ಬೆಡಗಿನ ಕೊಡಗು
ನಾವೆಲ್ಲಾ( ನಾನು, ಸತೀಶ, ವರ್ಷ, ಮನು, ಶಾಮ, ಚಿಕ್ಕಮ್ಮ, ದೊಡ್ಡಮ್ಮ ಮತ್ತು ದೊಡ್ಡಪ್ಪ) ಎಲ್ಲರೂ ಕಳೆದ ವಾರದ ಲಾಂಗ್ ವೀಕೆಂಡ್ ಅನ್ನು ಅತ್ಯಂತ ಸೂಕ್ತವಾಗಿ ಕಳೆದೆವು ಎಂದು ಅಂದುಕೊಳ್ಳುತ್ತೇನೆ. ಏಕೆಂದರೆ, ಕಳೆದ ವಾರ ನಾವುಗಳು, ವೀರ ಭೂಮಿಯಾದ, ಕೊಡಗಿನ ಪ್ರವಾಸದಲ್ಲಿದ್ದೆವು. ಮುಂಚೆಯೇ ಕಾಯ್ದಿರಿಸಿದ್ದರಿಂದ, ಕೊಡಗಿನ ನಾಪೋಕ್ಲು ಬಳಿಯ ಗ್ರೀನ್ ವುಡ್ homestay ಯಲ್ಲಿ ಒಂದು ದೊಡ್ಡ ಕೋಣೆ ಸಿದ್ಧವಾಗಿತ್ತು. ಶುಕ್ರವಾರದ ಬೆಳಗ್ಗೆ ಹೊರಟ ನಮಗೆ ಬಿಡದಿಯ ಬಳಿಯ ತಟ್ಟೆ ಇಡ್ಲಿಯ ಪ್ರತಿರೋಧ ತಾಳಲಾರದೆ, ಎಲ್ಲರೂ ತಟ್ಟೆ ಇಡ್ಲಿಯನ್ನು ಸೇವಿಸಿ ಮತ್ತೆ ನಮ್ಮ ವಾಹನ ಏರಿದೆವು. ಬೆಳಗಿನ ೭ ಗಂಟೆಗೆ ಹೊರಟಿದ್ದ ನಾವುಗಳು ನಾಪೋಕ್ಲು ಬಳಿಯ ನಮ್ಮ cottage ತಲುಪಿದಾಗ ಸರಿ ಸುಮಾರು ಮಧ್ಯಾಹ್ನ ೨ ಗಂಟೆ ಆಗಿತ್ತು. ಆ ಪ್ರದೇಶ ನಿಜಕ್ಕೂ ಅದ್ಭುತ!! ಕಾಫಿ ಎಸ್ಟೇಟಿನ ಮಧ್ಯದಲ್ಲಿ ಒಂದು ಸಣ್ಣ "ವಿಲ್ಲ"ದಂಥ ಮನೆಗಳು, ಮುಂದೆ ವಿಶಾಲವಾದ ಬಯಲು, ಕಣ್ಣು ಹಾಯಿಸಿದಲ್ಲೆಲ್ಲ ಹಸಿರು. ಬೆಳಗಿನ ತಟ್ಟೆ ಇಡ್ಲಿಯ ಕಸುವೆಲ್ಲ ಆರಿತ್ತು. ಈಗ ಹೊಟ್ಟೆಯಲ್ಲಿ ನಿಜಕ್ಕೂ ಹಸಿವಿನ ತಳಮಳ ಉಂಟಾಗಿತ್ತು. ನಾವುಗಳು ಆ ಎಸ್ಟೇಟಿನ ಝರಿ ಹರಿಯುತ್ತಿದ್ದ ಒಂದು ಸಣ್ಣ ಸೇತುವೆಯನ್ನು ದಾಟಿ ಇಳಿದಾಗ ಕಂಡದ್ದೇ ಆ ಮನೆಗಳು. ತಲುಪಿದ ತಕ್ಷಣಕ್ಕೆ ನಾವುಗಳು ಮಾಡಿದ ಕೆಲಸ ಎಂದರೆ ಪುಷ್ಕಳವಾದ ಭೋಜನ.ನಂತರ ಆಬಿಸಿಲಿನ ಝಾಳದಿಂದಾದ ದಣಿವನ್ನು ಆರಿಸಿಕೊಳ್ಳುತ್ತಿರುವಾಗಲೇ ನಮ್ಮನ್ನು ಮಳೆಯೂ ಸ್ವಾಗತಿಸಿತು. ಆ ಮಳೆಯಿಂದ ಎಲ್ಲರೂ ಪುಳಕಿತರಾದೆವು. ಸಂಜೆಯ ಹೊತ್ತಿಗೆ ಮಳೆ ನಿಂತ ಮೇಲೆ, ಎಲ್ಲರೂ ಒಂದೊಂದು ಕಪ್ ಬಿಸಿ ಚಹಾ ಕುಡಿದು ಚಾರಣಕ್ಕೆ ಸಿದ್ಧರಾದೆವು. ನಾವು ಉಳಿದುಕೊಂಡಿದ್ದ ಪ್ರದೇಶದಿಂದಲೇ ಕಾಡೂಕೂಡ ಶುರುವಾಗುತ್ತಿದ್ದರಿಂದ,ಅಲ್ಲಿಂದಲೇ ನಮ್ಮಪಯಣ ಆರಂಭವಾಯಿತು.ಎತ್ತರವಾದ ಪ್ರದೇಶವಾಗಿದ್ದು,ಅಲ್ಲಿಯ ಪ್ರದೇಶವನ್ನು ಮೆಟ್ಟಿಲು ಮೆಟ್ಟಿಲುಗಳಾಗಿ ಮಾಡಿ ಅಲ್ಲಿಯೇ ಬೇಸಾಯ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ನಾವು ಮೇಲೆ ಏರಿದಂತೆ, ಗಾಳಿಯು ಜೋರಾಗಿ ಬೀಸುತ್ತಿತ್ತು. ಆ ಅನುಭವ ನಿಜಕ್ಕೂ ಅವರ್ಣನೀಯ.
ಸಂಜೆಗೆ ನಾವುಗಳು ಅಲ್ಲಿಯ ಆ ಝಾರಿಯ ಬಳಿ ಕಾಲ ಕಳೆಯುವ ಯೋಜನೆ ಮಾಡಿದೆವು ಮತ್ತು ಅದರಂತೆ ಆ ತಣ್ಣಗಿನ ನೀರಿನಲ್ಲಿ ಆಟವಾಡಿದೆವು. ನಂತರ ರಾತ್ರಿಯಾಗುತ್ತಿದ್ದಂತೆ, ಎಲ್ಲರಿಗೂ ಛಳಿಯ ಅನುಭವವಾಗತೊಡಗಿತು. ಅಲ್ಲಿಯೇ ಇದ್ದ ಬಿದಿರಿನ ಗಳಗಳನ್ನು ಹೊತ್ತಿಸಿ ಒಂದು ಸಣ್ಣ camp fire ಮಾಡಿದೆವು. ಮತ್ತು ಆ ಸುಂದರ ಪ್ರಕೃತಿಯ ರಮ್ಯತೆಯನ್ನು ಸವಿಯುತ್ತಿದ್ದೆವು. ಇತ್ತ ಕೋಣೆಯಲ್ಲಿಎಲ್ಲಿಯೋ ಅವಿತಿದ್ದಂತೆ ದೊಡ್ಡ ಗಾತ್ರದ ಜೇಡಗಳೆಲ್ಲ ಹೊರಬರಲು ಶುರುವಾಯಿತು. ಅತ್ತ ಅಡುಗೆಯ ಮನೆಯಲ್ಲಿ ಬಿಸಿ ಬಿಸಿಯಾಗಿ ಪುಲಾವ್ ತಯಾರಾಗುತ್ತಿತ್ತು. ಆ ಛಳಿಗೆ ಪುಲಾವ್ ಮತ್ತು ಬಾಳೆಕಾಯಿಯ ಬಜ್ಜಿ ಎಲ್ಲರನ್ನೂ ಬೆಚ್ಚಗಾಗಿಸಿತು.
ಮಾರನೆಯ ದಿನ ಬೆಳಗ್ಗೆ, ಪೂರಿ ಮತ್ತು ಸಾಗು ಎಲ್ಲರ ಹೊಟ್ಟೆಗೆ ಇಂಧನವಾಯಿತು. ನಂತರ ನಾವುಗಳು, ತಲಕಾವೇರಿಗೆ ಹೊರಟೆವು ತಾಯಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ ನಿಜಕ್ಕೂ ಕನ್ನಡಿಗರು ಸಂದರ್ಶಿಸಬೇಕಾದ ಪವಿತ್ರ ಸ್ಥಳ.ಅಲ್ಲಿಂದ, ಸಪ್ತರ್ಷಿಗಳು ತಪಸ್ಸು ಮಾಡಿದ ಜಾಗಕ್ಕೆ ತಲುಪಲು ೪೦೦ ಮೆಟ್ಟಿಲುಗಳನ್ನು ಹತ್ತಿ ಮೇಲೆ ತಲುಪಿದೆವು. ಅಲ್ಲಿಂದ ಕಾಣುವ ಆ ದೃಶ್ಯ ನಿಜಕ್ಕೂ ಮನೋಹರವಾದದ್ದು. ನಂತರ ನಾವು ಮಡಿಕೇರಿಯಲ್ಲಿನ ಆಮಂತ್ರಣ ಹೋಟೆಲಿನಲ್ಲಿ ಊಟ ಮುಗಿಸಿ, ಅಲ್ಲಿಯೇ ಮೆಣಸು, ಏಲಕ್ಕಿ, ಇನ್ನಿತರ ಸಾಂಬಾರು ಪದಾರ್ಥಗಳನ್ನು ಕೊಂಡು, ಪ್ರಖ್ಯಾತವಾದ ರಾಜ ಸೀಟ್ ಸಂದರ್ಶಿಸಿ ಅಲ್ಲಿಯೇ ಚುರಮುರಿ ತಿಂದೆವು. ನಂತರ ನಾವು ಇಳಿದುಕೊಂಡಿದ್ದ ಜಾಗದ ಹತ್ತಿರದಲ್ಲೇ ಇದ್ದ, ಚೆಲುವರ ಜಲಪಾತಕ್ಕೆ ಹೋಗಿದ್ದೆವು. ಒಂದು ಕಾಫಿ ಎಸ್ಟೇಟಿನ ಮಧ್ಯ ಭಾಗದಲ್ಲಿನ ಆ ಜಲಪಾತ ನಿಜಕ್ಕೂ ಬಹಳ ಸುಂದರವಾಗಿತ್ತು. ಒಂದು ದೊಡ್ಡ ಬಂಡೆಯಿಂದ ನೀರು ಜೋರಾಗಿ ಒಸರುತ್ತಿತ್ತು. ಅದೊಂದು ದೊಡ್ಡ ಜಲಪಾತವಲ್ಲದಿದ್ದರೂ, ಒಂದು ಚೇತೋಹಾರಿ ಅನುಭವ ನೀಡುತ್ತದೆ. ಅಂದಿನ ದಿನವೂ ನಾವು, ಬಿದಿರಿನ ಗಳಗಳನ್ನು ಹೊತ್ತಿಸಿ ಮಳೆಗೆ ನಮ್ಮನ್ನು ನಾವೇ ಬೆಚ್ಚಗಿರಿಸಿಕೊಂಡೆವು. ವಿದ್ಯುತ್ತಿನ ಅಭಾವ ನಮ್ಮನ್ನು ಬಹಳವಾಗಿ ಕಾಡಿತು.ನಮ್ಮ ಕ್ಯಾಮೆರಾಗಳನ್ನೂ ಚಾರ್ಜ್ ಮಾಡುವುದು ಒಂದು ದೊಡ್ಡ ಸವಾಲಾಗಿತ್ತು. ಆದರೆ ಅಲ್ಲಿನ generator ಗಳು ನಮ್ಮನ್ನು ರಕ್ಷಿಸಿದವು. ಆದರೆ ರಾತ್ರಿಯಾದಂತೆ, ವಿದ್ಯುತ್ ಕಡಿತಗೊಳ್ಳುತ್ತಿತ್ತು ಆಗ ನಾವು ಹುಡುಗರೆಲ್ಲರೂ ಸೇರಿ, ರಾತ್ರಿ ಆ ಕಾಡಿನಲ್ಲಿ ವಾಯು ವಿಹಾರಕ್ಕೆಂದು ಹೋಗಿದ್ದೆವು ಆಗ ಅಲ್ಲಿ ಕಂಡ ದೃಶ್ಯ ನಿಜಕ್ಕೂ ಭಯವಾಗಿತ್ತು. ಎಷ್ಟೊಂದು ಮಿಂಚು ಹುಳಗಳು ನಮ್ಮ ಸುತ್ತ ಗಿರಕಿ ಹೊಡೆಯುತ್ತಿದ್ದವು. ಅಂತೆಯೇ, ಆ ವಿಚಿತ್ರ ಶಬ್ದಗಳು ಎಂಥವರನ್ನೂ ಭಯದ ಮಡಿಲಿಗೆ ತಳ್ಳುತ್ತದೆ. ಅದೇ ಸಮಯಕ್ಕೆ Discovery ಚಾನೆಲ್ ನಲ್ಲಿ ಕಾಳಿಂಗ ಸರ್ಪದ ಮೇಲೆ ಪ್ರಸಾರವಾಗಿದ್ದ ಕಾರ್ಯಕ್ರಮ ನೆನಪಾಗಿ, ಮೈಯೆಲ್ಲಾ ಕಣ್ಣಾಗಿ ನಡೆದು ನಮ್ಮ ಕೋಣೆ ಸೇರಿದೆವು.
ನಮ್ಮ ಕೊನೆಯ ದಿನ ಬೆಳಗ್ಗೆ ಇಡ್ಲಿ ತಿಂದು ಚಹಾ ಹೀರಿ, ದುಬ್ಬಾರೆ ಅರಣ್ಯ ಪ್ರದೇಶಕ್ಕೆ ಹೊರಟೆವು. ದುಬ್ಬಾರೆ ಆನೆಗಳನ್ನು ಪಳಗಿಸುವ ಒಂದು ಕ್ಯಾಂಪ್ ಎಂದೇ ಪ್ರಸಿದ್ಧವಾದದ್ದು. ಆದರೆ, ಅದರಂತೆಯೇ ಪ್ರಸಿದ್ಧವಾದದ್ದು, ಅಲ್ಲಿಯ ವೈಟ್ ವಾಟರ್ ರಾಫ್ಟಿಂಗ್ (white water rafting ) ಆ ಅನುಭವ ಮರೆಯಲಾಗದ್ದು. ನಾವುಗಳೇ ಹುಟ್ಟು ಹಾಕಿ ನಡೆಸಿದ ದೋಣಿ, ಅಲ್ಲಿಯ ಮಧ್ಯದ ಕಾವೇರಿ ನೀರಿನಲ್ಲಿ ಮುಳುಗಿ ಮತ್ತೆ ತೇಲುತ್ತ, ದಡ ಸೇರಿದ ಆ ರೋಮಾಂಚಕ ಅನುಭವ ಸದಾ ನೆನಪಿನಲ್ಲುಳಿಯುವನ್ಥದು. ನಂತರ ನಾವುಗಳು ಅಲ್ಲಿಂದ ಹೊರಟು, ಬೈಲುಕುಪ್ಪೆಯ ಪದ್ಮಸಂಭವ ಬೌದ್ಧ ದೇವಾಲಯವನ್ನು ತಲುಪಿದೆವು. ಅಲ್ಲಿಯ ೬೦ ಅಡಿ ಎತ್ತರದ ಬುದ್ಧ ವಿಗ್ರಹವನ್ನು ತಾಮ್ರದಿಂದ ಮಾಡಿ ಅದಕ್ಕೆ ಬಂಗಾರದ ಲೇಪನ ಮಾಡಿದ್ದಾರೆ. ಅಂತೆಯೇ, ಆ ದೊಡ್ಡ ವಿಗ್ರಹದಲ್ಲಿ ಬೌದ್ಧ ಧರ್ಮದ ಹಿರಿಯರ ವಸ್ತುಗಳೂ, ಸಣ್ಣ ಸಣ್ಣ ಮಣ್ಣಿನ ಬುದ್ಧನ ವಿಗ್ರಹಗಳೂ, ಧರ್ಮಗ್ರಂಥಗಳೂ ಇವೆ ಎಂಬುದು ತಿಳಿಯುತ್ತದೆ. ಒಟ್ಟಿನಲ್ಲಿ ಟಿಬೆಟಿನ ಯಾತ್ರೆ ಮಾಡಿದ ಅನುಭವವೂ ನಮಗಾಯಿತು.ಕೊನೆಗೂಆ ಹಸಿರು ಕಾಡಿನಿಂದ, concreteಕಾಡು ತಲುಪುವಾಗ ಮನಕ್ಕೆ ಬಹಳ ಬೇಸರವಾಗುತ್ತಿತ್ತು.concreteಕಾಡಾದಬೆಂಗಳೂರಿಗೆ ಬಂದು ತಲುಪಿದಾಗ,ರಾತ್ರಿ ೧೦:೩೦ಆಸ್ವಚ್ಚಂದ ಪರಿಸರದಿಂದ,ಇಲ್ಲಿಯ ಪರಿಸರಕ್ಕೆ ಕಾಲಿಟ್ಟ ತಕ್ಷಣ,ನಮಗೆ ಎದುರಾಗಿದ್ದು ಅದೇ traffic. ಎಂದೆಂದಿಗೂ ಈ ಪ್ರಯಾಣದ ಮಧುರ ಅನುಭವ ಆ ಹಸಿರು ಕಾಡುಗಳಂತೆ ಮನಸಿನಲ್ಲಿ ಹಚ್ಚ ಹಸಿರಾಗಿರುತ್ತದೆ.
ಅಂತೂ ಇಂತೂ ಕೊಡಗನ್ನು ನೋಡಬೇಕೆಂಬ ನಮ್ಮ ಬಹುದಿನಗಳ ಬಯಕೆ ನೆರವೇರಿತು. ನಮ್ಮೆಲ್ಲರ ಜೊತೆಗೆ ಪುಟಾಣಿ ಅದಿತಿ ಕೂಡ ಈ ಪ್ರಯಾಣವನ್ನು ಸವಿದಳು ಎಂಬುದು ಅವಳ ಮುಗ್ಧ ನಗುವೇ ಹೇಳಿತು.
Comments
ಉ: ಬೆಡಗಿನ ಕೊಡಗು
In reply to ಉ: ಬೆಡಗಿನ ಕೊಡಗು by kavinagaraj
ಉ: ಬೆಡಗಿನ ಕೊಡಗು