ಪುಸ್ತಕನಿಧಿ - ಅರ್ಧ ಓದಿದ ಒಂದು ಕಾದಂಬರಿ !

ಪುಸ್ತಕನಿಧಿ - ಅರ್ಧ ಓದಿದ ಒಂದು ಕಾದಂಬರಿ !

ಯಾವುದೋ ಒಂದು ಹಳೆಯ ಕಾದಂಬರಿ. ಸುಮಾರು ಮುನ್ನೂರು ಪುಟಗಳದು .  ಅದರ ಹೆಸರು ಬೇಡ . ಬರೆದವರ ಹೆಸರು ಬೇಡ.  ವಿಷಯ ಎರಡನೇ ಸಂಬಂಧದ ಕುರಿತು. ಅಂದರೆ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟ ಕತೆ. 

ಇದು ಹಳೆಯ ಕಾಲದ ಕಾದಂಬರಿ. 
ಮೊದಲ ಐವತ್ತು-ಅರವತ್ತು ಪುಟಗಳು ಗಂಡ-ಹೆಂಡತಿಯರು  ಪರಸ್ಪರರಿಗೆ ಬರೆದ ಪತ್ರಗಳು. ಗಂಡ ರಾಮನಾಥ / ರಾಮಚಂದ್ರ.  ಹೆಂಡತಿಯ ಹೆಸರು ಜಾನಕಿ.  ಬೇರೊಂದು ಊರಿನಲ್ಲಿ ಮೊದಲು ಕಲಿಯುತ್ತಿದ್ದ .  ಆಮೇಲೆ ಏನೋ ಒಂದು ನೌಕರಿ ಮಾಡುತ್ತಿದ್ದ.  ಹಣದ ತೊಂದರೆ ಬೇರೆ.  ಊರಿಗೆ ಹೋಗುವದೂ ಕಡಿಮೆ. ಈ ಗಂಡ-ಹೆಂಡಿರ ಪತ್ರಗಳು ತುಂಬಾ ಸಹಜವಾಗಿ ಇವೆ. ಹೆಂಡತಿ ಸಂಪ್ರದಾಯಸ್ಥಳು . ಗಂಡ ದೊಡ್ಡ ಊರಿನಲ್ಲಿ ಇರುವುದರಿಂದ ಸ್ವಲ್ಪ ಆಧುನಿಕ ಮನೋಭಾವದವನು ಅಂತ ಹೇಳಬಹುದು.  ಹೇಗೋ ಏನೋ ಒಬ್ಬರಿಗೊಬ್ಬರು ಹೊಂದಿಕೊಂಡು ಪ್ರೀತಿಯಿಂದ ಇರುವದು  ಈ ಪತ್ರಗಳ ಮೂಲಕ ನಮಗೆ ತಿಳಿದು ಬರುತ್ತದೆ.   
ಈ ಭಾಗ ಚೆನ್ನಾಗಿದೆ. , ನನಗೆ ಹಿಡಿಸಿತು. 

ನಂತರದ ಕೆಲವೇ ಪುಟಗಳಲ್ಲಿ ಅವಳು ಮೊದಲ ಹೆರಿಗೆಯಲ್ಲಿ ಗಂಡು ಮಗುವನ್ನು ಹಡೆದು ಸತ್ತು  ಹೋಗುವಳು. ಆ ಮಗುವಿನ ಬಗ್ಗೆ ಹೆಚ್ಚಿಗೆ ಉಲ್ಲೇಖವಿಲ್ಲ.ಆದರೆ ಅದನ್ನು ಬೇರೆ ಯಾರದೋ ಬಳಿಗೆ ಬಿಟ್ಟು ಮುಂಬೈಯಲ್ಲಿ ಕೆಲಸ ಮುಂದುವರಿಸುವನು.

ಅಲ್ಲಿ ಒಬ್ಬ ಆಧುನಿಕ ಯುವತಿಯ (ಇವಳ ಹೆಸರು ವಿದ್ಯಾ ) ಪರಿಚಯವಾದ ಸಂಗತಿ , ಅವಳೊಡನೆ ಮಾತುಕತೆಯ ಸಂಗತಿ ಹತ್ತಿಪ್ಪತ್ತು ಪುಟಗಳಷ್ಟುಇದೆ. ಅವಳನ್ನು ಮದುವೆಯಾದದ್ದನ್ನು ತಿಳಿಸಿಲ್ಲ. ಆದರೆ ಅದನ್ನು ನಾವು ಊಹಿಸಿಕೊಳ್ಳಬೇಕು. 

ಅರರೆ, ಮುಂದಿನ ಪುಟಗಳಲ್ಲಿ ಇದೇನು ? ಹತ್ತಿರದ ಮನೆಯ     ಯುವತಿಯೊಬ್ಬಳ ಸಂಪರ್ಕಕ್ಕೆ ಬರುತ್ತಾನೆ. ಅವಳ ಮುಗ್ಧತೆಯನ್ನು ಮೆಚ್ಚಿ  ಅಂತೆ,  ತಬ್ಬಿಕೊಳ್ಳುತ್ತಾನೆ!. ಅವಳ ಜೊತೆಗೆ ಮುಂಬೈಯಲ್ಲಿ ಅಲೆಯುತ್ತಾನೆ. 
ಸದ್ಯದ ಹೆಂಡತಿ ವಿದ್ಯಾಳ  ಗಮನಕ್ಕೂ ಇದು ಬರುವುದು. ಇವಳಿಗೆ ಸಿಟ್ಟು ಬರುವುದು ಸಹಜ ಅಲ್ಲವೆ?  ಇವಳ ಮನಸ್ಸು ಸಂಕುಚಿತ ಅಂತೆ!  ಇದು ಇವನ ವಿಚಾರ.  ತಮ್ಮ ಜಗಳದಲ್ಲಿ ಅವನು ಜಾನಕಿಯನ್ನು ನೆನೆಯುವನು. ಈ  ಜಾನಕಿ  ಯಾರು ಎ೦ದು ಕೇಳಿದಾಗಲೇ ಅವಳಿಗೆ ಗೊತ್ತಾಗುತ್ತದೆ - ಜಾನಕಿ ಇವನ ಮೊದಲ ಹೆಂಡತಿ  ಮತ್ತು ಈಗಾಗಲೇ ಅವನಿಗೆ ಒಂದು ಮಗು ಇದೆ ಅಂತ.  ಇದಾವ ಸಂಗತಿಯೂ ಅವಳಿಗೆ ತಿಳಿಯದು.  ಇದನ್ನೆಲ್ಲ ಹೇಳದೆ  ಮತ್ತೆ ಮದುವೆಯಾದ ಮಹಾನುಭಾವ ಈತ!  ಇದು ನಮಗೂ ಈ ಹಂತದಲ್ಲೇ ತಿಳಿದು ಬರುತ್ತದೆ.  ಈಗ 116ನೇ ಪುಟದಲ್ಲಿ ಇದ್ದೇನೆ. ಇದ್ಯಾಕೋ  ತುಂಬ ಅನೀತಿಯ ಕತೆ ಅಂತನ್ನಿಸಿ  ಓದುವದನ್ನು ನಿಲ್ಲಿಸಿದೆ. ಇನ್ನೂ ಬಾಕಿ ಇರುವ 180 ಪುಟದಲ್ಲಿ ಇನ್ನೂ ಏನೇನು ಕಾದಿದೆಯೋ ?

ಈ ಕಾದಂಬರಿ ಬರೆದವರು ಸ್ವತಃ ಎರಡೋ ಮೂರೋ ಮದುವೆ ಆದವರು ಅಂತ ನಾನು ಕೇಳಿದ್ದೇನೆ. ಅದಕ್ಕೇ ಅವರ ಹೆಸರೂ ಹೇಳಿಲ್ಲ, ಕಾದಂಬರಿಯ ಹೆಸರೂ ಇಲ್ಲಿ ಹೇಳಿಲ್ಲ.

ಮುಂದಿನ ಭಾಗ ಓದಿದಾಗ,  ನಿಮಗೆ ತಿಳಿಸುವಂಥದ್ದೇನಾದರೂ ಇದ್ದರೆ ತಿಳಿಸುವೆ 

(ಮುಂದುವರಿದೀತು)

 

  

Rating
Average: 4 (2 votes)