ಹಾರುವ ಬೇರುಗಳು - ಮೂರು : ಒಂದೇ ಗೂಗಲ್ಲಿಗೆ ಎರಡು ಹಕ್ಕಿ - ಎರಡನೇ ದಿನದ ಉದ್ಯಾನ ಪ್ರಸಂಗ

0

 

 

ಬಿಳಿಯ ಚಾದರದ ಬಿಳಿಯ ಹಾಸಿನ ಆ ಸುಪ್ಪತ್ತಿಗೆಯಿಂದ ಎದ್ದು ಕಣ್ಣುಬಿಡುವಷ್ಟರಲ್ಲಿ ಬೆಳಿಗ್ಗೆ ೯ ಗಂಟೆ. ಮೊದಲ ಸಲದ ಯುರೋಪಿನ ಸೂರ್ಯನ ದರ್ಶನ ಕಿಟಕಿಯ ಪರದೆ ಸರಿಸಿದಾಗ ಆಯಿತು. ಅದೇ ಬೆಳಕು, ಅದೇ ಸೂರ್ಯ, ಆದರೆ ಆಗಸದ ನೀಲಿ ಮಾತ್ರ ನಿಚ್ಚಳವಾಗಿತ್ತು. ಶುಭ್ರತೆ ಎದ್ದು ಕಾಣುತ್ತಿತ್ತು. ಜರ್ಮನಿಯ ಆಕಾಶವೆಲ್ಲಾ ಅದೇ ತರಹ ಇರಬೇಕು. ನಾನೇಳುವ ಮೊದಲೇ ಎದ್ದು ಕೂತ ಉಳಿದವರಲ್ಲಿ ಒಬ್ಬ ಏರ್ಪೋರ್ಟಿಗೆ ಯಾರನ್ನೋ ಬಿಟ್ಟುಬರಲು ಹೋಗಿದ್ದ. ಇನ್ನಿಬ್ಬರು ಹಾಸಿಗೆಯ ಮೇಲೆ ಕುಳಿತು ಬ್ರೆಡ್ಡಿಗೆ ಜಾಮ್ ಮೆತ್ತುತ್ತಿದ್ದರು. ಬಹುಶಃ ವಿದೇಶದಲ್ಲಿರುವವರಿಗೆ ಸ್ವದೇಶಿಗಳು ಬಹುಬೇಗ ಹೊಂದಿಕೊಂಡುಬಿಡುತ್ತಾರೆ ಅನಿಸುತ್ತದೆ. ಯಾವುದೇ ಮುಲಾಜಿಲ್ಲದೇ ಅವರ ಬ್ರೆಡ್ಡಿಗೆ ಕೈ ಹಾಕುವ ಧೈರ್ಯ ನನಗೆ ಅದಾಗಲೇ ಬಂದಿತ್ತು. ತಿಂದೆ.. ಸಪ್ಪೆಯಿದ್ದರೂ ಆಗ ಅದು ರುಚಿ. ತಿಂದು ಕೈತೊಳೆದು, ಬೆಳಗಿನ ಔಪಚಾರಿಕ ಕಾರ್ಯಗಳನ್ನೆಲ್ಲಾ ಮುಗಿಸಿ ಟಿ ವಿ ನೋಡಲು ಕೂತದ್ದಾಯಿತು. ಆ ಟಿ.ವಿಯಲ್ಲೋ ಜರ್ಮನ್ ಭಾಷೆಯ ಚಾನೆಲ್ಲುಗಳನ್ನು ಬಿಟ್ಟರೆ ಬೇರೆ ಬರುವುದು ಎಂದರೆ ನ್ಯೂಸ್ ಚಾನೆಲ್ಲೊಂದೆ. ಏನೋ ಒಂದು ಎಂದು ನೋಡುತ್ತಾ ಕುಳಿತರೆ, ಚರ್ಚೆ ನಿನ್ನೆ ನೋಡಬೇಕೆಂದ ಸಿನಿಮಾದ ಬಗ್ಗೆ ತಿರುಗಿತು.

ಭಾರತದ ದಕ್ಷಿಣದಿಂದ ತೇಲಿ ಯುರೋಪಿನ ಮಧ್ಯದ ಆ ಜರ್ಮನಿಯ ಸ್ಟುಟ್ಗಾರ್ಟಿನಲ್ಲಿ ಬಂದಿಳಿದ ಗಲಾಟೆ ಮತ್ತು ಬೋಪ್ಸರದ ಆ ಚಹದಂಗಡಿಯ ಯಾನದಿಂದ ಬಳಲಿದ್ದ, ನಾನು ನಿನ್ನೆ ರಾತ್ರಿ ಹಾಸಿಗೆ ಸಿಕ್ಕ ಕೂಡಲೇ ಮಲಗಲು ಸಿದ್ಧವಿದ್ದರೂ ಉಳಿದವರೆಲ್ಲಾ ’ಈಗ ಒಂದು ಮೂವಿ ನೋಡುವ’ ಎಂಬ ನಿರ್ಧಾರ ಮಾಡಿದ್ದರು. ಅದು ಚೆನ್ನಾಗಿದೆ ಇದು ಚೆನ್ನಾಗಿದೆ ಎಂದೆಲ್ಲಾ ಬದಬಡಿಸಿ ಕೊನೆಗೆ ಸರ್ವಾನುಮತದಿಂದ ಈ ಸಿನಿಮಾ ನಮ್ಮಿಂದ ನೋಡಿಸಿಕೊಳ್ಳಲು ಯೋಗ್ಯತೆ ಪಡೆದಿದೆ ಎಂದು ಆಯ್ಕೆ ಮಾಡಲಾಗಿತ್ತು. ಅತ್ತ ಅವರು ಸಿನಿಮಾ ಶುರು ಮಾಡಿದ ಮೇಲೆಯೇ ನಾನು ನಿದ್ದೆ ಮಾಡಿದ್ದು. ಆದರೆ ಬೆಳಿಗ್ಗೆ ಅದರ ಬಗ್ಗೆ ಪ್ರಶ್ನಿಸಿದಾಗಲೆ ಗೊತ್ತಾಗಿದ್ದು- ನನಗಿಂತ ಮೊದಲೇ ಟಿ ವಿ ಮುಂದೆಯೋ ನಿದ್ದೆ ಮಾಡಿದ್ದ ಕಥಾ ಪ್ರಸಂಗ. ನಾನು ಕೇಳಿದ ಪ್ರಶ್ನೆಯೋ ಅಥವಾ ಅರ್ಥವಾಗದ ಆ ಜರ್ಮನಿಯ ಟಿವಿ ಕಾರ್ಯಕ್ರಮಗಳೋ, ಅವರನ್ನು ಮತ್ತೆ ಮೂವಿ ಆರಂಭಿಸುವುದಕ್ಕೆ ಪ್ರೇರೇಪಿಸಿತು. ಅವರ ಜೊತೆಗೆ ನಾನೂ ಕೂತು ಸಿನಿಮಾದ ಒಳಗೆ ಕಣ್ಣಿಟ್ಟೆ.

ಸಿನಿಮಾ ಸ್ವಲ್ಪ ವಿಲಕ್ಷಣವಾಗಿತ್ತು. ಇಬ್ಬರು ಮಕ್ಕಳು ಸಣ್ಣವರಿದ್ದಾಗಲೇ ಹೇಗೋ ಒಂದು ದ್ವೀಪ ಸೇರುತ್ತಾರೆ. ಅವರದ್ದು ಏನೂ ಅರಿಯದ ವಯಸ್ಸು. ಜಗತ್ತಿನ ನೀತಿ ನಿಯಮಗಳು, ಓರೆ ಕೋರೆಗಳು ಯಾವುದೂ ಗೊತ್ತಿಲ್ಲದೇ ನೇರವಾಗಿ ಬೆಳೆಯುತ್ತಾರೆ. ಮಾನವ ಸಂಪರ್ಕವೇ ಇಲ್ಲದ ಅವರು ಎಲ್ಲವನ್ನೂ ಹೊಸದಾಗಿ ಕಂಡುಹಿಡಿಯುತ್ತಾ ತಮಗೆ ಬೇಕಾದ ಹಾಗೆ ವಿಕಾಸ ಹೊಂದುತ್ತಾರೆ. ಯೌವನದಲ್ಲಿ ಅವರ ದೈಹಿಕ ಬದಲಾವಣೆಗಳಿಗೆ ಅವರವರೇ ನಾಚಿಕೊಳ್ಳುತ್ತಾ ಹೊಸ ಜೀವ ಸೃಷ್ಟಿಗೂ ಕಾರಣವಾಗುತ್ತಾರೆ. ಅವರಲ್ಲಿರುವ ಭಯವೇ ಅವರಿಗೆ ದೇವರಾಗುತ್ತದೆ. ದಿನವೂ ಕಾಣುವ ಸೂರ್ಯನೇ ನೆರೆಮನೆಯವನಾಗುತ್ತಾನೆ. ಹರಿಯುವ ನದಿಯೇ ಗಡಿಯಾಗುತ್ತದೆ. ಅವರದ್ದೇ ಆದ ಜಗತ್ತು, ಅವರದ್ದೇ ಆದ ವಹಿವಾಟುಗಳನ್ನು ಸಹಜವಾಗಿಯೇ ಚಿತ್ರಿಸಿದ್ದರು ಸಿನಿಮಾದಲ್ಲಿ. ಕೊನೆಯಲ್ಲಿ ಮಗು ಏನೋ ವಿಷದ ಹಣ್ಣುಗಳನ್ನು ತಿಂದು, ಉಪಾಯವಿಲ್ಲದೇ ತಾವೂ ಅದನ್ನೇ ತಿಂದು ಸಾಯುವ ಕ್ಲೈಮಾಕ್ಸ್ ನಲ್ಲಿ ಹೊರಜಗತ್ತಿನ ಹಡಗೊಂದು ಅವರನ್ನು ಸಮೀಪಿಸುತ್ತದೆ. ಹೀಗೆ ಆಧುನಿಕ ಜಗತ್ತಿನಲ್ಲೊಂದು ಮಾನವ ವಿಕಾಸದ ಮತ್ತು ಅದೇ ಆಧುನಿಕ ಪ್ರಪಂಚದ ಅಂಚಿನಲ್ಲಿ ಅದರ ಅಳಿವನ್ನು ಚಿತ್ರಿಸುತ್ತಾ ಸಿನಿಮಾ ಕಥೆ ಸಾಗುತ್ತದೆ. ಸ್ವಲ್ಪಹಳೆಯ ಜಾಯಮಾನದ ಕಥೆಯಾದರೂ ಏನೋ ಒಂಟಿತನದ ಭಾವವನ್ನು ಮೂಡಿಸುತ್ತಾ ಸಿನಿಮಾ ಮುಗಿಯಿತು.

ಇದೇ ಸಮಯದಲ್ಲಿ ತರಕಾರಿಗಳು ಒಂದಾದ ಮೇಲೊಂದು ತಾವು ಮುಂದು ತಾವು ಮುಂದು ಎಂದುಕೊಂಡು ತಮ್ತಮ್ಮ ಮೈಗಳನ್ನು ಕುಯ್ಯಿಸಿಕೊಂಡಿದ್ದರು. ಮೂವಿ ಮುಗಿಯುತ್ತಿದ್ದಂತೇ ಅನ್ನಕ್ಕಿಟ್ಟು ಒಬ್ಬರಾದ ಮೇಲೆ ಒಬ್ಬರು ಸ್ನಾನ ಮಾಡುವುದೆಂದು ನಿಶ್ಚಯವಾಯಿತು. ಇದೇ ಸರಿಯಾದ ಸಮಯವೆಂದು ಕ್ಯಾಮರಾ ಹಿಡಿದು ಮೆಟ್ಟಿಲಿಳಿದು ಹೋದೆ. ಜಾಸ್ತಿ ಗೊತ್ತಿಲ್ಲದ ಊರು ಎಂಬ ಸಹಜ ಭಯದಿಂದ ಮನೆಯಿಂದ ಜಾಸ್ತಿ ದೂರ ಹೋಗದೆ ಅಲ್ಲಲ್ಲೇ ರಸ್ತೆ ಬಸ್ ಸ್ಟಾಂಡುಗಳನ್ನು ಸುತ್ತು ಹಾಕುತ್ತಾ ತಿರುಗಿದೆ. ಚರ್ಚಿನ ಎತ್ತರದ ಗೋಪುರದ ಮೇಲಿದ್ದ ಗಡಿಯಾರ ಮುಳ್ಳುಗಳನ್ನು ಯಾವುದೋ ಅಂಕೆಗಳ ಮಧ್ಯೆ ಇಟ್ಟು ಮುಂದೆ ಹೋಗುವುದನ್ನೇ ಕಾಯುತ್ತಿತ್ತು. ಎರಡು ರಸ್ತೆಗಳಾದ ಮೇಲೆ ಫೋಟೊಗಳೆಲ್ಲಾ ಒಂದೇ ತರಹ ಕಾಣ ತೊಡಗಿದವು. ಖರೇ ಹೇಳ ಬೇಕೆಂದರೆ ಜರ್ಮನಿಯ ಕಟ್ಟಡಗಳೆಲ್ಲಾ ಒಂದೇ ತರಹ. ರಚನೆಯಾಗಲೀ ಇಕ್ಕೆಲಗಳಾಗಲೀ ತದ್ರೂಪಿಗಳಂತೆ ಸೃಷ್ಟಿಯಾಗಿದ್ದು. ಇದೂ ಒಂಥರಾ ಏಕತಾನತೆಗೆ ಕಾರಣವಾಗಿರಬಹುದು.

ಈ ಫೋಟೋ ಕಾರ್ಯಕ್ರಮಗಳೆಲ್ಲಾ ಮುಗಿದ ಮೇಲೆ ಮನೆಗೆ ಬಂದರೆ ಅನ್ನ ರೆಡಿಯಾಗಿತ್ತು. ಊಟ ಮಾಡಿ ಅದೂ ಇದು ಹರಟೆ ಹೊಡೆಯುತ್ತಾ ಕುಳಿತರೆ ಹೊರಗಿನ ಅಂಗಳದಲ್ಲಿ ವಿಚಿತ್ರವೊಂದು ಆಗ ತಾನೇ ಜನಿಸಿತ್ತು. ಯಾವನೋ ಒಬ್ಬ ಶಿಸ್ತಾಗಿ ಆರಾಮ ಖುರ್ಚಿ ಹಾಸಿಕೊಂಡು ಅಂಡರ್ವೇರ್ನಲ್ಲಿ ಕಣ್ಣಿಗೆ ಕರಿಗಾಜಿಟ್ಟುಕೊಂಡು ಮಲಗಿಬಿಟ್ಟಿದ್ದ. ಆ ಪರಿಯಲ್ಲಿ ತನ್ನ ಬೇಸಿಗೆಯನ್ನೂ, ಅದರಲ್ಲೂ ತನ್ನ ಭಾನುವಾರದ ರಜೆಯನ್ನು ಸಂಭ್ರಮಿಸುತ್ತಿದ್ದ. ಅವರವರ ಬಾಲ್ಕನಿಯಲ್ಲಿ ಪ್ರತಿ ವಾರ ಮಾಡುವ ಈ ಕಾರ್ಯವನ್ನು ಇವತ್ತು ಅಂಗಳಕ್ಕೆ ವರ್ಗಾಯಿಸಿದ್ದ ಅಷ್ಟೆ. ಈ ತರಹದ ವಿಚಿತ್ರಗಳನ್ನು ಇನ್ನೆರಡು ತಿಂಗಳುಗಳ ಕಾಲ ನೋಡುತ್ತಾ ಕಳೆಯುವುದಕ್ಕೆ ಇದನ್ನು ಪೂರ್ವಭಾವಿಯಾಗಿ ಸ್ವೀಕರಿಸುತ್ತಾ ಮತ್ತೆ ಟಿ.ವಿ. ನೋಡಿದಂತೆ ಮಾಡಿದೆವು. ಅದೇ ಜರ್ಮನಿಯ ಜಾಹೀರಾತುಗಳು ಅದೇ ಧ್ವನಿವಿನ್ಯಾಸದಲ್ಲಿ ಬರುತ್ತಿರಲು, ಬೋಪ್ಸರದ ಗುಡ್ಡದ ಮೇಲಿಂದ ಕಂಡ ಪಾರ್ಕೊಂದು ಜ್ಞಾಪಕಕ್ಕೆ ಬಂತು. ಬಂದದ್ದೇ ತಡ, ಅಲ್ಲಿಗೇ ಹೋಗೋಣ ಎಂಬ ಮಾತೂ ಜೊತೆಗೂಡಿತು. ಏನೋ ತೀರ್ಮಾನವಾಗುವ ಲಕ್ಷಣ ಗೋಚರಿಸುತ್ತಿದ್ದಂತೆ ನನಗೆ ನನ್ನ ಕ್ಯಾಮರಾದ ಬ್ಯಾಟರಿಯ ಮೇಲೆ ಅನುಮಾನ ಬಂತು. ಅದನ್ನು ಚಾರ್ಜಿಗಿಟ್ಟು ಅವರ ಅಥವಾ ನಮ್ಮ ಆ ಪಾರ್ಕು ಪ್ರಯಾಣದ ಚರ್ಚೆಗೆ ಕಿವಿಯಿಟ್ಟೆ. ಒಂದೇ ಗೂಗಲ್ಲಿಗೆ ಎರಡು ಹಕ್ಕಿ ಎಂಬ ಹೊಸ ಗಾದೆಯಂತೆ ಇಂಟರ್ನೆಟ್ ನಲ್ಲಿ ಆ ಪಾರ್ಕಿನ ಮಾಹಿತಿಯ ಜೊತೆಗೆ ಇಂದಿನ ವಿಶೇಷ ಎಂಬ ಮಾಹಿತಿಯೂ ಇತ್ತು. ಅದೇನೆಂದು ಒಳಹೊಕು ಜಾಲಾಡಲು, ಕಿಲ್ಸ್ ಬರ್ಗ್ ಎಂಬ ಆ ಜಾಗದಲ್ಲಿ ಸಂಸ್ಕೃತಿ ಉತ್ಸವವೊಂದು ನಡೆಯುತ್ತಿತ್ತು. ನಮಗೆ ಯಾವುದಾದರೇನಂತೆ ಎಂದು ಕಿಲ್ಸ್ ಬರ್ಗಿನ ಪಯಣಕ್ಕೆ ಅಡಿಯಿಟ್ಟೆವು.

ಅದು ಜಾತ್ರೆ ಹೌದೆಂದು ರೈಲಿನಲ್ಲಿನ ಸಂದಣಿಯೇ ಹೇಳುತ್ತಿತ್ತು. ಗೌಜಿ ಗದ್ದಲ, ಅವರ ವೇಷ ಭೂಷಣ ಇತ್ಯಾದಿಗಳು ಇದು ದಿನದ ವ್ಯವಹಾರವಲ್ಲ ಎಂದು ಅವರ ಜೊತೆಗೇ ಕೂಗುತ್ತಿತ್ತು. ಅವರಂತೆ ನಾವೂ ಆ ಕೂಗಿನಲ್ಲಿ ಒಂದಾದಗಲೇ, ಆ ಹಬ್ಬಕ್ಕೊಂದು ಕಳೆ ಬಂದಂತೆ ನಮಗೂ ಅನಿಸಿತ್ತು. ತಲೆಗೆ ಹಸಿರು ಬಣ್ಣ, ಹಳದಿ ಬಣ್ಣ, ಕೆಂಪು ಬಣ್ಣ ,ಜಗಮಗದ ಬಣ್ಣ ಹೀಗೆ ಎಲ್ಲವನ್ನೂ ಬಳಿದುಕೊಂಡು ಆ ಆರು ಗಂಟೆಯ ಹೊತ್ತಿಗೆ ಹಗಲು ವೇಷಗಳು ರೈಲು ನಿಲ್ದಾಣದಲ್ಲಿ ಓಡಾಡುತ್ತಿರಲು, ನೋಡುವ ನಮಗೆ ಮಜವೆನಿಸುತ್ತಿತ್ತು. ಕಿಲ್ಸ್ ಬರ್ಗಿನ ಆ ಪಾರ್ಕು ಬಹಳ ದೊಡ್ಡದಿರಬೇಕು. ರೈಲಿನಿಂದ ಇಳಿದ ಜನ ಲಗುಬಗೆಯಿಂದ ಹೆಜ್ಜೆ ಹಾಕಿ ಪಾರ್ಕಿನ ದೊಡ್ಡ ಕಮಾನಿಗೆ ಬರುವಷ್ಟರಲ್ಲಿ ಕರಗಿ ಹೋಗುತ್ತಿದ್ದರು. ಉತ್ಸವಕ್ಕೆ ತಯಾರಿಯಾಗಿ ಕೆಲವರು ಮೈಗೆಲ್ಲಾ ಪ್ಲಾಸ್ಟಿ ಸುತ್ತಿಕೊಂಡು ಕುಣಿಯುತ್ತಿದ್ದರೆ,ಇನ್ನೂ ಕೆಲವರು ಪತಾಕೆಗಳನ್ನು ಹಿಡಿದು ಓಡಾಡುತ್ತಿದ್ದರು. ಉಳಿದವರಲ್ಲಿ ಬಹುತೇಕರು ಕೇಕೆ ಹಾಕುತ್ತಾ ದಾರಿಯಲ್ಲಿ ಬಂದವರಿಗೆಲ್ಲಾ ಹಾಯಿಗಳನ್ನೂ ಬಾಯಿಗಳನ್ನೂ ಹೇಳುತ್ತಾ, ಆಗಾಗ ಕಿಲ ಕಿಲ ನಗುತ್ತಾ, ತಮ್ಮ ತಮ್ಮ ಮಕ್ಕಳನ್ನು ಹೊತ್ತ ತಳ್ಳುಗಾಡಿಯನ್ನು ತಳ್ಳುತ್ತಾ ಅವರದೇ ಆದ ಗುಂಗಿನಲ್ಲಿದ್ದರು.

ಹೀಗೆ ಜನಪ್ರವಾಹದೊಂದಿಗೆ ಬೆರೆತು ಸಾಗುತ್ತಿದ್ದ ನಮ್ಮ ಪಯಣ ಪಾರ್ಕಿನ ಗೇಟಿನ ಹತ್ತಿರ ಬರುತ್ತಿದ್ದಂತೆ ಗಕ್ಕನೆ ನಿಂತು ಬಿಟ್ಟಿತು. ಸೆಕ್ಯೂರಿಟಿ ಗಾರ್ಡುಗಳಂತೆ ವೇಷ ತೊಟ್ಟಿದ್ದ ದಾಂಡಿಗರು ಒಬ್ಬೊಬ್ಬರನ್ನೇ ಬಿಡುತ್ತಿದ್ದರು. ಯಾವಾಗಲೂ ಈ ತರಹದ ಕಟ್ಟಲೆಗಳಿಲ್ಲದ ಆ ಪಾರ್ಕಿಗೆ ಇವತ್ತೇನಿದು ಹೊಸ ಪದ್ಧತಿ ಎಂದು ನೋಡಲು, ಇವತ್ತಿನ ವಿಶೇಷ ಉತ್ಸವಕ್ಕೆ ಪ್ರವೇಶ ಶುಲ್ಕ ನಿಗದಿಯಾಗಿತ್ತು...!! ಸರಿ ಎಷ್ಟು ಎಂದು ಪಕ್ಕದ ಬೋರ್ಡ್ ನೋಡಿದರೆ ಒಬ್ಬೊಬ್ಬರಿಗೆ ಹದಿನಾರು ಯೂರೋಗಳು..!! ಭಾರತೀಯ ಮನಸ್ಸು ಹದಿನಾರನ್ನು ಅರವತ್ತರಿಂದ ಥಟ್ಟನೆ ಗುಣಿಸಿ ಬೋರ್ಡಿನಲ್ಲಿದ್ದ ಹದಿನಾರನ್ನು ಒಂಭೈನೂರಾ ಅರವತ್ತಾಗಿ ತೋರಿಸಿತು.. ಏನೋ ಉತ್ಸಾಹದಲ್ಲಿ ಮುನ್ನುಗುತ್ತಿದ್ದ ನಮ್ಮ ತಂಡಕ್ಕೆ ಈ ವಿಚಾರ ಸರಿಬರಲಿಲ್ಲ. ಕೇವಲ ಪಾರ್ಕ್ ನೋಡಲು ಇಷ್ಟು ಮೊತ್ತ ನೀಡಲು ಯಾರೂ ಸಿದ್ಧವಿರಲಿಲ್ಲ. ಸುಂದರವೆನಿಸಿದ್ದ ಪಾರ್ಕು ಒಂದು ಬೋರ್ಡಿನಿಂದಾಗಿ ಅಂದಗೆಟ್ಟಿತ್ತು. ಇಂಥಾ ಗಲಾಟೆ ಪಾರ್ಕಿಗೆ ಹದಿನಾರು ಯುರೋ ಯಾರೋ ಕೊಡ್ತಾರೆ ಅಂತ ವಾಪಾಸು ರೈಲ್ವೇ ಸ್ಟೇಷನ್ನಿಗೆ ಹೊರಟೆವು. ಇಂದಿನ ಪಯಣ ಹೀಗಾಯಿತಲ್ಲ, ಎಂದು ಯೋಚಿಸುವಷ್ಟರಲ್ಲೇ, ಇನ್ನೊಂದು ಪ್ಲಾನು ರೆಡಿಯಿತ್ತು..

ಕೊನೆಗೂ ಆ ದಿನ ಪಾರ್ಕಿಗೆ ಹೋದೆವು

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.