ನೆನಪಿನಾಳದಿಂದ - ೨೫; ನನ್ನ ಈಜು ಕಲಿಕೆಯ ಪ್ರಸಂಗಗಳು.

0

ಇಂದು ದಿನಪತ್ರಿಕೆಯಲ್ಲಿ ಕೆಲವು ಮಕ್ಕಳು ಬೇಸಿಗೆಯ ರಜೆಯಲ್ಲಿ ಈಜು ಕಲಿಯಲು ಹೋಗಿ ಈಜುಕೊಳದಲ್ಲಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸತ್ತ ಸುದ್ಧಿ ಓದಿದೆ, ಮನಸ್ಸು ಮಮ್ಮಲ ಮರುಗಿತು.  ವರ್ಷಪೂರ್ತಿ ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಕ್ಕಳು ಬೇಸಿಗೆ ರಜೆಯಲ್ಲಿ ಅಜ್ಜಿ ಮನೆ(ಇದ್ದರೆ), ಇಲ್ಲದಿದ್ದರೆ ಬೇಸಿಗೆ ಶಿಬಿರಗಳು ಅಲ್ಲಿ ಇಲ್ಲಿ ಅಂತ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಅತ್ಯಂತ ಚಟುವಟಿಕೆಯಿಂದ ಕೂಡಿರುವ ಮಕ್ಕಳ ಸುರಕ್ಷತೆಯ ಬಗ್ಗೆ, ಅದೂ ಅವರ ಶಾಲಾ ರಜಾ ದಿನಗಳಲ್ಲಿ, ಪಾಲಕರು ಹಾಗೂ ಸುತ್ತಮುತ್ತಲಿನವರು ಅದೆಷ್ಟು ಕಾಳಜಿ ವಹಿಸಿದರೂ ಕಡಿಮೆಯೇ!  ಬೆಳಿಗ್ಗೆ ಎದ್ದರೆ ಹಲ್ಲುಜ್ಜಿ ಆತುರಾತುರವಾಗಿ ಸಿದ್ಧರಾಗಿ, ಶಾಲೆಯ ಬಸ್ ಹಿಡಿಯಲು ಓಡುವ ನಗರದ ಮಕ್ಕಳಿಂದ, ನಾಲ್ಕಾರು ಮೈಲಿ ನಡೆದೇ ಹೋಗುವ ಹಳ್ಳಿಗಾಡಿನ ಮಕ್ಕಳವರೆಗೂ, ಶಾಲೆಯ ದಿನಗಳಲ್ಲಿ ಪಂಜರದ ಗಿಳಿಗಳಾಗಿರುತ್ತಾರೆ.  ಆದರೆ ಒಮ್ಮೆ ಪರೀಕ್ಷೆ ಮುಗಿದು ಶಾಲೆಗೆ ಬೇಸಿಗೆ ರಜೆ ಬರುತ್ತಿದ್ದಂತೆ ಅವರು ಆಗಸದಲ್ಲಿ ಸ್ವಚ್ಚಂದವಾಗಿ ಹಾರಾಡುವ ಹಕ್ಕಿಗಳಂತಾಗಿಬಿಡುತ್ತಾರೆ.  ಸುತ್ತಲಿನ ಹಸಿರಿನ ನಡುವೆ, ಬೆಟ್ಟ, ಗುಡ್ಡ, ಕಣಿವೆ, ನೀರು, ನದಿ, ಕೆರೆ, ಹಳ್ಳಕೊಳ್ಳ ಯಾವುದನ್ನೂ ಬಿಡದೆ ಜಾಲಾಡುವ ಮನಸ್ಸಿನವರೂ ಇರುತ್ತಾರೆ.  ಇಂಥಾ ಮಕ್ಕಳ ಬಗ್ಗೆ ಅದೆಷ್ಟು ಕಾಳಜಿ ವಹಿಸಿದರೂ ಸಾಲದು.   ಈಜುಕೊಳದಲ್ಲಿ ಮಕ್ಕಳ ಸಾವಿನ ಘಟನೆಯನ್ನು ಓದಿದಾಗ ನನಗೆ ನನ್ನ ಬಾಲ್ಯದ ದಿನಗಳು ನೆನಪಾದವು. 

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ಲಿನಲ್ಲಿ ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಿನ ಘಟನೆಯಿದು. ಆಗ ಅಮ್ಮನ ಸಹಾಯಕಿಯಾಗಿದ್ದ ಅಕ್ಕಮ್ಮ ಎನ್ನುವವರ ಮಗ ಶಿವರಾಮ ನನ್ನ ಆಪ್ತನಾಗಿದ್ದ, ಅಷ್ಟೇ ಏಕೆ, ಬೇಸಿಗೆಯ ರಜೆಯಲ್ಲಿ ಸುತ್ತಲಿನ ಹಳ್ಳಿಗಳಲ್ಲಿ  ಬೇಲದ ಹಣ್ಣು, ಜಂಬು ನೇರಳೆ ಹಣ್ಣು, ಮಾವಿನ ಹಣ್ಣು, ಗೇರು ಹಣ್ಣು, ಈಚಲ ಹಣ್ಣು, ಬೆಟ್ಟದ ಬುಡಗಳಲ್ಲಿ ದೊರಕುವ ಕಾರೆಹಣ್ಣು ಎಲ್ಲೆಲ್ಲಿ ಯಥೇಚ್ಚವಾಗಿ ದೊರಕುತ್ತವೆಂದು ತಿಳಿಸಿ ಜೊತೆಗೆ ಕರೆದುಕೊಂಡು ಹೋಗಿ ಮರ ಹತ್ತಿಸುವ ಗುರುವೂ ಆಗಿದ್ದ. ಅವನ ಜೊತೆಗೆ ನಾನು ಸುತ್ತದ ಹಳ್ಳಿ ಇರಲಿಲ್ಲ, ಹತ್ತದ ಮರವಿರಲಿಲ್ಲ, ತಿನ್ನದ ಹಣ್ಣಿರಲಿಲ್ಲ, ಆಡದ ಆಟವಿರಲಿಲ್ಲ!  ಕೆಲವೊಮ್ಮೆ ಬೆಳಿಗ್ಗೆ ಅಪ್ಪನ ಹೋಟೆಲಿನಲ್ಲಿ ಗಡದ್ದಾಗಿ ಇಡ್ಲಿ-ಚಟ್ನಿ ತಿಂದು ಹೊರಟರೆ ಮತ್ತೆ ನಾವಿಬ್ಬರೂ ಹಿಂದಿರುಗುತ್ತಿದ್ದುದು ಸೂರ್ಯ ಮುಳುಗಿದ ನಂತರವೇ!  ಹೀಗೆ ಸುತ್ತು ಹೊಡೆಯುವಾಗಲೇ ನಮ್ಮ ಮೊದಲನೆಯ ಈಜು ಕಲಿಕೆಯ ಪ್ರಸಂಗ ನಡೆಯಿತು. 

ಮಂಡಿಕಲ್ಲು ತಗ್ಗಿನಲ್ಲಿರುವ ಹಳ್ಳಿ, ಸುತ್ತಲೂ ಬೆಟ್ಟಗಳಿಂದಾವೃತವಾಗಿದ್ದು ಸುಮಾರು ಏಳೆಂಟು ಕೆರೆಗಳಿದ್ದು  ವರ್ಷದ ಎಲ್ಲಾ ಕಾಲದಲ್ಲಿಯೂ ಒಂದಲ್ಲ ಒಂದು ಕೆರೆಯಲ್ಲಿ ನೀರು ತುಂಬಿರುತ್ತಿತ್ತು!  ಗುಂಡ್ಲು ಮಂಡಿಕಲ್ಲು ಎನ್ನುವ ಹಳ್ಳಿಯ ಪಕ್ಕದಲ್ಲಿದ್ದ ಕೆರೆಯಲ್ಲಿ ನಮ್ಮ ಮೊದಲನೆಯ ಈಜು ಪ್ರಸಂಗ ಆರಂಭವಾಯಿತು.  ಅಂದು ಶ್ರೀರಾಮದೇವರ ಬೆಟ್ಟದ ಬದಿಯಲ್ಲಿ ಸಾಕಷ್ಟು ಸುತ್ತಾಡಿ ಬೇಲದ ಹಣ್ಣು, ಜಂಬುನೇರಳೆ ಹಣ್ಣು, ಕಾರೆ ಹಣ್ಣುಗಳನ್ನು ಸಾಕಷ್ಟು ತಿಂದು, ಚಡ್ಡಿ ಜೇಬಿನಲ್ಲೂ ತುಂಬಿಕೊಂಡು ಹಿಂದಿರುಗುವಾಗ ಬಿಸಿಲಿನಿಂದ ಬಳಲಿದ್ದ ನಮಗೆ ಬಾಯಾರಿಕೆಯಾಗಿ ನೀರು ಕುಡಿಯಲೆಂದು ಆ ಕೆರೆಯ ಪಕ್ಕದಲ್ಲೇ ಬಂದಿದ್ದೆವು.  ನೀರು ಕುಡಿದ ನಂತರ ಶ್ರೀರಾಮ ನನಗೆ ಕೇಳಿದ್ದು, ನಿನಗೆ ಈಜು ಬರುತ್ತಾ? ನಾನು ಇಲ್ಲ ಎಂದಿದ್ದೆ.  ಹಾಗಾದರೆ ಬಾ ನಾನು ನಿನಗೆ ಈಜು ಕಲಿಸುತ್ತೇನೆ ಅಂದವನು ನನ್ನ ಕಣ್ಣಿಗೆ ಸಾಕ್ಷಾತ್ ಆಂಜನೇಯನಂತೆ ಕಂಡಿದ್ದ.  ಮೈಸೂರಿನಲ್ಲಿ ಹುಟ್ಟಿ ಬೆಳೆದಿದ್ದ ನನಗೆ ಗ್ರಾಮೀಣ ಬದುಕಿನ ಗಂಧ ಗಾಳಿಯೂ ಗೊತ್ತಿರಲಿಲ್ಲ, ಆದರೆ ಮಂಡಿಕಲ್ಲು ಮತ್ತು ಸುತ್ತಮುತ್ತಲ ಹಳ್ಳಿಗಳನ್ನು ಚೆನ್ನಾಗಿ ಸುತ್ತಾಡಿಸುತ್ತಿದ್ದ ಶ್ರೀರಾಮನಿಂದಾಗಿ ಗ್ರಾಮೀಣ ಭಾಗದ ಜೀವನದ ಪರಿಚಯ ನನಗೆ ಚೆನ್ನಾಗಿಯೇ ಆಗುತ್ತಿತ್ತು. 

ಯಾವುದೇ ಸಂಕೋಚವಿಲ್ಲದೆ ನನ್ನೆದುರಿಗೆ ತಾನು ತೊಟ್ಟಿದ್ದ ಅಂಗಿ ಮತ್ತು ಚಡ್ಡಿಯನ್ನು ಕಳಚಿ ನೀರಿಗಿಳಿದವನನ್ನು ನಾನು ಆಶ್ಚರ್ಯದಿಂದ ನೋಡುತ್ತಿದ್ದೆ.   ಅವನು ನೀರಿನಲ್ಲಿಳಿದು ಕೈ ಕಾಲು ಆಡಿಸುತ್ತಾ ಮೀನಿನಂತೆ ಈಜುತ್ತಿದ್ದರೆ ನಾನು ಬಿಟ್ಟ ಕಣ್ಣು ಬಿಟ್ಟ ಬಾಯಿಯಿಂದ ಅವನನ್ನೇ ನೋಡುತ್ತಿದ್ದೆ.  ಅವನು ಹಾಗೆ ಈಜು ಹೊಡೆಯುವುದನ್ನು ನೋಡುತ್ತಾ ಇದ್ದಂತೆ ನನಗೂ ಈಜು ಹೊಡೆಯಬೇಕೆಂಬ ಬಲವಾದ ಆಸೆ ಮನದಲ್ಲಿ ಗರಿಗೆದರಿತ್ತು. ಬಾರೋ ಬಾರೋ ಎಂದು ಕರೆಯುತ್ತಿದ್ದವನ ಕರೆಗೆ ಓಗೊಟ್ಟು ಅಂಗಿ ಚಡ್ಡಿ ಕಳಚಿಟ್ಟು ನಾನೂ ನೀರಿಗಿಳಿದೇ ಬಿಟ್ಟಿದ್ದೆ.  ಜೀವನದಲ್ಲಿ ಮೊದಲ ಬಾರಿಗೆ ಕೆರೆಯ ನೀರಿನಲ್ಲಿ ಈಜಲು ಇಳಿದಿದ್ದೆ, ಆದರೆ ಈಜು ಹೊಡೆಯುವುದು ಹೇಗೆಂಬುದೇ ನನಗೆ ಗೊತ್ತಿರಲಿಲ್ಲ!   ಶ್ರೀರಾಮನ ನಿರ್ದೇಶನದಂತೆ ಕೈ ಕಾಲು ಆಡಿಸುತ್ತಾ ಈಜು ಹೊಡೆಯಲು ಪ್ರಯತ್ನಿಸಿದರೆ ಅದು ಸಾಧ್ಯವಾಗದೆ ನೀರಿನಲ್ಲಿ ಮುಳುಗುತ್ತಿದ್ದೆ, ಕಿವಿ, ಕಣ್ಣು, ಮೂಗು, ಬಾಯಿಗಳಲ್ಲೆಲ್ಲಾ ಕೆರೆಯ ನೀರು ನುಗ್ಗಿ ಉಸಿರಾಡಲು ಒದ್ದಾಡುತ್ತಿದ್ದೆ!  ನನ್ನ ಒದ್ದಾಟವನ್ನು ಕಂಡು ಮಜಾ ತೆಗೆದುಕೊಳ್ಳುತ್ತಿದ್ದ ಅವನು ಸರಿಯಾಗಿ ಕೈ ಕಾಲು ಹೊಡೆಯುವಂತೆ ನಿರ್ದೇಶನ ನೀಡುತ್ತಾ ನನ್ನನ್ನು ಹುರಿದುಂಬಿಸುತ್ತಿದ್ದ, ಆದರೆ ಜೀವನದಲ್ಲೆಂದೂ ನೀರಿಗಿಳಿಯದಿದ್ದ ನನಗೆ ಅವನಂತೆ ಕೈ ಕಾಲು ಹೊಡೆದು ಈಜಲು ಸಾಧ್ಯವಾಗದೆ ಸುಸ್ತಾಗಿ ದಡಕ್ಕೆ ಹಿಂದಿರುಗಿ ಕುಳಿತು ಬಿಟ್ಟಿದ್ದೆ.  ಅದೇ ಸಮಯಕ್ಕೆ ನೀರು ಕುಡಿಯಲು ಕೆರೆಗೆ ಬಂದ ನಾಲ್ಕಾರು ಎಮ್ಮೆಗಳನ್ನು ನೋಡಿದ ಶ್ರೀರಾಮ ಲೇ ಮಂಜಾ, ಎಮ್ಮೆ ಸವಾರಿ ಮಾಡೋಣ ಬಾರೋ ಅಂದ.  ಅವನಿಗೆ ಪರಿಚಯವಿದ್ದ(!) ಒಂದು ಎಮ್ಮೆಯ ಮೇಲೆ ಹತ್ತಿ ಕುಳಿತು ಯಮಧರ್ಮರಾಜನಂತೆ ಫೋಸು ಕೊಟ್ಟಿದ್ದ.  ಅವನನ್ನು ಹೊತ್ತ ಎಮ್ಮೆ ಆರಾಮಾಗಿ ಕೆರೆಯಲ್ಲಿ ನೀರು ಕುಡಿದು, ಒಂದು ರೌಂಡು ಕೆರೆಯ ನೀರಿನಲ್ಲಿ ಸುತ್ತಾಡಿ ಬಂದಿತ್ತು.  ಇದರಿಂದ ಉತ್ತೇಜಿತನಾದ ನಾನೂ ಸಹ ಅವನ ಜೊತೆಯಲ್ಲಿ ಎಮ್ಮೆಯ ಮೇಲೆ ಹತ್ತಿ ಕುಳಿತಿದ್ದೆ!  ಸ್ವಲ್ಪ ದೂರ ನೀರಿನಲ್ಲಿ ನನ್ನ ಹಿಂದೆ ಎಮ್ಮೆಯ ಮೇಲೆ ಕುಳಿತಿದ್ದ ಅವನು ಚಂಗನೆ ನೀರಿಗೆ ಹಾರಿ ಚಮ್ಮೀನಿನಂತೆ ಈಜತೊಡಗಿದ. ಗಾಭರಿಯಾದ ನಾನು ಎಮ್ಮೆಯ ಮೂಗುದಾರವನ್ನು ಬಿಗಿಯಾಗಿ ಹಿಡಿದೆಳೆದಿದ್ದೆ, ನೋವಿನಿಂದ ಹೂಂಕರಿಸಿದ ಎಮ್ಮೆ ಒಮ್ಮೆ ಜೋರಾಗಿ ಮೈಕೊಡವಿ ನನ್ನನ್ನು ಅನಾಮತ್ತಾಗಿ ನೀರಿಗೆಸೆದಿತ್ತು.  ಮೊದಲೇ ಈಜು ಬರದಿದ್ದ ನಾನು ಕುತ್ತಿಗೆ ಮಟ್ಟಕ್ಕಿಂತ ಹೆಚ್ಚಿದ್ದ ನೀರಿನಲ್ಲಿ ಮೇಲು ಕೆಳಗಾಗುತ್ತಾ, ಕೆರೆಯ ನೀರನ್ನು ಕುಡಿಯುತ್ತಾ ಮುಳುಗತೊಡಗಿದ್ದೆ!  ತಕ್ಷಣ ನನ್ನ ಬಳಿಗೆ ಬಂದ ಶ್ರೀರಾಮ ನನ್ನನ್ನು ಹಿಡಿದು ದಡಕ್ಕೆಳೆಯಲು ಯತ್ನಿಸಿದ್ದ, ಆದರೆ ನನ್ನ ಬಲವಾದ ಹಿಡಿತಕ್ಕೆ ಸಿಕ್ಕಿ ನನ್ನೊಡನೆ ಅವನೂ ಮುಳುಗತೊಡಗಿದ್ದ.  ಆದರೂ ತಲೆ ಓಡಿಸಿ ಒಂದು ಕೈಯ್ಯಲ್ಲಿ ನನ್ನನ್ನು ಹಿಡಿದು ಮತ್ತೊಂದು ಕೈಯ್ಯಲ್ಲಿ ಎಮ್ಮೆಯ ಬಾಲವನ್ನು ಹಿಡಿದುಕೊಂಡಿದ್ದ.  ನೀರು ಕುಡಿದು ಪ್ರಸನ್ನವಾಗಿದ್ದ ಎಮ್ಮೆ ಸಾವಕಾಶವಾಗಿ ನಮ್ಮಿಬ್ಬರನ್ನೂ ದಡಕ್ಕೆಳೆದುಕೊಂಡು ಬಂದಿತ್ತು.  ದಡದ ಮೇಲೆ ನನ್ನನ್ನು ಬೋರಲಾಗಿ ಮಲಗಿಸಿ ತನ್ನೆಲ್ಲ ಶಕ್ತಿಯನ್ನು ಬಿಟ್ಟು ನನ್ನ ಬೆನ್ನನ್ನು ಒತ್ತುತ್ತಾ ನನ್ನ ಹೊಟ್ಟೆ ಸೇರಿದ್ದ ಕೆರೆಯ ನೀರನ್ನೆಲ್ಲ ಕಕ್ಕಿಸಿದ್ದ!  ಸುಮಾರು ಹೊತ್ತು ಹಾಗೆಯೇ ಆಶಕ್ತನಾಗಿ ಬಿದ್ದುಕೊಂಡಿದ್ದ ನಾನು ಕೊನೆಗೆ ಎದ್ದು ಕುಳಿತಾಗ ಇನ್ನೆಂದಿಗೂ ಈಜು ಹೊಡೆಯಲು ನೀರಿಗಿಳಿಯಬಾರದೆಂದು ಶಪಥ ಮಾಡಿದ್ದೆ. ನನ್ನ ಮೊದಲನೆಯ ಈಜು ಕಲಿಕೆಯ ಪ್ರಸಂಗ ಅಲ್ಲಿಗೆ ಮುಗಿದಿತ್ತು.  ಸಂಜೆ ತಡವಾಗಿ ಮನೆಗೆ ಬಂದಿದ್ದಕ್ಕಾಗಿ ಅಪ್ಪನಿಂದ ಸಾಕಷ್ಟು ಬೈಗುಳಗಳ ನಾಮಾರ್ಚನೆಯ ಜೊತೆಗೆ ಒಂದೆರಡು ಒದೆಗಳೂ ಬಿದ್ದಿದ್ದವು.  

ಮಂಡಿಕಲ್ಲಿನಿಂದ ಅಮ್ಮನಿಗೆ ವರ್ಗವಾಗಿ ಕೊರಟಗೆರೆಗೆ ಬಂದಾಗ ಮಾಧ್ಯಮಿಕ ಶಾಲೆಯಲ್ಲಿ ನಾನು ಸದಾ ಅಂತರ್ಮುಖಿಯಾಗಿರುತ್ತಿದ್ದೆ.  ಪ್ರಾಥಮಿಕ ಶಾಲೆಯ ಸ್ನೇಹಿತರು ಯಾರೂ ಇರಲಿಲ್ಲ, ತರಗತಿಯಲ್ಲಿದ್ದವರೆಲ್ಲಾ ನನಗೆ ಹೊಸಬರೇ ಆಗಿದ್ದರು.  ತೆಲುಗು ಪ್ರಾಬಲ್ಯದ ಮಂಡಿಕಲ್ಲಿನ ಶಾಲೆಯ ವಾತಾವರಣಕ್ಕೂ ಕೊರಟಗೆರೆಯ ಅಪ್ಪಟ ಕನ್ನಡ ಶಾಲೆಯ ವಾತಾವರಣಕ್ಕೂ ಹೊಂದಿಕೊಳ್ಳಲು ನನಗೆ ತುಸು ಸಮಯ ಹಿಡಿದಿತ್ತು.  ಒಟ್ಟು ಹನ್ನೊಂದು ಜನ ಮಂಜುನಾಥರು ಇದ್ದ ಆ ತರಗತಿಯಲ್ಲಿ ಕೊನೆಗೂ ನನ್ನದೇ ಹೆಸರಿನ ನಾಲ್ಕು ಜನರು ನನಗೆ ಹೆಚ್ಚು ಆಪ್ತರಾಗಿದ್ದರು.  ಅಪ್ಪನ ಹೋಟೆಲ್ಲಿನ ಕೆಲಸ, ಸೀಮೆಣ್ಣೆ ಹುಡುಕಾಟಗಳ ನಡುವೆ ಸಿಕ್ಕ ಬಿಡುವಿನಲ್ಲಿ ಈ ನಾಲ್ವರೊಡನೆ ನನ್ನ ಸುತ್ತಾಟ!  ಅಲ್ಲಿಯೂ ಬೇಸಿಗೆ ರಜೆ ಬಂತೆಂದರೆ ಸುತ್ತಲಿನ ಬೆಟ್ಟಗುಡ್ಡಗಳನ್ನು, ಕೆರೆ ಕಟ್ಟೆಗಳನ್ನು ಜಾಲಾಡಲು ಹೊರಟು ಬಿಡುತ್ತಿದ್ದೆವು. ಯಥೇಚ್ಚವಾಗಿ ದೊರಕುತ್ತಿದ್ದ ಹಣ್ಣು ಹಂಪಲುಗಳನ್ನು ತಿಂದು ಸಂಭ್ರಮಿಸುತ್ತಿದ್ದೆವು.  ಹೀಗೆಯೇ ಇರುವಾಗ ಕೊರಟಗೆರೆಯ ಅಮಾನಿಕೆರೆಯಲ್ಲಿ ಒಂದು ದಿನ ಈಜು ಹೊಡೆಯುವ ಪ್ರಸಂಗ ಬಂದೇ ಬಿಟ್ಟಿತು.  ಬೇಸಿಗೆಯ ಬಿರುಬಿಸಿಲಿನಲ್ಲಿ ಸುತ್ತು ಹೊಡೆದು ಸುಸ್ತಾಗಿ ನೀರು ಕುಡಿಯಲೆಂದು ಕೆರೆಯ ಬಳಿಗೆ ಬಂದಾಗ ನನ್ನನ್ನು ಬಿಟ್ಟು ಉಳಿದವರೆಲ್ಲಾ ಈಜು ಹೊಡೆಯಲು ಕೆರೆಗೆ ಇಳಿದಿದ್ದರು.  ನಾನು ಮಾತ್ರ ಯಾವುದೇ ಕಾರಣಕ್ಕೂ ನಾನು ಕೆರೆಗೆ ಇಳಿಯುವುದಿಲ್ಲವೆಂದು ಹೇಳಿ ಅವರ ಬಟ್ಟೆಗಳನ್ನು ಕಾಯುತ್ತಾ ದಡದಲ್ಲಿ ನಿಂತಿದ್ದೆ.  ಆದರೆ ನನ್ನ ದುರಾದೃಷ್ಟ!  ಅದೇ ಸಮಯಕ್ಕೆ ಅಲ್ಲಿಗೆ ಬಂದ ಕಾಲೇಜು ಹುಡುಗರ ಹಿಂಡೊಂದು ಈಜು ಹೊಡೆಯುತ್ತಿದ್ದ ನನ್ನ ಗೆಳೆಯರನ್ನು ನೋಡಿ, ಅವರ ಬಟ್ಟೆಗಳನ್ನೆಲ್ಲ ಎತ್ತಿಕೊಂಡು ಹೋಗಿ ಅನತಿ ದೂರದಲ್ಲಿದ್ದ ಮರದ ಮೇಲಿಟ್ಟು ಬಿಟ್ಟಿದ್ದರು. ವಿರೋಧಿಸಿದ ನನ್ನನ್ನು ನಾಲ್ವರು ಅನಾಮತ್ತಾಗಿ ಎತ್ತಿ ತಂದು ಕೆರೆಗೆ ಬಿಸಾಕಿದ್ದರು, ಈಜು ಬರದೆ ನಾನು ನೀರು ಕುಡಿಯುತ್ತಾ, ಮುಳುಗುತ್ತಾ, ತೇಲುತ್ತಾ ಒದ್ದಾಡುತ್ತಿದ್ದರೆ ಅದನ್ನು ನೋಡಿ ವಿಚಿತ್ರ ಮಜಾ ತೆಗೆದುಕೊಳ್ಳುತ್ತಿದ್ದರು.  ಕೊನೆಗೆ ನಾನು ಮೇಲೇಳಲಾಗದೆ ನೀರಿನಲ್ಲಿ ಮುಳುಗಿದಾಗ ಆ ಗುಂಪಿನಲ್ಲಿದ್ದ ಒಬ್ಬ ಒಳ್ಳೆಯ ಹುಡುಗ ನೀರಿಗೆ ಧುಮುಕಿ ನನ್ನ ಜುಟ್ಟು ಹಿಡಿದು ಅನಾಮತ್ತಾಗಿ ಎಳೆತಂದು ದಡಕ್ಕೆ ಹಾಕಿ, ನನ್ನ ಬೆನ್ನನ್ನು ತುಳಿದು ತುಳಿದೂ ನನ್ನ ಹೊಟ್ಟೆಯಲ್ಲಿದ್ದ ನೀರನ್ನೆಲ್ಲಾ ಕಕ್ಕಿಸಿದ್ದ.  ಸುಧಾರಿಸಿಕೊಂಡ ನಂತರ ಗೆಳೆಯರೆಲ್ಲಾ ಸೇರಿ ನನ್ನನ್ನು ಮನೆಗೆ ಕರೆತಂದಿದ್ದರು, ಮನೆಯಲ್ಲಿದ್ದ ಅಕ್ಕನಿಗೆ ನನ್ನ ಸ್ನೇಹಿತನೊಬ್ಬ ನಡೆದ ವಿಚಾರವನ್ನೆಲ್ಲ ತಿಳಿಸಿಬಿಟ್ಟಿದ್ದ!  ಅಕ್ಕ ಯಥಾವತ್ ವರದಿಯನ್ನು, ಇನ್ನಷ್ಟು ಉಪ್ಪುಕಾರ ಹಚ್ಚಿ, ಅಪ್ಪನಿಗೆ ಒದರಿದ್ದಳು.  ಮೊದಲೇ ಮಹಾನ್ ಕೋಪಿಷ್ಟನಾಗಿದ್ದ ಅಪ್ಪನಿಗೆ ಯಾರೋ ನಾಲ್ವರು ಕಾಲೇಜು ಹುಡುಗರು ನನ್ನನ್ನು ಹಾಗೆ ಕೆರೆಗೆ ಎಸೆದಿದ್ದು ಬಹಳ ಅವಮಾನಕರವಾಗಿ ಕಂಡಿತ್ತು.  ತಮ್ಮ ಪಟಾಲಮ್ಮಿನೊಡನೆ ಆ ಹುಡುಗರನ್ನು ಹುಡುಕಿ, ಅವರ ಮನೆಗಳಿಗೆ ಹೋಗಿ ಅವರ ಪೋಷಕರ ಮುಂದೆಯೇ ಚೆನ್ನಾಗಿ ತದುಕಿ, ಬಾಲ ಬಿಚ್ಚಿದರೆ ಪೊಲೀಸರಿಗೆ ದೂರು ನೀಡಿ ಒಳಕ್ಕೆ ಹಾಕಿಸುವುದಾಗಿ ಗುಟುರು ಹಾಕಿ ಬಂದಿದ್ದರು. 

ಕೊರಟಗೆರೆಯಿಂದ ಅಮ್ಮನಿಗೆ ತಿಪಟೂರಿಗೆ ವರ್ಗವಾಗಿತ್ತು. ಮಾಧ್ಯಮಿಕ ಶಾಲೆ ಮುಗಿಸಿದ್ದ ನಾನು ಪ್ರೌಢಶಾಲೆಗೆ ಸೇರಿದ್ದು, ಪದವೀಧರನಾಗಿದ್ದೂ ಇದೇ ತಿಪಟೂರಿನಲ್ಲಿ!  ಪ್ರೌಢಶಾಲೆಯಲ್ಲಿ  ಸಾಕಷ್ಟು ಸಂಘರ್ಷದ ನಡುವೆಯೇ ನನ್ನ ವಿದ್ಯಾಭ್ಯಾಸ ನಡೆದಿತ್ತು, ಆಟ, ಸುತ್ತಾಟಗಳಿಗೆ ಸಮಯವೇ ಇರಲಿಲ್ಲ!  ಆದರೆ ಪ್ರೌಢಶಾಲೆ ದಾಟಿ ಕಾಲೇಜಿಗೆ ಬಂದ ನಂತರ ಗೆಳೆಯರ ಜೊತೆ ಸುತ್ತಾಟ ಹೆಚ್ಚಾಗಿತ್ತು.  ಹೀಗೆ ಸುತ್ತಾಡುವಾಗಲೇ ಮತ್ತೊಮ್ಮೆ ಈಜು ಪ್ರಸಂಗ ಎದುರಾಗಿದ್ದು!  ಆತ್ಮೀಯ ಗೆಳೆಯ ಬಸವರಾಜನ ತೋಟದಲ್ಲಿ ದೊಡ್ಡದೊಂದು ತೆರೆದ ಬಾವಿಯಿತ್ತು.  ಒಂದು ಬೇಸಿಗೆಯ ರಜದಲ್ಲಿ ಎಲ್ಲ ಸ್ನೇಹಿತರೂ ಅವರ ತೋಟದಲ್ಲಿ ಸೇರಿದ್ದೆವು.  ಚೆನ್ನಾಗಿ ಎಳನೀರು ಕುಡಿದು ಸಾಕಷ್ಟು ಹರಟಿದ ನಂತರ ಗೆಳೆಯರೆಲ್ಲಾ ಈಜು ಹೊಡೆಯಲು ಬಾವಿಗಿಳಿದರು.   ಆದರೆ ನಾನು ಮಾತ್ರ ನನ್ನ ಹಿಂದಿನ ಈಜಿನ ಅನುಭವಗಳನ್ನು ಹೇಳಿ ಯಾವುದೇ ಕಾರಣಕ್ಕೂ ನಾನು ನೀರಿಗಿಳಿಯುವುದಿಲ್ಲವೆಂದು ದಡದಲ್ಲಿ ಕುಳಿತು ಅವರೆಲ್ಲಾ ಈಜು ಹೊಡೆಯುತ್ತಾ ಮೋಜು ಮಾಡುವುದನ್ನು ನೋಡುತ್ತಿದ್ದೆ!  ಅವರೆಲ್ಲರಿಗಿಂತ ನಾನು ಅಶಕ್ತನೆಂಬ ಕೀಳರಿಮೆ ನನ್ನಲ್ಲಿ ಕಾಡುತ್ತಿತ್ತು.  ಓದುವುದರಲ್ಲಿ, ಸೈಕಲ್ ರೇಸುಗಳಲ್ಲಿ, ಪ್ರವಾಸಗಳಲ್ಲಿ, ಎನ್.ಸಿ.ಸಿ.ಯಲ್ಲಿ ಎಲ್ಲದರಲ್ಲಿಯೂ ಮುಂದಿದ್ದ ನನಗೆ ಈ ಈಜುವಿದ್ಯೆ ಒಂದು ಮರೀಚಿಕೆಯಾಗಿತ್ತು.  ಕೊನೆಗೂ ಗೆಳೆಯ ಬಸವರಾಜನ ಒತ್ತಡಕ್ಕೆ ಕಟ್ಟು ಬಿದ್ದು ಹೇಗಾದರೂ ಸರಿ, ಈಜು ಹೊಡೆಯುವುದನ್ನು ಕಲಿಯಲೇಬೇಕೆಂದು ನಿರ್ಧರಿಸಿದೆ.  ಅವರ ತೋಟದ ಮನೆಯ ಅಟ್ಟದ ಮೇಲಿಂದ ಚೆನ್ನಾಗಿ ಒಣಗಿದ್ದ ಹತ್ತಾರು ತೆಂಗಿನಕಾಯಿಗಳನ್ನು ತಂದ ಬಸವರಾಜ ಅವುಗಳನ್ನು ನನ್ನ ಬೆನ್ನಿಗೆ ಈಜುಬುರುಡೆಗಳ ರೀತಿಯಲ್ಲಿ ಸಣ್ಣದೊಂದು ಹಗ್ಗದಿಂದ ಕಟ್ಟಿದ.  ಈಜು ಹೊಡೆಯುವುದು ಅಷ್ಟೇನೂ ಕಷ್ಟವಲ್ಲ, ಬಹಳ ಸುಲಭ, ನೀನು ಮನಸ್ಸಿಟ್ಟು ಕಲಿಯಬೇಕು ಅಷ್ಟೇ ಎಂದು ಧೈರ್ಯದ ಮಾತುಗಳನ್ನಾಡುತ್ತಾ, ಹರಕೆಯ ಕುರಿಯಂತೆ ನನ್ನನು ಬಾವಿಯ ದಡಕ್ಕೆ ಕರೆತಂದ.  ಸುಮಾರು ಇಪ್ಪತ್ತು ಅಡಿಯಷ್ಟು ಆಳದಲ್ಲಿದ್ದ ನೀರನ್ನು ನೋಡಿ ನನ್ನ ಕಾಲುಗಳು ಕಂಪಿಸುತ್ತಿದ್ದವು.  ಬೇಡ ಕಣೋ, ನಾನು ನೀರಿಗಿಳಿಯೋದಿಲ್ಲ ಎಂದವನು ಬೆನ್ನಿಗೆ ಕಟ್ಟಿದ್ದ ತೆಂಗಿನ ಕಾಯಿಗಳನ್ನು ಬಿಚ್ಚಲು ಹೋದೆ!  ಅಲ್ಲಿಯವರೆಗೂ ಮೂಕಪ್ರೇಕ್ಷಕರಂತೆ ನೋಡುತ್ತಿದ್ದ ಇತರ ಗೆಳೆಯರೆಲ್ಲ ಒಮ್ಮೆಗೇ ನನ್ನ ಬಳಿ ಬಂದು ಅನಾಮತ್ತಾಗಿ ನನ್ನನ್ನು ಹಿಡಿದೆತ್ತಿ ಬೊಂಬೆಯಂತೆ ಆ ಬಾವಿಯೊಳಕ್ಕೆಸೆದಿದ್ದರು.  ಇಪ್ಪತ್ತು ಅಡಿ ಎತ್ತರದಿಂದ ನೀರಿಗೆ ಬಿದ್ದ ನಾನು ಸೀದಾ ಬಾವಿಯ ತಳಕ್ಕೆ ಹೋಗಿ ಮತ್ತೆ ಒಣಗಿದ ತೆಂಗಿನಕಾಯಿಗಳಿಂದಾಗಿ ಮೇಲಕ್ಕೆ ಬಂದಿದ್ದೆ!  ಆದರೆ ಅದಾಗಲೇ ಸಾಕಷ್ಟು ನೀರು ನನ್ನ ಮೂಗು ಬಾಯಿಗಳಿಂದ ನನ್ನ ಹೊಟ್ಟೆ ಹಾಗೂ ಶ್ವಾಸಕೋಶವನ್ನು ಸೇರಿಬಿಟ್ಟಿತ್ತು.  ಉಸಿರಾಡಲಾಗದೆ ಕೈ ಕಾಲು ಬಡಿಯುತ್ತಾ ಒದ್ದಾಡುತ್ತಿದ್ದ ನನ್ನನ್ನು ಮತ್ತೆ ದಡಕ್ಕೆಳೆದೊಯ್ದ ಗೆಳೆಯರು ಬೇಡ ಬೇಡವೆಂದರೂ ಮತ್ತೊಮ್ಮೆ ಅನಾಮತ್ತಾಗಿ ಬಾವಿಯೊಳಕ್ಕೆಸೆದಿದ್ದರು!  ಈ ಬಾರಿ ಬೆನ್ನ ಹಿಂದೆ ಹಗ್ಗದಿಂದ ಕಟ್ಟಿದ್ದ ತೆಂಗಿನಕಾಯಿಗಳು ನಾನು ಬಿದ್ದ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ, ನೀರಿನ ಮೇಲೆ ಬಂದು ತೇಲುತ್ತಿದ್ದವು, ನಾನು ಮಾತ್ರ ಬಾವಿಯ ತಳ ಕಚ್ಚಿಕೊಂಡಿದ್ದೆ!  ಇದನ್ನು ಕಂಡು ಒಮ್ಮೆಗೇ ಬಾವಿಗೆ ಧುಮುಕಿದ ನನ್ನಿಬ್ಬರು ಗೆಳೆಯರು ತಳ ಕಚ್ಚಿದ್ದ ನನ್ನನ್ನು ದಡಕ್ಕೆ ಹೊತ್ತು ತಂದಿದ್ದರು.  ಬೋರಲಾಗಿ ಮಲಗಿಸಿ ಚೆನ್ನಾಗಿ ತುಳಿದು ಕುಡಿದಿದ್ದ ನೀರನ್ನೆಲ್ಲಾ ಕಕ್ಕಿಸಿದ್ದರು, ಆದರೆ ಈ ಬಾರಿ ನೀರಿನ ಹೊಡೆತ ಜೋರಾಗಿಯೇ ಇತ್ತು.  ಅಂದು ಹಿಡಿದ ಜ್ವರ ಸುಮಾರು ಒಂದು ವಾರ ಬಿಡದೆ ಕಾಡಿತ್ತು!  ಈಜು ಕಲಿಯಬೇಕೆಂಬ ನನ್ನಾಸೆಗೆ ಎಳ್ಳು ನೀರು ಬಿಟ್ಟಿತ್ತು. 

ಅದೆಷ್ಟೋ ಸಲ ರಜಾದಿನಗಳಲ್ಲಿ ಹೊಳೆನರಸೀಪುರಕ್ಕೆ ಹೋಗುತ್ತಿದ್ದೆ, ಬೆಳಿಗ್ಗೆ ಹಾಗೂ ಸಂಜೆ ಹೇಮಾವತಿಯ ದಡದಲ್ಲಿ ಹೋಗಿ ನೀರಿನಲ್ಲಿ ಕಾಲಾಡಿಸುತ್ತಾ ಕುಳಿತಿರುತ್ತಿದ್ದೆ!  ಯಾವ ಅಳುಕಿಲ್ಲದೆ ರಭಸವಾಗಿ ಹರಿಯುವ ನೀರಿಗೆ ಧುಮುಕಿ ಮೀನುಗಳಂತೆ ಈಜುವ ಹುಡುಗರನ್ನು ನೋಡಿ ಖುಷಿಪಡುತ್ತಿದ್ದೆ.  ಆದರೆ ಧೈರ್ಯ ಮಾಡಿ ನಾನು ನೀರಿಗಿಳಿದಾಗ ಮಾತ್ರ ಆ ಹುಡುಗರ ರೀತಿಯಲ್ಲಿ ಈಜಲು ನನಗೆ ಸಾಧ್ಯವಾಗುತ್ತಿರಲಿಲ್ಲ!  ನನ್ನನ್ನು ನಾನು ಬೈದುಕೊಂಡು, ಸುಮ್ಮನೆ ಸ್ನಾನ ಮಾಡಿ ದಡಕ್ಕೆ ಬರುತ್ತಿದ್ದೆ.   

ಈಗ ದುಬೈಗೆ ಬಂದ ನಂತರವೂ ಇಲ್ಲಿನ ಪ್ರಸಿದ್ಧ ಜುಮೈರಾ ಬೀಚಿಗೆ ಎಷ್ಟೋ ಸಲ ಹೋಗಿದ್ದೇನೆ.  ಕೈಕಾಲು ಆಡಿಸುತ್ತಾ ಆ ಉಪ್ಪು ನೀರಿನಲ್ಲಿ ಬಿದ್ದು ಒದ್ದಾಡಿದ್ದೇನೆ, ಕುತ್ತಿಗೆ ಮಟ್ಟದ ನೀರಿನವರೆಗೂ ಹೋಗಿ ಬಂದಿದ್ದೇನೆ, ಮುಖ ಮೇಲು ಮಾಡಿ ಸತ್ತ ಹೆಣದಂತೆ ತೇಲಿದ್ದೇನೆ, ಆದರೆ ಭರ್ಜರಿಯಾಗಿ ಕೈ ಕಾಲು ಆಡಿಸುತ್ತಾ ಈಜು ಹೊಡೆಯುವುದು ಮಾತ್ರ ಇಂದಿಗೂ ಕನಸಾಗಿಯೇ ಉಳಿದಿದೆ.   ಏನೆಲ್ಲಾ ವಿದ್ಯೆಗಳನ್ನು ಕಲಿತು ದೇಶ ವಿದೇಶ ಸುತ್ತಿದರೂ, ಇದೊಂದು ಈಜುವಿದ್ಯೆ ಮಾತ್ರ ನನ್ನ ಕೈಗೆಟುಕದ ಗಗನಕುಸುಮವಾಗಿಯೇ ಉಳಿದುಬಿಟ್ಟಿದೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಂಜುನಾಥರಿಗೆ ನಮಸ್ಕಾರಗಳು!
ಹೇಮಾವತಿ ತೀರದಲ್ಲಿ ಬೆಳೆದ ನಿಮಗೆ ಚೆನ್ನಾಗಿ ಈಜು ಬರುತ್ತದೆಯೆಂದೇ ಭಾವಿಸಿದ್ದೆ. ಆದರೆ ಚಿಂತಿಸಬೇಕಿಲ್ಲ - ಈಜು ಕಲಿಯಲು ಸ್ವಲ್ಪ ಸಮಯ ವ್ಯಯಿಸಬೇಕಷ್ಟೆ! ಯಾವ ವಯಸ್ಸಿನಲ್ಲಿ ಬೇಕಾದರೂ ಕಲಿಯಬಹುದು.
ನಾನು ಮೈಸೂರಿನ ಸಿ.ಎಫ಼್.ಟಿ.ಆರ್.ಐ.ನ ಈಜುಕೊಳದಲ್ಲಿ ಈಜು ಕಲಿತದ್ದು ನನ್ನ ೨೪ನೆಯ ವಯಸ್ಸಿನಲ್ಲಿ! ಆಗ ನಮ್ಮ ಬ್ಯಾಚ್ ನಲ್ಲಿ ೭೦ ವರ್ಷದ ಪ್ರೊಫ಼ೆಸರ್ ಮತ್ತು ೬೫ ವರ್ಷದ ಅವರ ಪತ್ನಿ ನಮ್ಮೊಂದಿಗೆ ಈಜು ಕಲಿಯಲು ಬಂದಿದ್ದರು. ಪ್ರೊಫ಼ೆಸರರಿಗೆ ಈಜು ಕಲಿಯಲು ಸುಮಾರು ೨೦ ದಿನಗಳು ಬೇಕಾಯಿತು ಆದರೆ ಅವರ ಪತ್ನಿ ೧೦ ದಿನಗಳಲ್ಲೇ ಕಲಿತಿದ್ದರು! ಮುಂದೆ ನಾನು ಕೆಲಸಕ್ಕೆ ಸೇರಿ ತರಬೇತಿಯಲ್ಲಿದ್ದಾಗ ಇಂದಿನ ಛತ್ತೀಸಗಢದ ರಾಯಪುರದಲ್ಲಿ ನನ್ನ ಈಜು ಬಾರದ ಹಲವು ಮಿತ್ರರಿಗೆ ಸುಮಾರು ೧೫ ದಿನಗಳಲ್ಲಿ ಈಜು ಕಲಿಸಿದ್ದೆ. ಹಾಗೆಯೇ ನನ್ನ ಇಬ್ಬರು ಹೆಣ್ಣುಮಕ್ಕಳಿಗೆ ಕೂಡಾ ಪ್ರಾರಂಭದ ತರಬೇತಿ ಕೊಟ್ಟಿದ್ದೆ!
ಆದ್ದರಿಂದ ನೀವು ನಿರಾಶರಾಗಬೇಕಿಲ್ಲ - ಈಜು ಯಾರು ಯಾವಾಗ ಬೇಕಾದರೂ ಕಲಿಯಬಹುದು - ದಿನಕ್ಕೊಂದು ಗಂಟೆಯಂತೆ ೧೫-೨೦ ದಿನಗಳು ಬೇಕಷ್ಟೆ!
- ಕೇಶವ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ತೆ, ಮಂಜು. ನೆನಪಿನ ಬುತ್ತಿಯಿಂದ ಹಂಚಿಕೊಂಡ ಅನುಭವ ಚೆನ್ನಾಗಿದೆ. ನನ್ನ ಅನುಭವ ಕೇಳಿ. ಚಿತ್ರದುರ್ಗದ ಮುನಿಸಿಪಲ್ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಮಧ್ಯಾಹ್ನದ ಬಿಡುವಿನ ಸಮಯದಲ್ಲಿ ತಂದಿದ್ದ ಡಬ್ಬಿ ಊಟ ಮುಗಿಸಿ ಹತ್ತಿರದ ಪಾರ್ಕಿಗೆ ಹೋಗುತ್ತಿದ್ದೆ. ಅಲ್ಲಿದ್ದ ಕಲ್ಯಾಣಿಯ ನೀರಿನ ಮಟ್ಟದಲ್ಲಿದ್ದ ಮೆಟ್ಟಲ ಮೇಲೆ ಕುಳಿತು ನೀರಿನೊಳಗಿದ್ದ ಮೆಟ್ಟಿಲ ಮೇಲೆ ಕಾಲು ಇಳಿಬಿಟ್ಟು ನೀರಿನೊಂದಿಗೆ ಆಟವಾಡುತ್ತಿದ್ದೆ. ಶಾಲೆಯ ಬೆಲ್ ಆಗುವ ಸಮಯವಾದ್ದರಿಂದ ಹೊರಡಲು ಎದ್ದು ನಿಂತಾಗ ನಾನು ನಿಂತಿದ್ದ ಕಲ್ಲು ಕಳಚಿ ನೀರಿನೊಳಗೆ ಮುಳುಗಿತ್ತು, ಜೊತೆಯಲ್ಲಿ ನಾನೂ ಕೂಡಾ! ಈಜು ಬಾರದ ನಾನು ಕಲ್ಯಾಣಿಯ ತಳ ಕಂಡಿದ್ದೆ. ಸಾಕಷ್ಟು ನೀರು ಕುಡಿದದ್ದ ನಾನು ಎರಡು ಸಲ ಮೇಲೆ ಬಂದು ಸಹಾಯಕ್ಕಾಗಿ ಅರಚಿದ್ದರೆ ಅಲ್ಲಿ ಯಾರೂ ಇರಲಿಲ್ಲ. ಮೂರನೆಯ ಸಲ ಇನ್ನೇನು ಮುಳುಗಿಯೇ ಹೋಗುತ್ತಿದ್ದ ಸಂದರ್ಭದಲ್ಲಿ ಯಾರೋ ಪುಣ್ಯಾತ್ಮ ಗಮನಿಸಿ ನನ್ನನ್ನು ಮೇಲಕ್ಕೆಳದು ತಂದು ಉಪಚರಿಸಿದ್ದ. ತೇಲುಗಣ್ಣು ಮೇಲುಗಣ್ಣು ಬಿಟ್ಟಿದ್ದ ನನಗೆ ಸುಧಾರಿಸಿಕೊಳ್ಳಲು ಬಹಳ ಸಮಯ ಹಿಡಿದಿತ್ತು. ನಾನು ಹಿಡಿದಿದ್ದ ಶಾಲೆಯ ಪುಸ್ತಕದ ಚೀಲ ನಾನು ಬಿಟ್ಟಿರಲೇ ಇಲ್ಲ. ಒದ್ದೆಯಾಗಿದ್ದ ಬಟ್ಟೆಯನ್ನು ಕಳಚಿ ಅಲ್ಲೇ ಒಣಗಿಸಿಕೊಂಡಿದ್ದೆ. ಮನೆಯಲ್ಲಿ ಹೇಳಿದರೆ ಬಯ್ಯುತ್ತಾರೆಂದು ಹೇಳಿರಲೇ ಇಲ್ಲ. ಎಷ್ಟೋ ದಶಕಗಳ ನಂತರ ಮನೆಯಲ್ಲಿ ಈ ವಿಷಯ ಹೇಳಿದ್ದೆ. ನಂತರದಲ್ಲಿ ನನಗೆ ಈಜು ಕಲಿಯಲು ಪ್ರಯತ್ನಿಸಿದ್ದರೂ ನನಗೆ ಸಾಧ್ಯವಾಗಿರಲಿಲ್ಲ. ನನ್ನ ಇಬ್ಬರು ಮಕ್ಕಳಿಗೂ ಈಜು ಕಲಿಸಿದ್ದು, ಅವರುಗಳು ಚೆನ್ನಾಗಿ ಈಜುವುದು ಕಂಡಾಗ ನನಗೆ ಸಂತೋಷವಾಗುತ್ತಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.