ಹಿಗಿಟ್ಟಾ

To prevent automated spam submissions leave this field empty.

#ಮಲೆಯಾಳಂ ಮೂಲ : ಎನ್. ಎಸ್. ಮಾಧವನ್

ಕನ್ನಡ ಅನುವಾದ : ಎನ್. ಎ. ಎಂ. ಇಸ್ಮಾಯಿಲ್

e-mail: namismail @ rediffmail.com

***

ಮೂಲ ಕರ್ತೃ ಪರಿಚಯ

ಎನ್.ಎಸ್. ಮಾಧವನ್ ಮಲೆಯಾಳಂನ ಅತಿ ವಿಶಿಷ್ಟ ಕತೆಗಾರ. ಆಧುನಿಕ ಮಿಥಕಗಳನ್ನು ಸೃಷ್ಟಿಸುವ ಅವರ ಕಥನ ಶೈಲಿಗೆ ಮಾರು ಹೋಗದವರೇ ಇಲ್ಲ. ಪ್ರಸ್ತುತ ಕತೆ ಮಲಯಾಳ ಮನೋರಮಾ ಆರಿಸಿದ ಶತಮಾನದ ಹತ್ತು ಅತ್ಯುತ್ತಮ ಮಲೆಯಾಳಂ ಕತೆಗಳಲ್ಲಿ ಒಂದು. 1948ರಲ್ಲಿ ಹುಟ್ಟಿದ ಮಾಧವನ್ ವಿದ್ಯಾರ್ಥಿಯಾಗಿದ್ದಾಗಲೇ ಕತೆಗಳ ಮೂಲಕ ಹೆಸರು ಮಾಡಿದ್ದರು. 1970ರಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾತೃಭೂಮಿ' ಪತ್ರಿಕೆ ನಡೆಸಿದ ಸ್ಪರ್ಧೆಯಲ್ಲಿ ಮಾಧವನ್ ಅವರ ಕತೆ 'ಶಿಶು' ಮೊದಲ ಬಹುಮಾನ ಪಡೆದಿತ್ತು.. 1981ರಲ್ಲಿ ಮೊದಲ ಕಥಾಸಂಕಲನ 'ಚೂಳೈಮೇಡಿಲೆ ಶವಂಙಳ್' ಪ್ರಕಟವಾಯಿತು . 1991ರಲ್ಲಿ 'ಹಿಗಿಟ್ಟಾ', 1996ರಲ್ಲಿ 'ತಿರುತ್ತ್', 2000ದಲ್ಲಿ 'ಪರ್ಯಾಯ ಕಥಗಳ್' ಬೆಳಕು ಕಂಡವು. ಎರಡು ವರ್ಷದ ಹಿಂದಷ್ಟೇ ಇವರ ಕಾದಂಬರಿ ಲಂತನ್ ಬತ್ತೇರಿಯಿಲೆ ಲೂತಿಯಾನಿಗಳ್ ' ಪ್ರಕಟವಾಗಿದೆ. 1975ರಲ್ಲಿ ಐಎಎಸ ಪಾಸ್ ಮಾಡಿದ ಮಾಧವನ್ ಈಗ ಬಿಹಾರ್ ಕೇಡರ್ ನ ಹಿರಿಯ ಐಎಎಸ್ ಅಧಿಕಾರಿ.

***

ಇಟಲಿಯಿಂದ ಬಂದ ಸಾಹಿತ್ಯ ಪ್ರೇಮಿ ಫಾದರ್ ಕ್ಯಾಪ್ರಿಯಾಟಿ 'ಪೆನಾಲ್ಟಿ ಕಿಕ್ ನ ನಿರೀಕ್ಷೆಯಲ್ಲಿರುವ ಗೋಲಕೀಪರ್ ನ ಏಕಾಂಗಿತನ' ಎಂಬ ಕಾದಂಬರಿಯ ಬಗ್ಗೆ ಫಾದರ್ ಗೀವರ್ಗೀಸ್ ಅವರಲ್ಲಿ ಒಮ್ಮೆ ಹೆಚ್ಚೆಂದರೆ ಎರಡು ಸಾರಿ ಹೇಳಿರಬಹುದು. ಕಾದಂಬರಿಯ ಹೆಸರು ಕೇಳಿದಾಗಲೇ ಫಾ.ಗೀವರ್ಗೀಸ್ ಗೆ ಅದನ್ನು ಓದಿದ ಅನುಭವವಾಯಿತು- ಅದೂ ಒಮ್ಮೆಯಲ್ಲ ಹಲವಾರು ಸಾರಿ ಓದಿದ ಅನುಭವ.
ಎಲ್ಲರಿಂದಲೂ ವಂಚಿಸಲ್ಪಟ್ಟು, ಎರಡೂ ಕೈಗಳನನ್ನು ಅಗಲಿಸಿ ಗೋಲ್ ಕೀಪರ್ ಪೆನಾಲ್ಟಿ ಕಿಕ್ ಗಾಗಿ ಕಾಯುತ್ತಾನೆ. ಗ್ಯಾಲರಿಯಲ್ಲಿರುವ ಐವತ್ತು ಸಾವಿರ ನೀರಾರಿದ ಗಂಟಲುಗಳು ನಿಶ್ಶಬ್ದವಾಗಿರುತ್ತವೆ . ಒಬ್ಬ ಪ್ರೇಕ್ಷಕ ಮೂರು ಸಲ ಕೂಗುತ್ತಾನೆ.

ಹೀಗೆ ಹಲವಾರು ಕತೆಗಳ ಮೂಲಕ ಜನ್ಮ ಜಾತಕಗಳ ಸರಣಿಯನ್ನೇ ಫಾ.ಗೀವರ್ಗೀಸ್ ತಮ್ಮ ಮನಸ್ಸಿನೊಳಗೆ ಸೃಷ್ಟಿಸುತ್ತಿದ್ದರು. ಅವರಿಗೆ ಆ ಜರ್ಮನ್ ಕಾದಂಬರಿಯನ್ನು ಓದಬೇಕು ಎಂದು ಅನ್ನಿಸಲೇ ಇಲ್ಲ. ಓದಿ ಬಿಟ್ಟರೆ ಗೋಲ್ ಕೀಪರ್ ನ ಜಾತಕ ಕತೆಗಳು ಮುಗಿಯುತ್ತವೆ. ಮತ್ತೆ ಕಾದಂಬರಿಯಲ್ಲಿ ಬರೆದದ್ದು ಮಾತ್ರ ಗೋಲ್ ಕೀಪರ್ ನ ಕತೆಯಾಗಿ ಉಳಿಯುತ್ತದೆ.

ಮೊದಲ ಕೆಲ ದಿನಗಳ ಕಾಲ ಯಾವುದೇ ಬದಲಾವಣೆಗಳಿಲ್ಲದೆ ಗೋಲ್ ಕೀಪರ್ ಸ್ಥಾನದಲ್ಲಿದ್ದದ್ದು ಏಸು ಕ್ರಿಸ್ತ. ಒಂದನೇ ನಂಬರ್ ಜರ್ಸಿ ತೊಟ್ಟ ಕರ್ತನಾದ ಏಸು ಸ್ವಾಮಿಯು ಹಲವಾರು ಚೆಂಡುಗಳನ್ನು ಬದಿಗೆ ತಳ್ಳಿದರು.
ಸ್ವಲ್ಪ ಕಾಲದ ನಂತರ ಗೋಲಿಯತ್ ಗೋಲ್ ಕೀಪರ್ ಸ್ಥಾನಕ್ಕೆ ಬಂದ ಬಂದ.ಒಮ್ಮೆ ಗೊಣಗಿದರೆ ಕೇಳಿಸಿಕೊಳ್ಳಲೂ ಕಿವಿಗಳೇ ಇಲ್ಲದ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ಏಕಾಂಗಿತನದೊಂದಿಗೇ ಕವಣೆಯಿಂದ ಹೊರ ಬೀಳುವ ಕಲ್ಲನ್ನು ಕಾಯುವಂತೆ ಪೆನಾಲ್ಟಿ ಕಿಕ್ ಗಾಗಿ ಗೋಲೀ ಕಾದು ನಿಂತ. ಬಹುರೂಪಿ ಗೋಲೀ ಸಾಧ್ಯತೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದವು.

ಫಾದರ್ ಗೀವರ್ಗೀಸ್ ್ವರ ಪಾರಿಶ್ ಇದ್ದದ್ದು ದಕ್ಷಿಣ ದಿಲ್ಲಿಯಲ್ಲಿ. ಒಂದಷ್ಟು ಮಲೆಯಾಳಿಗಳು, ಬಿಹಾರದಿಂದ ಬಂದ ಮನೆಕೆಲಸ ಮಾಡುವ ಒಂದಷ್ಟು ಆದಿವಾಸಿ ಹುಡುಗಿಯರು-ಪಾರಿಶ್ ನಲ್ಲಿದ್ದ ಸತ್ಯ ವಿಶ್ವಾಸಿಗಳೆಂದರೆ ಇವರೇ. ಫಾದರ್ ವಾರಕ್ಕೊಮ್ಮೆ ಬಿಷಪ್ಪರ ಭೇಟಿಗಾಗಿ ಹೋಗುತ್ತಾರೆ. ಕೆಲವೊಮ್ಮೆ ಸಾಹಿತ್ಯ ಚರ್ಚಿಸಲು ಫಾದರ್ ಕ್ಯಾಪ್ರಿಯಾಟಿ ಬರುತ್ತಾರೆ. ಇತ್ತೀಚೆಗೆ ಕೆಲವು ವಾರಗಳಿಂದ ಬಲಿಪೂಜೆ ಮುಗಿಸಿ ಹೊರಬರುವಾಗ ಆದಿವಾಸಿ ಹುಡುಗಿ ಲೂಸಿ ಮರಂಡಿ ಅವರನ್ನು ಕಾದಿರುವುದು ಸಾಮಾನ್ಯವಾಗಿತ್ತು.

“ಫಾದರ್ ಆತ ಮತ್ತೆ ಬಂದ " ಕಳೆದ ವಾರ ಸಿಕ್ಕಾಗ ಲೂಸಿ ಹೇಳಿದಳು.

“ಯಾರದು"

“ಕಳೆದ ಭಾನುವಾರ ಹೇಳಿದ್ದನಲ್ಲಾ ಅವನೇ"

“ಅವನ ಹೆಸರೇನೂಂದೆ"

“ಜಬ್ಬಾರ್”

“ಹಾಂ, ಜಬ್ಬಾರ್, ನನಗೆ ನೆನಪಿದೆ. ಅವನ್ಯಾಕೆ ಬಂದದ್ದು”

“ಕಳೆದವಾರ ಹೇಳಿದ ವಿಷಯಕ್ಕೆ."
ಫಾದರ್ ಮೆಲ್ಲಗೊಮ್ಮೆ ಹೂಂಗುಟ್ಟಿದರು.

“ಮತ್ತೆ ನನ್ನೊಟ್ಟಿಗೆ ಬಾ ಅಂದ”
ಫಾದರ್ ಮನಸ್ಸಿನಲ್ಲಿ ನೆನಪುಗಳ ಉಲ್ಕಾಪಾತ. ಆದಿವಾಸಿಗಳಿಂದ ಕೋಳಿ, ಮಹೂವ, ಕೋರಾ ಬಟ್ಟೆ ಮುಂತಾದುವುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ದಲ್ಲಾಳಿ ಈ ಜಬ್ಬಾರ್. ಕೆಲಕಾಲದ ನಂತರ ಹಳ್ಳಿಗಳಲ್ಲಿ ಕೆಲಸಗಳೆಲ್ಲಾ ಮುಗಿದಾಗ ಆದಿವಾಸಿ ಹೆಣ್ಣು ಮಕ್ಕಳನ್ನು ಕೆಲಸ ಕೊಡಿಸುತ್ತೇನೆಂದು ಹೊರಗೆ ಕರೆದೊಯ್ಯುತ್ತಿದ್ದ.
ರಾಂಚಿಯಿಂದ ರೈಲೇರಿದ ಲೂಸಿ ಸಾಸಿವೆ ಎಣ್ಣೆಯ ವಾಸನೆ ಇರುವ ಹಲವು ಸ್ಟೇಷನ್ ಗಳನ್ನು ದಾಟಿ ದಿಲ್ಲಿ ತಲುಪಿದ್ದು ಹಾಗೆ.
ಕೊಟ್ಟ ಮಾತಿಗೆ ತಪ್ಪದಂತೆ ಜಬ್ಬಾರ್ ಆಕೆಗೆ ಮನೆಯೊಂದರಲ್ಲಿ ಕೆಲಸ ಕೊಡಿಸಿದ. ಪ್ರತೀ ತಿಂಗಳು ಜಬ್ಬಾರ್ ಅವಳನ್ನು ಭೇಟಿಯಾಗಲು ಹೋಗುತ್ತಿದ್ದ. ಮೊದಲಿಗೆ ಆತ ಹಣ ಕೇಳುತ್ತಾನೇನೋ ಎಂದು ಲೂಸಿ ಹೆದರಿದ್ದಳು. ಆದರೆ, ಜಬ್ಬಾರ್ ಲೂಸಿಗಾಗಿ ಪ್ರತೀ ತಿಂಗಳೂ ಏನನ್ನಾದರೂ ಖರೀದಿಸಿ ಕೊಂಡೊಯ್ಯುತ್ತಿದ್ದ. ಹಣೆಗಂಟಿಸುವ ಬಿಂದಿಗಳು, ಗಂಧದ ವಾಸನೆಯ ಪೌಡರ್, ಲೂಸಿ ಧರಿಸಿದ ಮೊದಲ ಬ್ರೇಸಿಯರ್-ಅದೂ ಕಪ್ಪು ಬಣ್ಣದ್ದು.

ಒಂದು ದಿನ ಜಬ್ಬಾರ್ ಹೇಳಿದ "ಕೆಲಸ ನಿಲ್ಲಿಸಿ ನನ್ನ ಜತೆ ಬಾ”
ಲೂಸಿ ಅದನ್ನೇ ಮಾಡಿದಳು. ಅಂದು ಸಂಜೆ ಅರಿಶಿನ ಬಣ್ಣದ ಮೇಲೆ ಕೆಂಪು ಚುಕ್ಕಿಗಳಿದ್ದ ಸಲ್ವಾರ್ ಕಮೀಜ್ ತಂದು ಕೊಟ್ಟ. ಕೆಂಪು ದುಪಟ್ಟಾ ಹೊದಿಸಿ ತಲೆ ಮುಚ್ಚಿದ. ಕಪ್ಪು ಬಣ್ಣದ ಲಿಪಸ್ಟಿಕ್ ಕೊಟ್ಟು ಇದನ್ನು ಹಚ್ಚಿಕೊಂಡು ತನ್ನೊಂದಿಗೆ ಹೊರಡು ಎಂದ.

ಸುಂದರಿ ಲೂಸಿಯೂ ಜಬ್ಬಾರನೂ ತಲಪಿದ್ದು ಒಂದು ಹೊಟೇಲ್ ಕೋಣೆಗೆ. ಕೋಣೆಯೊಳಕ್ಕೆ ಕಾಲಿಡುವ ಮೊದಲು ಜಬ್ಬಾರ್ ಹೇಳಿದ:
“ನಾನು ಬರುವುದಿಲ್ಲ. ಒಳಗಿರುವ ಸೇಠ್ ಒಳ್ಳೆಯವನು. ಅವನ ಆಟ ನೋಡಿದರೆ ಇದೇ ಮೊದಲು ಅನಿಸುತ್ತೆ. ನಿನ್ನ ಭಾಗ್ಯ. ಒಳಗೆ ಹೋದ ತಕ್ಷಣ ಆತ ಏಳ್ನೂರಾ ಐವತ್ತು ರೂಪಾಯಿ ಕೊಡುತ್ತಾನೆ. ಅದನ್ನು ಹೊರಗೆ ಕೊಡಬೇಕು. ಮತ್ತೆ ಎಲ್ಲಾ ಮುಗಿದಾಗ ನಿನ್ನ ತಾಕತ್ತಿನಂತೆ ಭಕ್ಷೀಸು, ಅದು ನಿನಗೇ!”

ಲೂಸಿ ಹೊಟೇಲ್ ಲಾಬಿಯಿಂದ ಹೊರಗೋಡಿದಳು, ಜಬ್ಬಾರ್ ಅವಳ ಹಿಂದೆ...

ಓಟ ನಿಂತಾಗ ಆಕೆ ಜಬ್ಬಾರ್ ನ ಮನೆಯ ಬೀಗ ಹಾಕಿದ ಕೋಣೆಯೊಳಗಿದ್ದಳು.
“ನಾನು ನಿನ್ನನ್ನು ಮದುವೆಯಾಗುತ್ತೇನೆ” ಅವಳ ಬೈತಲೆಯ ಮಧ್ಯೆ ಜಬ್ಬಾರ್ ಉರಿಯುವ ಸಿಗರೇಟ್ ನಲ್ಲಿ ಸಿಂಧೂರವಿಟ್ಟ. ಮತ್ತೆ 'ನಿನಗಿನ್ನೂ ವಯಸ್ಸಾಗಿಲ್ಲ. ನೀನಿನ್ನೂ ಸಣ್ಣ ಹುಡುಗಿ' ಎಂದು ಅದೇ ಸಿಗರೇಟ್ ನಲ್ಲಿ ಆಕೆಯ ಅಂಗಾಲಿನಡಿಯಲ್ಲಿ ಕಚಗುಳಿ ಇಟ್ಟ.

ಆಗೆಲ್ಲಾ ಯಾವುದೋ ಹಿಂದಿ ಸಿನಿಮಾ ವಿಲನ್ ನಂತೆ ಜಬ್ಬಾರ್ ಮಾತನಾಡುತ್ತಿದ್ದ ಎಂದು ಲೂಸಿ ಹೇಳಿದಳು.
ಲೂಸಿ ಅಲ್ಲಿಂದ ತಪ್ಪಿಸಿಕೊಂಡದ್ದು ಹೇಗೆ ಎಂಬುದು ಫಾದರ್ ಗೆ ನೆನಪಾಗಲಿಲ್ಲ. ಕಾರಣ ಕತೆ ಅಲ್ಲಿಗೆ ತಲುಪುವ ಹೊತ್ತಿಗೆ ಮನಸಿನ ಗ್ಯಾಲರಿಗಳು ತುಂಬಿದ್ದವು. ಶ್ರದ್ಧೆಯಿಲ್ಲದ ಗೋಲೀ ಎಲ್ಲಾ ಪೆನಾಲ್ಟಿಗಳನ್ನೂ ಹಿಡಿದ ಆದರೆ, ಒಂದರ ಹಿಂದೆ ಒಂದರಂತೆ ಅವೆಲ್ಲವೂ ಕೈ ತಪ್ಪಿ ಕೆಳಗೆ ಬಿದ್ದವು. ಬೀಜಗಳನ್ನೆಲ್ಲಾ ಚೆಲ್ಲಿ ಹಾಳು ಮಾಡಿದ ಯೂದನ ಮಗ ಒನಾನ ಅಂದಿನ ಗೋಲೀ ಆಗಿದ್ದ.

ಜಬ್ಬಾರ್ ಗೆ ಗೊತ್ತಿಲ್ಲದಂತೆ ಲೂಸಿಗೆ ದಿಲ್ಲಿಯ ಮನೆಯೊಂದರಲ್ಲಿ ಕೆಲಸ ಸಿಕ್ಕಿತು. ಆದರೆ, ಅವಳನ್ನು ಹುಡುಕಲು ಜಬ್ಬಾರ್ ಗೆ ಹತ್ತು ದಿನವೂ ಬೇಕಾಗಲಿಲ್ಲ.

“ಆಮೇಲೆ ಅವನಿಗೆ ನೀನೇನು ಹೇಳಿದೆ.”

“ಬರಲಾಗುವುದಿಲ್ಲ ಅಂದೆ”

“ಒಳ್ಳೆಯದಾಯಿತು”

“ಆದರೆ, ಜಬ್ಬಾರ್...”

“ನೀನು ಪೊಲೀಸರಿಗೆ ದೂರು ಕೊಡು” ಫಾದರ್ ಸಲಹೆ ಮಾಡಿದರು.

“ಪೊಲೀಸರೆಂದರೆ ನನಗೆ ಜಬ್ಬಾರಿಗಿಂತ ಭಯ”

“ಹಾಗೆ ಹೇಳಿದರೆ ಇದಕ್ಕೊಂದು ಪರಿಹಾರ ಬೇಡವೇ?”

“ಫಾದರ್ ನನ್ನ ಜತೆ...”

“ನೀನು ಹೆದರಬೇಡ. ನಾನು ಹೊರಡಲಾ?”

ಫಾದರ್ ಅವರ ಕೋಣೆ ತಲುಪಿದರು. ಮೈದಾನ ಕಾಲಿಯಾಗಿ ಮಲಗಿತ್ತು. ಪಾಪ್ ಕಾರ್ನ್ ನ ಖಾಲಿ ಪೊಟ್ಟಣಗಳು, ಐಸ್ ಕ್ರೀಂ ಕಪ್ಪುಗಳು ನೆನಪಿನ ಟಿಪ್ಪಣಿಗಳಂತೆ ಹರಡಿದ್ದವು. ಗೋಲಿಗಳೆಲ್ಲಾ ವಿಶ್ರಾಂತಿ ಪಡೆಯುತ್ತಿದ್ದರು.
ರಾತ್ರಿಯೂಟ ಮುಗಿಸಿ ಮಲಗಲು ಹೊರಟಾಗ ಫಾದರ್ ಗೆ ನಿದ್ರೆ ಬರಲಿಲ್ಲ. ಇಟಲಿಯಲ್ಲಿ ನಡೆಯುವ ವಿಶ್ವಕಪ್ ಫುಟ್ ಬಾಲ್ ಇದ್ದಕ್ಕಿದ್ದಂತೆ ನೆನಪಾಯಿತು. ಸಣ್ಣ ಬ್ಲ್ಯಾಕ್ ಅಂಡ್ ವೈಟ್ ಟಿ.ವಿ. ತೆಗೆದು ಹೊರಗಿಟ್ಟು ಫಾದರ್ ಅದರ ಮುಂದೆ ಕುಳಿತರು.
ಪಿ.ಟಿ. ಮಾಸ್ಟ್ರ ಮಗನಾದ್ದರಿಂದ ಗೀವರ್ಗೀಸ್ ನನ್ನು ಫುಟ್ ಬಾಲ್ ಟೀಮಿಗೆ ಆರಿಸಲಾಗಿದೆ ಎಂದು ತಲೆಮಾರುಗಳ ಉಚ್ಚೆ ಘನೀಭವಿಸಿದ್ದ ಶಾಲೆಯ ಉತ್ತರದ ಗೋಡೆಯಲ್ಲಿ ಯಾರೋ ಹುಡುಗ ಇದ್ದಿಲಿನಲ್ಲಿ ಬರೆದಿದ್ದರೂ ಒಲ್ಲೂರು ಹೈಸ್ಕೂಲ್ ನ ಗೋಲ್ ಪೋಸ್ಟ್ ಗೆ ಕಾಮನ ಬಿಲ್ಲಿನಂತೆ ಬಾಗಿ ಬಂದ ಕಾರ್ನರ್ ಕಿಕ್ ನೊಂದಿಗೆ ಶಾಲೆಯಲ್ಲಿ ಇರುವವರೆಲ್ಲಾ ಗೀವರ್ಗೀಸ್ ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳತೊಡಗಿದರು. ಎಣಿಸಿದರೆ ಮುಗಿದು ಬಿಡಬಹುದಾದಷ್ಟೇ ಬಿದಿರು ಮೆಳೆಗಳಿದ್ದ ಊರಿನಲ್ಲಿ ಬಿದಿರು ಕಟ್ಟಿ ನಿರ್ಮಿಸಿದ್ದ ಗೋಲ್ ಪೋಸ್ಟ್ ಗಳಿದ್ದ ಮೈದಾನಗಳಲ್ಲಿ ಆತ ಬರಿಗಾಲಿನಲ್ಲಿ ಫುಟ್ ಬಾಲ್ ಆಡುತ್ತಿದ್ದ.
ಡಿಸ್ಟ್ರಿಕ್ಟ್ ಚಾಂಪಿಯನ್ ಶಿಪ್ ನಲ್ಲಿ ಒಲ್ಲೂರು ಹೈಸ್ಕೂಲನ್ನು ಸೋಲಿಸಿದ ನಂತರ ಆತ ಕುನ್ನಂಕುಳಂಗೆ ಹೋದ. ಬಸ್ಸಿನಲ್ಲಿ ಹುಡುಗರೆಲ್ಲ ಮೌನವಾಗಿದ್ದರು. ಸ್ಟೇಟ್ ಟೀಮಿಗೆ ಆಯ್ಕೆಯಾಗಿದ್ದ 'ಕಾಲನ್ ರಪ್ಪಾಯಿ' ಎಂಬ ಅಡ್ಡ ಹೆಸರಿನ ರಪ್ಪಾಯಿ ಕುನ್ನಂಕುಳಂ ಶಾಲೆಯ ಕ್ಯಾಪ್ಟನ್. ಅಪ್ಪ ಮಾತ್ರ ಮಾತನಾಡುತ್ತಿದ್ದರು : “ಚೆಂಡು ಕಾಲಿಗೆ ಸಿಕ್ಕರೆ ಠಪ್ಪಂತ ಹುಡುಕ ಬೇಕು-ನಮ್ಮವರು ಯಾರಾದರೂ ಮಾರ್ಕ್ ಆಗದೆಯೇ ಇದ್ದಾರೆಯೇ ಎಂಬುದನ್ನು”
ಅಪ್ಪ ಸ್ಕೂಲ್ ಫಂಡಿನಿಂದ ತೆಗೆಸಿಕೊಟ್ಟ ನೇಂದ್ರ ಬಾಳೆ ಹಣ್ಣು ಮತ್ತು ಕಡಲೆಬೇಳೆ ವಡೆ ತಿಂದು ಕುನ್ನಂಕುಳಂನವರ ಕೂಗಾಟ ಕೇಳಿ ಆಟ ಗೆದ್ದ ಹುಡುಗರೆಲ್ಲಾ ನಿರ್ಜನ ರಾತ್ರಿಯಲ್ಲಿ ಬಸ್ಸು ಹತ್ತಿ ಹೊರಟಾಗ ತಾಳ ಹಾಕುತ್ತಾ ಹಾಡಿದರು.

ಅಯ್ಯೋ ಅಯ್ಯೋ ಹೋಗೇ ಹೋಯ್ತು
ಕುನ್ನಂಕುಳಂ ಹೋಗೇ ಹೋಯ್ತು
ಬಿದ್ದೇ ಬಿದ್ದ ರಪ್ಪಾಯಿ ಬಿದ್ದ....

“ನೀನೂ ಹಾಡೋ” ಮೌನವಾಗಿದ್ದ ಗೀವರ್ಗೀಸ್ ನತ್ತ ವಾತ್ಸಲ್ಯದ ದೃಷ್ಟಿ ಹರಿಸಿದ ಅಪ್ಪ ಹೇಳಿದರು. “ಹೆದರಬೇಡ, ನಾನೀಗ ನಿನ್ನ ಅಪ್ಪ ಅಲ್ಲ. ಪಿ.ಟಿ. ಮಾಸ್ಟ್ರು”
ಮುಂದಿನ ಆಟ ಸ್ವಂತ ಊರಿನ ಗ್ರೌಂಡ್ ನಲ್ಲಿ.ಕ್ಯಾಪ್ಟನ್ ಗೋಪಿನಾಥ್ ಕೊಟ್ಟ ಪಾಸನ್ನು ಎದೆಯ ಮೇಲೆ ತೆಗೆದುಕೊಂಡು ಬಾಲ್ ಹಿಂದಕ್ಕೆ ಹಾಕಿ ಸಿಸರ್ಸ್ ಕಟ್ ನಲ್ಲಿ ಗೋಲ್ ಹೊಡೆದಾಗ ಗೀವರ್ಗೀಸ್ ನನ್ನು ಹುಡುಕುತ್ತಾ ಜನರು ಮಲಬಾರ್ ನಿಂದಲೂ ಬರಲಾರಂಭಿಸಿದರು. ಒಂದು ಆಟಕ್ಕೆ ಹತ್ತರಿಂದ ಹದಿನೈದು ರೂಪಾಯಿಯ ಒಪ್ಪಂದವೂ ಆಯಿತು. ಅವನಿಗೆ ಸೆವೆನ್ಸ್ ಟೂರ್ನಮೆಂಟ್ ನಲ್ಲಿ ಆಡಲು ಆಹ್ವಾನಗಳು ಬಂದವು.

ಕೊಯ್ಲು ಮುಗಿದ ಗದ್ದೆಗಳಲ್ಲಿ ಬೆಟ್ ಕಟ್ಟಿದ ಜೂಜುಕೋರರ ಕೂಗಾಟದ ಮಧ್ಯೆ ಗೀವರ್ಗೀಸ್ ಸೆವೆನ್ಸ್ ಆಡುವುದು ಅಪ್ಪನಿಗೆ ಇಷ್ಟವಿರಲಿಲ್ಲ. ಒಮ್ಮೆ ಅದರ ಬಗ್ಗೆ ಆತ ಕೇಳಿಯೂ ಬಿಟ್ಟ:
“ಫುಟ್ಬಾಲ್ ನನ್ನ ನಂಬಿಕೆ-ಸೆವೆನ್ಸ್ ಅದರ ಶಿಲುಬೆಗೇರಿದ ಕ್ರಿಸ್ತ”
ಗೀವರ್ಗೀಸ್ ಗಾದರೋ ಸೆವೆನ್ಸ್ ಆಡದಿರಲು ಸಾಧ್ಯವೇ ಇಲ್ಲ ಎಂಬಂತಾಗಿತ್ತು. ಅಪ್ಪ ಅವನೊಂದಿಗೆ ಫುಟ್ಬಾಲ್ ವಿಷಯ ಮಾತನಾಡುವುದನ್ನೇ ಬಿಟ್ಟರು.

ಅಪ್ಪ ಸತ್ತ ವರ್ಷವೇ ಗೀವರ್ಗೀಸ್ ಬಿ.ಎ. ಯಲ್ಲಿ ಫೇಲ್ ಆದ. ಅದೇ ವರ್ಷ ಅಪ್ಪನೊಂದಿಗೆ ಮನಸ್ತಾಪಕ್ಕೆ ಕಾರಣವಾಗಿದ್ದ ಆಟವನ್ನೂ ನಿಲ್ಲಿಸಿದ. ಮತ್ತೆ ಸ್ವಲ್ಪ ದಿನ ಕಳೆದಾಗ ದೇವರ ಕರೆ ಬಂತು.
ಟಿ.ವಿ.ಯಲ್ಲಿ ವರ್ಲ್ಡ್ ಕಪ್ ಆಟ ನೋಡುತ್ತಿರುವಾಗಲೂ ಪೆನಾಲ್ಟಿ ಕಿಕ್ ಗಾಗಿ ಕಾಯುತ್ತಿರುವ ಹಲ ವಿಧದ ಗೋಲೀಗಳು ಫಾದರ್ ಮನಸ್ಸಿನಿಂದ ಹೊರಗೆ ಹೋಗಿರಲಿಲ್ಲ. ಫಾದರ್ ಆಟ ನೋಡುತ್ತಿರಲಿಲ್ಲ; ಗೋಲೀಗಳನ್ನಷ್ಟೇ ಶ್ರದ್ಧೆಯಿಂದ ಗಮನಿಸುತ್ತಿದ್ದರು.
ಮತ್ತೊಂದು ಬಲಿಪೂಜೆ ಮುಗಿಸಿ ಹೊರಬಂದಾಗ ಲೂಸಿ ಫಾದರ್ ಹತ್ತಿರ ಬಂದಳು.

“ಫಾದರ್”

“ಹೂಂ...?”

“ಜಬ್ಬಾರ್”

“ಜಬ್ಬಾರ್ ?”

“ಅವನ ಜತೆ ತಕ್ಷಣ ಹೊರಡಬೇಕಂತೆ.”

“ನೀನು ಹೋಗುವ ಪ್ರಶ್ನೆಯೇ ಇಲ್ಲ”

“ನಾನು ಕೆಲಸ ಮಾಡುವ ಮನೆಯಲ್ಲಿ ಜನರಿಲ್ಲದಿರುವ ಹೊತ್ತು ಯಾವುದೆಂಬುದೂ ಅವನಿಗೆ ಗೊತ್ತು. ಅಲ್ಲದಿದ್ದರೆ ಅದೇ ಹೊತ್ತಿಗೆ ಸರಿಯಾಗಿ ಅವನು ಫೋನ್ ಮಾಡುವುದು ಹೇಗೆ? ನನಗೆ ಹೆದರಿಕೆಯಾಗುತ್ತಿದೆ.”

“ಎಲ್ಲ ಸರಿಯಾಗುತ್ತದೆ ಲೂಸಿ” ಫಾದರ್ ಹೊರಟರು.

'ಗೋಲೀಗಳ ಕುರಿತು ನಡೆಸುವ ಅಧ್ಯಯನಕ್ಕೆ ಉತ್ತಮ ಪರಿಕರವೆಂದರೆ ಪೆನಾಲ್ಟಿ ಕಿಕ್ ಗಳು ಮಾತ್ರ': ತಮ್ಮ ಕೋಣೆಯತ್ತ ಹೊರಟಾಗ ಫಾದರ್ ಗೀವರ್ಗೀಸ್ ತಮ್ಮಷ್ಟಕ್ಕೇ ಹೇಳಿಕೊಂಡರು. ಆಗ ಫಾದರ್ ಮತ್ತೊಂದು ವಿಷಯವನ್ನೂ ಕಂಡು ಹಿಡಿದರು: ಪೆನಾಲ್ಟಿ ಕಿಕ್ ಗಾಗಿ ಕಾದಿರುವ ಗೋಲೀ ಏಕಾಂಗಿಯಲ್ಲ. ಬದಲಿಗೆ ಜನರು ಗುಂಪು ಸೇರಿ ತನ್ನ ಏಕಾಂತವನ್ನು ಹಾಳು ಮಾಡುತ್ತಿದ್ದಾರೆ ಎಂಬುದು ಗೋಲೀಯನ್ನು ಹೆಚ್ಚು ಅಸ್ವಸ್ಥನನ್ನಾಗಿಸುತ್ತದೆ .

ಫಾದರ್ ಗೀವರ್ಗೀಸ್ ಮತ್ತೆ ಲೂಸಿಯನ್ನು ಕಂಡದ್ದು ಸ್ಕೂಟರ್ ನಲ್ಲಿ ಹೋಗುವಾಗ. ಐಏನ್ಐ ಮಾರ್ಕೆಟ್ ನ ಹತ್ತಿರ ರಿಕ್ಷಾದಲ್ಲಿ ಹೋಗುತ್ತಿದ್ದ ಲೂಸಿಯೂ ಫಾದರನ್ನು ನೋಡಿದಳು. ರಿಕ್ಷಾ ಡ್ರೈವರ್ ನ ಹೆಗಲು ಮುಟ್ಟಿ ರಿಕ್ಷಾ ನಿಲ್ಲಿಸಲು ಹೇಳುವಷ್ಟರಲ್ಲಿ ಫಾದರ್ ಗೇರ್ ಬದಲಾಯಿಸಿ ವೇಗವಾಗಿ ಮುಂದುವರಿದರು .

ಗೋಲೀಗಳ ಕುರಿತ ಫಾದರ್ ಗೀವರ್ಗೀಸ್ ಅವರ ಅಧ್ಯಯನದಲ್ಲಿ ಒಂದು ಸಣ್ಣ ಅಡಿ ಟಿಪ್ಪಣಿಯಂತೆ ಟಿ.ವಿ.ಯಲ್ಲಿ ಕೊಲಂಬಿಯಾದ ಗೋಲೀ ಹಿಗಿಟ್ಟಾ ಪ್ರತ್ಯಕ್ಷನಾದ. ತಾಂಡವವಾಡುವ ಮುನ್ನ ಜಟೆ ಬಿಚ್ಚಿದ ಶಿವನಂತೆ ಉದ್ದವಾದ ಸುರುಳಿ ಸುರುಳಿ ಕೂದಲು, ಕಪ್ಪು ಕಪ್ಪಾದ ಕರಿಕಲ್ಲಿನಂಥಾ ಮುಖ, ಸಣ್ಣ ಮೀಸೆಯ ಹಿಗಿಟ್ಟಾ ಗೋಲಿಗಳಿಗೊಂದು ಅಪವಾದವಾಗಿದ್ದ.

ಗೋಲ್ ಕೀಪರ್ ನ ಸ್ಥಾಯಿಯಾದ ಧರ್ಮವೆಂದರೆ ದೃಕ್ ಸಾಕ್ಷಿತ್ವ. ಪೆನಾಲ್ಟಿ ಕಿಕ್ ಎದುರಿಸುವಾಗ ಈ ಧರ್ಮವನ್ನು ಆತ ಕಳೆದುಕೊಳ್ಳುತ್ತಾನೆ. ಇದಕ್ಕೆ ಪ್ರತಿಯಾಗಿ ಆತನಿಗೆ ದೊರೆಯುವುದು ಸ್ವಲ್ಪ ಸಭಾ ಕಂಪನ. ಆದರೆ, ಹಿಗಿಟ್ಟಾ ಯಾವ ಭಯವೂ ಇಲ್ಲದೆ ನೇರವಾಗಿ ಘಟನೆಗಳೊಳಕ್ಕೆ ಪ್ರವೇಶಿಸಿ ಬಿಡುತ್ತಿದ್ದ. ಹೊಸ ಅಕ್ಷಾಂಶಗಳನ್ನು ಹುಡುಕುವ ನಾವಿಕನಂತೆ ಆತ ಗೋಲಿಗಳು ಇದುವರೆಗೂ ನೋಡದ ಮೈದಾನದ ಮಧ್ಯ ಭಾಗಕ್ಕೆ ಚೆಂಡಿನ ಎಡ ಬಲ ಸೀಳುತ್ತಾ ಮುಂದುವರಿಯುತ್ತಿದ್ದ.
ಫಾದರ್ ಗೀವರ್ಗೀಸ್ ಉಳಿದ ಗೋಲಿಗಳನ್ನು ಕೈಬಿಟ್ಟು ಹಿಗಿಟ್ಟಾನನ್ನು ಮಾತ್ರ ಗಮನಿಸತೊಡಗಿದ್ದು ಆತ ಪೆನಾಲ್ಟಿ ಕಿಕ್ ಎದುರಿಸುವುದನ್ನು ಮೊದಲ ಬಾರಿ ಕಂಡ ನಂತರ. ಆರ್ಕೆಸ್ಟ್ರಾದ ನಿರ್ದೇಶಕನಂತೆ ಎರಡೂ ಕೈಗಳನ್ನು ಗಾಳಿಯಲ್ಲಿ ಬೀಸಿ, ಚಂದ್ರನ ಮೇಲಿನ ಕಲೆಗಳಂತೆ ಕಾಣಿಸುತ್ತಿರುವ ಸ್ಟೇಡಿಯಂನಲ್ಲಿರುವ ಕೇಳುಗರಿಗಾಗಿ ಶ್ರಾವ್ಯವಲ್ಲದ ಸಂಗೀತದ ಉಚ್ಛ ಸ್ಥಾಯಿಗಳನ್ನು ಮುಗಿಸಿದ. ಚೆಂಡೊದೆಯಲು ಬಂದ ಆಟಗಾರನಿಗೆ ಇದ್ದ ಪ್ರಾಮುಖ್ಯತೆ ಹಿಗಿಟ್ಟಾನ ಆರ್ಕೆಸ್ಟ್ರಾದ ಒಂದನೇ ವಯಲಿನ್ ನವನದ್ದು. ಕೊನೆಗೊಂದು ದಿನ ಅದು ಸಂಭವಿಸಿಯೇ ಬಿಟ್ಟಿತು. ಚೆಂಡಿನೊಂದಿಗೆ ಮುಂದುವರಿದ ಹಿಗಿಟ್ಟಾನಿಂದ ಚೆಂಡು ಕಿತ್ತ ಎದುರಾಳಿ ಖಾಲಿ ಇದ್ದ ಗೋಲ್ ಪೋಸ್ಟ್ ನತ್ತ ಒದ್ದು ಗೋಲ್ ಗಳಿಸಿ ಕೊಲಂಬಿಯಾವನ್ನು ವಿಶ್ವಕಪ್ ನಿಂದ ಹೊರತಳ್ಳಿದ. ಈ ಘಟನೆಯಲ್ಲಿ ತನ್ನ ಪಾಲನ್ನು ನೆನಪಿಸಿಕೊಂಡ ಹಿಗಿಟ್ಟಾ ಸಣ್ಣಗೆ ನಕ್ಕದ್ದನ್ನು ಕಂಡದ್ದು ಫಾದರ್ ಗೀವರ್ಗೀಸ್ ಮಾತ್ರ.

ಬಲಿಪೂಜೆ ಮುಗಿಸಿ ಹೊರಬಂದಾಗ ಫಾದರ್ ಗೆ ಅಂದೂ ಅವರನ್ನು ಕಾಯುತ್ತಿದ್ದ ಲೂಸಿ ಕಂಡಳು. ಅವಳತ್ತ ನೋಡಿ ತಲೆಯಾಡಿಸಿದ ಫಾದರ್ ಮಾತಿಗೆ ನಿಲ್ಲದೆ ತಮ್ಮ ಕೋಣೆಗೆ ಹೋದರು.

ಮೈದಾನದ ಮಧ್ಯೆ ಜತೆಗಾರನಿಗೆ ಚೆಂಡನ್ನು ಪಾಸ್ ಮಾಡಿದ ನಂತರ ಹಿಂದಿರುಗುವ ಹಿಗಿಟ್ಟಾನನ್ನು ನೋಡುವುದು ಫಾದರ್ ಗೆ ತುಂಬಾ ಇಷ್ಟವಾದ ಸಂಗತಿ. ಗೋಲ್ ಪೋಸ್ಟ್ ನ ಉರಿವ ಬಿಸಿಯನ್ನು ಅನುಭವಿಸಲು ನಡುಗುತ್ತಾ ಬರುವ ಇತರ ಗೋಲೀಗಳಿಗಿಂತ ಸಂಪೂರ್ಣ ಭಿನ್ನವಾಗಿರುವ ಹಿಗಿಟ್ಟಾ ಗೋಲ್ ಪೋಸ್ಟ್ ಗೆ ಹಿಂದಿರುಗುತ್ತಿದ್ದಾನೆ-ಶಾಂತವಾಗಿ , ಯಾವ ಆತುರಗಳೂ ಇಲ್ಲದೆ.

“ಫಾದರ್” ಲೂಸಿ ಕರೆದಳು.

ಫಾದರ್ ನಿಂತರು.

“ನಾನು ಜಬ್ಬಾರ್ ನಲ್ಲಿಗೆ ಹೋಗುತ್ತಿದ್ದೇನೆ.” ಅವಳ ಪ್ರತಿರೋಧದ ಶಕ್ತಿ ಕುಸಿಯ ತೊಡಗಿತ್ತು.

“ಹೋಗುವುದು ನಿನಗಿಷ್ಟವೇ ?”

“ನಿನಗಿಷ್ಟವೇ ಅಂದರೆ....”

“ಮತ್ತೆ ?”

“ಇಂದು ಸಂಜೆಗೆ ಮೊದಲು ಅವನ ಮನೆಗೆ ನಾನು ಹೋಗದಿದ್ದರೆ 'ನಿನ್ನ ಮುಖಕ್ಕೆ ಆಸಿಡ್ ಬಲ್ಬ್ ಎಸೆಯುತ್ತೇನೆ' ಎಂದಿದ್ದಾನೆ”

“ನೀನು ಹೋಗುತ್ತೀಯಾ ?”

“ಬಹುಶಃ ನಾನು ಹೋದರೆ ಆತ ನನ್ನನ್ನು ಮದುವೆಯಾಗಬಹುದು” ಅಪನಂಬಿಕೆಯ ಧ್ವನಿಯಲ್ಲಿ ಹೇಳಿದಳು.

“ಹೋಗುವುದಕ್ಕೆ ನಿನ್ನ ಮನಸ್ಸು ಪೂರ್ಣವಾಗಿ ಒಪ್ಪಿದೆಯೇ ?”

“ಅವನು ನನ್ನ ಮುಖಕ್ಕೆ ಆಸಿಡ್ ಬಲ್ಬ್ ಎಸೆಯುತ್ತಾನೆ”

“ನೀನು ಬಾ” ತನ್ನೊಂದಿಗೆ ಬರುವಂತೆ ಫಾದರ್ ಅವಳನ್ನು ಕರೆದರು. ಲೂಸಿಯನ್ನು ಹೊರಗೆ ನಿಲ್ಲಿಸಿ ಪ್ಯಾಂಟು ಶರ್ಟ್ ಗಳ ಮೇಲೆ ಹಾಕಿಕೊಂಡಿದ್ದ ಲೋಹಾ ಮತ್ತು ಜಪ ಮಾಲೆಯನ್ನು ತೆಗೆದಿಟ್ಟು ಲೂಸಿಯನ್ನು ಕರೆದುಕೊಂಡು ಸ್ಕೂಟರ್ ನತ್ತ ನಡೆದರು.

“ನೀನೂ ಹತ್ತು" ಸ್ಕೂಟರ್ ಸ್ಟಾರ್ಟ್ ಮಾಡಿದ ಫಾದರ್ ಹೇಳಿದರು.

“ಜಬ್ಬಾರ್ ನ ಮನೆ ಎಲ್ಲಿ ?”

“ಶಕೂರ್ ಪುರ್ ಬಸ್ತಿಯ ಹತ್ತಿರ.”

ಫಾದರ್ ತಮ್ಮ ಸ್ಕೂಟರನ್ನು ಕಾರುಗಳು, ಬೈಕುಗಳು ಮತ್ತು ಸ್ಕೂಟರುಗಳ ನಡುವೆ ಎಡಬಲ ಸೀಳಿಕೊಂಡು ವೇಗವಾಗಿ ಓಡಿಸಿದರು.

ತಟ್ಟಿದಾಗಲೇ ಜಬ್ಬಾರ್ ಬಾಗಿಲು ತೆರೆದ. ಗುಂಗುರು ಕೂದಲಿನ ಐದೂವರೆ ಅಡಿ ಎತ್ತರದ ಜಬ್ಬಾರ್ ನ ಮುಖದಲ್ಲಿ ಮೀಸೆಗಳಿನ್ನೂ ಕಪ್ಪುಗಟ್ಟಿರಲಿಲ್ಲ. ಹಾಗಿದ್ದರೂ ಅವನ ಕೂದಲು ನರೆಯ ತೊಡಗಿತ್ತು. ಒಟ್ಟಿನಲ್ಲಿ ಎಷ್ಟೆಂದು ಹೇಳಲು ಸಾಧ್ಯವಿಲ್ಲದ ವಯಸ್ಸು. ಜಬ್ಬಾರ್ ಕೇಳಿದ:

“ಬಂದೆಯಾ.... ? ”

ಜಬ್ಬಾರ್ ನ ಮೃದು ಧ್ವನಿಯೇ ಫಾದರ್ ಗೆ ಆಶ್ಚರ್ಯ ಉಂಟು ಮಾಡಿತು. ಆ ಧ್ವನಿ ಹೊರಡಿಸಿದ ಮಾಂಸ ಪೇಶಿಗಳು ತುಂಬಿದ ಗೂಳಿಯಂಥ ಕೊರಳು ಕಂಡಾಗ ಮತ್ತಷ್ಟು ಆಶ್ಚರ್ಯವಾಯಿತು.

“ನೀನು ಒಳಕ್ಕೆ ಬಾ” ಜಬ್ಬಾರ್ ಧ್ವನಿಯನ್ನು ಮತ್ತಷ್ಟು ತಗ್ಗಿಸಿದ.

“ಇಲ್ಲ” ಫಾದರ್ ಗೀವರ್ಗೀಸ್ ಹೇಳಿದರು. ಆಗಲೂ ಜಬ್ಬಾರ್ ಲೂಸಿಯನ್ನು ಮಾತ್ರ ನೋಡುತ್ತಿದ್ದ. ಅವನ ಕಣ್ಣುಗಳು ಫಾದರ್ ಅಸ್ತಿತ್ವವನ್ನು ದಾಖಲಿಸಲು ನಿರಾಕರಿಸಿದವು.

“ನೀನು ಒಳಗೆ ಬರುತ್ತೀಯೋ... ?”

“ಇಲ್ಲ” ಫಾದರ್ ಮತ್ತೊಮ್ಮೆ ಹೇಳಿದರು.

ಜಬ್ಬಾರ್ ಆಗಲೂ ಫಾದರನ್ನು ನೋಡಲಿಲ್ಲ. ಭಾವನೆಗಳಿಲ್ಲದ ಧ್ವನಿಯಲ್ಲಿ ಲೂಸಿಯ ಜತೆ ಏನೋ ವೈಯಕ್ತಿಕ ವಿಷಯ ಹೇಳುವ ಆತ್ಮೀಯತೆಯಲ್ಲಿ ಆತ: “ಲೂಸಿ ಈತ ಇಲ್ಲಿಂದ ಹೋಗುವುದು ನಮಗೆಲ್ಲಾ ಒಳ್ಳೆಯದು."
“ಅಲ್ಲ” ಲೂಸಿ ಹೇಳಿದಳು.

ಆಗ ಜಬ್ಬಾರ್ ಕೈ ಮೇಲೇರಿದ್ದೂ ಲೂಸಿ ಒಂದು ಹೆಜ್ಜೆ ಹಿಂದಕ್ಕಿಟ್ಟದ್ದೂ ತಲಶ್ಶೇರಿ ಸಮೀಪದ ಒಂದು ಗದ್ದೆಯಲ್ಲಿ ಸೆವೆನ್ಸ್ ನೋಡಲು ಬಂದವರು 'ಗೀವರೀದೇ, ಗೀವರೀದೇ' ಎಂದು ಕೂಗಿದ್ದೂ ಎಲ್ಲವೂ ಒಟ್ಟಿಗೆ.

ಹಳೆಯ ಛಾಯಾಚಿತ್ರಗಳ ಹಳದಿ ಬಣ್ಣದಂಥ ಒಂದು ನೆನಪಿನಲ್ಲಿ ಪಿ.ಟಿ. ಮಾಸ್ಟ್ರು ದೂರದಲ್ಲೊಂದು ಅಡಿಕೆ ಗಿಡಕ್ಕೆ ಒರಗಿ ನಿಂತಿರುವುದು ಕಣ್ಣಿನ ಪರಿಧಿಯೊಳಗೆ ಕೆನೆಗಟ್ಟಿ ನಿಂತಿರುವಾಗಲೇ ಗೀವರ್ಗೀಸ್ ಕಾಲೆತ್ತಿ ಹೊಡೆದ. ಎದೆಯೊಡ್ಡಿ ಚೆಂಡು ತಡೆದು ತಲೆಯಲ್ಲಿ ಕುಟ್ಟಿದ. ಮುಂದಿನ ಹೊಡೆತ ಕಾಲೆತ್ತಿ. ಮತ್ತೆ ಮತ್ತೆ. ಆಮೇಲೆ ಸ್ಲೋಮೋಷನ್ ನಲ್ಲಿ ಆ ಹೊಡೆತಗಳನ್ನು ಪುನರಾವರ್ತಿಸಿದ. ನೆಲಕ್ಕೆ ಬಿದ್ದ ಜಬ್ಬಾರ್ ನ ಮೂಗಿನಿಂದ ರಕ್ತ ಹರಿಯಿತು. ದೊಡ್ಡ ಅಕ್ಷರದಲ್ಲಿ ಒಕ್ಲಹಾಮ ಎಂದು ಬರೆದಿದ್ದ ಅವನ ಬನಿಯನ್ ಹಿಡಿದು ಮೇಲೆತ್ತಿ ಫಾದರ್ ಗೀವರ್ಗೀಸ್ ಹೇಳಿದರು :

“ನಾಳೆ ಸೂರ್ಯೋದಯ ಎಂಬುದೊಂದಿದ್ದರೆ ದಿಲ್ಲಿಯಲ್ಲಿ ನೀನು ಕಾಣಬಾರದು.”
ಫಾದರ್ ಕೈ ಬಿಟ್ಟಾಗ ಕಾಲಲ್ಲಿ ಶಕ್ತಿ ಇಲ್ಲದವನಂತೆ ಜಬ್ಬಾರ್ ನೆಲಕ್ಕೆ ಕುಸಿದ.

ಲೂಸಿಯನ್ನು ಅವಳು ಕೆಲಸ ಮಾಡುತ್ತಿದ್ದ ಮನೆ ಮುಂದೆ ಇಳಿಸಿ ಫಾದರ್ ತಮ್ಮ ಕೋಣೆಗೆ ಹಿಂದಿರುಗಿದರು-ಶಾಂತನಾಗಿ, ಯಾವ ಆತುರವೂ ಇಲ್ಲದೆ.

ಲೇಖನ ವರ್ಗ (Category):