ಹ್ಯಾರಿ ಅವೆಲಿಂಗರ ಪ್ರಸ್ತಾವನೆ

0

       OSHO
    Never Born
    Never Died
    Only Visited This Planet Earth Between
     11 December 1931 - 19 January 1990
ಶ್ರೀರಜನೀಶರು ತಮ್ಮ ಜೀವಮಾನವಿಡೀ ನಿರೂಪಿಸಲೆತ್ನಿಸಿದ ಒಂದು ವಿಲಕ್ಷಣವಾದ ವಿರೋಧಾಭಾಸವನ್ನು ಅವರ ಸಮಾಧಿಯ ಮೇಲೆ ಕೆತ್ತಲಾದ ಮೇಲಿನ ಮಾತುಗಳು ಸಮರ್ಥವಾಗಿ ಎತ್ತಿಹಿಡಿಯುತ್ತವೆ. ವ್ಯಕ್ತಿತ್ವವನ್ನು ಅಲ್ಲಗಳೆದ ವ್ಯಕ್ತಿ ಈತ. ’ನೀವು ಯಾರು?’ ಎಂಬ ಪ್ರಶ್ನೆಗೆ ಉತ್ತರಿಸುತ್ತ ’ವ್ಯಕ್ತಿತ್ವ ಎಂಬುದಿರದು, ವ್ಯಕ್ತಿ ಎಂಬುವವನೂ ಇರಲಾರ, ವ್ಯಕ್ತಿಯಲ್ಲಿಯೂ ಒಬ್ಬ ವ್ಯಕ್ತಿ ಇರುವುದಿಲ್ಲ, ಹಲವು ವ್ಯಕ್ತಿಗಳಿರುವರು. ವ್ಯಕ್ತಿತ್ವವೆಂಬುದು ಒಂದು ಕೇಂದ್ರವನ್ನು ಹೊಂದಿರಬಲ್ಲ ದೇವರಿಗೆ ಮಾತ್ರ ಇರಲು ಸಾಧ್ಯ. ನಮಗಾರಿಗೂ ಒಂದು ಕೇಂದ್ರವಿಲ್ಲ’ ಎಂದಿದ್ದರು. ಗುರುವಲ್ಲದ ಗುರು ಈತ. ’ಲೋಕದಲ್ಲಿ ಶಿಷ್ಯರುಗಳು ಮಾತ್ರ ಇರುತ್ತಾರೆ, ಆದರೆ ಗುರು ಎಂಬುವವನು ಇರಲಾರ’ ಎಂದು ತಮ್ಮ ಇನ್ನೊಂದು ಕೃತಿಯಲ್ಲಿ ಹೇಳುತ್ತಾರೆ. ಶಿಷ್ಯನು ಗುರುವಿನ ಕೈಂಕರ್ಯದಲ್ಲಿ ತೊಡಗುವನಾದರೂ ತಾನಾಗಲಿ, ತನ್ನ ಗುರುವಾಗಲಿ ಅಸ್ತಿತ್ವದಲ್ಲಿಲ್ಲ, ಇಬ್ಬರೂ ಸೇರಿ ’ಗುರು’ ಮತ್ತು ’ಶಿಷ್ಯ’ ಎಂಬ ಲೀಲಾನಾಟಕದಲ್ಲಿ ತೊಡಗಿದ್ದೇವೆ ಎಂಬುದು ಮನವರಿಕೆಯಾದರೆ ಆ ಕ್ಷಣವೇ ಲೀಲೆ ಮುಗಿಯುತ್ತದೆ. ಅದುವೇ ಆತ್ಮಜ್ಞಾನದ ಕ್ಷಣ ಎಂದು ಹೇಳಿದ್ದಾರೆ. ಹಾಗಾಗಿ ಜಗತ್ತಿನಾದ್ಯಂತ ಸಾವಿರಾರು ಶಿಶುಮಕ್ಕಳನ್ನು ಹೊಂದಿದ್ದರೂ ಈತ ಶಿಷ್ಯರಿಲ್ಲದ ಗುರು. ಈ ನಿಟ್ಟಿನಿಂದ ಹೊರಟರೆ ’ರಜನೀಶ್ ಎಂದರೆ ಯಾರು?’ ಮತ್ತು ’ಅವರ ಶಿಷ್ಯರು ಎಂದರೆ ಯಾರು?’ ಎಂಬ ಎರಡು ಪ್ರಶ್ನೆಗಳಿಗೆ ಎಂದಿಗೂ ಉತ್ತರ ಸಿಗದು.
 
ಈ ಪ್ರಶ್ನೆಗಳಿಗೆ ಉತ್ತರಿಸಲು ಈವರೆಗೆ ಹಲವು ಬಗೆಯ ಕೃತಿಗಳು ಪ್ರಕಟವಾಗಿವೆ. ಮೊದಲ ಬಗೆಯದೆಂದರೆ ಶ್ರೀರಜನೀಶರ ಸಾರ್ವಜನಿಕ ಪ್ರವಚನಗಳು ಹಾಗು ಸಂಭಾಷಣೆಗಳು. ಇವು ಮೊದಲು ಜೀವನ ಜಾಗೃತಿ ಕೇಂದ್ರದಿಂದ ಪ್ರಕಟವಾಯಿತು. ಅನಂತರ ಮೋತಿಲಾಲ್ ಬನಾರಸಿದಾಸ್, ಅಮೆರಿಕಾದ ರಜನೀಶ್ ಫೌಂಡೇಷನ್, ಜರ್ಮನಿಯ ರೆಬೆಲ್ ಪಬ್ಲಿಷಿಂಗ್ ಹೌಸ್‌ಗಳಿಂದ ಪ್ರಕಟವಾದವು. ಶ್ರೀರಜನೀಶರನ್ನು ಇನ್ನೂ ಖಚಿತವಾಗಿ ಪರಿಚಯಿಸಬಲ್ಲ ಕೃತಿಗಳೆಂದರೆ ಮಾ ಸತ್ಯಭಾರತಿಯ ’ಅಲ್ಟಿಮೇಟ್ ರಿಸ್ಕ್ (೧೯೮೦), ವಸಂತ ಜೋಷಿಯವರ ಅಧಿಕೃತ ಜೀವನಚರಿತ್ರೆ ’ಅವೇಕನ್‌ಡ್ ವನ್: ಲೈಫ್ ಅಂಡ್ ವರ್ಕ್ ಆಫ್ ಓಷೋ ರಜನೀಶ್ (೧೯೮೨),  ಹಾಗು ೮೦ರ ದಶಕದಲ್ಲಿ ಅವರ ಶಿಷ್ಯರುಗಳಿಂದಲೇ ಪ್ರಕಟವಾದ ಹಲವು ಕೃತಿಗಳು: ’ಓಷೋ ರಜನೀಶ್: ದಿ ಮೋಸ್ಟ್ ಡೇಂಜರಸ್ ಮ್ಯಾನ್ ಸಿನ್ಸ್ ಜೀಸಸ್ ಕ್ರೈಸ್ಟ್’, ’ವಾಸ್ ಓಷೋ ರಜನೀಶ್ ಪಾಯಿಸನ್‌ಡ್ ಬೈ ರೊನಾಲ್ಡ್ ರೇಗನ್ಸ್ ಅಮೆರಿಕಾ?’, ’ಭಗವಾನ್: ದಿ ಬುದ್ಧ ಫಾರ್ ದಿ ಫ್ಯೂಚರ್’, ’ಭಗವಾನ್: ಎ ಮ್ಯಾನ್ ಅಗೈನೆಸ್ಟ್ ದಿ ಹೋಲ್ ಅಗ್ಲಿ ಪಾಸ್ಟ್ ಆಫ್ ದಿ ಹ್ಯುಮ್ಯಾನಿಟಿ’, ಅವರ ವೈದ್ಯನೇ ಬರೆದ ’ಟ್ವೆಲ್‌ವ್ ಡೇಸ್ ದಟ್ ಶೂಕ್ ದಿ ವರ್ಲ್ಡ್’, ಭಗವಾನ್: ದಿ ಮೋಸ್ಟ್ ಗಾಡ್‌ಲೆಸ್ ಅಂಡ್ ಯೆಟ್ ದಿ ಮೋಸ್ಟ್ ಗಾಡ್ಲಿ ಮ್ಯಾನ್’, ’ಡೈಮೆಂಡ್ ಡೇಸ್ ವಿತ್ ಓಷೋ’, ಇತ್ಯಾದಿ. ಹಾಗೆಯೇ ಹಲವಾರು ಅವಹೇಳನಕಾರೀ ಪುಸ್ತಕಗಳೂ ಪ್ರಕಟವಾದವು. ’ಭಗವಾನ್: ದಿ ಗಾಡ್ ದಟ್ ಫೇಲ್ಡ್’, ’ಅಲ್ಟಿಮೇಟ್ ಗೇಮ್: ರೈಸ್ ಅಂಡ್ ಫಾಲ್ ಆಫ್ ಓಷೋ ರಜನೀಶ್’ (೧೯೮೭) ಇತ್ಯಾದಿ.
 
ಎರಡೂ ಅತಿರೇಕಗಳಿಗೆ ಹೋಗದೇ ಅತ್ಯಂತ ಸಮತೋಲನವಾಗಿ ಇವರ ಕುರಿತು ಚರ್ಚಿಸುವ ಕೃತಿಗಳೂ ಉಂಟು. ಉದಾಹರಣೆಗೆ, ಚಾರ್ಲ್ಸ್ ರೈಟ್‌ನ ’ಆರೆಂಜಸ್ ಅಂಡ್ ಲೆಮ್ಮಿಂಗ್’(೧೯೮೫), ಸ್ಯಾಲಿ ಬೆಲ್‌ಫ್ರೇಜ್‌ರ ’ಫ್ಲವರ್ಸ್ ಆಫ್ ಎಂಪ್ಟಿನೆಸ್’(೧೯೮೧), ಸತ್ಯಭಾರತಿ ಫ್ರಾಂಕ್ಲಿನ್‌ಳ ’ದಿ ಪ್ರಾಮೀಸ್ ಆಫ್ ಪ್ಯಾರಡೈಸ್: ಎ ವುಮನ್ಸ್ ಇಂಟಿಮೇಟ್ ಸ್ಟೋರಿ ಆಫ್ ಪೆರಿಲ್ಸ್ ಆಫ್ ಲೈಫ್ ವಿತ್ ರಜನೀಶ್’(೧೯೯೨), ಎಲ್ಲಕ್ಕಿಂತ ಮುಖ್ಯವಾಗಿ ಜೇಮ್ಸ್ ಗಾರ್ಡೋನ್‌ರ ’ದಿ ಗೋಲ್ಡನ್ ಗುರು: ದಿ ಸ್ಟ್ರೇಂಜ್ ಜರ್ನಿ ಆಫ್ ಓಷೋ ರಜನೀಶ್’(೧೯೮೮).
 
ಇವಲ್ಲದೆ ಕೆಲವು ಅಕಾಡೆಮಿಕ್ ಪುಸ್ತಕಗಳೂ ಪ್ರಕಟವಾಗಿವೆ. ಅವು ಹೆಚ್ಚು ಪ್ರಚಾರ ಪಡೆಯದಿದ್ದರೂ ಸಮಕಾಲೀನ ಸಮಾಜ ವಿಜ್ಞಾನ, ಮನೋವಿಜ್ಞಾನಗಳ ಹಿನ್ನೆಲೆಯಲ್ಲಿ ವಸ್ತುನಿಷ್ಠವಾಗಿ ರಜನೀಶರನ್ನು ಪರಿಚಯಿಸುತ್ತವೆ. ಬಾಬ್ ಮುಲ್ಲರ್‌ನ ’ಲೈಫ್ ಆಸ್ ಲಾಫ್ಟರ್: ಫಾಲೋಯಿಂಗ್ ಓಷೋ ರಜನೀಶ್’(೧೯೮೩), ಜುಡಿತ್ ಥಾಂಪ್ಸನ್ ಹಾಗು ಪಾಲ್ ಹೀಲಾಸ್‌ರ ’ದಿ ವೇ ಆಫ್ ಹಾರ್ಟ್: ದಿ ರಜನೀಶ್ ಮೂವ್‌ಮೆಂಟ್’(೧೯೮೬), ಡಬ್ಲ್ಯೂ.ಇ. ಮ್ಯಾನ್‌ರ ’ಕ್ವೆಸ್ಟ್ ಫಾರ್ ಟೋಟಲ್ ಬ್ಲಿಸ್: ಎ ಸೈಕೋ ಸೋಶಿಯಾಲಾಜಿಕಲ್ ಪರ್ಸ್‌ಪೆಕ್ಟೀವ್ ಆನ್ ದಿ ರಜನೀಶ್ ಮೂವ್‌ಮೆಂಟ್’(೧೯೯೧), ಲ್ಯೂಯಿ ಎಫ್ ಕಾರ್ಟರ್‌ರ ’ಚರಿಷ್ಮಾ ಅಂಡ್ ಕಂಟ್ರೋಲ್ ಇನ್ ರಜನೀಶ್‌ಪುರಂ: ದಿ ರೋಲ್ ಆಫ್ ಶೇರ್ಡ್ ವ್ಯಾಲ್ಯೂಸ್ ಇನ್ ದಿ ಕ್ರಿಯೇಷನ್ ಆಫ್ ದಿ ಕಮ್ಯುನಿಟಿ’(೧೯೯೦), ಹಾಗು ನನ್ನದೇ ಕೃತಿಯಾದ ’ದಿ ಲಾಫಿಂಗ್ ಸ್ವಾಮೀಸ್’ (೧೯೯೪) ಮೊದಲಾದವು. ಮೇಲೆ ಉಲ್ಲೇಖಿಸಲಾದ ಎಲ್ಲ ಕೃತಿಗಳೂ ದೃಷ್ಟಾಂತ ರೂಪದ, ವಾಗ್ವಾದ ಸ್ವರೂಪದ ಚಾರಿತ್ರಿಕ ಕಥನಗಳಾಗಿವೆ; ಇಲ್ಲವೆ ವಿಶ್ಲೇಷಣಾತ್ಮಕವೂ, ಪಠ್ಯಾತ್ಮಕವೂ ಆಗಿವೆ. ಆದರೆ ಅಕಾಡೆಮಿಕ್ ಬರವಣಿಗೆಗಳು ಹೆಚ್ಚು ಪ್ರಾಯೋಗಿಕವೂ, ಚಾರಿತ್ರಿಕವೂ, ಪಠ್ಯಾತ್ಮಕವೂ ಆಗಿದ್ದು ಸಮುದಾಯದ ಮೇಲೆ ರಜನೀಶ್ ಚಳವಳಿ ಉಂಟು ಮಾಡಿದ ಪರಿಣಾಮಗಳನ್ನು ಹೆಚ್ಚು ಕೂಲಂಕಶವಾಗಿ ಪರಿಶೀಲಿಸುತ್ತವೆ. ಮಾಂಟ್ರಿಯಲ್‌ನ ಮ್ಯಾಕ್‌ಗ್ರಿಲ್ ವಿಶ್ವವಿದ್ಯಾಲಯದ ’ಫ್ಯಾಕಲ್ಟಿ ಆಫ್ ರಿಲೀಜಿಯಸ್ ಸ್ಟಡೀಸ್’ ವಿಭಾಗವು ಮೇ ೨೯, ೧೯೮೯ರಂದು ರಜನೀಶ್ ಚಳವಳಿಯ ಬಗ್ಗೆ ೧ ದಿನದ ವಿಚಾರ ಸಂಕಿರಣ ನಡೆಸಿತ್ತು. ಮುಂದೆ ಆ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳನ್ನು ಸೂಸನ್ ಜೆ. ಪಾಲ್ಮರ್ ಹಾಗು ಅರವಿಂದ್ ಶರ್ಮರು ’ರಜನೀಶ್ ಪೇಪರ್ಸ್’ (೧೯೯೩) ಎಂದು ಸಂಪಾದಿಸಿ ಪ್ರಕಟಿಸಿದರು.
 
ಮೇಲೆ ಉಲ್ಲೇಖಿಸಿದ ಎಲ್ಲ ಕೃತಿಗಳನ್ನು ಹಾಗು ಅಧ್ಯಯನಗಳನ್ನು ಪರಿಶೀಲಿಸಿ ನೋಡಿದಾಗ ಶ್ರೀರಜನೀಶರ ಪ್ರಾಪಂಚಿಕ ಬದುಕು ತುಂಬ ಸರಳವಾದುದಾಗಿತ್ತು ಎನ್ನುವುದು ತಿಳಿಯುತ್ತದೆ. ರಜನೀಶ್ ಚಂದ್ರ ಮೋಹನ್ ಮಧ್ಯಪ್ರದೇಶದ ಜಾಬಲ್‌ಪುರದ ಜೈನ ಕುಟುಂಬವೊಂದರಲ್ಲಿ ೧೯೩೧ರಂದು ಜನಿಸಿದರು.  ಮಾರ್ಚ್ ೧೯೫೩ರಂದು ತನಗೆ ಆತ್ಮಾನುಭವದ ಪೂರ್ಣಬೋಧೆ ಉಂಟಾಯಿತು ಎಂದು ಹೇಳಿಕೊಳ್ಳುತ್ತಾರೆ. ೧೯೫೭ರಲ್ಲಿ ತತ್ವಶಾಸ್ತ್ರದ ವಿಷಯದಲ್ಲಿ ಎಂ.ಎ. ಪದವಿಯನ್ನು ಪಡೆದ ಮೇಲೆ ಕೆಲಕಾಲ ರಾಯ್ಪುರದ ಸಂಸ್ಕೃತ ಪಾಠಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಬಳಿಕ ಜಾಬಲ್ಪುರ ವಿಶ್ವವಿದ್ಯಾಲಯದಲ್ಲಿ, ೧೯೬೬ರಲ್ಲಿ ರಾಜಿನಾಮೆ ಮಾಡುವವರೆಗೂ, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ೧೯೬೪ರ ಹೊತ್ತಿಗಾಗಲೇ ಧ್ಯಾನಶಿಬಿರಗಳನ್ನು ನಡೆಸಲಾರಂಭಿಸಿದರು. ೧೯೬೫ರಲ್ಲಿ ಇವರ ರಾಷ್ಟ್ರವ್ಯಾಪೀ ಸಂಚಾರ, ಪ್ರವಚನ, ಧ್ಯಾನಶಿಬಿರ ಹಾಗು ಕೃತಿಗಳ ಪ್ರಕಟಣೆಗೆಂದು ’ಜೀವನ ಜಾಗೃತಿ ಕೇಂದ್ರ’ಸಂಸ್ಥೆಯನ್ನು ಸ್ಥಾಪಿಸಲಾಯಿತು. ಆಗ ಈ ಸಂಸ್ಥೆ ಹಿಂದಿಯಲ್ಲಿ ಒಂದು ನಿಯತಕಾಲಿಕೆಯನ್ನೂ ಹೊರತರುತ್ತಿತ್ತು. ೧೯೭೦ರಂದು ಶ್ರೀರಜನೀಶರು ವಿದೇಶೀಯರನ್ನೂ ಒಳಗೊಂಡಂತೆ ಕೆಲವು ಸಾಧಕರಿಗೆ ’ನವಸನ್ಯಾಸ ದೀಕ್ಷೆ’ಯನ್ನು ಕೊಡಲಾರಂಭಿಸಿದರು. ಮರುವರ್ಷವೇ ತಮ್ಮ ಹೆಸರಿನಿಂದ ’ಆಚಾರ್ಯ’ ಎಂಬ ಪದವನ್ನು ತೆಗೆದುಹಾಕಿ ’ಭಗವಾನ್’ ಎಂಬ ಅಭಿಧಾನವನ್ನು ಸೇರಿಸಿಕೊಂಡರು. ೧೯೭೦ರ ಹೊತ್ತಿಗೆ ಇವರು ಮುಂಬಯಿಯಲ್ಲಿ ವಾಸಿಸಲಾರಂಭಿಸಿದರು. ಅಲ್ಲೇ ಧ್ಯಾನ ಶಿಬಿರಗಳನ್ನೂ ನಡೆಸುತ್ತಿದ್ದರು. ಆ ಕಾಲದ ರಜನೀಶರನ್ನು ಪೀಟರ್ ಬ್ರಂಟ್ ವರ್ಣಿಸುವುದು ಹೀಗೆ:
 
ಆಚಾರ್ಯ ಶ್ರೀ ರಜನೀಶರು ಊರಿನಿಂದ ಊರಿಗೆ ಸಂಚರಿಸುತ್ತ ಪ್ರವಚನ ಮಾಡುತ್ತಿದ್ದರು. ಇವರ ಪ್ರವಚನಗಳನ್ನು ಕೇಳಲು ನೂರಲ್ಲ, ಸಾವಿರ ಸಂಖ್ಯೆಯಲ್ಲಿ ಜನ ಮುಂಬಯಿಯ ಮೈದಾನಗಳಲ್ಲಿ ಸೇರುತ್ತಿದ್ದುದನ್ನು ನಾನು ಕಂಡಿದ್ದೆ. ಇವರ ಪ್ರವಚನಗಳಲ್ಲಿ ಮೂರು ಅಂಶಗಳು ಜನರಿಗೆ ತುಂಬ ಹಿಡಿಸುತ್ತಿದ್ದವು. ಮೊದಲನೆಯದಾಗಿ, ಅವರ ಗುರು-ಶಿಷ್ಯ ಪರಿಕಲ್ಪನೆ. ’ಗುರು ಎಂಬ ಪರಿಕಲ್ಪನೆಯೇ ತುಂಬ ಅಧಾರ್ಮಿಕವಾದುದು, ಅನಾಧ್ಯಾತ್ಮಿಕವಾದುದು’ ಎನ್ನುತ್ತಿದ್ದರು. ಇನ್ನು ಎರಡನೆಯದಾಗಿ ಅವರ ಹೊರರೂಪ. ಕಾಲ ಮೇಲೆ ಕಾಲು ಹಾಕಿ ಕುಳಿತು ಭುಜವನ್ನು ಮುಂದಕ್ಕೆ ಚಾಚಿದಾಗ ಕೂದಲುಮಯವಾಗಿದ್ದ ಅವರ ಹೊಟ್ಟೆ ಸುಕ್ಕುಗಟ್ಟುತ್ತಿತ್ತು. ತೊಡೆಯ ಮೇಲೆ ಸದಾ ನೀಲಿ ಬಣ್ಣದ ಟವಲ್ ಇರುತ್ತಿತ್ತು. ಕೂದಲು ಉದುರಿದ್ದ ಅವರ ಬಕ್ಕ ತಲೆಯು ಶ್ರೀಗಂಧದ ಎಣ್ಣೆ ಲೇಪಿಸಿದಂತೆ ಹೊಳೆಯುತ್ತಿತ್ತು. ತಲೆಯ ಉಳಿದ ಕೂದಲು ಕಿವಿಯಿಂದ ಹಿಂದೆ ಸರಿದು ಎರಡೂ ಭುಜಗಳ ಮೇಲೆ ಸುಖವಾಗಿ ಮಲಗಿರುತ್ತಿತ್ತು. ಅವರ ಉದ್ದವಾದ ಎಣ್ಣೆ ಹಚ್ಚಿದಂತಿದ್ದ ಕಪ್ಪು ಬಣ್ಣದ ಗಡ್ಡ ಎದೆಯವರೆಗೂ ಬೆಳೆದು ಎರಡಾಗಿ ಕವಲೊಡೆದಿತ್ತು. ಅವರ ಸಮ್ಮುಖದಲ್ಲಿ ಕುಳಿತು ಅವರ ಪ್ರವಚನಗಳನ್ನು ಕೇಳಲಾರಂಭಿಸುತ್ತಿದ್ದಂತೆಯೇ ಅತ್ತಿತ್ತ ಸುಳಿಯುತ್ತಿದ್ದ ತಮ್ಮ ನಸು ಬೂದು ಬಣ್ಣದ ಕಣ್ಣುಗಳಿಂದ ನನ್ನನ್ನು ಬಿಡದೆ ತಮ್ಮತ್ತ ಸೆಳೆಯುತ್ತಿದ್ದರು. ಅವರ ಧ್ವನಿಯಲ್ಲಿ ತಾರುಣ್ಯ ತುಂಬಿ ತುಳುಕುತ್ತಿತ್ತು. ವಿಷಯವನ್ನು ಪ್ರತಿಪಾದಿಸುವಾಗ ಅವರ ದೊಡ್ಡ ಗಾತ್ರದ ಅಂಗೈ ಹಾಗು ಉದ್ದವಾದ ಬೆರಳುಗಳು ನಾಟ್ಯವನ್ನೇ ಸೂಚಿಸುತ್ತಿರುವಂತೆ ಮುದ್ರಾ ಭಂಗಿಗಳನ್ನು ಅಭಿನಯಿಸುತ್ತಿತ್ತು. ಅವರು ಇಳಿದುಕೊಂಡಿದ್ದ ಆ ಆಗರ್ಭ ಶ್ರೀಮಂತರ ಬಂಗಲೆ ಹಾಗು ಅವರ ಸಕಲೈಶ್ವರ್ಯವೂ ಅವರ ವ್ಯಕ್ತಿತ್ವದ ಎದುರು ಮಂಕಾದಂತೆ ಭಾಸವಾಗುತ್ತಿತ್ತು. ಇನ್ನು ಮೂರನೆಯದಾಗಿ, ಒಬ್ಬ ಅತ್ಯುತ್ತಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಿಗೆ ಇರಬಹುದಾದ ಅದ್ಭುತವಾದ ಬೌದ್ಧಿಕ ಸಾಮರ್ಥ್ಯ ಅವರಿಗಿತ್ತು. ತನ್ನನ್ನು ತಾನೇ ತೃಪ್ತಿಪಡಿಸಿಕೊಳ್ಳಲು ಒಂದೇ ವಿಷಯವನ್ನು ಹಲವು ಮಗ್ಗುಲುಗಳಲ್ಲಿ, ಹಲವು ಪದಗಳಲ್ಲಿ, ಹಲವು ಪರಿಕಲ್ಪನೆಗಳಲ್ಲಿ ವಿವರಿಸುತ್ತ. ತಮ್ಮ ಬೌದ್ಧಿಕ ವ್ಯಾಯಾಮಗಳನ್ನು ಕಂಡು ತಾವೇ ಆನಂದಿಸುತ್ತಿದ್ದರು. ಪ್ರವಚನ ಮುಗಿದ ಮೇಲೆ ಎಲ್ಲ ಬಗೆಯ ಗದ್ದಲ, ತೋರಿಕೆಗಳಿಂದ ಸ್ವಲ್ಪ ವಿಚಲಿತನಾದಂತೆ ಕಾಣುವ ಚಾಂಪಿಯನ್‌ನಂತೆ ಸಭಾಮಧ್ಯದಿಂದ ಎದ್ದು ಹೊರನಡೆಯುತ್ತಿದ್ದರು.
 
ಶ್ರೀರಜನೀಶರ ಅದ್ಭುತವಾದ ಬೌದ್ಧಿಕ ಪ್ರತಿಭೆಗೆ ಮಾರು ಹೋಗಿದ್ದ ಇನ್ನೊಬ್ಬ ಲೇಖಕ ಆವ್‌ಬ್ರೇ ಮೆನೆನ್
 
ಶ್ರೀರಜನೀಶರ ಪ್ರತಿಯೊಂದು ಮಾತೂ ಉಪನಿಷತ್ತಿನ ಋಷಿಗಳ ತತ್ವಗಳನ್ನು ಆಧರಿಸಿತ್ತಾದರೂ ಅವರ ಅತ್ಯಂತ ಸರಳವಾದ ಪರಿಣಾಮಕಾರಿಯಾದ ನಿರೂಪಣೆಯಿಂದಾಗಿ ಆ ಕಾಲದ ಋಷಿಗಳು ಹೇಗೆ ಆಲೋಚನೆ ಮಾಡುತ್ತಿದ್ದರು ಎಂಬುದರ ಒಂದು ಸ್ಥೂಲ ನೋಟ ನಮಗೆ ಸಿಗುತ್ತಿತ್ತು. ಅವರ ಸಾಮೂಹಿಕ ಧ್ಯಾನ ಪದ್ಧತಿಗಳಂತೂ ಅತಿಶಯವಾದುದು, ಅಪರೂಪವಾದುದು. ಜನ ಅವರ ಸೂಚನೆಗಳಿಗೆ ಅನುಗುಣವಾಗಿ ನಿಜವಾಗಿಯೂ ಧ್ಯಾನ ಮಾಡುತ್ತಿದ್ದರೋ ಇಲ್ಲವೊ ನಿಶ್ಚಿತವಾಗಿ ಹೇಳಲಾರೆ. ಆದರೆ ಭಾವವಿರೇಚಕ ಧ್ಯಾನ ಪದ್ಧತಿಯಲ್ಲಿ ಅವರ ಸೂಚನೆಯನ್ನು ಚಾಚೂ ತಪ್ಪದೇ ಅನುಸರಿಸುತ್ತಿದ್ದರು. ಎಲ್ಲ ಸದ್ದು, ಗದ್ದಲಗಳು ಕೂಡಲೇ ನಿಂತು ವಾದ್ಯಘೋಷಗಳೂ ಒಮ್ಮೆಲೆ ನಿಃಶ್ಯಬ್ದವಾದಾಗ ವಾತಾವರಣದಲ್ಲಿ ಅದೆಂತಹ ಶಾಂತಿ ಹಾಗು ಸುಪ್ರಸನ್ನ ಶೂನ್ಯಸ್ಥಿತಿ ಏರ್ಪಡುತ್ತಿತ್ತೆಂದರೆ, ಒಬ್ಬ ಅದ್ಭುತವಾದ ಸಂಗೀತಗಾರನಿಗೆ ಮಾತ್ರ ಅಂಥದೊಂದು ನಿಃಶ್ಯಬ್ದ ಮೌನವನ್ನು ಉಂಟು ಮಾಡಲು ಸಾಧ್ಯ. ಅತ್ತ ಅವರು ಒಬ್ಬ ಗಿಟಾರ್ ವಾದಕನಂತೆ ವೇದಿಕೆಯ ಮೇಲೆ ತಮ್ಮ ಕುರ್ಚಿಯಲ್ಲಿ ಕುಳಿತಿದ್ದರೆ, ಇತ್ತ ಸಾಧಕರು ಸದ್ದಿಲ್ಲದ ನೀರವಧ್ಯಾನದಲ್ಲಿ ಮುಳುಗಿಹೋಗುತ್ತಿದ್ದರು. ಒಬ್ಬ ಸಾಧಕನೂ ಅವರತ್ತ ನೋಡುವ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಸಾಫೋಕ್ಲಿಸ್‌ನ ನಾಟಕಗಳಲ್ಲಿ ಭಾವನೆಗಳನ್ನು ತೋರಿಸಲಾರದ ಮುಖವಾಡಗಳನ್ನು ಹಾಕಿಕೊಂಡಿರುತ್ತಿದ್ದ ನಟರುಗಳು, ಆ ಮುಖವಾಡಗಳ ಹಿಂದಿನ ತಮ್ಮ ಧ್ವನಿಯ ಭಾವತೀವ್ರತೆಯಿಂದ ವಿಶಿಷ್ಟವಾದ ಭಾವಸಂಚಲನವನ್ನು ಉಂಟುಮಾಡುತ್ತಿದ್ದಂತೆ ಶ್ರೀರಜನೀಶರು ನಿರ್ಭಾವುಕವಾಗಿ ಮಾತನಾಡುತ್ತಲೇ ಹಲವು ಸ್ಪಂದನಗಳನ್ನು ಉಂಟು ಮಾಡುತ್ತಿದ್ದರು.
 
೧೯೭೪ರಲ್ಲಿ ಮುಂಬಯಿಯನ್ನು ತೊರೆದ ಶ್ರೀರಜನೀಶರು, ಪೂನಾದಲ್ಲೇ ವಾಸಿಸಲಾರಂಭಿಸಿದರು. ೧೯೭೫ರಲ್ಲಿ ರಜನೀಶ್ ಫೌಂಡೇಶನ್ ಸ್ಥಾಪನೆ ಆದ ಮೇಲೆ ಜೀವನ ಜಾಗೃತಿ ಕೇಂದ್ರ ಅದರಲ್ಲಿ ವಿಲೀನವಾಯಿತು. ’೧೯೮೧ರಲ್ಲಿ ಅವರ ಅವತಾರದ ಕೇಂದ್ರ ಉದ್ದೇಶವು ನೆರವೇರುವ ಕಾಲ ಸನ್ನಿಹಿತವಾಯಿತು’ ಎಂದು ಜೋಷಿ ಬರೆಯುತ್ತಾರೆ. ಜುಲೈ ೧೯೮೧ರಲ್ಲಿ ವಾಯವ್ಯ ಅಮೆರಿಕಾದ ಓರೆಗಾನ್ ಎಂಬ ಪ್ರದೇಶದಲ್ಲಿ ರಜನೀಶ್ ಫೌಂಡೇಶನ್ ಒಂದು ದೊಡ್ಡ ಮರುಭೂಮಿಯನ್ನು ಖರೀದಿಸಿತು. ರಜನೀಶ್ ಚಳವಳಿಯು ಮೊದಲು ಮಾ ಯೋಗಲಕ್ಷ್ಮಿ, ಬಳಿಕ ಸ್ವಾಮಿ ಆನಂದ್ ತೀರ್ಥ ಹಾಗು ಸ್ವಾಮಿ ಸತ್ಯ ವೇದಾಂತರಿಗೆ ಹಸ್ತಾಂತರಗೊಂಡು ಆಮೇಲೆ ಅಮೆರಿಕಾದಲ್ಲಿ ಮಾ ಆನಂದ್ ಶೀಲಾಗೆ ವರ್ಗಾವಣೆಯಾಯಿತು. ಶೀಲ ಮಹಾ ದಿಟ್ಟೆ ಹಾಗು ದರ್ಪದ ಹೆಂಗಸು. ಈಕೆಯ ನೇತೃತ್ವದಲ್ಲಿ ಆಶ್ರಮ ಹೊರ ಜಗತ್ತಿನೊಂದಿಗಿನ ತನ್ನ ಸಂಬಂಧವನ್ನು ಹದಗೆಡಿಸಿಕೊಂಡಿತು. ಈ ಅವಧಿಯಲ್ಲಿ ಶ್ರೀರಜನೀಶರು ಓರೆಗಾನ್‌ನ ಆಶ್ರಮದಲ್ಲಿ ಹೊರಗಿನ ಯಾವ ಸಂಪರ್ಕವೂ ಇಲ್ಲದಂತೆ ಮೌನವ್ರತವನ್ನು ಧರಿಸಿದ್ದರು. ರಜನೀಶರ ಈ ಮೌನವ್ರತದಿಂದಾಗಿ ಆಶ್ರಮದ ವಾತಾವರಣದೊಳಗೆ ಕೆಲವು ಮಂದಿ ಸನ್ಯಾಸಿಗಳ ಯಾಜಮಾನ್ಯ, ದಬ್ಬಾಳಿಕೆಗಳು ಕಾಣಿಸಿಕೊಂಡವು.
 
೧೯೮೪ರಲ್ಲಿ ವಲಸಿಗರ ಸಮಸ್ಯೆ ಹಾಗು ತೆರಿಗೆ ಪಾವತಿಯ ಸಮಸ್ಯೆಗಳ ಕಾರಣ ನೀಡಿ ಅಮೆರಿಕನ್ ಸರ್ಕಾರ ಶ್ರೀರಜನೀಶರು ಶಾಶ್ವತ ಪೌರತ್ವಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು. ಅಲ್ಲದೆ ಮೌನವ್ರತವನ್ನು ಧರಿಸಿದ ಈ ವ್ಯಕ್ತಿ ಅದೆಂತಹ ಧರ್ಮಬೋಧಕ ಎಂದು ಸೋಜಿಗ ಪಟ್ಟಿತು. ೧೯೮೪ರ ಅಕ್ಟೋಬರ್‌ನಲ್ಲಿ ಶ್ರೀರಜನೀಶರು ತಮ್ಮ ದೀರ್ಘಕಾಲದ ಮೌನವ್ರತವನ್ನು ಮುರಿದು ಸಣ್ಣ ಸಣ್ಣ ಗುಂಪುಗಳೊಂದಿಗೆ ಮಾತುಕತೆ ನಡೆಸಲಾರಂಭಿಸಿದರು. ಜುಲೈ ೧೯೮೫ರ ಹೊತ್ತಿಗೆ ದೊಡ್ಡ ಸಂಖ್ಯೆಯ ಶಿಷ್ಯ ಸಮೂಹಕ್ಕೆ ಮತ್ತೆ ಉಪನ್ಯಾಸ ನೀಡಲಾರಂಭಿಸಿದರು. ನಿಜವಾದ ಧರ್ಮದ ಕುರಿತು, ಸ್ವಾತಂತ್ರ್ಯದ ಕುರಿತು, ಏಡ್ಸ್‌ನಂತಹ ಕಾಯಿಲೆಯಿಂದ ಮುಂದೆ ಒದಗಬಹುದಾದ ವಿಪತ್ತುಗಳ ಕುರಿತು ಪ್ರವಚನ ನೀಡಿದರು. ಈ ಅವಧಿಯಲ್ಲಿ ಶೀಲಾಗೆ ನೀಡಿದ್ದ ಅಧಿಕಾರವನ್ನೆಲ್ಲ ಹಿಂಪಡೆದರು. ಸೆಪ್ಟೆಂಬರ್ ೧೯೮೫ರಲ್ಲಿ ಶೀಲ ಹಾಗು ಇತರ ೧೫ ಮಂದಿ ಹಿರಿಯ ಸನ್ಯಾಸಿಗಳು ಆಶ್ರಮವನ್ನು ಬಿಟ್ಟು ಹೊರಬಂದರು. ಆಮೇಲೆ ಆಕೆಯ ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬಂದವು. ಆಗ ಶ್ರೀರಜನೀಶರು ಒಂದು ದೊಡ್ಡ ಪತ್ರಿಕಾಗೋಷ್ಠಿಯನ್ನು ನಡೆಸಿ ಶೀಲಾ ಹಾಗು ಆಕೆಯ ೧೫ ಮಂದಿ ಫ್ಯಾಸಿಸ್ಟ್ ಸಂಗಡಿಗರು ನಡೆಸಿದ ಹಲವು ಹಗರಣಗಳನ್ನು - ಡಲ್ಲಾಸ್‌ನಲ್ಲಿ ಆಹಾರದಲ್ಲಿ ವಿಷಬೆರೆಸಿದ್ದು, ಫೋನ್ ಕದ್ದಾಲಿಕೆ, ಹತ್ಯೆಯ ಪ್ರಯತ್ನ, ಆಶ್ರಮವನ್ನು ಐದೂವರೆ ಮಿಲಿಯನ್ ಡಾಲರ್ ಸಾಲದಲ್ಲಿ ಮುಳುಗಿಸಿದ್ದು ಇತ್ಯಾದಿ ಎಲ್ಲವನ್ನೂ - ವಿವರಿಸಿದ ಶ್ರೀರಜನೀಶರು ಅವರ ಕಾನೂನಾತ್ಮಕ ಅಪರಾಧಗಳಿಗೂ ಆಶ್ರಮಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಬಹಿರಂಗವಾಗಿ ಘೋಷಿಸಿದರು.
 
ಇದಾದ ಹತ್ತು ದಿನಗಳ ಬಳಿಕ, ಸನ್ಯಾಸಿಗಳಿಗೆ ಅವರ ದೀಕ್ಷೆಯ ಸಂಕೇತವಾಗಿದ್ದ ಗೈರಿಕ ವಸ್ತ್ರವನ್ನೂ, ಜಪಮಾಲೆಯನ್ನು ತೊಡದಂತೆ ಸೂಚಿಸಿದರು. ಆ ಸೂಚನೆಗೆ ಸನ್ಯಾಸಿಗಳು ಕರತಾಡನ ಮಾಡಿದ್ದನ್ನು ಕಂಡು ಸಿಡಿಮಿಡಿಗೊಂಡ ರಜನೀಶರು,
ಮಾಲೆ, ಗೈರಿಕ ವಸ್ತ್ರಗಳನ್ನು ತ್ಯಜಿಸಿರಿ ಎಂದು ನಾನು ಹೇಳಿದರೆ ನಿಮಗೆ ಚಪ್ಪಾಳೆ ತಟ್ಟಬೇಕು ಎನಿಸುತ್ತಿದೆಯಲ್ಲವೇ? ಹೀಗೆ ಹೇಳುವಾಗ ನನಗೆಷ್ಟು ನೋವಾಗುತ್ತಿದೆ ಎಂದು ನೀವೇನಾದರೂ ಬಲ್ಲಿರಾ?,..ಅಂದರೆ ಇದರರ್ಥ ಇಷ್ಟು ದಿನಗಳ ಕಾಲ ನೀವು ಆಶ್ರಮದಲ್ಲಿ ಅವುಗಳನ್ನು ತೊಟ್ಟುಕೊಂಡು ಬೂಟಾಟಿಕೆ ಮಾಡುತ್ತಿದ್ದಿರಿ ಎಂದಾಯಿತು. ಅವುಗಳನ್ನು ತ್ಯಜಿಸಿದೊಡನೆ ನಿಮಗೆ ಇಷ್ಟೊಂದು ಸಂತೋಷವಾಗುವುದಾದರೆ ಇಷ್ಟು ಕಾಲ ಅವನ್ನು ತೊಟ್ಟುಕೊಂಡು ಓಡಾಡುತ್ತಿದ್ದುದೇಕೆ? ಮಾಲೆಯನ್ನು ಧರಿಸುತ್ತಿದ್ದುದೇಕೆ? ತೊಡುವುದನ್ನು ಬಿಟ್ಟುಬಿಡಿ ಎಂದೊಡನೆಯೇ ಜನ ತಮ್ಮ ಬಟ್ಟೆಗಳನ್ನು ಬದಲಾಯಿಸಿಕೊಳ್ಳಲು ಓಡಿದರಲ್ಲ! ನೀವು ಹೀಗೆ ಚಪ್ಪಾಳೆ ತಟ್ಟಿ, ಬಟ್ಟೆಯನ್ನು ಬದಲಾಯಿಸಿಕೊಂಡು ಬಂದು ನನಗೆಷ್ಟು ನೋವನ್ನು ಉಂಟು ಮಾಡಿದಿರಿ ಎಂಬುದು ನಿಮಗೆ ತಿಳಿಯದು. ಈಗ ಇನ್ನೂ ಒಂದು ಮಾತನ್ನು ಹೇಳುತ್ತೇನೆ. ಧೈರ್ಯವಿದ್ದರೆ ಈಗ ಕರತಾಡನ ಮಾಡಿರಿ: ಇಲ್ಲಿಂದಾಚೆಗೆ ’ಬುದ್ಧಕ್ಷೇತ್ರ’ (ಮಹಾಯಾನ ಬೌದ್ಧಪಂಥದ ವಿಮಲಕೀರ್ತಿ ಸೂತ್ರದಲ್ಲಿ ಬುದ್ಧಕ್ಷೇತ್ರದ ಕುರಿತ ವ್ಯಾಪಕ ವಿವರಣೆ ಇದೆ - ಅನು) ತಿರೋಧಾನವಾಗಲಿದೆ. ಇನ್ನು ಮುಂದೆ, ಯಾವ ಶಕ್ತಿಪಾತವನ್ನೂ ಅವಲಂಬಿಸದೇ ನಿಮ್ಮ ಆತ್ಮಜ್ಞಾನವನ್ನು ನೀವೇ ಸಾಧಿಸಿ ಸಂಪಾದಿಸಬೇಕು.,.. ನಾನು ನಿಜ ಹೇಳುತ್ತೇನೆ, ನನಗೆ ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಿಮ್ಮನ್ನು ನಡೆಸಲು ಮನಸ್ಸಿಲ್ಲ. ಬುದ್ಧತ್ವ ಬೇಕೆಂಬ ಇಚ್ಛೆ ನಿಮಗೇ ಇಲ್ಲವೆಂದ ಮೇಲೆ ಆ ದಿಕ್ಕಿನಲ್ಲಿ ನಿಮ್ಮನ್ನು ಬಲವಂತವಾಗಿ ನಡೆಸಲಾರೆ. ಇನ್ನು ಮುಂದೆ ನೀವು ಸ್ವತಂತ್ರರು, ನಿಮ್ಮ ಆಧ್ಯಾತ್ಮಿಕ ಗತಿಗೆ ನೀವೇ ಹೊಣೆಗಾರರು.
 
ಹೀಗೆ ಹೇಳಿದ ರಜನೀಶರು ಅಕ್ಟೋಬರ್ ೨೭ರಂದು ತಮ್ಮ ಕೆಲವು ಹಿರಿಯ ಸನ್ಯಾಸಿಗಳೊಂದಿಗೆ ಆಶ್ರಮವನ್ನು ತೊರೆದರು. ಅವರ ವಿಮಾನ ಉತ್ತರ ಕೆರೊಲಿನಾದ ಒಂದು ನಗರದಲ್ಲಿ ಇಳಿಯುತ್ತಿದ್ದಂತೆಯೇ ಪೊಲೀಸರು ಅವರನ್ನು ಬಂಧಿಸಿದರು. ಅವರ ಮೇಲೆ ೩೪ ಬೇರೆ ಬೇರೆ ಆರೋಪಗಳನ್ನು ಹೊರಿಸಿ ೧೪ನೇ ನವೆಂಬರ್ ೧೯೮೫ರಂದು ಅವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಲಾಯಿತು. ಹೆಚ್ಚಿನವು ಸುಳ್ಳು ಮದುವೆಯ ಕೇಸುಗಳಾಗಿದ್ದವು. ಇವರ ಬಹುತೇಕ ಶಿಷ್ಯರು ಸುಲಭವಾಗಿ ಅಮೆರಿಕನ್ ಪೌರತ್ವವನ್ನು ಗಿಟ್ಟಿಸಿಕೊಳ್ಳಲು ಅಮೆರಿಕನ್ ನಾಗರೀಕರೊಂದಿಗೆ ಕಾನೂನನ್ನು ವಂಚಿಸಿ ಮದುವೆಯಾಗಲು ಪ್ರಯತ್ನಿಸಿದ್ದರು. ಅವುಗಳಲ್ಲಿ ೨ ಕೇಸುಗಳು ಮಾತ್ರ ಇವರ ವಿರುದ್ಧ ಸಾಬೀತಾದವು. ನ್ಯಾಯಾಲಯವು ಅವರಿಂದ ೪ ಲಕ್ಷ ಡಾಲರ್ ಶುಲ್ಕವನ್ನು ಕಟ್ಟಿಸಿಕೊಂಡು ೫ ದಿನಗಳೊಳಗಾಗಿ ಅಮೆರಿಕಾವನ್ನು ಬಿಟ್ಟು ಹೊರಡುವಂತೆ ತೀರ್ಪು ನೀಡಿತು. ಮರುದಿನವೇ ಅವರು ಅಮೆರಿಕಾವನ್ನು ಬಿಟ್ಟು ಹೊರಟರು.
 
ಭಾರತದಲ್ಲಿಯೂ ಅವರು ಬಹುಕಾಲ ಇರಲಿಲ್ಲ. ತಮ್ಮ ಆಶ್ರಮದ ಮರುಸ್ಥಾಪನೆಗೆ ಸೂಕ್ತ ಜಾಗವನ್ನು ಹುಡುಕುತ್ತ ೧೯೮೬ರ ಜನವರಿಯಿಂದ ಜುಲೈವರೆಗೆ ಶ್ರೀರಜನೀಶರು ದೇಶ ವಿದೇಶಗಳನ್ನು ಸುತ್ತಿದರು. ಈ ಅವಧಿಯಲ್ಲಿ ಯುರೋಪಿನ ೨೨ ದೇಶಗಳು ಇವರನ್ನು ಗಡಿಪಾರು ಮಾಡಿರುವುದಾಗಿ ಘೋಷಿಸಿದವು, ಕೆಲವು ದೇಶಗಳಂತೂ ಇವರ ವಿಮಾನ ಕೆಳಗಿಳಿಯಲೂ ಅವಕಾಶ ನೀಡಲಿಲ್ಲ. ಎಲ್ಲೂ ಜಾಗ ಸಿಗದೇ ಕೊನೆಗೆ ಪುಣೆಯ ಆಶ್ರಮಕ್ಕೆ ಹಿಂದಿರುಗಿದರು. ೭ನೇ ಜನವರಿ ೧೯೮೯ರಂದು ತಮ್ಮ ಹೆಸರಿನಿಂದ ’ಭಗವಾನ್’ ಪದವನ್ನು ತೆಗೆದುಹಾಕಿದರು. ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ’ರಜನೀಶ್’ ಎಂಬ ಪದವನ್ನೂ ಕೈಬಿಡತಕ್ಕದ್ದು ಎಂದು ಘೋಷಿಸಿ ’ಓಷೋ’ ಎಂಬ ಜಪಾನ್ ಬೌದ್ಧಧರ್ಮದ ಪಾರಿಭಾಷಿಕ ಪದವನ್ನು ತಮ್ಮ ಹೆಸರನ್ನಾಗಿಸಿಕೊಂಡರು. ೧೯ನೇ ಜನವರಿ ೧೯೯೦ರಂದು ಅವರ ದೇಹ ವಿಪರೀತ ದುರ್ಬಲವಾಯಿತು. ಅಮೆರಿಕಾದ ಜೈಲಿನಲ್ಲಿದ್ದಾಗ ಅವರಿಗೆ ನೀಡಲಾಗಿದ್ದ ವಿಕಿರಣಕಾರೀ ವಿಷಪದಾರ್ಥದಿಂದ ಹೀಗಾಯಿತು ಎಂದು ಅವರ ಶಿಷ್ಯರು ಹೇಳುತ್ತಾರೆ. ಹೀಗೆ ಈ ಭೂಗ್ರಹಕ್ಕೆ ಅವರು ನೀಡಿದ ಭೇಟಿ ಮುಕ್ತಾಯವಾಯಿತು. ಅದೇ ದಿನ ಅವರ ಅಂತ್ಯಕ್ರಿಯೆಗಳನ್ನೂ ನಡೆಸಲಾಯಿತು.
*           *           *           *
ಭಾರತೀಯ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ತೌಲನಿಕವಾಗಿ ರಜನೀಶರ ಚಿಂತನೆಗಳನ್ನು ವಿವೇಚಿಸುವ ರಾಬರ್ಟ್ ಈ. ಗುಸ್ನರ್‌ರ ಪ್ರಯತ್ನ ತುಂಬ ಅಪರೂಪವಾದುದು. ಗುಸ್ನರ್ ರಜನೀಶ್‌ರನ್ನು ’ಬೌದ್ಧ ಸಂವೇದನೆಯನ್ನು ಹೊಂದಿರುವ ಒಬ್ಬ ಜೈನ’ ಎಂದು ಕರೆಯುತ್ತಾರೆ. ’ಮೇಲ್ನೋಟಕ್ಕೆ ಅವರು ಸಂಪ್ರದಾಯ ವಿರೋಧೀ ಚಿಂತಕನಂತೆ ಕಂಡರೂ ಆಂತರ್ಯದಲ್ಲಿ ಸಂಪ್ರದಾಯದ ಕೆಲವು ತತ್ವಗಳನ್ನು ಒಪ್ಪುತ್ತಿದ್ದರು’ ಎಂದು ಅಭಿಪ್ರಾಯ ಪಡುತ್ತಾರೆ. ’ಪತಂಜಲಿಯ ಯೋಗಸೂತ್ರಗಳಿಗೆ ಭಾಷ್ಯವನ್ನು ನೀಡಿರುವ ಶ್ರೀರಜನೀಶರು ಪತಂಜಲಿಯ ಕರ್ಮ ಸಿದ್ಧಾಂತವನ್ನು ಒಪ್ಪಿದರೂ ಸಾಮಾಜಿಕ ಹಾಗು ನೈತಿಕ ನೆಲೆಗಳಲ್ಲಿ ಆ ಸಿದ್ಧಾಂತದ ಹೆಸರಿನಲ್ಲಿ ನಡೆಯುತ್ತಿರುವ ವ್ಯವಸ್ಥಿತ ಶೋಷಣೆಯನ್ನು ಅವರು ತೀವ್ರವಾಗಿ ಟೀಕಿಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯೊಳಗಿನ ಎಲ್ಲ ವೈರುದ್ಧ್ಯಗಳೂ ಕೊನೆಗೆ ’ವಿದ್ಯಾ’ ಮತ್ತು ’ಅವಿದ್ಯಾ’ (ಅವೇರ್‌ನೆಸ್ ಹಾಗು ಅನವೇರ್‌ನೆಸ್) ಎಂಬ ಎರಡು ಮೂಲಭೂತ ಪರಿಕಲ್ಪನೆಗಳಲ್ಲಿ ಪರ್ಯವಸಾನವಾಗುತ್ತದೆ. ’ವಿದ್ಯಾ’ ಎಂಬುದು ಮನಸ್ಸಿನಲ್ಲಿ ಏನು ಸಂಭವಿಸುತ್ತಿದೆ ಎನ್ನುವುದರಿಂದಲ್ಲ ಬದಲಿಗೆ ಮನಸ್ಸಿನ ಪ್ರತಿಯೊಂದು ವಿಕಲ್ಪಗಳಿಗೂ ಒಳಗೆ ಒಂದು ಸಾಕ್ಷೀಭಾವ ಇರುವುದೇ ಇಲ್ಲವೇ ಎನ್ನುವುದರಿಂದ ತೀರ್ಮಾನವಾಗುತ್ತದೆ. ಶಾಂತಿ ಹಾಗು ನಿಶ್ಯಬ್ದ ಅವಸ್ಥೆ ಆ ಸಾಕ್ಷೀಭಾವದ ಮೂಲಭೂತ ಲಕ್ಷಣವಾಗಿದೆ’ ಎಂದು ಗುಸ್ನರ್ ರಜನೀಶ್‌ರ ಚಿಂತನೆಗಳನ್ನು ವಿವರಿಸುತ್ತಾರೆ.  
 
ದೇವಗೀತ್ ಹಾಗು ಅಮಿತಾಭ್ ಎಂಬ ಇನ್ನಿಬ್ಬರು ವಿದ್ವಾಂಸರು ಶ್ರೀರಜನೀಶರು ಹಿಂದಿನ ಎಲ್ಲ ಅನುಭಾವಿಗಳಿಗಿಂತ ಪ್ರತ್ಯೇಕವಾಗಿ ನಿಲ್ಲುವರು ಎಂದು ಅಭಿಪ್ರಾಯ ಪಡುತ್ತಾರೆ. ’ಜೀವನ್ಮುಕ್ತ ಸ್ಥಿತಿಯನ್ನು ಹೊಂದಿದ್ದ ಶ್ರೀರಜನೀಶರು ಆಧುನಿಕ ಮನುಷ್ಯನನ್ನು ಅಸ್ತಿತ್ವದ ಮೂಲ ಬೇರುಗಳೊಡನೆ ಸಾಂಗತ್ಯಪೂರ್ಣವಾಗಿ, ಅನುಭವ ಪ್ರಾಮಾಣ್ಯದೊಂದಿಗೆ ನಿಲ್ಲಿಸುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿದವರು. ಧರ್ಮ, ತತ್ವಶಾಸ್ತ್ರ ಹಾಗು ಮನೋವಿಜ್ಞಾನದ ಜಗತ್ತುಗಳು ಇವರಿಂದ ಅಗಾಧವಾಗಿ ಪ್ರೇರಿತವಾದವು. ಇವರ ಮಾತುಗಳಲ್ಲಿ ರಾಜಕಾರಣ, ವಿಜ್ಞಾನ, ಧರ್ಮ ಹಾಗು ನೈತಿಕತೆಯ ಬೇರುಗಳನ್ನೇ ಅಲುಗಾಡಿಸುವ ಶಕ್ತಿ ಇತ್ತು. ಯೇಸು, ಬುದ್ಧ, ಲಾವ್‌ತ್ಸು, ಪೈಥಾಗೊರಸ್ ಮೊದಲಾದವರ ಸಾಲಿನಲ್ಲಿ ನಿಲ್ಲಬಲ್ಲ ಇವರ ಜೀವಿತೋದ್ದೇಶ ಮನುಷ್ಯ ನಾಗರೀಕತೆಯನ್ನು ತನ್ನ ವಿನಾಶಕಾರೀ ಮೃಗತ್ವದ ಗುಣಗಳಿಂದ ಪಾರುಮಾಡುವುದಾಗಿದೆ’ ಎಂದು ಬರೆಯುತ್ತಾರೆ.
 
ವಿಲಿಯಮ್ ಡ್ರೆನ್ನನ್ ಎಂಬ ಮನೋವಿಜ್ಞಾನಿಯು ’ರಜನೀಶ್‌ಪುರಕ್ಕೆ ಭೇಟಿ ನೀಡುವ ಮುನ್ನ ಈತ ಮಹಾ ದುರಭಿಮಾನಿ ಎಂದು ಭಾವಿಸಿದ್ದೆ ಆಮೇಲೆ ಇವರ ಮೇಧಾಶಕ್ತಿ, ಹಾಸ್ಯ ಪ್ರವೃತ್ತಿ ಹಾಗು ಪ್ರಾಮಾಣಿಕತೆಗಳಿಗೆ ಮನಸೋತೆ’ ಎಂದು ಹೇಳಿದ್ದಾರೆ. ಅಮೆರಿಕಾದ ಮತ್ತೊಬ್ಬ ಮನೋವಿಜ್ಞಾನಿ ರೊನಾಲ್ಡ್ ಕ್ಲಾರ್ಕ್ ’ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್’ನ ಕೈಪಿಡಿಯಲ್ಲಿ ಉಲ್ಲೇಖಿತವಾದ ’ನಾರ್ಸಿಸ್ಟಿಕ್ ಪರ್ಸನಾಲಿಟಿ ಡಿಸ್‌ಆರ್ಡರ್’ ಎಂಬ ಮನೋರೋಗದ ಒಂದೊಂದು ಲಕ್ಷಣವನ್ನೂ ರಜನೀಶರ ವರ್ತನೆಗಳಿಗೆ ಅನ್ವಯಿಸಿ ಅವರ ವ್ಯಕ್ತಿತ್ವವನ್ನು ಮನೋವೈಜ್ಞಾನಿಕ ನೆಲೆಗಳಲ್ಲಿ ವಿಶ್ಲೇಷಿಸುವ ವಿಶಿಷ್ಟ ಪ್ರಯತ್ನ ಮಾಡಿದ್ದಾರೆ. ತಮ್ಮ ಪ್ರಬಂಧದ ಕೊನೆಗೆ ಅವರು ಹೊಸನಾಗರೀಕತೆಗೆ ಹೊಸ ಮನುಷ್ಯನನ್ನು ರೂಪಿಸಬೇಕೆಂಬ ಇವರ ಕುರುಡು ಕನಸು ಭಗ್ನವಾಯಿತು. ಏಕೆಂದರೆ ಇವರಲ್ಲಿದ್ದ ಅತಿಯಾದ ಆತ್ಮಪ್ರತ್ಯಯ, ತನ್ನ ಸುತ್ತ ಸದಾ ಭಟ್ಟಂಗಿಗಳು ಇರಬೇಕೆಂಬ ಹಂಬಲ, ಬೇರೆಯವರನ್ನು ತುಂಬ ಅಸೂಕ್ಷ್ಮವಾಗಿ, ಉದಾಸೀನವಾಗಿ ಪರಿಗಣಿಸುವ ಧೋರಣೆ, ಶೋಷಿಸುವ ಪ್ರವೃತ್ತಿ, ಸ್ವಲ್ಪವೂ ರಾಜೀ ಮನೋಭಾವ ಹೊಂದಿಲ್ಲದಿರುವುದು, ಕಪಟತನ, ಕಾನೂನಿನ ಬಗ್ಗೆ ಗೌರವವಿಲ್ಲದಿರುವುದು, ಸಾಮಾಜಿಕ ವ್ಯವಸ್ಥೆ ಹಾಗು ಆಚರಣೆಗಳ ಬಗ್ಗೆ ನಿರ್ಲಕ್ಷ್ಯ ಮತ್ತು ದ್ವೇಷ, ಸ್ಪಷ್ಟ ರಾಜಕೀಯ ನಿಲುವು ಇಲ್ಲದಿರುವುದು, ತನ್ನ ಮಿತಿಗಳ ಬಗ್ಗೆ ತಿಳುವಳಿಕೆಯೇ ಇರದ ಹುಂಬತನ,..’ ಹೀಗೆ ಅವರ ವ್ಯಕ್ತಿತ್ವದ ಇತಿ ಮಿತಿಗಳನ್ನು ವಿಶ್ಲೇಷಿಸುವ ಕ್ಲಾರ್ಕ್‌ರ ನಿರೂಪಣಾ ವಿಧಾನ ತುಂಬ ನಿಷ್ಠುರವಾದುದು ಎಂಬಂತೆ ಕಂಡರೂ ಇವರ ತೀರ್ಮಾನಗಳು ಚರ್ಚೆಗೆ ಸದಾ ತೆರೆದಿರುವಂತಹವುಗಳಾಗಿವೆ. ಕ್ಲಾರ್ಕ್‌ರ ರಜನೀಶರ ಬಗೆಗಿನ ವಿಶ್ಲೇಷಣೆ ನಿಸ್ಸಂಶಯವಾಗಿ ಆಧುನಿಕ ಮನೋವಿಜ್ಞಾನ ಹಾಗು ಮಾನಸಿಕ ಚಿಕಿತ್ಸಾ ಪರಿಕಲ್ಪನೆಗಳ ಪ್ರಾಯೋಗಿಕ ವಿಶ್ಲೇಷಣಾ ವಿಧಾನಕ್ಕೆ ಒಂದು ಅತ್ಯುತ್ತಮ ಮಾದರಿಯಾಗಿದೆ. ಈ ಬಗೆಯ ವಿಶ್ಲೇಷಣೆಯ ವಿಧಾನವು ತಮ್ಮನ್ನು ಕುರಿತು ತಾವೇ ಹೇಳಿಕೊಳ್ಳುವ ದೇವ ಮಾನವರ ವಿಲಕ್ಷಣವೂ ನಿಗೂಢವೂ ಆದ ವ್ಯಕ್ತಿತ್ವದ ಅನಾವರಣಕ್ಕೆ ಹೊಸತೊಂದು ಪರಿಕರವನ್ನು ನೀಡಬಲ್ಲದು.
 
ಇನ್ನು ಸಮಾಜವಿಜ್ಞಾನಿ ಸೂಸನ್ ಪಾಲ್ಮರ್ ಮ್ಯಾಕ್ಸ್ ವೆಬರ್‌ನ ’ಕರಿಶ್ಮಾ’ ಎಂಬ ಪರಿಭಾಷೆಯ ಹಿನ್ನೆಲೆಯಲ್ಲಿ ’ಯಾವ ದೈವೀಕ ಸಂದೇಶವನ್ನೂ ಹೊಂದಿರದ ಅಥವ ಯಾವ ಸಾಮಾಜಿಕ, ನೈತಿಕ ಹೊಣೆಗಾರಿಕೆಯನ್ನೂ ತೋರಿಸದ ಈತ ಮುಕ್ತಿರಾಹುವಿಗೆ ಗ್ರಸ್ಥರಾದ ಕೆಲವು ಸ್ವಹಿತಾಸಕ್ತರನ್ನು ತನ್ನ ಹಾದಿಯಲ್ಲಿ ಕೊಂಡೊಯ್ದ. ತಾನೊಬ್ಬ ಆತ್ಮಜ್ಞಾನಿ ಎಂದು ಹೇಳಿಕೊಳ್ಳುವ ಮೂಲಕ ಈತ ತನ್ನ ವರ್ಚಸ್ಸನ್ನು ಅಸಾಧಾರಣವಾದ ರೀತಿಯಲ್ಲಿ ಬೆಳೆಸಿಕೊಂಡಿದ್ದ’ ಎಂದು ವಿಶ್ಲೇಷಿಸುತ್ತಾಳೆ. ಈ ವರ್ಚಸ್ವೀ ನಾಯಕನ ಸುತ್ತ ಒಂದು ಸಂಸ್ಥೆ ಹೇಗೆ ಅಭಿವೃದ್ಧಿಗೊಂಡಿತು, ಆ ಸಂಸ್ಥೆಯ ಮೂಲಕ ಆತನ ವರ್ಚಸ್ಸು ಹೇಗೆ ಇನ್ನೂ ಹೆಚ್ಚು ವಿಸ್ತಾರ ಹೊಂದಿತು, ಹಾಗು ಆ ಸಂಸ್ಥೆ ತನ್ನ ಭಗ್ನತೆಯ ಬೀಜಗಳನ್ನು ತನ್ನಲ್ಲೇ ಹೇಗೆ ಹುದುಗಿಸಿಕೊಂಡಿತ್ತು ಎಂಬುದನ್ನು ಕುತೂಹಲಕರವಾಗಿ ವಿವರಿಸುವ ಈಕೆ ವರ್ಚಸ್ಸಿಗೂ ಸಂಸ್ಥೀಕರಣಕ್ಕೂ ನಡುವೆ ಒಂದು ಸ್ಪಷ್ಟ ಗಡಿರೇಖೆಯನ್ನು ಎಳೆಯಲು ಬರುವುದಿಲ್ಲ ಎಂದು ಪ್ರತಿಪಾದಿಸುತ್ತಾಳೆ. ’ಸಂಸ್ಥೆಯ ನೆರವಿಲ್ಲದೆ ಯಾರ ವರ್ಚಸ್ಸೂ ಬೆಳೆಯದು; ಹಾಗೆಯೇ ವ್ಯಕ್ತಿಯ ವರ್ಚಸ್ಸಿನ ನೆರವಿಲ್ಲದೇ ಸಂಸ್ಥೀಕರಣದ ಪ್ರಕ್ರಿಯೆ ಜರುಗದು’ ಎನ್ನುತ್ತಾಳೆ. ಈಕೆ ರಜನೀಶರ ಬದುಕನ್ನು ಏಳು ಹಂತಗಳಲ್ಲಿ ವಿಶ್ಲೇಷಿಸುತ್ತಾಳೆ: (೧) ಚಳವಳಿ ಸಂಸ್ಥೀಕರಣವಾಗಲು ಅದನ್ನು ಎಲ್ಲ ರೀತಿಯಲ್ಲೂ ಬೆಂಬಲಿಸಿ ಮುನ್ನಡೆಸಿದರು, ಸಂಸ್ಥೆಯ ನಿಯಮಗಳನ್ನು ಹಾಗು ಆಡಳಿತಾತ್ಮಕ ನಿರ್ಧಾರಗಳನ್ನು ಸ್ವತಃ ತೀರ್ಮಾನಿಸುತ್ತಿದ್ದರು. ತನ್ನ ಅನುಯಾಯಿಗಳಿಗೆ ಆಪ್ತ ಸಲಹೆಗಳನ್ನು ನೀಡುತ್ತಿದ್ದರು. ಕಲಹಗಳನ್ನು ಪರಿಹರಿಸುತ್ತಿದ್ದರು, ಹೊರಗಿನ ಸಮಾಜದೊಂದಿಗೂ ತುಂಬ ವ್ಯಾಪಕವಾದ, ಪರಿಣಾಮಕಾರಿಯಾದ ಸಂಬಂಧವನ್ನು ಇರಿಸಿಕೊಂಡಿದ್ದರು. ಹೀಗೆ ೧೯೭೦ರಲ್ಲಿ  ಸನ್ಯಾಸ ದೀಕ್ಷೆಯನ್ನು ನೀಡಲು ಆರಂಭಿಸುವವರೆಗೂ ತಮ್ಮ ವರ್ಚಸ್ಸನ್ನು ಜಾಣ್ಮೆಯಿಂದ ಹೆಚ್ಚಿಸಿಕೊಂಡರು. (೨) ೧೯೭೧ ರಿಂದ ೧೯೭೪ರ ಅವಧಿಯಲ್ಲಿ ತಮ್ಮನ್ನು ತಾವು ’ಭಗವಾನ್’ ಎಂದು ಕರೆದುಕೊಳ್ಳುವ ಮೂಲಕ ತಮ್ಮ ವರ್ಚಸ್ಸನ್ನು ದೃಢವಾಗಿ ಸ್ಥಾಪಿಸಿಕೊಂಡರು. (೩) ೧೯೭೪ರಲ್ಲಿ ಪೂನಾದಲ್ಲಿ ಆಶ್ರಮವನ್ನು ಸ್ಥಾಪಿಸಿಕೊಂಡ ಮೇಲೆ ಆ ವರ್ಚಸ್ಸು ಸಾಂಸ್ಥಿಕ ರೂಪವನ್ನು ಪಡೆದು ಅಡೆತಡೆಯಿಲ್ಲದಂತೆ ಬೆಳೆಯಲಾರಂಭಿಸಿತು. ೧೯೭೯ರ ನಂತರ ಅವರ ಆರೋಗ್ಯ, ವರ್ಚಸ್ಸುಗಳು ಕ್ರಮೇಣ ಕ್ಷೀಣಿಸಲಾರಂಭಿಸಿದವು. ಸಂಸ್ಥೆ ಒಬ್ಬನೇ ವ್ಯಕ್ತಿಯನ್ನು ಆಶ್ರಯಿಸಿ ನಿಲ್ಲುವಂತಾಯಿತು. ಇಂತಹ ಸ್ಥಿತಿಯನ್ನೇ ಡರ್ಖೀಮ್ ’ಟೋಟೆಮ್’ ಎಂದು ಕರೆಯುವುದು. (೪) ಆಶ್ರಮ ಅಮೆರಿಕಾಗೆ ಸ್ಥಳಾಂತರವಾದ ಮೇಲೆ ಶೀಲಾಳ ಅಧಿಕಾರಶಾಹಿಯಲ್ಲಿ ರಜನೀಶರ ಬದುಕಿನ ನಾಲ್ಕನೆಯ ಹಂತ ಪ್ರಾರಂಭವಾಗುತ್ತದೆ. ಆಗ ಅಂದರೆ ೧೯೮೧ ರಿಂದ ೧೯೮೪ರ ಅವಧಿಯಲ್ಲಿ ತನ್ನ ಇತಿ ಮಿತಿಗಳನ್ನು, ತನಗಿರುವ ನಿರ್ಬಂಧಗಳನ್ನು ಅರಿತು ಆಕೆಯ ಎಲ್ಲ ದಬ್ಬಾಳಿಕೆಗೂ ಮೌನ ಸಮ್ಮತಿ ನೀಡುತ್ತಲೇ ತನ್ನ ವರ್ಚಸ್ಸನ್ನು ಕಾಪಾಡಿಕೊಳ್ಳಲು ಯತ್ನಿಸಿದರು. (೫) ೧೯೮೪ರ ಅಕ್ಟೋಬರ್‌ನಲ್ಲಿ ಮೌನವ್ರತ ಮುಗಿದ ಮೇಲೆ ಅವರಲ್ಲಿ ಅಸಹನೆ, ಪ್ರತಿರೋಧಗಳು ನಿಧಾನವಾಗಿ ಚಿಗುರಲಾರಂಭಿಸಿದವು. ಇದೂ ಸಹ ವರ್ಚಸ್ಸನ್ನು ಕಾಪಾಡಿಕೊಳ್ಳುವ ಪ್ರಯತ್ನವೇ. ಶೀಲಾ ಸ್ಥಾಪಿಸಿದ್ದ ’ರಜನೀಶಿಸಂ’ ಎಂಬ ಹೊಸ ಧರ್ಮವನ್ನು ಬಹಿಷ್ಕರಿಸುವ ಮೂಲಕ ತನ್ನನ್ನು ಎತ್ತಂಗಡಿ ಮಾಡಲು ಯತ್ನಿಸಿದ ಶೀಲಾಳ ಹುನ್ನಾರಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿದರು (ಪಾಲ್ಮರ್ ೬ನೇ ಹಂತವನ್ನು ’ಶೀಲಾಳ ದ್ರೋಹ: ಎತ್ತಂಗಡಿಯ ಪ್ರಯತ್ನ’ ಎಂದು ಹೆಸರಿಸುತ್ತಾರೆ. ಆದರೆ ಯಾರು ಯಾರನ್ನು ಎತ್ತಂಗಡಿ ಮಾಡಲು ಯತ್ನಿಸಿದರು ಎಂಬುದು ಇನ್ನೂ ಚರ್ಚಾಸ್ಪದವಾಗಿದೆ - ಹ್ಯಾರಿ ಅವೆಲಿಂಗ್). ಆಕೆಯ ಅನಾಚಾರಗಳಿಗೆಲ್ಲ ಆಸ್ಪದ ನೀಡಿದ ಇವರು ಒಬ್ಬ ಹೊಣೆಗೇಡಿ, ದುರ್ಬಲ ನಾಯಕ ಎಂದು ಸಾಬೀತಾದರು. ೭ನೆಯ ಹಂತವನ್ನು ’ಪದಚ್ಯುತಿ ಎಂದು ಹೆಸರಿಸುವ ಪಾಲ್ಮರ್. ಈ ಹಂತದಲ್ಲಿ ಶ್ರೀರಜನೀಶರು ಮಾಲೆ, ಗೈರಿಕ ವಸ್ತ್ರಗಳನ್ನು ವಿಸರ್ಜಿಸಿಬಿಡುವಂತೆ ತನ್ನ ಶಿಷ್ಯರಿಗೆ ಹೇಳುವ ಮೂಲಕ ತನ್ನ ಹಲವು ಉದ್ದೇಶಗಳನ್ನು ನೆರವೇರಿಸಿಕೊಂಡರು. ಮೊದಲಿಗೆ ಒಬ್ಬ ಧರ್ಮಗುರುವಿನ ಜವಾಬ್ದಾರಿಯಿಂದ ಬಿಡುಗಡೆ ಹೊಂದಿ ಸಾಧಾರಣ ವೇಷಧಾರಿಯ ಮಟ್ಟಕ್ಕಿಳಿದರು. ಬಳಿಕ ಶೀಲಾ ಹಾಗು ಆಕೆಯ ಸಂಗಡಿಗರ ದ್ರೋಹದಿಂದಾಗಿ ತನ್ನ ಮೇಲೆ ಎರಗಿದ್ದ ಕಳಂಕದಿಂದ ಪಾರಾದರು. ಆಮೇಲೆ ತನ್ನ ವರ್ಚಸ್ಸನ್ನು ಮತ್ತೆ ಉಳಿಸಿಕೊಳ್ಳಲು ವಿಫಲ ಯತ್ನ ನಡೆಸಿದರು. ಒಂದು ಹೊಸ ಸಮಾಜ ವ್ಯವಸ್ಥೆಯನ್ನು, ಒಂದು ಹೊಸ ಧಾರ್ಮಿಕ ಪರಂಪರೆಯನ್ನು ಸ್ಥಾಪಿಸುವೆನೆಂದು ಹೊರಟಿದ್ದ ಇವರು ಆಮೇಲೆ ಯಾವುದಕ್ಕೂ ಅಂಟಿಕೊಳ್ಳದೇ ಸಾಧಕರೊಂದಿಗೆ ಅತ್ಯಂತ ಗುಪ್ತ ನೆಲೆಯಲ್ಲಿ ಸಂವಹನವನ್ನು ಮುಂದುವರೆಸುವೆನೆಂದು ಹೊಸ ವೇಷವನ್ನು ತೊಟ್ಟರು. ದುರಂತವೆಂದರೆ ಇಂದು ಅವರ ಎಲ್ಲ ವರ್ಚಸ್ಸೂ ಅವರು ಕಟ್ಟಿದ ಆಶ್ರಮದಲ್ಲಿ ವಿಲೀನವಾಗಿದೆ.
 
ಪಾಲ್ಮರ್‌ರ ನಾಯಕನ ವರ್ಚಸ್ಸು ಹಾಗು ಸಂಸ್ಥೀಕರಣಗಳ ಸಮೀಕರಣವು ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ರಜನೀಶರ ಜೀವನ ಚರಿತ್ರೆಯನ್ನು ಒಮ್ಮೆ ಗಮನಿಸಿದರೆ ಅವರು ಎಲ್ಲದರಿಂದ ಪ್ರತ್ಯೇಕವಾಗಿ ಏಕಾಂಗಿಯಾಗಿ ನಿಲ್ಲುವ, ಸ್ವಾತಂತ್ರ್ಯವನ್ನು ಗೌರವಿಸುವ ಒಬ್ಬ ನಿರಂಕುಶ ವ್ಯಕ್ತಿತ್ವದವರು ಎಂದು ಯಾರಿಗಾದರೂ ತಿಳಿದುಬರುತ್ತದೆ. ಆದರೆ ಅವರ ಅನುಯಾಯಿಗಳು ಮಾತ್ರ ಸಂಸ್ಥೆಗಳನ್ನು ಕಟ್ಟಿಕೊಂಡರು. ವ್ಯಕ್ತಿತ್ವ ವಿಕಸನದ ಹೆಸರಿನಲ್ಲಿ ಗುಂಪು ಗೂಡಿ ವಾಸಿಸಲಾರಂಭಿಸಿದರು. ದೈಹಿಕವಾಗಿಯೂ, ಮಾನಸಿಕವಾಗಿಯೂ ಸದಾ ಒಬ್ಬರಿಗೊಬ್ಬರು ಅಂಟಿಕೊಂಡೇ ಜೀವಿಸುತ್ತಿದ್ದರು. ಅವರ ಶಿಷ್ಯರ ಈ ಸಹಜೀವನ ಪದ್ಧತಿಯನ್ನು ಗುಸ್ನರ್ ಅವರು ಭಾರತೀಯ ಪರಂಪರೆಯ ಹಿನ್ನೆಲೆಯಲ್ಲೇ ಕಾಣಲೆತ್ನಿಸುತ್ತಾರೆ. ಅಧಿಕೃತ ಧಾರ್ಮಿಕ ಸಮುದಾಯಗಳಿಂದ ಹೊರಗೆ ಬೌದ್ಧರ ರೀತಿಯ ’ಸಂಘ’ವನ್ನು ಕಟ್ಟುವುದು ರಜನೀಶರ ಉದ್ದೇಶವಾಗಿತ್ತು. ತ್ಯಾಗಕ್ಕೆ ಪ್ರಾಧಾನ್ಯ ನೀಡುವ ಬೌದ್ಧ ಸಂಘಗಳು ಹೊರಗಿನ ಸಮಾಜವು ತನ್ನೊಳಗೆ ಬೆರೆಯಲು ಆಸ್ಪದ ನೀಡಲಿಲ್ಲ. ಹಾಗೆಯೇ ಹೊರಗಿನ ಸಮಾಜವು ಸಂಘಕ್ಕೆ ಕೊಡುಗೆಗಳನ್ನು ನೀಡಲು ಮುಂದೆ ಬಂದಾಗ ನಿರಾಕರಿಸಲೂ ಇಲ್ಲ. ಹೀಗೆ ಸಂಘ-ಸಮಾಜಗಳೆರಡೂ ಪರಸ್ಪರ ಸಂಧಿಸದೆ ಸಮಾನ ಅಂತರದಲ್ಲಿ ಮುನ್ನಡೆಯುತ್ತಿದ್ದರೂ ಕೆಲ ಮಟ್ಟಿಗೆ ಅಲ್ಲಲ್ಲಿ ಒಂದಾಗಿ ಮತ್ತೆ ಬೇರ್ಪಡುತ್ತಿದ್ದವು. ಆದರೆ ರಜನೀಶ್‌ರ ’ಸಂಘ’ ಹೊರಗಿನ ಸಮಾಜವನ್ನು ಸದಾ ಅನುಮಾನಿಸುತ್ತಿತ್ತು. ’ಸಮಾಜ ಸದಾಕಾಲವೂ ರೋಗಗ್ರಸ್ಥವಾಗಿದ್ದು ದುಃಖ ವೇದನೆಗಳನ್ನು ನೀಡಿ ವ್ಯಕ್ತಿಯನ್ನು ಆಧ್ಯಾತ್ಮಿಕ ಮಾರ್ಗದಿಂದ ದೂರ ಸರಿಸುತ್ತದೆ. ವ್ಯಕ್ತಿಯ ಆಂತರ್ಯದ ಭಾವನೆಗಳು ಎಂದೂ ಹೊರಬರದಂತೆ ಎಲ್ಲ ರೀತಿಯಲ್ಲೂ ವ್ಯಕ್ತಿಯ ವಿಕಾಸವನ್ನು ದಮನ ಮಾಡುತ್ತದೆ. ಆದರೆ ಪ್ರತಿಯೊಬ್ಬ ಮನುಷ್ಯನೂ ವ್ಯಕ್ತಿತಃ ಸಮಾಜಕ್ಕಿಂತ ಹೆಚ್ಚು ಪ್ರಬುದ್ಧನಾಗಿರುತ್ತಾನೆ’ ಎಂಬ ನಂಬಿಕೆಗಳನ್ನು ಇರಿಸಿಕೊಂಡಿತ್ತು.
 
ಲ್ಯೂಯಿ ಎಫ್ ಕಾರ್ಟರ್ ಆಶ್ರಮದ ಬದುಕನ್ನು ವಿಶ್ಲೇಷಿಸುತ್ತ ’ರಜನೀಶರ ಆಶ್ರಮದ ಸ್ವರೂಪ, ನಾಯಕತ್ವ ಹಾಗು ನಿಯಮಾವಳಿಗಳು ಒಂದೇ ಸಮನೆ ಪರಿವರ್ತನೆಯಾಗುತ್ತಿದ್ದವು, ಕೆಲವು ಸಲ ವಿರೋಧಾಭಾಸಗಳಿಂದ ಕೂಡಿರುತ್ತಿದ್ದವು. ಅಲ್ಲಿ ಯಾವ ತತ್ವ ಸಿದ್ಧಾಂತವೂ ಹೆಚ್ಚು ಕಾಲ ದೃಢವಾಗಿ ನಿಲ್ಲುತ್ತಿರಲಿಲ್ಲ. ಅಲ್ಲಿ ಪ್ರತಿಯೊಂದೂ ಅನುಕೂಲ ಸಿಂಧುವಿಗೆ ಅನುಗುಣವಾಗಿ ಪರಿವರ್ತನೆಯಾಗುತ್ತಿದ್ದವು. ಅಲ್ಲಿ ’ಬದುಕು ಎಂದಿಗೂ ಈ ಕ್ಷಣದಲ್ಲಿ, ಈ ಸ್ಥಳದಲ್ಲಿ ಮಾತ್ರ ಸಂಭವಿಸುತ್ತಿರುತ್ತದೆ’ ಎಂದು ಬೋಧಿಸಲಾಗುತ್ತಿತ್ತು. ಹಾಗಾಗಿ ಪ್ರತಿಯೊಬ್ಬ ಸನ್ಯಾಸಿಯ ಸಾಮಾಜಿಕ ಹಾಗು ಔದ್ಯೋಗಿಕ ಬದುಕುಗಳು ಸದಾ ಅಸ್ಥಿರವಾಗಿ ಇರುತ್ತಿತ್ತು’. ಎಂದು ಹೇಳುತ್ತಾರೆ. ರೀನ್‌ಹಾರ್ಟ್ ಹಮ್ಮರ್ ಹಾಗು ಬರ್ಟ್ ಹಾರ್ಡಿನ್‌ರು ರಜನೀಶರ ಸಾಧನೆಯನ್ನು ’ಸೈಕೋ ರಿಲೀಜಿಯಸ್ ಮೂವ್‌ಮೆಂಟ್’ ಎಂದು ಕರೆಯುತ್ತಾರೆ. ಆಶ್ರಮದ ಕುರಿತು ’ರಜನೀಶರ ಆಶ್ರಮದಲ್ಲಿ ಮಾನಸಿಕ ಚಿಕಿತ್ಸಾ ವಿಧಾನಗಳನ್ನೇ ಆಧ್ಯಾತ್ಮಿಕ ಸಾಧನೆಗಳು ಎಂದು ಕಲಿಸಲಾಗುತ್ತಿತ್ತು. ನಿಸ್ಸಂಶಯವಾಗಿಯೂ ರಜನೀಶರಿಗೆ ಹ್ಯೂಮನಿಸ್ಟಿಕ್ ಸೈಕಾಲಜಿಯ ಬಗ್ಗೆ ಅಪಾರವಾದ ತಿಳುವಳಿಕೆ ಇತ್ತು. ೭೦ರ ದಶಕದಲ್ಲಿ ಅವರ ಆಶ್ರಮವು ’ಜಗತ್ತಿನ ಅತಿ ದೊಡ್ಡ ಮಾನವ ವಿಕಾಸ ಕೇಂದ್ರ’ ಎಂಬ ಹೆಸರನ್ನು ಸಂಪಾದಿಸಿತ್ತು. ಈ ಚಿಕಿತ್ಸಾ ಪದ್ಧತಿಗಳಿಂದಲೇ ಅವರು ’ಗುರು’ ಎಂದು ಕರೆಸಿಕೊಂಡದ್ದು’ ಎನ್ನುತ್ತಾರೆ.
 
ರಜನೀಶ್‌ಪುರಂ ಒಂದು ಪ್ರತ್ಯೇಕ ಸಾಮಾಜಿಕ ಘಟಕವಾಗಿದ್ದು ಅಲ್ಲಿ ಸ್ಥಿತಿವಂತರಿಗೆ ಮಾತ್ರ ಆಧ್ಯಾತ್ಮಿಕ ಹಾಗು ಮಾನಸಿಕ ಸೇವೆಗಳನ್ನು ಒದಗಿಸಲಾಗುತ್ತಿತ್ತು ಎಂದು ಕಾರ್ಟರ್ ಹೇಳುತ್ತಾರೆ. ಅಂದಿನ ಹಾಗು ಇಂದಿನ ಪುಣೆಯ ಆಶ್ರಮವನ್ನು ನೋಡಿ ಬಲ್ಲವರಿಗೆ ಕಾರ್ಟರ್‌ರ ಮಾತುಗಳನ್ನು ಅನುಮೋದಿಸುವುದು ಕಷ್ಟ. ಆದರೆ ಆಶ್ರಮವಾಸಿಗಳ ದೃಷ್ಟಿ ಧೋರಣೆಗಳು ಕ್ರಮೇಣ ಅವರ ಆಶ್ರಮಕ್ಕೇ ಮುಳುವಾದವು ಎಂಬುದಂತೂ ನಿಜ. ಇವರ ಶಿಷ್ಯರು ಅಮೆರಿಕಾದ ಒರೆಗಾನ್‌ಗೆ ಕಾಲಿಟ್ಟಾಗ ಮೊದಮೊದಲು ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಒಂದು ವರ್ಷದೊಳಗೇ ಅವರು ನೆರೆಹೊರೆಯೊಂದಿಗೆ ಘರ್ಷಣೆಗಿಳಿದು ಸಂಬಂಧವನ್ನು ಕೆಡಿಸಿಕೊಂಡರು. ಈ ಘರ್ಷಣೆ ಕ್ರಮೇಣ ದ್ವೇಷಕ್ಕೆ ತಿರುಗಿತು. ತಾತ್ವಿಕವಾಗಿ ಯೋಚಿಸುವುದಾದರೆ ಇಂಥದೊಂದು ಸಮುದಾಯವು ಒಂದು ಸಮಾಜದ ಘರ್ಷಣೆಗಳನ್ನು ಶಮನಗೊಳಿಸಬೇಕು. ಅಲ್ಲಿ ಹೆಚ್ಚಿನವರು ಮಧ್ಯಮ ಹಾಗು ಮೇಲ್‌ಮಧ್ಯಮ ವರ್ಗದವರಾಗಿದ್ದರು. ಅವರು ತಾವೇ ಖುದ್ದಾಗಿ ನಿಂತು ವಿವೇಕದಿಂದ ಸಮಸ್ಯೆಯನ್ನು ತಿಳಿಗೊಳಿಸಬಹುದಿತ್ತು. ವ್ಯಕ್ತಿ ಸಂಬಂಧವನ್ನು ಗೌರವಿಸುತ್ತಿದ್ದ, ಸೈಕೋಥೆರಪಿಗಳಿಂದ ಸಾಕಷ್ಟು ಕಲಿತಿದ್ದ ಇವರು ನೆರೆಯವರೊಂದಿಗೆ ಗೌರವ, ಸಹಾನುಭೂತಿಗಳಿಂದ ನಡೆದುಕೊಳ್ಳಲು ಸಾಧ್ಯವಿತ್ತು. ವ್ಯಕ್ತಿವಿಶಿಷ್ಟತೆಯನ್ನು ಎತ್ತಿಹಿಡಿಯುವ ಇವರು ಸಾಮೂಹಿಕವಾಗಿ ಯಾರ ಮೇಲೂ ದಾಳಿ ಮಾಡಬಾರದಿತ್ತು. ದುರದೃಷ್ಟವಶಾತ್ ಈ ಯಾವ ಅಪೇಕ್ಷೆಗಳೂ ಅಲ್ಲಿ ಫಲಿಸಲಿಲ್ಲ. ಸನ್ನಿವೇಶಗಳು ಸಂಕೀರ್ಣ ಸ್ವರೂಪವನ್ನು ಪಡೆದುಕೊಂಡವು. ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿದ್ದ ಇವರ ವರ್ತನೆಗಳನ್ನು ಯಾವ ನೈತಿಕ ಪ್ರಮಾಣಗಳು ನಿಯಂತ್ರಿಸುತ್ತಿದ್ದವೋ ಯಾರಿಗೂ ಊಹಿಸಲು ಅಸಾಧ್ಯವಾಯಿತು. ಸನ್ಯಾಸಿಗಳು ತಮ್ಮ ವಿದ್ಯಾರ್ಹತೆ ಹಾಗು ವೃತ್ತಿ ಪರಿಣತಿಗಳ ಕಾರಣದಿಂದ ಅಲ್ಲಿನ ಮೂಲ ನಿವಾಸಿಗಳ ಬಗ್ಗೆ ಒಂದು ಬಗೆಯ ದೊಡ್ಡಸ್ತಿಕೆಯ ಧೋರಣೆಯನ್ನು ಬೆಳೆಸಿಕೊಂಡಿದ್ದರು. ಇವರ ದೊಡ್ಡಸ್ತಿಕೆ, ದುರಭಿಮಾನಗಳನ್ನು ಸಹಿಸದ ಅಲ್ಲಿನ ನಿವಾಸಿಗಳೂ ಸಹ ಇವರನ್ನು ’ಗುಂಪಿನವರು, ದಾರಿ ತಪ್ಪಿದವರು, ತಲೆಕೆಟ್ಟವರು’ ಎಂದೆಲ್ಲ ಹಂಗಿಸುತ್ತಿದ್ದರು. ಇಂತಹ ಅಭಿಪ್ರಾಯಗಳಿಗೆ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಬೇಕು ಎಂದು ಅವರಿಗೆ ಮೊದಲೇ ಆಶ್ರಮದಲ್ಲಿ ಕಲಿಸಲಾಗಿತ್ತು. ಇಂತಹ ಬೆಳವಣಿಗೆಗಳು, ರಜನೀಶರನ್ನು ದೇವಮಾನವನೆಂದು ಪೂಜಿಸುತ್ತಿದ್ದ ರೀತಿ ಹಾಗು ಆಶ್ರಮದಲ್ಲಿ ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದವರ ಸರ್ವಾಧಿಕಾರೀ ಪ್ರವೃತ್ತಿ, ಇವೆಲ್ಲ ಸೇರಿ ಒಂದು ವಿಷಮ ಪರಿಸ್ಥಿತಿಯನ್ನು ಸೃಷ್ಟಿ ಮಾಡಿತು. ಶಿಸ್ತು, ಅನುಶಾಸನಗಳ ಹೆಸರಿನಲ್ಲಿ ಇತರರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ ಅಲ್ಲಿನ ಹಿರಿಯ ದರ್ಜೆಯ ನಾಯಕರು ತಾವು ನಿಯಮಾತೀತರು ಎಂಬಂತೆ ನಡೆದುಕೊಳ್ಳಲಾರಂಭಿಸಿದರು. ಆಶ್ರಮದಿಂದ ಉಚ್ಚಾಟನೆ, ಮಾಹಿತಿಗಳ ಮೇಲಿನ ಹಿಡಿತ, ವ್ಯಕ್ತಿವಿಶಿಷ್ಟತೆಯ ಸೋಗು, ಸದ್ಗುರುವಿಗೆ ಶರಣಾಗತಿ - ಇವೆಲ್ಲ ಅವರ ಕೈಲಿ ನಿಯಂತ್ರಕ ಸಾಧನಗಳಾಗಿ ಬಳಕೆಯಾದವು.
 
ಕಾರ್ಲ್ ಎ. ಲ್ಯಾಟ್ಕಿನ್ ವಿವರಿಸುವಂತೆ ಎಲ್ಲಕ್ಕಿಂತ ವಿಚಿತ್ರವೆಂದರೆ ಬಂಡಾಯವೆಬ್ಬಿಸಿ ಆಶ್ರಮವನ್ನು ನಾಶ ಮಾಡಿದ ಕೆಲವು ಶಿಷ್ಯರು ಆಮೇಲೆ ರಜನೀಶರೇ ತಮ್ಮ ಗುರು ಎಂದು ಹೇಳಿಕೊಳ್ಳುತ್ತಿದ್ದುದು. ಇಂಥವರ ಸಂಖ್ಯೆ ಕ್ರಮೇಣ ಕ್ಷೀಣಿಸಿದರೂ ಆಶ್ರಮದಲ್ಲಿ ಅಳಿದುಳಿದ ಸನ್ಯಾಸಿಗಳು ಶೀಲಾಳ ಪ್ರಕರಣ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಹೊಸದೊಂದು ಪಾಠ ಎಂದು ಭಾವಿಸಿಕೊಂಡು ಸೌಹಾರ್ದಯುತವಾಗಿ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು. ವ್ಯಕ್ತಿತ್ವ ವಿಕಸನವಾಯಿತೋ ಇಲ್ಲವೋ ತಿಳಿಯದು. ಆದರೆ ಅನುಭವದ ದೃಷ್ಟಿಯಿಂದಂತೂ ಅದು ನಿಜಕ್ಕೂ ಒಳ್ಳೆಯ ಪಾಠವೇ ಎನ್ನಬೇಕು. ರಜನೀಶರ ಸಾವಿನೊಂದಿಗೆ ಅವರ ಚಳವಳಿಯೇನೂ ಕೊನೆಯಾಗಲಿಲ್ಲ. ಆಮೇಲೆ ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಜಗತ್ತಿನಾದ್ಯಂತ ಅವರ ವಿಚಾರಗಳು ಹಿಂದೆಂದೂ ಕಾಣದಂತಹ ಪ್ರಚಾರವನ್ನು ಪಡೆದವು. ಅವರ ವಿಚಾರಗಳ ಬಗ್ಗೆ ಇನ್ನೂ ವ್ಯಾಪಕವಾದ ಜಿಜ್ಞಾಸೆ, ಸಂಶೋಧನೆಗಳು ನಡೆದವು. ಈ. ಪುಟಿಕ್‌ರ ’ಸೆಕ್ಸುಯಾಲಿಟಿ, ಜಂಡರ್, ಅಂಡ್ ಅಬ್ಯೂಸ್ ಆಫ್ ಪವರ್ ಇನ್ ದಿ ಮಾಸ್ಟರ್ ಡಿಸೈಪಲ್ ರಿಲೇಷನ್‌ಶಿಪ್ - ದಿ ಕೇಸ್ ಆಫ್ ರಜನೀಶ್ ಮೂವ್‌ಮೆಂಟ್’ ಜರ್ನಲ್ ಆಫ್ ಕಾಂಟೆಂಪರರಿ ರಿಲೀಜಿಯನ್ ೧೦:೧, ೧೯೯೫; ಹ್ಯೂ ಬಿ. ಅರ್ಬನ್‌ರ ’ಜ಼ೋರ್ಬಾ ದಿ ಬುದ್ಧ: ಕ್ಯಾಪಿಟಲಿಸಂ, ಕರಿಷ್ಮಾ ಅಂಡ್ ಕಲ್ಟ್ ಆಫ್ ಓಷೋ ರಜನೀಶ್, ರಿಲೀಜಿಯನ್, ೨೬, ೧೯೯೬; ಆಂಟನಿ ಸ್ಟೋರ್‌ರ ಕೃತಿ ’ಫೀಟ್ ಆಫ್ ಕ್ಲೇ: ಎ ಸ್ಟಡೀ ಆಫ್ ಗುರೂಸ್’, ಹಾರ್ಪರ್ ಕಾಲಿನ್ಸ್, ೧೯೯೬, ರೋಜರ್ ಹೌಸ್‌ಡನ್‌ರ ’ಪೂನಾ ೨’ ನೆನಪಿನ ಕಥನ ಇತ್ಯಾದಿ ಸಮರ್ಥ ಬರವಣಿಗೆಗಳು ಚರ್ಚೆಯನ್ನು ಇನ್ನೂ ಹಲವು ದಿಕ್ಕುಗಳಲ್ಲಿ ನಡೆಸಿವೆ.
 
ಹಿಂದೊಮ್ಮೆ ರಜನೀಶ್ ಒಂದು ಮಾತನ್ನು ಹೇಳಿದ್ದರು:
ಫೀನಿಕ್ಸ್‌ನ ಕತೆ ಕೇವಲ ಒಂದು ದಂತಕತೆಯಲ್ಲ.
ಅದು ಪ್ರತಿಯೊಬ್ಬ ವ್ಯಕ್ತಿಯ ಕತೆ.
ಪ್ರತಿಯೊಂದು ಮರುಹುಟ್ಟಿನ ಕಥೆ.
ಪ್ರತಿಯೊಬ್ಬ ಸಾಧಕನೂ ಒಂದು ಫೀನಿಕ್ಸ್ ಪಕ್ಷಿಯಂತಾಗಬೇಕು.
ಗುರುವೆಂಬ ಉರಿಯಲ್ಲಿ ಬೆಂದುಹೋಗಬೇಕು.
ಬೆಂದುಳಿದ ಆ ಬೂದಿಯಿಂದ ಮರುಹುಟ್ಟು ಸಂಭವಿಸುತ್ತದೆ.
ಹೊಸ ಬಿಡುಗಡೆ ಪ್ರಾಪ್ತವಾಗುತ್ತದೆ.
ಅದುವೇ ಪ್ರತಿಯೊಬ್ಬನ ನಿಜವಾದ ಬದುಕು.
ನಿಜದ ಬದುಕಿಗೆ ಸುಳ್ಳು ಜೀವನವನ್ನು ಬಲಿದಾನ ಮಾಡಬೇಕಿದೆ.
ಸುಳ್ಳು ಸುಟ್ಟು ಬೂದಿಯಾಗಿ ನಿಜದ ಹುಟ್ಟಿಗೆ ಅವಕಾಶ ನೀಡಬೇಕಿದೆ.
 
ಈ ಫೀನಿಕ್ಸ್ ದೃಷ್ಟಾಂತದಿಂದ ನವಸನ್ಯಾಸವನ್ನು ಹೊಸ ದಿಕ್ಕಿನಿಂದ ನೋಡುವಂತಾಗಲಿ. ಆ ದೃಷ್ಟಾಂತದ ಕೊನೆಗೆ ಶ್ರೀರಜನೀಶರು ’ನಾವು ಸತ್ತಾಗ ಮಾತ್ರ, ಭಗವಂತ ಹುಟ್ಟಲು ಸಾಧ್ಯ’ ಎಂದು ಹೇಳುತ್ತಾರೆ. ’ಇಂದಿಗೆ ಹುಟ್ಟಿ ಇಂದಿಗೆ ಬದುಕುವುದು’ ಎಂದರೆ ’ಹಿಂದಣ ಹೆಜ್ಜೆಯನ್ನು ನೋಡಿ ಕಂಡು ವಿಸರ್ಜಿಸುವುದು’ ಎಂದರ್ಥ.
 
-           ಹ್ಯಾರಿ ಆವೆಲಿಂಗ್
ಪ್ರಾಧ್ಯಾಪಕರು,
ಟ್ರಾನ್ಸ್‌ಲೇಷನ್ ಅಂಡ್ ಇಂಟರ್‌ಪ್ರಿಟಿಂಗ್ ಸ್ಟಡೀಸ್,
ಮೊನಾಶ್ ಯೂನಿವರ್ಸಿಟಿ,
ಆಸ್ಟ್ರೇಲಿಯಾ.
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.