂದು ಚುಟುಕು ಲೇಖನ ಪ್ರಾರಂಭಿಸಿದೆ... ನೋಡಿ: [:http://kn.wikipedia....|ಲಿಂಕ್] -- "ಹೊಸ ಚಿಗುರು, ಹಳೆ ಬೇರು"

ಹಬನೆರೋ ಬಗ್ಗೆ ಓದ್ತಿದ್ರೇ ನನಗೆ ಹೊಟ್ಟೆ ಒಳಗೆ ಉರಿಯಾಗ್ತಿರೋ ಅನಿಸಿಕೆ. ಹಬನೆರೋ ಮೆಣಸಿನಕಾಯಿಯ ಬಣ್ಣ ಹೇಗಿದೆ. ಇನ್ನು ತಿನ್ನಕ್ಕಾಗತ್ತಾ? ನೀವೇನೋ ಗುಂಟೂರು ಖಾರ ತಿನ್ನಕ್ಕೆ ಸಿದ್ದ್ಯ. ನಾನು ಬ್ಯಾಡಗಿ ಮೆಣಸಿನಕಾಯಿ ಬೇಕಾದ್ರೆ ತಿನ್ನಬಲ್ಲೆ, ಅಷ್ಟೆ. ಇನ್ನು ಚೋಟು ಮೆಣಸಿನಕಾಯಿಗೂ ನಾನು ಹೆದರುವೆ. ಬ್ಯಾಡಗಿಗಿಂತ ಕೆಂಪಾಗಿದೆಯಾ? ಬ್ಯಾಡಗಿ ಮೆಣಸಿನಕಾಯಿ ರುಚಿಗೆ ಮತ್ತು ಬಣ್ಣಕ್ಕೆ ಪ್ರಸಿದ್ಧ, ಆದರೆ ಅಷ್ಟು ಘಾಟು ಇರೋದಿಲ್ಲ. ನಾಡಿಗರು ವಿಕಿಪೀಡಿಯದಲ್ಲಿ ಇದರ ಬಗ್ಗೆ ಚೆನ್ನಾಗಿ ಚುಟುಕಾಗಿ ಚುರುಕು ಮುಟ್ಟಿಸಿದ್ದಾರೆ. ಈ ಸ್ಕೋವಿಲ್ ನ ಪ್ರಕಾರ ಬ್ಯಾಡಗಿಯ ರೇಟಿಂಗ್ ಹೇಗಿದೆ? --- ತವಿಶ್ರೀನಿವಾಸ

ಬ್ಯಾಡಗಿ ಬಿಡಿ, ಒಂದು ಅಪೂರ್ವ ತರಹದ ಮೆಣಸಿನಕಾಯಿ... ಜಗತ್ತಿನ ಮೂಲೆ ಮೂಲೆಗೂ ರಫ್ತಾಗುತ್ತದೆಂದು ಶಿವಮೊಗ್ಗದ ಮಂಡಿಯವರೊಬ್ಬರಿಂದ ತಿಳಿದೆದ್ದೆ. ಅತಿ ಖಾರ, ಅತಿ ಸಪ್ಪೆ ಒಮ್ಮೆ ತಿನ್ನಲು ಮಾತ್ರ ಸಾಧ್ಯ... ಆದರೆ ಬ್ಯಾಡಗಿ? ಎಲ್ಲರಿಗೂ ಯಾವಾಗಲೂ ಬೇಕು! -- "ಹೊಸ ಚಿಗುರು, ಹಳೆ ಬೇರು"

ಚಿತ್ರ ಇಲ್ಲಿ ಹಾಕಿದೆ. ಇನ್ನು ತಿನ್ನಲಿಕ್ಕಾಗುತ್ತಾ? ಅಂದರೆ, ಇಡಿಯ ಕಾಯನ್ನು ಹಾಗೆಯೇ ಕಚಪಚ ಅಗೆದು ತಿನ್ನಲಿಕ್ಕೆ ನನ್ನ ಕೈಲಂತೂ ಆಗದು. ಆದರೆ ಅಡುಗೆಗೆ ಬಳಸಬಹುದು. ರುಬ್ಬಿಯೋ ತಿರುವಿಯೋ ಬಳಸಿದರೆ ತಿನ್ನುವುದು ಸುಲಭವಾಗುತ್ತೆ. ಬಾಯಿಗೆ ಸಣ್ಣ ಚೂರು ಸಿಕ್ಕಿದರೂ ಮುಕ್ಕಾಲು-ಮೂರುವೀಸಪಾಲು ಮಂದಿಗೆ ಸಂಕಟವೆ.

ಇನ್ನು ಬ್ಯಾಡಗಿಯ ಸ್ಕೋವಿಲ್ ರೇಟಿಂಗು ಏನಿದ್ದರೂ ಗುಂಟೂರಿನದನ್ನು ಮೀರಿ ಇರಲಾರದು.

ವೆಂ.

ವಿಕಿಪೀಡಿಯಾದಲ್ಲಿದ್ದ ಒಂದು ಚಿತ್ರವನ್ನು ಲೇಖನದಲ್ಲೇ ಸೇರಿಸಿರುವೆ :) -- "ಹೊಸ ಚಿಗುರು, ಹಳೆ ಬೇರು"