ದ್ವಿರುಕ್ತಿ ದ್ವಿರುಕ್ತಿ - ೫ : ಪುರಂದರದಾಸರ ಒಂದು ದಶಾವತಾರದ ಹಾಡು

0

[ ನನ್ನ ಬ್ಲಾಗಿನಿಂದ ಕದ್ದದ್ದು ]

ವೈಷ್ಣವ ಭಕ್ತಿ ಸಂಪ್ರದಾಯಗಳಲ್ಲಿ ವಿಷ್ಣುವಿನ ಅವತಾರಗಳನ್ನು ವಿಷ್ಣುವಿನಂತೆಯೇ ಪೂಜಿಸುವ ಪರಿಪಾಠವಿದೆಯಷ್ಟೆ. ಹರಿದಾಸ ಸಂಪ್ರದಾಯವು ಇದಕ್ಕೆ ಹೊರತಲ್ಲ. ದಾಸ ಸಾಹಿತ್ಯದಲ್ಲಿ ರಾಮ, ಕೃಷ್ಣ ಮುಂತಾದ ವಿಷ್ಣುವಿನ ಪ್ರಸಿದ್ಧ ಅವತಾರಗಳನ್ನು ಪ್ರತ್ಯೇಕವಾಗಿ ಕುರಿತಿರುವ ಕೃತಿಗಳು ಹೇರಳವಾಗಿ ಕಾಣಸಿಗುತ್ತವೆ. ಅವುಗಳೊಂದಿಗೆ ಪುರಾಣ ಪ್ರಸಿದ್ಧವಾದ ಹತ್ತು ಅವತಾರಗಳನ್ನು ಸಮಷ್ಟಿಯಾಗಿ ಹೊಗಳುವ ದಶಾವತಾರದ ಹಾಡುಗಳೂ ಅಲ್ಲಲ್ಲಿ ದೊರಕುತ್ತವೆ.  ಆರತಿಯ ಹಾಡಿನ ಚೌಕಟ್ಟಿನಲ್ಲಿ ಪುರಂದರ ದಾಸರು ಕಟ್ಟಿರುವ ಈ ಪದ್ಯವನ್ನು ಒಂದು ಉದಾಹರಣೆಯಾಗಿ ನೀಡಬಹುದು

ಪಂಕಜಮುಖಿಯರೆಲ್ಲರು ಬಂದು ಲಕ್ಷ್ಮೀ-
ವೇಂಕಟರಮಣಗೆ ಆರತಿ ಎತ್ತಿರೆ

ಮತ್ಸ್ಯಾವತಾರಗೆ ಮಂದರೋದ್ಧಾರಗೆ
ಅಚ್ಚರಿಯಿಂದ ಭೂಮಿ ತಂದವಗೆ
ಹೆಚ್ಚಾದ ಉಕ್ಕಿನ ಕಂಬದಿಂದಲಿ ಬಂದ
ಲಕ್ಷ್ಮೀನರಸಿಂಹಗೆ ಆರತಿ ಎತ್ತಿರೆ

ವಾಮನರೂಪಿಲಿ ದಾನ ಬೇಡಿದವಗೆ
ಪ್ರೇಮದಿ ಕೊಡಲಿಯ ಪಿಡಿದವಗೆ
ರಾಮಚಂದ್ರನಾಗಿ ದಶಶಿರನನು ಕೊಂದ
ಸ್ವಾಮಿ ಶ್ರೀಕೃಷ್ಣಗೆ ಆರತಿ ಎತ್ತಿರೆ

ಬತ್ತಲೆ ನಿಂದಗೆ ಬೌದ್ಧಾವತಾರಗೆ
ಉತ್ತಮ ಅಶ್ವವನೇರಿದಗೆ
ಭಕ್ತರ ಸಲಹುವ ಪುರಂದರ ವಿಠಲಗೆ
ಮುತ್ತೈದೆಯರು ಆರತಿ ಎತ್ತಿರೆ


ಗೌತಮಬುದ್ಧನು ವಿಷ್ಣುವಿನ ಬೌದ್ಧನೆಂಬ ಅವತಾರವೆಂಬುದು ಸಾಮಾನ್ಯ ಗ್ರಹಿಕೆ. ಅಂದಲ್ಲಿ ಆತ ಬತ್ತಲಾಗಿ ನಿಂತನೆ ಎಂಬ ಪ್ರಶ್ನೆಯನ್ನು ಬಗೆಹರಿಸಬೇಕಾಗುತ್ತದೆ. ಏಕೆಂದರೆ ದಿಗಂಬರತ್ವನನ್ನು ಸ್ವೀಕರಿಸಿದ್ದು ಜೈನ ತೀರ್ಥಂಕರರಲ್ಲದೆ ಬುದ್ಧನಾಗಲಿ ಬೌದ್ಧರಾಗಲಿ ಅಲ್ಲ ಎನ್ನುವುದು ಚಾರಿತ್ರಿಕ ಸಂಗತಿ. ಜೈನ ತೀರ್ಥಂಕರರ ಸಾಲಿನಲ್ಲಿ ಮೊದಲಿಗನಾದ ಆದಿಋಷಭದೇವನನ್ನು ವಿಷ್ಣುವಿನ ಅವತಾರವಾಗಿ ಎಣಿಸುವುದುಂಟು. ಅದುವೆ ಬೌದ್ಧಾವತಾರವೆಂದಲ್ಲಿ ಗೊಂದಲವು  ತಾತ್ಕಾಲಿಕವಾಗಿ ಪರಿಹಾರವಾದರೂ ಬೇರೆಡೆ ತಲೆ ಎತ್ತುವುದು.

'ಬತ್ತಲೆ ನಿಂದ ಬೌದ್ಧಾವತಾರ'ನ ಹಿಂದೆ ಭಾರತದ ಚರಿತ್ರೆಯ ಬಗೆಗೆನ ಹಾಗೂ ಭಾರತದ ಮತಧರ್ಮಗಳ ಪರಸ್ಪರ ಸಂಬಂಧಗಳ ಬಗೆಗಿನ ಹಲವಾರು ಪ್ರಶ್ನೆಗಳು ಅಡಗಿ ನಿಂತಿವೆ. ಅವು ಏನಾದರೂ ಇರಲಿ, ಪುರಂದರದಾಸರ ಈ ಹಾಡು ಒಂದು ಮುದ್ದಾದ ಭಕ್ತಿಗೀತೆ. ಅಂತಲೆ ಈ ಹಾಡೂ ಇದರ ಓರಗೆಯ ಇತರ ಹಾಡುಗಳೂ ಸಂಗ್ರಹಯೋಗ್ಯವಾಗಿವೆ.

ವೆಂ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.