ಓಷೋ ರಜನೀಷ್ - ಒಂದು ಮರುಚಿಂತನೆ (ನನ್ನ ಹೊಸ ಪುಸ್ತಕದ ಮುನ್ನುಡಿ)

0

ಪ್ರಾಮಾಣಿಕ ಸುಳ್ಳುಗಳು, ಪ್ರಮಾಣವಿರದ ಸತ್ಯಗಳು

 

ಬುದ್ಧಿಜೀವಿಗಳು “ಎಲ್ಲ ಕಾಲದ ಜನರೂ ಇದು ಒಳಿತು, ಇದು ಕೆಡುಕು ಎಂಬ ತಿಳುವಳಿಕೆ ಹೊಂದಿದ್ದರು ಹಾಗು ಈ ತಿಳುವಳಿಕೆಯನ್ನೇ ಅವರು ದೃಢವಾಗಿ ನಂಬಿದ್ದರು” ಎಂದು ತೀರ್ಮಾನಿಸುತ್ತಾರೆ. ಆದರೆ ಅವರಿಗಿರುವ ಒಂದೇ ಒಂದು ಪೂರ್ವಗ್ರಹವೆಂದರೆ ತಾವು ಎಲ್ಲ ಕಾಲದವರಿಗಿಂತ ಹೆಚ್ಚು ತಿಳುವಳಿಕೆ ಹೊಂದಿದವರು ಎಂಬುದು (ಡೇ ಬ್ರೇಕ್ ೨)

-           ಫ್ರೆಡರಿಕ್ ನೀಷೆ

ಫ್ರೆಡರಿಕ್ ನೀಷೆ ಸತ್ತು ೫೦-೬೦ ವರ್ಷಗಳಾದ ನಂತರವೂ ಜಗತ್ತಿನ ಎಲ್ಲ ಬೌದ್ಧಿಕ ವಲಯಗಳೂ ಅವನ ಚಿಂತನೆಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿಸಿದ್ದಕ್ಕೆ ಮುಖ್ಯವಾಗಿ ಎರಡು ಕಾರಣಗಳಿದ್ದವು. ಒಂದು: ಅವನು ಪೂರ್ವದೇಶದ ಬುದ್ಧನನ್ನೂ ಹಾಗು ಪಶ್ಚಿಮದ ಯೇಸುಕ್ರಿಸ್ತನನ್ನೂ ಜೀವವಿರೋಧಿಗಳೆಂದು ತೀಕ್ಷ್ಣವಾಗಿ ಟೀಕೆ ಮಾಡಿದ್ದು, ಅಲ್ಲದೆ ಸಾಕ್ರಟೀಸ್, ಪ್ಲೇಟೋ ಮೊದಲಾದ ತತ್ವಜ್ಞಾನಿಗಳನ್ನೂ ತೀವ್ರವಾದ ವಿಮರ್ಶೆಗೆ ಒಳಪಡಿಸಿದ್ದ. ಎರಡನೆಯದು: ಅಡಾಲ್ಫ್ ಹಿಟ್ಲರ್‌ನಂತಹ ಒಬ್ಬ ರಾಕ್ಷಸನು ತನ್ನೆಲ್ಲ ಪಾಪ ಕೃತ್ಯಗಳಿಗೆ ಫ್ರೆಡರಿಕ್ ನೀಷೆಯ ತಾತ್ವಿಕ ಬೆಂಬಲವಿದೆ ಎಂದು ಸಮರ್ಥಿಸಿಕೊಂಡದ್ದು. ಇದು ಸಾಲದೆಂದು ಹಿಟ್ಲರ್ ತನ್ನ ಸಮಕಾಲೀನ ಜರ್ಮನ್ ಅಸ್ತಿತ್ವವಾದಿ ಚಿಂತಕನಾಗಿದ್ದ ಮಾರ್ಟಿನ್ ಹೈಡೆಗರ್‌ನನ್ನೂ ತನ್ನ ಸರ್ವಾಧಿಕಾರತ್ವವನ್ನು ಸಮರ್ಥಿಸಿಕೊಳಲು ಬಳಸಿಕೊಂಡಿದ್ದ. ಹಾಗಾಗಿ ನೀಷೆಯ ಪ್ರತಿಭೆ, ಚಿಂತನೆಗಳನ್ನು ಎಲ್ಲರೂ ಅನುಮಾನದಿಂದ ನೋಡತೊಡಗಿದರು. ಮುಂದೆ ನೀಷೆಯ ಚಿಂತನೆಗಳನ್ನು ಆಮೂಲಾಗ್ರವಾಗಿ ಮರುವಿವೇಚನೆ ಮಾಡಿದ ವಾಲ್ಟರ್ ಕಾಫ್‌ಮನ್, ಆರ್.ಜೆ. ಹಾಲಿಂಗ್‌ಡೇಲ್ ಮೊದಲಾದವರು ನೀಷೆಯ ಹುಚ್ಚುತನಕ್ಕೂ ಅಡಾಲ್ಫ್ ಹಿಟ್ಲರನ ತಲೆಕೆಟ್ಟ ವರ್ತನೆಗಳಿಗೂ ಅರ್ಥಾರ್ಥ ಸಂಬಂಧವಿಲ್ಲ ಎಂದು ಎಷ್ಟೋ ವಿಧದಲ್ಲಿ ಮನವರಿಕೆ ಮಾಡಿಸಿದ ಮೇಲೆ ಹಾಗು ಡೆರಿಡಾ, ಸಾರ್ತ್ರೆ, ಫ್ಯೂಕೋ, ಎಡ್ವರ್ಡ್ ಸೈದ್ ಮೊದಲಾದ ತತ್ವಜ್ಞಾನಿಗಳು ತಮ್ಮ ಚಿಂತನೆಗಳು ನೀಷೆಯ ಕೆಲವು ಒಳನೋಟಗಳಿಂದ ಪ್ರಭಾವಿತವಾಗಿವೆ ಎಂದು ವಿವರಿಸಿದ ಮೇಲೆ ನೀಷೆಯ ಮಹತ್ವದ ಕಡೆಗೆ ನಾವು ಕಣ್ತೆರೆದು ನೋಡಿದ್ದು.

ಕಳೆದ ಶತಮಾನದ ಉತ್ತರಾರ್ಧದಿಂದ ಹಿಡಿದು ಇಂದಿನ ತನಕವೂ ಓಷೋ ರಜನೀಶರ ಚಿಂತನೆಗಳಿಗೆ ಇದೇ ಗತಿ ಒದಗಿದೆ. ಕೊನೆಕೊನೆಗೆ ಶ್ರೀರಜನೀಶರು ಯಾವುದೇ ಧಾರ್ಮಿಕ ಕುರುಹನ್ನು ಹೊಂದಿರದ ಜೆನ್ ಪಂಥವೊಂದನ್ನು ಬಿಟ್ಟು ಜಗತ್ತಿನ ಉಳಿದೆಲ್ಲ ಅನುಭಾವೀ ಚಿಂತನೆಗಳೂ ಲೋಕದ ಜನರ ಹಾದಿ ತಪ್ಪಿಸಿತೆಂದು ಹೇಳಲಾರಂಭಿಸಿದರು. ಮಾತ್ರವಲ್ಲ ಗಾಂಧಿಯಂತಹ ಆಧುನಿಕ ಸಂತರುಗಳನ್ನೂ ಉಗ್ರವಾಗಿ ಟೀಕಿಸತೊಡಗಿದರು. ಅಲ್ಲದೆ, ರಜನೀಶರ ಬಹುತೇಕ ಹಿಂಬಾಲಕರು ಅಮೆರಿಕಾದ ಹಿಪ್ಪಿಗಳು, ಸ್ವೇಚ್ಛಾಚಾರಿ ಶ್ರೀಮಂತರು, ಡ್ರಗ್ ಮಾಫಿಯಾದವರು, ಧ್ಯಾನ ಅಧ್ಯಾತ್ಮಗಳನ್ನು ಹಣಕ್ಕೆ ಮಾರಿಕೊಳ್ಳುವ ವ್ಯಾಪಾರಿಗಳು ಇಂಥವರೇ ಆಗಿದ್ದರು. ಈಗಲೂ ಬಹುತೇಕ ಈ ಥರದವರೇ ಅವರ ಉತ್ತರಾಧಿಕಾರಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂಥವರುಗಳಿಂದ ರಜನೀಶರ ವಿಚಾರಗಳು ಸೂತಕ ಗೊಂಡವು, ಅಪವ್ಯಾಖ್ಯಾನಕ್ಕೆ ಒಳಗಾದವು. ಅವರ ಬಳಿ ಯೋಗ್ಯರೂ, ಪ್ರತಿಭಾವಂತರೂ ಆಗಿದ್ದ ಸನ್ಯಾಸಿಗಳು ಇಲ್ಲದೆ ಇರಲಿಲ್ಲ. ಆದರೆ ಅವರು ಅಂತರ್ಮುಖಿಗಳಾಗಿ ತಮ್ಮ ಗುರು ಕಲಿಸಿದ ಆಧ್ಯಾತ್ಮಿಕ ಸಾಧನೆಯಲ್ಲಿ ಶ್ರದ್ಧೆಯಿಂದ ತೊಡಗಿಕೊಂಡು ಸದ್ದಿಲ್ಲದಂತಿದ್ದರು. ಶೀಲಾ, ಶಿವಾ ಮೊದಲಾದ ಕಳಂಕಿತ ಸನ್ಯಾಸಿಗಳು ಮಾಧ್ಯಮಗಳಲ್ಲಿ ತಾವು ಶ್ರೀರಜನೀಶರ ನಿಜವಾದ ಪ್ರತಿನಿಧಿಗಳು ಎಂಬಂತೆ ಬಿಂಬಿಸಿಕೊಂಡರು. ಇಂಥವರಿಂದ ತನಗೆ ಮುಂದೆ ಅಪಾಯ, ಕಳಂಕಗಳು ತಗುಲಲಿವೆ ಎಂಬ ಮುಂದಾಲೋಚನೆ ರಜನೀಶರಿಗೆ ಇದ್ದಿತಾದರೂ ಇವರನ್ನೆಲ್ಲ ದೂರವಿಡುವ ಜಾಣತನವನ್ನು ಅವರು ತೋರಿಸಲಿಲ್ಲ. ಯೋಗ್ಯನಾದ ಗುರು ತನ್ನನ್ನು ಆಶ್ರಯಿಸಿ ಬರುವವರನ್ನು ಅವರು ಅಯೋಗ್ಯರೇ ಆಗಿದ್ದರೂ ಹಾಗೆ ದೂರ ಅಟ್ಟುವುದಿಲ್ಲ. ಅಲ್ಲದೆ “ಈ ಕ್ಷಣವೇ ಸರ್ವಸ್ವವೆಂದು ಭಾವಿಸಿ ಪ್ರತಿಕ್ಷಣವೂ ಜೀವಿಸಬೇಕು” ಎಂಬ ಜೆನ್ ಬೌದ್ಧ ಪಂಥದ ಮೂಲ ಚಿಂತನೆಯನ್ನು ಸಾಧಕರಿಗೆ ಉಪದೇಶಿಸಿದವನು ಇಂಥವರಿಂದ ಮುಂದೆ ಅಪಾಯವಾಗುತ್ತದೆ ಎಂದು ಹೆದರುವುದು ವಿರೋಧಾಭಾಸವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರು ’ನಾಳೆ’ಗೆಂದು ಯಾವ ಕನಸುಗಳನ್ನೂ ಇಟ್ಟುಕೊಂಡಿದ್ದವರಲ್ಲ. ರೋಲ್ಸ್‌ರಾಯ್ಸ್ ಗುರು, ಶ್ರೀಮಂತರ ಗುರು ಎನಿಸಿಕೊಂಡಿದ್ದ ರಜನೀಶರ ಹೆಸರಿನಲ್ಲಿ ರೋಲ್ಸ್‌ರಾಯ್ಸ್ ಇರಲಿ ಒಂದು ಬ್ಯಾಂಕ್ ಖಾತೆಯೂ ಇರಲಿಲ್ಲ ಎಂದು ತುಂಬ ಜನರಿಗೆ ಗೊತ್ತಿಲ್ಲ. ಅವರ ಬಳಿ ಇತ್ತೆಂದು ಹೇಳಲಾಗುವ ೧೦೦ ರೋಲ್ಸ್ ರಾಯ್ಸ್ ಕಾರುಗಳು ವಾಸ್ತವವಾಗಿ ಅಮೆರಿಕಾದ ಆಶ್ರಮದ ಸ್ವತ್ತಾಗಿದ್ದು ವ್ಯಾಪಾರೋದ್ದೇಶಕ್ಕಾಗಿ ಅವರ ಕೆಲವು ಶ್ರೀಮಂತ ಸನ್ಯಾಸಿಗಳು ಅವುಗಳನ್ನು ಖರೀದಿಸಿದ್ದರು. ಮತ್ತು ಜಗತ್ತಿನ ಯಾವುದೇ ಓಷೋ ಆಶ್ರಮದೊಂದಿಗೆ ಶ್ರೀರಜನೀಶರಿಗೆ ಅಧಿಕೃತವಾಗಿ ಅಥವ ಅನಧಿಕೃತವಾಗಿ ಯಾವುದೇ ಸಂಬಂಧ ಇರಲಿಲ್ಲ, ಅವುಗಳ ಮೇಲೆ ಹಿಡಿತ ಸಾಧಿಸಲು ಅವರು ಎಂದೂ ಬಯಸಲಿಲ್ಲ. “ನಾನೊಬ್ಬ ನಿರಾಶ್ರಿತ. ನನ್ನ ಸನ್ಯಾಸಿಗಳು ಇಂಥದೊಂದು ಆಶ್ರಮವನ್ನು ನಿರ್ಮಿಸಿ ನನ್ನನ್ನು ಆಹ್ವಾನಿಸಿದ್ದಾರೆ. ನಾನಿಲ್ಲಿ ಕೇವಲ ಒಬ್ಬ ಅತಿಥಿಯಂತೆ ಇದ್ದೇನೆ. ಅವರು ಇಲ್ಲಿಂದ ಹೊರ ನಡೆಯಬೇಕೆಂದು ಹೇಳಿದರೆ, ಆ ಗಳಿಗೆಯೇ ಮರುಮಾತಿಲ್ಲದೆ ಬರಿಗೈಯಲ್ಲಿ ಇಲ್ಲಿಂದ ನಡೆದುಬಿಡುತ್ತೇನೆ” ಎಂದು ಆಗಾಗ ಹೇಳುತ್ತಿದ್ದರು. ಈ ಮಾತುಗಳು ಪತ್ರಿಕಾ ಸಂದರ್ಶನಗಳಲ್ಲೂ ದಾಖಲಾಗಿವೆ.

ಒಬ್ಬ ಆಧ್ಯಾತ್ಮಿಕ ಗುರುವಿನ ಚಾರಿತ್ರ್ಯವನ್ನು ಅವನ ಶಿಷ್ಯರ ಮುಖವನ್ನು ನೋಡಿ ತೀರ್ಮಾನಿಸುವುದು ಉಚಿತವೋ ಅಲ್ಲವೋ ಎಂಬುದು ಇನ್ನೂ ಬಗೆಹರಿಯದ ಒಂದು ಪ್ರಶ್ನೆಯಾಗಿದೆ. ಆದರೆ ಅಂಥದೊಂದು ಪರಿಪಾಟವನ್ನು ನಾವು ಮೊದಲಿನಿಂದಲೂ ಬೆಳೆಸಿಕೊಂಡು ಬಂದಿದ್ದೇವೆ. ವಿವೇಕಾನಂದ, ಅಭೇದಾನಂದ, ರೊಮೇರೊಲೋ ಮೊದಲಾವರ ಮೂಲಕ ನಾವು ಶ್ರೀರಾಮಕೃಷ್ಣರನ್ನು ಪರಿಭಾವಿಸುತ್ತೇವೆ. ಇವರುಗಳು ಪಶ್ಚಿಮ ದೇಶಗಳಲ್ಲಿ ಶ್ರೀರಾಮಕೃಷ್ಣರ ಉಪದೇಶಗಳನ್ನು ಪ್ರಚಾರ ಮಾಡದೇ ಹೋಗಿದ್ದರೆ, ರಾಮಕೃಷ್ಣರ ಒಂದೊಂದು ವಿಲಕ್ಷಣ ವರ್ತನೆಯನ್ನೂ ಉಪನಿಷತ್ತು, ಯೋಗಸೂತ್ರದ ಗ್ರಂಥಗಳನ್ನು ಉಲ್ಲೇಖಿಸಿ ಪ್ರಮಾಣೀಕರಿಸದೇ ಹೋಗಿದ್ದರೆ ಅವರ ಹೆಸರು ಕಲ್ಕತ್ತಾದ ದಕ್ಷಿಣೇಶ್ವರದಿಂದಾಚೆ ಪ್ರಚಾರ ಪಡೆಯುತ್ತಿರಲಿಲ್ಲವೇನೋ, ಹಾಗೆಯೇ ಜೆ.ಕೃಷ್ಣಮೂರ್ತಿಯ ಖ್ಯಾತಿಯ ಹಿಂದೆ ಚಿಂತಕ ಅಲ್ಡಸ್ ಹಕ್ಸ್‌ಲೇ, ಭೌತವಿಜ್ಞಾನಿ ಡೇವಿಡ್ ಬೋಹಮ್, ಅನಿಬೆಸೆಂಟ್ (ವಯಸ್ಸಿನಲ್ಲಿ ಕೃಷ್ಣಮೂರ್ತಿಗಿಂತ ಹಿರಿಯಳಾದರೂ ಅವರನ್ನು ತನ್ನ ಗುರುವೆಂದೇ ಗೌರವಿಸುತ್ತಿದ್ದಳು) ಮೊದಲಾದವರ ಮೆಚ್ಚುಗೆ ಹಾಗು ಬರವಣಿಗೆಗಳ ಬೆಂಬಲವಿತ್ತು. ಇನ್ನು ಕನ್ನಡಿಗರ ಮಟ್ಟಿಗೆ ಶ್ರೀಅರವಿಂದರ ವಿಚಾರಗಳನ್ನು ನಾವು ಗೌರವದಿಂದ ಸ್ವೀಕರಿಸಲು ಕುವೆಂಪು, ಬೇಂದ್ರೆ ಮೊದಲಾದ ಕವಿಗಳ ಶ್ರದ್ಧೆಯೇ ಪ್ರಮಾಣವೆಂದು ನಾನೇನೂ ಹೊಸದಾಗಿ ವಿವರಿಸಬೇಕಿಲ್ಲ.  ಈ ಎಲ್ಲ ಪ್ರಸ್ತಾಪಗಳು ಒಬ್ಬ ಅನುಭಾವಿಯ ಆತ್ಮಸತ್ವಕ್ಕೆ ಸಂಬಂಧಿಸಿದ ವಿಚಾರಗಳಲ್ಲದಿದ್ದರೂ ಅವನನ್ನು ಗ್ರಹಿಸುವ ನಮ್ಮ ಬುದ್ಧಿ ವಿವೇಚನೆಗಳನ್ನು ಇವು ಸತತವಾಗಿ ನಿಯಂತ್ರಿಸುತ್ತಿರುತ್ತವೆ ಎಂಬುದನ್ನು ಮರೆಯಬಾರದು. ಒಂದು ವೇಳೆ ಶ್ರೀರಾಮಕೃಷ್ಣರನ್ನು ವಿವೇಕಾನಂದ ಹಾಗು ಅವರು ಸ್ಥಾಪಿಸಿದ ರಾಮಕೃಷ್ಣ ಮಿಷನ್ನಿನಿಂದ ಆಚೆಗಿರಿಸಿ ನೋಡಿದಾಗ ಶ್ರೀರಾಮಕೃಷ್ಣರ ಅನನ್ಯತೆ ಇನ್ನೂ ಸರಿಯಾಗಿ ನಮಗೆ ಮನವರಿಕೆಯಾಗಬಹುದು. ಏಕೆಂದರೆ ಕೆಲವು ಸಲ ಒಂದು ಸಂಸ್ಥೆಯ ಚಟುವಟಿಕೆಗಳಿಗೂ ಆ ಸಂಸ್ಥೆಯ ಹೃದಯಭಾಗವೆನಿಸಿದ ಅನುಭಾವಿಯ ಬೋಧನೆಗಳಿಗೂ ಅರ್ಥಾರ್ಥ ಸಂಬಂಧ ಇರುವುದಿಲ್ಲ.

ನಾನು ಶ್ರೀರಜನೀಶರನ್ನು ಅನುವಾದಿಸುವುದನ್ನು ಕಂಡು “ಅಲ್ಲಮನ ಮೇಲೆ ಪಿಎಚ್.ಡಿ. ಅಧ್ಯಯನ ಮಾಡಿ, ನೀಷೆಯಂತಹ ತತ್ವಜ್ಞಾನಿಯನ್ನು ಅನುವಾದಿಸಿದವನು ಈಗ ಈ ಸ್ಥಿತಿಗಿಳಿದನಲ್ಲ!” ಎಂದು ಕೆಲವು ಬುದ್ಧಿಜೀವಿ ಸ್ನೇಹಿತರು ನನ್ನ ಬಗ್ಗೆ ಮರುಕ ಪಟ್ಟದ್ದುಂಟು. ನನ್ನ ವಿಷಯದಲ್ಲಿ ಅವರಿಗಿರುವ ಕಳಕಳಿಗೆ ನಾನು ನಿಜಕ್ಕೂ ಆಭಾರಿಯಾಗಿದ್ದೇನೆ. ರಜನೀಶರ ಕುರಿತು ಸರಿಯಾದ ಮಾಹಿತಿ ಇಲ್ಲದೆ ಅವರು ಹಾಗೆ ಹೇಳಿರಬಹುದು ಎಂದು ನಾನು ಊಹಿಸುತ್ತೇನೆ. ಇಲ್ಲವೆ ರಜನೀಶರ ಕುರಿತ ಅವರ ಕೆಲವು ಪೂರ್ವಗ್ರಹಗಳೂ ಈ ಬಗೆಯ ಅಭಿಪ್ರಾಯಕ್ಕೆ ಕಾರಣವಿರಬಹುದು. ಈ ಕೃತಿಯಾದರೂ ಅಗತ್ಯ ಮಾಹಿತಿಯನ್ನು ಒದಗಿಸಿ, ಅಂತಹ ಪೂರ್ವಗ್ರಹಗಳನ್ನು ನಿಸ್ಸಂಶಯವಾಗಿ ತೊಡೆದುಹಾಕಬಲ್ಲದು.

ಶ್ರೀರಜನೀಶರು ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ವಿಘಟನೆ ಹಾಗು ಅಧಃಪತನಗಳಿಗೆ ಸಾಕ್ಷಿಯಾಗಿದ್ದವರು. ಗಾಂಧೀವಾದಿಗಳ ಈ ಅಧಃಪತನ ಅವರಲ್ಲಿ ಮೂಡಿಸಿದ ನಿರಾಶೆ ಹಾಗು ಸಾತ್ವಿಕ ಸಿಟ್ಟುಗಳು ಈ ಕೃತಿಯುದ್ದಕ್ಕೂ ಸ್ಪಷ್ಟವಾಗಿ ಗೋಚರಿಸುತ್ತದೆ. ತಮ್ಮ ನೇರವಾದ ಅಭಿಪ್ರಾಯಗಳನ್ನು ಸಾರ್ವಜನಿಕ ಸಭೆ, ಭಾಷಣಗಳಲ್ಲಿ ವ್ಯಕ್ತಪಡಿಸಿ ಅಂದಿನ ಎಲ್ಲ ರಾಜಕಾರಿಣಿಗಳ, ಗಾಂಧೀವಾದಿಗಳ ಕೆಂಗಣ್ಣಿಗೆ ಗುರಿಯಾದರು. ೭೦ರ ದಶಕದಲ್ಲಿ ಹಿಂದೂ ಮೂಲಭೂತವಾದಿಗಳು ಅವರ ಹತ್ಯೆಗೆ ಮೂರು ಸಲ ಪ್ರಯತ್ನಿಸಿದ್ದರು. ಅಂದು ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಸಹ ಬಿಡದಂತೆ ಇವರ ಬೆನ್ನ ಹಿಂದೆ ಬಿದ್ದಿದ್ದರು. ಇವರ ವಿಚಾರಗಳು ಎಲ್ಲೂ ಪ್ರಚಾರ ಪಡೆಯಬಾರದು, ದೇಶದ ಯಾವ ಮೂಲೆಯಲ್ಲೂ ಇವರ ಆಶ್ರಮ ತಲೆಯೆತ್ತಬಾರದು ಎಂದು ಅವರು ಎಲ್ಲೆಡೆ ಆದೇಶ ಹೊರಡಿಸಿದ್ದರಂತೆ. ಇವರ ಪ್ರತಿ ಪ್ರವಚನಕ್ಕೂ ೫೦,೦೦೦ ಕ್ಕೂ ಅಧಿಕ ಜನ ಸೇರುತ್ತಿದ್ದರೂ ಒಮ್ಮೆಯೂ ಒಂದು ಪತ್ರಿಕೆಯಲ್ಲೂ ಇವರ ವಿಚಾರಗಳು ಯಥಾರೂಪದಲ್ಲಿ ವರದಿಯಾಗದಂತೆ ನೋಡಿಕೊಂಡರು. ಕೊನೆಗೆ ದೇಶವನ್ನೇ ಬಿಟ್ಟು ಹೋಗುವಂತೆ ಮಾಡಿದರು. ಆ ವಿವರಗಳನ್ನೆಲ್ಲ ಈ ಕೃತಿಯ ಅಧ್ಯಾಯಗಳಲ್ಲಿ ಆನುಷಂಗಿಕವಾಗಿ ನೀಡಲಾಗಿದೆ.

೨೦ನೆಯ ಶತಮಾನದ ಮತ್ತೊಬ್ಬ ಮಹತ್ವದ ಅನುಭಾವಿಯಾಗಿದ್ದ ಶ್ರೀ ಅರವಿಂದರು ಪೂರ್ವಾಶ್ರಮದಲ್ಲಿ ತೀವ್ರ ರಾಷ್ಟ್ರೀಯ ವಾದಿಗಳೂ, ಸಾಮಾಜಿಕ ಚಿಂತಕರೂ ಆಗಿದ್ದರು. ಮುಂದೆ ಅವರು ಆಲೀಪುರ್ ಜೈಲಿನಿಂದ ಹೊರಬಂದ ಮೇಲೆ ಸಂಪೂರ್ಣ ಬದಲಾದರು. ೧೯೦೯ರ ನಂತರ ಅವರ ಆಸಕ್ತಿ ಅಧ್ಯಾತ್ಮ, ದಿವ್ಯಜೀವನಗಳತ್ತ ಹೊರಳಿಬಿಟ್ಟಿತು. ಸಮಕಾಲೀನ ರಾಜಕಾರಣ, ಸಾಮಾಜಿಕತೆಗಳ ಬಗ್ಗೆ ಪ್ರಾಸಂಗಿಕವಾಗಿ ತಮ್ಮ ಅಭಿಪ್ರಾಯಗಳನ್ನು ಸೂಚಿಸುತ್ತಿದ್ದರಾದರೂ ಹಿಂದೆ ಅವರಲ್ಲಿ ಇದ್ದ ಕಾಳಜಿ, ತೀವ್ರತೆಗಳು ಮತ್ತೆ ಕಾಣಿಸಿಕೊಳ್ಳಲೇ ಇಲ್ಲ. ಅಥವ ಅವೆಲ್ಲ ಅಮುಖ್ಯವೆಂದು ಅವರು ಭಾವಿಸಿದರು. ಆಧ್ಯಾತ್ಮಿಕ ನೆಲೆಯಲ್ಲಿ ನೋಡಿದಾಗ ಮನುಷ್ಯ ಚೈತನ್ಯವನ್ನು ವಿಕಾಸಗೊಳಿಸುವಲ್ಲಿ ಅವರ ಕೊಡುಗೆ ಅಸಾಧಾರಣವಾದುದು ಎಂದು ಕುವೆಂಪು, ಬೇಂದ್ರೆ, ಮಧುರಚೆನ್ನರಂತಹವರು ಹೇಳುವರಾದರೂ ಅವರ ಬೌದ್ಧಿಕ ಪರಿಶ್ರಮ ಮಾತ್ರ ದಿವ್ಯ ಜೀವನವನ್ನು ತತ್ವೀಕರಿಸುವತ್ತ ಸಂಪೂರ್ಣವಾಗಿ ತೊಡಗಿಕೊಂಡಿತು. ಆದರೆ ಓಷೋ ರಜನೀಶರ ಬದುಕು ಹಾಗು ವಿಚಾರಗಳಲ್ಲಿ ಈ ಬಗೆಯ ಪರಿಣಾಮಕಾರೀ ಸ್ಥಿತ್ಯಂತರ ಘಟಿಸಲಿಲ್ಲ. “ಸಂಸ್ಕೃತಿ ಚಿಂತನೆಯಲ್ಲ, ಸಾಧಕರಿಗೆ ಆಧ್ಯಾತ್ಮಿಕ ನೆರವು ನೀಡುವುದು ನನ್ನ ಜೀವಿತೋದ್ದೇಶವಾಗಿದೆ” ಎಂದು ಅವರು ಆಗಾಗ ಹೇಳುತ್ತಿದ್ದರಾದರೂ ಅವರ ಬೋಧನೆಗಳಲ್ಲಿ ಆಧ್ಯಾತ್ಮಿಕತೆ ಹಾಗು ಆಧುನಿಕ (ರಾಜಕೀಯ-ಸಾಮಾಜಿಕ) ಚಿಂತನೆಗಳೆರಡೂ ಕೊನೆಯವರೆಗೂ ಹಾಸುಹೊಕ್ಕಾಗಿ ಬೆರೆಯುತ್ತಲೇ ಇದ್ದವು. ಹಾಗಾಗಿ ಈ ಕೃತಿಗೆ ’ಅಧ್ಯಾತ್ಮದ ಮಧ್ಯೆ ಬಿಡುವು’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಈ ಶೀರ್ಷಿಕೆಗೆ ಲೋಹಿಯಾರ ’ರಾಜಕೀಯದ ಮಧ್ಯೆ ಬಿಡುವು’ ಎಂಬ ತಲೆಬರಹದ ಛಾಯೆ ಇರುವುದನ್ನು ಓದುಗರು ಕಾಣಬಹುದು. ಕಣ್ಣೆದುರಿನ ಪ್ರಶ್ನೆಗಳನ್ನು ಅತಿಮುಖ್ಯವೆಂದು ಭಾವಿಸುವ ಓಷೋ ರಜನೀಶರ ವಿಚಾರಗಳು, ಈವರೆಗೆ ಪ್ರಮಾಣವೆಂದು ಸ್ವೀಕರಿಸಲಾದ ಎಲ್ಲ ಸಿದ್ಧಾಂತ ಹಾಗು ಆದರ್ಶಗಳನ್ನು ಎಂದಿಗೂ ಅನುಮಾನಿಸುವ ಆಧುನಿಕೋತ್ತರ ಚಿಂತನೆಗಳಾಗಿವೆ. ಹಿಂದಿನ ಎಲ್ಲ ಸಿದ್ಧಾಂತಗಳನ್ನು ವ್ಯವಸ್ಥಿತವಾಗಿ ನಿರಚನಗೊಳಿಸಿ ಮರುವ್ಯಾಖ್ಯಾನಕ್ಕೊಡ್ಡಿರುವ ಅವರ ಕೆಲವು ವಿಚಾರಗಳನ್ನು - ಮುಖ್ಯವಾಗಿ ಆಧ್ಯಾತ್ಮಿಕೇತರ ವಿಚಾರಗಳನ್ನು - ಪ್ರಸ್ತುತಪಡಿಸುವುದು ಈ ಕೃತಿಯ ಪ್ರಯತ್ನವಾಗಿದೆ. ಅವರ ಮಾತುಗಳಲ್ಲೇ ಹೇಳುವುದಾದರೆ “ಇಂದು ಸಮಾಜ, ರಾಜಕಾರಣ, ಅರ್ಥಶಾಸ್ತ್ರಗಳನ್ನು ಪರಿಗಣಿಸದೇ, ಬದುಕಿನ ಪ್ರತಿಯೊಂದು ಮಗ್ಗುಲನ್ನೂ ಗಂಭೀರವಾಗಿ ಶೋಧಿಸದೇ ಆಧ್ಯಾತ್ಮಿಕ ಜಿಜ್ಞಾಸೆಗೆ ಹೊರಡುವ ಚಿಂತಕ ಅಥವ ತತ್ವಜ್ಞಾನಿ ಹಾಸ್ಯಾಸ್ಪದನೆನಿಸಿಕೊಳ್ಳುತ್ತಾನೆ”. ಅಲ್ಲದೆ ಅವರ ಆಧ್ಯಾತ್ಮಿಕ ವಿಚಾರಗಳನ್ನು ಪ್ರಸ್ತುತ ಪಡಿಸುವ ಬರಹಗಳು ಅನುವಾದಗಳು ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿವೆ.

ಆ ಕಾಲಕ್ಕೆ ಕಾಂಗ್ರೇಸ್ಸಿಗರೂ, ಕಾಂಗ್ರೇಸ್ಸೇತರರೂ ಮೂಲತಃ ಗಾಂಧೀವಾದಿಗಳೇ ಆಗಿದ್ದು ಸ್ವಾತಂತ್ರ್ಯಾನಂತರ ಕಾಂಗ್ರೇಸ್‌ಗೆ ಪರ್ಯಾಯವಾಗಿ ಕಾಂಗ್ರೇಸ್ಸೇತರರು ಸಮಾಜವಾದೀ ಪಕ್ಷಗಳನ್ನು ಕಟ್ಟಿದರು. ಆಗ ಭೂ ಚಳುವಳಿ, ರೈತ ಚಳುವಳಿ ಮೊದಲಾದ ಜನಪರ ಚಳುವಳಿಗಳು ವ್ಯಾಪಕವಾಗಿ ನಡೆಯಿತಾದರೂ ಅಂದಿನ ಸಮಾಜವಾದಿಗಳು ಕಾಂಗ್ರೇಸ್‌ಗೆ ಪರ್ಯಾಯ ರಾಜಕೀಯ ಪಕ್ಷಗಳನ್ನು ಕಟ್ಟುವುದರ ಹಿಂದೆ ಅಧಿಕಾರ ಲಾಲಸೆ, ಪ್ರತಿಷ್ಠೆ ಹಾಗು ಮನುಷ್ಯ ಸಹಜ ಲೋಭಗಳು ಕೆಲಸ ಮಾಡಿದ್ದವೇ ವಿನಃ ಅವರಿಗೆ ಯಾವ ಸೈದ್ಧಾಂತಿಕ ಬದ್ಧತೆಯೂ ಇರಲಿಲ್ಲ ಎಂದು ಆಗಿನ ಎಲ್ಲ ನಾಯಕರುಗಳನ್ನು ಹತ್ತಿರದಿಂದ ಕಂಡಿದ್ದ ಶ್ರೀರಜನೀಶರು ಇಲ್ಲಿ ಅಭಿಪ್ರಾಯ ಪಡುತ್ತಾರೆ. ಅಂದಿನ ಸಮಾಜವಾದಿಗಳಿಂದ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದ ಮಾರ್ಕ್ಸಿಸ್ಟ್ ಚಿಂತಕ ಎಂ.ಎನ್. ರಾಯ್ ಅವರ ವಿಚಾರಗಳಿಂದ ಹಾಗು ರಷ್ಯಾದಲ್ಲಿ ಅವರು ನಡೆಸಿದ ಹಲವು ಮಹತ್ವದ ಪ್ರಯೋಗಗಳಿಂದ ಪ್ರಭಾವಿತರಾಗಿದ್ದ ಶ್ರೀರಜನೀಶರು ತಾತ್ವಿಕವಾಗಿ ಎಡಪಂಥೀಯರಾಗಿದ್ದರು. ರಷ್ಯಾದಲ್ಲಿ ಎಡಪಂಥೀಯರು ಕೊಲೆ ಹಿಂಸೆಗಳಿಗೆ ತೊಡಗಬೇಕಾಗಿದ್ದ ಅನಿವಾರ್ಯತೆಯನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುವ ಅವರು ಬಂಡವಾಳಶಾಹಿಯನ್ನು ಒಂದೇ ಸಮನೆ ಬೆಳೆಸುವುದರಿಂದ ಸಮಾಜವಾದ ಸ್ಥಾಪನೆಯಾದೀತು ಎಂಬ ವಾದವನ್ನು ಈ ಕೃತಿಯಲ್ಲಿ ಪ್ರತಿಪಾದಿಸುತ್ತಾರೆ. ಬಂಡವಾಳವೆಂದರೆ “ಮನುಷ್ಯ ಪ್ರಯತ್ನದಿಂದಲೇ ಹುಟ್ಟುವ ಸಂಪತ್ತು, ಆರ್ಥಿಕ ವ್ಯವಹಾರಗಳಲ್ಲಿ ಹೂಡಿಕೆಗೆ ಬಳಸಲಾಗುವ ಹಣ ಎಂದರ್ಥ. ನಿಸರ್ಗದ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದು, ಬಡವರ ಶೋಷಣೆಯಿಂದ ಸಂಪಾದಿಸಿದ್ದು ಬಂಡವಾಳ ಎನಿಸಿಕೊಳ್ಳುವುದಿಲ್ಲ” ಎಂದು ಅವರು ಮುನ್ನವೇ ಸ್ಪಷ್ಟಪಡಿಸುತ್ತಾರೆ. ಮಿಶ್ರ ಆರ್ಥಿಕತೆಯ ಹೆಸರಿನಲ್ಲಿ ಅವರು ಅಂದು ಸೂಚಿಸಿದ ಹಾದಿಯಲ್ಲೇ ಇಂದು ನಮ್ಮ ಸರ್ಕಾರಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆಯುತ್ತಿರುವುದಾದರೂ ಅಂದು ಅವರ ಅಭಿಪ್ರಾಯಗಳು ಪೂರ್ತಿಯಾಗಿ ರೂಪುತಳೆಯುವ ಮುನ್ನವೇ ಸಮಾಜವಾದ, ಗಾಂಧೀವಾದಗಳನ್ನು ತೀವ್ರವಾಗಿ ಟೀಕಿಸುತ್ತಿದ್ದರು ಎಂಬ ಕಾರಣದಿಂದ ಅಂದಿನ ಸರ್ಕಾರಗಳು ಅವರ ವಿಚಾರಗಳಿಗೆ ಕಡಿವಾಣ ಹಾಕಿದವು, ಅವರ ಮಾತುಗಳಿಗೆ ಹಲವು ಅಪಾರ್ಥಗಳನ್ನು ಕಲ್ಪಿಸಿದವು. ಮೊದಲ ಸಲ ಶ್ರೀ ರಜನೀಶರು ದೇಶದಾದ್ಯಂತ ಒಬ್ಬ ವಿವಾದಾತ್ಮಕ ಚಿಂತಕ ಎನಿಸಿಕೊಂಡಿದ್ದೇ ಗಾಂಧೀವಾದದ ಕುರಿತ ಅವರ ಕಟು ಟೀಕೆಗಳಿಂದ. ಆದರೆ ಮುಂದೆ ಕಾಮದ ಕುರಿತ ನಮ್ಮ ಮಡಿವಂತಿಕೆ ಹಾಗು ಪೂರ್ವಗ್ರಹಗಳು ಹೇಗೆ ನಮ್ಮನ್ನಿನ್ನೂ ಕಾಮುಕತೆಯತ್ತ ತಳ್ಳುತ್ತಿವೆ ಎಂದು ತಮ್ಮ ಪ್ರವಚನಗಳಲ್ಲಿ ಬಹಿರಂಗವಾಗಿ ವಿಶ್ಲೇಷಿಸಲಾರಂಭಿಸಿದರು. ಸಾಮಾಜಿಕ ಸ್ವಾಸ್ಥ್ಯ ಹಾಗು ಸಾಮಾಜಿಕ ಕಳಕಳಿಯ ಸೋಗು ಹಾಕಿದ್ದ ಅಂದಿನ ಪತ್ರಿಕೆಗಳು ಈತ ಮುಕ್ತಕಾಮವನ್ನು ಬೋಧಿಸುತ್ತಿದ್ದಾನೆ ಎಂಬ ತರಹದ ಉದ್ರೇಕಕಾರಿ ಸುದ್ದಿಗಳನ್ನು ಹರಡಿ ಇವರನ್ನು ’ಸೆಕ್ಸ್ ಗುರು’ ಎಂಬಂತೆ ಬಿಂಬಿಸಿದವು. ಶಾಸನ ಸಭೆಗಳಲ್ಲಿ ನಿದ್ದೆ ಮಾಡುವುದೂ ಸೆಕ್ಸ್ ವೀಡಿಯೋ ನೋಡುವಷ್ಟೇ ನೈತಿಕ ಭ್ರಷ್ಟತನ ಎಂಬ ವಿವೇಕವಿಲ್ಲದ ಪತ್ರಕರ್ತರು ರೋಚಕ ಸುದ್ದಿಗಳೇ ಜಾಗತಿಕ ಮಹತ್ವದ ಸುದ್ದಿಗಳೆಂದು ತಿಳಿದಿರುತ್ತಾರೆ. ಇಂತಹ ಭೋಳೆ ಪತ್ರಕರ್ತರಿಂದ ಇನ್ನೇನನ್ನು ತಾನೇ ನಿರೀಕ್ಷಿಸಲಾದೀತು? ಅಲ್ಲದೆ ಓಷೋ ರಜನೀಶರು ಪರಂಪರೆಯನ್ನು ನಿರ್ದಾಕ್ಷಿಣ್ಯವಾಗಿ ನಿರಚನಗೊಳಿಸುತ್ತಿದ್ದರಿಂದ ಸಾಂಪ್ರದಾಯಿಕ ಮನಸ್ಸುಗಳು ಅವರ ವಿಚಾರಗಳ ಬಗ್ಗೆ ಮಡಿವಂತಿಕೆ ತೋರಿಸಿದವು ಹಾಗು ಪತ್ರಕರ್ತರನ್ನೇ ನಂಬಿದ್ದ ಬಹುತೇಕ ಆಧುನಿಕ ಮನಸ್ಸುಗಳು ಅವರ ವಿಚಾರಗಳನ್ನು ಲಘುವಾಗಿ ತೆಗೆದುಕೊಂಡವು.

ಹಾಗೆ ನೋಡಿದರೆ ಓಷೋ ರಜನೀಶ್ ನಮ್ಮ ಕಾಲದ ಬಹುಮುಖ್ಯ ಮಾನವತಾವಾದಿಯಾಗಿದ್ದರು. ಮುಂದೆ ಡಾಕ್ಟರುಗಳ ಸಲಹೆಯ ಮೇರೆಗೆ ಅವರು ಅಮೆರಿಕಾಗೆ ಪ್ರಯಾಣಿಸಿದಾಗ ಅಲ್ಲಿನ ಅವರ ಶಿಷ್ಯರು ಹಾಗು ಸನ್ಯಾಸಿಗಳು ಅವರಿಗಾಗಿ ಓರೆಗಾನ್ ಮರುಭೂಮಿ ಪ್ರದೇಶದಲ್ಲಿ ೬೪,೨೨೯ ಎಕರೆಯಷ್ಟು ವಿಸ್ತಾರವಾದ (೨೬೦ ಚದರ ಕಿ.ಮೀ.) ಭೂಮಿಯನ್ನು ಕಾನೂನುಬದ್ಧವಾಗಿಯೇ (೫.೭೫ ಮಿಲಿಯನ್ ಡಾಲರ್‌ಗೆ) ಖರೀದಿಸಿದರು. ಯಾವುದಕ್ಕೂ ಅಲ್ಲಿನ ಸರ್ಕಾರವನ್ನು ಅವಲಂಬಿಸದೇ ನೀರಾವರಿ, ವಿದ್ಯುಚ್ಛಕ್ತಿ, ರಸ್ತೆಗಳು, ಮನೆಗಳು, ಹೋಟೆಲ್ ಮೊದಲಾದ ಎಲ್ಲ ನಾಗರೀಕ ಸೌಲಭ್ಯಗಳನ್ನು ಅಲ್ಲಿ ನಿರ್ಮಿಸಿ ಅದಕ್ಕೆ ’ರಜನೀಶ್‌ಪುರಂ’ ಎಂದು ಹೆಸರಿಟ್ಟು ತಮ್ಮ ಗುರುವಿಗೆ ಕಾಣಿಕೆಯಾಗಿ ನೀಡಿದರು. ಅಲ್ಲಿ ತನ್ನ ಸಾವಿರಾರು ಸನ್ಯಾಸಿಗಳೊಂದಿಗೆ ವಾಸಿಸಲಾರಂಭಿಸಿದ ಮೇಲೆ ರಜನೀಶರಿಗೆ ಅಮೆರಿಕಾದ ಫ್ಯಾಸಿಸ್ಟ್ ಮನಸ್ಸು ಹಾಗು ಯಹೂದ್ಯ ವಿರೋಧೀ ಧೋರಣೆಗಳು ಮನವರಿಕೆಯಾದವು. ತನ್ನ ಕೈಗಳು ರಕ್ತಸಿಕ್ತವಾಗದಂತೆ ಯಹೂದಿಗಳನ್ನು ನಿರ್ನಾಮ ಮಾಡಲೆಂದು ಇಸ್ರೇಲ್‌ನ ಮುಸಲ್ಮಾನರನ್ನು ಅಲ್ಲಿನ ಅಲ್ಪಸಂಖ್ಯಾತ ಯಹೂದಿಗಳ ವಿರುದ್ಧ ಎತ್ತಿಕಟ್ಟಿ ಮುಸಲ್ಮಾನರಿಗೆ ಗುಟ್ಟಾಗಿ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದ ಅಮೆರಿಕಾ ಹೊರಜಗತ್ತಿನೆದುರು ತನ್ನನ್ನು ತಾನು ಶಾಂತಿದೂತನೆಂದು ಬಿಂಬಿಸಿಕೊಳ್ಳುತ್ತಿತ್ತು. ಅಮೆರಿಕನ್ ಪ್ರಭುತ್ವದ ಈ ಮುಖವಾಡತನದ ವಿರುದ್ಧ ಶ್ರೀರಜನೀಶ್ ಸಮರ ಸಾರಿದರು. ಸರ್ವೋಚ್ಚ ನ್ಯಾಯಾಲಯವು ಅಮೆರಿಕನ್ ಸರ್ಕಾರಕ್ಕೆ ಓಷೋ ಕಮ್ಯೂನಿನ ಸಮಸ್ತ ಆಸ್ತಿಯನ್ನೂ ಹಿಂದಿರುಗಿಸಬೇಕು ಎಂದು ಆದೇಶಿಸಿದ ಮೇಲೆ, ತಾಯ್ನೆಲವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದ ಇಸ್ರೇಲ್‌ನ ಎಲ್ಲ ಯಹೂದಿಗಳಿಗೆ ತಮ್ಮ ರಜನೀಶ್‌ಪುರವನ್ನು ಬಿಟ್ಟುಕೊಟ್ಟರು. “ನಿಮಗೆ ನಿಜವಾಗಿಯೂ ಇಸ್ರೇಲ್‌ಗೆ ನೆರವು ನೀಡಬೇಕೆಂಬ ಬಯಕೆ ಇದ್ದರೆ ನಮ್ಮ ಆಶ್ರಮವನ್ನು ನಾಶ ಮಾಡಲು ಪ್ರಯತ್ನಿಸದೇ ಆ ಸಾವಿರಾರು ಎಕರೆ ಭೂಮಿಯೊಂದಿಗೆ ಇಡೀ ಓರೆಗಾನ್‌ನನ್ನು ಹೊಸ ಇಸ್ರೇಲ್ ಎಂದು ಘೋಷಿಸಿ ಇಸ್ರೇಲ್‌ಗೆ ಕೊಟ್ಟುಬಿಡಿ. ಅಲ್ಲಿನ ಎಲ್ಲ ಯಹೂದಿಗಳನ್ನೂ ಇಲ್ಲಿ ಕರೆಸಿಕೊಂಡು ಇಸ್ರೇಲನ್ನು ಮುಸ್ಲಿಮರಿಗೆ ಬಿಟ್ಟುಕೊಡಿ. ಆ ಭೂಮಿ ನ್ಯಾಯವಾಗಿ ಮುಸ್ಲಿಮರಿಗೆ ಸೇರಿದ್ದು. ನಾನು ಹಾಗು ನನ್ನ ಸನ್ಯಾಸಿಗಳು ನಮ್ಮ ಸಾವಿರಾರು ಎಕರೆ ಭೂಮಿಯನ್ನು ಜೊತೆಗೆ ನಾವು ನಿರ್ಮಿಸಿರುವ ರಸ್ತೆಗಳು, ಹೋಟೆಲ್‌ಗಳು, ಮನೆಗಳು, ಸೇತುವೆಗಳು, ಅಣೆಕಟ್ಟುಗಳು, ಹೊಲಗದ್ದೆಗಳು ಇವೆಲ್ಲದರ ಸಮೇತ ಸ್ನೇಹಪೂರ್ವಕವಾಗಿ ಇಸ್ರೇಲಿನ ಯಹೂದಿಗಳಿಗೆ ಉಡುಗೊರೆಯಾಗಿ ಕೊಡಲು ಸಿದ್ಧರಿದ್ದೇವೆ. ಹೀಗೆ ನಮ್ಮ ನೆಲ ಅವರ ಹೊಸ ರಾಜಧಾನಿಯಾಗಲಿ. ಓರೆಗಾನ್‌ನ ಅರ್ಧ ಭೂಮಿ ನಮಗೆ ಸೇರಿದ್ದರೆ ಇನ್ನರ್ಧ ಭೂಮಿ ಫೆಡರಲ್ ಸರ್ಕಾರಕ್ಕೆ ಸೇರಿದೆ. ಸರ್ಕಾರಕ್ಕೆ ಇಸ್ರೇಲ್ ಬಗ್ಗೆ ನಿಜವಾದ ಕಾಳಜಿ ಇದ್ದರೆ ತಮ್ಮ ಜಾಗವನ್ನೂ ಬಿಟ್ಟುಕೊಡಲಿ. ಅದೇನೂ ಅಂತಹ ಜನನಿಬಿಡ ಪ್ರದೇಶವಲ್ಲ. ಹಾಗೆ ನೋಡಿದರೆ ಇಂದು ಅಮೆರಿಕಾದಲ್ಲಿ ವಾಸಿಸುತ್ತಿರುವ ಯಾರೂ ಇಲ್ಲಿನ ಮೂಲ ನಿವಾಸಿಗಳಲ್ಲ. ಎಲ್ಲರೂ ಯುರೋಪ್ ಹಾಗು ಇತರ ಭಾಗಗಳಿಂದ ವಲಸೆ ಬಂದವರು. ಈಗಲಾದರೂ ಅಮೆರಿಕನ್ ಸರ್ಕಾರ ತನ್ನ ನಿಜವಾದ ಬಣ್ಣ ತೋರಿಸಲಿ” ಎಂದು ವರ್ಲ್ಡ್‌ಪ್ರೆಸ್‌ನ ಎದುರು ಅಮೆರಿಕಾಗೆ ಸವಾಲೆಸೆದರು. ಒಂದು ವೇಳೆ ರಜನೀಶರ ಮಾತುಗಳು ನೆರವೇರಿ ಬಿಟ್ಟರೆ ಇನ್ನೆಲ್ಲಿ ತನ್ನ ಬಣ್ಣ ಬಯಲಾಗುತ್ತದೆಯೋ ಎಂದು ಹೆದರಿದ ಅಮೆರಿಕನ್ ಪ್ರಭುತ್ವ ರಜನೀಶ್‌ಪುರವನ್ನು ಮುಟ್ಟುಗೋಲು ಹಾಕಿಕೊಂಡಿತು. ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಅವರನ್ನು ಅಮೆರಿಕಾದಿಂದ ಅಧಿಕೃತವಾಗಿ ಗಡಿಪಾರು ಮಾಡಿತು (ವಿವರಗಳನ್ನು ಮುಂದಿನ ಪುಟಗಳಲ್ಲಿ ನೀಡಲಾಗಿದೆ).

*                       *                       *                       *

“ಜ್ಞಾನಿ ಜ್ಞಾನಿಯೊಡನೆ ನುಡಿವನಲ್ಲದೆ ಅಜ್ಞಾನಿಯೊಡನೆ ನುಡಿವನೇ?” ಎಂದು ಅಲ್ಲಮಪ್ರಭುವಿನ ವಚನವಿದೆ. ಇದರರ್ಥ ಜ್ಞಾನಿಯ ಕಣ್ಣಿಗೆ ಜ್ಞಾನಿಗಳು ಮಾತ್ರ ಕಾಣಿಸುತ್ತಾರೆ. ಹಾಗೆಯೇ ಅಜ್ಞಾನಿಯ, ದುಃಖಿಯ, ಲೋಭಿಯ ಕಣ್ಣುಗಳಿಗೆ ಲೋಕದಲ್ಲಿ ಅದದೇ ರೂಪಗಳು ಪ್ರತಿಫಲನವಾಗುತ್ತವೆ ಮತ್ತು ಅದು ಸಹಜ ಕೂಡ. ಆದರೆ ಕೆಲವು ಸಲ ನಾವಲ್ಲದುದನ್ನು ಇನ್ನೊಬ್ಬರ ಮೇಲೆ ಆರೋಪಿಸಿ ನಾವು ದೂರ ಸರಿದು ನಿರಾಳವಾಗಿ ಬದುಕಲು ಪ್ರಯತ್ನಿಸುತ್ತೇವೆ. ಲೋಕದಲ್ಲಿ ಮಹಾತ್ಮರುಗಳು ಹುಟ್ಟುವುದೇ ಹೀಗೆ. ನಾವು ನೈತಿಕವಾಗಿ ಕುಸಿಯತೊಡಗಿದಾಗ ಮಹಾತ್ಮರುಗಳನ್ನು ಸೃಷ್ಟಿಸಿಕೊಂಡು ಆ ಕೊರತೆಯನ್ನು ತುಂಬಿಕೊಳ್ಳಲು ಅಥವ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮ ನಡುವೆ ಗಾಂಧೀ, ಅಣ್ಣಾ ಹಜಾರೆಯಂಥವರು ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳುವುದು ಹೀಗೆಯೇ. ಇದು ಗಾಂಧೀ, ಅಣ್ಣಾ ಹಜಾರೆ ಮೊದಲಾದವರ ಚಾರಿತ್ರ್ಯವನ್ನು ಬೆದಕುವ ಪ್ರಶ್ನೆಯಲ್ಲ. ಅವರು ಪ್ರಾಮಾಣಿಕರು, ಶುದ್ಧಹಸ್ತರು ಎಂದು ಯಾರೂ ಹೊಸದಾಗಿ ಹೇಳಬೇಕಾಗಿಲ್ಲ.

ಆದರೆ, ಇಲ್ಲಿ ಎಂದೂ ಸಾಮಾಜಿಕ ನ್ಯಾಯದ ಬಗೆ ದನಿ ಎತ್ತದ, ಮತದಾನ ಮಾಡುವ ಗೋಜಿಗೇ ಹೋಗದ ಮೇಲ್ಪದರದ ಒಂದು ವರ್ಗ ತನ್ನ ಹಣಬಲ, ಮಾಧ್ಯಮಗಳ ಪ್ರಭಾವಗಳನ್ನು ಬಳಸಿ ಒಂದು ಸಮೂಹ ಸನ್ನಿಯನ್ನು ಉಂಟು ಮಾಡಬಲ್ಲದು. ವಾಮಮಾರ್ಗದಲ್ಲಿ ತಮಗಿಂತಲೂ ಬೇಗನೆ ಶ್ರೀಮಂತರಾಗುವ ಭ್ರಷ್ಟ ರಾಜಕಾರಿಣಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಅಣ್ಣಾ ಹಜಾರೆಯಂಥವರನ್ನು ಬಳಸಿಕೊಳ್ಳಬಲ್ಲುದು. ಅಣ್ಣಾ ಎಂಬ ಸಮೂಹ ಸನ್ನಿ ಇಲ್ಲದೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ನೈತಿಕ ಶಕ್ತಿ ಇವರಿಗೇಕಿಲ್ಲ? ಇದೇ ಸಂದರ್ಭದಲ್ಲಿ ಕೇಂದ್ರ ಹಾಗು ರಾಜ್ಯದ ಮಂತ್ರಿಗಳು, ಸಚಿವರುಗಳು ಸಾಲು ಸಾಲಾಗಿ ಕೋರ್ಟು, ಜೈಲುಗಳ ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ನನ್ನ ಮಿತ್ರರೊಬ್ಬರು “ಇದೆಲ್ಲ ಅಣ್ಣಾಗೆ ಸಂದ ಗೆಲುವು” ಎಂದಿದ್ದರು. ಆಗ ನಾನು “ನ್ಯಾಯಾಂಗವು ಸಂವಿಧಾನ ಬದ್ಧವಾಗಿ ನಡೆಯಲು ಸಾಧ್ಯವಾದರೆ ಅದು ನ್ಯಾಯಾಂಗಕ್ಕೆ ಸಲ್ಲುವ ಗೆಲುವಾಗುವುದಿಲ್ಲವೇ? ಆ ಅಧಿಕಾರ, ಕೌಶಲ್ಯಗಳನ್ನು ಮತ್ತೆ ಮತ್ತೆ ನೆನಪಿಸಲು ನಾಯಕರ ಬರವಿಗಾಗಿ ನಾವು ಕಾಯುತ್ತ ಕೂರುವುದು ಸರಿಯೇ? ಇದನ್ನೇ ರೂಢಿ ಮಾಡಿಕೊಂಡರೆ ಸಮಾಜ ಮುನ್ನಡೆಯುವುದನ್ನೇ ನಿಲ್ಲಿಸಿಬಿಡುವುದಿಲ್ಲವೇ?” ಎಂದು ಕೇಳಿದ್ದೆ. ಈ ಬೆಳವಣಿಗೆಗಳು ನಿಜಕ್ಕೂ ಅಣ್ಣಾರ ಗೆಲುವಲ್ಲ, ಬದಲಿಗೆ ಜನಲೋಕಪಾಲ್ ಮಸೂದೆಯ ಮೂಲ ಆಶಯವಾದ ’ಭ್ರಷ್ಟಾಚಾರ ನಿರ್ಮೂಲನೆ’ಯ ಎಲ್ಲ ಸಾಮರ್ಥ್ಯ ನಮ್ಮ ಸಂವಿಧಾನಕ್ಕಿದೆ ಎಂದು ಇದರಿಂದ ರುಜುವಾತಾಗುತ್ತದೆ.

ಇಂಥ ಹಣವಂತರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲೂ ಸದಾ ಕಾಲ ಗಾಂಧಿಯ ಸುತ್ತ ನೆರೆದಿರುತ್ತಿದ್ದರು. ಸ್ವಾತಂತ್ರ್ಯ ಚಳವಳಿಗೆ ತಮ್ಮ ’ಯೋಗದಾನ’ ಸಲ್ಲಿಸುತ್ತಿದ್ದ ಇವರು ಅನಂತರ ಅಧಿಕಾರಾರೂಢ ಕಾಂಗ್ರೇಸ್ಸಿನಿಂದ ತಮ್ಮ ದಾನದ ಫಲವನ್ನು ಪಡೆಯಲು ಮರೆಯಲಿಲ್ಲ. ಇದನ್ನೆಲ್ಲ ಕಣ್ಣಾರೆ ಕಂಡ ಗಾಂಧೀ “ನನ್ನ ಮಾತುಗಳಿಗೆ ಇಲ್ಲಿ ಖೋಟಾನೋಟಿನ ಬೆಲೆಯೂ ಇಲ್ಲವಲ್ಲ” ಎಂದು ಮರುಗಿದರಂತೆ (ಗಾಂಧೀಜೀಯವರ ಕಾರ್ಯದರ್ಶಿ ವಿ. ಕಲ್ಯಾಣಂ ಸಂದರ್ಶನ, ಉದಯವಾಣಿ, ದಿನಾಂಕ ೨.೨.೨೦೧೨, ಸಂದರ್ಶಕ: ಜೋಗಿ). ಇದಕ್ಕೆ ನಂಬೂದರಿಪಾದ್‍ರಂತಹವರ ಕೃತಿಗಳೂ ಪ್ರಮಾಣವಾಗಿವೆ. ತನ್ನ ಕೊರತೆಗಳನ್ನು ನಿವಾರಿಸಿಕೊಳ್ಳಲು ಮಹಾತ್ಮರುಗಳನ್ನು ಹುಟ್ಟಿಸಿ, ಆಮೇಲೆ ಅವರನ್ನು ಕಸಕ್ಕಿಂತ ಕಡೆಯಾಗಿ ಕಾಣುವ ಒಂದು ವರ್ಗ ನಮ್ಮ ಸಮಾಜದಲ್ಲಿದೆ. ಆ ಒಂದು ವರ್ಗದ ಬಣ್ಣ ಬಯಲು ಮಾಡಲು ಶ್ರೀರಜನೀಶರು ’ಸಮಾಜವಾದದಿಂದ ದೂರವಿರಿ’ ಎಂದು ಕರೆ ನೀಡಿದರು. ಜೊತೆಗೆ ಗಾಂಧೀ ಚಿಂತನೆಗಳನ್ನೂ ತೀವ್ರವಾಗಿ ವಿಮರ್ಶಿಸಬೇಕಾದ ಅಗತ್ಯವಿದೆ ಎಂದು ಭಾವಿಸಿದರು.

ಏಕೆಂದರೆ ಒಬ್ಬ ವ್ಯಕ್ತಿ ’ಮಹಾತ್ಮಾ’ ಎನಿಸಿಕೊಂಡೊಡನೆಯೇ ಅವನ ದೋಷಯುಕ್ತ ವಿಚಾರಗಳನ್ನು ಸರಿಪಡಿಸಿಕೊಂಡು ಬಳಸತೊಡಗುವೆವೇ ವಿನಃ ಆ ವಿಚಾರಗಳೊಳಗಿನ ಅಪಾಯಕಾರೀ ಅಂಶಗಳನ್ನು ಮನಗಾಣಲು ಹೋಗುವುದಿಲ್ಲ. ಒಂದು ಸಮಾಜವು ಅಂತಹ ಮಹಾತ್ಮನ ಪ್ರಭಾವದಿಂದ ಬಿಡುಗಡೆಹೊಂದಿ ಭವಿಷ್ಯದತ್ತ ಯೋಚಿಸುವ ಪ್ರಬುದ್ಧತೆಯನ್ನು ಎಂದೂ ತೋರಿಸುವುದಿಲ್ಲ. ಉದಾಹರಣೆಗೆ, ಗಾಂಧಿಯ ಸತ್ಯಾಗ್ರಹದ ಕಲ್ಪನೆ ಅಸಾಧ್ಯ ಕಟ್ಟಲೆಗಳನ್ನು ಹೊಂದಿರುವ ಒಂದು ಹೋರಾಟದ ವಿಧಾನವಾಗಿದೆ. ’ಸತ್ಯಾಗ್ರಹಕ್ಕೆ ಸೋಲೆಂಬುದೇ ಇಲ್ಲ, ಆದರೆ ಮುಂಬರುವ ತಲೆಮಾರುಗಳು ನನ್ನ ಸತ್ಯಾಗ್ರಹವನ್ನು ತಪ್ಪಾಗಿ ಗ್ರಹಿಸುತ್ತದೆ. ಅದು ಆತ್ಮಸತ್ವವಿಲ್ಲದವರ ಕೈಗೆ ಸಿಕ್ಕು ಸೋಲನ್ನು ಅನುಭವಿಸುತ್ತದೆ’ ಎಂದು ಗಾಂಧೀ ಭವಿಷ್ಯವಾಣಿಯನ್ನು ನುಡಿದಿದ್ದರು. ಆ ಭವಿಷ್ಯವಾಣಿಯ ಹಂಗಿಗೊಳಗಾಗಿ ನಾವು ಸತ್ಯಾಗ್ರಹವನ್ನು ಕುರಿತು ಮರುಚಿಂತನೆ ಮಾಡುವುದನ್ನೇ ಮರೆತುಬಿಟ್ಟೆವು. ಸತ್ಯಾಗ್ರಹ ಕೆಲವು ಸಲ ದಾರಿತಪ್ಪಿಸುವ ಹೋರಾಟದ ವಿಧಾನವಾಗಬಹುದು ಎಂದು ಚರಿತ್ರೆಯಲ್ಲಿ ಡಾ.ಅಂಬೇಡ್ಕರ್‌ರ ಬದುಕಿನ ಕೆಲವು ನಿದರ್ಶನಗಳಿಂದ ತಿಳಿದು ಬಂದಿದೆ. ಆದರೂ ಅಂತಹ ಸಂದರ್ಭಗಳಲ್ಲಿ ಇಬ್ಬರ ವಿಚಾರಗಳನ್ನೂ ಸಮನ್ವಯಿಸುವ ಮಾರ್ಗಗಳನ್ನು ಹುಡುಕುವ ಪ್ರಯತ್ನಗಳಾದುವೇ ವಿನಃ (ಡಾ. ಚಂದ್ರಶೇಖರ್‌ರ ’ಗಾಂಧೀ-ಅಂಬೇಡ್ಕರ್’, ಡಿ.ಆರ್. ನಾಗರಾಜ್‌ರ ’ಉರಿ ಚಮ್ಮಾಳಿಗೆ’ ಮತ್ತು ಇತ್ತೀಚಿನ ಮೊಗಳ್ಳಿ ಗಣೇಶರ ಲೇಖನ ಮೊದಲಾದವು) ಸತ್ಯಾಗ್ರಹವನ್ನು ತಾತ್ವಿಕವಾಗಿ ಬಗೆಯಲು ನಾವು ಪ್ರಯತ್ನಿಸಲೇ ಇಲ್ಲ. ಅನ್ಯಾಯಕ್ಕೆ ಒಳಗಾದವನಿಗೆ “ಮೊದಲು ಚಾರಿತ್ರ್ಯವನ್ನು ಶುದ್ಧ ಪಡಿಸಿಕೋ, ಅಣುವ್ರತಗಳನ್ನು ಪಾಲಿಸು, ಆ ಬಳಿಕ ಹೋರಾಟಕ್ಕಿಳಿ” ಎಂದು ಸತ್ಯಾಗ್ರಹ ಬೋಧಿಸುತ್ತದೆ. ವೈಯಕ್ತಿಕ ನೆಲೆಯಲ್ಲಿ ಇದು ಉದಾತ್ತ ಆದರ್ಶದಂತೆ ಕಂಡರೂ ಇದನ್ನು ಸಮುದಾಯಕ್ಕೆ ಅನ್ವಯಿಸುವುದು ನಿಜಕ್ಕೂ ಅನರ್ಥಕಾರಕ. ಏಕೆಂದರೆ ಈ ವಾದವು “ಸತ್ಯ, ನೀತಿ, ಸಂಯಮಗಳನ್ನು ಪಾಲಿಸದವನ ಪಾಲಿಗೆ ನ್ಯಾಯ ದೊರಕದು, ತನಗೆ ಸಲ್ಲಬೇಕಾದ ನ್ಯಾಯಕ್ಕಾಗಿ ದನಿ ಎತ್ತುವ ಅಧಿಕಾರವೇ ಅಂಥವನಿಗಿರದು” ಎಂಬ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತದೆ. ಗಾಂಧೀಜಿ ನಂಬಿದ್ದ ’ಗೀತಾಮಾತೆ’ಯೂ ಸತ್ಯಾಗ್ರಹದ ಈ ಪರಿಕಲ್ಪನೆಯನ್ನು ಅನುಮೋದಿಸುವುದಿಲ್ಲ. ಭಗವದ್ಗೀತೆಯು ’ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್’ (ಸತ್ಯವನ್ನು ಪೂರ್ತಿಯಾಗಿ ಅಲ್ಲದಿದ್ದರೂ ಅಲ್ಪ ಸ್ವಲ್ಪ ಪಾಲಿಸಿದರೂ ಅದು ದೊಡ್ಡ ವಿಪತ್ತುಗಳಿಂದ ನಮ್ಮನ್ನು ಪಾರು ಮಾಡುತ್ತದೆ) ಎನ್ನುತ್ತದೆ. ಆದರೆ ಗಾಂಧಿಯಾದರೂ “ಅಲ್ಪಸ್ವಲ್ಪ ಅಲ್ಲ ಪೂರ್ತಿಯಾಗಿ ಸಂಯಮ, ಚಾರಿತ್ರ್ಯ, ಸತ್ಯನಿಷ್ಠೆಗಳನ್ನು ಸಾಧಿಸಿಕೊಳ್ಳುವ ಮುನ್ನ ಸತ್ಯಾಗ್ರಹದ ತಂಟೆಗೆ ಹೋಗದಿರುವುದೇ ಕ್ಷೇಮ. ಅದರಿಂದ ಸತ್ಯಕ್ಕೆ ಅಪಚಾರವಾಗಬಹುದು, ಅದರ ದುರುಪಯೋಗ ಆಗಬಹುದು” ಎಂದು ಸತ್ಯಾಗ್ರಹಿಗಳಿಗೆ ಎಚ್ಚರಿಕೆ ನೀಡುತ್ತಾರೆ. ಗಾಂಧಿಯ ಮಾತುಗಳನ್ನು ಒಪ್ಪುವುದಾದರೆ ಅರಿವಿಗಿಂತ ಆಚಾರವೇ ಮುಖ್ಯವೆಂದು ಪರಿಗಣಿಸಬೇಕಾಗುತ್ತದೆ. ಹಾಗೆ ನೋಡಿದರೆ ’ಸತ್ಯ’ವನ್ನು ಕಾಣುವ ಮುನ್ನ ಇದೇ ಸತ್ಯವೆಂದು ನಿರ್ಧರಿಸುವುದರಿಂದ ’ಸತ್ಯ’ಕ್ಕೆ ಅಪಚಾರವಾಗಬಹುದು. ಕೆಲವು ಮಂದಿಯ ತಪ್ಪು ಪರಿಕಲ್ಪನೆಗಳನ್ನೇ ಗಾಂಧೀ ಸತ್ಯವೆಂದು ನಂಬಿದ್ದರು: “ಭಾರತದಲ್ಲಿ ಹಿಂದೂ-ಮುಸ್ಲಿಂ ಎಂಬ ಎರಡು ಪಂಗಡಗಳಿವೆ”, “ಹರಿಜನರು ಹಿಂದೂಧರ್ಮಕ್ಕೆ ಸೇರಿದವರು”, “ಕುಟುಂಬ ವ್ಯವಸ್ಥೆಯಿಂದ ಉಚ್ಚಾಟಿತರಾದ ವಿಧವೆಯರು, ಮಹಿಳೆಯರು ಸೇವಾಗ್ರಾಮದಲ್ಲಿ ಕ್ಷಯರೋಗಿಗಳ ಸೇವೆಗೆ ತೊಡಗಬೇಕು” ಇತ್ಯಾದಿ. ಇಂಥವನ್ನೆಲ್ಲ ಸತ್ಯವೆಂದು ನಂಬುವ ಸಮಾಜ ಕ್ರಮೇಣ ಕೋಮು ಗಲಭೆ, ಜಾತಿ ವೈಷಮ್ಯ, ಸೂಳೆಗಾರಿಕೆಗಳನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಗಾಂಧೀ, ಬಸವಣ್ಣನಂಥವರು ಎಂದೂ ಒಂದು ಸಮಾಜದ ನಾಯಕರುಗಳಾಗಲಾರರು. ಏಕೆಂದರೆ ಅವರು ತಮ್ಮ ಪ್ರಯೋಗಗಳಲ್ಲಿ ಸಾವಿರ ತಪ್ಪುಗಳಿಂದಲೇ ’ಸತ್ಯ’ದತ್ತ ಹೆಜ್ಜೆ ಇಡುವ ಸಂಕಲ್ಪ ಹೊಂದಿರುವ ಸಾಧಕರು, ಜಿಜ್ಞಾಸುಗಳು. ಇಂಥವರನ್ನು ಹಿಂಬಾಲಿಸುವ ಸಮಾಜವು ಇವರಂತೆ ಸಾವಿರ ತಪ್ಪು ಹೆಜ್ಜೆಗಳನ್ನಿಟ್ಟು ಬಳಿಕ ಸಾವಿರದ ಒಂದನೆ ಹೆಜ್ಜೆ ಇಡಲಾರದು. ಅಂತಹ ಸಮಾಜವು ಆ ಹಲ ಕೆಲವು ತಪ್ಪು ಹಾದಿಗಳಲ್ಲಿ ಸಿಗುವ ಸುರಕ್ಷಿತ ಜಾಗಗಳಲ್ಲಿ ಸ್ಥಗಿತಗೊಳ್ಳುತ್ತದೆ. ಆದ್ದರಿಂದಲೇ ಇವರ ಹೆಸರಿನಲ್ಲಿ ಹುಟ್ಟಿದ ಚಳವಳಿಗಳು ಏನನ್ನೂ ಸಾಧಿಸದೇ ಯಾವುದೋ ಅಂಗವೈಕಲ್ಯಕ್ಕೆ ಗುರಿಯಾದಂತೆ ಕಾಣಿಸುವುದು. ಇಲ್ಲಿ ಮಹಾತ್ಮರುಗಳ ತಪ್ಪೂ ಇಲ್ಲದಿಲ್ಲ. ತಮ್ಮ ’ಮಹಾತ್ಮಾ’ ಪಟ್ಟವನ್ನು ಕಳೆದುಕೊಳ್ಳಲು ಇಚ್ಛಿಸದ ಇವರು ತಮ್ಮ ’ಸತ್ಯ’ವನ್ನು ತಾವು ತಲುಪುವ ಮುನ್ನವೇ ಸಮಾಜವನ್ನು ಆ ದಿಕ್ಕಿನಲ್ಲಿ ನಡೆಸುವ ಹುಂಬತನ ತೋರಿಸಿ ಹಲವು ಅನರ್ಥಗಳಿಗೆ ಕಾರಣರಾದರು ಎಂದು ಶ್ರೀರಜನೀಶರು ಇಲ್ಲಿ ಅಭಿಪ್ರಾಯ ಪಡುವರು (ಇಂಥದೇ ಅಭಿಪ್ರಾಯವನ್ನು ತನ್ನ ಕಾಲದ ಕ್ರಿಶ್ಚಿಯನ್ನರಿಂದ ’ಪಾಪಿ’ ಎಂದು ಕರೆಸಿಕೊಂಡಿದ್ದ ಫ್ರೆಡರಿಕ್ ನೀಷೆ ಸಹ ಯೇಸು ಹಾಗು ಇತರ ಯಹೂದಿ ಅನುಭಾವಿಗಳ ಬಗ್ಗೆ ಹೊಂದಿದ್ದ). ಆ ಕಾರಣಕ್ಕಾಗಿ ಶ್ರೀರಜನೀಶರು ಗಾಂಧೀ ನಂಬಿದ್ದ ಮೌಲ್ಯಗಳನ್ನು ತೀವ್ರವಾದ ವಿಮರ್ಶೆಗೆ ಒಳಪಡಿಸಿ ದೇಶದಾದ್ಯಂತ ಕುಖ್ಯಾತಿ ಹೊಂದಿದರು.

ಒಬ್ಬ ವ್ಯಕ್ತಿಗೆ ಪ್ರಖ್ಯಾತಿ ನೀಡುವ ಮೂಲಕ, ’ಮಹಾತ್ಮ’ ಪಟ್ಟದಲ್ಲಿ ಕೂರಿಸುವ ಮೂಲಕ ಒಂದು ಸಮಾಜ ಹೇಗೆ ತನ್ನ ವಿಕಲತೆಯನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುವುದೋ ಹಾಗೆಯೇ ಒಬ್ಬ ವ್ಯಕ್ತಿಯ ಮೇಲೆ ಅಪಖ್ಯಾತಿ, ಕಳಂಕಗಳನ್ನು ಹೊರಿಸುವ ಮೂಲಕವೂ ಸಮಾಜವು ತನ್ನೊಳಗಿನ ಖಾಲಿತನವನ್ನು ಆಗಾಗ ಬಯಲು ಮಾಡುತ್ತಿರುತ್ತದೆ. ನಿಜವಾದ ಶ್ರದ್ಧಾವಂತನಿಗೆ ತಾನು ಶ್ರದ್ಧೆಯಿರಿಸಿಕೊಂಡಿರುವ ವ್ಯಕ್ತಿಯ ಬಗ್ಗೆ, ತತ್ವದ ಬಗ್ಗೆ ಯಾವುದೇ ಮೂಲೆಯಿಂದ ಏನೇ ಅಭಿಪ್ರಾಯ ಕೇಳಿ ಬಂದರೂ ಅಂತಹ ಅಭಿಪ್ರಾಯದ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎಂದು ಕಾತರತೆ ಉಂಟಾಗುತ್ತದೆ. ಇದುವೆ ಶ್ರದ್ಧೆಯ, ಪ್ರೀತಿಯ ಲಕ್ಷಣ. ಪ್ರೀತಿಸುವವನು ತಾನು ಪ್ರೀತಿಸುವ ವಸ್ತುವಿನ ಒಂದೊಂದು ಅಣುವನ್ನೂ, ಪ್ರತಿಯೊಂದು ಆಯಾಮವನ್ನೂ ಬೆದಕಲಾರಂಭಿಸುತ್ತಾನೆ. ಆದರೆ ಒಮ್ಮೆ ಪ್ರೀತಿ ಹೊರಟುಹೋದ ಮೇಲೆ ತಾನು ಪ್ರೀತಿಸುವ ತತ್ವದ ಬಗ್ಗೆ ಹೊಗಳಿಕೆ ಕೇಳಿಬಂದಾಗ ಅಹುದಹುದೆಂದು ತಲೆದೂಗಿಸಿ ತೂಕಡಿಸುವುದು ಹಾಗು ತೆಗಳಿಕೆ ಕೇಳಿಬಂದಾಗ ಕೆರಳಿ ನಿಂತು ಹಿಂಸಾಚಾರಕ್ಕೆ ತೊಡಗುವುದು ಅಂತಹ ವ್ಯಕ್ತಿಯ ವಿಧಿಯಾಗಿಬಿಡುತ್ತದೆ. ಗಾಂಧಿಯನ್ನು ಆಳವಾಗಿ ಅಧ್ಯಯಿಸಿದ್ದ ಶ್ರೀರಜನೀಶರು ಗಾಂಧಿಯ ವಿಚಾರಗಳನ್ನು ತೀವ್ರವಾದ ಶೋಧನೆಗೆ ಒಳಪಡಿಸಬೇಕು ಎಂದು ನಿರ್ಧರಿಸಿದಾಗ ಅವರ ಮೇಲೆ ಕಲ್ಲು ತೂರಾಟ ನಡೆಸಿದ ಅಹಿಂಸಾವಾದಿಗಳ ಮನಸ್ಸಿನಲ್ಲಿ ಗಾಂಧಿಯ ಬಗೆಗಿನ ಶ್ರದ್ಧೆ ಹೊರಟು ಹೋಗಿತ್ತು ಅಥವ ದುರ್ಬಲವಾಗಿತ್ತು ಎನಿಸುತ್ತದೆ. ಆ ದೌರ್ಬಲ್ಯವನ್ನು ಮುಚ್ಚಿಟ್ಟುಕೊಳ್ಳಲು ಅವರು ಶ್ರೀರಜನೀಶರ ಮೇಲೆ ಕುಖ್ಯಾತಿಯನ್ನು ಹೊರಿಸಿದರು. ಆಗ ಶ್ರೀರಜನೀಶರು “ನನಗೆ ನಿಮ್ಮ ಮೆಚ್ಚುಗೆ, ಮಹಾತ್ಮ ಪಟ್ಟಗಳು ಬೇಕಿಲ್ಲ. ನನ್ನ ಮನಸ್ಸಿನಲ್ಲಿ ಅಂಥ ಆಸೆ ಕಿಂಚಿತ್ತಾದರೂ ಇದ್ದಿದ್ದರೆ ಗಾಂಧಿಯನ್ನು ಕುರಿತು ಹೀಗೆಲ್ಲ ವಿವೇಚನೆ ಮಾಡುವ ಗೊಡವೆಗೇ ಹೋಗುತ್ತಿರಲಿಲ್ಲ” ಎಂದು ಉತ್ತರಿಸಿದ್ದರು.

ಇಂದಿನ ಜಾಗತೀಕರಣದ ಅಪಾಯವೆಂದರೆ ಅದು ಎಲ್ಲವನ್ನೂ ಒಂದು ಫ್ಯಾಶನ್ ಆಗಿ, ಪ್ರತಿಷ್ಠೆಯ ಸಂಕೇತವನ್ನಾಗಿ ಮಾರ್ಪಡಿಸಬಲ್ಲದು. ಅದು ಅಧ್ಯಾತ್ಮ, ತತ್ವಜ್ಞಾನ, ಜಾನಪದ, ಸಾಹಿತ್ಯ, ಶಾಸ್ತ್ರೀಯ ಸಂಗೀತ, ಸೈಕೋಥೆರಪಿ ಹಾಗು ಎಲ್ಲ ಮನುಷ್ಯ ಸಹಜ ಭಾವನೆಗಳನ್ನೂ ಮಾರುಕಟ್ಟೆಯ ಸರಕಿನಂತೆ, ಒಂದು ಅಲಂಕಾರದಂತೆ, ಒಂದು ಮನರಂಜನೆಯ ವಸ್ತುವಿನಂತೆ ನಡೆಸಿಕೊಳ್ಳಬಲ್ಲದು. ಅವುಗಳನ್ನು ಹಾಗೆ ಲಘುವಾಗಿ ಪರಿಗಣಿಸದೆ ನಮ್ಮ ಅಂತರಂಗದ ಸಾಧನೆಯ ಪರಿಕರಗಳನ್ನಾಗಿ ಕಾಣದೇ ಹೋದಾಗ ನಮ್ಮಲ್ಲಿ ಭ್ರಷ್ಟತೆಯೆಂಬುದು ಮೊಳೆಯುತ್ತದೆ. ಶ್ರೀರಜನೀಶರಿಗೆ ತಮಗಿದ್ದ ವಿದ್ಯೆ, ಪ್ರತಿಭೆ, ಸಂಪರ್ಕ, ಅವಕಾಶಗಳನ್ನು ದುಡಿಸಿಕೊಂಡು ಇಂದಿನ ಬಾಬಾಗಳನ್ನು, ಗುರೂಜಿಗಳನ್ನು, ಸ್ವಾಮೀಜಿಗಳನ್ನು ಮೀರಿಸುವ ಹಾಗೆ ಹಣ, ಕೀರ್ತಿ, ಅಧಿಕಾರಗಳನ್ನು ಸಂಪಾದಿಸುವುದು ಕಷ್ಟವೇನೂ ಆಗಿರಲಿಲ್ಲ. ತಮ್ಮ ತಾತ್ವಿಕ ಶ್ರದ್ಧೆ ಹಾಗು ಪ್ರಾಮಾಣಿಕತೆಗಳೊಂದಿಗೆ ಎಂದೂ ರಾಜಿ ಮಾಡಿಕೊಳ್ಳದ ಶ್ರೀರಜನೀಶರು ಎಲ್ಲ ಪ್ರತಿಷ್ಠಿತ ಶಕ್ತಿಗಳ ವೈರವನ್ನು ಕಟ್ಟಿಕೊಂಡರು. ಅವರು ಹಲವು ಆರೋಪ, ಅಪಕೀರ್ತಿಗಳಿಗೆ ಗುರಿಯಾದದ್ದು ಅಚಾತುರ್ಯ ವಶದಿಂದಲ್ಲ. ಪ್ರತಿಷ್ಠಿತ ಶಕ್ತಿಗಳು, ಅವರೊಡನೆ ವಾಗ್ವಾದ ನಡೆಸಲಾಗದೇ, ಅವರೊಳಗಿನ ಬಂಡಾಯದ ಪ್ರವೃತ್ತಿ ಹಾಗು ನಿರ್ದಾಕ್ಷಿಣ್ಯವಾದ ಸ್ವಭಾವಗಳನ್ನು ಸ್ವೇಚ್ಛಾಚಾರ, ಸರ್ವಾಧಿಕಾರಗಳೆಂದು ಬಿಂಬಿಸಿದವು.

ಈ ಹಿಂದೆ ಹ್ಯೂಮಿಲನ್ ಎಂಬ ರಜನೀಶ್‌ರ ಶಿಷ್ಯನೊಬ್ಬ ’ರಜನೀಶ್: ದಿ ಗಾಡ್ ದಟ್ ಫೇಲ್ಡ್’ ಎಂಬ ಕೃತಿಯನ್ನು ಬರೆದಿದ್ದ. ಯಾವುದಕ್ಕೂ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸದ, ಯಾವುದೇ ಒಳನೋಟಗಳನ್ನೂ ಹೊಂದಿರದ ಆ ಪೂರ್ವಗ್ರಹ ಪೀಡಿತ ಕೃತಿಯನ್ನೇ ಪ್ರಮಾಣ ಗ್ರಂಥವೆಂದು ಭಾವಿಸಿ ಬಿ.ಆರ್. ಲಕ್ಷ್ಮಣ ರಾವ್ ’ರಜನೀಶ್ ನಿಜರೂಪ’ ಎಂದು ಕನ್ನಡಕ್ಕೆ ಅನುವಾದಿಸಿದ್ದರು. ರಜನೀಶರ ಅಂಗರಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಹ್ಯೂಮಿಲನ್ ರಜನೀಶರ ಆಶ್ರಮದಲ್ಲಿ ಧ್ಯಾನ ಪದ್ಧತಿಯ ಬಹುಮುಖ್ಯವಾದ ಅಂಗವಾದ ಸಮ್ಮೋಹನ (ಹಿಪ್ನೋಸಿಸ್) ಪ್ರಯೋಗದಲ್ಲಿ ಬಾಹ್ಯಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದ ಸಾಧಕರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದನಂತೆ. ಆಶ್ರಮದಲ್ಲಿ ಅವನಿಗೆ ಆ ಜವಾಬ್ದಾರಿಯನ್ನು ವಹಿಸಲಾಗಿತ್ತು. ಸಾಧಕ ಒಂದು ಹಂತವನ್ನು ತಲುಪಿದ ಮೇಲೆ ಅವನ ಯೋಗಕ್ಷೇಮ ನೋಡಿಕೊಳ್ಳಬಲ್ಲ ಇಂತಹ ಜನ ಅವನ ಸುತ್ತ ಯಾವಾಗಲೂ ಇರಬೇಕು ಎಂದು ಯೋಗಶಾಸ್ತ್ರಗಳು ಹೇಳುತ್ತವೆ. ಏಕೆಂದರೆ ಸಾಧನೆಯ ಒಂದು ಹಂತದಲ್ಲಿ ಸಾಧಕ ತುಂಬ ಸೂಕ್ಷ್ಮವಾದ ಸ್ಥಿತಿಯಲ್ಲಿ ಬದುಕುತ್ತಿರುತ್ತಾನೆ (ಬಾಲವತ್, ಜಡವತ್, ಉನ್ಮಾದವತ್, ಪಿಶಾಚವತ್ - (ಬಾಲಕನಂತೆ, ಜಡನಂತೆ, ಹುಚ್ಚನಂತೆ, ಪಿಶಾಚಿಯಂತೆ ವರ್ತಿಸಬಹುದು) - ನಾರದ ಭಕ್ತಿ ಸೂತ್ರ). ಆಗ ಯಾವ ಸಮಯದಲ್ಲಾದರೂ ಅವನ ಚಿತ್ತಸ್ಥಿತಿ ಅವನನ್ನು ಹುಚ್ಚಿನತ್ತ ಇಲ್ಲವೆ ಸಾವಿನತ್ತ ಕೊಂಡೊಯ್ಯಬಹುದು. ಶ್ರೀರಾಮಕೃಷ್ಣರ ಸಾಧನೆಯ ಘಟ್ಟದಲ್ಲೂ ಹೃದಯರಾಮ ಎಂಬ ಅವರ ಸೋದರಳಿಯ ಸದಾಕಾಲ ಅವರ ಬಳಿ ಇದ್ದು ಆರೈಕೆ ಮಾಡುತ್ತಿದ್ದ. ಆ ಸಮ್ಮೋಹನಾವಸ್ಥೆಯಲ್ಲಿ ಶ್ರೀರಜನೀಶರಿಗೆ ಸಾಧಕನ ಆಧ್ಯಾತ್ಮಿಕ ಸಾಧ್ಯತೆಗಳು ಗೋಚರವಾಗುತ್ತಿದ್ದವಂತೆ. ಹ್ಯೂ ಮಿಲನ್‌ನಲ್ಲಿ ರಜನೀಶರಿಗೆ ಅಂತಹ ಯಾವ ಸಾಧ್ಯತೆಗಳೂ ಗೋಚರಿಸಲಿಲ್ಲ. (ಇಂಥವರನ್ನು ಜೈನಶಾಸ್ತ್ರಗಳು ’ದೂರಭವ್ಯ’ರು ಎನ್ನುತ್ತವೆ. ದೂರಭವ್ಯರೆಂದರೆ ಸಮಾಧಿಗೆ, ಮುಕ್ತಿಗೆ ಇನ್ನೂ ಪಕ್ವವಾಗದ ಜೀವಗಳು ಎಂದರ್ಥ). ಹಾಗಾಗಿ ರಜನೀಶ್ ಆತನಿಗೆ ಧ್ಯಾನ ಸಾಧನೆಗಳನ್ನೇನೂ ಬೋಧಿಸದೇ ಸಾಧಕರ ಸೇವೆ ಮಾಡಿಕೊಂಡಿರು ಮುಂದೆ ಶ್ರೇಯಸ್ಸುಂಟಾಗುತ್ತದೆ ಎಂದಿದ್ದರು.

ಆಮೇಲೆ ಆಶ್ರಮ ಅಮೆರಿಕಾಗೆ ವರ್ಗವಾದ ಮೇಲೆ ಹ್ಯೂಮಿಲನ್‌ನ ಕೆಲಸವನ್ನು ಬೇರೆಯವರು ನಿರ್ವಹಿಸಲಾರಂಭಿಸಿದ್ದರಿಂದ ಆಶ್ರಮದಲ್ಲಿ ಆತ ನಿರುದ್ಯೋಗಿಯಾದನಂತೆ. ಆ ಸಿಟ್ಟನ್ನು ತೀರಿಸಿಕೊಳ್ಳಲು ಆಶ್ರಮದಿಂದ ಹೊರ ಬಂದ ಕೂಡಲೆ ಆತ ರಜನೀಶರ ಬಗ್ಗೆ ಇಲ್ಲಸಲ್ಲದ್ದನ್ನು ಬರೆದು ಪ್ರಕಟಿಸಿದ. ಉದಾಹರಣೆಗೆ, ಶ್ರೀರಜನೀಶರ ಭಾವವಿರೇಚಕ ಧ್ಯಾನ ಪದ್ಧತಿಯಲ್ಲಿ ಹಾಡುವ, ಕುಣಿಯುವ ಮೂಲಕ ಚೈತನ್ಯದ ಸ್ಪಂದನೆಯನ್ನು ಉಂಟು ಮಾಡುವ ತಂತ್ರಗಳಿವೆ (ಈ ಸಾಧನೆಗಳ ಕುರಿತು ಅಭಿನವಗುಪ್ತನ ’ತಂತ್ರಾಲೋಕ’ದಲ್ಲಿ ಹೆಚ್ಚಿನ ವಿವರ, ಉಲ್ಲೇಖಗಳು ಸಿಗುತ್ತವೆ). ಪ್ರತಿಸಂಜೆ ಹಲವು ಸಾಧಕರು ಶ್ರೀರಜನೀಶರ ಸಮ್ಮುಖದಲ್ಲಿ ಭಾವವಿರೇಚಕ ಧ್ಯಾನದಲ್ಲಿ ತೊಡಗುತ್ತಿದ್ದರಂತೆ. ಹ್ಯೂಮಿಲನ್ ಈ ಪ್ರಯೋಗವನ್ನು ಕುರಿತು ಬರೆಯುತ್ತ “ಪ್ರತಿರಾತ್ರಿ ರಜನೀಶ ಕನಿಷ್ಟವೆಂದರೂ ೧೦ ಜನ ಯುವತಿಯರೊಂದಿಗೆ ನರ್ತಿಸುತ್ತಿದ್ದ” ಎಂದು ಬರೆದಿದ್ದಾನೆ. ಇಂತಹ ಎಷ್ಟೋ ಅಪವ್ಯಾಖ್ಯಾನಗಳು ಆ ಪುಸ್ತಕದ ತುಂಬ ಕಾಣಿಸುತ್ತವೆ. ಆ ಕಾಲದಲ್ಲಿ ರಜನೀಶರ ಬಗ್ಗೆ ಏನನ್ನು ಬರೆದರೂ ಸುಲಭವಾಗಿ ಸುದ್ದಿಯಾಗುವ ಪರಿಸ್ಥಿತಿ ಏರ್ಪಟ್ಟಿತ್ತು. ಆ ಸ್ಥಿತಿ ಈಗಲೂ ಇದೆ. ಒಮ್ಮೆ ಆ ಪುಸ್ತಕದ ಪುಟಗಳನ್ನು ತಿರುವಿ ಹಾಕಿದ ರಜನೀಶರು “ವಿವೇಕಿಯಾದವನು ಅವರಿವರ ಬಗ್ಗೆ ಬರೆಯುವ ಗೊಡವೆಗೆ ಹೋಗದೇ ತನ್ನ ಅನುಭವಗಳ ಬಗ್ಗೆ ಬರೆದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾನೆ. ಅಪ್ರಾಮಾಣಿಕರು ಮಾತ್ರ ತಾವು ಕಂಡದ್ದೇ ಸತ್ಯವೆಂದು ಘಂಟಾಘೋಷವಾಗಿ ಹೇಳಿಕೊಳ್ಳುವರು. ಪ್ರಾಮಾಣಿಕನಾದವನು ತನ್ನ ಅನುಭವಗಳನ್ನೂ ಕೂಡ ಅನುಮಾನಿಸುತ್ತಲೇ ಹೇಳಿಕೊಳ್ಳುತ್ತಾನೆ. ಶಿವ ನಿಜಕ್ಕೂ ಪ್ರಾಮಾಣಿಕನಾಗಿದ್ದರೆ ’ರಜನೀಶ್: ದಿ ಗಾಡ್ ದಟ್ ಫೇಲ್ಡ್’ ಎಂದು ಬರೆಯುವ ಬದಲು ’ಶಿವ: ದಿ ಗಾರ್ಡ್ ದಟ್ ಫೇಲ್ಡ್’ ಎಂದು ಬರೆದಿರುತ್ತಿದ್ದ” ಎಂದಿದ್ದರು (ಶಿವ ಎಂಬುದು ಸನ್ಯಾಸ ದೀಕ್ಷೆಯ ನಂತರ ರಜನೀಶ್ ಅವನಿಗೆ ಇಟ್ಟಿದ್ದ ಹೆಸರು).

ಮಾರುಕಟ್ಟೆಯಲ್ಲಿ ಇಂತಹ ಹಲವು ಪುಸ್ತಕಗಳು ಸಿಗುತ್ತವೆ. ಟಿಂ ಗೆಸ್ಟ್‌ನ ’ಮೈ ಲೈಫ್ ಇನ್ ಆರೆಂಜ್’,(೨೦೦೪) ಕ್ಯಾಥರೀನ್ ಜೇನ್ ಸ್ಟ್ರೋಕ್‌ಳ ’ಬ್ರೇಕಿಂಗ್ ದಿ ಸ್ಪೆಲ್: ಮೈ ಲೈಫ್ ಆಸ್ ಎ ರಜನೀಶೀ ಅಂಡ್ ಲಾಂಗ್ ಜರ್ನಿ ಬ್ಯಾಕ್ ಟು ಫ್ರೀಡಮ್’ (೨೦೦೯) ಇತ್ಯಾದಿ. ಶ್ರೀರಜನೀಶರ ’ಒಬ್ಬ ನಿಜವಾದ ಸಾಧಕ ಗುರುವಿನ ಮಾತುಗಳನ್ನು ಆಲೋಚಿಸದೇ, ಪ್ರಶ್ನಿಸದೇ ಮರುಮಾತಿಲ್ಲದೇ ಅನುಸರಿಸುತ್ತಾನೆ’ ಎಂಬ ತರಹದ ಮಾತುಗಳನ್ನು, ಪೂರ್ವದ ಅನುಭಾವ ಪರಂಪರೆಯ ಪರಿಚಯವಿಲ್ಲದ ಪಶ್ಚಿಮದ ಬಹುತೇಕ ಲೇಖಕರು - ಸ್ಟ್ರೋಕ್‌ಳೂ ಒಳಗೊಂಡಂತೆ - ಇದು ಸರ್ವಾಧಿಕಾರಿಗಳು ಮಾತ್ರ ಹೇಳುವ ಮಾತುಗಳೆಂದು ವ್ಯಾಖ್ಯಾನಿಸಿದರು. ರಜನೀಶ್‌ಪುರಂನಲ್ಲಿ ಇದ್ದಷ್ಟೂ ದಿನ ಶ್ರೀರಜನೀಶರ ಬೆನ್ನ ಹಿಂದೆ ನಿಂತು ಕತ್ತಿ ಮಸೆಯುತ್ತಿದ್ದ ಕ್ಯಾಥರೀನ್ ಜೇನ್ ಸ್ಟ್ರೋಕ್, ಅವರ ಹೆಸರು ಹೇಳಿಕೊಂಡು ಹಲವು ಅಪರಾಧಗಳನ್ನು ಮಾಡಿದ್ದಳು, ರಜನೀಶರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನ ಕೊಲೆ ಪ್ರಯತ್ನ ನಡೆಸಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಳು. ಇಂಥವಳು ರಜನೀಶರ ಚಳವಳಿಯ ಬಗ್ಗೆ ಏನೇ ಬರೆದರೂ ಕೊನೆಗೆ “ನನ್ನನ್ನು ಯಾರೂ ವಂಚಿಸಲಿಲ್ಲ, ನಾನೇ ವಿಸ್ಮೃತಿಯಲ್ಲಿದ್ದೆ, ನನಗೆ ನಾನೇ ವಂಚನೆ ಮಾಡಿಕೊಂಡೆ” ಎಂದು ಸ್ವವಿವೇಚನೆ ಮಾಡಿಕೊಳ್ಳುವುದು ಈ ಕೃತಿಯ ವಿಶೇಷ. ತನ್ನ ಸೋಲು ಅಧಃಪತನಗಳಿಗೆ ಇನ್ನೊಬ್ಬ ವ್ಯಕ್ತಿಯೋ, ವ್ಯವಸ್ಥೆಯೋ ಕಾರಣವೆಂದು ಸಮಜಾಯಿಷಿ ನೀಡುವ ವ್ಯಕ್ತಿ ಅಥವ ಸಮಾಜ ತನ್ನ ಬೆಳವಣಿಗೆಯನ್ನು ನಿಲ್ಲಿಸಿಬಿಟ್ಟಿರುತ್ತದೆ.

“ನಮ್ಮ ಸಾಮಾಜಿಕ ಹಾಗು ಕೌಟುಂಬಿಕ ವ್ಯವಸ್ಥೆಗಳು ಪುರುಷ ಯಾಜಮಾನ್ಯ ಹಾಗು ಖಾಸಗೀ ಆಸ್ತಿಯ ಪ್ರಲೋಭನೆಗಳ ಫಲಶ್ರುತಿಗಳಾಗಿವೆ. ಇಂಥ ವ್ಯವಸ್ಥೆ ರೂಪಿಸುವ ಮೌಲ್ಯಗಳು ತನ್ನೊಳಗೆ ಹಲವು ಬಿರುಕುಗಳನ್ನು ಉಳಿಸಿಕೊಂಡಿರುತ್ತವೆ” ಎಂಬ ಕಾರ್ಲ್ ಮಾರ್ಕ್ಸ್‌ನ ಸಿದ್ಧಾಂತವನ್ನು ಒಪ್ಪುವ ಶ್ರೀರಜನೀಶರು ತಮ್ಮ ಬಾಲ್ಯದ ದಿನಗಳಿಂದಲೂ ಹೊರಗಿನ ಒತ್ತಾಯಕ್ಕೆ ಮಣಿದು ಯಾವುದೇ ಕೆಲಸ ಅಥವ ನಿರ್ಧಾರಗಳನ್ನು ಕೈಗೊಂಡವರಲ್ಲ. ಅವರು ತಾವು ನಂಬಿದ್ದ ತತ್ವದೊಂದಿಗೆ ಎಂದೂ ರಾಜೀ ಮಾಡಿಕೊಳ್ಳಲಿಲ್ಲ. ಮೊದಲಿನಿಂದಲೂ ಸಮಾಜ ಹಾಗು ಕುಟುಂಬಗಳಿಂದ ಏನನ್ನೂ ನಿರೀಕ್ಷಿಸದ ಕಾರಣ ಇವರ ವರ್ತನೆ ಕೆಲವು ಸಲ ಅತಿರೇಕದ್ದೆನಿಸಿದರೂ ಹುಂಬತನದಂತೆ ಕಾಣಿಸುತ್ತಿರಲಿಲ್ಲ. ಒಂದೆಡೆ ಶ್ರೀರಜನೀಶರು ತಮ್ಮ ಕಾಲೇಜು ವಿದ್ಯಾಭ್ಯಾಸದ ಮೊದಲ ದಿನಗಳನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ:

“ಸಾಗರ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ತ್ರಿಪಾಠಿ ನನಗೆ ವಿದ್ಯಾರ್ಥಿವೇತನವನ್ನು ಕೊಡಿಸಿದರು, ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟು ಉಪಕಾರ ಮಾಡಿದರು. ನಮ್ಮ ಮೊದಲ ಭೇಟಿಯಲ್ಲೇ ನನ್ನ ಅವರ ಸ್ನೇಹ ಬೆಳೆಯಿತು. ಮೊದಲ ದಿನ ವಿಶ್ವವಿದ್ಯಾಲಯಕ್ಕೆ ಕಾಲಿಟ್ಟಾಗ ಅವರು ನನ್ನ ದಾಡಿಯನ್ನು ಕಂಡು “ಅದೇಕೆ ಹಾಗೆ ಗಡ್ಡ ಬೆಳೆಸಿರುವೆ?” ಎಂದು ಕೇಳಿದರು. ಅದಕ್ಕೆ ನಾನು “ಇದೆಂಥ ಪ್ರಶ್ನೆ! ನಾನು ಬೆಳೆಸಿದ್ದಲ್ಲ. ಅದೇ ಸಹಜವಾಗಿ ಬೆಳೆದಿದ್ದು. ಹಾಗೆ ನೋಡಿದರೆ ನೀವು ಏಕೆ ಗಡ್ಡವನ್ನು ಬೋಳಿಸಿಕೊಂಡಿದ್ದೀರಿ ಎಂದು ನಾನು ನಿಮ್ಮನ್ನು ಕೇಳಬೇಕು”, ಎಂದು ಕೇಳಿದೆ. ಅವರು ನನ್ನಿಂದ ಈ ತರಹದ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ ಸರಿ ಹಾಗಿದ್ದರೆ, ಇನ್ನು ನಿನ್ನ ತಂಟೆಗೆ ಬರುವುದಿಲ್ಲ ಎಂಬ ಅರ್ಥ ಬರುವ ಮಾತುಗಳನ್ನಾಡಿದರು. “ಇಲ್ಲ. ನೀವು ಬೇಕಾದ ಪ್ರಶ್ನೆಗಳನ್ನು ಕೇಳಬಹುದು. ಆದರೆ ನಾನು ನೀಡುವ ಉತ್ತರಗಳನ್ನು ಸ್ವೀಕರಿಸುವ ಧೈರ್ಯ ನಿಮಗಿರಬೇಕು ಅಷ್ಟೇ. ನಾನೇನು ಪಾತಿ ಮಾಡಿ ನೀರು ಹಾಕಿ ಬೆಳೆಸುತ್ತಿರುವೆನೇ? ಹಾಗೆ ನೋಡಿದರೆ ನೀವೇ ದಿನಕ್ಕೆರಡು ಸಲ ಮುಖಕ್ಷೌರ ಮಾಡಿಸಿಕೊಂಡು ನಿಮ್ಮ ಮುಖಲಕ್ಷಣವನ್ನು ಹೆಂಗಸರ ಹಾಗೆ ಮಾಡಿಕೊಳ್ಳುತ್ತಿದ್ದೀರಿ”ಎಂದೆ. ಆಗ ಅವರು “ಏನೆಂದೆ?” ಎಂದು ಆಶ್ಚರ್ಯದಿಂದ ನನ್ನತ್ತ ನೋಡಿದರು. “ಅಲ್ಲದೆ ಮತ್ತೇನು? ಗಡ್ಡ ಬೆಳೆಸಿಕೊಂಡ ಹೆಣ್ಣಿನ ಮುಖಲಕ್ಷಣ ಎಷ್ಟು ವಿಕಾರವಾಗಿರುತ್ತದೋ ಹೆಂಗಸರಂತೆ ಕೆನ್ನೆಯನ್ನು ನುಣುಪಾಗಿಸಿಕೊಂಡಿರುವ ಗಂಡಸಿನ ಮುಖವೂ ನನ್ನ ಕಣ್ಣಿಗೆ ಅಷ್ಟೇ ವಿಕಾರವಾಗಿ ಕಾಣಿಸುತ್ತಿದೆ” ಎಂದು ಹೇಳಿದೆ. ಅವರಿಗೆ ಅಂದು ನಿಜಕ್ಕೂ ಗಾಬರಿಯಾಯಿತು. ಚಿಕ್ಕಂದಿನಿಂದ ನಮ್ಮನ್ನು ಹೇಗೆ ಬೆಳೆಸಿರುತ್ತಾರೆ ಎಂಬುದು ಮುಖ್ಯ. ಕಟ್ಟುಪಾಡುಗಳನ್ನು ಹೇರದೇ ಮಕ್ಕಳು ತಮ್ಮದೇ ತಿಳುವಳಿಕೆಯಿಂದ ಬೆಳೆಯಲು ಅವಕಾಶ ನೀಡಿದರೆ ಅವರಿಂದ ಲೋಕಕ್ಕೆ ಮಹಾ ಕಲ್ಯಾಣವಾಗುತ್ತದೆ. ಅಂತಹ ಮಕ್ಕಳು ಹೀಗೆ ವರ್ತಿಸುತ್ತಾರೆ. ಆ ವರ್ತನೆ ಮೇಲ್ನೋಟಕ್ಕೆ ಅಧಿಕಪ್ರಸಂಗದಂತೆ ಕಾಣಿಸಬಹುದು. ನಿಜವೇನೆಂದರೆ ಅಂಥ ಮಕ್ಕಳಿಗೆ ಹೆದರಿಕೆ, ಮುಖವಾಡತನ, ಕೃತಕ ಶಿಷ್ಟಾಚಾರಗಳನ್ನು ಕಲಿತಿರುವುದಿಲ್ಲ”. (ಟರ್ನಿಂಗ್ ಇನ್, ಅಧ್ಯಾಯ ೭)

ಇನ್ನೊಂದು ಪ್ರಸಂಗವಿದೆ, ಶ್ರೀರಜನೀಶರು ಇನ್ನೂ ಚಿಕ್ಕವರಿದ್ದಾಗ ಉದ್ದನೆಯ ಕೂದಲು ಕಿರಿಕಿರಿ ಆಗುತ್ತದೆಂದು ಒಮ್ಮೆ ತಲೆಯನ್ನೆಲ್ಲ ಪೂರ್ತಿ ಬೋಳಿಸಿಕೊಂಡು ಮನೆಗೆ ಬಂದಿದ್ದರು (ತಂದೆ ಸತ್ತಾಗ ಮಾತ್ರ ಮನೆಯ ಹಿರಿಯ ಮಗ ತಲೆ ಬೋಳಿಸಿಕೊಳ್ಳಬೇಕು ಎಂಬುದು ಒಂದು ಸಾಂಪ್ರದಾಯಿಕ ಕಟ್ಟುಪಾಡು). ಆಗ ಅಪ್ಪನ ಕೈಯಿಂದ ಬಾಸುಂಡೆ ಬರುವಂತೆ ಪೆಟ್ಟು ತಿಂದಿದ್ದ ಅವರು ಆ ಪ್ರಸಂಗವನ್ನು ನೆನೆದು “ಹೊಡೆತ ಬಿದ್ದ ಮೇಲೆ ನನಗೆ ನನ್ನ ಬಗ್ಗೆ ಪಶ್ಚಾತ್ತಾಪವಾಗಲಿ, ಅಪ್ಪನ ಬಗ್ಗೆ ಕೋಪವಾಗಲಿ ಬರಲೇ ಇಲ್ಲ” ಎಂದು ಹೇಳುತ್ತಾರೆ. ಕೆಲವು ಬಗೆಯ ಸಂಕಲ್ಪಗಳನ್ನು ಕೈಗೊಂಡಾಗ ಹೊರಗಿನ ಕೆಲವು ಆಕ್ರಮಣಗಳನ್ನು ಸಮಾಹಿತ ಮನಸ್ಸಿನಿಂದ ಅನುಭವಿಸಲೇ ಬೇಕಾಗುತ್ತದೆ. ಇಂತಹ ’ಜೀವನಸಿದ್ಧಾಂತ’ ಕೆಲವು ಸಲ ತನ್ನಿಷ್ಟದಂತೆ ಮದುವೆ-ಕುಟುಂಬಗಳನ್ನೂ ನಿರಾಕರಿಸಬಹುದು. ವಿದ್ಯಾಭ್ಯಾಸ ಮುಗಿದ ತಂದೆ-ತಾಯಿ ಮದುವೆಯ ಪ್ರಸ್ತಾಪವನ್ನು ಎತ್ತಿದಾಗ ಒಂದೇ ಮಾತಿಗೆ ನಿರಾಕರಿಸಿದ್ದಲ್ಲದೆ ಮನೆಯವರಿಗೆಲ್ಲ ತನ್ನ ನಿರ್ಧಾರದ ಬಗ್ಗೆ ಮನವರಿಕೆ ಮಾಡಿಸಿದರು. ಹಾಗೆ ಮದುವೆಯನ್ನು ನಿರಾಕರಿಸುವ ವ್ಯಕ್ತಿಯ ಬದುಕು ’ಮುಕ್ತಕಾಮದ ಜೀವನ’ವಾಗುವುದೋ ಅಥವ ’ಕಾಮಮುಕ್ತ ಜೀವನ’ವಾಗುವುದೋ ಎಂಬುದನ್ನು ಸಂದರ್ಭಗಳು ನಿರ್ಧರಿಸಬೇಕು. ರಜನೀಶರ ಸಂದರ್ಭದಲ್ಲಿ ಅದು ಕಾಮಮುಕ್ತವಾದ ಜೀವನವಾಯಿತು ಹಾಗು ಅವರ ಶಿಷ್ಯಕೋಟಿಯ ಸಂದರ್ಭದಲ್ಲಿ ಅವರ ಬದುಕುಗಳು ಮುಕ್ತಕಾಮದ ಮಟ್ಟಕ್ಕೆ ಇಳಿದವು.

ಶ್ರೀರಜನೀಶರಿಗೆ ತಾವು ನಂಬಿದ ತತ್ವಗಳ ಆಧಾರದ ಮೇಲೆ ಒಂದು ಸಮಾಜವನ್ನು ನಿರ್ಮಿಸಬೇಕು ಹಾಗು ಮನುಷ್ಯಜಾತಿ ಅಂತಹ ಸಮಾಜವನ್ನು ಅವಲಂಬಿಸಿ ಬದುಕಬೇಕು ಎಂಬ ಮಹತ್ವಾಕಾಂಕ್ಷೆ ಇರಲಿಲ್ಲ, ಆ ನಿಟ್ಟಿನಲ್ಲಿ ಅವರು ಕಿಂಚಿತ್ತೂ ಪ್ರಯತ್ನಿಸಿದವರಲ್ಲ. ಆದರೆ ಅವರ ತತ್ವಗಳಿಂದ ಪ್ರಭಾವಿತರಾದ ಅವರ ಲಕ್ಷಾಂತರ ಮಂದಿ ಸಂಗಡಿಗರು ಅಂಥದೊಂದು ಸಮಾಜವನ್ನು (ಕಮ್ಯೂನ್) ರೂಪಿಸಿಕೊಳ್ಳಲು ಹೊರಟಾಗ ಅದಕ್ಕೂ ಅವರು ಅಡ್ಡಿ ಪಡಿಸಲಿಲ್ಲ. ಒಂದು ಸಮಾಜ ಆ ಬಗೆಯ ತತ್ವವನ್ನು ಅಳವಡಿಸಿಕೊಳ್ಳುವ ಮಟ್ಟಿಗೆ ಪ್ರಬುದ್ಧವಾಗಿಲ್ಲದೇ ಹೋದರೆ ಅಂತಹ ಸಮಾಜ ಆ ತತ್ವವನ್ನು ಮಣ್ಣುಗೂಡಿಸಿ ತಾನೂ ಮಣ್ಣಾಗುತ್ತದೆ ಎಂದು ಅವರು ಮುಂದಾಲೋಚನೆ ಮಾಡಲಿಲ್ಲ. ಅಥವ ಆ ಸಮಾಜ ಆ ರೀತಿ ಹಾಳಾಗದಂತೆ ಮುಂಜಾಗ್ರತೆಯನ್ನೂ ವಹಿಸಲಿಲ್ಲ. ಈ ವಿಷಯದಲ್ಲಿ ಶ್ರೀರಜನೀಶರು ಸ್ವಲ್ಪ ಬೇಜವಾಬ್ದಾರಿಯಿಂದ ನಡೆದುಕೊಂಡರು ಎಂದರೂ ತಪ್ಪಾಗದು. ’ಈತ ಒಬ್ಬ ಹೊಣೆಗೇಡಿ’ ಎಂದು ಜನ್ಮ ನೀಡಿದ ತಂದೆ ಬಹು ಹಿಂದೆಯೇ ಇವರಿಗೆ ಬಿರುದು ನೀಡಿದ್ದರು. ನನ್ನದು, ನನ್ನವರು ಎಂಬ ಪ್ರೀತಿ ಮಮಕಾರಗಳಿದ್ದಾಗ ಮಾತ್ರ ಒಬ್ಬ ವ್ಯಕ್ತಿಗೆ ಹೊಣೆಗಾರಿಕೆ ಬರುತ್ತದೆ. “ಯಾರನ್ನೂ ಅವಲಂಬಿಸದೇ, ಯಾರನ್ನೂ ಬೀದಿಗೆ ತಂದು ನಿಲ್ಲಿಸದೇ ಹೊಣೆಗೇಡಿಗಳಂತೆ ಬದುಕಿ” ಎಂದು ಉಪದೇಶಿಸಿದ ಶ್ರೀರಜನೀಶರಿಗೆ ತಾನು ನಂಬಿದ್ದ ತತ್ವಗಳ ಬಗ್ಗೆಯಾಗಲಿ ಅಥವ ತನ್ನನ್ನು ನಂಬಿದ್ದ ಶಿಷ್ಯಕೋಟಿಯ ಬಗ್ಗೆಯಾಗಲಿ ಹೇಗೆ ತಾನೇ ಮಮಕಾರ, ಜವಾಬ್ದಾರಿಗಳಿರಲು ಸಾಧ್ಯ?

ಕಮ್ಯೂನ್‌ನ ಒಳಗಿದ್ದ ಶೀಲಾಳಂತಹ ದ್ರೋಹಿಗಳು ಮತ್ತು ಹೊರಗಿದ್ದ ರಾಜಕಾರಿಣಿಗಳು ಹಾಗು ಕ್ರಿಶ್ಚಿಯನ್ ಪಾದ್ರಿಗಳು ರಜನೀಶ್‌ಪುರವನ್ನು ನಾಶ ಪಡಿಸಿದರು. ಕೆಲವು ಸಲ ಇದು ೧೨ನೆಯ ಶತಮಾನದ ಕಲ್ಯಾಣದ ಕ್ರಾಂತಿಯನ್ನು ನೆನಪಿಸುತ್ತದೆ. ಕಲ್ಯಾಣಪಟ್ಟಣದಲ್ಲಿಯೂ ಬಸವಣ್ಣನ ವಿಚಾರಗಳು ಹೊಸತೊಂದು ಸಮಾಜದ ಕನಸು ಕಂಡಿತು. ಅದಕ್ಕಾಗಿ ಕಲ್ಯಾಣದಲ್ಲಿ ಅಪಾರ ಪ್ರಮಾಣದ ಸಂಪತ್ತನ್ನು ಗುಡ್ಡೆ ಹಾಕಿತು. ’ಬ್ರಾಹ್ಮಣ ಮೊದಲಾಗಿ, ಶೂದ್ರ ಕಡೆಯಾಗಿ’ ಸಮಾಜದ ಎಲ್ಲ ವರ್ಗಗಳನ್ನೂ ನಿರ್ದಾಕ್ಷಿಣ್ಯವಾಗಿ ಕಲ್ಯಾಣದಿಂದ ಹೊರಗೆ ಉಚ್ಚಾಟಿಸಿ ಅದು ಶರಣಮಾತ್ರರ ಕೇಂದ್ರವಾಯಿತು. ಕೊನೆಗೆ ಅಧಿಕಾರಸ್ಥ ಪುರೋಹಿತಶಾಹೀ ಕ್ರೌರ್ಯವನ್ನು ಹಾಗು ಆಂತರಿಕ ವಿಘಟನೆಯನ್ನು ಧರಿಸಿಕೊಳ್ಳಲಾರದೇ ಭಗ್ನವಾಯಿತು. ಆಮೇಲೆ ಮೇಲ್ವರ್ಗಗಳು ಆ ಭಗ್ನಾವಶೇಷದ ಅಮೂಲ್ಯ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡಿ, ಶೂದ್ರವರ್ಗವನ್ನು ಆಚೆಗಿಟ್ಟು ಮಠಗಳನ್ನು ಕಟ್ಟಿಕೊಂಡು ಬಸವಣ್ಣನನ್ನು ಹಾಡಿ ಹೊಗಳತೊಡಗಿದವು. ಈ ತರಹದ ಬೆಳವಣಿಗೆಗಳನ್ನು ಕಂಡು ಬಸವ-ಅಲ್ಲಮರಂತಹ ಅನುಭಾವಿಗಳು ಭ್ರಮನಿರಸನಗೊಂಡರೆಂದೋ, ಕೊಲೆಯಾದರೆಂದೋ, ಆತ್ಮ ಹತ್ಯೆ ಮಾಡಿಕೊಂಡರೆಂದೋ, ಪಲಾಯನಗೈದರೆಂದೋ ವ್ಯಾಖ್ಯಾನಿಸುವ ಯಾವ ಇತಿಹಾಸಕಾರನಿಗೂ, ಕವಿಗೂ, ಬಸವಾದಿಗಳು ಸರಿಯಾಗಿ ಅರ್ಥವಾಗಿಲ್ಲ ಎನಿಸುತ್ತದೆ. ಬಸವಾದಿ ಅನುಭಾವಿಗಳ ಅವತಾರದಿಂದಾಗಿ ಮನುಷ್ಯಪ್ರಜ್ಞೆಗೆ ತಾನಿರುವ ನೀಚ ಸ್ಥಿತಿಗೂ ಹಾಗು ಇರಬಹುದಾದ ಉನ್ನತ ನೆಲೆಗೂ ನಡುವೆ ಇರುವ ಅಪಾರವಾದ ಅಂತರ ಮೊದಲಬಾರಿಗೆ ಗೋಚರವಾಯಿತು. ಈ ದೊಡ್ಡ ಅಂತರವನ್ನು ಕಂಡು ತಲ್ಲಣಿಸಿದ್ದು ಬಸವ ಅಲ್ಲಮರಲ್ಲ. ಬದಲಿಗೆ ಆ ಕಾಲದ ಶರಣರು ಬಸವಾದಿಗಳನ್ನು ತಮ್ಮ ಹೀನ ಸ್ಥಿತಿಗೆ ಹೋಲಿಸಿಕೊಂಡು ಧೃತಿಗೆಟ್ಟರು. ತಮ್ಮ ಪರಿಭವಕ್ಕೆ ಬಸವಾದಿ ಪ್ರಮಥರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಅವರೆಲ್ಲ ಸೇರಿ ಕಲ್ಯಾಣಪಟ್ಟಣವನ್ನು ಹಾಳುಗೆಡವಿದರು. ಪ್ರತಿಯೊಬ್ಬ ಅನುಭಾವಿ ಹುಟ್ಟಿದಾಗಲೂ ಮನುಷ್ಯಜಾತಿ ಹೀಗೆ ಸೋಲು ಅವಮಾನಗಳನ್ನು ಅನುಭವಿಸಿ, ಅಂತಹ ಅನುಭಾವಿಯನ್ನು ’ಕಳಂಕಿತ’ನನ್ನಾಗಿ ಮಾಡುತ್ತಲೇ ವಿಕಾಸವಾಗುವುದೋ ತಿಳಿಯದು!

ಬುದ್ಧ, ಬಸವ, ಸಾಕ್ರಟೀಸ್, ಗಾಂಧಿಯಂತಹ ವಿಶಿಷ್ಟ ಚಿಂತಕರು ಸಮಾಜಕ್ಕೆ ಒಂದು ನಿರ್ದಿಷ್ಟ ರೂಪವನ್ನು ಕೊಡುವ ಕನಸು ಕಾಣುತ್ತಾರೆ. ಅದಕ್ಕಾಗಿ ಹಲವು ಯೋಜನೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಆ ಕನಸನ್ನು ನಿಜವಾಗಿಸುವ ಪ್ರಯತ್ನದಲ್ಲಿ ಅವರು ಪದೇ ಪದೇ ಸೋಲನ್ನನುಭವಿಸುತ್ತಾರೆ. ಇದನ್ನು ನಾವು ಚರಿತ್ರೆಯಲ್ಲಿ ಕಾಣಬಹುದು. ’ಕಮ್ಯೂನ್’ ಎಂಬ ಶ್ರೀರಜನೀಶರ ಚಳವಳಿಯೂ ನಮಗೆ ತಿಳಿದಂತೆ ಅಂಥದೊಂದು ಭಗ್ನ ಕನಸಾಗಿತ್ತು. ಸಾಮಾಜಿಕ ಚಿಂತಕರ ಇಂಥ ಪ್ರಯತ್ನಗಳನ್ನು ಕುರಿತೇ ಅಲ್ಲಮಪ್ರಭು ’ಅಮರದ ಹೊಲಬನರಿಯದೆ ಜಗವೆಲ್ಲ ಬರಡಾಯಿತ್ತು’ ಎಂದು ಲೇವಡಿ ಮಾಡುವುದು. ಏಕೆಂದರೆ ಅವನೂ ತನ್ನ ಕಾಲದಲ್ಲಿ ಇಂಥದೊಂದು ಕನಸು ಭಗ್ನಗೊಂಡುದಕ್ಕೆ ಸಾಕ್ಷಿಯಾಗಿದ್ದ. ’ಈ ವ್ಯಕ್ತಿ ವ್ಯಾಟಿಕನ್ನಿನ ವರ್ಚಸ್ಸನ್ನೇ ಮಂಕುಗೊಳಿಸುವ ಮಟ್ಟಕ್ಕೆ ಬೆಳೆಯುತ್ತಿದ್ದಾನೆ. ಇವನನ್ನು ಕೂಡಲೆ ಹತ್ತಿಕ್ಕಬೇಕು’ ಎಂದು ಪೋಪ್‌ನಿಂದ ಆದೇಶ ಪಡೆದಿದ್ದ ಅಂದಿನ ಅಮೆರಿಕನ್ ಪ್ರಭುತ್ವ ಇವರ ಮೇಲೆ ಕೊಲೆ, ಕಳ್ಳಸಾಗಾಣಿಕೆ, ವ್ಯಭಿಚಾರ, ಡ್ರಗ್ ಮಾಫಿಯಾ, ಮಾನಹಾನಿ, ತೆರಿಗೆ ವಂಚನೆ, ನ್ಯಾಯಾಂಗ ನಿಂದನೆ,.. ಹೀಗೆ ಒಟ್ಟು ೩೪ ಕೇಸುಗಳನ್ನು ದಾಖಲಿಸಿ ಜೈಲಿಗೆ ತಳ್ಳಿತು, ಇವರ ಆಶ್ರಮವನ್ನು ನಾಶಪಡಿಸಿತು. ಇದರಿಂದ ಶ್ರೀರಜನೀಶರು ಕಿಂಚಿತ್ತೂ ತಲ್ಲಣಿಸಲಿಲ್ಲ, ಪಲಾಯನ ಮಾಡಲಿಲ್ಲ ಪ್ರಭುತ್ವದೊಂದಿಗೆ ರಾಜೀಸಂಧಾನಕ್ಕಾಗಿ ಅಂಗಲಾಚಲಿಲ್ಲ. ತನಿಖೆ ವಿಚಾರಣೆಗಳಾದ ಮೇಲೆ ಸಿಐಎ ಹಾಗು ಎಫ್‌ಬಿಐಗಳಿಗೆ ಇವರ ವಿರುದ್ಧ ಒಂದು ಸಾಕ್ಷ್ಯಾಧಾರವೂ ಸಿಗದೆ ಇವರು ಆರೋಪ ಮುಕ್ತರಾದರು. ಜೈಲಿನಿಂದ ಹೊರಬಂದ ಮೇಲೆ ’ವರ್ಲ್ಡ್ ಪ್ರೆಸ್ ಕಾನ್ಫರೆನ್ಸ್’ ನ ಎದುರು ಪ್ರಜಾಪ್ರಭುತ್ವದ ಹಿರಿಯಣ್ಣನ ಸಾಚಾತನಕ್ಕೆ ಸವಾಲೆಸೆದರು. ಆಗ ಮಾಧ್ಯಮದೆದುರು ಇವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಕೊನೆಯ ಪಕ್ಷ ತನ್ನ ಕಾನೂನಾತ್ಮಕ ಕ್ರಮಗಳಿಗೆ ವಿವರಣೆ ನೀಡುವ ನೈತಿಕ ಹೊಣೆಗಾರಿಕೆಯನ್ನೂ ತೋರಿಸದೆ ಅಮೆರಿಕನ್ ಸರ್ಕಾರ ಇವರನ್ನು ’ಅಧಿಕೃತ’ವಾಗಿ ಗಡಿಪಾರು ಮಾಡಿ ಭಾರತಕ್ಕೆ ಕಳಿಸಿತು.

ಕನ್ನಡ ಸಾಹಿತ್ಯದ ಮೇಲೆ ರಜನೀಶರ ಚಿಂತನೆಗಳ ನೇರವಾದ ಪ್ರಭಾವ ಕಾಣಿಸದಿದ್ದರೂ ಕನ್ನಡದ ಹೊಸ ತಲೆಮಾರಿನ ಎಲ್ಲ ಸಾಹಿತಿ, ಚಿಂತಕರೂ ರಜನೀಶರಿಂದ ಆಳವಾಗಿ ಪ್ರಭಾವಿತರಾಗಿದ್ದಾರೆ ಎಂದೇ ನನ್ನ ಅನ್ನಿಸಿಕೆ. ಗುರುಗಳಾದ ಡಿ.ಆರ್. ನಾಗರಾಜ್ “ನೀವು ತಿಳಿದಂತೆ ಆತ ಬರೀ ’ಸೆಕ್ಸ್ ಗುರು’ ಅಲ್ಲ, ನಮ್ಮ ಕಾಲದ ಬಹು ಮಹತ್ವದ ಚಿಂತಕ ಕೂಡ” ಎಂದು ಒಮ್ಮೆ ಲಂಕೇಶರ ಬಳಿ ವಾದಿಸಿದ್ದರಂತೆ (ಕಿರಂ ಮನೆಯಲ್ಲಿ ಹಿರಿಯರಾದ ಶೂದ್ರ ಶ್ರೀನಿವಾಸ್ ಆ ಸನ್ನಿವೇಶವನ್ನು ಕುರಿತು ವಿವರಿಸಿದ್ದರು). ನನ್ನ ಇನ್ನೊಬ್ಬ ಗುರುಗಳೂ, ಚಿಂತಕರೂ ಆದ ಜಿ.ಕೆ. ಗೋವಿಂದರಾವ್ ರಜನೀಶರ ಪ್ರವಚನಗಳ ಕುರಿತು “ಅವನದ್ದು ನಿಜಕ್ಕೂ ಕೆಟ್ಟ ಇಂಗ್ಲೀಷ್, ಕೆಟ್ಟ ಉಚ್ಚಾರಣೆ, ಕೆಟ್ಟದಾದ ವಿಷಯ ನಿರೂಪಣೆ,..ಆದರೆ ಮಾತನಾಡುತ್ತ, ಆಡುತ್ತ ಅದೆಂತಹ ಅದ್ಭುತ ಅನುಭವವನ್ನು ನೀಡಿದ!” ಎಂದು ರಜನೀಶರ ಉಪನ್ಯಾಸವನ್ನು ಅವರು ತಮ್ಮದೇ ಆದ ಶೈಲಿಯಲ್ಲಿ ಹೊಗಳಿದ್ದರು. ನಾನು ಪಿಎಚ್.ಡಿ. ಅಧ್ಯಯನ ನಡೆಸುವಾಗ ನನ್ನ ಮಾರ್ಗದರ್ಶಕರಾದ ಪ್ರೊ. ಕಿ.ರಂ. ನಾಗರಾಜರ ಮನೆಯಲ್ಲೂ ರಜನೀಶರ ಹಲವು ಪುಸ್ತಕಗಳನ್ನು, ಕ್ಯಾಸೆಟ್‌ಗಳನ್ನು ನೋಡಿದ್ದೆ. ಕವಿ ಡಾ. ಸಿದ್ದಲಿಂಗಯ್ಯನವರು ಬಹು ಕಾಲದಿಂದಲೂ ಓಷೋ ರಜನೀಶ್, ಜೆ.ಕೃಷ್ಣಮೂರ್ತಿ, ಯು.ಜಿ. ಕೃಷ್ಣಮೂರ್ತಿ ಮೊದಲಾದ ಆಧುನಿಕ ಅನುಭಾವಿಗಳ ಬಗ್ಗೆ ಆಸಕ್ತಿ ಇಟ್ಟುಕೊಂಡವರು. ಒಮ್ಮೆ ನನ್ನೊಂದಿಗೆ ಯು.ಜಿ. ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡಿ ಆಪ್ತ ಸಮಾಲೋಚನೆಯನ್ನೂ ನಡೆಸಿದ್ದರು. ಅವರು ಬುದ್ಧನ ’ಧಮ್ಮಪದ’ಕ್ಕೆ ರಜನೀಶರು ನೀಡಿರುವ ವ್ಯಾಖ್ಯಾನದ ಕುರಿತು ತುಂಬ ಮೆಚ್ಚುಗೆಯ ಮಾತುಗಳನ್ನು ಆಡಿ ಆ ಬಗ್ಗೆ ನನ್ನಲ್ಲಿ ಆಸಕ್ತಿ ಮೂಡಿಸಿದ್ದರು.

ಇಲ್ಲಿನ ಎಲ್ಲ ಅಧ್ಯಾಯಗಳೂ ಶ್ರೀ ರಜನೀಶರ ಪ್ರಶ್ನೋತ್ತರ ರೂಪದ ಪ್ರವಚನಗಳ ಲಿಪ್ಯಂತರಣಗಳು. ಭಾಷಣದ ಶೈಲಿಯನ್ನು ಪ್ರಬಂಧದ ರೂಪಕ್ಕೆ ತರಲು ಪ್ರಯತ್ನಿಸಿಲ್ಲವಾದರೂ ಭಾಷಣಗಳಲ್ಲಿ ಸಹಜವಾಗಿ ತಲೆದೋರುವ ಕೆಲವು ಪುನರುಕ್ತಿಗಳನ್ನು ಕೈಬಿಡಲಾಗಿದೆ. ಹಲವು ಕೃತಿಗಳ ವಿಚಾರಗಳನ್ನು ಒಂದೆಡೆ ಸಂಕಲಿಸಿರುವುದಾದರೂ ಯಾವುದೇ ವಿಚಾರ ಅರ್ಧಕ್ಕೆ ನಿಲ್ಲದಂತೆ ಅಥವ ಅರ್ಧದಿಂದ ಶುರುವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಅವರ ಮಾತುಗಳನ್ನು ಪರಿಷ್ಕರಿಸಿ, ಸಂಕ್ಷಿಪ್ತಗೊಳಿಸಿ ಅನುವಾದಿಸಿದೆಯಾದರೂ ಯಾವುದೇ ಕಾರಣಕ್ಕೂ ಅನುವಾದಕನ ಸ್ವತಂತ್ರ ವಿಚಾರಗಳನ್ನು, ವಾಕ್ಯಗಳನ್ನು ಸೇರಿಸಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಒಂದು ವಿಚಾರವನ್ನು ಸಂದರ್ಭದಿಂದ ಹೊರತೆಗೆದು ನಿರೂಪಿಸುವಾಗ ಅದು ವಿರೂಪಗೊಳ್ಳುವ ಅಥವ ಅಪವ್ಯಾಖ್ಯಾನ ಹೊಂದುವ ಸಾಧ್ಯತೆ ಇರುತ್ತದೆ. ಅದರಲ್ಲೂ ಅತ್ಯಂತ ವ್ಯಾಪಕವಾಗಿ, ವೈರುದ್ಧ್ಯಕರ ನೆಲೆಗಳಲ್ಲಿ ಮಾತನಾಡಬಲ್ಲ ರಜನೀಶರಂತಹ ವ್ಯಕ್ತಿಗಳ ಮಾತುಗಳಿಂದ ಯಾವ ಅರ್ಥವನ್ನಾದರೂ ಸುಲಭವಾಗಿ ಹೊರತೆಗೆಯಬಹುದು. ರಜನೀಶರನ್ನು ಅರ್ಥೈಸುವ ಇಲ್ಲಿನ ಅಧ್ಯಾಯಗಳಲ್ಲಿ ಅಂತಹ ಅಪವ್ಯಾಖ್ಯಾನಗಳು, ವಿಪರೀತಾರ್ಥಗಳು ತಲೆದೋರದಂತೆ ಎಚ್ಚರಿಕೆ ವಹಿಸಲಾಗಿದೆ. ಶ್ರೀರಜನೀಶರು ಕೊನೆಯವರೆಗೂ ನಂಬಿಕೊಂಡಿದ್ದ ಹಾಗು ಪ್ರತಿಪಾದಿಸುತ್ತಲೇ ಬಂದಿದ್ದ ವಿಚಾರಗಳನ್ನಷ್ಟೇ ಇಲ್ಲಿ ಮುಖ್ಯವಾಗಿ ನಿರೂಪಿಸಲಾಗಿದೆ. ಇಷ್ಟಾದರೂ ಇಲ್ಲಿ ಕೆಲವು ವಿರೋಧಾಭಾಸದ ವಿಚಾರಗಳು ಇಲ್ಲದಿಲ್ಲ. ಒಂದೆಡೆ “ಗಾಂಧಿ ಆಂತರ್ಯದಲ್ಲಿ ಒಬ್ಬ ಧಾರ್ಮಿಕ ವ್ಯಕ್ತಿ, ರಾಜಕಾರಿಣಿಯಲ್ಲ” ಎಂದಿರುವ ರಜನೀಶರು ಇನ್ನೊಂದೆಡೆ “ಆತ ಕನಿಷ್ಟ ಪಕ್ಷ ಒಬ್ಬ ಧಾರ್ಮಿಕ ವ್ಯಕ್ತಿಯೂ ಆಗಲಿಲ್ಲ” ಎನ್ನುತ್ತಾರೆ. ಇಂಥ ಕಡೆಗಳಲ್ಲಿ ತತ್ವೀಕರಿಸಲು ಸಮಸ್ಯೆಯಾಗಬಹುದಾದರೂ ಇದು ವೈಚಾರಿಕ ಶೈಥಿಲ್ಯವಲ್ಲ. ಪ್ರವಚನ, ಸಂಭಾಷಣೆಗಳು ಹಲವು ಹಾದಿಗಳಲ್ಲಿ ಸ್ವೇಚ್ಛೆಯಾಗಿ ಸಂಚರಿಸುವುದರಿಂದ ತಲೆದೋರುವ ಸಮಸ್ಯೆಗಳು ಎಂದು ತಿಳಿಯಬೇಕು. ಮಾತ್ರವಲ್ಲ ಸ್ವತಃ ಗಾಂಧಿ ಆಂತರ್ಯದಲ್ಲಿ ಹಲವು ದ್ವಂದ್ವಗಳನ್ನು ಹುದುಗಿಸಿಕೊಂಡು ಪ್ರಯೋಗ ನಿರತರಾಗಿದ್ದ ಒಬ್ಬ ಸತ್ಯಶೋಧಕ ಎಂಬುದನ್ನೂ ಮರೆಯಬಾರದು. ಇಲ್ಲಿ ನಾನು ಶ್ರೀರಜನೀಶರ ವಿಚಾರಗಳಿಗೆ ಅತ್ಯಂತ ವಸ್ತುನಿಷ್ಠವಾಗಿ ಒಂದು ಪ್ರಾಸ್ತಾವಿಕ ಪ್ರವೇಶ ನೀಡಲು ಯತ್ನಿಸಿರುವೆನಾದರೂ ಮೂಲತಃ ಅವರು ಒಬ್ಬ ಅನುಭಾವಿ ಅಥವ ಆಧ್ಯಾತ್ಮಿಕ ಗುರು ಎಂಬ ಪೂರ್ವಪಕ್ಷ ನನಗಿರುವುದರಿಂದ ನನ್ನ ಪ್ರಯತ್ನ ಸಾರ್ಥಕವಾಗಬಹುದೆಂಬ ಭರವಸೆ ನನಗಿಲ್ಲ. ಹಾಗಾಗಿ ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ತತ್ವಶಾಸ್ತ್ರದ ಪ್ರಾಧ್ಯಾಪಕರಾದ ಹ್ಯಾರಿ ಅವೆಲಿಂಗ್‍ರ ಒಂದು ಪ್ರಸ್ತಾವನೆಯನ್ನು ಇಲ್ಲಿ ಬಳಸಿಕೊಂಡಿದ್ದೇನೆ. ಅದಕ್ಕೆ ಅನುಮತಿ ನೀಡಿದ ಅವರಿಗೆ ನಾನು ಆಭಾರಿಯಾಗಿದ್ದೇನೆ.

ನನ್ನ ’ಹುಚ್ಚುತನವೇ ಅನುಗ್ರಹ’ ಕೃತಿಯನ್ನು ಪರಿಶೀಲಿಸಿದ ಹಿರಿಯರಾದ ಡಾ.ಎಲ್. ಬಸವರಾಜು ಅವರು “ನೀಷೆಯ ವಿಚಾರಗಳನ್ನು ಓದಿ ನನಗೆ ವಿಷಾದವಾಯಿತು” ಎಂದು ಪತ್ರದಲ್ಲಿ ತಿಳಿಸಿದ್ದರು. ಅವರ ಇಂಗಿತ ಆಗ ನನಗೆ ಸರಿಯಾಗಿ ಅರ್ಥವಾಗದಿದ್ದರೂ ರಜನೀಶರ ಅಸ್ತಿತ್ವವಾದದ ಕುರಿತ ಉಪನ್ಯಾಸಗಳನ್ನು ಓದಿದಾಗ ಅದು ಬಸವರಾಜು ಅವರ ಸೂತ್ರರೂಪೀ ಮಾತುಗಳಿಗೆ ರಜನೀಶ್ ನೀಡಿರುವ ಒಂದು ದೀರ್ಘ ವ್ಯಾಖ್ಯಾನದಂತೆ ನನಗೆ ಕಾಣಿಸಿತು. ನೀಷೆಯ ಬದುಕು, ವಿಚಾರಗಳಿಗೆ ಒದಗಿದ ದುರ್ಗತಿಯನ್ನು ಒಂದು ಸಹೃದಯ ಮನಸ್ಸು ಹೇಗೆ ಪರಿಶೀಲಿಸುತ್ತದೆ ಎಂಬುದನ್ನು ವರ್ಣನಾತ್ಮಕವಾಗಿ ನಿರೂಪಿಸುವ ಆ ಭಾಗವನ್ನೂ ಇಲ್ಲಿ ಸಂಕ್ಷಿಪ್ತವಾಗಿ ಅನುವಾದಿಸಿದ್ದೇನೆ.

 

-           ಡಾ. ಟಿ.ಎನ್. ವಾಸುದೇವಮೂರ್ತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.