೧೯೭೭ರ ತುರ್ತು ಪರಿಸ್ಥಿತಿ - ಒಂದು ಮರು ಅವಲೋಕನ

0

(ಓಷೋ ರಜನೀಶರ ಒಂದು ಸಂವಾದ)

ನಾನು ಪ್ರಜಾಪ್ರಭುತ್ವವನ್ನು ಪ್ರೀತಿಸುತ್ತೇನೆ. ಬರೀ ಈ ದೇಶದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವವು ಇಡೀ ಜಗತ್ತಿನಾದ್ಯಂತ ಹರಡಬೇಕು ಎಂದು ಬಯಸುತ್ತೇನೆ. ಆದರೆ ನಮ್ಮ ಸಾವಿರಾರು ವರ್ಷಗಳ ಗುಲಾಮತನದ ಸಂಸ್ಕಾರವನ್ನು ಪ್ರಜಾಪ್ರಭುತ್ವದ ಮೌಲ್ಯಗಳ ನೆರವಿನಿಂದ ಅಳಿಸಿಹಾಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳೆಲ್ಲವೂ ಬರೀ ಮಾತನಾಡುವ ಸ್ವಾತಂತ್ರ್ಯಕ್ಕೆ ಸೀಮಿತವಾಗಿದೆ. ’ಗುಲಾಮತನವನ್ನು ಬಿಟ್ಟುಬಿಡಿ’ ಎಂದು ಹೇಳಿ ಸುಮ್ಮನಾದರೆ ಸಾಕಾಗದು. ೨ ಸಾವಿರ ವರ್ಷಗಳ ಗುಲಾಮತನ ನಮ್ಮ ದೇಹ ಮನಸ್ಸು ಆತ್ಮಗಳನ್ನೂ ಹೊಕ್ಕಿಬಿಟ್ಟಿದೆ. ರೋಗಿಗಳಿಗೆ ’ಆರೋಗ್ಯವನ್ನು ಹುಷಾರಾಗಿ ನೋಡಿಕೋ’ ಎಂದಷ್ಟೇ ಹೇಳಿದರೆ ಸಾಲದು. ಕೇವಲ ಔಷಧದಿಂದಲೂ ಪ್ರಯೋಜನವಾಗದು, ಈ ಗುಲಾಮತನಕ್ಕೆ ಒಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಗುಲಾಮರಿಗೆ ಸ್ವಾತಂತ್ರ್ಯವನ್ನು ನೀಡಿದರೆ ಅವರು ಖಂಡಿತ ಹಿಂಸಾಚಾರಕ್ಕೆ ಇಳಿಯುತ್ತಾರೆ. ಮೊದಲು ಒಂದು ಸೂಕ್ತ ವಾತಾವರಣವನ್ನು ಉಂಟುಮಾಡಿಕೊಳ್ಳದೇ ಪ್ರಜಾಪ್ರಭುತ್ವವನ್ನು ತರಲಾಗದು. ಆದ್ದರಿಂದಲೇ ’ಸ್ವಾತಂತ್ರ್ಯ’ ಬಂದಂದಿನಿಂದ ನಾವು ಕೈಗೆತ್ತಿಕೊಂಡ ಪ್ರತಿಯೊಂದು ಕಾರ್ಯಯೋಜನೆಯೂ ವಿಫಲವಾಗುತ್ತಿರುವುದು, ಈ ಮೂವತ್ತು ವರ್ಷಗಳಲ್ಲಿ ಸಮಸ್ಯೆಗಳು ಇನ್ನೂ ನೂರು ಪಟ್ಟು ಉಲ್ಬಣಗೊಂಡಿವೆ. ನಾನು ಪ್ರಜಾಪ್ರಭುತ್ವವನ್ನು ಎಷ್ಟು ಪ್ರೀತಿಸುತ್ತೇನೆಂದರೆ ಜನರಿಗೆ ಅದನ್ನು ಉಳಿಸಿಕೊಳ್ಳಲು ತರಬೇತಿ ನೀಡಬಲ್ಲ ಒಂದು ಯೋಗ್ಯ ಸರ್ವಾಧಿಕಾರ ಸ್ಥಾಪನೆಯಾದರೂ ಅಡ್ಡಿಯಿಲ್ಲ ಎಂದು ನಂಬಿದ್ದೇನೆ. ನನ್ನ ಮಾತುಗಳು ನಿಮಗೆ ವಿರೋಧಾಭಾಸದಂತೆ ಕಾಣಿಸಬಹುದು. ಆದರೆ ಕೆಲವು ವಿರೋಧಾಭಾಸಗಳು ನಮ್ಮನ್ನು ವಂಚಿಸಿಬಿಡುತ್ತವೆ. ನನ್ನ ಮಾತುಗಳಲ್ಲಿ ಎಂತಹ ಮೂರ್ಖನಿಗೂ ಸುಲಭವಾಗಿ ವಿರೋಧಾಭಾಸಗಳು ಕಾಣಿಸುತ್ತವೆ. ಆದರೆ ಬದುಕು ಎಂದಿಗೂ ನಮ್ಮ ಸರಳ ತರ್ಕಗಳನ್ನು ಮೀರಿರುತ್ತದೆ, ಅದು ಎಂದಿಗೂ ವಿರೋಧಾಭಾಸದ ಹಾದಿಗಳಲ್ಲೇ ನಡೆಯುತ್ತದೆ.

ಸದ್ಯಕ್ಕೆ ನಮ್ಮ ದೇಶವು ೨೦ ಕೋಟಿ ಜನಸಂಖ್ಯೆಯನ್ನು ಧರಿಸುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ. ಆದರೆ ನಮ್ಮ ಇಂದಿನ ಜನಸಂಖ್ಯೆ ೭೦ ಕೋಟಿ. ಈ ಶತಮಾನದ ಅಂತ್ಯದ ವೇಳೆಗೆ ಚೀನಾವನ್ನೂ ಹಿಂದಿಕ್ಕಿ ನಾವು ೧೦೦ ಕೋಟಿಯನ್ನು ದಾಟಲಿದ್ದೇವೆ. ಬರೀ ಜನಸಂಖ್ಯೆಯಲ್ಲಿ ಮಾತ್ರವಲ್ಲ, ಹಸಿವು ಬಡತನಗಳ ವಿಷಯದಲ್ಲೂ ಇದು ಜಗತ್ತಿನ ಅತಿದೊಡ್ಡ ದೇಶವಾಗಲಿದೆ. ಹಸಿದವರ ಮಧ್ಯೆ ನಿಂತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಕುರಿತು ಮಾತನಾಡುವುದು ನಿಜಕ್ಕೂ ಅಸಂಗತ. ನಮ್ಮ ಸದ್ಯದ ಪ್ರಜಾಪ್ರಭುತ್ವ ಹಿಂಸೆ ಹಾಗು ಸಮಸ್ಯೆಗಳನ್ನು ಮಾತ್ರ ಸೃಷ್ಟಿಸಬಲ್ಲದು. ಹಸಿದವನು ಸುಲಭವಾಗಿ ಹಿಂಸಾಚಾರಕ್ಕಿಳಿಯುತ್ತಾನೆ. ಮನುಷ್ಯರಂತೆ ಬದುಕುವ ಅವಕಾಶವೂ ಇಲ್ಲದ ವಾತಾವರಣದಿಂದ ಉದಾತ್ತ ಪ್ರಜೆಗಳು ಹುಟ್ಟಿಬರಬೇಕೆಂದು ನಿರೀಕ್ಷಿಸಲಾಗದು. ನಮ್ಮ ಸದ್ಯದ ಪ್ರಜಾಪ್ರಭುತ್ವ ದುಷ್ಟ ರಾಜಕಾರಿಣಿಗಳಿಗೆ ಮಾತ್ರ ಅನುಕೂಲಕರವಾಗಿದೆ. ಆದ್ದರಿಂದಲೇ ಎಲ್ಲ ರಾಜಕಾರಿಣಿಗಳೂ ನನ್ನನ್ನು ದೂಷಿಸುತ್ತಿರುವುದು. ಮೊರಾರ್ಜಿ ದೇಸಾಯಿ ಮೊನ್ನೆಯಷ್ಟೇ ರಾಜ್‌ಕೋಟ್‌ನಲ್ಲಿ ’ಪ್ರಜಾಪ್ರಭುತ್ವದ ಶತ್ರುವಾದ ಆಚಾರ್ಯ ರಜನೀಶರನ್ನು ಗುಜರಾತ್‌ನಿಂದ ಬಹಿಷ್ಕರಿಸಲಾಗಿದೆ’ ಎಂದು ಘೋಷಿಸಿದ್ದಾರೆ. ಈ ಪ್ರಜಾಪ್ರಭುತ್ವವಾದಿಗಳಿಗೆ ತಮ್ಮ ಮಾತುಗಳಲ್ಲಿರುವ ದ್ವಂದ್ವವೇ ಕಾಣಿಸುವುದಿಲ್ಲವಲ್ಲ! ಆ ಪ್ರಬುದ್ಧತೆ ಬರುವವರೆಗೂ ಅಂತಹ ಅರ್ಥವಿಲ್ಲದ ಖಾಲಿ ಪದಗಳ ಬಳಕೆಯನ್ನು ಸ್ವಲ್ಪ ಕಾಲ ನಿಲ್ಲಿಸುವುದೇ ಕ್ಷೇಮ.

ಭಾರತ ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದುದರಿಂದ ನಮ್ಮ ಬಹುತೇಕ ನಾಯಕರುಗಳು ಬ್ರಿಟನ್ನಿನಲ್ಲೇ ವಿದ್ಯಾಭ್ಯಾಸ ಮಾಡಿದ್ದರು. ಅಲ್ಲಿ ಪ್ರಜಾಪ್ರಭುತ್ವ ಅದ್ಭುತವಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ಇಲ್ಲೂ ಅದನ್ನೇ ತರಲು ಪ್ರಯತ್ನಿಸಿದರು. ಆದರೆ ಇಂಗ್ಲೆಂಡಿನ ಪ್ರಜಾಪ್ರಭುತ್ವಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಇಂಗ್ಲೆಂಡನ್ನು ಅನುಕರಿಸಿದ ಮಾತ್ರಕ್ಕೆ ಭಾರತ ಇಂಗ್ಲೆಂಡ್ ಆಗಿಬಿಡುವುದೇ? ನಮ್ಮ ಇತಿಹಾಸ-ಪರಂಪರೆ ಎಂಥದ್ದು, ಇದಕ್ಕೆ ಎಂತಹ ರಾಜಕೀಯ ವ್ಯವಸ್ಥೆ ಹೊಂದುತ್ತದೆ ಎಂಬುದನ್ನು ಕುರಿತು ಆಲೋಚನೆ ಮಾಡದೆ ಈ ಮೂವತ್ತು ವರ್ಷಗಳನ್ನು ಸುಮ್ಮನೆ ಹಾಳುಮಾಡಿಕೊಂಡೆವು. ಮೊದಲಿಗೆ, ’ರಾಷ್ಟ್ರೀಯತೆ’ ಎಂಬ ಪರಿಕಲ್ಪನೆಯೇ ಭಾರತಕ್ಕೆ ಹೊಸತು. ಇಲ್ಲಿ ನೂರಾರು ಸಂಸ್ಥಾನಗಳಿದ್ದವು, ಪ್ರತಿಯೊಂದೂ ಧಾರ್ಮಿಕ ಹಾಗು ರಾಜಕೀಯ ಕಾರಣಗಳಿಗಾಗಿ ಪರಸ್ಪರ ಕಿತ್ತಾಡುತ್ತಿದ್ದವು. ಇಂಗ್ಲೆಂಡಿನಲ್ಲಿ ಇದ್ದುದು ಎರಡೇ ರಾಜಕೀಯ ಪಕ್ಷಗಳು. ಇಲ್ಲಾದರೂ ನೂರಾರು ರಾಜಕೀಯ ಪಕ್ಷಗಳಿವೆ. ಒಂದು ಸ್ಥಿರವಾದ ಸರ್ಕಾರ ನೀಡಲು ಇಂದು ಎಲ್ಲ ರಾಜಕೀಯ ಪಕ್ಷಗಳೂ ಅಸಮರ್ಥವಾಗಿವೆ. ನಮ್ಮ ರಾಜಕಾರಿಣಿಗಳಿಗೆ ಇವೆಲ್ಲ ಗೊತ್ತಿದ್ದರೂ ರಾಜಕೀಯ ಅಧಿಕಾರವೊಂದೇ ಮುಖ್ಯ ಎಂಬಂತೆ ವರ್ತಿಸುತ್ತಿದ್ದಾರೆ. ಯಾರಿಗೂ ದೇಶದ ನಿಜವಾದ ಸಮಸ್ಯೆಯನ್ನು ಬೆದಕುವ ಚಿಂತೆ ಇದ್ದಂತಿಲ್ಲ.

ಪ್ರಜಾಪ್ರಭುತ್ವ ಬಡವರಿಗೆ ಎಂದೂ ಬಾಧಕವೆನಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಹಣಕ್ಕಾಗಿ ಮತವನ್ನು ಮಾರಿಕೊಳ್ಳಲು ಸಾಧ್ಯ. ವೋಟನ್ನು ಮಾರಿಕೊಳ್ಳುವ ಜನರಿರುವ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಹೇಗೆ ಸ್ಥಾಪನೆಯಾದೀತು? ಸ್ವಾತಂತ್ರ್ಯದ ಹೆಸರು ಹೇಳಿ ಎಲ್ಲ ತರಹದ ಭ್ರಷ್ಟರು, ಕಳ್ಳಸಾಗಾಣಿಕೆದಾರರು, ಗೂಂಡಾಗಳು ಸುಲಭವಾಗಿ ಇಂತಹ ವ್ಯವಸ್ಥೆಯ ಲಾಭ ಪಡೆಯುತ್ತಾರೆ. ನಾನು ಕಂಡಂತೆ ಭಾರತದ ಜನ ಮಹಾ ಸ್ವಾರ್ಥಿಗಳು. ಇನ್ನೊಬ್ಬರ ಕಷ್ಟವನ್ನು ಕಂಡು ಸ್ವಲ್ಪವೂ ಮರುಗದೆ ’ಪ್ರತಿಯೊಬ್ಬರೂ ಅವರವರ ಪೂರ್ವಕೃತ ಕರ್ಮವನ್ನು ಅನುಭವಿಸುತ್ತಾರೆ’ ಎಂದು ವಾದಿಸುವ ಈ ಜನ ತಮ್ಮ ಸ್ವಾರ್ಥವನ್ನು ಮುಚ್ಚಿಟ್ಟುಕೊಳ್ಳಬಲ್ಲ ಮಹಾ ಚಾಣಾಕ್ಷರು. ನಮ್ಮ ದುರಂತಕ್ಕೆ ನಮ್ಮ ಸಾಮಾಜಿಕ ರಚನೆ, ನಮ್ಮ ಧಾರ್ಮಿಕ ಕಂದಾಚಾರಗಳು ಕಾರಣವೆಂದು ಇವರು ಯೋಚಿಸುವುದೇ ಇಲ್ಲ. ಇವರು ಮಾನವರಾಗಿ ಹುಟ್ಟಿದ ಮೇಲೆ ಮಕ್ಕಳನ್ನು ಹುಟ್ಟಿಸುವುದು ತಮ್ಮ ಮೂಲಭೂತ ಹಕ್ಕು ಎಂದು ಭಾವಿಸಿದ್ದಾರೆ. ಸಾಲದ್ದಕ್ಕೆ ಈ ಜನ ಮಹಾ ಸೋಮಾರಿಗಳು, ತಮ್ಮ ಸೋಮಾರಿತನವನ್ನು ಮುಚ್ಚಿಟ್ಟುಕೊಳ್ಳಲು ಇಡೀ ಜಗತ್ತೇ ಮಾಯೆ ಎಂಬ ಸಿದ್ಧಾಂತ ಮಾಡಿಟ್ಟುಕೊಂಡು ಕೂತಿದ್ದಾರೆ. ಪ್ರಜಾಪ್ರಭುತ್ವವನ್ನು ನೆಚ್ಚಿಕೊಂಡು ಇಂಥ ಜನರನ್ನು ಸರಿದಾರಿಗೆ ತರಲು ಎಂದಿಗೂ ಸಾಧ್ಯವಿಲ್ಲ. ಇಂತಹ ವ್ಯವಸ್ಥೆಗೆ ಯೋಗ್ಯ ಸರ್ವಾಧಿಕಾರವೇ ನೇರಮದ್ದು. ಯೋಗ್ಯ ಸರ್ವಾಧಿಕಾರವೆಂದರೆ ಪ್ರಜಾಪ್ರಭುತ್ವಕ್ಕೆ ದಾರಿ ಮಾಡಿಕೊಡಬಲ್ಲ ಸರ್ವಾಧಿಕಾರ ಎಂದರ್ಥ.

ಇದಕ್ಕೆ ಇಂದಿರಾ ಗಾಂಧಿಯೇ ಯೋಗ್ಯ ವ್ಯಕ್ತಿ ಎಂಬುದು ನನ್ನ ಅಭಿಮತ. ಏಕೆಂದರೆ ಮೊದಲಿಗೆ, ಆಕೆ ಒಬ್ಬ ಮಹಿಳೆ. ಹಾಗಾಗಿ ಎಲ್ಲ ಗಂಡಸರಿಗಿಂತಲೂ ಆಕೆ ಹೆಚ್ಚು ಯೋಗ್ಯಳು. ಒಬ್ಬ ತಾಯಿಯೂ ಆಗಿರುವ ಆಕೆಗೆ ದೇಶದ ಬಗ್ಗೆ ನಿಜವಾದ ಕಳಕಳಿ ಇದೆ ಎಂದು ನಾನು ಬಲ್ಲೆ. ಜೊತೆಗೆ ಒಬ್ಬ ಸರ್ವಾಧಿಕಾರಿಗೆ ಇರಬೇಕಾದ ಎಲ್ಲ ಗುಣಲಕ್ಷಣಗಳೂ ಆಕೆಗಿವೆ. ಸಮಸ್ಯೆ ಏನೆಂದರೆ ಒಬ್ಬ ವ್ಯಕ್ತಿ ಒಮ್ಮೆ ಸರ್ವಾಧಿಕಾರಿಯಾದರೆ ಮತ್ತೆ ಆತನಿಂದ ಅಧಿಕಾರವನ್ನು ಹಿಂಪಡೆಯುವುದು ಅಸಾಧ್ಯ. ತನ್ನ ಅಧಿಕಾರವನ್ನು ಪ್ರಜಾಪ್ರಭುತ್ವಕ್ಕೆ ಹಸ್ತಾಂತರಿಸುವುದು ಆತನಿಗೂ ತುಂಬ ಕಷ್ಟವಾಗುತ್ತದೆ. ಆದರೆ ಇಂದಿರಾಗೆ ಈಗಾಗಲೇ ಅರವತ್ತು ತುಂಬಿದೆ. ಇನ್ನು ಹದಿನೈದು ವರ್ಷಗಳಲ್ಲಿ ಆಕೆಯ ವಯಸ್ಸು ೭೫ ವರ್ಷಗಳಾಗುತ್ತವೆ. ಅಷ್ಟು ದೀರ್ಘಾವಧಿಯಲ್ಲಿ ಅಧಿಕಾರವನ್ನು ಚೆನ್ನಾಗಿಯೇ ಅನುಭವಿಸುವ ಆಕೆ ನಿಜಕ್ಕೂ ಬಳಲಿರುತ್ತಾಳೆ. ಈಗಾಗಲೇ ಆಕೆ ಅಧಿಕಾರದಿಂದ ಸಾಕಷ್ಟು ಬಳಲಿದ್ದಾಳೆ. ದೇಶವನ್ನು ಒಂದು ಸರಿದಾರಿಗೆ ತರಬೇಕು ಎಂಬ ಏಕಮೇವ ಉದ್ದೇಶದಿಂದ ಈಗಲೂ ಆಕೆ ಅಧಿಕಾರ ಸೂತ್ರಗಳನ್ನು ತನ್ನ ಕೈಲಿ ಹಿಡಿದಿಟ್ಟುಕೊಂಡಿದ್ದಾಳೆ. ನಾನು ಕಂಡಂತೆ ಇಂದಿನವರೆಗೂ ಆಕೆ ತುಂಬ ಸೂಕ್ಷ್ಮಜ್ಞತೆಯಿಂದ, ಉದಾರ ಬುದ್ಧಿಯಿಂದ ಅಧಿಕಾರ ನಡೆಸಿಕೊಂಡು ಬಂದಿದ್ದಾಳೆ. ಆಕೆಯ ಕೈಯಲ್ಲಿ ಸರ್ವಾಧಿಕಾರ ಸರಿಯಾದ ದಾರಿಯಲ್ಲಿ ನಡೆಯಬಲ್ಲದು ಎಂಬ ಸಂಪೂರ್ಣ ಭರವಸೆ ನನಗಿದೆ. ಮೊರಾರ್ಜಿ ದೇಸಾಯಿಯಂಥವರು ಸರ್ವಾಧಿಕಾರವನ್ನು ಸುಲಭವಾಗಿ ಹೊಲಬುಗೆಡಿಸುತ್ತಾರೆ. ಮೊರಾರ್ಜಿ ದೇಸಾಯಿ ಶುದ್ಧ ಮೂಲಭೂತವಾದಿ, ತೀರಾ ಸಂಕುಚಿತ ಬುದ್ಧಿಯವನು, ಮಹಾ ಹಠಮಾರಿ ಹಾಗು ವಿಪರೀತ ಮಹತ್ವಾಕಾಂಕ್ಷಿ. ಆತನೇನಾದರೂ ಅಧಿಕಾರದಲ್ಲಿ ಇದ್ದಿದ್ದರೆ ’ಇನ್ನು ಹದಿನೈದು ವರ್ಷಗಳ ಕಾಲ ಚುನಾವಣೆ ನಡೆಯಕೂಡದು’ ಎಂದು ನಾನು ಖಂಡಿತ ಹೇಳುತ್ತಿರಲಿಲ್ಲ. ಬದಲಿಗೆ ಪ್ರತಿ ಆರು ತಿಂಗಳಿಗೂ ಚುನಾವಣೆಗಳು ತಪ್ಪದೆ ನಡೆಯತಕ್ಕದ್ದು ಎನ್ನುತ್ತಿದ್ದೆ.

ದೇಶದ ವಾತಾವರಣವನ್ನು ಪ್ರಜಾಪ್ರಭುತ್ವಕ್ಕೆ ಅನುಕೂಲವಾಗುವಂತೆ ಬದಲಾಯಿಸಲು ಇಂದಿರಾ ನಿಸ್ಸಂಶಯವಾಗಿ ನೆರವಾಗಬಲ್ಲಳು. ನಾಲ್ಕು ತಲೆಮಾರುಗಳಿಂದಲೂ ಪ್ರಜಾಪ್ರಭುತ್ವವನ್ನು ಗೌರವಿಸುತ್ತಲೇ ಬಂದಿರುವ ಕುಟುಂಬದಲ್ಲಿ ಹುಟ್ಟಿದ ಆಕೆಗೆ ನಮ್ಮ ಬೆಂಬಲ ಬೇಕಿದೆ. ಆಕೆ ಪಶ್ಚಿಮದಲ್ಲಿ ವಿದ್ಯಾಭ್ಯಾಸ ಮಾಡಿದವಳು, ಆಕೆಯ ತಂದೆಯೂ ಪಶ್ಚಿಮದಲ್ಲಿ ತರಬೇತಿ ಪಡೆದವರು. ಭಾರತಕ್ಕೆ ಪ್ರಜಾಪ್ರಭುತ್ವವನ್ನು ಪರಿಚಯಿಸಿದ್ದೇ ಆಕೆಯ ತಂದೆ. ನೆಹರೂ ಎಂದೂ ಭಾರತೀಯರಂತೆ ಆಲೋಚನೆ ಮಾಡಿದವರಲ್ಲ. ಇಂಥವರ ಮಗಳು ಪ್ರಜಾಪ್ರಭುತ್ವವನ್ನು ಖಂಡಿತ ನಾಶ ಮಾಡಳು. ಆಕೆಯ ಸಮಸ್ಯೆ ಏನೆಂದರೆ ಸರ್ವಾಧಿಕಾರದ ಕಲ್ಪನೆಯ ಬಗ್ಗೆ ಆಕೆಗೂ ಹಿಂಜರಿಕೆ ಇದೆ. ಇಂದು ಆಕೆ ಆ ಹಿಂಜರಿಕೆಯಿಂದ ಹೊರಬರಬೇಕಾಗಿದೆ. ಪಶ್ಚಿಮ ದೇಶಗಳು ಆಕೆಯನ್ನು ನಿಂದಿಸಬಹುದು, ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಕಿಂಚಿತ್ತಾದರೂ ತ್ಯಾಗ ಮಾಡಲು ಆಕೆ ಸಿದ್ಧಳಿರಬೇಕು. ಏಕೆಂದರೆ ಪ್ರಜಾಪ್ರಭುತ್ವವನ್ನು ಗೌರವಿಸುವ ಆಕೆಯನ್ನು ಚರಿತ್ರೆಯು ಇನ್ನು ಮುಂದೆ ’ಒಬ್ಬ ನಿರಂಕುಶ ಸರ್ವಾಧಿಕಾರಿ’ ಎಂದು ಗುರುತಿಸಲಿದೆ. ಚರಿತ್ರೆಯಲ್ಲಿ ಆ ಕಳಂಕವನ್ನು ಹೊತ್ತು ನಿಲ್ಲಲು ಆಕೆ ಸಿದ್ಧಳಾಗುವುದಾದರೆ ದೇಶಕ್ಕೆ ಮಹಾ ಉಪಕಾರವಾಗಲಿದೆ. ಇನ್ನು ಹದಿನೈದು ವರ್ಷಗಳ ಅವಧಿಯಲ್ಲಿ ಇಲ್ಲಿ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ವಾತಾವರಣವನ್ನು ನಿರ್ಮಿಸಬಹುದು. ದೇಶದಾದ್ಯಂತ ಒಂದೇ ಸಮನೆ ಗಲಭೆ ಎಬ್ಬಿಸುತ್ತಿರುವ ಎಲ್ಲ ಫಟಿಂಗ ರಾಜಕಾರಿಣಿಗಳನ್ನೂ ಹತ್ತಿಕ್ಕಬಹುದು, ಅವರ ಎಲ್ಲ ಬಗೆಯ ಕಳ್ಳಸಾಗಾಣಿಕೆ, ಅಪರಾಧಗಳನ್ನು ಕೂಡಲೆ ನಿಲ್ಲಿಸಬಹುದು, ಇನ್ನು ಹದಿನೈದು ವರ್ಷಗಳ ಅವಧಿಯಲ್ಲಿ ದೇಶವನ್ನು ಸ್ವಾರ್ಥ ಹಾಗು ಸೋಮಾರಿತನಗಳಿಂದ ಮುಕ್ತಗೊಳಿಸಿ ಶ್ರೀಮಂತಗೊಳಿಸಬಹುದು. ನಿಜಕ್ಕೂ ಇದು ಎಲ್ಲ ರೀತಿಯಿಂದಲೂ ಮಹಾ ಶ್ರೀಮಂತ ದೇಶ ಎಂದು ತುಂಬ ಜನಕ್ಕೆ ತಿಳಿದಿಲ್ಲ. ಪುರೋಹಿತರುಗಳು ಮತ್ತು ರಾಜಕಾರಿಣಿಗಳು ದೇಶದ ಜನರ ಸಹಜ ಬುದ್ಧಿಶಕ್ತಿಯನ್ನೇ ಹಾಳು ಮಾಡಿದ್ದಾರೆ. ಇದೆಲ್ಲ ಒಂದು ಶಸ್ತ್ರ ಚಿಕಿತ್ಸೆಯಿಂದ ಮಾತ್ರ ಪರಿಹರಿಸಬಹುದಾದ ರೋಗಗಳಾಗಿವೆ. ಯಾವ ಬದಲಾವಣೆಯನ್ನೂ ತರದ ಬರಿಮಾತಿನ ಪ್ರಜಾಪ್ರಭುತ್ವದಿಂದ ಪ್ರಯೋಜನವಿಲ್ಲ.

ಹಾಗೆ ನೋಡಿದರೆ ಭಾರತದಲ್ಲಿ ಎಂದೂ ಪ್ರಜಾಪ್ರಭುತ್ವ ಇರಲೇ ಇಲ್ಲ. ಅದು ಗ್ರೀಕರ ಪರಿಕಲ್ಪನೆ. ಭಾರತದ ಮಣ್ಣಿನಲ್ಲಿ ಅದರ ಬೇರುಗಳೇ ಇಲ್ಲ. ಆ ಪರಕೀಯ ಕಲ್ಪನೆಯನ್ನು ತರುವ ಮುನ್ನ ಈ ನೆಲವನ್ನು, ಈ ಗಾಳಿಯನ್ನು, ಇಲ್ಲಿನ ವಾತಾವರಣವನ್ನು ಮೊದಲು ಬದಲಿಸಬೇಡವೇ? ಹಾಗೆ ಬದಲಿಸಲು ಹೊರಡುವ ನನ್ನಂಥವರು ಇಲ್ಲಿ ಜನವಿರೋಧಿಗಳು ಎಂದು ಕರೆಸಿಕೊಳ್ಳಬೇಕಾಗುತ್ತದೆ. ಇವರ ಎಲ್ಲ ಸಮಸ್ಯೆಗಳ ಮೂಲವಾಗಿರುವ ಇವರ ಸಂಸ್ಕೃತಿ ಧರ್ಮಗಳನ್ನು ಬುಡಮೇಲು ಮಾಡಲು ಹೊರಟಿರುವುದರಿಂದಲೇ ಈ ಜನ ನನ್ನನ್ನು ದ್ವೇಷಿಸುತ್ತಿರುವುದು, ಇದಲ್ಲದೇ ಬೇರೆ ಮತ್ತೇನು ಕಾರಣವಿದೆ? ಪ್ರಜಾಪ್ರಭುತ್ವವನ್ನು ಮನಸಾರೆ ಗೌರವಿಸುವ ಒಬ್ಬ ಸರ್ವಾಧಿಕಾರಿಯಾದರೂ ಇದನ್ನೆಲ್ಲ ಸುಲಭವಾಗಿ ನೆರವೇರಿಸಬಲ್ಲ. ನನ್ನ ದೃಷ್ಟಿಯಲ್ಲಿ, ಇಂದು ಇಂದಿರಾಗೆ ಸಾಧ್ಯವಾಗದಿದ್ದಲ್ಲಿ, ಭಾರತದ ಇನ್ನಾವ ರಾಜಕಾರಿಣಿಗೂ ಇದು ಮತ್ತೆ ಸಾಧ್ಯವಾಗದು. ಇಂದಿರಾ ಹೊರಟು ಹೋದ ಮೇಲೆ ಭಾರತ ಖಂಡಿತವಾಗಿ ಹಿಂದೂ ಮೂಲಭೂತವಾದಿಗಳ ಕೈಸೇರಿ ಹಿಂದೂ ರಾಷ್ಟ್ರವಾಗುತ್ತದೆ. ಈ ದೇಶ ಒಮ್ಮೆ ಅವರ ಪಾಲಾಯಿತೆಂದರೆ ಮತ್ತೆ ಬದಲಾವಣೆ ತರಲು ಸಾಧ್ಯವಿಲ್ಲ. ಈ ಹಿಂದೂ ಮೂಲಭೂತವಾದಿಗಳು ಹಿಂದೂ ಸಂಸ್ಕೃತಿಯನ್ನು ಶಾಲಾ ಕಾಲೇಜು ಮಟ್ಟದಿಂದಲೇ ಬಿತ್ತಲಾರಂಭಿಸುತ್ತಾರೆ.

ನೀವು ’ತುರ್ತು ಪರಿಸ್ಥಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ಇನ್ನು ಹದಿನೈದು ವರ್ಷಗಳ ಕಾಲ ದೇಶದಾದ್ಯಂತ ಎಲ್ಲ ಚುನಾವಣೆಗಳನ್ನೂ ವಜಾಗೊಳಿಸಿ’ ಎಂದು ಇಂದಿರಾ ಗಾಂಧಿಗೆ ಸಲಹೆ ನೀಡಿರುವುದನ್ನು ಪ್ರಸ್ತಾಪಿಸಿರುವ ಮಿಡ್ ಡೇ ಪತ್ರಿಕೆ ’ಮಿಸ್ಟರ್ ರಜನೀಶ್ ನಿಮ್ಮ ಪಾಡಿಗೆ ನೀವು ಧಾರ್ಮಿಕ ಚಟುವಟಿಕೆಗಳನ್ನಷ್ಟೇ ನೋಡಿಕೊಂಡಿರಿ’ ಎಂದು ಮುಖಪುಟದಲ್ಲಿ ಬರೆದಿರುವುದಲ್ಲ! ಇದಕ್ಕೆ ಏನಾದರೂ ಪ್ರತಿಕ್ರಿಯಿಸಲು ಬಯಸುವಿರಾ?

ಮನುಷ್ಯನು ಸಮಗ್ರ ವ್ಯಕ್ತಿತ್ವವನ್ನು ಹೊಂದಬೇಕು ಎಂದು ನಾನು ಬಯಸುತ್ತೇನೆ. ಇಂದು ಆಧುನಿಕ ಮನುಷ್ಯನ ವ್ಯಕ್ತಿತ್ವ ಹಲವು ತುಂಡುಗಳಾಗಿ ಛಿದ್ರಗೊಂಡಿದೆ. ನಾವು ಶತಶತಮಾನಗಳಿಂದಲೂ ಬದುಕನ್ನು ವಿಭಜಿಸಿ ಕೊಂಡೇ ನೋಡುತ್ತ ಬಂದಿದ್ದೇವೆ. ಛಿದ್ರಗೊಂಡ ಈ ಹಲವು ಭಾಗಗಳು ಒಂದರೊಡನೆ ಒಂದು ಸಂಬಂಧ ಹೊಂದಬಾರದಂತೆ ವ್ಯವಸ್ಥಿತವಾಗಿ ಆಲೋಚಿಸುತ್ತ ಬಂದಿದ್ದೇವೆ. ಇಂದು ತಜ್ಞನೆಂದರೆ ಒಬ್ಬ ವ್ಯಕ್ತಿಗೆ ಒಂದು ನಿರ್ದಿಷ್ಟ ಕ್ಷೇತ್ರದ ಆಚೆ ಬೇರೇನೂ ಕಾಣಿಸದು ಎನ್ನುವಂತಾಗಿದೆ. ಇದು ನಮ್ಮ ಬೌದ್ಧಿಕ ವಿಕಲತೆಯನ್ನು ಸೂಚಿಸುತ್ತದೆ. ಇಂದು ಅತ್ಯಂತ ಚಿಕ್ಕ ಘಟಕದ ಬಗ್ಗೆ ಅತಿ ಹೆಚ್ಚು ತಿಳಿದುಕೊಳ್ಳುವುದೇ ವಿಜ್ಞಾನ ಎಂದು ಬೋಧಿಸಲಾಗುತ್ತಿದೆ. ಈ ಎಲ್ಲ ತಜ್ಞರನ್ನೂ ಒಂದೇ ನೆಲೆಯಿಂದ ಅನುಸಂಧಾನ ಮಾಡುವುದು ಹೇಗೆ ಎಂಬುದು ಇಂದು ನಮ್ಮೆದುರಿಗಿರುವ ಸಮಸ್ಯೆಯಾಗಿದೆ. ಮಾನವತೆ ಎಂದರೆ ಹಲವು ಘಟಕಗಳಲ್ಲ, ಅದು ಎಂದಿಗೂ ಅಭಿನ್ನವಾದುದು ಎಂಬುದನ್ನು ನಾವು ಮರೆಯಬಾರದು. ಒಬ್ಬ ವಿಜ್ಞಾನಿ, ಒಬ್ಬ ಕಲಾವಿದ, ಒಬ್ಬ ರಾಜಕಾರಿಣಿ, ಒಬ್ಬ ತತ್ವಜ್ಞಾನಿ ಇವರೆಲ್ಲ ಬದುಕಿನ ಒಂದೊಂದು ಆಯಾಮವನ್ನು ಮಾತ್ರ ಪರಿಶೀಲಿಸುತ್ತಿರುತ್ತಾರೆ. ಧಾರ್ಮಿಕತೆಯಾದರೂ ಈ ಎಲ್ಲವನ್ನೂ ಒಳಗೊಳ್ಳಬಲ್ಲ ದೃಷ್ಟಿಕೋನವಾಗಿದೆ. ಹಾಗಾಗಿ ಆ ಪತ್ರಿಕೆಯವರು ಸೂಚಿಸಿದಂತೆ ನಾನು ನನ್ನ ಧಾರ್ಮಿಕ ಚಟುವಟಿಕೆಗಳನ್ನಷ್ಟೇ ನೋಡಿಕೊಳ್ಳುತ್ತಿದ್ದೇನೆ.

ಧಾರ್ಮಿಕತೆ ಎಂಬುದು ಒಂದು ಕ್ಷೇತ್ರದಲ್ಲಿ ಸಾಧಿಸಿಕೊಳ್ಳುವ ಪರಿಣತಿ ಅಲ್ಲ. ಇಲ್ಲಿಯ ತನಕ ಧರ್ಮವನ್ನೂ ಹಾಗೆಯೇ ಭಾವಿಸಿಕೊಂಡು ಬರಲಾಗಿತ್ತು. ನನ್ನ ನಂತರ ಇನ್ನು ಮುಂದೆ ಧರ್ಮವೆಂಬುದು ಮರುವ್ಯಾಖ್ಯಾನಕ್ಕೆ ಒಳಪಡಲಿದೆ. ಅಲ್ಬರ್ಟ್ ಐನ್ಸ್‌ಟೀನ್ ಅಮೆರಿಕಾದ ಅಧ್ಯಕ್ಷರಿಗೆ ಒಂದು ಪತ್ರ ಬರೆದು ’ಅಣುಶಕ್ತಿಯ ಸೂತ್ರ ನನ್ನ ಬಳಿ ಇದೆ, ಇದನ್ನು ಬಳಸಿ ನಾವೇಕೆ ಇಡೀ ಜಗತ್ತನ್ನು ಸ್ವರ್ಗದಂತಾಗಿಸಬಾರದು?’ ಎಂದು ಸೂಚಿಸಿದ್ದರು. ತಮ್ಮ ಪಾಡಿಗೆ ತಾವು ಭೌತವಿಜ್ಞಾನದ ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದ ಅವರಿಗೆ ರಾಜಕಾರಿಣಿಗಳು ಎಂತಹ ಪಾತಕಿಗಳಾಗಿರುತ್ತಾರೆ ಎಂಬ ಕಲ್ಪನೆ ಇರಲಿಲ್ಲ. ಹಾಗೆ ಪತ್ರ ಬರೆದು ಮುಂದೆ ಅವರು ಜೀವನವಿಡೀ ಪಶ್ಚಾತ್ತಾಪ ಮತ್ತು ಅಪರಾಧೀ ಪ್ರಜ್ಞೆಯನ್ನು ಅನುಭವಿಸಿದರು, ಹಿರೋಷಿಮಾ-ನಾಗಸಾಕಿ ದುರಂತಕ್ಕೆ ತಾನೇ ಹೊಣೆಗಾರನೆಂದು ಒಂದೇ ಸಮನೆ ಪರಿತಪಿಸಿದರು. ಇಂದು ರಷ್ಯಾ ಹಾಗು ಅಮೆರಿಕಾದ ರಾಜಕಾರಿಣಿಗಳು ವಿಜ್ಞಾನದ ಪ್ರತಿಯೊಂದು ಹೊಸ ಆವಿಷ್ಕಾರವನ್ನೂ ಸೂರೆ ಮಾಡುತ್ತಿದ್ದಾರೆ. ಒಂದು ವೇಳೆ ಮನುಷ್ಯನ ಅಂಗಾಂಗಗಳು ಸಾಂಗತ್ಯ ಪೂರ್ಣವಾಗಿ ಕಾರ್ಯನಿರ್ವಹಿಸದೇ ಪ್ರತಿಯೊಂದೂ ಸ್ವಾಯತ್ತತೆಯನ್ನು ಪಡೆದುಕೊಂಡರೆ ಏನಾಗುತ್ತದೆ ಯೋಚಿಸಿ! ಧಾರ್ಮಿಕತೆಯಾದರೂ ಮನುಷ್ಯ ಬದುಕಿನ ಪ್ರತಿಯೊಂದು ಅಂಗವನ್ನೂ ಸಾಂಗತ್ಯಪೂರ್ಣವಾಗಿ ಒಗ್ಗೂಡಿಸುತ್ತದೆ.

ನಾನು ಖಂಡಿತ ರಾಜಕಾರಿಣಿಯಲ್ಲ, ಆದರೆ ದೇಶದಲ್ಲಿ ಏನೇನಾಗುತ್ತಿದೆ ಎಂದು ಕಣ್ಣಾರೆ ನೋಡುತ್ತಿದ್ದೇನೆ, ನನಗೆ ರಾಜಕಾರಣದಿಂದ ಏನೂ ಆಗಬೇಕಿಲ್ಲದ ಕಾರಣ ಇದೆಲ್ಲ ಇನ್ನೂ ಸ್ಪಷ್ಟವಾಗಿಯೇ ನನ್ನ ಕಣ್ಣಿಗೆ ಕಾಣಿಸುತ್ತಿದೆ. ನಾನು ರಾಜಕಾರಿಣಿಗಳನ್ನು ನಿಂದಿಸಿದಾಗಲೆಲ್ಲ ರಾಜಕಾರಿಣಿಗಳ ಪರ ವಹಿಸುವ ಈ ಪತ್ರಕರ್ತರಿಗೆ ಧರ್ಮದ ಗಂಧವೇ ಇಲ್ಲದ ರಾಜಕಾರಿಣಿಗಳು ಧಾರ್ಮಿಕ ಹೇಳಿಕೆಗಳನ್ನು ನೀಡುವುದು ಏಕೆ ಕಾಣಿಸದು? ಮೊರಾರ್ಜಿ ದೇಸಾಯಿ ಪ್ರತಿದಿನ ಧರ್ಮದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿನ್ನೆಯಷ್ಟೇ ’ನಾನು ಭಗವಂತನ ಸೇವೆಯಲ್ಲಿ ನಿರತನಾಗಿದ್ದೇನೆ’ ಎಂದು ಹೇಳಿಕೆ ನೀಡಿದರು. ದೇವರ ಬಗ್ಗೆ ಆತನಿಗೇನು ತಿಳಿದಿದೆ? ಹಿಂದೊಮ್ಮೆ ’ನಾನಿನ್ನೂ ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡಿಲ್ಲ’ ಎಂಬ ಅವರ ಹೇಳಿಕೆಯನ್ನು ಇದೇ ಪತ್ರಕರ್ತರು ಪ್ರಕಟಿಸಿದ್ದರು. ಹಾಗಿದ್ದರೆ ಮೊರಾರ್ಜಿ ದೇಸಾಯಿ ಯಾವ ದೇವರ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ನಾನು ತಿಳಿದುಕೊಳ್ಳಬೇಕು. ದೇವರ ಹೆಸರಿನಲ್ಲಿ ತಮ್ಮ ಅಹಂಕಾರಗಳನ್ನು ತೃಪ್ತಿಪಡಿಸಿಕೊಳ್ಳುವ ಜನ ಇವರು. ಇಂಥವರಿಗೆ ’ತಾನು ಮಾಡುತ್ತಿರುವುದು ಚಿಲ್ಲರೆ ಕೆಲಸವಲ್ಲ, ಅದು ಮಹಾ ಘನಕಾರ್ಯ’ ಎಂಬ ಭ್ರಮೆ ಬೇಕಾಗಿದೆ. ಅದಕ್ಕಾಗಿ ದೇವರ ಹೆಸರನ್ನು ಬಳಸಿಕೊಳ್ಳುತ್ತಾರೆ. ಆ ಬಡಪಾಯಿ ದೇವರು ಮೊರಾರ್ಜಿಯಿಂದ ಏನೆಲ್ಲ ಸೇವಾರ್ಥ ಮಾಡಿಸಿಕೊಂಡಿದ್ದಾನೆ ಎಂದು ತಿಳಿಯಲು ನನಗೆ ಕುತೂಹಲವಾಗಿದೆ. ತನ್ನ ಬೇಳೆ ಬೇಯಿಸಿಕೊಳ್ಳುವುದರಲ್ಲೇ ತನ್ನ ಜೀವಮಾನವನ್ನೆಲ್ಲ ಕಳೆದ ಮಹಾ ಅಪ್ರಾಮಾಣಿಕ ವ್ಯಕ್ತಿ ಈತ. ತುರ್ತು ಪರಿಸ್ಥಿತಿ ಹೇರಿದ ಪ್ರಾರಂಭದಲ್ಲಿ ಸದ್ದೇ ಇಲ್ಲದಂತಿದ್ದರು. ಕ್ರಮೇಣ ಜನ ಎಲ್ಲೆಡೆ ಗಲಭೆ ಎಬ್ಬಿಸಲಾರಂಭಿಸಿದ ಮೇಲೆ, ಈಗ ’ನಾನು ಮತ್ತೆ ಕ್ರಿಯಾಶೀಲ ರಾಜಕಾರಣದಲ್ಲಿ ತೊಡಗಬೇಕು, ದೇಶಕ್ಕೆ ನನ್ನ ಅಗತ್ಯವಿದೆ’ ಎಂದು ಹೇಳಿಕೆ ನೀಡಿದ್ದಾರೆ. ’ನನಗೆ ಮೊರಾರ್ಜಿಯ ಅಗತ್ಯವಿದೆ’ ಎಂದು ಹೇಳುವ ಒಬ್ಬ ಪ್ರಜೆಯನ್ನೂ ದೇಶದಲ್ಲಿ ನಾನು ಕಂಡಿಲ್ಲ. ನಿಮಗೆ ಅಗತ್ಯವಿರಲಿ, ಇಲ್ಲದಿರಲಿ ಇಂಥವರು ತಮ್ಮ ದೇವರ ಕೆಲಸ ಮಾಡುವುದನ್ನು ಮಾತ್ರ ಎಂದೂ ನಿಲ್ಲಿಸುವುದಿಲ್ಲ. (ಗೈಡಾ ಸ್ಪಿರಿಚುಯೇಲ್)

ರಾಜಕಾರಿಣಿಗಳೆಂದರೆ ಅಷ್ಟೆಲ್ಲ ಸಿಡಿಮಿಡಿಗೊಳ್ಳುವ ನೀವು ಇಂದಿರಾ ಗಾಂಧಿಯವರಿಗೆ ಶುಭ ಹಾರೈಸಿರುವಿರಲ್ಲ!..

ಹಿಂಸಾಚಾರವನ್ನು ಉಂಟು ಮಾಡಲು, ಗುಲಾಮರುಗಳನ್ನು ಹುಟ್ಟುಹಾಕಲು ಬಯಸುವ ಮನಸ್ಸುಗಳನ್ನು ನಾನು ರಾಜಕೀಯ ಮನಸ್ಸು ಎಂದು ಕರೆಯುತ್ತೇನೆ. ಈ ಅರ್ಥದಲ್ಲಿ ಇಂದಿರಾ ಗಾಂಧಿ ರಾಜಕಾರಿಣಿಯಲ್ಲ. ಇಂದು ಆಕೆಯ ಸ್ವಭಾವಕ್ಕೆ ವಿರುದ್ಧವಾದ ಗುಣಗಳನ್ನೆಲ್ಲ ಆಕೆಗೆ ಆರೋಪಿಸಿ ಅಪಪ್ರಚಾರ ಮಾಡಲಾಗುತ್ತಿದೆ. ಇಂದಿರಾ ಗಾಂಧಿ ನಿಜಕ್ಕೂ ರಾಜಕಾರಿಣಿಯಾಗಿದ್ದರೆ ಅಥವ ಕೇವಲ ರಾಜಕಾರಿಣಿಯಾಗಿದ್ದರೆ ಹೀಗೆ ಭಾರತೀಯ ಮನಸ್ಸು, ನಂಬಿಕೆಗಳಿಗೆ ವಿರುದ್ಧವಾಗಿ ಎಂದೂ ನಡೆದುಕೊಳ್ಳುತ್ತಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ನಾಯಕನೂ ಜನರ ನಂಬಿಕೆಗಳಿಗೆ ವಿರುದ್ಧವಾಗಿ  ನಡೆಯಲು ಬಯಸುವುದಿಲ್ಲ, ಬದಲಿಗೆ ನಾಯಕನಾದವನು ತನ್ನ ಹಿಂಬಾಲಕರು ನಂಬಿರುವ ನಂಬಿಕೆಗಳನ್ನು ಹಿಂಬಾಲಿಸುತ್ತಾನೆ. ಈ ವ್ಯವಸ್ಥೆಯಲ್ಲಿ ಕ್ರಾಂತಿಕಾರಕವಾಗಿ ಯೋಚಿಸಿ ಜನರನ್ನು ಕೆರಳಿಸುವವನು ಅಪಾರವಾದ ಬೆಲೆ ತೆರಬೇಕಾಗುತ್ತದೆ. ಹಾಗಾಗಿ ಬದಲಾವಣೆಯ ಮಾತುಗಳನ್ನಾಡುವ ರಾಜಕಾರಿಣಿಗಳು ನಿಜವಾದ ಬದಲಾವಣೆ ತರಲು ತಲ್ಲಣಿಸುತ್ತಾರೆ. ನಾನು ಆಕೆಯನ್ನು ಹರಸುವುದಕ್ಕೆ ಕೆಲವು ಕಾರಣಗಳಿವೆ.

ಮೊದಲನೆಯದಾಗಿ: ’ಆಕೆ ಬರಿಮಾತಿನಿಂದ ಆಗದು, ಏನನ್ನಾದರೂ ಮಾಡಿಯೇ ತೀರಬೇಕು’ ಎಂದು ಸಂಕಲ್ಪಿಸಿದವಳು. ಆಕೆಗೆ ನಿಜವಾಗಿಯೂ ಬಡವರ ಬಗ್ಗೆ ಕಾಳಜಿ ಇತ್ತು. ಹಾಗಾಗಿ ದೇಶದ ಎಲ್ಲ ಶ್ರೀಮಂತರನ್ನೂ ಎದುರು ಹಾಕಿಕೊಂಡಳು. ಬಡತನ ನಿರ್ಮೂಲನೆಗೆ ಯಾವ ಯೋಜನೆಯನ್ನು ಕೈಗೊಂಡರೂ ಅದೆಲ್ಲ ಕ್ರಮೇಣ ಬಡಜನರ ನಂಬಿಕೆಗಳಿಗೆ ಹಾನಿಕಾರಕವಾಗಿ ಪರಿಣಮಿಸುತ್ತಿತ್ತು. ಹಾಗಾಗಿ ಆಕೆ ಎಲ್ಲ ಬಡವರ ವಿರೋಧವನ್ನೂ ಕಟ್ಟಿಕೊಂಡಳು. ಉದಾಹರಣೆಗೆ, ಆಕೆ ಜನನ ನಿಯಂತ್ರಣವನ್ನು ಕಡ್ಡಾಯಗೊಳಿಸಿದ್ದು ಯಾವ ಭಾರತೀಯ ಮನಸ್ಸಿಗೂ ಸರಿದೋರಲಿಲ್ಲ. ಈಗ ತುರ್ತು ಪರಿಸ್ಥಿತಿಯ ತರುವಾಯ ಅಧಿಕಾರಕ್ಕೆ ಬಂದಿರುವ ಮೊರಾರ್ಜಿ ದೇಸಾಯಿ ಜನನ ನಿಯಂತ್ರಣ ಕಾಯಿದೆಯನ್ನೇ ಕಿತ್ತುಹಾಕಿದ್ದಾರೆ. ನಮ್ಮ ದೇಶದಲ್ಲಿ ಈಗಾಗಲೇ ಶೇ.೭೦ಕ್ಕೂ ಅಧಿಕ ಜನಸಂಖ್ಯೆ ಸಾಧಾರಣ ಜೀವನ ಮಟ್ಟಕ್ಕಿಂತ ಕೆಳ ಹಂತದಲ್ಲಿ ಜೀವಿಸುತ್ತಿದೆ. ಈ ವ್ಯವಸ್ಥೆ ಹೀಗೇ ಮುಂದುವರೆದರೆ ಈ ಶತಮಾನದ ಅಂತ್ಯದ ವೇಳೆಗೆ ಬಡತನದ ರೇಖೆ ಶೇ.೭೦ನ್ನು ತಲುಪಲಿದೆ. ಯಾರು ಸತ್ತರೇನಂತೆ ನಮಗೆ ನಮ್ಮ ಅಧಿಕಾರ ಉಳಿಯುವುದು ಮುಖ್ಯ ಎಂದು ರಾಜಕಾರಿಣಿಗಳು ಯೋಚಿಸುತ್ತಾರೆ. ಇಂದಿರಾ ಗಾಂಧಿಯಾದರೂ ಅಂಥವರ ಪೈಕಿಯಲ್ಲ.

ಎರಡನೆಯದಾಗಿ: ಆಕೆ ಕೈಗೊಳ್ಳುತ್ತಿರುವ ಒಂದೊಂದು ಕಾರ್ಯಕ್ರಮವೂ ಯಶಸ್ವಿಯಾಗಿ ನೆರವೇರಿದೆ. ರಾಜಕಾರಿಣಿಯಾದವನಿಗೆ ತೋರಿಕೆ ಆಶ್ವಾಸನೆಗಳು ಮುಖ್ಯವಾಗಬೇಕೇ ವಿನಃ ಗೆಲುವು ಎಂದೂ ಸಿದ್ಧಿಸಬಾರದು, ಅದನ್ನು ಯಾವ ರಾಜಕಾರಿಣಿಯೂ ಸಹಿಸುವುದಿಲ್ಲ. ಒಂದು ವೇಳೆ ಆಕೆ ಸೋತರೆ ಬೇರೆಯವರಿಗೂ ಅವಕಾಶ ಸಿಗುತ್ತದೆ. ಆದರೆ ಆಕೆ ಒಂದೇ ಸಮನೆ ಗೆಲ್ಲುತ್ತಿರುವುದರಿಂದ ಇಂದು ಆಕೆಯ ರಾಜಕೀಯ ಶತ್ರುಗಳೆಲ್ಲ ಒಂದಾಗಿದ್ದಾರೆ. ಯಾರಿಗೂ ಸೈದ್ಧಾಂತಿಕ ಬದ್ಧತೆ ಮುಖ್ಯ ಅನ್ನಿಸುತ್ತಿಲ್ಲ. ಗಾಂಧೀವಾದಿಯಾದ ಮೊರಾರ್ಜಿ ದೇಸಾಯಿ ಇಂದು ಗಾಂಧಿಯನ್ನು ಕೊಂದವರ ಪಕ್ಷದ ಬೆಂಬಲದಿಂದ ಅಧಿಕಾರವನ್ನು ಪಡೆದಿದ್ದಾರೆ. ಸಿದ್ಧಾಂತಗಳು ಬಿಡುವಿನ ವೇಳೆಯಲ್ಲಿ ಮನರಂಜನೆಗೆ ಉಪಯೋಗಿಸಲಾಗುವ ಆಟಿಕೆಗಳಾಗಿಬಿಟ್ಟಿವೆ. ಅಧಿಕಾರವನ್ನು ಸ್ವಾಧೀನಪಡಿಸಿಕೊಳ್ಳುವುದು ಜೀವನ್ಮರಣದ ಪ್ರಶ್ನೆಯಾಗಿರುವಾಗ ಸಿದ್ಧಾಂತಗಳನ್ನು ಯಾರು ಲೆಕ್ಕಿಸುತ್ತಾರೆ! ಇಂದು ದೇಶದ ಎಲ್ಲ ವಿಭಿನ್ನ, ವೈರುದ್ಧ್ಯಕರ ಸಿದ್ಧಾಂತಗಳೂ ಇಂದಿರಾ ವಿರುದ್ಧ ಒಂದಾಗಿ ದನಿಯೆತ್ತಿವೆ.

ಮೂರನೆಯದಾಗಿ: ನಾನು ಕಂಡಂತೆ ಭಾರತೀಯ ನೌಕರ ಶಾಹಿಯು ಜಗತ್ತಿನಲ್ಲೇ ಅತ್ಯಂತ ಕಳಪೆ ದರ್ಜೆಯದ್ದಾಗಿದೆ. ವರ್ಷಗಳು ಕಳೆದರೂ ಇಲ್ಲಿ ಯಾವ ಫೈಲೂ ಮುಂದಕ್ಕೆ ಹೋಗುವುದಿಲ್ಲ, ಯಾವ ಅಭಿವೃದ್ಧಿ ಕೆಲಸಗಳೂ ಸರಿಯಾದ ಸಮಯಕ್ಕೆ ಆಗುವುದಿಲ್ಲ. ಏನನ್ನಾದರೂ ಮಾಡಬೇಕೆಂದು ಹೋದರೆ ಅದಕ್ಕೂ ಇವರು ಅವಕಾಶ ನೀಡುವುದಿಲ್ಲ. ಇಂದಿರಾಗಾಂಧಿಯಾದರೂ ಈ ನೌಕರ ಶಾಹಿಗೆ ಬಿಸಿ ಮುಟ್ಟಿಸಿದಳು. ಹಾಗಾಗಿ ಇವರು ಆಕೆಯ ಮೇಲೆ ಸೇಡು ತೀರಿಸಿಕೊಂಡರು. ತಪ್ಪು ಅಂಕಿ ಅಂಶಗಳನ್ನು ತೋರಿಸಿ ಚುನಾವಣೆಗಳನ್ನು ಧಾರಾಳವಾಗಿ ನಡೆಸಬಹುದು ಎಂದು ಸಲಹೆ ನೀಡಿದರು. ಅವರ ದಾಖಲೆಗಳನ್ನೇ ನಂಬಿದ್ದ ಆಕೆಯನ್ನು ದಾರಿ ತಪ್ಪಿಸಿದರು. ಈಗ ಮೊರಾರ್ಜಿ ದೇಸಾಯಿ ಅಧಿಕಾರಕ್ಕೆ ಬಂದಿರುವುದರಿಂದ ಎಲ್ಲ ನೌಕರ ಶಾಹಿಗೂ ಆನಂದವಾಗಿದೆ. ಸ್ವತಃ ಮೊರಾರ್ಜಿ ದೇಸಾಯಿ ನೌಕರ ಶಾಹಿ ಹಿನ್ನೆಲೆಯಿಂದ ಬಂದವರು, ಡೆಪ್ಯುಟಿ ಕಲೆಕ್ಟರ್ ಆಗಿದ್ದವರು. ಹಾಗಾಗಿ ನೌಕರ ಶಾಹಿ ಹೇಗೆ ಕೆಲಸ ಮಾಡುತ್ತದೆ ಎಂದು ಚೆನ್ನಾಗಿಯೇ ತಿಳಿದಿರುವ ಮೊರಾರ್ಜಿ ಅವರ ವಿಷಯದಲ್ಲಿ ಎಲ್ಲೂ ಹಸ್ತಕ್ಷೇಪ ಮಾಡುತ್ತಿಲ್ಲ. ಇಂಥವರನ್ನು ಎದುರು ಹಾಕಿಕೊಳ್ಳಬಾರದು ಎಂದು ಆತ ಚೆನ್ನಾಗಿ ಬಲ್ಲ.

ನಾಲ್ಕನೆಯದಾಗಿ: ಆಕೆ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದು. ಆಕೆ ಅಪ್ರಾಮಾಣಿಕಳಾಗಿದ್ದರೆ ತುರ್ತು ಪರಿಸ್ಥಿತಿಯನ್ನು ಘೋಷಿಸದೆಯೇ ತನ್ನ ಉದ್ದೇಶಗಳನ್ನೆಲ್ಲ ನೆರವೇರಿಸಿಕೊಳ್ಳುತ್ತಿದ್ದಳು. ಈಗ ಮೊರಾರ್ಜಿ ದೇಸಾಯಿ ಅದನ್ನೇ ಅಲ್ಲವೆ ಮಾಡುತ್ತಿರುವುದು? ರಾಜಕಾರಿಣಿಗಳು ಎಂದೂ ನೇರವಾದ ಹಾದಿಯಲ್ಲಿ ನಡೆಯುವವರಲ್ಲ. ಬಿ.ಬಿ.ಸಿ.ಯವರು ನಮ್ಮ ಆಶ್ರಮದ ಕುರಿತು ಸಾಕ್ಷ್ಯಚಿತ್ರವನ್ನು ತೆಗೆಯಬೇಕೆಂದು ಮೊರಾರ್ಜಿಯನ್ನು ಕೇಳಿದಾಗ, ’ನಮ್ಮ ರಕ್ಷಣಾ ಇಲಾಖೆಗೆ ತೊಂದರೆ ಆಗದಿದ್ದಲ್ಲಿ ಧಾರಾಳವಾಗಿ ತೆಗೆಯಿರಿ’ ಎಂದು ಹೇಳಿದರಂತೆ. ನನ್ನ ಸನ್ಯಾಸಿಗಳಿಗೂ ಭಾರತದ ರಕ್ಷಣಾ ಇಲಾಖೆಗೂ ಎತ್ತಣಿಂದೆತ್ತ ಸಂಬಂಧ? ಹಾಗೊಂದು ವೇಳೆ ರಕ್ಷಣಾ ಇಲಾಖೆಗೆ ತೊಂದರೆ ಇದ್ದು, ಮೊರಾರ್ಜಿಯೂ ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ ’ನಿಮ್ಮ ಸಾಕ್ಷ್ಯಚಿತ್ರ ನಮ್ಮ ಸೆನ್ಸಾರ್ ಮಂಡಲಿಯ ಅನುಮತಿಯನ್ನು ಪಡೆಯತಕ್ಕದ್ದು’ ಎಂದು ಸೂಚಿಸುತ್ತಿದ್ದರೇ ವಿನಃ ಹೀಗೆ ಸುಳ್ಳು ಹೇಳುತ್ತಿರಲಿಲ್ಲ. ಇವರೆಲ್ಲ ಸ್ವಾತಂತ್ರ್ಯದ ಬಗ್ಗೆ ಮಾತನಾಡುವರೇ ವಿನಃ ಆಂತರ್ಯದಲ್ಲಿ ಸ್ವಾತಂತ್ರ್ಯವನ್ನು ಎಂದೂ ಗೌರವಿಸುವುದಿಲ್ಲ. ಇಂದಿರಾ ಗಾಂಧಿಯಾದರೂ ಪ್ರಾಮಾಣಿಕ ಮಹಿಳೆ, ನೇರವಾಗಿಯೇ ತನ್ನ ನಿರಂಕುಶ ಆಡಳಿತವನ್ನು ಘೋಷಿಸಿಕೊಂಡಳು. ದೇಶವನ್ನು ಸರಿದಾರಿಗೆ ತರಲು ತನ್ನ ಅಧಿಕಾರವನ್ನೂ ಗಂಡಾಂತರಕ್ಕೊಡ್ಡಿದಳು. ತುರ್ತು ಪರಿಸ್ಥಿತಿಯ ವಿರುದ್ಧ ಮೊದಲು ದನಿ ಎತ್ತಿದವರು ಮಾಧ್ಯಮದವರು, ಯಾವ ರಾಜಕಾರಿಣಿಯೂ ಪತ್ರಕರ್ತರನ್ನು ಎದುರು ಹಾಕಿಕೊಳ್ಳಲು ಇಷ್ಟ ಪಡುವುದಿಲ್ಲ. ಇಂದಿರಾ ಗಾಂಧಿಯ ಅಧಃಪತನಕ್ಕೆ ಭಾರತೀಯ ಪತ್ರಕರ್ತರೇ ಮೂಲ ಕಾರಣ ಎಂದು ನನ್ನ ಅಭಿಪ್ರಾಯ. ’ಪತ್ರಿಕಾ ಸ್ವಾತಂತ್ರ್ಯ’ದ ಹೆಸರಿನಲ್ಲಿ ಕಾಡು ಹರಟೆಗಳನ್ನು, ಸುಳ್ಳು ವದಂತಿಗಳನ್ನು ಸುದ್ದಿಗಳೆಂದು  ಪ್ರಚಾರ ಮಾಡಲು ಇವರಿಗೆ ಅಡಚಣೆಯಾಯಿತು. ಹಾಗಾಗಿ ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ತೆಗೆದುಕೊಂಡೊಡನೆಯೇ ಎಲ್ಲ ಭಾರತೀಯ ಪತ್ರಕರ್ತರೂ ಸೇರಿ ಇಂದಿರಾ ಗಾಂಧಿಯ ಮೇಲೆ ಸೇಡು ತೀರಿಸಿಕೊಂಡರು. ಮನುಷ್ಯರ ಮನಸ್ಸು ಕೆಲಸ ಮಾಡುವುದೇ ಹೀಗೆ. ಇದು ಎಲ್ಲ ಚಾಣಾಕ್ಷ ರಾಜಕಾರಿಣಿಗಳಿಗೆ ತಿಳಿದಿರುತ್ತದೆ. 

ಐದನೆಯದಾಗಿ: ತನ್ನ ಮಗ ಸಂಜಯ್ ಗಾಂಧಿಯನ್ನು ರಾಜಕೀಯ ಪ್ರವೇಶ ಮಾಡಿಸಿದ್ದು. ಒಬ್ಬ ಕುಟಿಲ ಬುದ್ಧಿಯ ರಾಜಕಾರಿಣಿ ಹೀಗೆಲ್ಲ ಬಹಿರಂಗವಾಗಿ ತನ್ನ ಮಗನೇ ತನ್ನ ಉತ್ತರಾಧಿಕಾರಿ ಎಂದು ಘೋಷಿಸದೇ ಹಿಂಬಾಗಿಲಿನಿಂದ ಅವನನ್ನು ಗದ್ದುಗೆಗೆ ತರುತ್ತಾನೆ. ಅಷ್ಟಕ್ಕೂ ಇಂದಿರಾಳ ಈ ನಡೆಯಲ್ಲಿ ನನಗೆ ಯಾವ ತಪ್ಪೂ ಕಾಣಿಸುವುದಿಲ್ಲ. ಒಬ್ಬ ಪ್ರಧಾನ ಮಂತ್ರಿಯ ಮಗನಿಗೂ ಈ ದೇಶದ ಇತರ ಪ್ರಜೆಯಂತೆಯೇ ರಾಜಕೀಯದಲ್ಲಿ ಪ್ರವೇಶ ಮಾಡುವ ಸಮಾನ ಅಧಿಕಾರ ಇದೆ. ಅಲ್ಲದೆ ಸಂಜಯ್ ಗಾಂಧಿ ಎಲ್ಲ ದೃಷ್ಟಿಯಿಂದಲೂ ಒಬ್ಬ ಸಮರ್ಥ ನಾಯಕ ಕೂಡ. ಹಾಗೆ ನೋಡಿದರೆ ಇಂದಿರಾಳ ತಂದೆಯೇ ತನ್ನ ಮಗಳನ್ನು ಹೀಗೆ ಬಹಿರಂಗವಾಗಿ ರಾಜಕೀಯಕ್ಕೆ ಸೇರಿಸಿಕೊಳ್ಳಲಿಲ್ಲ. ಅವರು ಪ್ರಧಾನಿಯಾಗಿದ್ದಾಗ ಪತ್ರಕರ್ತರು ಒಂದೇ ಸಮನೆ ’ನಿಮ್ಮ ಉತ್ತರಾಧಿಕಾರಿ ಯಾರು?’ ಎಂದು ಅವರನ್ನು ಕೇಳುತ್ತಿದ್ದರು. ಬದುಕಿರುವ ತನಕವೂ ಅವರು ಒಮ್ಮೆಯೂ ತನ್ನ ಉತ್ತರಾಧಿಕಾರಿ ಯಾರು ಎಂದು ಸೂಚ್ಯವಾಗಿಯೂ ತಿಳಿಸಲಿಲ್ಲ. ಹೇಳಿಬಿಟ್ಟರೆ ತನ್ನ ಲೆಕ್ಕಾಚಾರವೆಲ್ಲ ತಲೆಕೆಳಗಾಗುವುದೆಂದು ಅವರಿಗೆ ಗೊತ್ತಿತ್ತು. ಈ ವಿಷಯದಲ್ಲಿ ಅವರು ಇಂದಿರಾ ಗಾಂಧಿಗಿಂತ ಹೆಚ್ಚು ಚಾಣಾಕ್ಷ ರಾಜಕಾರಿಣಿಯಾಗಿದ್ದರು. ರಾಜಕೀಯದ ಒಳಸುಳಿಗಳನ್ನೆಲ್ಲ ಬಲ್ಲವರಾಗಿದ್ದರು. ತಾನೇ ಸ್ವತಃ ಹಿಂಬಾಗಿಲಿನಿಂದ ರಾಜಕೀಯವನ್ನು ಪ್ರವೇಶಿಸಿದ ಇಂದಿರಾ ಗಾಂಧಿ ಇಂದು ತನ್ನ ಮಗನನ್ನು ಬಹಿರಂಗವಾಗಿ ಪಕ್ಷದ ನಾಯಕನನ್ನಾಗಿ ಮಾಡುವ ಮೂಲಕ ತಾನು ಒಬ್ಬ ಒಳ್ಳೆಯ ತಾಯಿ, ಕುತಂತ್ರ ರಾಜಕಾರಿಣಿಯಲ್ಲ ಎಂದು ರುಜುವಾತು ಪಡಿಸಿದ್ದಾಳೆ. ಈ ಬೆಳವಣಿಗೆಗಳು ಕೂಡ ಆಕೆಯ ಅಧಃಪತನಕ್ಕೆ ಬಹುಮುಖ್ಯ ಕಾರಣವಾಗಿದೆ. ಅಲ್ಲದೆ ಸಂಜಯ್ ಗಾಂಧಿ ಇಂದಿರಾಗಿಂತ ಹೆಚ್ಚು ಅಪಾಯಕಾರಿ. ಇಂದಲ್ಲ ನಾಳೆ ಆತ ಎಲ್ಲರನ್ನೂ ದಮನಗೈದು ನಿಸ್ಸಂಶಯವಾಗಿ ಪ್ರಧಾನಿಯ ಕುರ್ಚಿಯನ್ನೇರುತ್ತಾನೆ, ಆ ಸಾಮರ್ಥ್ಯ ಅವನಿಗಿದೆ. ಈ ವಿಷಯದಲ್ಲಿ ಮೊರಾರ್ಜಿ ದೇಸಾಯಿ ಮಹಾ ಕುತಂತ್ರಿ, ಅವರಿಗೂ ಒಬ್ಬ ಮಗನಿದ್ದಾನೆ, ಆದರೆ ಅವನು ಯಾವಾಗಲೂ ತೆರೆಯ ಹಿಂದೆ ನಿಂತೇ ತನ್ನ ಕೆಲಸ ಕಾರ್ಯಗಳನ್ನು ನೆರವೇರಿಸಿಕೊಳ್ಳುತ್ತಾನೆ. ಇನ್ನು ಕೆಲವು ರಾಜಕಾರಿಣಿಗಳ ಅಧಿಕಾರ ಲಾಲಸೆ ಯಾರ ಊಹೆಗೂ ನಿಲುಕುವಂಥದಲ್ಲ. ಹರಿಯಾಣದ ಮುಖ್ಯಮಂತ್ರಿ ದೇವೀಲಾಲ್ ಅಧಿಕಾರವನ್ನು ಉಳಿಸಿಕೊಳ್ಳಲು ತನ್ನ ಮಗನಿಗೇ ದ್ರೋಹ ಮಾಡಿದ. ಇಂದಿರಾ ಗಾಂಧಿಯಾದರೂ ಮಗನಿಗಾಗಿ ತನ್ನ ರಾಜಕೀಯ ಭವಿಷ್ಯವನ್ನೂ ಹಾಳುಮಾಡಿಕೊಂಡಿದ್ದಾಳೆ.

ಆರನೆಯದಾಗಿ: ಯಾವ ರಾಜಕಾರಿಣಿಯೂ ಮಾಡದ ಒಂದು ದೊಡ್ಡ ಅಚಾತುರ್ಯವನ್ನು ಆಕೆ ಮಾಡಿಕೊಂಡಿದ್ದಾಳೆ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಎಲ್ಲ ರಾಜಕಾರಿಣಿಗಳನ್ನೂ ಜೈಲಿಗೆ ದೂಡಿದಳು. ರಾಜಕೀಯ ಪರಿಣತನಲ್ಲದ ನನ್ನಂಥವನಿಗೂ ಇದು ತೀರಾ ಮೂರ್ಖತನದ ನಿರ್ಧಾರ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ನಮ್ಮ ಶತ್ರುಗಳನ್ನೆಲ್ಲ ಒಟ್ಟಿಗೆ ಒಂದೇ ಜೈಲಿನಲ್ಲಿ ಇರಿಸಿದರೆ ಅವರೆಲ್ಲ ನಮ್ಮ ವಿರುದ್ಧವೇ ಒಂದಾಗಿಬಿಡುವುದಿಲ್ಲವೇ? ಆಕೆ ನಮ್ಮ ದೇಶದ ಚಾಣಕ್ಯ, ಇಟಲಿಯ ಮೆಖಿಯಾವೆಲ್ಲಿ ಇಂಥವರನ್ನು ಸರಿಯಾಗಿ ಓದಿಕೊಂಡಿಲ್ಲ ಎನಿಸುತ್ತದೆ. ರಾಜಕೀಯ ಗೊತ್ತಿರುವ ಯಾರೂ ಇಂಥ ಕೆಲಸ ಮಾಡುವುದಿಲ್ಲ. ಅರ್ಧ ಶತ್ರುಗಳನ್ನು ಜೈಲಿನ ಹೊರಗೂ, ಇನ್ನರ್ಧ ಜನರನ್ನು ಜೈಲಿನ ಹೊರಗೂ ಇರಿಸಿದ್ದರೆ ಶತ್ರುಗಳು ಪರಸ್ಪರ ಕಿತ್ತಾಡಿಕೊಂಡಾದರೂ ಇರುತ್ತಿದ್ದರು. ಹೀಗೆ ಕಿತ್ತಾಟ ಹುಟ್ಟಿಸಿದಾಗಲೇ ಆಳ್ವಿಕೆ ಮಾಡಲಾಗುವುದು. ಈಗ ಪ್ರತಿಯೊಬ್ಬರಿಗೂ ಇಂದಿರಾ ಒಬ್ಬಳೇ ಏಕಮಾತ್ರ ಶತ್ರುವಾಗಿ ಪರಿಣಮಿಸಿದ್ದಾಳೆ. ಶತ್ರುಗಳಲ್ಲಿ ಒಡಕು ಮೂಡಿಸುವ ಮೂಲಕವೇ ಕಾಂಗ್ರೇಸ್ ಮೂವತ್ತು ವರ್ಷಗಳ ಕಾಲ ಆಳ್ವಿಕೆ ಮಾಡಿದೆ. ನಾವೆಲ್ಲ ಕೈಜೋಡಿಸಿದರೆ ಇಂದಿರಾ ಕಥೆ ಮುಗಿದಂತೆಯೇ ಎಂಬ ಹೊಸ ಪಾಠವನ್ನು ಶತ್ರುಗಳಿಗೆಲ್ಲ ಮೂವತ್ತು ವರ್ಷಗಳ ನಂತರ ಮೊದಲಬಾರಿಗೆ ಇಂದಿರಾ ಗಾಂಧಿ ಕಲಿಸಿಕೊಡುತ್ತಿದ್ದಾಳೆ. ಇವೆಲ್ಲ ನುರಿತ ರಾಜಕಾರಿಣಿಗಳು ಎಂದೂ ಮಾಡಬಾರದ ತಪ್ಪುಗಳಾಗಿವೆ.

ಏಳನೆಯದಾಗಿ: ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ತೆಗೆದುಕೊಂಡ ಮರುಗಳಿಗೆಯೇ, ದೇಶದ ಎಲ್ಲ ಬಡವರ, ಎಲ್ಲ ಶ್ರೀಮಂತರ ಹಾಗು ಎಲ್ಲ ಪತ್ರಕರ್ತರ ವಿಶ್ವಾಸವನ್ನು ಕಳೆದುಕೊಂಡ ಮರುಗಳಿಗೆಯೇ, ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ್ದಾರೆ. ಆಕೆಯ ಈ ನಡೆಯನ್ನು ಅರ್ಥಮಾಡಿಕೊಳ್ಳಲು ನನಗೂ ಸಾಧ್ಯವಾಗುತ್ತಿಲ್ಲ. ಚುನಾವಣೆ ಘೋಷಿಸುವ ಮುನ್ನ ಆಕೆ ನನ್ನ ಸಲಹೆಯನ್ನಾದರೂ ಕೇಳಬಹುದಿತ್ತು ’ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ತೆಗೆದುಕೊಂಡ ಮೇಲೆ ಒಂದು ವರ್ಷಗಳ ಕಾಲ ಸುಮ್ಮನಿದ್ದುಬಿಡಿ’ ಎಂದು ಸಲಹೆ ನೀಡಿರುತ್ತಿದ್ದೆ. ಒಂದು ವರ್ಷದೊಳಗೇ ತುರ್ತು ಪರಿಸ್ಥಿತಿಯಿಂದ ಇಂದಿರಾಗೆ ಹತ್ತಿಕೊಂಡಿದ್ದ ಕಳಂಕವೆಲ್ಲ ತೊಡೆದು ಹೋಗುತ್ತಿತ್ತು, ಅಷ್ಟು ಹೊತ್ತಿಗೆ ಪತ್ರಕರ್ತರ ಸಿಟ್ಟೆಲ್ಲ ತಣ್ಣಗಾಗುತ್ತಿತ್ತು ಮತ್ತು ಈಕೆಯ ರಾಜಕೀಯ ಶತ್ರುಗಳೆಲ್ಲ ಮತ್ತೆ ಪರಸ್ಪರ ಕಿತ್ತಾಡುವ ತಮ್ಮ ಹಳೆಯ ಚಾಳಿಗಳಿಗೆ ಅಂಟಿಕೊಳ್ಳುತ್ತಿದ್ದರು. ಜನಜಂಗುಳಿಯ ನೆನಪಿನ ಶಕ್ತಿ ತುಂಬ ದುರ್ಬಲವಾದುದು. ಹೀಗೆ ತಕ್ಷಣವೇ ಸಾರ್ವಜನಿಕ ಚುನಾವಣೆಯನ್ನು ಘೋಷಿಸುವುದು ನಿಜಕ್ಕೂ ಅನರ್ಥಕಾರಕ. ಅದಕ್ಕೇ ಕಳೆದ ಚುನಾವಣೆಯಲ್ಲಿ ಆಕೆ ಹೀನಾಯವಾಗಿ ಸೋತದ್ದು. ಈ ಎಲ್ಲ ಅಚಾತುರ್ಯಗಳ ಕಾರಣದಿಂದ ಭಾರತೀಯ ರಾಜಕೀಯ ಸಂದರ್ಭದಲ್ಲಿ ಆಕೆ ಅಷ್ಟು ನುರಿತ ರಾಜಕಾರಿಣಿಯಲ್ಲ ಎಂದು ಸಾಬೀತಾಗಿದೆ. ಅದಕ್ಕೇ ಆಕೆಗೆ ನಾನು ಶುಭ ಹಾರೈಸಿದ್ದು ಇನ್ನು ಮುಂದೆಯೂ ಶುಭ ಹಾರೈಸುತ್ತಲೇ ಇರುತ್ತೇನೆ (ಯೂನಿಯೋ ಮಿಸ್ಟಿಕಾ).
*    *    *    *
ಒಮ್ಮೆ ಇಂದಿರಾ ಗಾಂಧಿಯವರಿಗೆ ಒಂದು ವಿಲಕ್ಷಣ ಸಲಹೆಯನ್ನು ನೀಡಿದ್ದೆ. ಇಂದಿರಾ ಗಾಂಧಿ ತಂದೆಯೊಂದಿಗೇ ಬೆಳೆದವಳು, ಆಕೆ ಹುಟ್ಟು ರಾಜಕಾರಿಣಿ. ತಂದೆ ಇದ್ದಷ್ಟೂ ಕಾಲ ಆಕೆ ಕ್ರಿಯಾಶೀಲ ರಾಜಕಾರಣದಲ್ಲಿ ತೊಡಗದೆ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಪ್ರತಿಯೊಬ್ಬ ರಾಜಕಾರಿಣಿಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಳು. ಅವರ ಭ್ರಷ್ಟಾಚಾರ, ಕಪ್ಪುಹಣ, ಅವರ ದೌರ್ಬಲ್ಯ ಇತ್ಯಾದಿ ಎಲ್ಲ ಮಾಹಿತಿಯನ್ನೂ ಗುಪ್ತವಾಗಿ ಸಂಗ್ರಹಿಸುತ್ತಿದ್ದಳು. ಆಕೆ ಸಂಗ್ರಹಿಸಿದ್ದ ಆ ಫೈಲುಗಳನ್ನು ಒಮ್ಮೆ ನನಗೂ ತೋರಿಸಿದ್ದಳು. ನೆಹರೂ ಸತ್ತ ಮೇಲೆ ಎಲ್ಲ ರಾಜಕಾರಿಣಿಗಳೂ ಆತಂಕಿತರಾದರು. ಏಕೆಂದರೆ ಅವರ ಎಲ್ಲ ಗುಪ್ತಮಾಹಿತಿಗಳೂ ಸಾಕ್ಷ್ಯಾಧಾರಗಳ ಸಮೇತ ಇಂದಿರಾ ಬಳಿ ಇದ್ದವು. ಸಾಲದ್ದಕ್ಕೆ ಆಕೆ ಬೇರೆಯವರಂತೆ ಭ್ರಷ್ಟಳಾಗಿರಲಿಲ್ಲ. ಅದೊಂದು ಗುಣವನ್ನು ಆಕೆ ತನ್ನ ತಂದೆಯಿಂದ ಕಲಿತಿದ್ದಳು. ಜೊತೆಗೆ ನಾವು ಶುದ್ಧಹಸ್ತರಾಗಿದ್ದರೆ ನಮ್ಮನ್ನು ಯಾರೂ ಪ್ರಶ್ನಿಸಲಾರರು ಎಂಬುದನ್ನೂ ಕಲಿತಿದ್ದಳು. ತುರ್ತು ಪರಿಸ್ಥಿತಿಗೆ ಮುನ್ನ ಒಮ್ಮೆ ನಾನು ಇಂದಿರಾಗೆ ಒಂದು ವಿಲಕ್ಷಣವಾದ ಸಲಹೆ ನೀಡಿದ್ದೆ ’ಭಾರತ ಎಂದಾದರೂ ಜಗತ್ತಿನ ಶಕ್ತಿಶಾಲೀ ರಾಷ್ಟ್ರ ಎನಿಸಿಕೊಳ್ಳಲು ಸಾಧ್ಯವೇ? ರಷ್ಯಾ ಅಮೆರಿಕಾಗಳ ಮಟ್ಟವನ್ನು ತಲುಪಲು ನಮಗೆ ಇನ್ನೂ ಮುನ್ನೂರು ವರ್ಷಗಳಾದರೂ ಬೇಕು. ಈ ಮುನ್ನೂರು ವರ್ಷಗಳಲ್ಲಿ ಅವರೇನೂ ಸುಮ್ಮನೆ ಕೂತಿರುವುದಿಲ್ಲ. ಆಗ ಅವು ಒಂಬೈನೂರು ವರ್ಷಗಳಷ್ಟು ಮುಂದುವರೆದಿರುತ್ತವೆ’ ಎಂದೆ. ಆಗ ಇಂದಿರಾ ’ನಿಮ್ಮ ಮಾತು ನಿಜ’ ಎಂದಿದ್ದರು ನಿಜವೆಂದು ತಿಳಿದ ಮೇಲೆ ಈ ಅಣುಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಗಳೇಕೆ? ಈ ಪ್ರಯತ್ನಗಳಿಂದ ಇಂದಲ್ಲ ನಾಳೆ ನಾವು ಬೇರೆ ದೇಶಗಳನ್ನು ಮೀರಿಸಬಲ್ಲೆವು ಎಂದಾದರೆ ಗಟ್ಟಿ ಮನಸ್ಸು ಮಾಡಬಹುದು. ಜನ ಹಸಿವು ರೋಗಗಳಿಂದ ಇನ್ನೂ ಕೆಲಕಾಲ ಯಾತನೆ ಪಟ್ಟರೆ ಪಡಲಿ ಎಂದು ನಿರ್ಧರಿಸಬಹುದು. ಹೇಗೂ ಸಾವಿರಾರು ವರ್ಷಗಳಿಂದಲೂ ನಾವು ಯಾತನೆಗೆ ಒಗ್ಗಿಬಿಟ್ಟಿದ್ದೇವೆ. ಆದರೆ ನಮಗೆ ಯಾರೊಂದಿಗೂ ಪೈಪೋಟಿ ಮಾಡುವ ಶಕ್ತಿ ಇಲ್ಲದ ಮೇಲೆ ಭಾರತವನ್ನು ಒಂದು ಅಂತರ ರಾಷ್ಟ್ರೀಯ ದೇಶವೆಂದು ಘೋಷಿಸಬಾರದೇಕೆ? ’ನಮ್ಮ ದೇಶಕ್ಕೆ ಯಾವುದೇ ಗಡಿರೇಖೆಯಿಲ್ಲ, ಇಲ್ಲಿ ಪ್ರವೇಶಿಸಲು ಯಾರ ಅನುಮತಿಯನ್ನೂ ಪಡೆಯಬೇಕಾದ ಅಗತ್ಯವಿಲ್ಲ’ ಎಂದು ವಿಶ್ವಸಮುದಾಯಕ್ಕೆ ಆಹ್ವಾನ ನೀಡಿದರೆ ಏನಾಗುತ್ತದೆ. ನಾವು ಇನ್ನೂ ಹೆಚ್ಚು ಬಡವರಾಗಲಂತೂ ಸಾಧ್ಯವಿಲ್ಲ. ಒಂದು ದೇಶ ತಾನು ವಿಶ್ವಸಮುದಾಯದಿಂದ ಪ್ರತ್ಯೇಕವಲ್ಲ ಎಂದು ಘೋಷಿಸಿಕೊಂಡರೆ ಅದು ನಿಜಕ್ಕೂ ಒಂದು ಚರಿತ್ರಾರ್ಹ ಘಟನೆಯಾಗುತ್ತದೆ. ಈಗ ನಮ್ಮ ಮೇಲೆ ಯಾರೇ ದಾಳಿಮಾಡಿದರೂ ಅದನ್ನು ತಡೆಯುವ ಶಕ್ತಿ ನಮಗಿಲ್ಲ. ಅಂದ ಮೇಲೆ ಮಿಲಿಟರಿ ವ್ಯವಸ್ಥೆಯನ್ನೇ ವಿಸರ್ಜಿಸಿಬಿಡಬಾರದೇ? ನಮ್ಮ ಸೈನಿಕರನ್ನು ಹೊಲ ಗದ್ದೆಗಳಿಗೆ, ಕಾರ್ಖಾನೆಗಳಿಗೆ ದುಡಿಯಲು ಕಳುಹಿಸೋಣಎಂದೆ. ಆಗ ಆಕೆ ’ಹೀಗೆಲ್ಲ ಮಾಡಿದರೆ ಯಾರಾದರೂ ದಾಳಿ ನಡೆಸಿ ನಾವು ಮತ್ತೆ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದಿಲ್ಲವೇ?’ ಎಂದು ಕೇಳಿದರು. ’ಈಗಲೂ ಯಾರು ಯಾವ ಕ್ಷಣದಲ್ಲಾದರೂ ದಾಳಿ ನಡೆಸಬಹುದಲ್ಲವೇ? ಒಂದು ವೇಳೆ ಆಗ ಯಾರಾದರೂ ನಮ್ಮ ಮೇಲೆ ದಾಳಿ ನಡೆಸಲು ಮುಂದಾದರೆ ಅವರು ಇಡೀ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಏಕೆಂದರೆ ಆಗ ಭಾರತವು ಇಡೀ ವಿಶ್ವಸಮುದಾಯಕ್ಕೆ ಸೇರಿದ ದೇಶವಾಗಿರುತ್ತದೆ. ಇಡೀ ವಿಶ್ವವೇ ನಮ್ಮ ಸ್ನೇಹಿತರಾಗಿರುತ್ತಾರೆ. ಈಗಲಾದರೂ ನಾವು ಯಾರ ದಾಳಿಗೂ ಸುಲಭವಾಗಿ ತುತ್ತಾಗುವ ಪರಿಸ್ಥಿತಿಯಲ್ಲಿದ್ದೇವೆ. ಚೀನಾ ಈಗಾಗಲೇ ನಮ್ಮ ಮೇಲೆ ಆಕ್ರಮಣ ನಡೆಸಿ ಹಿಮಾಲಯದ ತಪ್ಪಲಿನ ಸಾವಿರಾರು ಚದರ ಕಿ.ಮೀ. ಪ್ರದೇಶವನ್ನು ವಶಪಡಿಸಿಕೊಂಡಿತು. ನಿಮ್ಮ ತಂದೆ ಬದುಕಿದ್ದಾಗ ’ಅದೊಂದು ಬಂಜರು ಪ್ರದೇಶ, ನಮಗೆ ಅದರಿಂದ ಉಪಯೋಗವಿಲ್ಲ’ ಎಂದು ಸಂಸತ್‌ನಲ್ಲಿ ಉತ್ತರಿಸಿದ್ದರು. ಅದು ನಿಜಕ್ಕೂ ಬಂಜರು ಪ್ರದೇಶವಾಗಿದ್ದರೆ ಅವರು ದಾಳಿ ನಡೆಸಿದಾಗ ನಾವು ಯುದ್ಧ ಮಾಡಿದ್ದೇಕೆ? ಅವರು ದಾಳಿ ಮಾಡುವ ಸೂಚನೆ ಸಿಗುತ್ತಿದ್ದಂತೆಯೇ ’ಆ ಭೂಮಿಯನ್ನು ನಿಮಗೆ ಉಡುಗೊರೆಯನ್ನಾಗಿ ನೀಡುತ್ತಿದ್ದೇವೆ, ಅದೊಂದು ಬಂಜರು ಭೂಮಿ, ಸಾಧ್ಯವಾದರೆ ಏನಾದರೂ ಬೆಳೆದುಕೊಳ್ಳಿ’ ಎಂದು ಘೋಷಿಸಬಹುದಿತ್ತಲ್ಲ! ಸೋತು ಕಳೆದುಕೊಳ್ಳುವುದಕ್ಕಿಂತ ದಾನ ಮಾಡಿ ಬರಿಗೈಯಾಗುವುದು ಹೆಚ್ಚು ಉದಾತ್ತವಾದುದು. ಸದ್ಯಕ್ಕಂತೂ ನಮ್ಮ ಮಿಲಿಟರಿ ಶಕ್ತಿ ಎಲ್ಲ ದೃಷ್ಟಿಯಿಂದಲೂ ನಮ್ಮ ಪಾಲಿಗೆ ನಿರುಪಯುಕ್ತವಾಗಿದೆ. ಮಹಾಯುದ್ಧದ ಸಮಯದಲ್ಲಿ ಜರ್ಮನಿ ಜಪಾನ್‌ನಂತಹ ದೇಶಗಳ ಮಿಲಿಟರಿ ಶಕ್ತಿಗಳೂ ನಿರುಪಯುಕ್ತವೆಂದು ಸಾಬೀತಾಗಿದೆ. ಹಾಗಾಗಿ ನೀವು ನನ್ನ ಸಲಹೆಯನ್ನು ಪರಿಗಣಿಸಿದರೆ ಜಗತ್ತಿನ ಇತಿಹಾಸದಲ್ಲೇ ನಿಮ್ಮ ಹೆಸರು ಶಾಶ್ವತವಾಗುವುದು. ಮಾತ್ರವಲ್ಲ, ನಿಮ್ಮ ನಿರ್ಧಾರ ಎಲ್ಲ ದೃಷ್ಟಿಯಿಂದಲೂ ತುಂಬ ವಿವೇಕಯುತವಾದುದು ಎನಿಸಿಕೊಳ್ಳುವುದು. ಆಗ ಭಾರತ ಜಗತ್ತಿಗೆ ಗುರುವಿನ ಸ್ಥಾನದಲ್ಲಿದೆ ಎಂದು ಬಾಯಿ ಮಾತಿನಲ್ಲಿ ಹೇಳುವುದನ್ನು ಬಿಟ್ಟು ಕ್ರಿಯೆಯಲ್ಲಿಯೂ ತೋರಿಸಿದಂತಾಗುತ್ತದೆ. ಇಂದು ಅಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಕಾಲ ಪಕ್ವವಾಗಿದೆ. ಈತನಕ ಜಗತ್ತಿನ ಯಾವ ದೇಶವೂ ಈ ಧೈರ್ಯ ಮಾಡಿಲ್ಲ. ಕೂಡಲೇ ಈ ವಿಷಯವನ್ನು ವಿಶ್ವಸಂಸ್ಥೆಯ ಗಮನಕ್ಕೆ ತನ್ನಿ, ಆಗ ವಿಶ್ವಸಂಸ್ಥೆ ತನ್ನ ಎಲ್ಲ ಕಛೇರಿಗಳನ್ನೂ ನಿಸ್ಸಂಶಯವಾಗಿ ತಟಸ್ಥ ದೇಶವಾದ ಭಾರತಕ್ಕೇ ಸ್ಥಳಾಂತರಿಸುತ್ತದೆ. ನಮ್ಮೆಲ್ಲ ಮಿಲಿಟರಿ ಶಕ್ತಿಯೂ ವಿಶ್ವಶಾಂತಿಯ ಸ್ಥಾಪನೆಗೆ ವಿನಿಯೋಗವಾಗಲಿ ಎಂದು ಹೇಳಿ ಇಡೀ ರಕ್ಷಣಾ ಇಲಾಖೆಯನ್ನು ವಿಶ್ವಸಂಸ್ಥೆಯ ಕೈಗೊಪ್ಪಿಸಿ’ ಎಂದೆ.

ಆಕೆ ’ನಿಮ್ಮ ಅಭಿಪ್ರಾಯಗಳು ಸರಿ ಕಂಡರೂ ಎಲ್ಲೋ ಸ್ವಲ್ಪ ಅತಿರೇಕದ್ದು ಎನಿಸುತ್ತದೆ. ಇಂಥದಕ್ಕೆಲ್ಲ ನನಗಂತೂ ಧೈರ್ಯವಿಲ್ಲ. ನಿಮ್ಮಂಥವರಾದರೆ ಸುಲಭವಾಗಿ ಮಾಡಬಲ್ಲಿರಿ. ಈ ರಾಜಕೀಯ ಚದುರಂಗದಾಟದಲ್ಲಿ ಪಾಲ್ಗೊಂಡು ನೀವೇ ಪ್ರಧಾನಿಯ ಕುರ್ಚಿ ಏರಿ. ನಾನು ಎಲ್ಲ ರೀತಿಯ ಬೆಂಬಲ ನೀಡುತ್ತೇನೆ. ನನ್ನಂಥವಳೇನಾದರೂ ಈ ಬಗೆಯ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತಿಳಿದರೆ ಪ್ರತಿಸ್ಪರ್ಧಿಗಳು ಕೂಡಲೆ ನನ್ನ ಕಾಲೆಳೆದು ಕುರ್ಚಿಯನ್ನು ಆಕ್ರಮಿಸುತ್ತಾರೆ’ ಎಂದರು. ಆದರೆ ನನಗೆ ಆ ಚದುರಂಗದಾಟವನ್ನು ಆಡುವ ವ್ಯವಧಾನವಾಗಲಿ, ಆಸಕ್ತಿಯಾಗಲಿ ಇರಲಿಲ್ಲ. ಅಕಸ್ಮಾತ್ತಾಗಿ ನಾನು ಆಕೆಯ ಸ್ಥಾನದಲ್ಲಿ ಇದ್ದಿದ್ದರೆ ನಿಸ್ಸಂಶಯವಾಗಿ ನನ್ನ ಅಭಿಪ್ರಾಯಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದೆ. ಅವಕಾಶವಾದಿಗಳು ನನ್ನನ್ನು ಕುರ್ಚಿಯಿಂದ ಕೆಳಗೆ ಇಳಿಸಿದ್ದರೂ, ನನ್ನ ಪ್ರಯತ್ನ ನಿಷ್ಫಲವಾಗಿದ್ದರೂ ಒಬ್ಬ ವ್ಯಕ್ತಿ ವಿಶ್ವಶಾಂತಿಗಾಗಿ ಇಂಥದೊಂದು ಪ್ರಯತ್ನ ಮಾಡಿದ ಎಂದು ಇತಿಹಾಸದಲ್ಲಿ ದಾಖಲಾಗುತ್ತಿತ್ತು.೨೮

ಆಮೇಲೆ ಇಂದಿರಾಗಾಂಧಿ ನನ್ನನ್ನು ತುಂಬ ಸಲ ಭೇಟಿ ಮಾಡಬೇಕು ಎಂದುಕೊಂಡರೂ ಆಕೆಗೆ ಸಾಧ್ಯವಾಗಲಿಲ್ಲ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಆತನನ್ನು ಭೇಟಿ ಮಾಡದಿರುವುದೇ ಒಳ್ಳೆಯದು ಎಂದು ಆಕೆಯ ಆಪ್ತ ಸಲಹೆಗಾರರು ಸೂಚಿಸಿದರಂತೆ. (ಫ್ರಂ ಮಿಸರಿ ಟು ಎನ್‌ಲೈಟನ್‌ಮೆಂಟ್)


ಮೊರಾರ್ಜಿ ದೇಸಾಯಿ ಸರ್ಕಾರವು ಇಂದಿರಾ ಗಾಂಧಿಯನ್ನು ಸಂಸತ್ತಿನಿಂದ ಉಚ್ಚಾಟನೆ ಮಾಡಿ ಜೈಲಿಗೆ ತಳ್ಳಿದ ಮೇಲೆ ದೇಶದಲ್ಲಿ ಎಲ್ಲೆಡೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ಬೆಳವಣಿಗೆಗಳ ಕುರಿತು ಏನು ಹೇಳುವಿರಿ?

ಇದು ಇಂದಿರಾ ಗಾಂಧಿಗೆ ಸಂದ ಬಹುಮಾನ, ಶಿಕ್ಷೆಯಲ್ಲ ಎನ್ನುತ್ತೇನೆ. ಇದು ಪ್ರತಿಯೊಬ್ಬ ಕ್ರಾಂತಿಕಾರಿಗೂ ಸಲ್ಲುವ ಶಿಕ್ಷೆಯಾಗಿದೆ ಎನ್ನುತ್ತೇನೆ. ಇದರಿಂದ ಮೊರಾರ್ಜಿಯ ನಿಜವಾದ ಬಣ್ಣ ಬಯಲಾದಂತಾಗಿದೆ. ಇಂದಿರಾಳನ್ನು ಜೈಲಿಗೆ ತಳ್ಳಿದ್ದು ಬಡಪಾಯಿ ಮೊರಾರ್ಜಿ ದೇಸಾಯಿಯಲ್ಲ, ಇದರ ಹಿಂದೆ ಹಿಂದೂ ಮೂಲಭೂತವಾದಿಗಳ ಕೈವಾಡವಿದೆ. ಇಂದಿರಾಳನ್ನು ಜೈಲಿಗೆ ತಳ್ಳಿರುವ ಮೊರಾರ್ಜಿ ತಾನೆಷ್ಟು ದುರ್ಬಲ ಎಂದು ಸಾಬೀತುಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧೀ ಕ್ರಮವಾಗಿದೆ. ಜೈಲಿಗೆ ತಳ್ಳಿ ಆಕೆಯನ್ನು ಆರಿಸಿ ಕಳಿಸಿದ ಮತದಾರರಿಗೆ ಅವಮಾನ ಮಾಡಿದ್ದಾರೆ. ಆದರೆ ಮೊರಾರ್ಜಿ ದೇಸಾಯಿ ಹೀಗೆ ಜೈಲಿಗೆ ತಳ್ಳಿ ತನ್ನ ಕಡೆಯ ದಿನಗಳನ್ನು ತಾನೇ ತಂದುಕೊಂಡಿರುವುದು ನನಗೆ ನಿಜಕ್ಕೂ ಸಂತೋಷ ತಂದಿದೆ. ಏಕೆಂದರೆ ಯಾರಿಗಾದರೂ ನಿಜಕ್ಕೂ ಅನ್ಯಾಯವಾದರೆ ಅವರಿಗೆ ಸಮಾಜದಿಂದ ಸುಲಭವಾಗಿ ಅನುಕಂಪ, ಸಹಾನುಭೂತಿಗಳು ಸಿಗುತ್ತವೆ. ಮೊರಾರ್ಜಿ ದೇಸಾಯಿ ಮಾಡಿರುವ ಕೆಲಸದಿಂದ ಇಂದಿರಾಳ ಘನತೆ ಹೆಚ್ಚಾಗಿದೆ. ತುರ್ತು ಪರಿಸ್ಥಿತಿಯ ನಂತರ ಆಕೆ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾಗ ಇಡೀ ದೇಶದಲ್ಲಿ ನಾನೊಬ್ಬನೇ ಆಕೆಗೆ ಬೆಂಬಲ ನೀಡಿದ್ದು. ಈ ದೇಶ ಮೊರಾರ್ಜಿ ದೇಸಾಯಿಯಂತಹ ರೋಗಗ್ರಸ್ಥರ ದುರಾಡಳಿತದಿಂದ ದೂರವಾಗಬೇಕೆಂಬ ಕಾರಣಕ್ಕೆ ಆಕೆಗೆ ಶುಭವಾಗಲೆಂದು ಹಾರೈಸಿದ್ದೆ. ಆದರೆ ನನ್ನ ಶುಭ ಹಾರೈಕೆಯನ್ನು ಸಾರ್ವಜನಿಕವಾಗಿ ಸ್ವೀಕರಿಸುವ ಧೈರ್ಯವನ್ನಾಗಲಿ, ಅದಕ್ಕೆ ಪ್ರತಿಕ್ರಿಯಿಸುವ ಸೌಜನ್ಯವನ್ನಾಗಲಿ ಆಕೆ ತೋರಿಸಲಿಲ್ಲ. ತನ್ನ ಕಾರ್ಯದರ್ಶಿಯೊಂದಿಗೆ ಗುಟ್ಟಾಗಿ ’ಇಡೀ ದೇಶದಲ್ಲಿ ರಜನೀಶ್‌ರೊಬ್ಬರೇ ನನ್ನನ್ನು ಬೆಂಬಲಿಸಿದರು’ ಎಂದು ಹೇಳಿಕೊಂಡಳಂತೆ. ಆಕೆಯ ಆಧ್ಯಾತ್ಮ ಗುರು ವಿನೋಬಾ ಭಾವೆ ಕೂಡ ಆಕೆಯನ್ನು ಬೆಂಬಲಿಸಲಿಲ್ಲ. ಆಶೀರ್ವಾದಕ್ಕಾಗಿ ಆಕೆ ವಿನೋಬಾರ ಆಶ್ರಮಕ್ಕೆ ಹೋದಾಗ ’ಇಂದು ಅವರು ಮೌನವ್ರತವನ್ನು ಧರಿಸಿದ್ದಾರೆ. ನೀವು ಅವರನ್ನು ನೋಡಬಹುದು. ಆದರೆ ಅವರೊಂದಿಗೆ ಮಾತನಾಡಲಾಗದು’ ಎಂದು ಹೇಳಿ ಕಳಿಸಿದರಂತೆ. ರಾಜಕಾರಿಣಿಗಳ ಗುರುಗಳು ತಾವೂ ಸ್ವತಃ ರಾಜಕಾರಿಣಿಗಳಲ್ಲದೇ ಬೇರೆ ಮತ್ತೇನಾಗಿರಲು ಸಾಧ್ಯ? ಆಕೆ ಕೊಲ್ಲಾಪುರಕ್ಕೆ ಭೇಟಿ ನೀಡಿದಾಗ ಅಲ್ಲಿಗೆ ಬಂದಿದ್ದ ಕಂಚೀ ಪೀಠಾಧೀಶರೂ ಅಂದೇ ಮೌನವ್ರತವನ್ನು ಧರಿಸಿದ್ದರಂತೆ. ಬಾಯಿಬಿಟ್ಟು ಮಾತನಾಡಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಯಾರಿಗೂ ಇಷ್ಟವಿದ್ದಂತಿಲ್ಲ.
ನಾನಾದರೂ ಯಾರಿಗೂ ಹೆದರದೇ ಮಾತನಾಡುವುದನ್ನು ಬಿಟ್ಟರೆ ಬೇರೆ ಮತ್ತೇನು ಅಪರಾಧ ಮಾಡಿದ್ದೇನೆ? ಇಲ್ಲಿ ಸತ್ಯನಿಷ್ಠೆ, ಪ್ರಾಮಾಣಿಕತೆಗಳಿಗೆ ಬದ್ಧನಾದವನು ವಿವಾದಾತ್ಮಕ ಎನಿಸಿಕೊಳ್ಳಲೇಬೇಕು. ನನ್ನ ಕಣ್ಣಿಗೆ ಕಾಣಿಸುವ ಸತ್ಯವನ್ನಾಗಲಿ, ಸುಳ್ಳನ್ನಾಗಲಿ ಬಯಲು ಮಾಡದೆ ಸುಮ್ಮನಿರಲು ನನಗಂತೂ ಸಾಧ್ಯವಿಲ್ಲ. ಇಂದಿರಾ ಗಾಂಧಿಯ ಆಳ್ವಿಕೆಯಲ್ಲಿ ಪ್ರತ್ಯೇಕ ರಾಷ್ಟ್ರವನ್ನು ಕೇಳಿದ ಮಾತ್ರಕ್ಕೆ ಸಾವಿರಾರು ಸಿಖ್ಖರ ಹತ್ಯೆ ಮಾಡಲಾಯಿತು. ನಾನು ಆಕೆಯ ಬಗ್ಗೆ ತುಂಬ ಭರವಸೆ ಇಟ್ಟುಕೊಂಡಿದ್ದೆ. ಈಗಲೂ ನನಗೆ ಆಕೆಯ ಎಷ್ಟೋ ರಾಜಕೀಯ ತೀರ್ಮಾನಗಳ ಬಗ್ಗೆ ಸಹಮತವಿದೆ. ಆದರೂ ಇಂದಿರಾ ಹತ್ಯೆಯ ನಂತರ ನಡೆದ ಸಿಖ್ಖರ ಕಗ್ಗೊಲೆಗೆ ಇಂದಿರಾ ಗಾಂಧಿಯೇ ಹೊಣೆ ಎಂದು ನಾನು ಹೇಳುತ್ತೇನೆ.
ಪಾಕೀಸ್ಥಾನದ ಹಿಡಿತದಿಂದ ಬಿಡಿಸಿಕೊಳ್ಳಲು ಈಕೆ ಬಾಂಗ್ಲಾದೇಶಕ್ಕೆ ನೆರವಾಗಿದ್ದಳು. ಇಂದಿರಾ ಗಾಂಧಿಗೂ ಬಾಂಗ್ಲಾ ದೇಶಕ್ಕೂ ಏನು ಸಂಬಂಧ? ಬಾಂಗ್ಲಾ ದೇಶದ ಮುಜೀಬ್ ಉರ್ ರಹಮಾನ್ ನೆಹರೂ ಕುಟುಂಬದ ಸದಸ್ಯನೇ? ಬಾಂಗ್ಲಾದೇಶಕ್ಕೆ ಸ್ವಾಯತ್ತತೆ ಬೇಕೆನ್ನುವುದು ಸರಿಯಾದರೆ ಸಿಖ್ಖರು ಸ್ವಾಯತ್ತತೆ ಕೇಳುವುದರಲ್ಲಿ ತಪ್ಪೇನಿದೆ? ಇದು ದ್ವಿಮುಖ ನೀತಿಯಲ್ಲವೇ? ಪ್ರಜಾಪ್ರಭುತ್ವವೆಂದರೆ ಜನರ ಆಡಳಿತ ಎಂದು ನಂಬುವುದಾದರೆ, ಜನ ನಮ್ಮನ್ನು ನಾವು ಆಳಿಕೊಳ್ಳುತ್ತೇವೆ, ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ಕೇಳಿದರೆ ತಪ್ಪೇನು? ಒಂದು ಪ್ರಾಂತ್ಯ ಸ್ವಾಯತ್ತತೆ ಕೇಳಿದೊಡನೆಯೇ ಈ ರಾಜಕಾರಿಣಿಗಳಿಗೆ ಪ್ರಜಾಪ್ರಭುತ್ವದ ವ್ಯಾಖ್ಯಾನಗಳೇ ಮರೆತುಹೋಗುವುದಲ್ಲ! ಮಾನ್ಯ ಶ್ರೀ ರಾಜೀವ್ ಗಾಂಧಿಯವರೇ, ಸಿಖ್ಖರನ್ನು ಪ್ರತ್ಯೇಕಿಸಿ ಎಂದು ನಾನು ಕೇಳುತ್ತಿಲ್ಲ. ಈ ದೇಶದಲ್ಲಿ ವಿಭಜನೆಯ ನೀತಿಯನ್ನು ನಿಮ್ಮ ತಾತನವರು ಬಹು ಹಿಂದೆಯೇ ಸ್ಥಾಪಿಸಿದ್ದಾರೆ. ಭಾರತ-ಪಾಕೀಸ್ಥಾನಗಳನ್ನು ಇಬ್ಭಾಗ ಮಾಡುವ ಮೂಲಕ ಈ ದೇಶದಲ್ಲಿ ವಿಭಜನೆಗೆ ಸಂಪೂರ್ಣ ಅನುಮೋದನೆ ನೀಡಿದ್ದಾರೆ. ಅವರು ಹಾಗೆ ಅನುಮೋದಿಸಲೂ ಕಾರಣವಿತ್ತು, ಅವರಿಗೂ ವಯಸ್ಸಾಗಿತ್ತು, ಮುಂದಾದರೂ ತಮಗೆ ಅಧಿಕಾರ ಸಿಗುವುದೋ ಇಲ್ಲವೋ ಎಂಬ ಅನುಮಾನ ಅವರಿಗೆ ಶುರುವಾಗಿತ್ತು. ಪಾಕೀಸ್ಥಾನ ಕೈಬಿಟ್ಟರೇನಂತೆ ಉಳಿದ ಭಾಗವಾದರೂ ಸಿಗಲಿ ಎಂದು ವಿಭಜನೆಗೆ ಒಪ್ಪಿದರು. ಅವರ ನಂತರ ಅವರ ಮಗಳು ಇಂದಿರಾ ಗಾಂಧಿ ಕೂಡ ಅಪ್ಪನ ಹಾದಿಯನ್ನೇ ಅನುಸರಿಸಿ ಬಾಂಗ್ಲಾದೇಶದ ವಿಭಜನೆ ಮಾಡಿಕೊಟ್ಟರು. ನನ್ನ ಅಭಿಪ್ರಾಯವೇನೆಂದರೆ, ಪ್ರಜಾಪ್ರಭುತ್ವದಲ್ಲಿ ಒಂದು ಜನಾಂಗ ತಮ್ಮ ಪಾಡನ್ನು ತಾವು ನೋಡಿಕೊಳ್ಳುತ್ತೇವೆ ಎಂದು ನಿರ್ಧರಿಸಿದರೆ ಅವರಿಗೆ ಯಾರೂ ತೊಡಕನ್ನು ಉಂಟುಮಾಡುವಂತಿಲ್ಲ. ನನ್ನ ದೃಷ್ಟಿಯಲ್ಲಿ ಸ್ವಾತಂತ್ರ್ಯಕ್ಕಿಂತ ಮಿಗಿಲಾದ ಇನ್ನೊಂದು ಮೌಲ್ಯವಿಲ್ಲ, ಶಾಸನವಿಲ್ಲ. ಒಂದು ವೇಳೆ ಆಕೆ ಸಿಖ್ಖರಿಗೆ ಸ್ವಾತಂತ್ರ್ಯ ನೀಡಿದ್ದರೆ ’ಅದು ನಿಮ್ಮ ಜನ್ಮಸಿದ್ಧ ಹಕ್ಕು, ನಿಮ್ಮ ಸ್ವಾತಂತ್ರ್ಯಕ್ಕೆ ನಮ್ಮಿಂದ ಏನೇ ನೆರವು ಸಿಗಬೇಕಿದ್ದರೆ ಕೇಳಿ ನೀಡುತ್ತೇವೆ’ ಎಂದಿದ್ದರೆ ಅವರು ಇಂದಿರಾ ಗಾಂಧಿಯನ್ನು ಹಲವು ಶತಮಾನಗಳವರೆಗೆ ನೆನೆಸಿಕೊಳ್ಳುತ್ತಿದ್ದರು. ಆಕೆ ಹೀಗೆ ಹತ್ಯೆಯಾಗುತ್ತಿರಲಿಲ್ಲ. ಪ್ರಾಯಶಃ ಇಂಥ ಒಳ್ಳೆಯ ಪ್ರಧಾನಿಯನ್ನು ನಾವು ಕಳೆದುಕೊಳ್ಳಲಾರೆವು ಎಂದು ಸಿಖ್ಖರು ತಮ್ಮ ಬೇಡಿಕೆಯನ್ನೂ ಹಿಂತೆಗೆದುಕೊಳ್ಳುತ್ತಿದ್ದರೋ ಏನೋ! ಆದರೆ ಆಕೆ ಸ್ವರ್ಣಮಂದಿರದೊಳಗೆ ಸೈನಿಕರನ್ನು ನುಗ್ಗಿಸಿದಳು, ಆ ಜಾಗದ ಪಾವಿತ್ರ್ಯವನ್ನು ಹಾಳು ಮಾಡಿದಳು. ಇದು ನಿಜಕ್ಕೂ ಅಸಂವಿಧಾನಾತ್ಮಕವಾದುದು. (ಮಸಿಹಾ ೨)
********
ಪ್ರಧಾನಿ ಮೊರಾರ್ಜಿ ದೇಸಾಯಿಯವರನ್ನು ವಿರೋಧಿಸುವ ನೀವು ಇಂದಿರಾ ಗಾಂಧಿಗೆ ಬೆಂಬಲವನ್ನು ಸೂಚಿಸಿರುವಿರಿ. ನಿಮ್ಮಂತಹ ಆಧ್ಯಾತ್ಮಿಕ ವ್ಯಕ್ತಿಗಳು ರಾಜಕೀಯ ವಿಷಯಗಳಲ್ಲಿ ಹೀಗೆ ಹಸ್ತಕ್ಷೇಪ ಮಾಡುವುದು ಸರಿಯೇ? (ಕರಾಂಜಿಯಾ, ಬ್ಲಿಟ್ಜ್ ಪತ್ರಿಕೆ)

ನಾನು ಇಬ್ಬರನ್ನೂ ವೈಯಕ್ತಿಕವಾಗಿ ಬಲ್ಲೆ. ನನಗೆ ಮೊರಾರ್ಜಿಯ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ, ಇಂದಿರಾ ಅವರಿಂದ ವೈಯಕ್ತಿಕ ಲಾಭವೂ ಇಲ್ಲ. ನಾನು ದ್ವೇಷಿಸುವುದು ಮೊರಾರ್ಜಿಯವರ ಹಿಂದೂ ಮೂಲಭೂತವಾದೀ ಧೋರಣೆಯನ್ನು, ಅವರ ಗೊಡ್ಡುತನ, ಹಟಮಾರಿತನಗಳನ್ನು, ಅವರ ಆಡಳಿತಾತ್ಮಕ ಸರ್ವಾಧಿಕಾರವನ್ನು, ಬದುಕಿನ ಕುರಿತ ಅವರ ಅವೈಜ್ಞಾನಿಕ ನಿಲುವುಗಳನ್ನು, ವೈಯಕ್ತಿಕವಾಗಿ ನನಗೆ ಅವರಿಂದ ಏನೂ ಆಗಬೇಕಿಲ್ಲ. ಅಂತಿಮವಾಗಿ ನಾನು ಎಲ್ಲ ರಾಜಕಾರಿಣಿಗಳನ್ನೂ ವಿರೋಧಿಸುವೆನಾದರೂ ರಾಜಕಾರಿಣಿಗಳನ್ನೇ ಬಹಿಷ್ಕರಿಸಿ ಬದುಕುವಷ್ಟು ಪ್ರಬುದ್ಧ ನೆಲೆಗೆ ನಮ್ಮ ಸಮಾಜವಿನ್ನೂ ತಲುಪಿಲ್ಲ. ಹಾಗೆ ನೋಡಿದರೆ ನಾನು ಮಾಡುತ್ತಿರುವುದು ಟೀಕೆಯಲ್ಲ, ಅವರ ಯಥಾರೂಪವನ್ನು ನನ್ನ ಮಾತುಗಳಲ್ಲಿ ಹೇಳುತ್ತಿದ್ದೇನೆ. (ಯೂನಿಯೋ ಮಿಸ್ಟಿಕಾ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಭಾರತದ ಅಮೂಲಾಗ್ರ ಬದಲಾವಣೆಗೆ ರಜನೀಷರು ಸರ್ವಾಧಿಕಾರ ಬಂದರೂ ಸರಿ ಎಂದು ಹೇಳಿರುವಂತೆ ಲೇಖನದಲ್ಲಿ ತಿಳಿಯುತ್ತದೆ. ಆದರೆ ಸರ್ವಾಧಿಕಾರ ಬಂದರೂ ಆಮೂಲಾಗ್ರ ಬದಲಾವಣೆ ಸಾಧ್ಯವಿಲ್ಲ. ಬಲಾತ್ಕಾರದಿಂದ ಯಾವುದನ್ನೂ ಬದಲಾಯಿಸಲು ಸಾಧ್ಯವಿಲ್ಲ, ಸಾಧ್ಯವಾದರೂ ಅದು ತಾತ್ಕಾಲಿಕ. ಬಲಾತ್ಕಾರ ತೆಗೆದ ತಕ್ಷಣ ಪುನಃ ಮೊದಲಿನ ಸ್ಥಿತಿಗೆ ಬರುತ್ತದೆ. ಹೀಗಾಗಿ ಸರ್ವಾಧಿಕಾರ ಪ್ರಯೋಜನ ಆದೀತು ಎನಿಸುವುದಿಲ್ಲ. ಆದರೆ ಭಾರತದ ದುರ್ಗತಿಗೆ ಹಿಂದೂ ಮೂಲಭೂತವಾದವೇ ಪ್ರಧಾನ ಕಾರಣ ಎಂದು ರಜನೀಷರು ಸರಿಯಾಗಿಯೇ ಗುರುತಿಸಿದ್ದಾರೆ. ಇಂಥ ಮೂಲಭೂತವಾದದಿಂದ ಜನರನ್ನು ಹೊರತರಲು ಸ್ವತಂತ್ರ ಚಿಂತನಶಕ್ತಿಯನ್ನು ಉದ್ದೀಪಿಸುವ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಸಾಧ್ಯ. ಇದಕ್ಕೆ ತಲೆಮಾರುಗಳೇ ಬೇಕಾಗಬಹುದು. ವೈಜ್ಞಾನಿಕ ಮನೋಭಾವ ಬೆಳೆಸುವ ಶಿಕ್ಷಣ ವ್ಯವಸ್ಥೆ ದೇಶದಲ್ಲಿ ಜಾರಿಗೆ ಬರದಿದ್ದರೆ ದೇಶದ ಆಮೂಲಾಗ್ರ ಬದಲಾವಣೆ ಎಂದೂ ಸಾಧ್ಯವಾಗಲಾರದು. ವೈಜ್ಞಾನಿಕ ಮನೋಭಾವ ಎಂದರೆ ಯಾವುದನ್ನೂ ಆಧಾರ ಇಲ್ಲದೆ ಒಪ್ಪದ, ಸಾರ್ವಕಾಲಿಕವಾದ, ಪ್ರಪಂಚದ ಎಲ್ಲ ಕಡೆಯೂ ಒಪ್ಪಿತವಾಗುವ ಮೂಲಭೂತ ಅಂಶಗಳಿಂದ ಕೂಡಿದ ಚಿಂತನ ವಿಧಾನ. ಇಂಥ ಮನೋಭಾವದ ಬಗ್ಗೆ ಹೇಳಿದ ಕೂಡಲೆ ಇದನ್ನು ಮೂಲಭೂತವಾದಿ ಮನಸುಗಳು ಪಾಶ್ಚಾತ್ಯ ಎಂದು ಕರೆದು ತಿರಸ್ಕರಿಸಿ ಬಿಡುತ್ತವೆ. ವೈಜ್ಞಾನಿಕ ಮನೋಭಾವ ಎಂದರೆ ಪಾಶ್ಚಾತ್ಯವೂ ಅಲ್ಲ, ಪೌರ್ವಾತ್ಯವೂ ಅಲ್ಲ, ಇದು ಎಲ್ಲೆಡೆ ಸಲ್ಲುವಂತದ್ದು ಎಂದು ನಾವು ತಿಳಿಯಬೇಕಾಗಿದೆ. ಸ್ವತಂತ್ರ ಚಿಂತನ ಶಕ್ತಿಯನ್ನು ಬೆಳೆಸದ ದೇಶದ ಶಿಕ್ಷಣ ವ್ಯವಸ್ಥೆಯೇ ನಮ್ಮ ಇಂದಿನ ದುಸ್ಥಿತಿಗೆ ಕಾರಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಆನಂದ ಪ್ರಸಾದ್ >>>>"ಆದರೆ ಸರ್ವಾಧಿಕಾರ ಬಂದರೂ ಆಮೂಲಾಗ್ರ ಬದಲಾವಣೆ ಸಾಧ್ಯವಿಲ್ಲ. ಬಲಾತ್ಕಾರದಿಂದ ಯಾವುದನ್ನೂ ಬದಲಾಯಿಸಲು ಸಾಧ್ಯವಿಲ್ಲ. ಸಾಧ್ಯವಾದರೂ ಅದು ತಾತ್ಕಾಲಿಕ. "ಬಲಾತ್ಕಾರ ತೆಗೆದ ತಕ್ಷಣ ಪುನಃ ಮೊದಲಿನ ಸ್ಥಿತಿಗೆ ಬರುತ್ತದೆ. ಹೀಗಾಗಿ ಸರ್ವಾಧಿಕಾರ ಪ್ರಯೋಜನ ಆದೀತು ಎನಿಸುವುದಿಲ್ಲ. "<<<<< ಸಿಂಗಾಪುರವನ್ನು ಜಗತ್ತಿನಲ್ಲೇ ಉತ್ತಮ ರಾಷ್ಟ್ರವನ್ನಾಗಿ ಮಾಡಿದ ಲೀ ಕುವಾನ್ ಯೂ ಅವರನ್ನು benevolent dictator ಎಂದು ಕರೆಯುವುದುಂಟು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.