ಭಿಕ್ಷೆ.-ಮಾನವೀಯತೆ...

To prevent automated spam submissions leave this field empty.

ಭಿಕ್ಷೆಯ ಕುರಿತ ಲೇಖನವಲ್ಲ ಇದು,ಬೆಂಗಳೂರು ನಗರದಲ್ಲಿ ಭಿಕ್ಷೆ ಎಂಬುದು ಬ್ಯುಸಿನೆಸ್ ಆಗಿರುವುದರ ಕುರಿತು. ನಾನಿರುವುದು ಜೆ.ಪಿ.ನಗರದಲ್ಲಿ. ಜಯನಗರದ ರಾಘವೇಂದ್ರ ಮಠದ ಹತ್ತಿರಿರುವ ಸಿಗ್ನಲ್ ಬಳಿ ಮತ್ತು ಸೌತ್ ಎಂಡ್ ಸರ್ಕಲ್‍ನ ಸಿಗ್ನಲ್ ಬಳಿ ನನ್ನಂತೆ ನಿಮ್ಮಲ್ಲಿ ಕೆಲವರಾದರೂ ಗಮನಿಸಿರಲೇಬೇಕು. ಎರಡೂ ಕಡೆ ಭಿಕ್ಷುಕರ ಹಾವಳಿ ವಿವಿಧ ರೀತಿಯಲ್ಲಿ.ಅವರದ್ದೊಂದು ದೊಡ್ಡ ಟೀಮ್ ಇದೆ! ಸೊಂಟದಲ್ಲಿ ಮಗುವನ್ನಿಟ್ಟುಕೊಂಡೊ, ಬೆನ್ನಿಗೆ ಕಟ್ಟಿಕೊಂಡೊ ಅಳು ಮುಖ ಮಾಡಿಕೊಂದು ಹರೆಯದ ಹುಡುಗಿಯೊಬ್ಬಳು ಭಿಕ್ಷೆ ಕೇಳುತ್ತಿದ್ದರೆ ಬೆಂಗಳೂರಿಗೆ ಹೊಸಬರಾದರೆ ನಿಮಗೆ ಅಯ್ಯೋ ಪಾಪ ಎನಿಸದಿರದು. ಖಂಡಿತ ೫೦ಪೈಸೆ ಕೊಡಬೇಕೆಂದುಕೊಂಡವರು ೧-೨ ರೋಪಾಯಿ ಕೊಟ್ಟಿಬಿಡುತ್ತೀರಿ!!! ಸ್ನಾನ ಮಾಡದ,ಎಣ್ಣೆ ಕಾಣದ ತಲೆಗೂದಲಿನ,ಕೊಳಕು ಬಟ್ಟೆಯ,ಕಣ್ಣಲ್ಲಿ ಪಿಸಿರಿನೊಂದಿಗೆ ನೀರು ತುಂಬಿಕೊಂಡ ಚಿಕ್ಕ ಮಕ್ಕಳನ್ನು ಕಂಡರ ನಿಮಗೆ ಅಯ್ಯೋ ಪಾಪ ಅನಿಸದೆಯೆ ಇರುತ್ತದೆಯೆ?...ಅವರೀಗೂ ಭಿಕ್ಷೆ ಹಾಕುತ್ತೀರಿ. "ಎಲ್ಲೊ ಸ್ವಲ್ಪ ನನ್ನಿಂದ ಸಹಾಯವಾಯ್ತು" ಅನ್ನೊ ಸಮಾಧಾನ ನಿಮಗೆ. ಆದರೆ ನನ್ನಂಥವರಿಗೆ...? ನನಗಂತೂ "ಆಹಾ! ಇವರ ಹಾಗೆ ಇಷ್ಟು ನೈಜವಾಗಿ ನಾನು ಭಿಕ್ಷುಣಿಯ ಪಾತ್ರ ಮಾಡಿದರೆ ಆಸ್ಕರ್ ಅವಾರ್ಡ್ ಖಂಡಿತ ನನಗೇ ಸಿಗುತ್ತೆ!!" ಅನ್ನುವಷ್ಟು ಅಚ್ಚರಿ. ನಿಜಕ್ಕು ನಾನೆಷ್ಟು ಅವರಿಂದ ಪ್ರೇರಣೆಗೊಂಡಿದ್ದೇನೆಂದರೆ 'ನನಗೇನಾದರು ಅಂಥದ್ದೊಂದು ಪಾತ್ರ ದೊರಕಿದರೆ' ಪ್ರಶಸ್ತಿ ನನಗೇ ಕಟ್ಟಿಟ್ಟದ್ದು ತಿಳಿದುಕೊಳ್ಳಿ!

ಈ ಎರಡೂ ಸಿಗ್ನಲ್ಲಿನಲ್ಲಿ ಏನಿಲ್ಲವೆಂದರೂ ಕನಿಷ್ಟ ೧೦-೧೨, ೧೦-೧೨ ಜನ ಭಿಕ್ಷುಕರಿದ್ದಾರೆ! ಅವರಿಗೊಬ್ಬ ಬಾಸ್! ನೀವು ಕರುಣೆಯಿಂದ ಯಾವುದಾದರು ಭಿಕ್ಷೆ ಬೇಡುವ ಒಂದು ಪುಟ್ಟ ಮಗುವಿನೊಂದಿಗ ಒಂದ್ನಾಲ್ಕು ಮಾತಾಡಿದಿರೋ ಅಲ್ಲಿ ಆ ಬಾಸ್ ಪ್ರತ್ಯಕ್ಷನಾಗಿ ಮಗುವನ್ನು ಬಯ್ಯುತ್ತಾ ಅದನ್ನು ಅಲ್ಲಿಂದ ಓಡಿಸುತ್ತಾನೆ. ಕನ್ನಡದ ಯಾವುದೊ ಒಂದು (ಕ್ಷಮಿಸಿ ಹೆಸರು ನೆನಪಿಲ್ಲ) ಸಿನೇಮಾದಲ್ಲಿ ಈ ಭಿಕ್ಷಾ ಬ್ಯೂಸಿನೆಸ್ ಬಗ್ಗೆ ವಿವರವಾಗಿ ತೋರಿಸಿದ್ದಾರೆ. ಈಗ ಈ ಭಿಕ್ಷುಕರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ ನೇರವಾಗಿ ಭಿಕ್ಷೆ ಬೇಡುವುದರ ಬದಲಾಗಿ ear buds ಮಾರುವುದು!! "ಅದರಲ್ಲೇನು ತಪ್ಪು? ಭಿಕ್ಷೆ ಬೇಡಿ ತಿನ್ನುವುದರ ಬದಲಾಗಿ ದುಡಿದು ತಿನ್ನಲು ಪ್ರಯತ್ನಿಸುತ್ತಿದ್ದಾರಲ್ಲ ಅದು ತಪ್ಪೆ?!" ಎಂದು ನೀವು ನನ್ನನ್ನೇ ಬೈಯಬಹುದು. ಸ್ವಲ್ಪ ಇರಿ, ಅವರು ನಮಗೆ ಆ ear buds ಮಾರುವುದು ದುಪ್ಪಟ್ಟು ರೇಟಿಗೆ!! ೫ ರೂಪಾಯಿಗೆ ಸಿಗುವ ಅದನ್ನು ಅವರು ನಮಗೆ ೧೦ ರೂಪಾಯಿಗೆ ಕೊಂಡುಕೊಳ್ಳಲು ಅಂಗಲಾಚುತ್ತಾರೆ. ನೀವು 'ಅಂಗಡಿಯಲ್ಲಿ ಜಾನ್ಸನ್ ಬಡ್‍ಗೆ ಹೆಚ್ಚು ದುಡ್ಡು ಕೊಡುತ್ತೇವೆ,ಅದಕ್ಕಿಂತ ಇದು ವಾಸಿಯಲ್ಲವೆ?' ಅಂದುಕೊಂಡು ಖುಷಿಯಿಂದಲೇ ಅವರ ಹತ್ತಿರ ಕೊಂಡುಕೊಳ್ಳುತ್ತೀರಿ. ಅಲ್ಲಿಗೆ ಮೊದಲು ನಿಮ್ಮ ಕರುಣೆಯ ಕೃಪೆಯಿಂದ ೧-೨ ರೂಪಾಯಿ ಗಿಟ್ಟಿಸುತ್ತಿದ್ದ ಆ ಭಿಕ್ಷುಕ ಈಗ ೫ ರೂಪಾಯಿ ಗಿಟ್ಟಿಸುತ್ತಾನೆ,ಜೊತೆಗೆ ನಿಮ್ಮ ಕರುಣೆಯ ಹಂಗಿಲ್ಲ! ... ನಿಮಗೆ ಇವರ ಈ ಮರ್ಮ ಅರ್ಥವಾದ ನಂತರ ನೀವು ಮೊದಲಿನಂತೆ ಭಿಕ್ಷುಕರನ್ನು ಕರುಣೆಯಿಂದ ನೋಡಲು ಸಾಧ್ಯವಾಗುವುದೇ? ನನಗಂತೂ ಇವರುಗಳಿಂದಾಗಿ ಇತ್ತೀಚಿಗೆ ನಿಜವಾದ ಅಸಹಾಯಕರ್ಯಾರೊ, ಢೋಂಗಿ ಯಾರೊ ತಿಳಿಯದಂತಾಗಿ ಗೊಂದಲವಾಗುತ್ತಿದೆ. ಸಹಾಯ ಮಾಡಲೊ ಬೇಡವೊ ಎಂಬ ಗೊಂದಲ. ಇದರಿಂದಾಗಿ ಮೆಲ್ಲನೆ ಮಾನವೀಯತೆ ಹಿಂದೆ ಸರಿದು ಅದರ ಜಾಗದಲ್ಲಿ ಅನುಮಾನ, ಅಸಡ್ಡೆ ಮನೆ ಮಾಡತೊಡಗಿದರೆ ನಿಜವಾದ ಅಸಹಾಯಕರ ಗತಿ ಏನು?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಜ, ಬೆಂಗಳೂರಿನಂತ ನಗರಗಳಲ್ಲಿ ಬಿಕ್ಷೆ ಅನ್ನುವುದು ದೊಡ್ಡ ಬಿಸಿನೆಸ್ಸು!. ಎಷ್ಟ್ರು ವ್ಯವಸ್ಥಿತವಾಗಿ ನೆಡೆಯುತ್ತದೆಂದರೆ ಅದರದ್ದೊಂದು ದೊಡ್ಡ ಜಾಲವೇ ಇದೆ.
ಎಲ್ಲ ಸರಿಯಾಗಿದ್ದೂ ಕಂಕುಳಲ್ಲಿ ಮಗುವನ್ನೆತ್ತಿಕೊಂಡು ಕರುಣೆ ಹುಟ್ಟಿಸಿ ದುಡ್ಡು ಪಡೆಯುವವರೊದ್ದೊಂದು ಪಡೆಯಿದ್ದರೆ, ಮಕ್ಕಳ ಕೈಕಾಲು ಮುರಿದು ಭಿಕ್ಷೆಗೆ ಕೂಡಿಸಿ ಆ ಹಣವನ್ನು ತೆಗೆದುಕೊಳ್ಳುವ ಇನ್ನೊಂದು ಪಡೆ ! ಕೆಲವೊಂದು ಪಾರ್ಕುಗಳಲ್ಲಂತೂ ಇವರ ಹಾವಳಿ ವಿಪರೀತ. ಒಬ್ಬರಾದಮೇಲೊಬ್ಬರು ಬರುತ್ತಲೆ ಇರುತ್ತಾರೆ. ರೋಸಿ ಹೋಗುತ್ತದೆ.

ಇಯರ್ ಬಡ್ಸ್ ಅಥವಾ ಇನ್ನೇನನ್ನೋ ಮಾರುವುದು ಒಂದು ರೀತಿ ಒಳ್ಳೆಯದೇ ಬಿಡಿ. ಅಂಗಡಿಯವರು ಕೂಡ ಇದೇ ರೀತಿ ಜಾಸ್ತಿ ದುಡ್ಡು ಇಟ್ಟು ದೋಚುತ್ತಾರೆ. ಇವರು ರಸ್ತೆಯಲ್ಲೇ ಒಂದೆರಡು ರೂಪಾಯಿ ಜಾಸ್ತಿ ಪಡೆದುಕೊಳ್ಳುತ್ತಾರಷ್ಟೆ.

**************************
http://vikasavada.blogspot.com/
**************************

ಒಂದೆರಡು ರೂಪಾಯಿ ಹೆಚ್ಚಿಗೆ ಕೊಟ್ಟರೆ ತಪ್ಪಿಲ್ಲ ಅನ್ನೋದು ನಿಜವಾದರೂ ಅದರಿಂದ ಸಹಾಯವಾಗೋದು ಆ ಭಿಕ್ಷುಕರಿಗಲ್ಲ ಅನ್ನೋದು ನೋವಿನ ವಿಷಯ ವಿಕಾಸ್. ಅವರ ಸ್ಥಿತಿ ಅದರಿಂದ ಎಳ್ಳಷ್ಟೂ ಬದಲಾಗೊಲ್ಲ.

ವಿಜಯ ಕರ್ನಾಟಕದಲ್ಲಿ ಒಮ್ಮೆ ಬರೆದಿದ್ರು ... ದಾರಿ ಬದಿಯಲ್ಲಿ ಮಾರೊ ಇಯರ್ ಬಡ್ಸ್ ಬಾರಿ ಹಾನಿಕಾರಕ.. ಅವುಗಳನ್ನು ಆಸ್ಪತ್ರೆಗಳ ತ್ಯಾಜ್ಯ ಗಳಲ್ಲಿ ಸಿಗುವ ಹತ್ತಿಗಳಿಂದ ಮಾಡುತ್ತಾರೆ ಅಂತ. ಆದುದರಿಂದ ಇಂತವುಗಳನ್ನು ತೆಗೆದು ಕೊಳ್ಳುವಾಗ ಜಾಗ್ರತೆ ವಹಿಸಿ. ಆಟಿಕೆ ಗಳೊ, ಇನ್ಯಾವುದೊ ತೊಂದರೆ ಕೊಡದ ವಸ್ತುಗಳಾದರೆ ಅಡ್ಡಿ ಇಲ್ಲ ಅನಿಸುತ್ತದೆ. ದುಡ್ಡು ಕೊಟ್ಟು ರೊಗಗಳನ್ನು ಕೊಂಡುಕೊಳ್ಳಬೇಡಿ.

ಈಗ ಭಿಕ್ಷೆ ಎಂಬುದು ಒಂದು ಬುಸಿನೆಸ್ಸ್ ಆಗಿದೆ, ಅನುಕಂಪದ ಅನುಕರಣೆಯಿಂದ ದುಡ್ಡನ್ನು ಸಂಗ್ರಹಿಸಿ, ಮನೆಗಳನ್ನು ಕಟ್ಟಿಕೊಂಡು, ಬಡ್ಡಿಗೆ ದಡ್ಡನ್ನು ಕೊಡುತ್ತಾರೆ. "ಭಿಕ್ಷುಕರು ಈಗ ಲಕ್ಷಾಧಿಪತಿಗಳು".

ನಿಜಕ್ಕು ಅಸಹಾಯಕರು ಸಹಾಯ ಕೇಳಿದಾಗ ಅನುಮಾನಿಸುವಂತಾಗುತ್ತದೆ.

ಭಿಕ್ಷೆ ಬಿಸಿನೆಸ್ ಆಗಿರುವುದು ಹೊಸ ವಿಚಾರವೇನಲ್ಲ :)

ಓದಿಲ್ಲದವರು, ಆರ್ಥರ್ ಕಾನನ್ ಡಾಯಲ್ ನ "The Man with the Twisted Lip" ಎಂಬ ಕಥೆಯನ್ನು ಖಂಡಿತ ಓದಿ!

ವಿಕಿಪಿಡಿಯಾದ ಈ ಕೆಳಗಿನ ಪುಟದಲ್ಲಿ, ಕಥೆಯ ಸಾರಾಂಶವಿದೆ. ಕೊನೆ ತಿಳಿಯಲು ಇಷ್ಟವಿಲ್ಲದವರು, ಈ ಕೊಂಡಿಯನ್ನು ಚಿಟಕಿಸಬೇಡಿ! ಶೆರ್ಲಾಕ್ ಹೋಮ್ಸ್ ಪ್ರತಿ ಸಮಸ್ಯೆಯನ್ನು ಬಿಡಿಸುವ ರೀತಿಯನ್ನು ಓದುವುದೇ ಒಂದು ಸೊಗಸು!

http://en.wikipedia.org/wiki/The_Man_with_the_Twisted_Lip

ಹಿಂದೆ ವಾಸುದೇವರಾವ್ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದದ್ದು ಮಯೂರದಲ್ಲಿ ಪ್ರಕಟವಾಗಿತ್ತೋ ಏನೋ ಎಂಬ ಮಸುಕು ನೆನಪು.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

ಜಯಲಕ್ಷ್ಮಿಯವರೆ,
ಹೀಗೊಂದು ಗಾದೆಯಿದೆ,
Give a man a fish, he eats for one day,
Teach him to fish, and he eats for a lifetime.

ಸಹಾಯ ಮಾಡುವ ಇಚ್ಛೆಯಿದ್ದರೆ, ನಿಮಗೆ ತಿಳಿದಿರುವ ಬಡಕುಟುಂಬದ ಮಗುವನ್ನು ಓದಿಸಿ ಅಥವ ಒಂದು ತಿಂಗಳ ಶಾಲಾಶುಲ್ಕ ಕಟ್ಟಿ. ಕೂತು ತಿನ್ನುವ ಸೋಮಾರಿಗಳಿಗೆ ನಿಮ್ಮ ಅಮೂಲ್ಯ ಹಣ, ಸಮಯ ಪೋಲು ಮಾಡಬೇಡಿ. ಅಕಸ್ಮಾತ್ ಮಾಡಿದರೆ, ನಂತರ ಅದು ಸದ್ವಿನಿಯೋಗವಾಯಿತೇ ಎಂಬ ಚಿಂತೆ ಮಾಡಬೇಡಿ. ಇದರಿಂದ ನಿಮ್ಮ ಹಣ, ಸಮಯದ ಜೊತೆಗೆ ಮನಃಶಾಂತಿಯ ಪೋಲು :-)

ಕಲ್ಪನ, ನಿಮ್ಮ ಸಲಹೆ ಅಮೂಲ್ಯವಾದುದು ಮತ್ತು ವಾಸ್ತವ. ಅದನ್ನೀಗಾಗಲೆ ನನ್ನ ಕೈಲಾದ ಮಟ್ಟಿಗೆ ಮಾಡುತ್ತಲಿದ್ದೇನೆ. ಬೀದಿಯಲ್ಲಿ ನಿಂತು ಭಿಕ್ಷೆ ಬೇಡುವವರ ಕುರಿತು, ಅವರಿಂದಾಗಿ ಮಾನವೀಯತೆಯ ಜಾಗದಲ್ಲಿ ಅನುಮಾನ, ಅಸಡ್ಡೆ ಮನೆ ಮಾಡುತ್ತ ಹೋದಲ್ಲಿ ಒದಗುವ ಅಪಾಯದ ಕುರಿತು ನಾನು ಮಾತಾಡುತ್ತಿದ್ದೇನೆ. ಸರಕಾರ ಇವರುಗಳಿಗಾಗಿಯೆ ವಸತಿ,ಶಿಕ್ಷಣದ, ಉದ್ಯೋಗದ ವ್ಯವಸ್ಥೆ ಮಾಡಿದೆ ಎಂದು ಕೇಳಿಪಟ್ಟಿದ್ದೇನೆ. ಆದರೆ ಅದಕ್ಕೆ ಒಗ್ಗದ ಜನ ಬೀದಿಗಿಳಿದು ಭಿಕ್ಷೆ ಬೇಡುತ್ತಾರೆ,ಅಂಥವರಿಗಾಗೇ ಕಾದು ಕುಳಿತ ಭಿಕ್ಷಾ ಬಾಸ್‍ಗಳು ಅವರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ! ಇಂಥವರಿಂದಾಗಿ ನಾನಾ ಕಾರಣಗಳಿಂದ ಬೀದಿ ಪಾಲಾದ ಎಷ್ಟೋ ಅಸಹಾಯಕ ಜೀವಗಳು ಸರಕಾರ ಮಾಡಿದ ಅನೂಕಲತೆಯ ಬಗ್ಗೆ ಗೊತ್ತಿರದೆ,ಮೈಗಳ್ಳರ ಲೀಸ್ಟಿನಲ್ಲಿ ಸೇರಿಹೋಗುತ್ತಾರಲ್ಲಾ ಅವರೆಡೆಗಿನ ಮಾನವೀಯತೆ ಕುರಿತು ನಾನು ಮಾತಾಡುತ್ತಿರೋದು. ನನ್ನಂಥ ಮಧ್ಯಮ ವರ್ಗದ ಗೃಹಿಣಿಯರು ಮನಸಿದ್ದಲ್ಲಿ ಒಂದು ಲಿಮಿಟ್ಟಿನವರೆಗೆ ಮಾತ್ರ ಯಾರಿಗಾದರು ಸಹಾಯ ಮಾಡಬಲ್ಲೆವು. ಇದೂ ಕೂಡಾ ವಾಸ್ತವ.
ಜಯಲಕ್ಷ್ಮೀ.ಪಾಟೀಲ್.

ಇವುಗಳ ಹಿಂದೆ ಮತ್ತೊಂದು ಕರ್ಮಖಾಂಡವಿದೆ. ಬಾಡಿಗೆಗೆ ಮಗುವನ್ನು ತಂದು ಬಿಕ್ಷೆ ಬೇಡುವುದು
ನಾನು ಈಗಾಗಲೆ ಬರೆದಿರುವ ಈ ಕತೆ ಅದನ್ನೇ ಹೇಳುತ್ತದೆ ಈ ಕೊಂಡಿಯನ್ನು ನೋಡಿ

http://www.sampada.net/blog/roopablrao/24/06/2008/9450

http://thereda-mana.blogspot.com/

ರೂಪ

ನೀವು ಬರೆದ ಕತೆ ಓದಿದೆ ರೂಪಾ. ಚಿಕ್ಕದಾಗಿ ಚೊಕ್ಕವಾಗಿದೆ. ನಿಜ ಮಗುವನ್ನು ಬಾಡಿಗೆಗೆ ತೆಗೆದುಕೊಂಡು ಭಿಕ್ಷೆ ಬೇಡುವುದು ನಾನೂ ಕೇಳಿ ತಿಳಿದಿದ್ದೇನೆ.

ಜಯಲಕ್ಷ್ಮೀ.ಪಾಟೀಲ್.