ಸ್ವಾತಂತ್ರ

4.25

   

ಬಂದಿದೆ ಬಂದಿದೆ ಸ್ವಾತಂತ್ರ !
ಯಾರಿಗೆ ಬಂದಿದೆ ಎಲ್ಲಿಗೆ ಬಂದಿದೆ
ಏತಕೆ ಬಂದಿದೆ ಸ್ವಾತಂತ್ರ !
ದೇಶಕೆ ಇಲ್ಲದ ಕೋಶಕೆ ಇಲ್ಲದ
ಜನ ಸಾಮಾನ್ಯನಿಗಿಲ್ಲದ ಸ್ವಾತಂತ್ರ !

ಆರ್ಯರು ಹೋದರು ಅರಸರು ಬಂದರು
ಮೊಗಲರು ಹೋದರು ಆಂಗ್ಲರು ಬಂದರು
ಬಂದಿತು ಜನತೆಗೆ ಸ್ವಾತಂತ್ರ್ಯ
ಜಗದೋದ್ಧಾರದ ಮಂತ್ರವ ಪಠಿಸಿ
ಮೊಸಳೆಯ ಕಣ್ಣೀರನು ಸುರಿಸಿ
ಗಾಂಧಿಯ ಮೇಲೆ ಆಣೆಯನಿಟ್ಟು
ಹಿಡಿದರು ದೇಶದ ಚುಕ್ಕಾಣಿ

ದೇಶೋದ್ದಾರಕೆ ಪಣ ತೊಟ್ಟವರು
ಅವನಾ ಪಕ್ಷ ಇವನಾ ಪಕ್ಷ
ಶೋಷಕರವರು ಶೋಷಿತರಿವರು
ಬಡವರು ಇವರು ಬಲ್ಲಿದರವರು
ಸ್ಪೃಶ್ಯರು ಇವರು ಅಸ್ಪೃಶ್ಯರು ಅವರು
ಮಾಲಿಕರಿವರು ಕಾರ್ಮಿಕರವರು
ಎಂದೊಡೆದಾಳಿದರು ಜನಮನ

ಆಡುವುದೊಂದು ಮಾಡುವುದೊಂದು
ಅಧಿಕಾರದ ಗದ್ದುಗೆಯಲಿ ಎಲ್ಲರು ಒಂದೆ
ಬಿಗಿದರು ಭಾಷಣ ಮೇಜನು ಕುಟ್ಟಿ
ತಾವೊಬ್ಬರೆ ಉದ್ಧಾರಕರೆಂದು
ನಂಬಿದ ಮುಗ್ಧರು ಓಟನು ಕೊಟ್ಟರು
ಆರಿಸಿ ತಂದರು ಆಗಾಗ
ಬದುಕು ಹಸನಾಗುವುದು ಎಂದು
ಕಾಯುತಲಿರುವರು ಇಲ್ಲೀಗ


ಕಣ್ಣೆವೆ ಮುಚ್ಚದೆ ಕಾದೇ ಕಾದರು
ಕನಸು ನನಸಾಗುವುದೆಂದು
ದಟ್ಟ ಕಾರಿರುಳು ಸರಿಯಲೆ ಇಲ್ಲ
ಕಾಣದ ದಾರಿ ಕತ್ತಲೆ ರಾತ್ರಿ
ಚಲಿಸದೆ ಕಾಲ ನಿಂತಿದೆ ಇಲ್ಲಿ

ಬಾಲ್ಯದ ಮುಗ್ಧತೆ ಜಾರಿತು ಇಲ್ಲಿ
ಹರೆಯವು ಕಳೆಯಿತು ನಿರೀಕ್ಷೆಯಲ್ಲಿ
ಕಳೆಯಿತು ಬಾಲ್ಯ ಮುರುಟಿತು ಹರೆಯ
ವೃದ್ಧಾಪ್ಯದ ಛಾಯೆ ಹರಡಿದೆ ಇಲ್ಲಿ
ಕಳೆಯಿತು ಸುಮ್ಮನೆ ದಿನಮಾನ
ಹೋಯಿತು ಅರ್ಧ ಶತಮಾನ

ಕನಸಿದ ಕನಸು ನನಸಾಗಲೆ ಇಲ್ಲ
ಬಿಳಿ ಮೋಡ ಕರಿಗಟ್ಟಲೆ ಇಲ್ಲ
ಆಶೆಯ ಬೀಜ ಫಲಿಸಲೆ ಇಲ್ಲ
ಬಂಜರು ಭೂಮಿ ದುರ್ಬಲ ಬೀಜ
ಗಾಳಿ ಬೆಳಕು ನೀರುಗಳಿಲ್ಲ
ಬಿತ್ತಿದ ಬೀಜ ಮೊಳೆಯಲೆ ಇಲ್ಲ
ಕನಸಲಿ ಹುಟ್ಟಿ ಕನಸಲೆ ಬೆಳೆದು
ಕನಸು ನನಸಾಗದೆ ಸಾಯುವುದಿಲ್ಲಿ

ಒಳ್ಳೆಯ ದಿನಗಳು ಬರಬಹುದೆಂದು
ನೋಡುತಲಿರುವರು ಕೆಂಪು ಕೋಟೆ
ದೊರೆಗಳು ಬಂದರು
ದೊರೆಸಾನಿಯು ಬಂದಳು
ಬಿಗಿದರು ಭಾಷಣ ಉದ್ದುದ್ದ
ಹರಿಯಿತು ಭರವಸೆಗಳ ಮಹಾಪೂರ

ಕನಸಿದ ಮೋಡ ಕಟ್ಟಲೆ ಇಲ್ಲ
ಆಶೆಯ ಮಳೆ ಸುರಿಯಲೆ ಇಲ್ಲ
ಆದರೂ ಬಂದಿದೆ ಸ್ವಾತಂತ್ರ್ಯ
ಅರ್ಥವಿಲ್ಲದ ಸ್ವಾತಂತ್ರ್ಯ

           **
 

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹನುಮಂತ ಪಾಟೀಲರಿಗೆ ವಂದನೆಗಳು. ರಾಮನ ರಾಜ್ಯ ಬಂದರೂ ರಾಗಿ ಬೀಸೋದು ತಪ್ಪೋದಿಲ್ಲ. ಅಂದಿನ ಗಾದೆಯಾದರೆ, ಯಾವ ಗಾಂಧಿ ಬಂದರೂ ಬಡವರ ಬವಣೆ ತಪ್ಪುವುದಿಲ್ಲ, ಯಾವ ಗಾಂಧಿ ನುಂಗಣ್ಣನವರಿಗೆ ಏನೂ ಬಡತನವಿಲ್ಲ :(( ಇದು ಇಂದಿನ ವಸ್ತು ಸ್ಥಿತಿಯಾಗಿದೆ. ಇದನ್ನು ಬಹಳ ಚೆನ್ನಾಗಿ ಬಿಂಬಿಸುತ್ತದೆ ನಿಮ್ಮ ಲೇಖನ. ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ ಬಂಡ್ರಿ ಯವರಿಗೆ ವಂದನೆಗಳು " ಸ್ವಾತಂತ್ರ " ಕವನದ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ' ಯಾವ ಗಾಂಧಿ ಬಂದರೂ ಬಡವರ ಬವಣೆ ತಪ್ಪುವುದಿಲ್ಲ ' ತಾವು ಬರೆದಿರುವುದು ಅಕ್ಷರಶಃ ನಿಜ, ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 (ಜೀ ಅವರ ಪ್ರತಿಕ್ರಿಯೆ) "ಕನಸಿದ ಮೋಡ ಕಟ್ಟಲೆ ಇಲ್ಲ ಆಶೆಯ ಮಳೆ ಸುರಿಯಲೆ ಇಲ್ಲ ಆದರೂ ಬಂದಿದೆ ಸ್ವಾತಂತ್ರ್ಯ ಅರ್ಥವಿಲ್ಲದ ಸ್ವಾತಂತ್ರ್ಯ" ಹಿರಿಯರೇ ನಾ ನಿಮ್ಮ ಈ ಬರಹವನ್ನು ತಡವಾಗಿ ಓದಿ ಪ್ರತಿಕ್ರಿಯಿಸುತ್ತಿರುವೆ... ನಿಮ್ಮ ಬರಹ ನನಗೆ ಹಿಂದೊಮ್ಮೆ ಎಲ್ಲಿಯೋ ಓದಿದ್ದ- ಯಾರಿಗೆ ಬಂತು? ಎಲ್ಲಿಗೆ ಬಂತು? ೪೭ ರ ಸ್ವಾತಂತ್ರ್ಯ ಎಂಬ ಕವನ ನೆನಪಿಸಿತು.... ಬರಹದಲ್ಲಿರುವುದು ಯಾವತ್ತಿಗೂ ಸಲ್ಲುವಂತದ್ದೆ (ಮನದಾಳದ ನೋವು-ಆಶಯ)...ಆದರೆ ಅದು ಬದಲಾಗಲಿ.. ಎಂಬ ಆಶಯ ನನ್ನದು. ಕವನದಲ್ಲಿರುವುದು ಪೂರ್ಣ ಸತ್ಯ.... ಸಮಸ್ತ ಭಾರತೀಯರ ಮನದ ದುಗುಡ,ಮನದಾಳದ ಭಾವಗಳನ್ನು ಸಮರ್ಥವಾಗಿ ಕವನದಲ್ಲಿ ಹಿಡಿದಿಟ್ಟಿರುವಿರಿ... ಕವನದ ಬಗ್ಗೆ ಮೆಚ್ಹ್ಹುಗೆ ಪಡುವುದೋ, ವಾಸ್ತವತೆಗೆ ಕೊರಗುವುದೊ ಮರುಗುವುದೋ ಅರಿಯದಾದೆ... ಒಟ್ಟಿನಲ್ಲಿ ಸ್ವಾತಂತ್ರ್ಯ ಬಂದು ರಾಮರಾಜ್ಯದ ಕನಸು ಕಂಡಿದ್ದ ಹಿರಿಯ ಜೀವಗಳಿಗೆ ಮೊದಲಲ್ಲೇ ನಮ್ಮ ದೇಶದ ಕಥೆ ಏನಾಗುತ್ತೆ ಅನ್ನೊದರ ಅರಿವಿತ್ತು ಅನ್ನಿಸುತ್ತೆ... ಆ ತರಹದ ಹಲವು ಮುನ್ಸೂಛನೆಗಳು ಅವತ್ತೇ ಅವರಿಗೆ ಸಿಕ್ಕಿದ್ದವು..:(( ನಮ್ ಸ್ತಿತಿಗೆ ಖಂಡಿತವಾಗಿಯೂ ನಾವೇ ಕಾರಣ.... ಅದನು ಬದಲಿಸಬೇಕಾದವರು ನಾವೇ.. ಆ ನಿಟ್ಟಿನಲ್ಲಿ ಪ್ರಯತ್ನಿಸುವ... ಬರುವ ಚುನಾವಣೆಯಲ್ಲಿ ಯೋಗ್ಯರನ್ನು ಆರಿಸುವ............... ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರಿಗೆ ವಂದನೆಗಳು ನಾನು ಕಳೆದ ಶನಿವಾರದಿಂದ ಊರಲ್ಲಿರಲಿಲ್ಲ, ಸಮ್ಮಂದಿಕರೊಬ್ಬರು ತೀರಿಕೊಂಡಿದ್ದು ಅಲ್ಲಿಗೆ ಹೋಗಿದ್ದೆ, ಈ ದಿನ ಮರಳಿ ಬಂದು ಪ್ರತಿಕ್ರಿಯಿಸುತ್ತಿರುವೆ, ವಿಳಂಬ ಉತ್ತರಕ್ಕೆ ಕ್ಷಮೆಯಿರಲಿ. <<< ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ >>> ಇದು ದಲಿತ ಕವಿ ಸಿದ್ಧಲಿಂಗಯ್ಯನವರ ಪ್ರಸಿದ್ಧ ಕವನ, ಅದಕ್ಕೂ ಇದಕ್ಕೂ ಸಮ್ಮಂಧವಿಲ್ಲ, ಇದು ನನ್ನ ಸ್ವತಂತ್ರ ರಚನೆ, ಕವನ ಕುರಿತು ನೀವು ವ್ಯಕ್ತ ಪಡಿಸಿದ ಅಭಿಪ್ರಾಯ ಸಂಪೂರ್ಣ ನಿಜ, ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಬಂದಿದೆ ಬಂದಿದೆ ಸ್ವಾತಂತ್ರ ! ಯಾರಿಗೆ ಬಂದಿದೆ ಎಲ್ಲಿಗೆ ಬಂದಿದೆ ಏತಕೆ ಬಂದಿದೆ ಸ್ವಾತಂತ್ರ ! ದೇಶಕೆ ಇಲ್ಲದ ಕೋಶಕೆ ಇಲ್ಲದ ಜನ ಸಾಮಾನ್ಯನಿಗಿಲ್ಲದ ಸ್ವಾತಂತ್ರ !> ಹೌದು ಪಾಟೀಲರೆ,ನಿಜವಾಗಿ ನಮಗೆ ಏಕಾದರೂ ಸ್ವಾತಂತ್ರ ಸಿಕ್ಕಿದೆ ಅನ್ನುವಂತಾಗಿದೆ.ಅದರ ಮಹತ್ವಗೊತ್ತಿಲ್ಲದ ಜನತೆ ಇಂದು ಅದನ್ನು ಉಪಯೋಗಿಸಿ ಕೊಳ್ಳುವ ರೀತಿ ನೋಡಿದರೆ ಈ ದೇಶದಲ್ಲೂ ಅರಾಜಕತೆ ಹಟ್ಟುವ ದಿನಗಳು ದೂರವಿಲ್ಲಾ ಅನಿಸುತ್ತಿದೆ. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎನ್ ರಮೇಶ ಕಾಮತರಿಗೆ ವಂದನೆಗಳು, " ಸ್ವಾತಂತ್ರ " ಕವನ ಕುರಿತು ನೀವು ಬರೆದ ಪ್ರತಿಕ್ರಿಯೆ ಓದಿದೆ, <<< ನಿಜವಾಗಿ ನಮಗೆ ..........ದಿನಗಳು ದೂರವಿಲ್ಲ ಅನಿಸುತ್ತದೆ>>> ನಿಮ್ಮ ಈ ವಿಚಾರ ಸರಣಿ ಮತ್ತು ಕಳಕಳಿ ಸಂಪೂರ್ಣ ನಿಜ, ವ್ಯವಸ್ಥೆ ಅರಾಜಕತೆಯಿಂದ ಸುರಾಜಕತೆಯೆಡೆಗೆ ಸಾಗಬೇಕು ಎನ್ನುವುದು ನಿಮ್ಮಂತಹ ಎಲ್ಲ ಸಹೃದಯರ ಆಶಯ, ಆ ಕಾಲ ಬೇಗ ಬರಲಿ, ಮೆಚ್ಚುಗೆಗೆ ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟೀಲರೆ ಮನ ತಟ್ಟುವ ಕವನ ಉದ್ದಕ್ಕು ಎದ್ದು ಕಾಣುವ ಭಾವವೆಂದರೆ ದೇಶ ಸದ್ಯದ ದುಸ್ಥಿತಿಯ ಬಗೆಗಿನ ಕಾಳಜಿ ಇವತ್ತಲ್ಲ ನಾಳೆ ಸರಿಹೋಗಬಹುದು ಎನ್ನುವ ಆಶಾಭಾವನೆಯೊಡನೆ ಇರೋಣ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ ಯವರಿಗೆ ವಂದನೆಗಳು, ಈ ಕವನ ಕುರಿತು ನೀವು ಬರೆದ ಪ್ರತಿಕ್ರಿಯೆ ಓದಿದೆ, ನಿಮ್ಮ ಅನಿಸಿಕೆ ಸಂಪೂರ್ಣ ನಿಜ, ನೀವಂದಂತೆ ಆಶಾವಾದಿಗಳಾಗೋಣ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.