ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ?

0

ಈಚೆಗೆ ನಾನು ಶೃಂಗೇರಿ ಮತ್ತು ಮುರುಡೇಶ್ವರ ಪ್ರವಾಸ ಮಾಡಿದಾಗ ನನ್ನ ಮನಸ್ಸಿನಲ್ಲಿ ಈ ಪ್ರಶ್ನೆ ಬಂದಿತ್ತು. ಕೆಲವು ದಿನಗಳ ನಂತರ ವಿಜಯ ಕರ್ನಾಟಕ ದಲ್ಲಿ(ದಿನಾಂಕ ನೆನಪಿಲ್ಲ) ಈ ಪ್ರಶ್ನೆಯನ್ನೇ ಕರ್ನಾಟಕದ ಹೆಸರಾಂತ ಶಿಲ್ಪಿಗಳು ಮಾಡಿರುವುದು ವರದಿಯಾಗಿತ್ತು. ಈ ಮೇಲಿನ ದೇವಳಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.ಆದರೆ ಶಿಲ್ಪಿಗಳನ್ನು ತಮಿಳುನಾಡಿನಿಂದ ಕರೆಸಲಾಗಿದೆ ಹಾಗು ಶೃಂಗೇರಿ ದೇವಳದ ಮೇಲ್ಛಾವಣಿಯಲ್ಲಿ ನೀವು ತಮಿಳು ಲಿಪಿಯನ್ನು ಕಾಣಬಹುದು.
ಬೇಲೂರು -ಹಳೇಬೀಡಿನಂಥ ಇತಿಹಾಸವಿರುವ ನಮ್ಮ ನಾಡಿನಲ್ಲಿ ಶಿಲ್ಪಿಗಳಿಗೆ ಬರವೆ? "ಹಿತ್ತಲಿನ ಗಿಡ ಮದ್ದಲ್ಲ" ಎಂಬ ಗಾದೆಗೆ ಕಟ್ಟುಬಿದ್ದಿದ್ದೇವೆಯೇ?

ಕಲೆಗೆ ಯಾವ ಭಾಷೆಯ ಎಲ್ಲೆಯೂ ಇಲ್ಲ ಆದರೆ ನಾವು ನಮ್ಮ ಶಿಲ್ಪಿಗಳನ್ನು ಕಡೆಗಣಿಸುವುದು ಸರಿಯೆ? ನಮ್ಮಲ್ಲಿ ಆ ಸಾಮರ್ಥ್ಯವಿಲ್ಲದಿದ್ದಲ್ಲಿ ಬೇರೆಯವರನ್ನು ಕರೆಸುವುದು ಅವಶ್ಯಕ ಆದರೆ ನಮ್ಮಲ್ಲಿ ಒಳ್ಳೆಯ ಕಲೆಗಾರರಿದ್ದರೂ ಬೇರೆಯವರಿಗೆ ಮಣೆ ಹಾಕುವುದು ಸರಿಯಲ್ಲ ಎಂಬುದು ನನ್ನ ಭಾವನೆ

-ಜೈ ಕರ್ನಾಟಕ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ವೈಭವರವರೇ,

ನೀವು ಹೇಳೋದು ನಿಜ.

ನನಗೆ ಕನ್ನಡಿಗ ಶಿಲ್ಪಿಗಳಲ್ಲಿ ತಕ್ಷಣ ನೆನಪಿಗೆ ಬರೋದು ಶಿವಮೊಗ್ಗದ ಕಾಶೀನಾಥ್ ಅವರು. ಮುರ್ಡೇಶ್ವರದ ಶಿವನ ಪ್ರತಿಮೆ, ಬೆಂಗಳೂರು ಬಳಿಯ ಅರಿಶಿನಕುಂಟೆಯ ವಿಶ್ವಶಾಂತಿ ಆಶ್ರಮದಲ್ಲಿನ "ಗೀತಾ ಮಂದಿರ", ಬೆಂಗಳೂರಿನಲ್ಲಿ ಏರ್‌ಪೋರ್ಟ್ ರಸ್ತೆಯಲ್ಲಿನ ದೊಡ್ಡ ಶಿವನ ವಿಗ್ರಹ, ಹೀಗೆ ನೂರಾರು ಅದ್ಭುತ ಕಲಾಕೃತಿಗಳನ್ನು ಅವರು ರಚಿಸಿದ್ದಾರೆ. ನಮ್ಮದೇ ರಾಜ್ಯದ "ಶಿವಾರಪಟ್ಟಣ"ವಂತೂ ಬರೀ ಶಿಲ್ಪಿಗಳ ಊರೇ ಆಗಿದೆ. ಇಷ್ಟಿದ್ದೂ ಯಾಕೆ ಗಮನಕ್ಕೆ ಬರುವುದಿಲ್ಲ ಅನ್ನುವುದಕ್ಕೆ ಬಹುಶಃ "ಹಿತ್ತಲ ಗಿಡ ಮದ್ದಲ್ಲ" ಅನ್ನುವುದೇ ಕಾರಣವೇನೋ?

- ಶ್ಯಾಮ್ ಕಿಶೋರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇತ್ತೀಚೆಗೆ ಎಲ್ಲಾದರೂ ದೇವಾಲಯಗಳ ನವೀಕರಣದ ನಡೆಯುತ್ತಿದೆ ಎಂಬ ಸುದ್ದಿ ಓದಿದರೆ ನನಗೆ ಭಯವಾಗುತ್ತದೆ. ಏಕೆಂದರೆ ನವೀಕರಣದ ಹೆಸರಿನಲ್ಲಿ ಕರ್ನಾಟಕದ ದೇವಾಲಯಗಳ ತಂಜಾವೂರೀಕರಣ ನಡೆಯುತ್ತಿದೆ. ಇದರ ಅತ್ಯುತ್ತಮ ಉದಾಹರಣೆ ಎಂದರೆ ಮುರುಡೇಶ್ವರ. ಅಲ್ಲಿನ ಗೋಪುರದಿಂದ ಆರಂಭಿಸಿ ಶಿಲ್ಪಗಳವರೆಗೆ ಎಲ್ಲವೂ ತಮಿಳುನಾಡಿನ ಯಾವುದೋ ದೇವಸ್ಥಾನವನ್ನು ನೆನಪಿಸುತ್ತಿರುತ್ತದೆ. ದೇವಾಲಯಗಳ ಪುನರ್ ಪ್ರತಿಷ್ಟಾ ಬ್ರಹ್ಮಕಲಶಗಳಿಗೆ ಭಾಷಣಕ್ಕೆ ಹೋದರೆ ಅಲ್ಲಿಯೇ ಇದನ್ನು ಖಂಡಿಸಿ ಮಾತನಾಡುವ ಧೈರ್ಯ ತೋರುವುದು ಡಾ.ಎಂ. ಪ್ರಭಾಕರ ಜೋಶಿ ಮಾತ್ರ. ದಕ್ಷಿಣ ಕನ್ನಡದಲ್ಲಿ ಅವರ ಪ್ರಯತ್ನದಿಂದ ಕೆಲವು ದೇವಾಲಯಗಳ ತಂಜಾವೂರೀಕರಣ ತಪ್ಪಿದೆ.

ಇಲ್ಲಿರುವ ದೊಡ್ಡ ಸಮಸ್ಯೆ ಎಂದರೆ ದೇವಾಲಯಗಳ ಜೀರ್ಣೋದ್ಧಾರ ಮಾಡುವವರಿಗೆ ಭಕ್ತಿ ಇರುತ್ತದೆ, ಹಣ ಇರುತ್ತದೆ. ಆದರೆ ಕಲಾತ್ಮಕ ಔಚಿತ್ಯವೆಂದರೇನೆಂದೇ ತಿಳಿದಿರುವುದಿಲ್ಲ. ಈ ಬಗ್ಗೆ ನಾವು ಮಾತನಾಡಿದರೆ ಸಾಕಾಗುವುದಿಲ್ಲ. ಇಂಥದ್ದರ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು. ದೇವಾಲಯ ಎಂದರೆ ಕೇವಲ ದೇವಾಲಯ ಮಾತ್ರ ಅಲ್ಲ ನಮ್ಮ ವಾಸ್ತುಶಿಲ್ಲ ಪರಂಪರೆಯ ತುಣುಕು ಎಂಬುದನ್ನು ಮರೆಯಬೇಡಿ ಎಂದು ಯಾರು ಹೇಳುವುದು?

ಇದು ಕೇವಲ ದೇವಾಲಯಗಳಿಗೆ ಮಾತ್ರ ಸಂಬಂಧಿಸಿದ ವಿಷಯ ಅಲ್ಲ. ಮಸೀದಿಗಳ ವಿಷಯದಲ್ಲಿಯೂ ಇದು ನಿಜ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 800 ವರ್ಷಗಳಷ್ಟು ಹಳೆಯದಾದ ಒಂದು ಮಸೀದಿಯನ್ನು ಏಳೆಂಟು ವರ್ಷಗಳ ಹಿಂದೆ ನವೀಕರಿಸಲಾಯಿತು. ಮೂಲವಾಸ್ತುವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕಾಂಕ್ರೀಟ್ ಕಟ್ಟಡ ಸುತ್ತುವರಿಯಿತು. ಮಧ್ಯದ ಭಾಗ ಉಳಿದುಕೊಂಡದ್ದು ಕೆಲವರ ತೀವ್ರ ಆಕ್ಷೇಪದಿಂದ. ಹೀಗೆ ಆಕ್ಷೇಪಿಸದವು ಕಾಂಕ್ರೀಟ್ ಕಟ್ಟಡಗಳಾದವು.

ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿಗಳ ವಾಸ್ತು ಮತ್ತು ಜೈನ ಬಸದಿಗಳ ವಾಸ್ತುವಿನ ಮಧ್ಯೆ ಬಹುದೊಡ್ಡ ಸಾಮ್ಯವಿದೆ. ಮುಗುಳಿ ಎಂದು ಕರೆಯಲಾಗುವ ಕಲಶವೂ ಈ ಮಸೀದಿಗಳಿಗೆ ಇರುತ್ತಿತ್ತು. ಇದನ್ನು ಅನುಸ್ಥಾಪಿಸುವ ತಜ್ಞರೂ ಇದ್ದರು. ನಮ್ಮ ಕುಟುಂಬದಲ್ಲಿ ನನ್ನ ತಂದೆಗೆ ಇದರ ತಂತ್ರ ತಿಳಿದಿತ್ತು. ಸಂಪೂರ್ಣ ಮರದ ಚಾವಣಿ ಇರುವ ಈ ಕಟ್ಟಡಗಳಲ್ಲಿ ಮಧ್ಯಭಾಗದಲ್ಲಿ ಮುಗುಳಿಯನ್ನು ಕೂರಿಸುವ ಕೆಲಸಕ್ಕೆ ವಿಶೇಷ ಕೌಶಲ್ಯ ಬೇಕಿತ್ತು. ಇದೆಲ್ಲಾ ಯಾರಾ ಗಮನಕ್ಕೂ ಬರುವುದಿಲ್ಲ. ಈಗ ಹಂತು ಹೊದಿಸಬೇಕಾಗಿಲ್ಲ. ಕಾಂಕ್ರೀಟ್ ಹಾಕಿದರೆ ಸಾಕು ಎಂಬುದನ್ನು ಮಾತ್ರ ಜೀರ್ಣೋದ್ಧಾರ ಪ್ರಿಯರು ಅರಿತಿರುವುದು.

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಇಸ್ಮಾಯಿಲ್ ರವರೆ.

ನೀವು ಹೇಳುವುದು ಅರ್ಥವತ್ತಾಗಿದೆ. ನಮ್ಮ ಹಿಂದಿನವರು( ಹೊಯ್ಸಳ, ಚಾಲುಕ್ಯ) ದೇವರ ನೆಪ ಮಾಡಿಕೊಂಡು ಅದ್ಭುತ ಕಲಾಕೃತಿಗಳನ್ನು ರಚಿಸಿ ಹೋಗಿದ್ದಾರೆ. ಅವರ ದುಡಿಮೆಗೆ ನಾವು ಬೆಲೆ ಕೊಡಬೇಕಾದರೆ ನಾವು ವಾಸ್ತುಶಿಲ್ಪವನ್ನು ಅರ್ಥ ಮಾಡಿಕೊಂಡು ಅದರ ಮೂಲ ಆಶಯ ಧಕ್ಕೆ ಬಾರದಂತೆ ನವೀಕರಣಗೊಳಿಸುವುದು ಒಳಿತು. ಕನ್ನಡ ನಾಡಿಗೆ ತನ್ನದೆ ಆದ ವಾಸ್ತುಶಿಲ್ಪ ಸಂಪ್ರದಾಯ ಇದೆ. ಹೀಗುರುವಾಗ ಬೇರೆಯವರಿಗೆ ಮಣೆ ಹಾಕಿದರೆ ಉರಿದು ಹೋಗುತ್ತೆ. "ತಂಜಾವೂರಿಕರಣ" ಮತ್ತು "ಕಾಂಕ್ರೀಟಿಕರಣ" ಮಾಡಿ ನಾವು ನಮ್ಮ ಕಲೆಯನ್ನು ಕೊಲ್ಲುತ್ತಿದ್ದೇವೆ.

ಈ ಸಮಸ್ಯೆಯ ಇನ್ನೊಂದು ಮೊಗ್ಗಲು ನಮ್ಮ ಸರ್ಕಾರದ ದಿವ್ಯ ನಿರ್ಲಕ್ಷ್ಯ ಏಕೆಂದರೆ ನಾನು ಈಚೆಗೆ ಚಿತ್ರದುರ್ಗ ಪ್ರವಾಸ ಮಾಡಿದಾಗ "ಹೊಸದುರ್ಗ"ದ ( ಚಿತ್ರದುರ್ಗ ಜಿಲ್ಲೆಯ ಒಂದು ತಾಲ್ಲೂಕು) ಹತ್ತಿರ ( ಸುಮಾರು ೨೦-೩೦ ಕಿ.ಮೀ) ಇರುವ "ಬಾಗೂರು" ಎಂಬ ಹಳ್ಳಿಗೆ ಭೇಟಿ ನೀಡಿದ್ದೆ. ಇಲ್ಲಿರುವ ಹೊಯ್ಸಳರ ಕಾಲದ "ಚೆನ್ನಕೇಶವ ದೇವಾಲಯ" ಇನ್ನು ಎಲೆ ಮರೆಯ ಕಾಯಿಯಾಗಿ ಉಳಿದಿದೆ. ಅಲ್ಲಿಗೆ ಹೋದಾಗ ನನಗೆ ಆಶ್ಚರ್ಯ ಕಾದಿತ್ತು. ದೇವಳದ ಒಳ ಪ್ರಾಂಗಣದಲ್ಲಿ ಹುಡುಗರು "ಫುಟ್ ಬಾಲ್" ಆಡುತ್ತಿದ್ದ್ದರು. ಸುತ್ತಮುತ್ತ ನೋಡಿದಾಗ ಅಲ್ಲಿ ಯಾವ ಸ್ವಚ್ಚತೆಯನ್ನು ಕಾಪಾಡಿಲ್ಲ ಎಂದು ಅರ್ಥವಾಯಿತು.

ಈ ದೇವಳದ ವಿಶೇಷತೆಯೆಂದರೆ ದೇವಳದ ಪ್ರಾಂಗಣದಲ್ಲಿ ( ಒಳ ಹೊಕ್ಕರೆ ಬಲಭಾಗದಲ್ಲಿ) ಒಂದು ಸುಂದರವಾದ ಕಲ್ಲಿನ ಮಂಟಪವಿದೆ( ಬಹುಶಃ ಒಂದು ಶಿಲೆದು ಇರಬೇಕು). ಆ ಕಲ್ಲಿಗೆ( ಶಿಲೆ) ವಿಶಿಷ್ಟವಾದ ಬಣ್ಣವಿದೆ. ಪಕ್ಕದಲ್ಲೇ ಒಂದು ಕನ್ನಡ ಶಿಲಾಶಾಸನವಿದೆ. ಅದನ್ನು ಓದಲು ಪ್ರಯತ್ನ ಪಟ್ಟೆ. ಅದರೆ ಅದು ಬಹಳ ಶೋಚನೀಯ ಸ್ಥಿತಿಯಲ್ಲಿತ್ತು. ಆಗಲಿಲ್ಲ.

-ಜೈ ಕರ್ನಾಟಕ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.