ಬೆಂಗಳೂರು ಗ್ರಾಮದೇವತೆಗಳ ವಾರ್ಷಿಕ ಉತ್ಸವ.........

ಬೆಂಗಳೂರು ಗ್ರಾಮದೇವತೆಗಳ ವಾರ್ಷಿಕ ಉತ್ಸವ.........

ಕೆಲವು ದಿನಗಳ ಕೆಳಗೆ ಯಡಿಯೂರು, ಸಾಕಮ್ಮ ಗಾರ್ಡನ್ಸ್ ವ್ಯಾಪ್ತಿಯಲ್ಲಿ ದೇವಿ ಪಟಾಲಮ್ಮನ ವಾರ್ಷಿಕ ಕರಗ ಮಹೋತ್ಸವ ಮತ್ತು ಬೆಂಗಳೂರಿನ ಗ್ರಾಮ ದೇವತೆಗಳ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಹಬ್ಬದ ವಿಶೇಷತೆಯೆಂದರೆ, ಗ್ರಾಮ ದೇವತೆಗಳೆಲ್ಲ ಉತ್ಸವ ಮಾಡಿಕೊಂಡು ಸಾಕಮ್ಮ ಗಾರ್ಡನ್ಸ್ ನಲ್ಲಿರುವ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಂದು ತಾಯಿಯನ್ನು ಭೇಟಿ ಮಾಡಿಕೊಂಡು ಹೋಗುವುದು. ವಾಡಿಕೆ ಪ್ರಕಾರ ಇದು ವರ್ಷದಲ್ಲಿ ಒಂದು ಸಾರಿ ನಡೆಯುವ ಅಕ್ಕ ತಂಗಿಯರ ಭೇಟಿ....ಸಮಾರಂಭ ಒಟ್ಟು ಮೂರು ದಿನ ನಡೆಯುತ್ತದೆ... ಯಡಿಯೂರು ಮತ್ತು ಸಾಕಮ್ಮ ಬಡಾವಣೆಯ ಎಲ್ಲಾ ಹೆಂಗೆಳೆಯರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಮೂರನೆಯ ಹಾಗೂ ಕೊನೆಯ ದಿನದಂದು ಈ ಅಕ್ಕ-ತಂಗಿಯರ ಭೇಟಿ... ಬೇರೆಲ್ಲಾ ಬಡಾವಣೆಗಳಿಂದ ದೇವಿಯರ ಉತ್ಸವಗಳು ಸಾಕಮ್ಮ ಗಾರ್ಡನ್ಸ್ ಗೆ ಬರುತ್ತವೆ... ಆ ದಿನ ಬೆಳಿಗ್ಗೆಯೇ ಈ ಬಡಾವಣೆಯ ಹೆಣ್ಣು ಮಕ್ಕಳು ಅಭ್ಯಂಜನ ಸ್ನಾನ ಮಾಡಿ, ತಮ್ಮಲ್ಲಿರುವ ಒಳ್ಳೆಯ ವಸ್ತ್ರಗಳನ್ನು ಧರಿಸಿ, ಮಂಗಳ ದ್ರವ್ಯಗಳೊಂದಿಗೆ ರಾಜರಾಜೇಶ್ವರಿ ದೇವಾಲಯಕ್ಕೆ ಬರುತ್ತಾರೆ. ಮೊದಲೇ ಹೆಸರು ನೋಂದಾಯಿಸಿಕೊಂಡ ಹೆಣ್ಣು ಮಕ್ಕಳು, ಹೂವಿನಿಂದ ವಿಧವಿಧವಾಗಿ ಅಲಂಕರಿಸಲ್ಪಟ್ಟ ಕಲಶಗಳನ್ನು ತಮ್ಮ ತಮ್ಮ ತಲೆಯ ಮೇಲೆ ಹೊರಲು ಸಿದ್ಧರಾಗುತ್ತಾರೆ. ಮಂಗಳ ವಾದ್ಯಗಳೊಂದಿಗೆ ಯಡಿಯೂರು ಕೆರೆಗೆ ಬಂದು ಅಭಿಷೇಕಕ್ಕೆ ನೀರು ತೆಗೆದುಕೊಂಡು ಹೋಗುತ್ತಾರೆ......

ಹೂವಿನಿಂದ ಪುಟ್ಟ ಪುಟ್ಟ ಪಲ್ಲಕ್ಕಿಗಳ ಥರಹದ, ಬೇರೆ ಬೇರೆ ಆಕಾರದ ಮಂಟಪಗಳಲ್ಲಿ ಕಲಶಗಳನ್ನು ಹೊತ್ತು, ಬಣ್ಣ ಬಣ್ಣದ ರೇಶಿಮೆ ಸೀರೆ, ಲಂಗಗಳನ್ನು ತೊಟ್ಟ...ಚಿಕ್ಕ - ದೊಡ್ಡ ಹೆಣ್ಣು ಮಕ್ಕಳ ಒಂದು ದೊಡ್ಡ ಕೂಟ, ಸಡಗರದಿಂದ ಮೆರವಣಿಗೆಯಲ್ಲಿ ಸಾಲು ಸಾಲಾಗಿ ಬರುತ್ತಾರೆ. ಯಡಿಯೂರು ಕೆರೆಯ ಎದುರು ಇರುವ ಚಿಕ್ಕ ಆಟದ ಮೈದಾನದ ಮಧ್ಯದಲ್ಲಿ ಪುಟ್ಟದಾದ ಒಂದು ಹಸಿರು ಚಪ್ಪರದ ಕೆಳಗೆ ಒಂದು ಕಲ್ಲನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಮಾವಿನ ತಳಿರು ತೋರಣಗಳಿಂದ ಅಲಂಕರಿಸಿರುತ್ತಾರೆ. ಶಾಮಿಯಾನ ಹಾಕಿ ಅಲ್ಲಿ ಬಂದವರಿಗೆ ನೀರು, ಪಾನಕ, ಹಾಲು ಸರಬರಾಜು ಮಾಡುವ ವ್ಯವಸ್ಥೆಯೂ ಇರುತ್ತದೆ.

ಮೆರವಣಿಗೆಯ ಮುಂಚೂಣಿಯಲ್ಲಿ ಡೊಳ್ಳು ಕುಣಿತದವರು... ಎಲ್ಲರಿಗಿಂತ ಮೊದಲು ಬಂದು ಮೈದಾನದಲ್ಲಿ ತಮ್ಮ ಪ್ರದರ್ಶನ ಆರಂಭಿಸುತ್ತಾರೆ. ಸುಮಾರು ಒಂದು ಘಂಟೆಯ ಹೊತ್ತು, ಇವರು ತಮ್ಮ ಡೊಳ್ಳು ಕುಣಿತದ ಪ್ರದರ್ಶನದಿಂದ ಅಲ್ಲಿ ನೆರೆದವರ ಕಣ್ಣಿಗೆ ಹಬ್ಬವಾಗಿಸುತ್ತಾರೆ. ಇವರ ಜೊತೆಗೆ ಅದೇ ಮೆರವಣಿಗೆಯಲ್ಲಿ ಭಾಗವಹಿಸಿದ ಸಾರ್ವಜನಿಕರೂ ತಮ್ಮದೇ ಧಾಟಿಯ ಕುಣಿತ ಲಯಬದ್ಧವಾಗಿ ಆರಂಭಿಸಿ ಬಿಟ್ಟಿರುತ್ತಾರೆ.... ನಾವಿನ್ನೂ ಡೊಳ್ಳು ಕುಣಿತದ ಗುಂಗಿನಲ್ಲೇ ಇರುವಾಗಲೇ... ಮಂಗಳ ವಾದ್ಯಗಳ ಸಮೇತ ಕಲಶಗಳನ್ನು ಹೊತ್ತ ಹೆಂಗೆಳೆಯರ ದಂಡು ಮೈದಾನವನ್ನು ಪ್ರವೇಶಿಸಿ, ಅಲ್ಲಿ ಸ್ಥಾಪಿಸಿದ್ದ ಚಪ್ಪದರ ದೇವರಿಗೆ ನಮಿಸಿ, ಸುತ್ತಲೂ ಕಟ್ಟಿರುವ ಮೈದಾನದ ಮೆಟ್ಟಿಲುಗಳ ಮೇಲೆ ತಮ್ಮ ತಲೆಯ ಮೇಲೆ ಹೊತ್ತು ತಂದ ಮಂಟಪಗಳನ್ನು ಇಳಿಸಿ, ಕುಳಿತುಕೊಳ್ಳುತ್ತಾರೆ..

ಇಷ್ಟು ಹೊತ್ತಿಗಾಗಲೇ ವಾತಾವರಣ ಸೂರ್ಯನ ಪ್ರಖರತೆಯ ಜೊತೆಗೆ ಸ್ಪರ್ಧಿಸುವಂತೆ ಕಾವೇರಿರುತ್ತದೆ. ಆಗಲೇ... ಎಲ್ಲಿಂದಲೋ ಒಂದು ಚೆನ್ನಾಗಿ ಕೊಬ್ಬಿದ ಕುರಿಯನ್ನು ಹಗ್ಗ ಕಟ್ಟಿ ಎಳೆದು ತರುತ್ತಾರೆ. ಅದರ ಬಾಯುಗೂ ಹಗ್ಗ ಕಟ್ಟಿರುತ್ತಾರೆ. ಇವರ ಯಾವೊಂದು ಕೆಲಸವೂ ತನಗೆ ಏನೂ ಸಂಬಂಧಿಸಿದ್ದಲ್ಲವೆಂಬಂತೆ ಅದು ತಲೆ ಬಗ್ಗಿಸಿ ನಿಂತಿರುತ್ತದೆ. ಹಗ್ಗ ಹಿಡಿದು ಜಗ್ಗುತ್ತಾ.. ಅದನ್ನು ಆ ಕಡೆ ಈ ಕಡೆ ಎಳೆದಾಡುತ್ತಾ, ಅಲ್ಲಿಗೆ ಪೂಜಾದ್ರವ್ಯಗಳೊಂದಿಗೆ ಬಂದ ಪೂಜಾರಪ್ಪನಿಂದ ಕುರಿಗೆ ತಿಲಕ ಇಡಿಸಿ, ಹೂವಿನ ಹಾರ ಹಾಕಿಸಿ, ಪೂಜೆ ಮಾಡಿಸಲಾಗುತ್ತದೆ. ಪಾಪ ತನ್ನ ಸ್ಥಿತಿ-ಗತಿಯ ಅರಿವಿಲ್ಲದ ಆ ಕುರಿ ತಲೆ ಬಗ್ಗಿಸಿ ನಿಂತಿರುತ್ತದೆ. ಜೋರಾಗಿ ಘಂಟೆ ಬಾರಿಸುತ್ತಾ ದೇವರಿಗೆ ಮಂಗಳಾರತಿ ಮಾಡಿ, ಅದೇ ಆರತಿಯನ್ನು ಕುರಿಯ ಮೂತಿಗೂ ಎತ್ತಲಾಗುತ್ತದೆ.... ದೇವಿಯ ಹೆಸರು ಜೈಕಾರ ಕೂಗುತ್ತಾ ಎಲ್ಲರೂ ವಾತಾವರಣವನ್ನು ಇನ್ನಷ್ಟು ಉದ್ರಿಕ್ತಗೊಳಿಸುತ್ತಾರೆ.... ಇದ್ದಕಿದ್ದಂತೆ ಎಲ್ಲಿಂದಲೋ ಬಂದು ಮಧ್ಯದಲ್ಲಿ ಪ್ರತ್ಯಕ್ಷನಾದ ಒಬ್ಬ ಕಟುಕ, ಕೈಯಲ್ಲಿ ಮಚ್ಚು ಹಿಡಿದು, ದೂರ... ಎಲ್ಲರೂ ದೂರ... ಎಂದು ಅಬ್ಬರಿಸುತ್ತಾ... ಒಂದೇ ಏಟಿಗೆ... ಛಕ್ಕೆಂದು ಕುರಿಯ ತಲೆ ಕತ್ತರಿಸಿಯೇ ಬಿಡುತ್ತಾನೆ. ರಕ್ತ ಚಿಮ್ಮಿ, ಅದೇ ಕ್ಷಣ ಕುರಿಯ ದೇಹ ಧರೆಗುರುಳುತ್ತದೆ.... ಮುಂದಿನ ಕೇವಲ ೧೦ ನಿಮಿಷಗಳೊಳಗೆ, ಅದೇ ಮಂಗಳ ವಾದ್ಯಗಳ ಸಮೇತ, ಎಲ್ಲಾ ಹೆಣ್ಣು ಮಕ್ಕಳೂ ತಮ್ಮ ತಮ್ಮ ಪಲ್ಲಕ್ಕಿಗಳನ್ನು ಮತ್ತೆ ತಲೆಯ ಮೇಲೆ ಹೊತ್ತು... ಗಂಡಸರು ಕತ್ತರಿಸಿದ ಕುರಿಯ ದೇಹದ ಭಾಗಗಳನ್ನು ಹೊತ್ತು, ಮೆರವಣಿಗೆಯಲ್ಲಿ ಅಲ್ಲಿಂದ ನಿರ್ಗಮಿಸುತ್ತಾರೆ. ಇಷ್ಟರ ಮಧ್ಯದಲ್ಲಿ, ಅಲ್ಲಿ ಪುಟ್ಟ ಹಸಿರು ಚಪ್ಪರದ ಕೆಳಗ ಪ್ರತಿಷ್ಠಾಪಿಸಲ್ಪಟ್ಟ ದೇವರನ್ನೂ ವರ್ಗಾಯಿಸಿಬಿಟ್ಟಿರುತ್ತಾರೆ. ಚಪ್ಪರ ಹರಿದು.. ಅವಶೇಷಗಳು ಮಾತ್ರ, ಅಲ್ಲಿ ನಡೆದ ಬಲಿಗೆ ಸಾಕ್ಷಿಯಾಗಿ ನಿಂತಿರುತ್ತದೆ. ಇಡೀ ವಾತಾವರಣ ಒಮ್ಮೆಗೇ ಸ್ಥಬ್ಧವಾಗಿ ಬಿಟ್ಟಿರುತ್ತದೆ.......

ಗ್ರಾಮದೇವತೆಗಳ ಹಬ್ಬ ಎಂದು ಅತ್ಯಂತ ಸಂಭ್ರಮ, ಆಸಕ್ತಿಯಿಂದ ನೋಡುತ್ತಿದ್ದ ನಾನು, ಹಟಾತ್ತನೆ ನನ್ನೆದುರೇ ನಡೆದ ಈ ಬಲಿಯನ್ನು ನೋಡಿ ನಿಜಕ್ಕೂ ಆಘಾತಗೊಂಡಿದ್ದೆ. ಮೈದಾನದಲ್ಲಿ ಚೆಲ್ಲಿದ್ದ ರಕ್ತ ನಡೆದ ಘಟನೆಗೆ ಸಾಕ್ಷಿ.... ಎರಡು ದಿನಗಳ ನಂತರ ಹಾಗೇ ಮಣ್ಣಲ್ಲಿ ಬೆರೆತು ರಕ್ತ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲೇ ಇಲ್ಲವೇನೋ ಎಂಬಂತೆ ನೋಡುವವರಿಗೆ ಅನ್ನಿಸುತ್ತದೆ. ನಿರ್ಭಾವುಕತೆಯಿಂದ ನಿಂತ ಮೈದಾನ, ತನ್ನ ಮಡಿಲಲ್ಲಿ ನಡೆದ ಹತ್ಯೆಗೆ ನೊಂದಿತೋ.... ಇದು ಪ್ರತೀ ವರ್ಷ ನಡೆಯುವುದೇ.... ಎಷ್ಟೆಂದು ದು:ಖ ಪಡಲಿ ಎಂದು ಕೊಂಡಿತೋ ಗೊತ್ತಿಲ್ಲ. ಆದರೆ ಬಲಿಕೊಟ್ಟಿದ್ದನ್ನು ನೋಡಿದ ನನ್ನ ನಿದ್ದೆ ಮಾತ್ರ ಮಾರುದೂರ ಹಾರಿಹೋಗಿತ್ತು....

ಸರಕಾರ ಬಲಿಯನ್ನು ನಿಷೇಧಿಸಿದ್ದರೂ.... ಹೀಗೆ ಸಾರ್ವಜನಿಕವಾಗಿ ನಡೆಸುತ್ತಾರಲ್ಲಾ... ಎಂಬ ಮಾತು ನನಗೆ ನೋವು ತಂದಿತ್ತು... ದೇವರನ್ನು ಒಲಿಸಿಕೊಳ್ಳಲು ಈ ಮಾರ್ಗವೇ ಏಕೆ ಬೇಕು...? ಸಾತ್ವಿಕವಾಗಿ ಕರೆದರೆ ನಮ್ಮ ಕರೆಯನ್ನು ದೇವರು ಕೇಳಿಸಿಕೊಳ್ಳುವುದಿಲ್ಲವೇ...? ಹತ್ತಾರು ಪ್ರಶ್ನೆಗಳು ನನ್ನನ್ನು ಕಾಡತೊಡಗಿದ್ದವು....

Rating
No votes yet

Comments