ಇತ್ತೀಚೆಗೆ ಸೇರಿಸಿದ ಪುಟಗಳು

llಮಿಥ್ಯ ಉಡುಗೆll

ಆಸೆಗಳ ಆಲೋಚನೆ,
ಅನುಮತಿಯ ಕೇಳದಂತೆ ಮೂಡುವುದು
ತೆರೆದ ಕಣ್ಣಂಚಲಿ,
ಕಂಬನಿಯಾಗಿ ಹಾಗೆ ಮರೆಯಾಗುವುದು

ನೆರಳು ಕೂಡ, ಒಂದೇ ಸಮನೆ
ಬಿಡದೆ ಕಾಡುವುದು ಕರುಣೆ ಇರದೆ!
ಕನಸು ಕೂಡ, ಇರದು ಸುಮ್ಮನೆ
ನಿದಿರೆಯಲ್ಲೂ ಕೊಡುವುದು ನೋವ ಬಿಡದೆ!

ಹೇಳಲು ಆಗದು,
ಈ ಭಾವಗಳನ್ನು ಬರಿಯ ಮಾತಿನಲ್ಲಿ
ತಿಳಿಯಲು ಆಗದೆ,
ನನ್ನ ನಾನೇ ಹುಡುಕುತ್ತಿರುವೆನಿಲ್ಲಿ

ಅಳಿದುಳಿದ ನಂಬಿಕೆಗಳ ಹಿಡಿದು
ಈಜುತ್ತಿರುವೆ ನಾನು ದಡದ ಕಡೆಗೆ!
ಮನಸ್ಸಿನಾಳದ ಕೊಳವ ಕಡೆದು
ಕಳಚಬೇಕಿದೆ ಅಂತರಾತ್ಮನ ಮಿಥ್ಯ ಉಡುಗೆ!!

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಚೆಲುವ ನಾಡು

ಏನು ಚಂದ ನೋಡು ನಮ್ಮ ಕನ್ನಡನಾಡು
ಭೂಮಿತಾಯಿ ಹಸಿರನುಟ್ಟು ಮೆರೆಯುವಳ್ ನೋಡು|

ಇಲ್ಲಿದೆ ಶ್ರೀಗಂಧದ ಹರಿದ್ವರ್ಣದ ಕಾಡು
ಮನತಣಿಸುವ ಜಲಪಾತಗಳ ಸುಂದರ ಬೀಡು|
ಶಿಲ್ಪಕಲೆಯ ತವರೂರಿದು ಬೇಲೂರು ಹಳೇಬೀಡು
ಸಹ್ಯಾದ್ರಿಯ ಶಿಖರಗಳಲಿ ಮಿಂದೇಳುವ ಮಲೆನಾಡು||

ಗತವೈಭವ ಸಾರುತಿಹುದು ಹಂಪೆಯಾ ಪ್ರತಿ ಶಿಲೆಯು
ಚಾಲುಕ್ಯರ ಹೆಮ್ಮೆಹೊತ್ತು ಬಾದಾಮಿಯ ಪ್ರತಿಗುಹೆಯು|
ಕದಂಬರಾ ಹೆಸರು ಮೆರೆಸಿ ನಮ್ಮ ಈ ಬನವಾಸಿಯು
ತಂದಿಹುದು ಕರುನಾಡಿಗೆ ವಿಶ್ವದಲ್ಲೇ ಕೀರ್ತಿಯು||

ಸಂಸ್ಕೃತಿಗಳ ತವರೂರು ನಮ್ಮ ಈ ಮೈಸೂರು
ಸ್ವಾತಂತ್ರ್ಯದ ಹೋರಾಟದ ಕಿಚ್ಚಚ್ಚಿದ ಕಿತ್ತೂರು|
ಕೊಡಚಾದ್ರಿಯ ತುದಿಯಲ್ಲಿ ಮೂಕಾಂಬಿಕೆ ಕೊಲ್ಲೂರು
ಸಾರುತಿಹುದು ಎಲ್ಲದರಲೂ ಮೇಲು ನಮ್ಮೂರು||

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹಸಿರು ಯುಗಾದಿ

ಬಂತು ನೋಡು ಯುಗಾದಿ ಹೊತ್ತು ಹೊಸ ಸಂಭ್ರಮ
ತಂತು ನೋಡು ಎಲ್ಲೆಲ್ಲೂ ಬದಲಾವಣೆಯ ಸಮಾಗಮ
ಎಲ್ಲದಕ್ಕೂ ಅಂತ್ಯವಿದೇ ಎಂದು ತೋರುವ ಪ್ರಕೃತಿಯ ಆಟ
ಸಾರುತಿಹುದು ಅಂತ್ಯವೇ ಹೊಸ ಆರಂಭದ ಮುನ್ಸೂಚನೆಯ ಪಾಠ

ಬಾಗಿಲಿಗೆ ಕಟ್ಟುತಾ ನಾವು ಹಸಿರೆಲೆಗಳ ತೋರಣ
ಸಂತಸದಿ ಆರಂಭಿಸೋಣ ನವ ಜೀವನದ ಚಾರಣ
ಸವಿಯುತ್ತಾ ನಾವು ಬೇವು ಬೆಲ್ಲದ ಮಿಶ್ರಣ
ಸುಖದುಃಖ ಸಮನಾಗಿ ಸ್ವೀಕರಿಸುತ್ತಾ ಬಾಳೋಣ

ಮರಗಿಡದಲಿ ಚಿಗುರೊಡೆದಿದೆ ಹೊಸ ಕುಡಿಗಳ ಜೀವನ
ಮನಮನದಲಿ ಚಿಮ್ಮಿಸಿದೆ ಹೊಸ ಆಸೆಯ ಚೇತನ
ಪ್ರಕೃತಿಯನು ಉಳಿಸುವತ್ತ ನಮ್ಮ ಚಿತ್ತ ಹರಿಸುವ
ಹೊಸ ವರ್ಷದಿ ಹೊಸ ಗಿಡಗಳ ನೆಟ್ಟು ನಾವು ಬೆಳೆಸುವ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ತಾಯಿಗಿಂತ ಮಿಗಿಲುಂಟೇ

ಒಡಲಲಿ ನನ್ನ ಹೊತ್ತು ಜೀವ ಕೊಟ್ಟಾಕೆ
ನಿನ್ನ ಗರ್ಭದಾಸರೆಗಿಂತ ಆಶ್ರಯವುಂಟೇ|

ನೋವಲಿ ನನ್ನ ಹೆತ್ತು ಭೂಮಿಗೆ ತಂದಾಕೆ
ಜಗದಲಿ ನಿನ್ನ ತ್ಯಾಗಕ್ಕೆ ಸಮವುಂಟೇ|

ಮಡಿಲಲಿ ನನ್ನಿರಿಸಿ ಮೊಲೆಯುಣಿಸಿದಾಕೆ
ಆ ಅಮೃತದ ಋಣವ ತೀರಿಸಲುಂಟೇ|

ತೋಳಲಿ ಬಿಗಿದಪ್ಪಿ ನನ್ನ ಮುದ್ದಿಸಿದಾಕೆ
ನಿನ್ನ ಮಮತೆಯ ಕಡಲಿಗೆ ಸರಿಸಾಟಿಯುಂಟೇ|

ನನ್ನಾ ಕೈ ಹಿಡಿದು ನಡೆಯಾ ಕಲಿಸಿದಾಕೆ
ನಿನ್ನ ಅಕ್ಕರೆಯ ಪಾಠಕ್ಕೆ ಬೆಲೆಕಟ್ಟಲುಂಟೇ

ನೋವಲ್ಲಿ ನಾನು ನರಳಿದಾಗ ಕಣ್ಣೀರು ಸುರಿಸಿದಾಕೆ
ನಿನ್ನ ಪ್ರೀತಿಯ ಆಗಸಕೆ ಕೊನೆಯುಂಟೇ|

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬಾರೆನೆಂದರು ಬಿಡದವರು

ಬಾರೆನೆಂದರು ಬಿಡದವರು ಅಂದು
ಬರುವೆನೆಂದರು ಬಿಟ್ಟುರು ಇಂದು

ಬಾಳಲ್ಲಿ ಶಕ್ತಿಯ ತುಂಬಿದರು ಅಂದು
ಬದುಕನ್ನೆ ಸಂಶಯ ಪಟ್ಟರು ಇಂದು
ಒಂದೊಂದು ಮಾತಿಗೂ ನಕ್ಕರು ಅಂದು
ಒಂದೇ ಮಾತಿಗೆ ಉರಿದರು ಇಂದು

ಹೂವಿಗೆ ಪರಿಮಳ ಸ್ವಂತವಲ್ಲ
ಬಾಳಿಗೆ ಪರಿವಾರ ಸ್ವಂತವಲ್ಲ
ಪರಿವಾರವಿಲ್ಲದ ಬಾಳು
ಪರಿಮಳವಿಲ್ಲದ ಹೂ
ಇದ್ದರೇನು ಹೋದರೇನು
✍ಪುನೀತ್ ಕುಮಾರ್ ಕೆರೆಹಳ್ಳಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

llನಾನೇ ಹೊರುವೆll

ನಿನ್ನಿಂದ ಭೂಮಿಗೆ ಬಂದೆ ನಾನಂದು
ನಿನ್ನ ಋಣವ ತೀರಿಸಲು ಆಗದು ಎಂದೆಂದು

ನವಮಾಸ ನೀ ನನ್ನ ಹೊತ್ತು ನಡೆದೆ
ಒಳಗಿದ್ದು ನಾ ನಿನಗೊದ್ದು ಇನ್ನಷ್ಟು ನೋವ ನೀಡಿದೆ

ನೋವಲ್ಲೂ ತಾಯಾಗೊ ನಲಿವಿನಲ್ಲಿ ನೀನಿದ್ದೆ
ಏನೂ ತಿಳಿಯದೆ ಅಳು ಅಳುತ್ತಾ ನಾ ಹೊರಗೆ ಬಿದ್ದೆ

ನನ್ನ ಅಳುವಿನಲ್ಲೂ ನೀನಾದಿನ ನಕ್ಕಿರುವೆಯಂತೆ
ನಿನ್ನ ಅಳುವನ್ನು ಅಡಗಿಸಿ ನನ್ನ ನಗುವಿನಲ್ಲಿ ನೀ ಮರೆತೆ ಚಿಂತೆ

ಅದೆಷ್ಟೋ ಸಲ ನೀನುಣದೆ ಉಪವಾಸವಿದ್ದೆ
ನಾ ತುಂಬಿದ ಹೊಟ್ಟೆಯಲ್ಲಿ ಇದನ್ನರಿಯದೆ ಮಲಗಿದ್ದೆ

ಹಗಲೆಲ್ಲ ನೀ ದುಡಿದು ನನ್ನ ಓದಿಸಿದೆ
ಎಲ್ಲ ತಿಳಿದವನಂತೆ ಏನೇನೋ ಹೇಳುತ್ತಾ ನಾ ನಿನ್ನ ನಿಂದಿಸಿದೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages