ಹಸುಳೆ (ಮನದ ಮಾತು)

5

 ನನ್ನಮ್ಮ ಧಾವಂತದಲ್ಲಿ ನಡೆದು ಹೋಗುತ್ತಿದಾಳೆ,ಅವಳ ಮೊಗದಲ್ಲೇನೋ ಆತಂಕದ ಛಾಯೆ!, ಏತಕ್ಕೋ ತಿಳಿಯೆ ನಡುಗುತ್ತಿದಾಳೆ. "ಬೆಳಗಿನ ಮುಂಜಾವೊ ನಡುರಾತ್ರಿಯೋ ತಿಳಿಯುತ್ತಿಲ್ಲ ಕಣ್ಣಿಗೆ" ಬರಿ ಕತ್ತಲೆ ಕಾಣುತ್ತಿದೆ ಎಲ್ಲಿಗೆ ಹೋಗುತ್ತಿದಾಳೋ ಗೊತ್ತಿಲ್ಲ. ಪೊದೆಯೊಳಗೆ ಹೋದವಳೇ ಕೈಯಲ್ಲಿದ  ನನ್ನನ್ನು   ಒಂದೆಡೆ ಇರಿಸಿ ತಿರುಗಿ ನೋಡದೆ ಹೊರತು ಹೋಗುತ್ತಿದ್ದಾಳೆ, ಅಮ್ಮ ನನಗಿಲ್ಲಿ ಭಯವಾಗುತ್ತಿದೆ ಕಣೇ ನಿನ್ನ ದಮ್ಮಯ್ಯ  ಒಬ್ಬಳ್ನೆ ಬಿಟ್ಟು ಹೋಗಬೇಡ್ವೆ ಎಂದು  ಮನ ಹೇಳುತ್ತಿತ್ತು , ಆದರೆ ಮಾತಾಡಲು ನಾ ಶಕ್ಯಳಿರಲಿಲ್ಲ, ಮಾತಾಡಿದ್ದರು ಕೇಳುವ ಸಂಯಮ ಅವಳಲ್ಲಿರಲಿಲ್ಲ.
ನನ್ನಿಂದ ದೂರ ಹೋಗುತ್ತಿದಾಳೆ ಎನಿಸುತ್ತಿದೆ ಹೋಗಬೇಡಮ್ಮ ಎಂದು ಹೇಳುತ್ತಾ ಅಳುತ್ತಿದೇನೆ, ನನ್ನ ಅಳು ಅವಳ ನಡಿಗೆಯನ್ನು ನಿಲ್ಲಿಸುತ್ತಿಲ್ಲ, ಅಳುತ್ತ ಅಳುತ್ತ ಹಾಗೆ ನಿದ್ರೆಗೆ ಶರಣಾಗಿದ್ದೇನೆ, ಸ್ವಲ್ಪ ಹೊತ್ತು ಕಳೆದು ಎಚ್ಚರವಾಯಿತು ಸುತ್ತಲೂ ನೋಡುತ್ತೇನೆ ಇನ್ನು ಕತ್ತಲೆ ಆವರಿಸಿದೆ, ನೆನ್ನೆವರೆವಿಗೂ ನನ್ನಮ್ಮನ ಹೊಟ್ಟೆಯಲ್ಲಿ ಬೆಚ್ಚಗಿದ್ದ ನನಗೆ ಈಗ ಚಳಿಯೆನಿಸುತ್ತಿದೆ, ಅವಳ ಇಂಪಾದ ಹೃದಯ ಬಡಿತ ಕೇಳುತ್ತಿದ್ದವಳಿಗೆ ಈ ಕತ್ತಲು ಏಕಾಂಗಿತನ ನೀರವ ಮೌನ  ನಡುಕಹುಟ್ಟಿಸುತ್ತಿದೆ. ನನ್ನ ಅರ್ತನಾದ ಕೇಳುವವರು ಯಾರು ಇಲ್ಲಿಲ್ಲ.
ಅತ್ತತ್ತು ಸುಸ್ತಾಗಿ ಹಸಿವಾಗುತ್ತಿದೆ ಮತ್ತೊಮ್ಮೆ ಮಂಪರಿಗೆ ಜಾರಿದ್ದೇನೆ. ಅಮ್ಮ ತನ್ನೊಳಗೆ ನೊಂದು ಕೊಂಡಿದ್ದು ನೆನಪಾಗುತ್ತಿದೆ (ನನ್ನ ಹೊತ್ತು ದೀನ ಮೊರೆಯಿಟ್ಟು ಮನೆಯಲ್ಲಿ  ನನ್ನ ವಿಷಯ ಪ್ರಸ್ತಾಪಿಸಿದ್ದು, ನನ್ನ ಹೊತ್ತು ಹೆಣ್ ಹೆತ್ತವಳೆಂಬ ತಿರಸ್ಕಾರಕೊಳಪಟ್ಟಿದ್ದು, ನಂತರ ನನ್ನುಸಿರನು ನಿಲ್ಲಿಸ ಹೊರಟದ್ದು ಈಗಾಗಲೇ ಸಮಯ ಮೀರಿದೆಯೆಂದು ತಿಳಿದು ವ್ಯಥೆ ಪಟ್ಟದ್ದು, ಕೊನೆಗೆ ನನ್ನನು ತ್ಯಜಿಸಬೇಕೆಂಬ ನಿರ್ದಾರಕ್ಕೆ ಬಂದದ್ದು, ನನ್ನ ತಲೆ ಮೇಲೆ ಕೈ ಇಟ್ಟು ಕಂದ ನಿನ್ನ ನಾ ಕಾಪಾಡದಾದೆ ಎಂದು ಬಿಕ್ಕಳಿಸಿ ಅತ್ತದ್ದು ) ಈ ಎಲ್ಲ ಸಂಗತಿಗಳು ನನಗೆ ಮೊದಲೇ ತಿಳಿದ್ದಿದವು ಹೋಗಲಿ ಬಿಡು ನಿನ್ನ ಸಂತೋಷಾನೇ ನನ್ನ ಸಂತೋಷ ಎಂದುಕೊಂಡು ನನ್ನ ಪುಟ್ಟ ಕಂಗಳಿಂದ ಕಣ್ಣಿರ ಹರಿಸಿ ಅಳಹತ್ತಿದೆ, ನಿದ್ರೆ ಆವರಿಸುವಷ್ಟರಲ್ಲಿ ನನಗೆ ಹೊದಿಸಿದ್ದ ಹೊದಿಕೆ ಗಾಳಿಗೆ ಹಾರಿ ಹೋಯ್ತು, ತುಂಬ ಚಳಿ ಆಗ್ತಿದೆ ಕಣೇ ಅಮ್ಮ      ನೀನಿದ್ದಿದರೆ.........? ಅಂತ ಮನಸಲ್ಲೇ ನೊಂದುಕೊಳ್ಳುತ್ತಿದ್ದೆ. ಚಳಿಯನನುಭವಿಸುತ್ತಿದ್ದ ನನಗೆ ಏನೋ ತಣ್ಣಗಾದ ಅನುಭವಾಗ್ತಿದೆ ಅಯ್ಯೋ ಇದೇನಿದು ಎಂದು ನನ್ನ ಪುಟ್ಟ ಕಂಗಳಿಂದ ಕತ್ತ್ಹೊರಳಿಸಿ ನೋಡುತ್ತೇನೆ, ಯಾವುದೊ ವಿಚಿತ್ರ ಆಕಾರ!
ಭೂಮಿಗೆ ಬಂದ ನಂತರ ನಾ ಮೊದಲು ನೋಡ್ತಿರೋದು ಇದನ್ನೇ, ಅರೆರೆ ಇದೆನಾದ್ರು ನನ್ನ ಇಲ್ಲಿಂದ ಕರೆದುಕೊಂಡು ಹೋಗುತ್ತೇನೂ ಅಂತ ಖುಷಿ ಪಟ್ಟು ಸಣ್ಣ ನಗೆ ಬೀರಿದೆ, ಆದ್ರೆ ನನ್ನ ಎಣಿಕೆ ತಪ್ಪಾಗಿತ್ತು , ಅದು ನನ್ನನೇ ಕೆಕ್ಕರಿಸಿ ನೋಡಿ ಜೋರಾಗಿ ಬೊಗಳ ಹತ್ತಿತು ತಕ್ಷಣ ಇದು ನಾಯಿ ಎಂದು ನನಗೆ ತಿಳಿದು ಭಯವಾಯಿತು( ಅಮ್ಮನ ಹೊಟ್ಟೇಲಿರೋವಾಗ ಈ ಶಬ್ದ ಕೇಳಿದ್ದೆ, ಅವಳು ಇದು ಕಚ್ಚುತ್ತೆ ಅಂತಲೂ ಹೇಳಿದ್ಲೂ) ಈಗೆ ಏನೂ ಮಾಡ ತೋಚದೆ ನನ್ನ ಪುಟ್ಟ ಕೈಗಳಿಂದ ಅದನ್ನೊಡಿಸೋ ಪ್ರಯತ್ನ ಮಾಡಿದೆ ಸಾದ್ಯವಾಗಲಿಲ್ಲ.
ಮುಗ್ದ ಕಂಗಳಿಂದ ನನ್ನ ಬಿಟ್ಟುಬಿಡೆoದು ಅಂಗಲಾಚುತ್ತಿದೇನೆ ( ನನ್ನಮ್ಮನಿಗೆ ಇಲ್ಲದ ಹೃದಯ ನಾಯಿಗೆಲ್ಲಿ ಬರಬೇಕು ಹೇಳಿ) ನನ್ನ ನೋವರಿಯದ ನಾಯಿ ನನ್ನ ಕೈಗೆ ಬಾಯ್ಹಾಕಿತು ಕಂಡರಿಯದ ನೋವೊಮ್ಮೆಗೆ ನನ್ನ ಪುಟ್ಟ ದೇಹಕ್ಕಾದಾಗ ನೋವ ತಡಿಯಲಾರದೆ ಚಿಟಾರನೆ ಚೀರಿ, ಜೋರಾಗಿ ಅಳಲು ಪ್ರಾರಂಭಿಸಿದೆ ನನ್ನರಚಾಟ ಕೇಳಿ ಸುತ್ತಮುತ್ತಲಿದ್ದ ನಾಯಿ ಸಂಗಡಿಗರೆಲ್ಲರು ಓಡೋಡಿ ಬಂದರು ಬಟ್ಟೆಯಲ್ಲಿ ಭದ್ರವಾಗಿದ್ದ ನನ್ನನು ಹಿಡಿದೆಳೆದಾಡಿದವು, ಅಸಹನೀಯ ನೋವಾಗುತ್ತಿತೆನಗೆ ನನ್ನ ಪುಟ್ಟ ಕೈ ಕಾಲುಗಳಿಗೆ ಆತ್ಮರಕ್ಷಣೆ ಸಾದ್ಯವಾಗಲಿಲ್ಲ, ಸಂಪೂರ್ಣ ನಿತ್ರಾಣಳಾಗಿಬಿಟ್ಟೆ!
ಸ್ವಲ್ಪದರಲ್ಲೇ ಯಾರೋ ಬಂದು ನಾಯಿಗಳನ್ನ ಓಡಿಸಿದರು,  ನಿತ್ರಾಣಳಾಗಿದ್ದ ನನ್ನನ್ನು ಕೈಗೆತ್ತಿಕೊಂಡು ಮರುಕಪಡುತ್ತ ನನ್ನತ್ತ ನೋಡಿದರು, ಇದೆ ಮೊದಲು ಮನುಷ್ಯರ ಮುಖ ನೋಡಿದ್ದು, ಬಳಲಿದ ಕಂಗಳಲ್ಲೇ ಅವರನ್ನ ನೋಡಿ ನನ್ನ,ಮ್ಮನು ಹೀಗೆ ಇರುತ್ತಾಳೆಂದು ಊಹಿಸುತ್ತ ಗಾಳಿಯಲ್ಲಿ ಲೀನವಾಗಿಬಿಟ್ಟೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.