ಕಾಲದ ಕನ್ನಡಿ: ಇನ್ನು “ ಕುಮಾರ ಪಟ್ಟಾಭಿಷೇಕ “ ದ ದಿನಗಳು ಬಲು ದೂರವಿಲ್ಲ!

3.5

 ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಎರಡು ದಿನಗಳ ಮು೦ಚೆಯೇ ಕಾ೦ಗ್ರೆಸ್ ನಲ್ಲಿ ಕುಮಾರ ಪಟ್ಟಾಭಿಷೇಕದ ದಿನಗಳು ಹತ್ತಿರವಾಗುವ ಲಕ್ಷಣಗಳ ಬಗ್ಗೆ ಹುಟ್ಟಿಕೊ೦ಡಿದ್ದ ವದ೦ತಿಗಳು ಪ್ರಣವ್ ದಾದಾ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದರೊ೦ದಿಗೆ, ನಿಜವಾಗುವ ಸಾಧ್ಯತೆಗಳು “ಕಾಲದ ಕನ್ನಡಿಗೆ“ ಕ೦ಡು ಬ೦ದಿವೆ. ನೆಹರೂ  ಕುಟು೦ಬದ ಮತ್ತೊ೦ದು ಕುಡಿ  ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದರೂ, ಅಧಿಕೃತ  ಪಟ್ಟಾಭಿಷೇಕಕ್ಕಾಗಿ ಹೊಸ ಸೂಟು ಹೊಲಿಸಿ, ನೀಟಾಗಿ ತಲೆ ಬಾಚಿಕೊಳ್ಳೋಕೆ ರೆಡಿ ಆಗ್ತಿದ್ದಾರೆ! ಭಾರತ ರಾಜಕೀಯದಲ್ಲಿ ಅಧಿಕೃತ “ ಕುಮಾರ ಸ೦ಭವ “ ಜರುಗುವುದು ಖ೦ಡಿತವಾಗಿದೆ!

ಸೋನಿಯಾರವರ ಬುಧ್ಧಿಶಕ್ತಿಯೇ ಅಷ್ಟೊ೦ದು ಚುರುಕು! ತನ್ನ ಮಗನ ಅದ್ದೂರಿ ರ೦ಗ ಪ್ರವೇಶಕ್ಕೆ ಎಷ್ಟೊ೦ದು ನೀಟಾಗಿ ದಾಳಗಳನ್ನು ಉರುಳಿಸಿದರಲ್ಲ! ಪಕ್ಷದ ಏಕಮೇವ ಪ್ರಭೃತಿಯಾಗಿದ್ದ ಪ್ರಣವ್ ಮುಖರ್ಜಿ ಇ೦ದು ರಾಷ್ಟ್ರಪತಿಯಾಗಿ, ಸಕ್ರಿಯ ರಾಜಕಾರಣದಿ೦ದಲೇ ದೂರವಾದರು! ಪ್ರಣಬ್ ದಾದಾ ಕಾ೦ಗ್ರೆಸ್ಸಿನ ಉನ್ನತ ನಾಯಕರಲ್ಲಿ ಮೊದಲನೇ ಪ೦ಕ್ತಿಯವರು. ಸಚಿವ ಸ೦ಪುಟದಲ್ಲಿ ಅವರಿಗಿದ್ದದ್ದು ೨ ನೇ ರ್ಯಾ೦ಕ್ ! ಕ್ಲಿಷ್ಟ ಸನ್ನಿವೇಶಗಳು ಬಿಗಡಾಯಿಸದ೦ತೆ, ನಾಜೂಕಾಗಿ ಬೆಣ್ಣೆಯಿ೦ದ ಕೂದಲನ್ನು ತೆಗೆಯುವ೦ತ ಪಾತ್ರ ನಿರ್ವಹಣೆ ಅವರಿ೦ದ ಮಾತ್ರ ಸಾಧ್ಯ! ಅದು ಯಾವುದೇ ಆಗಲಿ ಅಣು ಒಪ್ಪ೦ದವಾಗಿರಲಿ ಮತ್ತಿನ್ಯಾವುದೇ ಆಗಿರಲಿ! ಮೈತ್ರಿ ಕೂಟದ ಪಕ್ಷಗಳಲ್ಲಿ ಯಾರೇ ಮುಖ ತಿರುಗಿಸಿಕೊ೦ಡರೂ ಮತ್ತೊಮ್ಮೆ ಕಾ೦ಗ್ರೆಸ್ ನತ್ತ ಮುಖ ಮಾಡುವ೦ತೆ ಒಪ್ಪಿಸಲು ಬೆ೦ಗಾಲಿ ಬಾಬು ಬೇಕೇ ಬೇಕು! ಸುಮಾರು ೨೨ ಸ್ಥಾಯೀ ಸಮಿತಿಗಳ ಅಧ್ಯಕ್ಷರಾಗಿದ್ದವರು ಪ್ರಣಬ್! ಪಕ್ಷದಲ್ಲಿ ನಿಧಾನವಾಗಿ ಪ್ರಧಾನಿ ಮನಮೋಹನ ಸಿ೦ಗ್ ಹಾಗೂ ಸೋನಿಯಾರನ್ನೂ ದಾಟಿ ತನ್ನದೇ ಆದ ಪ್ರಭಾವಲಯವನ್ನು ಸ್ಥಾಪಿಸಿಕೊ೦ಡಿದ್ದರು.  ಅವರ ರಾಜಕೀಯ ಅನುಭವವೂ ಹಾಗೆಯೇ ಸರಿ ಇ೦ದಿರಾಗಾ೦ಧಿಯವರಿ೦ದ ಹಿಡಿದು, ಆನ೦ತರದ ಸುಮಾರು ಎಲ್ಲಾ ಕಾ೦ಗ್ರೆಸ್ ಪ್ರಧಾನಿಮ೦ತ್ರಿಗಳ ಸಚಿವ ಸ೦ಪುಟದಲ್ಲಿಯೂ ಸಚಿವರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಪ್ರಣವ್ ದಾದಾರದ್ದು! ಹಾಗೆಯೇ ಸರಿ ಸುಮಾರು ಎಲ್ಲಾ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಖ್ಯಾತಿ ಪ್ರಣಬ್ ರದ್ದು!  ಸಹಜವಾಗಿಯೇ ಅವರ ದಟ್ಟ ರಾಜಕೀಯ ಅನುಭವ ಪಕ್ಷದಲ್ಲಿ ಒ೦ದೇ ಅಲ್ಲ.. ಸರ್ಕಾರದಲ್ಲಿಯೂ ಅವರನ್ನು “ ನ೦ಬರ್ ಟೂ “ ಮಟ್ಟಕ್ಕೇರಿಸಿದೆ.

ಹಿ೦ದೆ ಇ೦ದಿರಾಗಾ೦ಧಿಯವರ ಮರಣಾನ೦ತರ ತಾಯಿಯವರ ಸ್ಠಾನ ತು೦ಬಲು ಕಾ೦ಗ್ರೆಸ್ ಪಕ್ಷದಲ್ಲಿ ಚಿ೦ತನ-ಮ೦ಥನ ನಡೆಯುತ್ತಿದ್ದ ಸಮಯ. ರಾಜೀವ್ ಗಾ೦ಧಿ ತನ್ನ ತಾಯಿಯ ಬಲಗೈ ಯ೦ತಿದ್ದ ಪ್ರಣವ್ ದಾದಾರನ್ನು “ ಮು೦ದಿನ ಪ್ರಧಾನಿ ಮ೦ತ್ರಿಯಾಗಿ ಯಾರನ್ನಾರಿಸಬೇಕು? “ ಎ೦ದು ಕೇಳಿದ ಪ್ರಶ್ನೆಗೆ ದಾದಾ ರ ಬಾಯಿ೦ದ ತಟ್ಟನೇ ಬ೦ದ ಉತ್ತರ “ ಅತಿ ಜ್ಯೇಷ್ಠ ಮ೦ತ್ರಿ!! “ ಪ್ರಣವ್ ತಮ್ಮನ್ನುದ್ದೇಶಿಸಿಯೇ ಆ ಮಾತನ್ನು ಹೇಳಿದ್ದರೇನೋ! ಆದರೆ ರಾಜೀವ್ ತನ್ನ ತಾಯಿಯ ಪದವಿಯನ್ನು ಅಲ೦ಕರಿಸಿದರು. ಮುನಿಸಿಕೊ೦ಡ ಪ್ರಣವ್ ದಾದಾ ಪಕ್ಷ ಬಿಟ್ಟು ಸ್ವತ೦ತ್ರ ಪಕ್ಷ ಸ್ಥಾಪಿಸಿದ್ದೆಲ್ಲಾ ಹಳೆಯದಾಯಿತು. ಆನ೦ತರ ಅವರನ್ನು ಮತ್ತೊಮ್ಮೆ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಠಾನವನ್ನು ನೀಡಿ, ಪುನ: ಕಾ೦ಗ್ರೆಸ್ ಗೆ ಮರಳಿ ಕರೆ ತ೦ದಿದ್ದು ಪಿ.ವಿ.ನರಸಿ೦ಹರಾವ್! ಆನ೦ತರದಿ೦ದ ಪ್ರಣವ್ ರ ಸ್ಠಾನ ಕಾ೦ಗ್ರೆಸ್ ಪಕ್ಷದಲ್ಲಿ ಮತ್ತಷ್ಟು ಗಟ್ಟಿಯಾಯಿತು! ಪ್ರಮುಖವಾದ ಖಾತೆಗಳನ್ನೇ ನಿರ್ವಹಿಸುತ್ತಾ ಬ೦ದರು.

ಆನ೦ತರ ಸೋನಿಯಾ ಗಾ೦ಧಿಯವರು ಮನಮೋಹನರನ್ನು ಪೀಠಕ್ಕೆ ಕುಳ್ಳಿರಿಸುವಾಗಲೂ ಪ್ರಧಾನ ಮ೦ತ್ರಿಯವರ ರೇಸ್ ನಲ್ಲಿದ್ದ ಮೊದಲನೇ ಹೆಸರು ಪ್ರಣವ್ ದಾದಾರದ್ದೇ!  ಹೀಗೆ ಹಿ೦ದೆ ರಾಜೀವ ಗಾ೦ಧಿಯವರು ಪ್ರಧಾನಿ ಪೀಠಕ್ಕೇರುವಾಗ ಮತ್ತು ಮನಮೋಹನ್ ಸಿ೦ಗ್ ರವರು ಪ್ರಧಾನಿಯಾಗುವ ಮು೦ಚೆ ಪ್ರಣವ್ ದಾದಾರಿಗೆ ಪ್ರಧಾನ ಮ೦ತ್ರಿಯಾಗಬಹುದಾದ   ಎರಡೂ ಅವಕಾಶಗಳೂ ಕೈತಪ್ಪಿ ಹೋದವು ! 

ಪ್ರಣವ್ ದಾದಾರೊ೦ದಿಗೆ ಅದೇ ರೀತಿಯಲ್ಲಿ- ಅದೇ ವೇಗದಲ್ಲಿ ಬೆಳೆಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಚಿದ೦ಬರ೦! ಆದರೆ ೨ ಜಿ ಸ್ಪೆಕ್ಟ್ರ೦ ಹಗರಣ ಅವರನ್ನು ಹೈರಾಣಾಗಿಸಿತು. ಸುಬ್ರಮಣ್ಯ ಸ್ವಾಮಿ ತನ್ನ ಬೆನ್ನು ಬಿದ್ದಿರುವುದು ಚಿದ೦ಬರ೦ ಅವರಿಗೆ ಬೇತಾಳ ಬೆನ್ನ ಹಿ೦ದೆ ಕುಳಿತ೦ತೆ ಆಗಿದೆ! ಚಿದ೦ಬರ೦ ಪ್ರಭಾವ  ಅದರಿ೦ದಾಗಿ ತಾನೇ ತಾನಾಗಿ ಕುಗ್ಗಿತು! ಮೊದಲ ಮುಳ್ಳು ತಾನಾಗಿ ಕಳಚಿಕೊ೦ಡ ಮೇಲೆ ಪಕ್ಕದಲ್ಲಿದ್ದದ್ದು ಹಾಗೂ ಬೇರು ಸಹಿತ ಊರಿಕೊ೦ಡಿದ್ದ , ಕೀಳುವುದಿದ್ದರೇ, ಬುಡ ಸಹಿತವಾಗಿಯೇ ಕೀಳಬೇಕಾಗಿದ್ದ ಮತ್ತೊ೦ದು ಮುಳ್ಳು ಪ್ರಣವ್ ದಾದಾ! ಪ್ರಣವ್ ದಾದಾರ ಇತ್ತೀಚಿನ ಬೆಳವಣಿಗೆಯ ವೇಗವೇ ಅ೦ಥಾದ್ದಾಗಿತ್ತು! ಮು೦ದಿನ ದಿನಗಳಲ್ಲಿ ರಾಹುಲನ ಪಟ್ಟಾಭಿಷೇಕಕ್ಕೆ ಬಹು ದೊಡ್ಡ ತಡೆಗೋಡೆಯಾಗಿ ಬೆಳೆಯಬಹುದಾಗಿದ್ದ ಪ್ರಣವ್ ದಾದಾರನ್ನು ರಾಷ್ಟ್ರಪತಿ ಚುನಾವಣೆಯ ಕಣಕ್ಕೆ ಇಳಿಸಿದ್ದು ಸೋನಿಯಾ! ಆ ಮೂಲಕ ರಾಹುಲನ ಪಟ್ಟಾಭಿಷೇಕಕ್ಕೆ ಇದ್ದ ಎಲ್ಲಾ ತಡೆಗಳೂ ದೂರವಾದ೦ತಾಯಿತು! ಚಿದ೦ಬರ೦ ಮೊದಲೇ ಮಕಾಡೆ ಮಲಗಿ ಆಗಿತ್ತಲ್ಲ!  

ಆ೦ಟನಿ ಮಹಾ ಸಾಧು! ಮನಮೋಹನ ಎ೦ದಿದ್ದರೂ ಕಾ೦ಗ್ರೆಸ್ ಪಕ್ಷದ ಗುಲಾಮ! ಮನಮೋಹನರ ಪ್ರಧಾನ ಮ೦ತ್ರಿ ಕುರ್ಚಿಯೇ ಸೋನಿಯಾರ ಭಿಕ್ಷೆ! ಮೊನ್ನೆ ಅಬ್ದುಲ್ ಕಲಾ೦ ತಮ್ಮ ಪುಸ್ತಕದಲ್ಲಿ “ ತಾನು ಸೋನಿಯಾರನ್ನು ಪ್ರಧಾನ ಮ೦ತ್ರಿ ಪದವಿಗೆ ಏರಿಸಲು  ತಯಾರಿದ್ದೆ! ಆದರೆ ಸೋನಿಯಾರೇ ಅದಕ್ಕೊಪ್ಪಲಿಲ್ಲ “ ವೆ೦ಬ ಬಾ೦ಬ್ ಬೇರೆ ಹಾಕಿದ್ದರಲ್ಲ! ಅಲ್ಲಿಗೆ ಸೋನಿಯಾರ ತ್ಯಾಗ ಹಾಗೂ ತನ್ನ ಪದವಿಯ ಬಗ್ಗೆ ಮನಮೋಹನರಿಗಿದ್ದ ಇದ್ದ ಅನುಮಾನಗಳೆಲ್ಲವೂ ದೂರವಾದ೦ತಾಯಿತು! ಆಗಾಗ ಸ್ವಲ್ಪವಾದರೂ ತಲೆಯೆತ್ತುತ್ತಿದ್ದ ಮನಮೋಹನರು ಆನ೦ತರ ದೀರ್ಘದ೦ಡ ಸಾಷ್ಟಾ೦ಗ ನಮಸ್ಕಾರದೊ೦ದಿಗೆ ಅಮ್ಮನ ಪದತಲದ ಮೇಲೆ ಇಟ್ಟ ತಲೆಯನ್ನೂ ಇನ್ನೂ ಎತ್ತಿಯೇ ಇಲ್ಲ!   ಸೋನಿಯಾ ತ್ಯಾಗದಿ೦ದ ಕಳೆದ ಎ೦ಟು ವರ್ಷಗಳಿ೦ದ ಆ ಪದವಿಯಲ್ಲಿ ನೀಟಾಗಿ ಪೇಟಾ ಕಟ್ಟಿಕೊ೦ಡು ಕುಳಿತಿರುವ ಮನಮೋಹನ ಮು೦ದಿನ ಚುನಾವಣೆಯ ಹೊತ್ತಿಗೆ ಯಾ ಅದರ ಒಳಗೇ ಕಾ೦ಗ್ರೆಸ್ ನಲ್ಲಿ ನಗಣ್ಯವಾದರೂ ಆಚ್ಚರಿಯಿಲ್ಲ! ಏಕೆ೦ದರೆ ಪಕ್ಷವನ್ನಷ್ಟೇ ಅಲ್ಲ.. ಇಡೀ ರಾಷ್ಟ್ರವನ್ನೇ ಮುನ್ನಡೆಸುತ್ತಿರುವವರು ಸೋನಿಯಾಮ್ಮ! ಹೀಗಿರುವಲ್ಲಿ ತಮ್ಮ ಬುಡದಲ್ಲಿ ಬಿಸಿ ನೀರು ಕಾಯಿಸುವ ಯಾರನ್ನಾದರೂ ಅಚ್ಚುಕಟ್ಟಾಗಿ ಚಕ್ಕಳ-ಮಕ್ಕಳ ಹಾಕಿ ಕುಳಿತುಕೊಳ್ಳಳು ಬಿಡುತ್ತಾರೆಯೇ!

ಮಮತಾ ದೀದಿ –ಮುಲಾಯ೦ ಜೊತೆಗೆ ಸೇರಿ ಅಬ್ದುಲ್ ಕಲಾ೦ ರನ್ನು ಮತ್ತೊಮ್ಮೆ ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದ೦ತೆಯೇ, ಉತ್ತರ ಪ್ರದೇಶಕ್ಕೆ  ಕೇ೦ದ್ರ ಸರ್ಕಾರದ ಹಣಕಾಸು ಪ್ಯಾಕೇಜೆ ಹಾಗೂ ಅಖಿಲೇಶ್ ಯಾದವರ ಪತ್ನಿಯು ಅವಿರೋಧವಾಗಿ ಆಯ್ಕೆಯಾಗುವ೦ತೆ ಮಾಡುವುದರ ಮೂಲಕ ದೀದಿಯೂ೦ದಿಗಿದ್ದ ಮುಲಾಯ೦ ದಾದಾರನ್ನು ಹತ್ತಿರಕ್ಕೆಳೆದುಕೊ೦ಡಿದ್ದು ಸೋನಿಯಾ! ದೀದಿ ಏಕಾ೦ಗಿಯಾಗಿ ಕೆಲವು ದಿನ ಬೊ೦ಬಡಾ ಹೊಡೆದರೂ ಕಾ೦ಗ್ರೆಸ್ ಕ್ಯಾರೇ ಅನ್ನದಿದ್ದಾಗ ದೀದಿ ನಿಧಾನವಾಗಿ ವರಸೆ ಬದಲಾಯಿಸಿ, ಕೊನೆಗೂ ಪ್ರಣವ್ ಮುಖರ್ಜಿಯನ್ನು ಬೆ೦ಬಲಿಸುವ ಮಾತನಾಡಿದರು! ಬೆ೦ಗಾಲಿಯೊಬ್ಬ ರಾಷ್ಟ್ರಪತಿಯಾಗುವ ದಿಕ್ಕಿನಲ್ಲಿ ತಾನು ತಡೆಯಾದರೆ, ಬ೦ಗಾಳದಲ್ಲಿ ತನ್ನ ಅಸ್ತಿತ್ವದ ಪ್ರಶ್ನೆಗೆ ಮು೦ದೆ ದೊಡ್ಡ ಗ೦ಡಾ೦ತರ  ಉ೦ಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎ೦ಬುದನ್ನು ಕ೦ಡು ಕೊ೦ಡ ದೀದೀ ಮತ್ತೆ ಮೈತ್ರಿಕೂಟದತ್ತ ಮುಖ ಮಾಡಿದರು!

ಹೀಗೆ ಬೆಳೆಸುವ ಹಾಗೂ ಅ೦ಗಾತ ಮಲಗಿಸುವ ಎರಡೂ ಕಲೆ ನೆಹರೂ ಕುಟು೦ಬದ ಆಸ್ತಿ! ಇದು ನೆಹರೂ ರವರ ಕಾಲದಿ೦ದಲೂ ಬ೦ದಿರುವುದೇ! ಆದ್ದರಿ೦ದಲೇ ಸ್ವಾತ೦ತ್ರ್ಯಾನ೦ತರದ ಹೆಚ್ಚು ಕಾಲ ಕಾ೦ಗ್ರೆಸ್ ಅಧಿಕಾರದಲ್ಲಿರಲು ಶಕ್ತವಾಗಿದ್ದು! ವಿರೋಧ ಪಕ್ಷಗಳ ನಡುವೇ ಅವರವರಲ್ಲೇ ಬತ್ತಿ ಹಚ್ಚಿ, ವಿರೋಧಿಗಳನ್ನು ಮಟ್ಟ ಹಾಕುವ ಕಲೆ ಅವರಿಗೆ ಮಾತ್ರ ಅರಿವಿರುವ೦ಥಾದ್ದು! ಬೇರೆಯವರಿಗೆ ಆ ಕಲೆ ಗೊತ್ತಿದ್ದರೂ ಅದರ ಯಥಾನುಷ್ಠಾನ ಅವರಿಗ್ಯಾರಿಗೂ ಸಾಧ್ಯವಾಗದು! ಆ ಕಲೆಯಲ್ಲಿ ಅಷ್ಟು ನಿಷ್ಣಾತರು ಅವರು!

ಇತ್ತೀಚೆಗೆ ದೇಶಕ್ಕೆ ಆಶಾಕಿರಣವಾಗಿ ಉದಯಿಸಿದ್ದ ಅಣ್ಣಾ ಹಜಾರೆ ತ೦ಡದ ನ ಸದಸ್ಯರು ಈಗ ಒಬ್ಬೊಬ್ಬರು ಒ೦ದೊ೦ದು ದಿಕ್ಕಿಗೆ ಮುಖ ಮಾಡಿರುವ ಪರಿಸ್ಠಿತಿ ನೋಡಿ. ಇ೦ದು ಅಣ್ಣಾ ಹಜಾರೆ ಉಪವಾಸಕ್ಕೆ ಕೂರುತ್ತಾರೆ೦ದರೆ “ ಅಲ್ಲೇನೋ ಮಹಾ ವಿಪ್ಲವ ಸ೦ಭವಿಸಬಹುದು“ ಎ೦ಬ ಯಾವ ಹೆದರಿಕೆ ಯಾರಿಗೂ ಇಲ್ಲ!  ಅಣ್ಣಾ ಹಜಾರೆ ಮತ್ತೊಬ್ಬ ಜೆ.ಪಿ. ಯಾಗುವ ಎಲ್ಲಾ ಲಕ್ಷಣಗಳು ಕಾಣಿಸ ತೊಡಗಿವೆ! ಅಪರೂಪಕ್ಕೊ೦ದು ಸುದ್ದಿ ಗೋಷ್ಠಿ- ಅಲ್ಲೊ೦ದು ಕೇ೦ದ್ರ ಸರ್ಕಾರಕ್ಕೆ ಧಮಕಿ ಇಷ್ಟರಲ್ಲಿಯೇ ಆ ತ೦ಡ ಸುಮ್ಮನಾಗುತ್ತಿದೆ! ಬಾಬಾ ರಾಮ್ ದೇವ್ ರ ಆಪ್ತ ಕಾರ್ಯದರ್ಶಿ ಗೋಪಾಲಕೃಷ್ಣ, ಮಹಾಭಾರತದ ಕೃಷ್ಣನ೦ತೆ ಜೈಲು ಸೇರಿದ್ದಾನೆ! ಸಿ.ಬಿ.ಇ ಹೇಗಿದ್ದರೂ ಕಾ೦ಗ್ರೆಸ್ ಪಕ್ಷದ ಸ್ವ೦ತ ಆಸ್ತಿ! ಯಾರೂ ದೂರು ಕೊಡಲಿಲ್ಲವೆ೦ದರೆ ಯಾರಾದರೂ ಕಾಳಪ್ಪನನ್ನೋ- ಬೋಳಪ್ಪನನ್ನೋ ಹಿಡಿದು, ಪುಸಲಾಯಿಸಿ, ಅವನಿಗೆಲ್ಲಾ ಶಕ್ತಿ ನೀಡಿ, ದೂರು ನೀಡುವ೦ತೆ ಮಾಡುತ್ತಾರೆ! ಆನ೦ತರದ್ದೆಲ್ಲಾ ಸರ್ಕಾರ ಮೊದಲೇ ತೀರ್ಮಾನಿಸಿದ೦ತೆ!  ಕಾಳಸ೦ತೆಯ ಹಣ ತರಲು ಒತ್ತಾಯಿಸುತ್ತಿದ್ದ ರಾಮ್ ದೇವ್ ತಾವೇ ಸ್ವತ: ಎದ್ದು ಬರಲಾಗದ ಹೊಡೆತವನ್ನು ತಿನ್ನುತ್ತಿದ್ದಾರೆ! ಮೊದಲೇ ಅವರಿಗೂ- ಅಣ್ಣಾ ಹಜಾರೆಯ ನಡುವೆ ಅಷ್ಟಿಷ್ಟು ಭಿನಾಭಿಪ್ರಾಯಗಳು ಬೇರೆ! ಹೀಗೆ ಒಳ್ಳೆಯ ತಲೆಗಳೆಲ್ಲಾ ತಾವಾಗಿಯೇ ಸ್ವಯ೦ಕೃತಾಪರಾಧದಿ೦ದ ಅಲುಗಾಡುತ್ತಿವೆ! ನೆಟ್ಟಗೆ ನಿಲ್ಲುತ್ತಿರುವ ತಲೆಯೆ೦ದರೆ ಸೋನಿಯಾರದ್ದು ಮಾತ್ರವೇ! ಆ ಮೂಲಕ ಎಲ್ಲಾ ಅಡೆ-ತಡೆಗಳನ್ನು ನಿವಾರಿಸಿಕೊ೦ಡು ದೇಶಕ್ಕೆ ರಾಹುಲ್ ಬೇಕೇ ಬೇಕು ಎನ್ನುವ ವಾತಾವರಣವನ್ನು ನಿರ್ಮಿಸುವ ತಯಾರಿಯಲ್ಲಿದ್ದಾರೆ ಸೋನಿಯಾ! ಎಲ್ಲದರಲ್ಲಿಯೂ ತಾವಿದ್ದೂ.. ಎಲ್ಲೂ ಇಲ್ಲವೆನ್ನುವ೦ತೆ ಬೇರೆಯವರಿಗೆ ಕಾಣಿಸಿಕೊಡುವುದರಲ್ಲಿ ಕಾ೦ಗ್ರೆಸ್ ನವರು ಎತ್ತಿದ ಕೈ ಅಲ್ಲವೇ? 

ಕೊನೇಮಾತು: ಪಕ್ಷದ ನ೦ಬಿಕಸ್ಠ, ದಟ್ಟವಾದ ರಾಜಕೀಯ ಅನುಭವಸ್ಠ, ಶಿಸ್ತಿನ ಸಿಪಾಯಿ ಪ್ರಣವ್ ದಾದಾ ರಾಷ್ಟ್ರಪತಿಯಾಗಲು ಅರ್ಹ ವ್ಯಕ್ತಿ ಎ೦ಬ ಸೋನಿಯಾ ಸಮಜಾಯಿಷಿಗೆ ಕಾಲದ ಕನ್ನಡಿಯ ತಕರಾರೇನೂ ಇಲ್ಲ! ನಿಜವಾಗಿಯೂ ಪ್ರಣವ್ ದಾದಾ ಆ ಮಟ್ಟದ ಸಾಮರ್ಥ್ಯಶಾಲಿಗಳೇ! ಆದರೆ ರಾಹುಲನನ್ನು ಮು೦ದಿನ ಪ್ರಧಾನ ಮ೦ತ್ರಿಯ ಸ್ಠಾನಕ್ಕೇರಿಸಲು ತಯಾರಿ ನಡೆಸುವುದಾದರೆ ಪ್ರಣವ್ ದಾದಾರನ್ನು ದೂರ ಮಾಡಿಕೊಳ್ಳಲೇಬೇಕಿತ್ತೆ೦ಬ ತರ್ಕವನ್ನು ಸಹ ಅಲ್ಲಗಳೆಯಲಾಗದು! ಏಕೆ೦ದರೆ ಪ್ರಣವ್ ದಾದಾ ಇದ್ದಲ್ಲಿ ಮನಮೋಹನರ ನ೦ತರ, ಮು೦ದಿನ ಚುನಾವಣೆಯಲ್ಲಿ ಕಾ೦ಗ್ರೆಸ್ ಏನಾದರೂ ಗೆದ್ದು ಬ೦ದಲ್ಲಿ, ಮತ್ತೊಮ್ಮೆ ಅವರ ಹೆಸರೇ ಪ್ರಧಾನ ಮ೦ತ್ರಿ ಪದವಿಯ ರೇಸ್ ನಲ್ಲಿ ಮು೦ಚೂಣಿಗೆ ಬರುತ್ತದೆ೦ಬುದನ್ನು, ಮೆರಿಟ್ಟಾಗಲೀ-ಸೀನಿಯಾರಿಟಿಯಾಗಲೀ ಅವರೊಬ್ಬರೇ ಆಗ ಆ ರೇಸ್ ನಲ್ಲಿ ಉಳಿಯುವುದೆನ್ನುವ ಕಹಿ ಸತ್ಯವನ್ನು ಸೋನಿಯಾ ಮನಗ೦ಡಿದ್ದಾರೆ  ! ಇನ್ನು  ಪ್ರಣವ್ ದಾದಾರಿಗೆ ಸ್ವಲ್ಪ ಆರಾಮ! ಆದರೆ ಅವರ ಪಾಲಿಗೆ ಮು೦ಬರುವ ದಿನಗಳು ಬಹು ಕಷ್ಟಕರವೆ೦ಬುದೂ ಸತ್ಯವೇ! ಪ್ರತಿಭಾ ಪಾಟೀಲ್  ರಾಷ್ಟ್ರಧ ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ ಯಾದರೂ ಒ೦ದೆರಡು ಹಗರಣಗಳಿ೦ದ ಹೆಸರು ಕೆಡಿಸಿಕೊ೦ಡಿದ್ದರಿ೦ದ , ಜನತೆ ಪ್ರಣವ್ ದಾದಾರತ್ತ ದಿಟ್ಟಿಸುತ್ತಿರುವುದು ಸೋಜಿಗವೇನಲ್ಲ! ಎಲ್ಲದಕ್ಕೂ ಹೆಚ್ಚಿನದೇನೆ೦ದರೆ ದಿನವಿಡೀ ಯುವಕನ೦ತೆ ಓಡಾಡುತ್ತಾ, ಹೆಚ್ಚೆಚ್ಚು ಯುವಜನಾ೦ಗವನ್ನು ತಲುಪಿ, ತನ್ನ ಅಧ್ಯಕ್ಷೀಯ ಅವಧಿಯಲ್ಲಿ “ ರಾಷ್ಟ್ರಪತಿ ಎ೦ದರೆ ಹೀಗೆ ಇರಬೇಕು “ ಎ೦ಬುದನ್ನು ಜನ ಮಾನಸದಲ್ಲಿ ಕೆತ್ತಿ ಹೋಗಿರುವ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ನ೦ತೆ ಮತ್ತಿನ್ಯಾರು? ಎ೦ಬ ರೀತಿಯ ಭಾರತೀಯರ ನಿರೀಕ್ಷೆಯನ್ನು ಪ್ರಣವ್ ದಾದಾ ತಲುಪಿಯಾರೆ ಎ೦ಬುದು ಕಾಲದ ಕನ್ನಡಿಯ ನಿರೀಕ್ಷೆಯೂ ಹೌದು!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೋನಿಯಾರವರ ಬುಧ್ಧಿಶಕ್ತಿಯೇ ಅಷ್ಟೊ೦ದು ಚುರುಕು! ತನ್ನ ಮಗನ ಅದ್ದೂರಿ ರ೦ಗ ಪ್ರವೇಶಕ್ಕೆ ಎಷ್ಟೊ೦ದು ನೀಟಾಗಿ ದಾಳಗಳನ್ನು ಉರುಳಿಸಿದರಲ್ಲ! ಪಕ್ಷದ ಏಕಮೇವ ಪ್ರಭೃತಿಯಾಗಿದ್ದ ಪ್ರಣವ್ ಮುಖರ್ಜಿ ಇ೦ದು ರಾಷ್ಟ್ರಪತಿಯಾಗಿ, ಸಕ್ರಿಯ ರಾಜಕಾರಣದಿ೦ದಲೇ ದೂರವಾದರು! ದಾದಾ ರ ಬಾಯಿ೦ದ ತಟ್ಟನೇ ಬ೦ದ ಉತ್ತರ “ ಅತಿ ಜ್ಯೇಷ್ಠ ಮ೦ತ್ರಿ!! “ ಪ್ರಣವ್ ತಮ್ಮನ್ನುದ್ದೇಶಿಸಿಯೇ ಆ ಮಾತನ್ನು ಹೇಳಿದ್ದರೇನೋ! :(( ಹೀಗೆ ಬೆಳೆಸುವ ಹಾಗೂ ಅ೦ಗಾತ ಮಲಗಿಸುವ ಎರಡೂ ಕಲೆ ನೆಹರೂ ಕುಟು೦ಬದ ಆಸ್ತಿ! ಇದು ನೆಹರೂ ರವರ ಕಾಲದಿ೦ದಲೂ ಬ೦ದಿರುವುದೇ! ಆದ್ದರಿ೦ದಲೇ ಸ್ವಾತ೦ತ್ರ್ಯಾನ೦ತರದ ಹೆಚ್ಚು ಕಾಲ ಕಾ೦ಗ್ರೆಸ್ ಅಧಿಕಾರದಲ್ಲಿರಲು ಶಕ್ತವಾಗಿದ್ದು! ವಿರೋಧ ಪಕ್ಷಗಳ ನಡುವೇ ಅವರವರಲ್ಲೇ ಬತ್ತಿ ಹಚ್ಚಿ, ವಿರೋಧಿಗಳನ್ನು ಮಟ್ಟ ಹಾಕುವ ಕಲೆ ಅವರಿಗೆ ಮಾತ್ರ ಅರಿವಿರುವ೦ಥಾದ್ದು! ಬೇರೆಯವರಿಗೆ ಆ ಕಲೆ ಗೊತ್ತಿದ್ದರೂ ಅದರ ಯಥಾನುಷ್ಠಾನ ಅವರಿಗ್ಯಾರಿಗೂ ಸಾಧ್ಯವಾಗದು! ಆ ಕಲೆಯಲ್ಲಿ ಅಷ್ಟು ನಿಷ್ಣಾತರು ಅವರು! :((( ಇತ್ತೀಚೆಗೆ ದೇಶಕ್ಕೆ ಆಶಾಕಿರಣವಾಗಿ ಉದಯಿಸಿದ್ದ ಅಣ್ಣಾ ಹಜಾರೆ ತ೦ಡದ ನ ಸದಸ್ಯರು ಈಗ ಒಬ್ಬೊಬ್ಬರು ಒ೦ದೊ೦ದು ದಿಕ್ಕಿಗೆ ಮುಖ ಮಾಡಿರುವ ಪರಿಸ್ಠಿತಿ ನೋಡಿ. ಇ೦ದು ಅಣ್ಣಾ ಹಜಾರೆ ಉಪವಾಸಕ್ಕೆ ಕೂರುತ್ತಾರೆ೦ದರೆ “ ಅಲ್ಲೇನೋ ಮಹಾ ವಿಪ್ಲವ ಸ೦ಭವಿಸಬಹುದು“ ಎ೦ಬ ಯಾವ ಹೆದರಿಕೆ ಯಾರಿಗೂ ಇಲ್ಲ! ಅಣ್ಣಾ ಹಜಾರೆ ಮತ್ತೊಬ್ಬ ಜೆ.ಪಿ. ಯಾಗುವ ಎಲ್ಲಾ ಲಕ್ಷಣಗಳು ಕಾಣಿಸ ತೊಡಗಿವೆ! ಅಪರೂಪಕ್ಕೊ೦ದು ಸುದ್ದಿ ಗೋಷ್ಠಿ- ಅಲ್ಲೊ೦ದು ಕೇ೦ದ್ರ ಸರ್ಕಾರಕ್ಕೆ ಧಮಕಿ ಇಷ್ಟರಲ್ಲಿಯೇ ಆ ತ೦ಡ ಸುಮ್ಮನಾಗುತ್ತಿದೆ! ಬಾಬಾ ರಾಮ್ ದೇವ್ ರ ಆಪ್ತ ಕಾರ್ಯದರ್ಶಿ ಗೋಪಾಲಕೃಷ್ಣ, ಮಹಾಭಾರತದ ಕೃಷ್ಣನ೦ತೆ ಜೈಲು ಸೇರಿದ್ದಾನೆ! ಸಿ.ಬಿ.ಇ ಹೇಗಿದ್ದರೂ ಕಾ೦ಗ್ರೆಸ್ ಪಕ್ಷದ ಸ್ವ೦ತ ಆಸ್ತಿ! ಯಾರೂ ದೂರು ಕೊಡಲಿಲ್ಲವೆ೦ದರೆ ಯಾರಾದರೂ ಕಾಳಪ್ಪನನ್ನೋ- ಬೋಳಪ್ಪನನ್ನೋ ಹಿಡಿದು, ಪುಸಲಾಯಿಸಿ, ಅವನಿಗೆಲ್ಲಾ ಶಕ್ತಿ ನೀಡಿ, ದೂರು ನೀಡುವ೦ತೆ ಮಾಡುತ್ತಾರೆ! ಆನ೦ತರದ್ದೆಲ್ಲಾ ಸರ್ಕಾರ ಮೊದಲೇ ತೀರ್ಮಾನಿಸಿದ೦ತೆ! :((( ರಾಘವೇಂದ್ರ ಅವ್ರೆ- ಕಾಲದ ಕನ್ನಡಿ ಮೂಲಕ ನೀವ್ ಬರೆವ ಸಕಾಲಿಕ ಬರಹಗಳು ನನಗೆ ಅಚ್ಚು ಮೆಚ್ಚು.. ಈ ಬರಹದ ಮೂಲಕ ಸಮಗ್ರ ಚಿತ್ರಣ ನೀಡಿರುವಿರಿ.. ರಾಜಕೀಯದ ಈ ಆಟದಲ್ಲಿ(ತಂತ್ರ ಪ್ರತಿತಂತ್ರ-ರಣತಂತ್ರ -ಕುತಂತ್ರ ) ನೆಹರೂ ಕುಟುಂಬ ಸದಾ ಮುಂದು...!! ಪ್ರಣಬ್ ದಾ ಅವರ ಇತೀಚಿನ ನಡೆ ನುಡಿ ಹಾವ ಭಾವವೇ ಹೇಳುತ್ತಿತ್ತು ಅವರು ಅದ್ಕೆ ತಯಾರಿಲ್ಲ ಆದರೆ ಒತ್ತಾಯವಾಗಿ ಅಲ್ಲಿಗೆ ಸೇರಿಸಲಾಗುತ್ತಿದೆ ಅಂತ... :(( ನಮ್ಮ ದೇಶದಲ್ಲಿ ರಾಷ್ಟ್ರಪತಿ ಆಗಿ ಮತ್ತೆ ಸಕ್ರಿಯ ರಾಜಕೀಯಕ್ಕೆ ಇಳಿದ ಉದಾಹರಣೆ ಇಲ್ಲ ಅನ್ಸುತ್ತೆ. ಅಲ್ಲದೆ ಅದೇ ಟಾಪ್ ಪೋಸ್ಟ್ ಆಗಿದ್ದರಿಂದ ಅದಕಿಂತ ಕೆಳಗಿನ ಪೋಸ್ಟ್ ಗೆ ಯಾರೂ ಒಪ್ಪಲಿಲ್ಲವೇನೋ ..! ಹೀಗಾಗಿ ಪ್ರಣಬ್ ದಾ ತಮ ಅವಧಿಯ ನಂತರ ಮಾಜಿ ರಾಷ್ಟ್ರಪತಿ ಮಾತ್ರ ಆಗಿ ಎಲ್ಲ ಅರ್ಹತೆಯಿದ್ದು ಅದೃಷ್ಟ ( ಲಕ್ )ಇಲ್ಲದವರಾಗಿ ಮೂಲೆಗುಮ್ಪಾದವರಲಿ ಒಬ್ಬರಾಗುವರು... ಅಬ್ಬ ಈ ರಾಜಕೀಯ ನೋಡುತ್ತಿದ್ದರೆ ಯಾವ ಸಸ್ಪೆನ್ಸ್ ಸಿನೆಮಾಗೂ ಕಮ್ಮಿ ಇಲ್ಲ ಅನ್ಸುತ್ತೆ... ಈ ವಿಶ್ಲೇಷಣ ಬರಹ ಇಷ್ಟ ಆಯ್ತು... ಹಲವು ಅಚ್ಚರಿಯ ಸಂಗತಿಗಳು ತಿಳಿದವು... ಕುಮಾರ ಪಟ್ಟಾಭಿಷೇಕ ಆದರೂ ಅವರನ್ನ ಹರಸಬೇಕಾದವರ್ರು ಆರಿಸಬೇಕಾದವರೂ ಜನ ಸಾಮಾನ್ಯರೇ.. ಇಲ್ಲವಾದರೆ ಮನಮೋಹನ ಜೀ ತರಹ ಹಿಂದಿನ ಬಾಗಿಲ ಮೂಲಕ ಬರಬೇಕಾಗುತ್ತೆ ..!! ಶುಭವಾಗಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅಭಿಮಾನದ ಮೆಚ್ಚುಗೆ ಪೂರಿತ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು ಸಪ್ತಗಿರಿವಾಸಿಗಳೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಹತೆಯಿದ್ದರಿಬಹುದಾದರೂ ಯಾರದೇ/ಯಾವುದೇ ಕುಮಾರಸಂಭವ ಸಂಭವಿಸದಿದ್ದರೇ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅಭಿಪ್ರಾಯವೂ ಸರಿಯಾದುದೇ! ಆದರೆ ಪ್ರಜಾಪ್ರಭುತ್ವದ ಹಿತ ದೃಷ್ಟಿಯಿ೦ದ ಎ೦ಬ ನಿಮ್ಮ ಮಾತಿಗೆ... ಯಾರಿಗೆ ಬೇಕಾಗಿದೆ ರಾಜ್ಯಹಿತ? ನಿಮ್ಮ ಮೆಚ್ಚುಗೆಗೆ ನನ್ನ ವ೦ದನೆಗಳು. ಕಾಲದ ಕನ್ನಡಿಗೆ ನೀವು ನೀಡುತ್ತಿರುವ ನಿರ೦ತರ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ನಮ್ಮಲ್ಲಿ ಗಾದೆ ಮಾತೊಂದಿದೆ; ಅದೇನೆಂದರೆ ಬ್ರಾಹ್ಮಣರ ಮೇಲೆ ಸಿಟ್ಟುಮಾಡಿಕೊಂಡರೆ ಅವರ ಶಾಪ ನಮಗೆ ತಟ್ಟಬಹುದು; ಆದ್ದರಿಂದ ಅವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದರೆ ಅವರಿಗೆ ಆನೆಯನ್ನು ದಾನವಾಗಿ ಕೊಡುವುದು. ಪಾಪ ಆ ಬಡಬ್ರಾಹ್ಮಣ ಆನೆಯನ್ನು ಸಾಕಿ ಸಾಕಿ ಹೈರಾಣಾಗಿ ಹೋಗುತ್ತಾನೆ. ಅದನ್ನು ಮಾರಲಿಕ್ಕೂ ಸಾಧ್ಯವಿಲ್ಲ; ಏಕೆಂದರೆ ದಾನವಾಗಿ ಕೊಟ್ಟ ವಸ್ತುವನ್ನು ಮಾರಿಕೊಳ್ಳಬಾರದಲ್ಲ. :)) ಪಾಪ ಇಂದು ಪ್ರಣಬ್ ದಾದಾ ಎಂಬ ಬಡ ಬ್ರಾಹ್ಮಣನಿಗೆ ಸೋನಿಯಮ್ಮು ಅಧ್ಯಕ್ಷ ಪದವಿಯೆಂಬ ಆನೆಯನ್ನು ದಾನವಾಗಿ ಕೊಟ್ಟಿದ್ದಾರೆ. ಆ ಆನೆಯನ್ನು ಸಮರ್ಥವಾಗಿ ಪ್ರಣಬ್ ಹೇಗೆ ನಿಭಾಯಿಸುವರೋ ಕಾಲದ ಕನ್ನಡಿಯೇ ಹೇಳಬೇಕು. ರಾಜಕೀಯ ವಿಶ್ಲೇಷಣಾಯುಕ್ತ ಲೇಖನಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ... ಪ್ರಣವ್ ರೂ ಆನೆಯೂ.. ಎ೦ಬ ಮತ್ತೊ೦ದು ಲೇಖನಕ್ಕೆ ನನಗೆ ನಿಮ್ಮ ಮಾತು ಸ್ಪೂರ್ತಿಯಾಗಬಹುದೇನೋ ಎ೦ದೆನಿಸುತ್ತಿದೆ ಶ್ರೀಧರರೇ.. ನಿಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು. ಪ್ರೋತ್ಸಾಹ ಹೀಗೇ ಇರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಕನ್ನಡದ ಹಿತ್ತಿಲ ಮಣ್ಣಿನ ಮೊಮ್ಮಗ ಕುಮಾರಣ್ಣನ ಪಟ್ಟಾಭಿಷೇಕ ಅಂದುಕೊಂಡು ಆಸಕ್ತಿಯಿಂದ ಓದ ಹೋದರೆ ......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನೋ ಓದಲು ಹೋಗಿ ಏನೋ ಓದಿ ಹೋದ ನಿಮಗೆ ಉ೦ಟಾದ ಬೇಸರಕ್ಕೆ ಕ್ಷಮೆಯಾಚಿಸುತ್ತೇನೆ. ಮನ್ನಿಸಿ.. ಆದರೂ ಕುಮಾರ ಪಟ್ಟಾಭಿಷೇಕದ ವಿಶ್ಲೇಷಣೆ ಹೇಗಿದೆಯೆ೦ದು ಹೇಳಲು ಮರೆತಿರೇ? ಅಥವಾ ಅದಕ್ಕೂ ಬೇಸರವೇ? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.