ಆ ಕಾಲ ಒಂದಿತ್ತು... ಬಾಲ್ಯವಾಗಿತ್ತು

0

ನಾಳೆಯಿಂದ ಶಾಲೆ ಪ್ರಾರಂಭವಾಗುತ್ತಿದೆ ಎಂದರೆ ಸಾಕು ಅಜ್ಜಿ ಮನೆಯಲ್ಲಿರುವ ನಮಗೆ ಏನೋ ಒಂದು ತರಥ ಬೇಸರ.... ಉಂಡು ಆಟವಾಡುತ್ತಾ, ಜಮೀನುಗಳಿಗೆ ತೆರಳುವುದು, ದನ ಕಾಯುವವರೊಂದಿಗೆ ಕಾಡಿನ ಹಣ್ಣುಗಳನ್ನು ತಿನ್ನುತ್ತಾ ದಿನಕ್ಕೊಂದು ಪ್ರಪಂಚದಲ್ಲಿ ಕಾಲ ಕಳೆಯುತ್ತಿರುವವರಿಗೆ ರಜಾ ದಿನಗಳು ಮುಗಿಯುವುದೇ ಬೇಡ ಎನ್ನುವಂತಹ ಮನೋಭಾವ ಏನು ಮಾಡುವುದು ಆದರೂ ಆ ದಿನ ಬಂದೇ ಬಿಡುತ್ತಿತ್ತು. ಆದರೂ ಒಂದು ದಿನ ತಡವಾಗಿಯೇ ಹೋಗುತ್ತಿದ್ದ ನನಗೆ ಬೆಂಗಳೂರಿನ ಕಾಂಕ್ರಿಟ್ ಕಾಡಿನಲ್ಲೂ ಅಜ್ಜಿಯ ಮನೆ ನೆನಪು ಕಾಡುತ್ತಿದೆ.

ಗುರುವಾರ ನಾನು, ನನ್ನ ಸಹೋದ್ಯೋಗಿ ಮಲ್ಲಿಕಾರ್ಜುನ್ ಬೆಂಗಳೂರು ಪಟ್ಟಣದಲ್ಲಿರುವ ಪ್ರಮುಖ ಪುಸ್ತಕ ಅಂಗಡಿಗಳಲ್ಲಿ ಪುಸ್ತಕ ತೆಗೆದುಕೊಳ್ಳುತ್ತಿರುವ ಹುಡುಗರ ಮಧ್ಯೆ ಸಾಗುತ್ತಾ
ಮಲ್ಲೇಶ್ವರಂ ರೈಲ್ವೆ ಸ್ಟೇಷನ್ ಬಳಿ ಹೋಗುವಾಗ ನೇರಳೆ ಮರಗಳು ಕಾಣಿಸುತ್ತಿದ್ದಂತೆ ನೆನಪಿನ ಅಲೆಗಳು ಪ್ರಾವಾಹೋಪಾದಿಯಲ್ಲಿ ಮುತ್ತಿಕೊಳ್ಳುತ್ತಿದ್ದಾಗ ತಟ್ಟಂತ ನೆನಪಾದ ಒಂದು ಸಂಗತಿ... ನೇರವಾಗಿ ಹೇಳುತ್ತೇನೆ ಕೇಳ್ರಿ...

ನಾನಾಗ 4ನೇ ತರಗತಿ ಇರಬಹುದು ಅಜ್ಜಿ ಮನೆಗೆ ಹೋದಾಗ ನನಗೆ ಹೆಚ್ಚು ಖುಷಿ ಕೊಡುತ್ತಿದ್ದ ಸಂಗತಿ ಎಂದರೆ ದನ ಕಾಯಲು (ಜಾನುವಾರುಗಳಿಗೆ ಹುಲ್ಲು ಮೇಯಿಸಲು ಕರೆದೊಯ್ಯುವುದು) ಹೋಗುವುದು. ಇದಕ್ಕೆ ಕಾರಣವೂ ವಿಶೇಷವಾದದ್ದೇ 'ಮಾತು ಬಾರದ ಕನಿಷ್ಠ 25-30 ಹಸುಗಳನ್ನು ಯಾವ ರೀತಿ ಕರೆದುಕೊಂಡು ಹೋಗಿ ವಾಪಸ್ಸು ಕರೆದುಕೊಂಡು ಬರುತ್ತಾರೆ ಎನ್ನುವುದೇ ನನಗೊಂದು ಯಕ್ಷಪ್ರಶ್ನೆ.....!

ಹಸು ಕಾಯುವ ಹುಡುಗರು ತಮ್ಮ ಭಾಷೆಯಲ್ಲಿ ಏನನ್ನೋ ಹೇಳುತ್ತಾ ಅವುಗಳನ್ನು ಕರೆದುಕೊಂಡು ಹೋಗುತ್ತಿದ್ದರೆ ಅವರ ಬಳಿ ಇರುವ ಕೋಲನ್ನು ನಾನು ಹಿಡಿದುಕೊಂಡು ನನ್ನದೇನೋ ಬಡ ಬಡಾಯಿಸುವ ಮಾತಿಗೆ ಅವುಗಳು ಹೋಗುತ್ತಿವೆ ಎನ್ನುವ ಗರ್ವದಿಂದ ಮುಂದೆ ಮುಂದೆ ಹೋಗುತ್ತಿರುವುದು ನೆನಪಿಸಿಕೊಂಡರೆ ಈಗಲೂ ಎಂತಹ ಬಾಲ್ಯವಪ್ಪಾ ಅದು ಸ್ವಚ್ಚಂದವಾದ ಬದುಕಿನದ್ದು ಎನಿಸುತ್ತಿದೆ.

ವಿಷಯ ಬೆಂಗಳೂರು ಬಿಟ್ಟು ಹೊಗ ಬಾರದಲ್ವ ಛೇ...
ಇವತ್ತು ಹತ್ತು ರೂಪಾಯಿ ಕೊಟ್ಟು ನೇರಳೆ ಹಣ್ಣನ್ನು ಕೊಂಡಾಗ ಕಣ್ರಿ ಇದೆಲ್ಲಾ ನೆನಪಿಗೆ ಬಂದಿದ್ದು. ಎರಡು ಮೂರು ಹಣ್ಣು ತಿಂದಿಲ್ಲ ಅಷ್ಟರಲ್ಲೇ ಅಲ್ಲೊಂದು ನೇರಳೆ ಮರ ಕಾಣಬೇಕೆ ಅದೂ ಮರದ ತುಂಬಾ ಹಣ್ಣುಗಳು ಯಾಕಾದರೂ ಹಣ ಕೊಟ್ಟೆವೂ ಕಿತ್ತು ತಿನ್ನಬಹುದಿತ್ತಲ್ಲಾ ಎಂದು ಹಣ್ಣನ್ನೆ ನೋಡುತ್ತಾ ಬಾಲ್ಯದ ನೆನಪುಗಳು ಮರುಕಳಿಸಬೇಕೆ...?

ವಿಷಯ ಇಷ್ಟೇ ಅಲ್ಲ....
ಕಾಡಲ್ಲಿ ತಿಂದ ಕವಳೆ ಹಣ್ಣು, ಮಾವಿನ ಹಣ್ಣನಿನ ಸವಿ ನೆನಪು ಮಾಡಿಕೊಳ್ಳುತ್ತಾ ನಾನು ಮಲ್ಲಿಕಾರ್ಜುನ್ ನೇರಳೆ ಮರ ಹತ್ತಿ ಹಣ್ಣನ್ನು ಕೀಳಲೆ ಬೇಕು ಅಂದುಕೊಂಡಿದ್ದೇ ತಡ ಮತ್ತೆ ದೊಡ್ಡತನ ಅಡ್ಡಬಂತು ಆದರೂ ನಮಗೆ ಇದು ಹೊಸ ಪ್ರದೇಶ ಇಲ್ಲಿ ನಮಗ್ಯಾರು ಗೊತ್ತಿಲ್ಲ ಜನ ಬೇರೆ ಕಡಿಮೆ ಇದ್ದಾರೆ ಎನ್ನುವ ಆಸೆ ಮನಸ್ಸು ಬೇರೆ.

ಮರ ಹತ್ತಿದೆವೋ ಇಲ್ಲವೋ ಅಷ್ಟೇ ಹೇಳಬೇಕಾ.....
ನಿಜವಾಗಿಯೂ ಮರ ಹತ್ತಿ ನೇರಳೆ ಹಣ್ಣು ಕಿತ್ತು ತಿಂದೆವು. ಇವರೇನು ಮನುಷ್ಯರಾ ಇಲ್ಲಾ ದನ ಕಾಯುವವರಾ ಎಂದು ಕೊಳ್ಳುತ್ತಾರೆ ಎನ್ನುವ ಕಳವಳ ಇದ್ದರೂ ಅದನ್ನು ಲೆಕ್ಕಿಸದೇ ಈ ಕೆಲಸ ಮಾಡಿದ್ದೇವೆ. ಇವರೆಂತಾ ದನ ಕಾಯುವವರೋ ಅಂತಿರಾ ನೀವು.... ಸುಮ್ಮನೆ ಅಲ್ಲ ಮಾತು ಬರದ ಜಾನುವಾರುಗಳನ್ನು ಬೇರೆಯವರ ಗದ್ದೆಗೆ ಹೋಗದಂತೆ ನೋಡಿಕೊಂಡು ಮೇಯಿಸಿಕೊಂಡು ಬರುವುದೆಂದರೆ.

ನಿಮಗೇನು ಮರ ಹತ್ತಿಸಿ ಮಾತ್ರ ಗೊತ್ತಾ ಅಥವಾ ಮರ ಹತ್ತಿರುವ ಅನುಭವ ಇದೆಯಾ.....

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಈಗಿನ್ನೂ ನಾನೂ ನನ್ನ ಬಾಲ್ಯ ನೆನಪಿಸಿಕೊಂಡು ಒಂದು ಲೇಖನ ಬರೆದೆ. ನಿಮ್ಮ ಲೇಖನವೂ ಕಣ್ಣಿಗೆಬಿತ್ತು. ನೇರಲೆ ಹಣ್ಣು ತಿಂದಷ್ಟೇ ಸಂತೋಶವಾಯ್ತು ಚಂದ್ರಶೇಕರ್. ಯಾಕೆ ಗೊತ್ತಾ? ನಾನೇ ಸ್ವತ: ದನಾ ಕಾಯ್ತಿದ್ದೆ ರೀ. ನಮ್ಮನೇಲೀ ನಮ್ಮಜ್ಜಿ ಇದ್ರು. ಮಲಗಿದ್ದಬಳೀ ಮಲಗಿಕೊಂಡಿದ್ದರೂ ಸದಾಕಾಲ ಮನೆಯ ಆಗುಹೋಗುಗಳ ಚಿಂತೆ ಅವರಿಗೆ. ಆಗಾಗ ಟೈಮ್ ಕೇಳೀ ಕೇಳೀ " ದನಾ ಬೆಟ್ಟಕ್ಕಟ್ಟಿದಿರಾ? ಹಸುಗೆ ಕಲಗಚ್ಚು ಇನ್ನೂ ಇಡಲಿಲ್ಲವೇ? ಹಸು ಕರು ಬಿಟ್ಟರಾ? ಹೀಗೆ ಕಾಲಕಾಲಕ್ಕೆ ಎಲ್ಲಾ ಕೆಲಸಾನೂ ಹೇಳಿ ಹೇಳಿ ಮಾಡಿಸ್ತಾ ಇದ್ರೂ, ಮಲಗಿದ್ದ ಬಳಿಯೇ!
ಮದ್ಯಾಹ್ನ ನಾಲ್ಕು ಗಂಟೆ ಯಾಯ್ತೆಂದ್ರೆ ಸಾಕು" ದನಾ ಹೊಡ್ಕೊ೦ಡ್ ಬರೋಕೆ ಯಾರು ಹೋದ್ರು? ನಾಗೂ ನೇ[ನಮ್ಮಪ್ಪ] ಅವ್ನಾದ್ರೆ ಇವತ್ತು ದನಗಳಿಗೆ ದೊಡ್ಡೀನೇ ಗತಿ. ಶ್ರೀಧರನೇ? ಅವನಾದ್ರೆ ಎಲ್ಲಿದ್ದರೂ ಹೊಡೆದುಕೊಂಡೆ ಬರ್ತಾನೆ. ನನ್ನ ಬಗ್ಗೆ ಅದೆಂತಹಾ ವಿಶ್ವಾಸ ಇತ್ತೆಂದರೆ....ಅದರಿಂದ ಅವರು ಹೊಗಳಲೀ ಅಂತಾನೇ ನಾನು ಮೈ ಮುರಿದು ಕೆಲಸ ಮಾಡೀ ಮಾಡೀ ಹೊಗಳಿಸಿಕೊಳ್ಳುತ್ತಿದ್ದೆ. ಈಗಲೂ ಹಾಗೇ ಅನ್ನಿ. ಇರಲಿ. ಅದೇ ಕಥೆ ಇನ್ನೂ ಪೂರ್ತಿ ಆಗಿಲ್ಲ. ನಮ್ಮೂರಲ್ಲಿ ಮೂರು ಬೆಟ್ಟಗಳ ಸಾಲು. ಚಿಕ್ಕಬೆಟ್ಟ, ದೊಡ್ಡಬೆಟ್ಟ, ಗೋರೀ ಬೆಟ್ಟ ಅಂತಾ ಹೆಸರು. ನಮ್ಮಪ್ಪ ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ಚಿಕ್ಕ ಬೆಟ್ಟಕ್ಕೆ ದನಗಳನ್ನು ಹೊಡೆದುಕೊಂಡು ಬಿಟ್ಟು ಬಂದರೆ ಅವು ಮೇಯುತ್ತಾ ಮೇಯುತ್ತಾ ಚಿಕ್ಕಬೆಟ್ಟದಿಂದ, ಗೋರೀ ಬೆಟ್ಟ, ಬಳಸಿಕೊಂಡು ಸಂಜೆಹೊತ್ತಿಗೆ, ದೊಡ್ಡ ಬೆಟ್ಟದಲ್ಲಿರುತ್ತಿದ್ದವು. ಸಂಜೆ ಸ್ಕೂಲ್ ಮುಗಿಸಿ ನಾನು ಬೆಟ್ಟದ ಬುಡಕ್ಕೆ ಹೋಗಿ ನನ್ನ ಟೆಲಿಸ್ಕೋಪಿಕ್ ಕಣ್ಣುಗಳಿಂದ ದೃಷ್ಟಿ ಹಾಯಿಸಿ ನೋಡಿದರೆ ದೊಡ್ದಬೆಟ್ಟದಲ್ಲಿ ಎಲ್ಲಾದರೂ ಒಂದುಕಡೆ ಮೇಯ್ತಿರೋದು ಕಣ್ಣಿಗೆ ಬೀಳ್ತಿತ್ತು. ಆಗ ಅಲ್ಲಿಗೆ ಹೋಗಿ ದನ ಅಟ್ಟಿಕೊಂಡು ಬರ್ತಿದ್ದೆ. ಒಂದಿನಾ ಏನಾಯ್ತು, ಗೊತ್ತಾ? ನನಗೆ ಕೆಳಗಿನಿಂದ ದನ ಕಾಣ್ಲಿಲ್ಲ. ಹೀಗೆ ಅದೆಷ್ಟೋ ದಿನ ಆಗ್ತಿತ್ತು. ಸರೀ ಹುಡುಕಿಕೊಂಡು ಹೊರಟೆ. ನಾನು ದೊಡ್ದಬೆಟ್ಟದ ನೆತ್ತಿಯಲ್ಲಿದ್ದೀನಿ. ಅಲ್ಲಿಂದ ನೋಡಿದರೆ ಕೆಳಗಡೆ ಬೀರನಹಳ್ಳಿಯ ಹೊಲದಲ್ಲಿ ದನಗಳು ಜೋಳ ಮೇಯ್ತಿವೆ! ಅಲ್ಲಿಂದ ನೇರ ಕೆಳಕ್ಕೆ ಓಡುತ್ತಾ ಬಂದೆ ನೋಡಿ! ಅಬ್ಭಾ! ಇವತ್ತು ನೆನಸಿ ಕೊಂಡರೆ, ನನಗೇ ಆಶ್ಚರ್ಯ ವಾಗುತ್ತೆ! ಈಗ ಯಾರು ನೋಡಿದರೂ ಅಸಾಧ್ಯವೆಂದೇ ಹೇಳ್ತಾರೆ! ಆದರೆ ಅವತ್ತು ಅದು ಸಾಧ್ಯವಾಯ್ತು.ಸಂಜೆ ಸ್ವಲ್ಪ ಲೇಟಾಗಿ ಮನೆಗೆ ದನಾಹೊಡೆದುಕೊಂಡುಬಂದು ನಮ್ಮಜ್ಜಿ ಹತ್ತಿರ ನನ್ನ ಸಾಹಸದ ಕಥೆ ಹೇಳಿ ,ಅವರ ಮುಂದೆ ಹೀರೋ ಪೋಸ್ ಕೊಟ್ಟು , ಅವರ ಬಳೀ ಕೂತ್ಕೊಂಡು ತಲೆ ಸವರಿಸಿಕೊಂದಿದ್ದನ್ನು ನೆನಪಿಸಿಕೊಂಡ್ರೆ, ಇವತ್ತಿನ ಯಾವ ಸುಖಕ್ಕೂ ಅದು ಕಮ್ಮಿ ಇರಲಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸಾರ್
ಆಗೆಲ್ಲ ನಾವು ಸಣ್ಣ ಪುಟ್ಟ ಘಟನೆಗಳನ್ನು ಎಷ್ಟು ಅನುಭವಿಸಿ ಆನಂದಿಸುತ್ತಿದ್ದೆವು ಅಲ್ವ.....ಅದೆಲ್ಲ ನೆನೆಸಿಕೊಂಡರೆ ಬೇಸರವಾಗುತ್ತದೆ.ಆಗಿನ ಬದುಕೆ ಬದುಕು ಇಂದಿನದು ಭಾವನೆಗಳೆ ಇಲ್ಲದ ಯಾಂತ್ರಿಕ ಬದುಕು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಂತ್ರಿಕ ಬಹುಕಿನ ಮಧ್ಯೆ ಅಜ್ಜಿ ತೊಡೆಮೇಲೆ ಮಲಗಿ ಪ್ರಂಪಚನೇ ಮರೆಯುವ ಹಿತಾನುಭವ ಇಂದಿನ ಮಕ್ಕಳಿಗೂ ಸಿಗುವಂತಾಗಲೀ ಮಾಲತಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..
ಅಜ್ಜಿ ತೊಡೆಮೇಲೆ ಮಲಗಿ ಪ್ರಂಪಚನೇ ಮರೆಯುವ ಹಿತಾನುಭವ ಇಂದಿನ ಮಕ್ಕಳಿಗೂ ಸಿಗುವಂತಾಗಲೀ
ಹರಿಹರಪುರ ಶ್ರೀಧರ್್ರವರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಾಗಿ ಆ ಬಾಲ್ಯವನ್ನು ಯಾರು ಮರೆಯುವಂತಿಲ್ಲ .
ಈಗಲೂ ಕೂಡ ಊರಿಗೆ ಹೋದಾಗ , ಒಂದು ರೌಂಡ್ ಹೋಗಿ ಯಾವ ಯಾವ ಹಣ್ಣು ಬಿಟ್ಟಿದೆ ನೋಡಿ ತಿನ್ನದೇ ಬರುವುದೇ ಇಲ್ಲ ನಾನು . ಗುಡ್ಡದ ದಾಸವಾಳದ ಹಣ್ಣು , ಬ್ರಹ್ಮನೇರಳೆ , ಖರ್ಜೂರ , ಕಬ್ಲೆ , ಕಲ್ಲು ಸಂಪಿಗೆ , ನೇರಳೆ , ..........ಇನ್ನು ಹತ್ತು ಹಲವು . ದನ ಕಾಯುವುದು ಮಜಾ ವಾಗಿರುತ್ತೆ :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರೆಯದಿರುವ ಸದಾ ಹಸಿರಾಗಿರುವ ಬಾಲ್ಯ ಚಿರವಾಗಿ ನೆನಪಿನಲ್ಲಿರಲಿ, ಪ್ರತಿಕ್ರಿಯೆಗೆ ಧನ್ಯವಾದಗಳು ವಿನಯ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಂದ್ರಶೇಖರ್ ಅವರೇ..
ಬಾಲ್ಯನ ಎಷ್ಟ್ ನೆನಪಿಸಿಕೊಂಡರೂ ಸಾಲದೆನಿಸುತ್ತದೆ.. \

ನಾವೂ ಅಷ್ಟೇ ನಾಳೆಯಿಂದ ಶಾಲೆಗೆ ರಜೆ ಅಂದ್ರೆ..ಇವತ್ತೇ ಅಜ್ಜಿ ಊರಿಗೆ ಹೋಗಲು ರೆಡಿ..
ತುಂಬಾ ಮಜಾ ಇರ್ತಿತ್ತು.. ದಿನಪೂರ್ತಿ ಹೊರಗಡೇನೆ ಇರ್ತಿದ್ವಿ .. ಕಾಫಿ ತೋಟಕ್ಕ್ ಹೋಗೋದು.. ನೇರಳೆ ಮರ, ಗೇರು ಮರ ಹತ್ತಿ, ಮಾವಿನ ಮರ ಹತ್ತಿ ಹಣ್ಣು ಕಿತ್ತು ತಿನ್ನೋದು. ರಜೆ ಮುಗ್ಸಿ ವಾಪಸು ಹೋಗೋವಷ್ಟರಲ್ಲಿ ನಮ್ಮ ಬಟ್ಟೆ ನೋಡೋಕ್ಕಾಗುತಿರಲ್ಲಿಲ್ಲ. ಎಲ್ಲ ಹಣ್ಣಿನ ಕಲೆ.. :-)

ಅಜ್ಜನ ಜೊತೆಯಲ್ಲಿ ದನ ಕಾಯಲು ಹೋಗೋದು, ಅವುಗಳ ಮೈ ತೊಳೆಯೋದು.. ಕೆಲವು ಸಮಯ ಅವಗಳ ಪಕ್ಕದಲ್ಲೇ ಮಲ್ಗೋದು. ಇವೆಲ್ಲ ಎಷ್ಟ್ ಖುಷಿ ಕೊಡ್ತಿದ್ವು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡೂ, ತಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಶೋಭಾ ಅವರೇ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.