ಪೋಲಿಷ್ ಕವಿತೆ: ಹಿಂಸೆ

To prevent automated spam submissions leave this field empty.
ಏನೂ ಬದಲಾಗಿಲ್ಲ. ಮೈಗೆ ನೋವಾಗುವುದು ಏನೂ ಬದಲಾಗಿಲ್ಲ. ಉಣ್ಣಬೇಕು, ಉಸಿರಾಡಬೇಕು, ಮಲಗಬೇಕು, ಚರ್ಮ ತೆಳು, ಅದರ ಕೆಳಗೇ ಹರಿಯುವ ರಕ್ತ, ಬಾಯಿ ತುಂಬ ಹಲ್ಲು, ಕೈಕಾಲುಗಳಲ್ಲಿ ಉಗುರು, ಎಲುಬು ಮುರಿಯುತ್ತವೆ, ಕೀಲು ಕಿರುಗುಟ್ಟುತ್ತವೆ. ಹಿಂಸೆ ಕೊಡುವಾಗ ಇವೆಲ್ಲವನ್ನೂ ಗಮನಿಸಲಾಗುತ್ತದೆ. ಏನೂ ಬದಲಾಗಿಲ್ಲ. ರೋಮ್ ಸಾಮ್ರಾಜ್ಯ ಹುಟ್ಟುವ ಮುನ್ನ, ಗುಪ್ತರ ಸುವರ್ಣ ಯುಗದಲ್ಲಿ ಕೂಡ, ಕ್ರಿಸ್ತ, ಬುದ್ಧರು ಹುಟ್ಟುವ ಮುನ್ನ, ಅವರೆಲ್ಲ ಹುಟ್ಟಿ ಇನ್ನೂರು ಶತಮಾನ ಆದಮೇಲೆ ಕೂಡ, ಹಿಂಸೆಗೆ ಮೈ ತತ್ತರಿಸುವ ರೀತಿ ಬದಲಾಗಿಲ್ಲ. ಹಿಂಸೆ ಆಗ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಜಗತ್ತು ಕಿರಿದಾಗಿದೆ, ಎಲ್ಲೋ ಆದ ಹಿಂಸೆ ನಮ್ಮ ಪಕ್ಕದ ಮನೆಯಲ್ಲೆ ನಡೆದಂತಿರುತ್ತದೆ, ಅಷ್ಟೆ. ಏನು ಬದಲಾಗಿಲ್ಲ. ಜನರ ಸಂಖ್ಯೆ ಹೆಚ್ಚಾಗಿದೆ. ಅಪರಾಧಗಳ ಹಳೆಯ ಪಟ್ಟಿಗೆ ಹೊಸತು ಇನ್ನಷ್ಟು ಸೇರಿವೆ-- ನಿಜವಾದ, ಆರೋಪಿತವಾದ, ಕ್ಷಣಿಕವಾದ, ಅಪರಾಧವೇ ಅಲ್ಲದ ಅಪರಾಧಗಳು. ಆದರೆ ಇವಕ್ಕೆಲ್ಲ ಮೈ ಕೊಡುವ ಉತ್ತರವಿದೆಯಲ್ಲ, ಜೋರಾಗಿ ಅರಚಿಕೊಳ್ಳುವುದು ಅದು ಮಾತ್ರ ಹಾಗೆಯೇ ಇದೆ. ಪ್ರಾಚೀನ ಕಾಲದ ರಾಗ-ತಾಳಗಳಿಗೆ ಅನುಗುಣವಾಗಿಯೆ ಇಂದೂ ಹಿಂಸೆಗೆ ಸಿಕ್ಕ ಮುಗ್ಧ ಮೈ ಅರಚಿಕೊಳ್ಳುತ್ತದೆ. ಏನೂ ಬದಲಾಗಿಲ್ಲ. ಬಹುಶಃ ಸ್ಟೈಲು, ಸಭ್ಯತೆ, ಹಬ್ಬ ಹರಿದಿನ ಆಚರಣೆ, ಡ್ಯಾನ್ಸು, ಇವು ಬದಲಾಗಿವೆ. ಆದರೆ ತಲೆಗೆ ಏಟು ಬೀಳಲಿರುವಾಗ ಕಾಪಾಡಿಕೊಳ್ಳಲು ತಲೆಗೆ ಮರೆಮಾಡಿಕೊಳ್ಳಲು ಕೈ ಎತ್ತುವ ಭಂಗಿ ಇದೆಯಲ್ಲ, ಅದು ಮಾತ್ರ ಹಾಗೇ ಇದೆ. ಮೈ ಒದ್ದಾಡುತ್ತದೆ, ಹೊರಳಾಡುತ್ತದೆ, ತಪ್ಪಿಸಿಕೊಳ್ಳಲು ಹೋರಾಡುತ್ತದೆ, ಬಾಗುತ್ತದೆ, ಬೀಳುತ್ತದೆ, ಮೊಣಕಾಲು ಹೊಟ್ಟೆಯತ್ತ ಸೆಳೆದುಕೊಳ್ಳುತ್ತದೆ, ಗಾಯಗೊಳ್ಳುತ್ತದೆ, ಊದುತ್ತದೆ, ಜೊಲ್ಲುಸುರಿಸುತ್ತದೆ, ರಕ್ತಹರಿಸುತ್ತದೆ. ಏನೂ ಬದಲಾಗಿಲ್ಲ. ನದಿಗಳ ಪಾತ್ರ ಬದಲಾಗಿದೆ, ಕಾಡಿನ ಅಂಚು ಮತ್ತಷ್ಟು ಹಿಂದೆ ಸರಿದಿದೆ, ಸಮುದ್ರವನ್ನು ಮತ್ತಷ್ಟು ಬತ್ತಿಸಿದ್ದಾಗಿದೆ, ಮರುಭೂಮಿಯಲ್ಲಿ ಊರು ತಲೆಯೆತ್ತಿದೆ, ಧ್ರುವಗಳ ಹಿಮಗಡ್ಡೆ ಕರಗಿದೆ. ಈ ಬದಲಾದ ಭೂದೃಶ್ಯಗಳಲ್ಲಿ ಬಡಪಾಯಿ ಆತ್ಮ ಕಣ್ಮರೆಯಾಗುತ್ತ, ಮರಳಿ ಆಗೀಗ ಕಾಣಿಸಿಕೊಳ್ಳುತ್ತ, ಸಮೀಪಿಸುತ್ತ, ದೂರ ಸರಿಯುತ್ತ, ತನಗೆ ತಾನೆ ಅಪರಿಚಿತವಾಗುತ್ತ, ಈ ಕ್ಷಣ ಸ್ಪಷ್ಟ, ಮರುಕ್ಷಣ ಅಸ್ಪಷ್ಟವಾಗುತ್ತ ಇದೆ. ಆದರೆ ಮೈ ಮಾತ್ರ ಹಾಗೇ ಇದೆ, ಇದೆ, ಇದೆ, ಬೇರೆಲ್ಲೂ ಹೋಗಲಾರದೆ ಇದ್ದಲ್ಲೆ ಹಿಂಸೆಗೆ ಒಳಗಾಗುತ್ತ ಇದೆ. ವಿಸ್ಲಾವಾ ಝಿಂಬ್ರೋಸ್ಕ [ಹಿಂಸೆಯ ಬಗಗೆ ತೀವ್ರವಾಗಿ ಯೋಚಿಸುವಂತೆ ಮಾಡಿದ ಕವಿತೆ ಇದು.]
ಲೇಖನ ವರ್ಗ (Category):