ಕನ್ನಡವೆಂದರೆ ಬರೀ ಮಾತಲ್ಲ....
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಅನೇಕ ಮಹತ್-ಬದಲಾವಣೆಗಳು ಜರುಗಿದವು. ಅವುಗಳಿಗೆ ಪ್ರಮುಖವಾದ ಕಾರಣವೆಂದರೆ ಇಂಗ್ಲೀಷ್ ಮಾಧ್ಯಮದ ಶಿಕ್ಷಣ. ಅಂತೆಯೇ ಸ್ವಾತಂತ್ರ್ಯದ ನಂತರದಲ್ಲಿನ ಕಾರಣಗಳೆಂದರೆ ರಾಷ್ಟ್ರೀಕರಣ ಮತ್ತು ಇತ್ತೀಚೆಗೆ ಸಂಭವಿಸುತ್ತಿರುವ ಜಾಗತೀಕರಣ. ಈ ಮೂರೂ ಘಟನೆಗಳು ಆಯಾ ಕಾಲಗಳ ಸಮಾಜದ ನೆರವಿಗೆ ಬಂದದ್ದೂ ನಿಜ; ಅವುಗಳನ್ನು ನಮ್ಮ ಸಮಾಜ ತುಂಬು ಹೃದಯದಿಂದ ಬರಮಾಡಿಕೊಂಡದ್ದೂ ನಿಜ. ಆದರೆ ಆ ಹೊಸತನದ ಅಲೆಯ ಸೊಗಸಿಗೆ ಸಿಲುಕಿದ ಸಮಾಜಕ್ಕೆ ತನ್ನತನವೆಂಬುದೊಂದರ ಇರುವಿಕೆಯನ್ನು ಉಪೇಕ್ಷೆ ಮಾಡಿದೆನೆಂಬ ಅರಿವೇ ಇಲ್ಲದಿರುವುದು ಶೋಚನೀಯ.
ಕರ್ನಾಟಕದಲ್ಲಿ ಇಂಗ್ಲೀಷ್ ಮಾಧ್ಯಮದ ಶಿಕ್ಷಣ, ರಾಷ್ಟ್ರೀಕರಣ ಮತ್ತು ಜಾಗತೀಕರಣ - ಈ ತ್ರಿವೇಣಿ ಸಂಗಮದ ಬೃಹತ್-ಅಲೆಗಳೊಂದಿಗೆ ಹೊರಟ ಜನಸಮಾಜವು ಕನ್ನಡವನ್ನು ಎಷ್ಟರ ಮಟ್ಟಿಗೆ ಉಪೇಕ್ಷೆ ಮಾಡಿದೆ ಮತ್ತು ಎಷ್ಟರ ಮಟ್ಟಿಗೆ ತನ್ನೊಡನೆ ಒಯ್ಯಲು ಪ್ರಯತ್ನ ಮಾಡುತ್ತಿದೆ ಎಂಬುದು ಈ ಲೇಖನದ ವಸ್ತು.
ಕನ್ನಡದ ಪರಿಸ್ಥಿತಿ (ಎಷ್ಟರ ಮಟ್ಟಿಗೆ ಉಪೇಕ್ಷೆ ಆಗಿದೆ)
-----------------------------------
ಕ್ಲಿಷ್ಟವಾದ ಹಳೆಗನ್ನಡ ನಮಗೆ ಬೇಕಾಗಿಲ್ಲ. ಇಂದಿನ ಆಗುಹೋಗುಗಳನ್ನು, ಹೊಸತನ್ನು ಕನ್ನಡದಲ್ಲಿ ತರಲು ಆಗುತ್ತಿಲ್ಲ ಏಕೆಂದರೆ ಕನ್ನಡ ಅದಕ್ಕೆ ಶಕ್ತವಲ್ಲ. ಕನ್ನಡದ ಬಗ್ಗೆ ನಮ್ಮ ಮನೋಜಾಡ್ಯವೇ ಹೀಗಿರುವಾಗ ನಮಗೆ ಕನ್ನಡ ಬರೀ ಯೋಗಕ್ಷೇಮ, ಸುಖ ದು:ಖಗಳನ್ನು ವಿಚಾರಿಸುವ ಮಾತುಗಳನ್ನು ಮತ್ತು ಮೋಜು ನೀಡುವ ಹಾಡುಗಳನ್ನು ನೀಡಿದರೆ ಸಾಕು ಎಂಬಂತಾಗಿದೆ.
ಕಾಲ ಮುಂದೆ ಸಾಗಿ ಹೊಸ ಪೀಳಿಗೆಗೆಳು ಬಂದಂತೆಲ್ಲಾ.... ಅವರಿಗೂ ಕನ್ನಡ ಬರೀ ಮಾತಾಗಿ ಉಳಿದರೆ ಸಾಕೆ?
’ಕನ್ನಡವೆಂದರೆ ಬರೀ ಮಾತಲ್ಲ, ಹಿರಿದಿದೆ ಅದರರ್ಥ’ ಎಂಬ ಕವಿಯ ಭಾವನೆಯನ್ನು ನಾವು ಮನಸ್ಸಾರೆ ಗ್ರಹಿಸಬಲ್ಲವರಾದರೆ ಈ ಪ್ರಶ್ನೆಯನ್ನು ನಿರಾಕರಿಸಬಹುದು. ಕನ್ನಡ ಪ್ರಜ್ಞ್ನೆಯೆಂಬುದು ನಮ್ಮಲ್ಲಿ ಜಾಗೃತವಾಗಿದ್ದು ಸಮಾಜವು ಹೊಸ ಹಾದಿಯಲ್ಲಿ ಸಾಗಿದಂತೆಲ್ಲಾ ಅದರ ಬದಲಾವಣೆಗಳನ್ನು ಅರಿತು ಅದರೊಡನೆ ಕನ್ನಡವನ್ನೂ ಉಳಿಸಿ ಬೆಳೆಸುವಂತೆ ಮಾಡಬಹುದು.
ಈ ಮೊದಲು ದಿಗ್ಗಜರು ತಮ್ಮ ಕಾಲದಲ್ಲಿ ಕೆಲವು ಕ್ಷೇತ್ರಗಳಲ್ಲಿ ಕನ್ನಡವನ್ನು ತರಲು ಪ್ರಯತ್ನ ಮಾಡಿದ್ದರು. ಟಿ.ಎಸ್ ವೆಂಕಣ್ಣಯ್ಯನವರು ಮತ್ತು ಬಿ.ಎಂ.ಶ್ರೀ ಅವರುಗಳು ಆಧ್ಯಾಪಕ ಕ್ಷೇತ್ರದಲ್ಲಿ ಕನ್ನಡವನ್ನು ಜಾರಿಗೆ ತಂದರು. ಅವರುಗಳಿಂದ ಬೋಧನೆ ಪಡೆದ ಕುವೆಂಪು, ಜಿ.ಪಿ ರಾಜರತ್ನಂ ಅವರುಗಳು ಅದನ್ನು ಬಲಪಡಿಸಿದರು. ಅಲ್ಲದೆ ಕುವೆಂಪು ಅವರು ವಿಶ್ವವಿದ್ಯಾಲಯದ ಆಡಳಿತ ಕ್ಷೇತ್ರದಲ್ಲೂ ಕನ್ನಡವನ್ನು ಜಾರಿಗೆ ತಂದರು. ಇನ್ನೂ ಹತ್ತುಹಲವು ಕ್ಷೇತ್ರಗಳಲ್ಲಿ ಕನ್ನಡವನ್ನು ತರುವಂತೆ ಕುವೆಂಪು ಕೆಲವು ವೈಚಾರಿಕ ಲೇಖನಗಳನ್ನು ಬರೆದು ಸಮಾಜವನ್ನು ಹುರಿದುಂಬಿಸಲು ಯತ್ನಿಸಿದರು.
ಹಾಗಾದರೆ ಸದ್ಯಕ್ಕೆ ನಾವು ಕನ್ನಡವನ್ನು ಎಷ್ಟರ ಮಟ್ಟಿಗೆ ನಮ್ಮೊಂದಿಗೆ ಒಯ್ಯಲು ಪ್ರಯತ್ನ ಮಾಡುತ್ತಿದ್ದೇವೆ?
ನಮ್ಮ ಸಮಾಜದ ವಿವಿಧ ಭಾಗಗಳಲ್ಲಿ ಇಂದು ಈ ಪ್ರಯತ್ನ ನಡೆಯಬೇಕಿದೆ:
--------------------------------------------------
೧. (ಕುವೆಂಪು ಹೇಳಿರುವಂತೆ) ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳ ವಿವಿಧ ಕ್ಷೇತ್ರಗಳ (departments) ಸಂಶೋಧನಾಂಗ, ಬೋಧನಾಂಗ, ಪ್ರಸಾರಾಂಗಗಳು ಆಯಾ ಕ್ಷೇತ್ರಕ್ಕೆ ಸಂಬಂಧಪಟ್ಟ ಜಗತ್ತಿನ ದೈನಂದಿನ ಆಗುಹೋಗುಗಳನ್ನು (current affairs) ಕನ್ನಡದಲ್ಲೂ ನಿರೂಪಿಸಬೇಕು.
೨. (ಕುವೆಂಪು ಹೇಳಿರುವಂತೆ) ಜನಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ಸರ್ಕಾರ ಆಡಳಿತ ನಡೆಸಬೇಕು; ನ್ಯಾಯಾಲಯಗಳು ಕನ್ನಡದಲ್ಲೇ ನ್ಯಾಯ ಒದಗಿಸಬೇಕು.
೩. ಆ ಕಾಲದಲ್ಲಿ ಅಖಂಡ ಕರ್ನಾಟಕದ ಬಗ್ಗೆ ರಾಜಕೀಯ ಮಟ್ಟದದಲ್ಲಿದ್ದ ಇಚ್ಛಾಶಕ್ತಿ, ಅಭಿಮಾನ, ಕಾಳಜಿ ಗಳನ್ನು ಕವಿಗಳು, ಹೋರಾಟಗಾರರು, ಬರಹಗಾರರು ನಿರ್ಭಯವಾಗಿ ಪ್ರಶ್ನಿಸಿದಂತೆ ಈಗ ಕನ್ನಡದ ವಿಷಯದಲ್ಲಿ ನಡೆಯಬೇಕಿದೆ.
೪. ಮನೆಮನೆಗಳಲ್ಲಿ ಒಬ್ಬರು ಮತ್ತೊಬ್ಬರಿಗೆ ಜಗತ್ತಿನ ದೈನಂದಿನ ಆಗುಹೋಗುಗಳನ್ನು ಕನ್ನಡದಲ್ಲಿ ಚರ್ಚಿಸುವ ವಾತಾವರಣ ಸೃಷ್ಟಿಯಾಗಬೇಕು. ಇದರಲ್ಲಿ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳ ಪಾತ್ರ ಬಹುಮುಖ್ಯವಾದದ್ದು.
೫. ಇನ್ನು ದೈನಂದಿನ ಆಗುಹೋಗುಗಳನ್ನು ಉಂಟುಮಾಡುವ ಅಥವಾ ತಿಳಿಯಬಲ್ಲ ಇಂಜಿನೀಯರುಗಳು, ವೈದ್ಯರು, ವಿಜ್ನಾನಿಗಳು ಅವುಗಳನ್ನು ಕನ್ನಡದಲ್ಲಿ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು.
Comments
ಉ: ಕನ್ನಡವೆಂದರೆ ಬರೀ ಮಾತಲ್ಲ....
In reply to ಉ: ಕನ್ನಡವೆಂದರೆ ಬರೀ ಮಾತಲ್ಲ.... by Chetan.Jeeral
ಉ: ಕನ್ನಡವೆಂದರೆ ಬರೀ ಮಾತಲ್ಲ....