ಕ್ರೈಸ್ತ ಧರ್ಮ

To prevent automated spam submissions leave this field empty.

ನಮ್ಮ ಸಿಂಧೂ ಬಯಲಿನ ನಾಗರೀಕತೆ ಪ್ರಚ್ಛನ್ನವಾಗಿದ್ದ ಕಾಲದಲ್ಲಿ ಏಷ್ಯಾ ಖಂಡದ ಮತ್ತೊಂದು ಬದಿಯಲ್ಲಿ ಅಂದರೆ ಯೂಫ್ರ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲಿನಲ್ಲಿ ಇನ್ನೊಂದು ನಾಗರೀಕತೆ ರೂಪುಗೊಂಡಿತ್ತು. ಅದೇ ಪುರಾತನ ಯೆಹೂದೀ ನಾಗರೀಕತೆ. ಯೆಹೂದಿಗಳು ಸಹಸ್ರಾರು ವರ್ಷಗಳ ಹಿಂದೆಯೇ ಲಿಪಿಯನ್ನು ಅಳವಡಿಸಿಕೊಂಡು ತಮ್ಮ ದಿನನಿತ್ಯದ ಆಗುಹೋಗುಗಳನ್ನು ಬರೆದಿಡುತ್ತಾ ಬಂದರು. "ಪವಿತ್ರ ಬೈಬಲ್" ಎನ್ನಲಾಗುವ ಆ ದಿನಚರಿಯ ಕಾರಣದಿಂದ ಯೆಹೂದ್ಯ ಸಂಸ್ಕೃತಿಯ ಇತಿಹಾಸ ಸ್ಪಟಿಕಸ್ಪಷ್ಟವಾಗಿದೆಯಲ್ಲದೆ ಅದು ಆಯಾ ಕಾಲಘಟ್ಟಗಳ ಜನಾಂಗೀಯ ಸಂಘರ್ಷ, ರಾಜವಂಶಗಳು, ದಿರಿಸುಗಳು, ಆಚಾರ ವಿಚಾರಗಳ ಕುರಿತು ಬೆಳಕು ಚೆಲ್ಲುತ್ತದೆ.

ಸಕಲಕ್ಕೂ ಸೃಷ್ಟಿಕರ್ತನಾದ ಸರ್ವಶಕ್ತ ದೇವರೆಂಬುವನು ಒಬ್ಬನೇ. ಆತ ಸಕಲ ಜನ ಪ್ರಾಣಿಪಕ್ಷಿ ಆಕಾಶ ಭೂಮಿಗಳೆಲ್ಲದಕ್ಕೂ ಒಡೆಯನಾಗಿದ್ದಾನೆ ಹಾಗೂ ಆತ ಆರಿಸಲ್ಪಟ್ಟ ಪ್ರವಾದಿಗಳ ಮೂಲಕ ಮಾತನಾಡುತ್ತಾನೆ. ಅವನನ್ನು ಓಲೈಸುವವರಿಗೆ ರಕ್ಷಣೆಯಿದೆ, ವಿರೋಧಿಸುವವರಿಗೆ ಆ ಕ್ಷಣವೇ ಶಿಕ್ಷೆ ಇದೆ ಎಂದು ನಂಬುವ ಯೆಹೂದ್ಯರು ಆಧುನಿಕ ವಿಚಾರವಾದದಿಂದ ಎಂದೂ ವಿಚಲಿತರಾದವರಲ್ಲ. ತೋರಾ ಎಂಬ ಧರ್ಮಸಂಹಿತೆಯಿಂದ ಬಂಧಿತರಾದ ಅವರು ಮೂರ್ತಿ ಪೂಜೆಯಿಂದ ದೂರ ಉಳಿದವರು. ಪ್ರವಾದಿ ಮೋಸೆಸನ ಮೂಲಕ ದೇವರು ದಶಕಟ್ಟಳೆಗಳನ್ನು ಕೊಡಮಾಡಿದರೆಂದೂ ಆ ಕಟ್ಟಳೆಗಳ ಪ್ರಕಾರ ಕೊಲೆ, ಕಳ್ಳತನ, ಸುಳ್ಳು, ವ್ಯಭಿಚಾರ ಮುಂತಾದವುಗಳು ವರ್ಜ್ಯವೆಂದೂ ಹೇಳಲಾಗಿದೆಯಲ್ಲದೆ ಸರ್ವಶಕ್ತನಾದ ಏಕೈಕ ದೇವರನ್ನು ಮಾತ್ರ ಆರಾಧಿಸು, ದೇವರ ಹೆಸರನ್ನು ಕ್ಷುಲ್ಲಕ ಕಾರಣಗಳಿಗಾಗಿ ಬಳಸಬೇಡ, ತಂದೆ ತಾಯಿಯರನ್ನು ಗೌರವಿಸು, ಪರಸ್ತ್ರೀಯನ್ನೂ ಪರರ ವಸ್ತುಗಳನ್ನೂ ಬಯಸಬೇಡ ಎಂದೂ ತಾಕೀತು ಮಾಡಲಾಗಿದೆ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡವನನ್ನು ಬಯಲಲ್ಲಿ ನಿಲ್ಲಿಸಿ ಸಮಾಜದ ಇತರೆಲ್ಲರೂ ಕಲ್ಲಿನಿಂದ ಹೊಡೆದು ಸಾಯಿಸಬಹುದೆಂಬ ಕಠೋರ ನೀತಿಗಳೂ ಇವರಲ್ಲಿವೆ. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎಂಬ ಹಮ್ಮರಾಬಿಯ ನೀತಿಯೂ ಯೆಹೂದ್ಯ ನೀತಿಯಿಂದಲೇ ಪ್ರೇರಿತವಾಗಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಇಂದಿಗೆ ಸುಮಾರು ೨೦೦೦ ವರ್ಷಗಳ ಹಿಂದೆ ಇದೇ ಯೆಹೂದಿ ಸಮಾಜದಲ್ಲೇ ಯೇಸುಕ್ರಿಸ್ತ ಹುಟ್ಟಿ ಬಂದು ಅವರ ಸನಾತನ ಧರ್ಮದ ಕಠೋರತೆಯನ್ನು ಧಿಕ್ಕರಿಸಿ ಹೊಸ ಮಾನವಧರ್ಮಕ್ಕೆ ನಾಂದಿ ಹಾಡಿದ್ದು; ಇದೇ ಯೆಹೂದಿ ಸಂಸ್ಕೃತಿಯಿಂದಲೇ ಮಹಮದ್ ಪೈಗಂಬರನು ಹುಟ್ಟಿ ಇಸ್ಲಾಂ ಧರ್ಮವನ್ನು ಸ್ಥಾಪಿಸಿದ್ದು. ಹಾಗೆ ನೋಡಿದರೆ ಬೈಬಲ್ ಮತ್ತು ಕುರಾನುಗಳೆರಡರಲ್ಲೂ ಯೆಹೂದ್ಯ ಸಂಸ್ಕೃತಿಯ ಲೇಪನ ಹಾಸುಹೊಕ್ಕಾಗಿದೆ.

"ಪವಿತ್ರ ಬೈಬಲ್"ನಲ್ಲಿ ಹೇಳಿದಂತೆ ಅಂದು ದೇವ-ಮಾನವ ಸಂಬಂಧ ಎಷ್ಟು ಆತ್ಮೀಯವಾಗಿತ್ತೆಂದರೆ ದೇವರು ಮತ್ತು ಪ್ರಥಮ ಮಾನವನೊಂದಿಗೆ ಮುಕ್ತ ಸಂಭಾಷಣೆ ನಡೆಯುತ್ತಿತ್ತು. ದೇವರು ಅವನನ್ನು ತಮ್ಮ ಹೋಲಿಕೆಯಲ್ಲೇ ಸೃಷ್ಟಿಸಿದ್ದರು. ತಮ್ಮ ಧ್ವನಿಯನ್ನೇ ಅವನ ಕೊರಳೊಳಗೆ ತುಂಬಿದ್ದರು. ಆದರೆ ಆತ ಪ್ರಲೋಭನೆಗೊಳಗಾಗಿ ದೇವರಿಗೆ ಗೊತ್ತಾಗದಂತೆ ಮನೋವಿಕಾಸಕ್ಕೆ ತೊಡಗಿದ. ದೇವರಿಗೆ ಗೊತ್ತಾಗದಂತೆ ಅರಿವಿನ ಹಣ್ಣನ್ನು ಕಚ್ಚಿ ರುಚಿಯಾಗಿದೆ ಎಂದುಕೊಂಡ. ಆದರೆ ದೇವರಿಗೆ ಗೊತ್ತಾಗದ ಸಂಗತಿಯಾದರೂ ಏನು? ಮಾನವನು ವಿಚಾರವಂತಿಕೆಯನ್ನು ಸನ್ಮಾರ್ಗದಿಂದ ರೂಢಿಸಿಕೊಳ್ಳಬೇಕೇ ಹೊರತು ದುರ್ಮಾರ್ಗದಿಂದಲ್ಲ ಎಂದು ಹೇಳಿ ಅವರು ಮಾನವನನ್ನು ಶಪಿಸಿದರು. ವಾಸ್ತವವಾಗಿ ಮಾನವನು ಅರಿವು ಹೊಂದಬೇಕೆಂಬುದು ದೇವರ ಇಚ್ಛೆಯಾಗಿದ್ದರಿಂದಲೇ ಆ ಹಣ್ಣಿನ ಮರವನ್ನು ಈಡನ್ ತೋಟದ ಮಧ್ಯೆ ಇರಿಸಿ ಸೂಚ್ಯವಾಗಿ ಅದರ ಪ್ರಾಮುಖ್ಯತೆಯನ್ನು ಹೇಳಿದ್ದರು.

ಈ ಘಟನೆಯ ನಂತರ ದೇವರು ಮನುಷ್ಯರೊಂದಿಗೆ ನೇರವಾಗಿ ಮಾತನಾಡಲೇ ಇಲ್ಲ ಎಂಬುದನ್ನು ಪವಿತ್ರಬೈಬಲ್ನಲ್ಲಿ ನಾವು ನೋಡುತ್ತೇವೆ. ನೋವ, ಅಬ್ರಹಾಂ, ಇಸಾಕ್, ಜಾಕೋಬ್, ಮೋಸೆಸ್, ಎಲೀಯ, ದಾವಿದ್, ಸೊಲೊಮನ್, ದಾನಿಯೆಲ್, ಯೆಶಾಯ ಮುಂತಾದ ಎಲ್ಲರೊಂದಿಗೆ ಅವರು ದೃಗ್ಗೋಚರವಿಲ್ಲದ ಧ್ವನಿರೂಪದಲ್ಲಿಯೇ ಸಂವಾದಿಸಿದ್ದಾರೆ. ಈ ವ್ಯಕ್ತಿಗಳೆಲ್ಲ ದೇವರಿಂದ ಅಭಿಷಿಕ್ತರಾಗಿದ್ದವರು ಇಲ್ಲವೇ ವಿಶೇಷವಾಗಿ ಆಯ್ಕೆಯಾಗಿದ್ದವರು. ಇವರಿಗೆ ಮಾತ್ರ ದೇವರ ಧ್ವನಿಭಾಗ್ಯ, ಉಳಿದ ಸಾಮಾನ್ಯ ಜನ ದೇವಧ್ವನಿಯಿಂದ ದೂರ. ಮೇಲ್ಕಂಡ ದೇವಪ್ರತಿನಿಧಿಗಳು ಹೇಳಿದ್ದೇ ದೇವವಾಕ್ಯ. ಅದರಲ್ಲಿ ಮನುಷ್ಯ ಪ್ರಕ್ಷೇಪವಿತ್ತೋ ಏನೋ ಬಲ್ಲವರಾರು? ಅವರ ಧರ್ಮಸಂಹಿತೆಗಳನ್ನು ಎಲ್ಲ ಕಾಲ ದೇಶ ಸಂದರ್ಭಕ್ಕೆ ಅನ್ವಯ ಮಾಡಲು ಅಸಾಧ್ಯವಾಗಿತ್ತಲ್ಲದೆ ಸಾಮಾಜಿಕ ವೈಪರೀತ್ಯಗಳನ್ನು ಉಂಟುಮಾಡುವುದಾಗಿತ್ತು. ಹೀಗೆ ಧರ್ಮಪಂಡಿತರ ಹಟಮಾರಿತನದಿಂದ ಸನಾತನ ಯೆಹೂದಿ ಧರ್ಮ ಜಡ್ಡುಗಟ್ಟಿಹೋಗಿತ್ತು. ಪ್ರತಿಯೊಂದಕ್ಕೂ ಅದೇ ಹಳೆಯ ಧಾರ್ಮಿಕ ಕಟ್ಟುಪಾಡುಗಳನ್ವಯ ನೀತಿ ನಿಯಮಗಳನ್ನು ಉಲ್ಲೇಖಿಸಲಾಗುತ್ತಿತ್ತು. ಅದರಲ್ಲಿ ಮಾನವೀಯತೆಗೆ ಸ್ಥಳವೇ ಇರಲಿಲ್ಲ.

ಯೇಸುಕ್ರಿಸ್ತ ಹುಟ್ಟಿ ಬೆಳೆದ ಕಾಲದಲ್ಲಿ ಯೆಹೂದ್ಯ ನಾಡು ರೋಮನ್ ಸಾಮ್ರಾಜ್ಯದ ಆಧಿಪತ್ಯಕ್ಕೆ ಒಳಪಟ್ಟಿತ್ತು. ಆ ಸಂದರ್ಭದಲ್ಲಿ ಆ ನಾಡಿಗರು ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಆದರೆ ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಡ್ಯದ ವಿರುದ್ಧ, ಶೋಷಣೆಯ ವಿರುದ್ಧ, ಕಂದಾಚಾರಗಳ ವಿರುದ್ಧ, ಹಾಗೂ ಮಾನವತೆಯಿಲ್ಲದ ಸನಾತನವಾದದ ವಿರುದ್ಧ.

ಯೇಸುಕ್ರಿಸ್ತನ ಆಗಮನದೊಂದಿಗೆ ಯೆಹೂದ್ಯ ಧರ್ಮಸಂಹಿತೆಗಳೆಲ್ಲ ಧಿಕ್ಕರಿಸಲ್ಪಟ್ಟವು. ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು' ಎಂಬ ಉದಾತ್ತ ವಾಕ್ಯಗಳು ಪ್ರಚುರಗೊಂಡವು. ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದರು. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನ ಶತ್ರುಗಳನ್ನೂ ಪ್ರೀತಿಸು, ನಿನಗೆ ಕೆಡಕು ಮಾಡುವವನನ್ನು ಕ್ಷಮಿಸು, ದೊರೆಯಂತೆ ಭರ್ತ್ಸನೆ ತೋರದೆ ಸೇವಕನಂತೆ ದೀನನಾಗಿರು, ಬೇರೆಯವರ ತಪ್ಪನ್ನು ಎತ್ತಿ ತೋರುವ ಮೊದಲು ನಿನ್ನ ಕಣ್ಣನ್ನು ಸ್ವಚ್ಛಪಡಿಸಿಕೋ, ಹೃದಯವನ್ನು ಪವಿತ್ರವಾಗಿಸಿಕೊಂಡವನು ದೇವರನ್ನು ಕಾಣುವನು ಎಂದ ಯೇಸುಕ್ರಿಸ್ತನ ನುಡಿಗಳು ಅದುವರೆಗೆ ಯಾವ ಮನುಷ್ಯನೂ ಆಡಿದ್ದಾಗಿರಲಿಲ್ಲ. ಅವು ದೈವೀ ನುಡಿಗಳೇ ಆಗಿವೆ.

ಪವಿತ್ರ ಬೈಬಲ್ಲಿನಲ್ಲಿ ಶಬ್ದವನ್ನು ದೇವರಿಗೆ ಹೋಲಿಸಲಾಗಿದೆ. ಆದಿಯಲ್ಲಿ ದೇವರು ಸಿಡಿಲಿನ ಆರ್ಭಟವನ್ನು, ಕಡಲ ಮೊರೆತವನ್ನು, ನೀರ ಜುಳುಜುಳು ನಾದವನ್ನು, ಹಕ್ಕಿಗಳ ಕಲರವವನ್ನು ಸೃಷ್ಟಿಸಿ ಆ ಎಲ್ಲ ಶಬ್ದಗಳನ್ನು ಕಲಸಿ ತೇಯ್ದು ನಾದಿ ಸ್ಫುಟವಾದ ಕಣಕವನ್ನು ತೆಗೆದು ಮಾನವನ ಕೊರಳೊಳಗೆ ಇಟ್ಟನು. ಮನುಷ್ಯನ ಬಾಯಿಂದ ಮಾತಾಗಿ ಅದು ಹೊರಬಂತು. ಮಾತಿನಿಂ ಸರ್ವಸಂಪದವು ಲೋಕಕ್ಕೆ ಮಾತೇ ಮಾಣಿಕ್ಯ ಎಂಬ ಸರ್ವಜ್ಞ ನುಡಿಯಾಗಲೀ ಮಾತೇ ಜ್ಯೋತಿರ್ಲಿಂಗ ಎಂಬ ಶರಣ ನುಡಿಯಾಗಲೀ ಮಾತಿನ ಶ್ರೇಷ್ಠತೆಯನ್ನು ಸಾರುತ್ತಿವೆ. ನಿಜವಾಗಿಯೂ ಮಾತೆಂಬುದು ನಮ್ಮ ಬದುಕಿನ ಜೀವಾಳವಾಗಿದೆ. ಮಾತು ಎಂಬುದು ಇಲ್ಲದೇ ಇದ್ದರೆ ನಾವು ಒಬ್ಬರಿಗೊಬ್ಬರು ಸಂವಾದಿಸುವುದು, ವಿಚಾರ ವಿನಿಮಯ ಮಾಡಿಕೊಳ್ಳುವುದು, ಯೋಚಿಸುವುದು, ತರ್ಕ ಮಾಡುವುದು, ಚರ್ಚೆ ವಾದ ವಿವಾದ ಏನೆಲ್ಲವನ್ನು ಮಾಡಲು ಸಾಧ್ಯವಾಗುತ್ತಲೇ ಇರಲಿಲ್ಲ. "ಜಗತ್ ಸೃಷ್ಟಿಯಾಗುವ ಮೊದಲೇ ದೇವರಿದ್ದರು. ದೇವರೊಂದಿಗೆ ವಾಣಿಯಿತ್ತು. ದೇವರೂ ವಾಣಿಯೂ ಬೇರೆ ಬೇರೆಯಾಗಿರದೆ ವಾಣಿಯೇ ದೇವರಾಗಿತ್ತು" ಎಂಬ ಪವಿತ್ರಬೈಬಲ್ಲಿ‌ನ ಆ ಸಾಲುಗಳನ್ನು ಜ್ಞಾಪಕ ಮಾಡಿಕೊಂಡು 'ಮಾತೆಂಬುದು ಮಾನವನಾಗಿ ನಮ್ಮೊಡನೆ ಜೀವಿಸಿತು' ಎಂಬ ವಾಕ್ಯದೊಡನೆ ಸಮೀಕರಿಸಿ ದೇವರು ಮನುಜನಾಗಿ ಅಂದರೆ ಯೇಸುಕ್ರಿಸ್ತನಾಗಿ ಭುವಿಗೆ ಬಂದು ನಮ್ಮೊಂದಿಗೆ ಜೀವಿಸಿದರು ಎಂದು ಅರ್ಥೈಸಿಕೊಂಡಾಗ ಯೇಸುಕ್ರಿಸ್ತ ಸ್ವತಃ ದೇವರೇ ಎಂಬುದು ಸ್ಫುರಣೆಯಾಗುತ್ತದೆ.

ಯೇಸುಕ್ರಿಸ್ತನ ಕಾಲದಲ್ಲಿ ಅವನ ವಿರೋಧಿಗಳು ರಾಜ್ಯಪಾಲನಾದ ಪಿಲಾತನ ಮುಂದೆ ಯೇಸುಕ್ರಿಸ್ತನನ್ನು ಎಳೆತರುತ್ತಾರೆ. ವಿಚಾರಣೆಯ ವೇಳೆ ಪಿಲಾತ ಯೇಸುಕ್ರಿಸ್ತನನ್ನು ಕುರಿತು ನೀನು ದೇವರು ಹೌದೋ ಅಲ್ಲವೋ? ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಏನೂ ಹೇಳದ ಯೇಸುಕ್ರಿಸ್ತ ಸತ್ಯಕ್ಕೆ ಸಾಕ್ಷಿಯಾಗಲು ಬಂದಿದ್ದೇನೆ ಎಂದಾಗ ಪಿಲಾತ ಗಲಿಬಿಲಿಗೊಳ್ಳುತ್ತಾನೆ. ಕಾಣದ ಸತ್ಯಕ್ಕೆ ಜೀವಂತ ಸಾಕ್ಷಿ ಯೇಸು ಎಂಬುದನ್ನು ಅರಿಯದೇ ಯಾವುದು ಆ ಸತ್ಯ ಎಂಬ ಜಿಜ್ಞಾಸೆಗೊಳಗಾಗುತ್ತಾನೆ. ಸತ್ಯದ ಎದುರೇ ನಿಂತಿದ್ದರೂ ಪಿಲಾತ ಸತ್ಯಸ್ವರೂಪಿಯಾದ ಯೇಸುಕ್ರಿಸ್ತನನ್ನು ಕುರಿತು ಸತ್ಯವೆಂದರೇನು ಎಂದು ಪ್ರಶ್ನಿಸುತ್ತಾನೆ. ಮಾನವನ ಸ್ವಭಾವವೇ ಹಾಗೆ. ನಾವೂ ಸಹ ಜೀವನದಲ್ಲಿ ಎಷ್ಟೋ ಸಾರಿ ಸತ್ಯ ನಮ್ಮ ಕಣ್ಣಿಗೆ ನಿಚ್ಚಳವಾಗಿ ಗೋಚರಿಸುತ್ತಿದ್ದರೂ ಕಾಣುವುದಿಲ್ಲ.

ಸಂಸ್ಕೃತದಲ್ಲಿ ಒಂದು ಹೇಳಿಕೆ ಇದೆ: ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಬಹಿರ್ಮುಖಂ... ಅಂದರೆ ಚಿನ್ನದ ಒಂದು ಪಾತ್ರೆಗೆ ಚಿನ್ನದ ಮುಸುಕು ಹಾಕಿಡಲಾಗಿದೆ. ಅದಕ್ಕೆ ಸತ್ಯ ಎಂದು ಹೆಸರಿಡಲಾಗಿದೆ. ಸತ್ಯವನ್ನು ಕಾಣಬಯಸುವವರು ಹತ್ತಿರ ಬಂದು ಮುಸುಕು ತೆಗೆದು ನೋಡಿ ಏನೂ ಇಲ್ಲ ಎನ್ನುತ್ತಾರೆ. ಮಾನವನ ಸ್ವಭಾವವೇ ಹಾಗೆ. ಅಮೂಲ್ಯವಾದ ಚಿನ್ನದ ಪಾತ್ರೆಯಲ್ಲಿ ಮತ್ತಷ್ಟು ಅಮೂಲ್ಯವಾದ ಇನ್ನೇನೋ ಇರಬಹುದೆಂಬ ತರ್ಕ ಅವನದು. ಆ ಪಾತ್ರೆಯೊಳಗೆ ಶೂನ್ಯವೆಂಬುದು ಇದೆ, ಬರಿಗಣ್ಣಿಗೆ ಕಾಣದು ಎಂಬ ಸತ್ಯ ಅವನಿಗೆ ಗೋಚರವಾಗುವುದಿಲ್ಲ.

ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೇವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಅವನ ತತ್ವಗಳನ್ನು ಅಂದರೆ ಮಾನವಪ್ರೇಮದ ಹರಹನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು.

ಯೇಸುವಿನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತ ಮತಾವಲಂಬಿಗಳು ಎಲ್ಲೆಡೆ ಬಹುಸಂಖ್ಯೆಯಲ್ಲಿ ಬೆಳೆಯುತ್ತಾ ಹೋದಂತೆ ಅಂದಿನ ರೋಮನ್ ಸಾಮ್ರಾಜ್ಯದಲ್ಲಿನ ಸಾಮಾಜಿಕ ವ್ಯವಸ್ಥೆ ಏರುಪೇರಾಯಿತು. ವೇಶ್ಯಾವಾಟಿಕೆಗಳು ಮುಚ್ಚಿಹೋದವು, ಏಕಪತ್ನೀವಾಸ ಸರ್ವಮಾನ್ಯವಾಯಿತು, ಗುಲಾಮಗಿರಿ ಅಮಾನ್ಯವೆನಿಸಿತು, ಕಂದಾಯ ವ್ಯವಸ್ಥೆಯಲ್ಲಿ ಭ್ರಷ್ಟತೆ ಇಲ್ಲವಾಯಿತು, ರೋಗರುಜಿನಗಳಿಗೆ ಮನೆಮನೆಗಳಲ್ಲೂ ವೈದ್ಯೋಪಚಾರ ಲಭ್ಯವಾಯಿತು, ದುಡಿಯದೇ ಉಣ್ಣುವವನನ್ನು ಧಿಕ್ಕರಿಸುವ ಪರಿಪಾಠ ಬೆಳೆಯಿತು.

ಇದರಿಂದ ನಿಜವಾಗಿಯೂ ಕಂಗೆಟ್ಟವರು ರೋಮನ್ ಸಾಮ್ರಾಜ್ಯದ ಊಳಿಗದಲ್ಲಿದ್ದ ಅಧಿಕಾರಿಗಳು ಹಾಗೂ ಸಾಮಂತರು. ಅವರಿಗೆ ಯಾವುದೇ ಕೆಲಸಕ್ಕೂ ಜೀತದಾಳುಗಳು ದೊರಕದೆ ಅಸಹನೆ ಮೊಳೆತು ಈ ಕ್ರಿಸ್ತತತ್ವ ಪ್ರಚಾರದಲ್ಲಿ ತೊಡಗಿದ್ದವರನ್ನು ಸಿಕ್ಕಸಿಕ್ಕಲ್ಲಿ ಹಿಡಿದು ಹಿಂಸಿಸತೊಡಗಿದರು. ಕ್ರಿಸ್ತಮತ ಪ್ರಚಾರದ ಚುಕ್ಕಾಣಿ ಹಿಡಿದಿದ್ದ ಪೀಟರ, ಪೌಲ, ಸ್ಟೀಫನ್ ಮುಂತಾದವರು ಯಾವುದೇ ಪ್ರತಿರೋಧವಿಲ್ಲದೆ ತಲೆದಂಡ ತೆತ್ತರು. ಆದರೂ ಕ್ರಿಸ್ತಾವಲಂಬಿಗಳ ಸಂಖ್ಯೆಯೇನೂ ಕಡಿಮೆಯಾಗಲಿಲ್ಲ. ಕ್ರಿಸ್ತಶಕ ೨ನೇ ಶತಮಾನದ ವೇಳೆಗೆ ರೋಮನ್ ಚಕ್ರಾಧಿಪತ್ಯವೇ ಕ್ರಿಸ್ತಮತಕ್ಕೆ ಶರಣಾಗಿ ಅದನ್ನೇ ತನ್ನ ರಾಜಧರ್ಮವೆಂದು ಘೋಷಿಸಿತು.

ಯೇಸುಕ್ರಿಸ್ತನ ಸಂದೇಶಕ್ಕೆ ಮನಸೋತು ಇಂದು ಜಗತ್ತಿನ ಮುಕ್ಕಾಲುಪಾಲು ಜನ ಅವನನ್ನೇ ನೆಚ್ಚಿಕೊಂಡಿದ್ದಾರೆ. 'ಜಾತಿ ಮತ ಪಂಥ ಭೇದಗಳ ಕಿತ್ತೊಗೆದು ಬನ್ನಿ ಮನುಜಮತ ವಿಶ್ವಪಥ' ಎಂದು ಸಾರಿದ ಕವಿವಾಣಿಯಂತೆ ಮನುಷ್ಯನನ್ನು ಮನುಷ್ಯನಂತೆ ಕಾಣುವ ಧರ್ಮ "ಕ್ರೈಸ್ತಧರ್ಮ".

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

Prasad
'ಜಾತಿ ಮತ ಪಂಥ ಭೇದಗಳ ಕಿತ್ತೊಗೆದು ಬನ್ನಿ ಮನುಜಮತ ವಿಶ್ವಪಥ' ಎಂದು ಸಾರಿದ ಕವಿವಾಣಿಯಂತೆ ಮನುಷ್ಯನನ್ನು ಮನುಷ್ಯನಂತೆ ಕಾಣುವ ಧರ್ಮ "ಕ್ರೈಸ್ತಧರ್ಮ". -ಎಂದು ಹೇಳಿದ್ದೀರಿ....

ಆ ಕವಿವಾಣಿಯನ್ನು ಯಾರು ಹೇಳಿದವರು? Obviously, ಒಬ್ಬ ಹಿಂದು....
ಇದರರ್ಥ ಹಿಂದೂ ಧರ್ಮವೂ ಅದನ್ನೇ ಹೇಳುವಾಗ ಕ್ರೈಸ್ತಧರ್ಮದಲ್ಲಿ ಹೊಸದೇನಿದೆ?

ಇಷ್ಟಕ್ಕೂ "ದೇವರೊಬ್ಬ ನಾಮ ಹಲವು" ಎಂಬ ಸಂದೇಶವನ್ನು ನಿಮ್ಮ ಲೇಖನ ಒಪ್ಪುತ್ತಿದ್ದರೆ ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಪತಿಯಲ್ಲಿ(ಅಷ್ಟೇ ಅಲ್ಲ, ಇಡೀ ಭರತವರ್ಷದಲ್ಲಿ) ಮತಾಂತರಕ್ಕೆ ಪ್ರಯತ್ನಗಳು ಏಕೆ ಸಾಗಿವೆ?
"ಸರ್ವ ದೇವ ನಮಸ್ಕಾರ: ಕೇಶವಮ್ ಪ್ರತಿ ಗಚ್ಹತೀ"--ಯಾವುದೇ ದೇವರಿಗೆ ನಮಸ್ಕಾರ ಮಾಡಿದರೂ ಆ ಸರ್ವವ್ಯಾಪಿ ಭಗವಂತನಿಗೇ ತಲುಪುತ್ತದೆ. ಇಂಥ ಸಂಸ್ಕ್ರುತಿಯ ಜನರಿಗೆ ನೀವು ಕ್ರಿಸ್ತ ಮತವೇ ಮನುಜ ಮತ ಎನ್ನುವುದು ಎಷ್ಟು ಸರಿ?
ಮಾನವತೆ, secularism,etc .ಗಳನ್ನು ಹಿಂದೂಧರ್ಮೀಯರು ನಿಮ್ಮಿಂದ ಕಲಿಯಬೇಕಿಲ್ಲ.
ಅವು ಪ್ರತಿಯೊಬ್ಬ ಹಿಂದುವಿಗೂ ಕೊಡುವ ಬಾಲ ಸಂಸ್ಕಾರಗಳು.
ಕೋಟ್ಯಾಂತರ ದೇವರುಗಳಿರುವ ಭಾರತೀಯರಿಗೆ ಒಬ್ಬ ಏಸು, ಒಬ್ಬ ಅಲ್ಲಾ ರನ್ನು ಸೇರಿಸಿಕೊಳ್ಳುವುದು ಏನೂ ದೊಡ್ಡದಲ್ಲ.ಆದರೆ ಏಸು ಮಾತ್ರ, ಅಲ್ಲಾ ಮಾತ್ರ ದೇವರು ಎನ್ನುವ ವಾದವನ್ನು ಸರ್ವಧರ್ಮ ಸಹಿಷ್ಣುಗಳೂ, secular ಆದ ಹಿಂದೂಗಳು ಹೇಗೆ ಒಪ್ಪಬೇಕು?
ಈ ಲೇಖನ ನಿಮ್ಮಲ್ಲಿರುವ ನಿಮ್ಮ ಮತವೇ ಶ್ರೇಷ್ಟ ಎಂಬುದನ್ನು ತೋರಿಸುತ್ತದಲ್ಲವೇ?

.

ಒಲುಮೆಯ ಪ್ರಸಾದ್ ರವರೆ,
“ಕ್ರೈಸ್ತಧರ್ಮ” ಲೇಖನಕ್ಕೆ ನೀವು ಬರೆದ ಪ್ರತಿಕ್ರಿಯೆ, ನನ್ನನ್ನೂ ಬರೆಯುವಂತೆ ಮಾಡಿದ್ದಕ್ಕೆ ಇಗೋ ನಮನ!

“ಜಾತಿ ಮತ ಪಂಥ ಭೇದಗಳ ಕಿತ್ತೊಗೆದು ಬನ್ನಿ, ಮನುಜಮತ ವಿಶ್ವಪತ” ಎಂಬುದು ಹಿಂದುವಾಣಿಯಲ್ಲ, ಕವಿವಾಣಿ ಎಂಬುದನ್ನು ಪ್ರಸಾದರು ಗಮನಿಸಬೇಕು. ಕುವೆಂಪು, ಹಿಂದುವಾಗಿದ್ದ ಕಾರಣಕ್ಕೆ ಈ ವಾಣಿ ಹೊರಬಂತು ಎಂಬ ನಿಮ್ಮ ವಾದ ಎಷ್ಟು ಸರಿ? ಅದೇ, ಕವಿಯಾಗಿದ್ದ ಕಾರಣಕ್ಕೆ ಹೇಳಿದರು ಎಂಬುದು ಸರ್ವರೂ ಒಪ್ಪತಕ್ಕದ್ದಲ್ಲವೇ?
ಇನ್ನೊಂದು ಕಣ್ಣಿನಲ್ಲಿ ನೋಡುವುದಾದರೆ, ಕುವೆಂಪು ಯಾವತ್ತೂ ಹಿಂದುಧರ್ಮದ ಆಚಾರ ವಿಚಾರಗಳನ್ನು ಖಂಡಿಸುತ್ತಲೇ ಬಂದವರು, ಪೂಜಾರಿಯ ಢಾಂಬಿಕತೆ, ಒಳಹುಳುಕುಗಳನ್ನು ನೇರವಾಗಿ ಬರೆದವರು, “ಪ್ರಕೃತಿಯೇ ದೇವರು” ಎಂಬ ನಂಬಿಕೆಯ ನೆಲೆಗೆ ಜಿಗಿದವರು, ಪ್ರೀತಿಯನ್ನಷ್ಟೇ ಬೆಸಯಬಲ್ಲಂಥ ಮನುಜಮತದ ನಿರೀಕ್ಷೆ ಹೊತ್ತು ಕುಳಿತವರು.
“ಕ್ರೈಸ್ತಧರ್ಮ” ಲೇಖನ, ಧರ್ಮದ ಹುಟ್ಟು, ಕಟ್ಟುಪಾಡು, ಸಾಮರ್ಥ್ಯವನ್ನು ದಾಖಲಿಸುವುದರ ಜೊತೆಗೆ ಅದರ ಸವಿಸ್ತಾರ ಹರಿವಿಗೆ ಸಕಾರಣ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಿದೆಯಷ್ಟೆ! ಎಲ್ಲೂ ಕೂಡ ‘ಕ್ರೈಸ್ತಧರ್ಮವೇ ಶ್ರೇಷ್ಟ” ಎಂದು ಪ್ರತಿಪಾದಿಸಲು ಹೊರಡುವುದಿಲ್ಲ.
ಇನ್ನು ನಿಮ್ಮ ತಿರುಪತಿಯ ವಿಷಯ –
ಯಾವ ವಿಷಯ ವೇದಿಕೆ ಹತ್ತಿದರೂ ಮತಾಂತರವನ್ನು ಬಹು ಜಾಣತನದಿಂದ ನುಸುಳಿಸುವುದು ಎಷ್ಟರ ಮಟ್ಟಿಗೆ ಸರಿ?
ಲೇಖನವನ್ನು ತಾವು ಮತ್ತೊಮ್ಮೆ ಓದಬಾರದೇಕೆ? ಹೊಸ ಹೊಳಹುಗಳು ಕಂಡರೆ ಮಾತನಾಡೋಣ.
ಏನಂತೀರಿ?

ಯಜಮಾನ್ ಫ್ರಾನ್ಸಿಸ್

"ಇದು ಬಾಳು ನೋಡು, ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ,
ಹಲವುತನದ ಮೈಮರೆಸುವಾಟವಿದು
ನಿಜವು ತೋರದಲ್ಲ......" (ಗೋಪಾಲಕೃಷ್ಣ ಅಡಿಗ)

ನಿಜವಾಗಿಯೂ ಕುವೆ೦ಪುರವರು ಬರೆದದ್ದು ಪುರೋಹಿತಷಾಯಿ ಪದ್ದತಿಯ ಬೇರು ಕೀಳುವ ಬರವಣಿಗೆ.
ಅದಲ್ಲದೇ ಉಪನಿಷತ್ತುಗಳ ಮೂಲದಲ್ಲಿ ನಿ೦ತು ರಾಮಾಯಣ ದರ್ಶನ೦ ಬರೆದಿರುವ ಅವರನ್ನು ಒಬ್ಬ
ಕವಿಯಲ್ಲದೇ ಋಷಿಯೆ೦ದು ನಮ್ಮ ನಾಡು ಗೌರವಿಸಿತು. ಅರರೇ ನಮ್ಮೊಳಗೆ ಅದೂ ಈ ಕಾಲದಲ್ಲಿ
ಋಷಿಯೊಬ್ಬ ನಿರುವನು ಎ೦ದು ಹೆಮ್ಮೆ ಪಟ್ಟು ಗೌರವಿಸಿತು.ಅವರ ಬರವಣಿಗೆಯಿ೦ದ ಎಷ್ಟೋ ಜನರು
ಮ೦ದಿರಗಳಿಗೆ ಹೋಗುವುದನ್ನು ಬಿಟ್ಟೂ ಮನೆಯಲ್ಲಿ ಮ೦ದಿರವನ್ನು ಕಟ್ಟಿ ಪೂಜಿಸಿದರು.
**********************************************
ನಾನು ಒ೦ದು ಕಾಲದಲ್ಲಿ (ಸುಮಾರು ಹತ್ತು ವರ್ಷದ ಹಿ೦ದೆ) ಚರ್ಚ್ ಗೆ ಹೋಗುತ್ತಿದ್ದೆ.
ನನಗೆ ಹಿ೦ದೂ ದೇವರುಗಳಲ್ಲಿ ಮತ್ತು ನ೦ಬಿಕೆಗಳಲ್ಲಿ ಅಷ್ಟು ಶ್ರದ್ಧೆಯಿರಲಿಲ್ಲಾ.
ನನ್ನ ಪ್ರಕಾರ ಆಗ ಕ್ರೈಸ್ತ ಧರ್ಮವೇ ನಿಜವಾದ ಧರ್ಮವಾಗಿತ್ತು.

ಈಗ ಮೊನ್ನೆ ಎಲ್ಲಾ ಧರ್ಮಗಳು ಮನುಷ್ಯನನ್ನು ಹೇಗೆ ತಮ್ಮ ಬುಟ್ಟಿಯಲ್ಲಿ ಹಾಕಿಕೊಳ್ಳುತ್ತದೆ ಎ೦ದು ಓದುತ್ತಿದ್ದೆ.
(ಓಶೋರವರ "ಪ೦ಡಿತ ಪುರೋಹಿತ ಮತ್ತು ರಾಜ ಕಾರಣಿ" ಪುಸ್ತಕ)
ಆ ವಿಷಯವನ್ನು ತಿಳಿಯಲು, ಮತ್ತೆ ಚರ್ಚ್ ಗೆ ಭೇಟಿ ಕೊಟ್ಟೆ, ಚರ್ಚ್ ನಲ್ಲಿ ಕ೦ಡ ಸಪ್ಪೆ ಮುಖಗಳ ದೃಶ್ಯ ಒ೦ದು ಆಸ್ಪತ್ರೆಯ೦ತೆ

ಇತ್ತು. ಅಲ್ಲಿ ಸದಾ ದೇವರು , ದೇವಪುತ್ರ, ಪವಿತ್ರ ಪ್ರೇತ ಇತ್ಯಾದಿ ಪದಗಳು ಕೇಳಿ ಬರುತ್ತಿತ್ತು.
****************************************************
ಜೋಸೆಫ್ ಇಲ್ಲಿ ಕ್ರೈಸ್ತ ಮತದ ಬಗ್ಗೆ ಬರೆಯುವಾಗ ಕೆಲವು ಪದಗಳನ್ನು ಬರೆದಿದ್ದಾರೆ.
"ಸಂಖ್ಯೆಯೇನೂ ", "ಜಗತ್ತಿನ ಮುಕ್ಕಾಲುಪಾಲು".. ಅ೦ದರೆ Geography ಮತ್ತು Count ಮುಖ್ಯವಾಗುತ್ತೆ.

ಹಾಗೆ ನೋಡಿದರೆ ಇದು ಧರ್ಮವಲ್ಲಾ ಕೇವಲ Politics ಆಗುತ್ತೆ. ಚರ್ಚ್ ಅಷ್ಟು ರಾಜಕೀಯ ಮಾಡಿಕೊ೦ಡು ಉಳಿದಿರುವ

ಪಕ್ಷ ಮತ್ತೊ೦ದಿಲ್ಲಾ.
ಕೊನೆಗೆ ಮೊನ್ನೆ ಮೊನ್ನೆ ಜರುಗಿದ ಪ್ರಪ೦ಚ ಯುದ್ದದಲ್ಲಿ ಅದರ ಪಾಲು ಹೆಚ್ಚು.
ಈ ಕೊ೦ಡಿಯಲ್ಲಿ ಹಿಟ್ಲರ್ ಮತ್ತು ಚರ್ಚ್ ಜೊತೆಗಿರುವ ಆಳವಾದ ಸ೦ಬ೦ಧವನ್ನು ಕಾಣಬಹುದು.

http://www.nobeliefs.com/nazis.htm

ಯೇಸುಕ್ರಿಸ್ತನ ಸಂದೇಶಕ್ಕೆ ಮನಸೋತು ಇಂದು ಜಗತ್ತಿನ ಮುಕ್ಕಾಲು ಪಾಲು ಜನ ಅವನನ್ನೇ ನೆಚ್ಚಿಕೊಂಡಿದ್ದಾರೆ.
>> "ಮನಸೋತು" --> "ಮನಸ್ಸು ಸೋತು ಸಪ್ಪೆ ಯಾಗಿರುವವರೆಲ್ಲಾ ಚರ್ಚ್ ಗೆ ಹೋಗುತ್ತಾರೆ" - ಈ ಮಾತು

ಹೇಳಿದ್ದು Bertrand Russell.
http://users.drew.edu/~jlenz/whynot.html

>>
Bertrand Russell ಒ೦ದು ಸತ್ಯವನ್ನು ತಿಳಿಸಿದ್ದಾನೆ ,
"ಇಡೀ ಜಗತ್ತು ಸ೦ತೋಷವಾಗಿ ಬಿಟ್ಟರೆ ಎಲ್ಲಾ ಧರ್ಮಗಳು ಈ ಜಗತ್ತಿನಿ೦ದ ನಾಪತ್ತೆಯಾಗುವವು ಎ೦ದು ನಾನು
ಭರವಸೆಯನ್ನೀಯುವೆ".

***************************

'ಜಾತಿ ಮತ ಪಂಥ ಭೇದಗಳ ಕಿತ್ತೊಗೆದು ಬನ್ನಿ ಮನುಜಮತ ವಿಶ್ವಪಥ' ಎಂದು ಸಾರಿದ
ಕವಿವಾಣಿಯಂತೆ ಮನುಷ್ಯನನ್ನು ಮನುಷ್ಯನಂತೆ ಕಾಣುವ ಧರ್ಮ "ಕ್ರೈಸ್ತಧರ್ಮ".

FRIEDRICH W. NIETZSCHE ಎ೦ಬುವ ಚಿ೦ತಕ ,
ಕ್ರೈಸ್ತಧರ್ಮ ಮನುಷ್ಯನನ್ನು ಒಬ್ಬ ಪಾಪಿಯೆ೦ದು ಪರಿಗಣಿಸುತ್ತದೆ ಎ೦ದು ಹೇಳಿ ಒ೦ದು ಪುಸ್ತಕ ಬರೆದಿದ್ದಾನೆ.

http://www.fns.org.uk/ac.htm

This book belongs to the most rare of men.

Perhaps not one of them is yet alive.
The conditions under which any one

understands me, and necessarily understands

me--I know them only too well. Even to

endure my seriousness, my passion, he must

carry intellectual integrity to the verge of

hardness. He must be accustomed to living on

mountain tops--and to looking upon the

wretched gabble of politics and nationalism

as beneath him. He must have become

indifferent; he must never ask of the truth

whether it brings profit to him or a

fatality to him... He must have an

inclination, born of strength, for questions

that no one has the courage for; the courage

for the forbidden; predestination for the

labyrinth. The experience of seven

solitudes. New ears for new music. New eyes

for what is most distant. A new conscience

for truths that have hitherto remained

unheard. And the will to economize in the

grand manner--to hold together his strength,

his enthusiasm...Reverence for self; love of

self; absolute freedom of self.....

Very well, then! of that sort only are my

readers, my true readers, my readers

foreordained: of what account are the rest?

--The rest are merely humanity.--One must

make one's self superior to humanity, in

power, in loftiness of soul,--in contempt.
ಎ೦ದು ತನ್ನ Preface ನಲ್ಲಿ ಹೇಳಿದ್ದಾನೆ.

ಓದಿ ಚೆನ್ನಾಗಿದೆ ಭಾಷೆ ಮತ್ತು ಆತನ ಅ೦ತ: ಶಕ್ತಿ.
*************************