ಚಿಟ್ಟೆ

To prevent automated spam submissions leave this field empty.

ಚಿಟ್ಟೆ

ಆಹಾ! ನೋಡು ಬಣ್ಣದ ಚಿಟ್ಟೆ!
ನಿನ್ನೀ ಮೆರುಗಿಗೆ ನಾ ಮರುಳಾಗಿಬಿಟ್ಟೆ!

ಹುಟ್ಟಿನಲಿ, ನೀನು ಕರ್ರಗಿನ ಕಂಬಳಿ - ಕುರೂಪಿ
ಬೆಳೆಯಲು, ಅಪ್ಸರೆಯರೂ ಹಿಮ್ಮೆಟ್ಟಿದರು, ನೀ ಸ್ಫುರದ್ರೂಪಿ!

ಬಣ್ಣವೋ ಬಣ್ಣ ಇದು ಅದ್ಭುತ ಚಿತ್ತಾರ
ಚೆಲ್ಲಿದೆ ರಂಗು - ಸೌಂದರ್ಯದ ಪರಮಾವಧಿ - ಸಾಕಾರ!

ಎಂಥಾ ಚೆಲುವು - ಓ ಪಾತರಗಿತ್ತಿ!
ನೋಡೀ ನೀರೆಯರೂ ನಾಚಿದರು - ನೀ ಬಿನ್ನಾಣಗಿತ್ತಿ!

ಅದೇನು ನಿನ್ನ ಈ ಅಂದ-ಚೆಂದ!
ಹೀರಿದೆಯಾ ನೀ ಹೂಗಳ ಮಕರಂದ!

ಒಂದೇ ಒಂದು ಸ್ಪರ್ಶಕ್ಕೆ ಕಾದಿವೆ ಕೋಟಿ ಶ್ಯಾಮಲೆ
ನಿಂತಲ್ಲೆ ನಿಲ್ಲಲಾರೆ - ನೀ ಮಹಾ ಚಂಚಲೆ!

ಪ್ರೀತಿಯಲಿ ಪುಷ್ಪಕ್ಕೆ ಕೊಟ್ಟಿಹೆ ಸಿಹಿ ಚುಂಬನ
ಮೃದು ಹೂವದು ನಸು ನಡುಗಿದೆ - ಎಂಥಾ ರೋಮಾಂಚನ!

ಕುಡಿದಿರುವೆ ನೀನು ಹೂವಿನ ಜೇನು...
ಹೇಳು! ನಿನ್ನ ಸೌಂದರ್ಯದ ಗುಟ್ಟು ಇದೇ ಏನು?

ನಿನ್ನ ಸೃಷ್ಟಿಸಿದ ಬ್ರಹ್ಮನ ಬಲವು ಅಷ್ಟಿಷ್ಟೇ?
ಇದನೆಲ್ಲ ಯೋಚಿಸಿ ಸ್ತಬ್ಧನಾಗಿ - ಮೂಗಿನ ಮೇಲೆ ಬೆರಳಿಟ್ಟೆ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶ್ರೀಯುತ ಕವಿಮಿತ್ರ ಶ್ರೀನಿವಾಸರೇ ನಿಮ್ಮ ಕವನದಲ್ಲಿ
ನೀವು ಬರೆದಿರುವ "ಸ್ಪುರದ್ರೂಪಿ " ಎಂದರೆ ನನಗೆ ಅರ್ಥ ವಾಗಲಿಲ್ಲ ಅದು "ಸುರದ್ರೂಪಿ"(ಸುರರನ್ನೂ ಹೋಲುವ ಸೌಂದರ್ಯ) ಇರಬೇಕೆಂದು ತಿಳಿದುಕೊಳ್ಳುತ್ತೇನೆ ಕವನ ತುಂಬಾ ಸೊಗಸಾಗಿ ಮೊಡಿದೆ ವಂದನಾಭಿನಂದನೆಗಳೊಂದಿಗೆ
-ವೆಂ ಕೃಷ್ಣ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ

ಶ್ರೀ ಕೃಷ್ಣಮೂರ್ತಿಯವರಿಗೆ ಅನಂತ ಧನ್ಯವಾದಗಳು.

ನನಗೆ ತಿಳಿದ ಮಟ್ಟಿಗೆ ಸ್ಫುರ ಎಂದರೆ ಕಾಂತಿಯುಳ್ಳದ್ದು, ಪ್ರಭೆಯುಳ್ಳದ್ದು.
ಸ್ಫುರ ಎಂಬುದು ಸಂಸ್ಕೃತ ಪದ. ನಾನು ನಿಘಂಟನ್ನು ಸಂಪರ್ಕಿಸಿ ನೋಡುತ್ತೇನೆ.

ಮತ್ತೊಮ್ಮೆ ಧನ್ಯವಾದಗಳು,
ಶ್ರೀನಿವಾಸ್

ಆತ್ಮಿಯ ಕೃಷ್ಣಮೂರ್ತಿಯವರೆ,

ಇಲ್ಲಿದೆ ನೀವು ಕೇಳಿದ ಮಾಹಿತಿ...

ಕನ್ನಡ-ಕನ್ನಡ ನಿಘಂಟಿನಿಂದ...

ಸ್ಫುರದ್ರೂಪಿ - ಅತ್ಯಂತ ಚೆಲುವ, ರೂಪವಂತ

ಸ್ಫುರಿಸು - ಪ್ರಕಾಶಿಸು, ಹೊಳೆ

ಧನ್ಯವಾದಗಳು,
ಶ್ರೀನಿವಾಸ್