ಭಾರತೀಯರು ವಾದಶೀಲರೆ?

0

ನಿನ್ನೆಯ ದಿವಸ ಅಮರ್ತ್ಯ ಸೆನ್‌ ಅವರ "ದಿ ಆರ್ಗ್ಯುಮೆಂಟಟಿವ್ ಇಂಡಿಯನ್" ಪುಸ್ತಕವನ್ನು ಕೊಂಡೆ.

ನಾನೂ ನನ್ನ ಅರ್ಧಾಂಗಿಯೂ ವಿಪಣಿ ವಿಹಾರಕ್ಕೆಂದು ಹೋಗಿದ್ದವು, ಅವಳ ಕ್ವಿಲ್ಟ್‌ಗಳನ್ನು ಹೊಲೆಯುವ ಹವ್ಯಾಸಕ್ಕೆ ಮೇವು ಒದಗಿಸುವ ಸಲುವಾಗಿ. ಅವಳು ಬಟ್ಟೆಯಂಗಡಿ ಹೊಕ್ಕರೆ ನಾನು ಹತ್ತಿರದ ಪುಸ್ತಕ ಮಳಿಗೆಯೊಳಗೆ ನುಸುಳಿದೆ. ಕ್ರೆಡಿಟ್ ಕಾರ್ಡಿನ ರಸೀತಿ ಬರುವುದನ್ನು ಕಾಯುತ್ತಿರುವಾಗ ಅಂಗಡಿಯವನು "ದಿ ಆರ್ಗ್ಯುಮೆಂಟಟಿವ್ ಇಂಡಿಯನ್ನೆ, ಇಂಡಿಯನ್ನರು ಬಹಳ ಆರ್ಗ್ಯೂ ಮಾಡುತ್ತಾರೆ ಅಂತಲೆ?" ಎಂದ. ನನಗೆ ಏನು ಹೇಳಲೂ ತೋರಲಿಲ್ಲ. ನನಗೇನು ಗೊತ್ತು? ಪುಸ್ತಕವನ್ನು ಕೊಂಡೂ ಮುಗಿದಿಲ್ಲ; ಒಂದೆರಡು ಹಾಳೆಗಳನ್ನು ತಿರುವಿದ್ದೆ ಅಷ್ಟೆ; ಉಪನಿಷತ್ತುಗಳ ಕಾಲದಿಂದಲೂ ನಮ್ಮಲ್ಲ್ಲಿ ನಡೆದುಬಂದಿರುವ ವಾದ ವಾಕ್ಯಾರ್ಥಗಳ ಸಂಪ್ರದಾಯವನ್ನು ರಸೀತಿ ಬರುವುದರ ಒಳಗಾಗಿ ಇವನಿಗೆ ಏನು ಹೇಳಲಿ? "ನಮ್ಮಲ್ಲಿ ಹಿಂದಿನಿಂದಲೂ ಡಿಬೇಟ್ ಮಾಡುವ ಪ್ರವೃತ್ತಿ ಹೆಚ್ಚು" ಅಂತಲೋ ಏನೋ ಗೊಣಗಿ ಬಂದೆ.

ಆದಷ್ಟು ಬೇಗ ಪುಸ್ತಕವನ್ನು ಓದಿ ಮುಗಿಸಬೇಕು. ಅದರಲ್ಲಿ ಭಾರತದಲ್ಲಿ ಬಳಕೆಯಲ್ಲಿರುವ ಪಂಚಾಂಗಗಳ ಬಗ್ಗೆ ಒಂದು ಲೇಖನವಿದ್ದಂತಿದೆ. ಬಹಳ ದಿನಗಳಿಂದ ನಾನು ಅದರ ಬಗ್ಗೆ ಬರೆಯಬೇಕೆಂದಿದ್ದೆ; ಸೆನ್ ಮಹಾಶಯರು ನನಗೆ ಆ ಕೆಲಸ ತಪ್ಪಿಸಿದಾರೆ.

ಪಂಚಾಗವೆಂದಾಗ ನೆನಪಿಗೆ ಬಂತು: ಇಂದು ಚೀಣೀ ಪಂಚಾಂಗದಲ್ಲಿ ವರ್ಷಾರಂಭ. ಚೀಣೀಯರಲ್ಲೂ ಚಾಂದ್ರಮಾನದ ಬಳಕೆಯಿದೆ, ಅಂದರೆ ಚಂದ್ರನನ್ನು ಹಿಡಿದು ತಿಂಗಳನ್ನು ಗಣಿಸುತ್ತಾರೆ. ಮಕರ ಸಂಕ್ರಮಣ ಕಳೆದು ಎರಡನೆಯ (ಅಧಿಕ ಮಾಸ ಬಂದಿದ್ದರೆ ಮೂರನೆಯ) ಅಮಾವಾಸ್ಯೆಯಿಂದ ಅವರ ವರ್ಷದ ಲೆಕ್ಕ ಶುರು. ನಿಮ್ಮ ಮಿತ್ರಕೂಟದಲ್ಲಿ ಚೀಣೀಯರು (ವಿಯೆಟ್ನಾಂ, ಕೊರಿಯಾದವರೂ) ಇದ್ದರೆ ಹಾರೈಸುವುದನ್ನು ಮರೆಯಬೇಡಿ.

[ ಮಕರ ಸಂಕ್ರಮಣ ಮೊನ್ನೆ ಮೊನ್ನೆ ತಾನೆ ಕಳೆಯಿತು, ಎಂದಿರ? ನಮ್ಮ ಜನವರಿ ೧೫ರ ಲೆಕ್ಕ ಆರ್ಯಭಟನ ಕಾಲದ್ದು. ಈ ನಡುವೆ ಸೂರ್ಯ ಡಿಸೆಂಬರ್ ೨೨ಕ್ಕೆ ಮಕರಕ್ಕೆ ಕಾಲಿಡುತ್ತಾನೆ ]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.