ಶ್ರೀಬಸವೇಶ್ವರರ ವಚನಗಳು

To prevent automated spam submissions leave this field empty.

ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯೂ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯೂ !!

ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು?
ಮನದಾ ಕೋಪ ತನ್ನರಿವಿನಾ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ !!

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ!
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ!
ಕೂಟಕ್ಕೆ ಸ್ರೀಯಾಗಿ ಕೂಡಿದಳು ಮಾಯೆ!
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ?
ಈ ಮಾಯೆಯ ಕಳವೊಡೆ ಎನ್ನಳವಲ್ಲ;
ನೀವೇ ಬಲ್ಲಿರಿ ಕೂಡಲಸಂಗಮದೇವಾ!!

ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ !!

ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ
ಮನ ನಿಮ್ಮದೆಂದ ಬಳಿಕ ಬೇರೆ ಮನವಿಲ್ಲ
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ
ಇಂತೀ ತ್ರಿವಿಧವೂ ನಿಮ್ಮದೆಂದರಿದ ಬಳಿಕ ಎನಗೆ ಬೇರೆ
ವಿಚಾರವುಂಟೆ ಕೂಡಲಸಂಗಮದೇವಾ!!

ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ!!

ತಂದೆ ನೀನು ತಾಯಿ ನೀನು
ಬಂಧು ನೀನು ಬಳಗ ನೀನು
ನೀನಲ್ಲದೆ ಮತ್ತಾರೂ ಇಲ್ಲವಯ್ಯಾ
ಕೂಡಲಸಂಗಮದೇವಾ
ಹಾಲಲ್ಲದ್ದು ನೀರಲ್ಲದ್ದು ನಿಮ್ಮ ಧರ್ಮ!!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬೀದಿ ನಾಯಿಯ ಕಣ್ಣ ಮೂಲಕ ಜಗವ ನೋಡು ಅ೦ತಾ ಒ೦ದು ವಚನವಿದೆಯ೦ತೆ .. ಯಾರೋ ಬಸವಣ್ಣನವರು ಬರೆದದ್ದು ಅ೦ತಾ ಹೇಳಿದ್ದರು.
ಅದಕ್ಕೆ ಚೆಕ್ ಮಾಡ್ ಬೇಕಿತ್ತು...

ವಚನಸಾಹಿತ್ಯ ಸಂಪೂರ್ಣವಾಗಿ ಶಿಷ್ಟ ಸಾಹಿತ್ಯ. ದಾಸರ ಸಾಹಿತ್ಯದಂತೆ ಸಂಪೂರ್ಣ ಆಡುಮಾತಲ್ಲ. ಆದರೆ ಶರಣರು ಎಲ್ಲಾ ಜನ ಮಾತಾಡುವ ಕನ್ನಡ ಭಾಷೆಯನ್ನೇ ಆಯ್ಕೆ ಮಾಡಿಕೊಂಡರು. ಹಾಗಾಗಿ ಶಿಷ್ಟ ಸಾಹಿತ್ಯವಾದ್ದಱಿಂದ ಆ ಕಾಲದಲ್ಲಿ ’ರ’ ಮತ್ತು ’ಱ’ ನಡುವೆ ಉಚ್ಚಾರ ಭೇದವಿತ್ತು.
ಇಲ್ಲಿ ಉದಾಹರಿಸಿರುವ ವಚನಗಳಲ್ಲಿ ಕೆಲವು ತಪ್ಪುಗಳನ್ನು ಹೇೞುತ್ತಿದ್ದೇನೆ. ಇದನ್ನು ಎಲ್ಲಾ ಕನ್ನಡಿಗರೂ ಗಮನಿಸಬೇಕು.
’ತನ್ನರಿವಿನಾ’ ತಪ್ಪು ಸರಿಯಾದ ರೂಪ ’ತನ್ನಱಿವಿನ’
’ತಾನರಿದವಂಗೆ’ ಬದಲು ’ತಾನಱಿದವಂಗೆ’
’ಬೇರೆ’ ಬದಲು ’ಬೇಱೆ’
’ನಿಮ್ಮನರಿದವಂಗೆ’ ಬದಲು ’ನಿಮ್ಮನಱಿದವಂಗೆ’
’ನಿಮ್ಮದೆಂದರಿದ’ ಬದಲು ’ನಿಮ್ಮದೆಂದಱಿದ’

ಆಗೇನು? ಚೇಗೇನು? ಆಗು ಅಂದರೆ ನಮಗೆಲ್ಲ ಗೊತ್ತಿರುವಂತೆ ನಮಗಾಗುವುದು ಅಂದರೆ ಲಾಭ. ತ್ಯಾಗ->ಚಾಗ->ಚೇಗ ಬಿಡಬೇಕಾಗಿ ಬರುವಂಥದ್ದು. ಅಂದರೆ ನಷ್ಟ. ಚಾಗ ಹೇಗೆ ಚೇಗ ಆಯ್ತೆಂದರೆ ಬೇಡ<->ಬ್ಯಾಡ ಆಗುವಂತೆ ತ್ಯಾಗ<->ತ್ಯೇಗ ಚ್ಯಾಗ<->ಚೇಗ ಅಂದರೆ ತ್ಯಾಗ. ಅಂದರೆ ಚೇಗ ಅಂದರೆ ಚಾಗ -> ತ್ಯಾಗ