ದಾರಿ ಯಾವುದಯ್ಯಾ ವೈಕುಂಠಕೆ?

0

ನನ್ನ ಕೇಳಿದ್ರೆ ’ದಾರಿಯಾವುದಯ್ಯಾ, ವೈಕುಂಠಕೆ ದಾರಿತೋರಿಸಯ್ಯ’ ಅಂತ ಕೇಳ್ಬೇಕಾಗೇ ಇಲ್ಲ. ಯಾಕಂತಂದ್ರೆ, ಸಂಸ್ಕೃತದಲ್ಲೊಂದು ಮಾತೇ ಇದೆಯಲ್ಲ?

आकाशात् पतितम् तोयम् यथा गच्छति सागरम् ।
सर्वदेव नमस्कारः केशवम् प्रति गच्छति ॥

ಹಾಗಂದ್ರೆ,
ಎಲ್ಲಾದಾರಿಗಳೂ ಹೋಗೋದು ವೈಕುಂಠಕ್ಕೇನೇ. ಅಥ್ವಾ, ನಿಮಗೆ ಬೇಕಾದ್ರೆ ಎಲ್ಲಾದಾರಿಗಳೂಹೋಗೋದು ಕೈಲಾಸಕ್ಕೆ ಅಂತ ಇಟ್ಕೊಳ್ಳಿ. ತಪ್ಪೇನಿಲ್ಲ. ಅಥವಾ, ಬರೀ ಶಿವ ವಿಷ್ಣು ವಿಷಯ ಯಾಕೆ ಅನ್ನೋದಾದ್ರೆ ’ಎಲ್ಲಾ ದಾರಿಗಳೂ ಸ್ವರ್ಗಕ್ಕೇ ಹೋಗೋದು’ ಅಂತ ಹೇಳ್ಬಿಡಬಹುದು. ಯಾರಿಗೂ ಬೇಜಾರಾಗೋದಿಲ್ಲ. ಆದ್ರೆ ಈಗ ಡಿಸೆಂಬರ್ ತಿಂಗ್ಳಲ್ವಾ, ಅದಕ್ಕೇ ಇದನ್ನ ಸ್ವಲ್ಪ ಬದ್ಲಾಯ್ಸಿ ಹೇಳೋದು ಒಳ್ಳೇದು ಅನ್ಸತ್ತೆ. ’ಎಲ್ಲಾ ದಾರಿಗಳೂ ಹೋಗೋದು ಮೈಲಾಪುರಕ್ಕೆ’ ಅಂದ್ಬಿಡೋಣ. ಹೌದು. ಮೈಲಾಪುರ. ಅಂದ್ರೆ ಸ್ವರ್ಗ. ಸಂಗೀತ ಸ್ವರ್ಗ.

ಗೊತ್ತಾಯ್ತಲ್ಲ? ತಿಂಗಳು ಡಿಸೆಂಬರ್ ಆದ್ರೆ, ನೀವು ಹೋಗ್ಬೇಕಾದ್ದು ಮದರಾಸಿಗೆ. ಮದ್ರಾಸಿಗೆ ಹೋದರೆ, ನೀವು ಅಲ್ಲಿ ತೆರಳಬೇಕಾದ್ದು ಮೈಲಾಪುರಕ್ಕೆ. ಕರ್ನಾಟಕ ಸಂಗೀತ ರಸಿಕರಿಗೆಲ್ಲ ಮೈಲಾಪುರ ಅಂದ್ರೆ, ಡಿಸೆಂಬರ್ ತಿಂಗಳಿನ ಕಾಶಿ ಅಂತಲೇ ಅರ್ಥ. ನೀವು ಸಂಗೀತಪ್ರೇಮಿಯಾಗಿದ್ದು ಈ ತಿಂಗಳು ಅಲ್ಲಿಗೆ ಹೋದ್ರೆ, ಕಾಶೀಯಾತ್ರೆಗಿಂತ ಹೆಚ್ಚು ಫಲ ನಿಮಗೆ ದಕ್ಕುತ್ತೆ ನೋಡಿ.

ಚೆನ್ನೈ, ಸೆನ್ನೈ, ಚೆನ್ನಪಟ್ಟಣಂ, ಮೈಲಾಪುರ, ಮಯಿಲೈ ... ! ಹೆಸರಲ್ಲೇನಿದೇ ರೀ? ಶೇಕ್ಸ್ ಪಿಯರ್ ಹೇಳ್ಲಿಲ್ಲವೇ? ಗುಲಾಬೀನ ಯಾವ ಹೆಸರಲ್ಲಿ ಕರೆದರೆ ಏನು, ಅದರ ಪರಿಮಳಕ್ಕೆ ಕುಂದಾಗೋದಿಲ್ಲ ಅಂತ. ಏನ್ಬೇಕಾದ್ರೂ ಕರೀರಿ - ಆದ್ರೆ ಮದ್ರಾಸಿನಲ್ಲಿ ಡಿಸೆಂಬರ್ ನಲ್ಲಿ ಹರಡೋ ಸಂಗೀತದ ಪರಿಮಳ, ಅಲ್ಲಿರೋ ಕೂವಮ್ ಅಡಯಾರ್ ಗಳ ಕೊಳಕು ನಾತವನ್ನ ಮುಚ್ಚಿಹಾಕೋದ್ರಲ್ಲಿ ಅನುಮಾನವಿಲ್ಲ.

ಆಗಲೇ ಹದಿನೈದು ವರ್ಷ ಕಳೆದಿದೆ. ಆದರೂ ಇನ್ನೂ ನೆನ್ನೆಯೋ ಮೊನ್ನೆಯೋ ಅನ್ನಿಸ್ತಿದೆ. ಒಂದು ಸಭೆಯಿಂದ ಇನ್ನೊಂದು ಸಭೆಗೆ ಓಡೋದು. ಪಲ್ಲವನ್ ಬಸ್ ಹತ್ತೋದು. ಇಲ್ಲ ಸೈಕಲ್ ಅಥ್ವಾ ಲೂನಾ ಓಡಿಸ್ಕೊಂಡು. ಯಾವ್ದೂ ಇಲ್ದಿದ್ದ್ರೆ, ನಡೆದೇಬಿಡೋದು. ಮೈಲಾಪುರ್ ಫೈನ್ ಆರ್ಟ್ಸ್ ಇಂದ ಆಳ್ವಾರ್ ಪೇಟೆ. ಅಡಯಾರ್ ಅನಂತಪದ್ಮನಾಭಸ್ವಾಮಿ ದೇವಸ್ಥಾನದಿಂದ ತಿ.ನಗರ್ ವೆಂಕಟರಮಣ ದೇವಸ್ಥಾನ. ವಾಣಿಮಹಲ್ ಇಂದ ಕೃಷ್ಣ ಗಾನ ಸಭಾ. ಎಲ್ಲೆಲ್ಲಿಗೆ ಆಗತ್ತೋ ಎಲ್ಲ ಕಡೆಗೂ ಹೋಗಿದ್ದೇ ಹೋಗಿದ್ದು. ಈ ಸಂಗೀತದ ರಾಜ್ಯಕ್ಕೆ ರಾಜಧಾನಿ ಅಂದ್ರೆ ಅದು ಮೈಲಾಪುರವೇ ಸರಿ. ವೇಳೆಗೇನೂ ಕೊರತೆ ಇರಲಿಲ್ಲ ಬಿಡಿ,
ಕಾಲೇಜಲ್ಲಿರೋವಾಗ ಸಮಯಕ್ಕೆ ಕೊರತೆ ಎಲ್ಲಿರತ್ತೆ - ಕ್ಲಾಸ್ ಬಂಕ್ ಮಾಡ್ತಾ ಇದ್ರಾಯ್ತು ಅಷ್ಟೇನೇ! ನಿಜ ಹೇಳ್ಬೇಕು ಅಂದ್ರೆ ಎರಡು ಚಳಿಗಾಲ ನಾನು ಮದ್ರಾಸ್ .. ಅಲ್ಲ ಅಲ್ಲ ಚೆನ್ನೈ :) ನಲ್ಲಿದ್ದದ್ದು ನನ್ನ ಅದೃಷ್ಟವೇ ಸರಿ ಅಂತ ಭಾವಿಸ್ತೀನಿ.

ನಾನು ಮದ್ರಾಸಿಗೆ ಮೊದಲ್ನೇ ಸಲ ಕಾಲಿಟ್ಟ ಗಳಿಗೆ ನನ್ಗೆ ಮರೆಯೋದೇ ಇಲ್ಲ. ಜುಲೈ ಕೊನೇ ವಾರ. ನನ್ನ ಹುಟ್ಟುಹಬ್ಬದ ದಿನ ಅವತ್ತು. ನಮ್ಮೂರಿನ ಲೆಕ್ಕಕ್ಕೆ ನಡುಮಳೆಗಾಲ. ನಮ್ಮನೇ ರಸ್ತೆ ಅಂತೂ ಕೊಚ್ಚೆ ಮಯವಾಗಿ ಒಂತರಹಾ ನಡೆಯೋ ಬದಲು ಸ್ಕೇಟಿಂಗ್ ಅನುಭವ ತರ್ತಾ ಇತ್ತು. ಅಲ್ಲೀವರೆಗೆ ಸಮುದ್ರದಿಂದ ೩೦೦೦ ಅಡೀ ಎತ್ರದಲ್ಲಿರೋ ನಮ್ಮೂರನ್ನ ಬಿಟ್ಟು ಇನ್ನೊಂದೂರಲ್ಲಿ ಹೆಚ್ಚು ದಿನ ಇದ್ದು ಅಭ್ಯಾಸವಿಲ್ಲದ ನನಗೆ ಇನ್ನೆರಡು ವರ್ಷ ನನ್ನ ಮನೆ
ಅಂತ ಅಂದ್ಕೋಬೇಕಾಗಿದ್ದ ಈ ಸಮುದ್ರದ ಪಕ್ಕದ ಊರಿನ ಹವಾಮಾನ ಎಷ್ಟು ಕೆಟ್ಟದಾಗಿರಬಹುದು ಅನ್ನೋ ಹೊಳವು ಇರಲೇ ಇಲ್ಲ. ಸುಮ್ಸುಮ್ನೇ ನಮ್ಮೂರಲ್ಲ ಬಡವರ ಊಟಿ ಅಂತಿದ್ರೇ ಮತ್ತೆ? ಚೆನ್ನೈ ಸೆಂಟ್ರಲ್ ನಲ್ಲಿ ರೈಲಿಂದಿಳಿದು ಪ್ಲಾಟ್‍ಫಾರ್ಮ್ ಮೇಲೆ ಕಾಲಿಡ್ತಿದ್ದ ಹಾಗೇ ಒಂದು ಭಟ್ಟೀಗೆ ಬಂದ ಅನಿಸಿಕೆ. ಇಲ್ಲಿಗೆ ಯಾಕಾದ್ರೂ ಬಂದೆನಪ್ಪ ಅಂತ ಮನಸ್ಸಿನಲ್ಲಿ ಒಂದು ಮೂಲೆಯಲ್ಲೊಂದು ಯೋಚನೆ ಬರ್ತಾ ಇತ್ತು. ಜೊತೆಗೆ, ಉರಿಯೋ ಗಾಯಕ್ಕೆ ಉಪ್ಪು ಸುರಿದ ಹಾಗೆ, ಗಾಳಿಯಲ್ಲೆಲ್ಲ ಕೂವಂ ನ ದುರ್ಗಂಧ! ಇಲ್ಲಿ ಎರಡು ವರ್ಷ ಹೇಗಿರ್ತೀನೋ ಅನ್ನೋ ಯೋಚನೇಲೇ ಸ್ಟೇಷನ್ ಬಿಟ್ಟಿದ್ದಾಯ್ತು.

ಮೊದ್ಲನೇ ದಿನದ ಈ ಆಘಾತದಿಂದ ಅಂತೂ ಹೊರಬರೋದಕ್ಕೆ ಆಯ್ತು. ಆಕಡೆ ಕ್ಲಾಸ್ ಗಳೂ ಶುರುವಾದವು. ಹೊಸ ಗೆಳೆಯರು. ಕೇಳೋದಕ್ಕೆ ಚೆನ್ನೈ ವಾನುಲಿ ನಿಲಯಂ. ಮದ್ರಾಸ್ ರೇಡಿಯೋ ಸ್ಟೇಷನ್ ಬಹಳ ಒಳ್ಳೇದಿತ್ತು. ಬೇಕಾದಷ್ಟು ಸಂಗೀತ. ನಮ್ಮ ಆಕಾಶವಾಣಿ ಬೆಂಗಳೂರು ಭದ್ರಾವತಿ ಮೈಸೂರಿಗಿಂತಲೂ ತುಂಬಾ ಚೆನ್ನಿತ್ತು. ಮತ್ತೆ ಅದರ ಜೊತೇಲಿ ತಮಿಳು ಕಲಿಯೋ ಕೆಲ್ಸ ಬೇರೆ. ಕೆಲವೇ ವಾರಗಳಲ್ಲಿ ತಮಿಳು ಮಾತಾಡೋದೊಂದೇ ಅಲ್ಲ, ಓದಿ ಬರೆದು ಮಾಡೋದೂ ಕಲ್ತು ಬಿಟ್ಟೆ. ಇಲ್ಲ, ನಾನು ’ಮೂವತ್ತು ದಿನದಲ್ಲಿ ತಮಿಳು ಕಲಿ’ ಅನ್ನೋ ಪುಸ್ತಕ ತೊಗೊಳ್ಳಲೇ ಇಲ್ಲ. ನಿಜ ಹೇಳ್ಬೇಕಂದ್ರೆ ತಮಿಳು ಓದಿ ಬರೆದು ಮಾಡೋದು ನಾನಂದುಕೊಂಡಿದ್ದಕ್ಕಿಂತ ಸುಲಭವಾಗಿತ್ತು. ಮೌಂಟ್ ರೋಡ .. ಅಲ್ಲಲ್ಲ ಅಣ್ಣಾ ಸಾಲೈನ ಎರಡೂ ಕಡೆ ನೂರಾರು ಸಿನೆಮಾ ಪೋಸ್ಟರ್ ಗಳು ಇರ್ತಿದ್ವಲ್ಲ? ಸುಮಾರು ಎಲ್ಲ ಪೋಸ್ಟರ್ಗಳೂ, ಬೋರ್ಡ್ಗಳೂ ಇಂಗ್ಲಿಷ್ ಮತ್ತೆ ತಮಿಳು ಎರಡೂ ಲಿಪಿಯಲ್ಲಿರ್ತಿದ್ದವು, ಪಲ್ಲವನ್ ಬಸ್ ಗಳನ್ನ ಬಿಟ್ಟು. ನಟ ನಟಿಯರ ಹೆಸರುಗಳಂತೂ ನನ್ಗೆ ಗೊತ್ತೇ ಇತ್ತಲ್ಲ.ಮತ್ತೆ ರೆಸ್ಟುರಾಗಳಲ್ಲಿನ ಮೆನು ಕಾರ್ಡ್ ಕೂಡ ಉಪಯೋಗಕ್ಕೆ ಬಂತು. ಯಾಕಂದ್ರೆ ಅಲ್ಲಿರ್ತಿದ್ದ ಇಡ್ಲಿ ದೋಸೆ ಚಟ್ನಿ ಸಾಂಬಾರ್ ಎಲ್ಲ ನನಗೆ ಗೊತ್ತಿರೋವೇ. ಅಂತೂ ಇಂತೂ ಪ್ಯಾಟರ್ನ್ ಮ್ಯಾಚಿಂಗ್ ಮಾಡ್ತಾನೇ ಓದಿ ಬರ್ಯೋದು ಕಲಿತುಬಿಟ್ಟೆ. ಕೆಲವು ವಾರದ ನಂತರ ತೇನಾಂಪೇಟೆಯ ಥಿಯೇಟರ್ ಒಂದರಲ್ಲಿ ಸಿನೆಮಾಗೆ ಹೋದಾಗ ಅಲ್ಲಿ ಬರೋ ಕ್ರೆಡಿಟ್ಗಳನ್ನ ನಾನು ಓದೋದು ನೋಡಿ ನನ್ನ ಅಣ್ಣ ಆಶ್ಚರ್ಯದಿಂದ ಸುಮಾರು ಕುರ್ಚಿಯಿಂದಲೇ ಬಿದ್ಬಿಟ್ಟಿದ್ದ!

ಕೆಲವೇ ತಿಂಗಳಲ್ಲಿ ಮದ್ರಾಸ್ನಲ್ಲಿ ಬಹಳ ಒಳ್ಳೇ ಸಂಗೀತ ಸಿಕ್ಕುತ್ತೆ ಅನ್ನೋದು ನನ್ಗೆ ತಿಳಿದು ಹೋಯ್ತು. ಅಲ್ಲೀವರೆಗೆ ನನಗೆ ’ಮ್ಯೂಸಿಕ್ ಸೀಸನ್’ ಅನ್ನೋದೊಂದಿದೆ ಅಂತ ಗೊತ್ಟೇ ಇರಲಿಲ್ಲ. ಪ್ರತಿ ವರ್ಷ ಡಿಸೆಂಬರ್ ಜನವರಿಯಲ್ಲಿ ಮದ್ರಾಸಿನಲ್ಲಿ ನೂರಾರು ಕಡೆ ಸಭೆಗಳು ಸಂಗೀತ ಕಚೇರಿಗಳನ್ನ ಏರ್ಪಡಿಸತ್ವೆ. ನಿಜ ಹೇಳ್ಬೇಕಂದ್ರೆ, ನಿಮಗೆ ಹೋಗ್ಬೇಕು ಅನ್ನಿಸೋ ಎಲ್ಲ ಕಾರ್ಯಕ್ರಮಗಳನ್ನ ನೋಡ್ಬೇಕಂದ್ರೆ ನೀವು ಸರ್ವಾಂತರ್ಯಾಮಿ ಆಗ್ಬೇಕಷ್ಟೇ! ಆಷ್ಟು ಕಚೇರಿಗಳಿರತ್ವೆ. ಈ ಸಂಗೀತದ ಕಾಲಕ್ಕೇನೇ ಅನ್ನೋ ಹಾಗೆ, ಯಾವಾಗಲೂ ಬೆವರಿಳಿಯೋ ಮದ್ರಾಸಿನ ಹವಾಮಾನವೂ ಸ್ವಲ್ಪ ಉತ್ತಮವಾಗಿರತ್ತೆ. ನಿಮಗ ಆಸಕ್ತಿ, ಮತ್ತೆ ಬೇಕಾದಷ್ಟು ಹೊತ್ತು ಇದ್ದರೆ ನಿಮ್ಮ ಮನಸ್ಸು ತಣಿಯೋ ಅಷ್ಟು ಸಂಗೀತ ಕೇಳ್ಬಿಡಬಹುದು ನೀವು. ನಿಜ ಹೇಳ್ಬೇಕಂದ್ರೆ ಸಂಗೀತ ಕೇಳೋ ನನ್ನ ಹುಚ್ಚು ಹೆಚ್ಚಿದ್ದು ಇಂತಾ ಎರಡು ’ಸಂಗೀತ ಕಾಲ’ಗಳನ್ನ ಕಳೆದ ಮೇಲೇನೆ.

ನಾನು ಮದ್ರಾಸಲ್ಲಿದ್ದಿದ್ದು ಎರಡು ವರ್ಷಕ್ಕಿಂತ ಕಡಿಮೆ. ಆಮೇಲೆ? ಮುಂದೆ ಹೋಗ್ಲೇಬೇಕಾಯ್ತು ಮತ್ತೊಂದೂರಿಗೆ. ಆಮೇಲೆ ಇಷ್ಟು ವರ್ಷದಲ್ಲಿ ಒಂದು ಸಲವೂ ನನಗೆ ’ಸೀಸನ್’ ನಲ್ಲಿ ಮದ್ರಾಸಿಗೆ ಭೇಟಿ ಕೊಡೋದಕ್ಕಾಗಿಲ್ಲ. ಆದ್ರೆ ನೆನಪುಗಳಿಗೇನು? ಸಾಲುಸಾಲಾಗಿ ಮೆರವಣಿಗೆ ಬರೋದ್ರಿಂದ ತಾನೆ ಅವಕ್ಕೆ ನೆನಪುಗಳು
ಅನ್ನೋದು? ಬರ್ತಾನೇ ಇರತ್ವೆ. ಒಂದಲ್ಲ ಒಂದು ದಿವಸ ನಾನು ಹೋಗ್ತೀನಿ. ಪೂರಾ ತಿಂಗಳು ಯಾವ ಯೋಚನೆ ಮಾಡ್ದೆ ಸಂಗೀತ ಕೇಳ್ತೀನಿ. ಈ ವರ್ಷ ಆಗೋದಿಲ್ಲ ಗೊತ್ತು. ಮುಂದಿನ ವರ್ಷ ಆಗೋದೂ ಅನುಮಾನವೇ. ನಿಜ ಹೇಳ್ಬೇಕಂದ್ರೆ ಇನ್ನು ಹತ್ತುವರ್ಷ ಆದ್ರೂ ಆಗೋದು ಅನುಮಾನವೇ. ಮಕ್ಕಳು ದೊಡ್ಡವರಾಗಿ, ನಾನು ಕೆಲಸ ಮಾಡೋದು ನಿಲ್ಸೋ ತನಕವೂ ಆಗ್ದಿರಬಹ್ದು. ಯಾರಿಗ್ಗೊತ್ತು?

ಆದ್ರೆ ನನ್ನಾಸೆ ನಿಜವಾಗೋದಕ್ಕೆ ಕಾಯೋದಕ್ಕೆ ನಾನು ತಯಾರು. ಆಸೆಗಳೆಲ್ಲಾ ಕುದುರೆಗಳಾಗಿದ್ರೆ, ಒಂದಲ್ಲ ಒಂದು ದಿನ ಅವು ನನ್ನನ್ನ ಸ್ವರ್ಗಕ್ಕೇ
ಕರ್ಕೊಂಡು ಹೋಗತ್ವೆ. ಹೌದು. ಸ್ವರ್ಗಕ್ಕೇ. ಸಂಗೀತದ ಸ್ವರ್ಗಕ್ಕೆ. ಮೈಲಾಪುರಕ್ಕೆ.

-ಹಂಸಾನಂದಿ

(ಇದು ನಾನು ಕಳೆದ ವರ್ಷ ಇಂಗ್ಲಿಷ್ ನಲ್ಲಿ ಬರೆದಿದ್ದ 'All Roads Lead to Vaikuntha' ಅನ್ನುವ ಬರಹದ ಕನ್ನಡ ರೂಪಾಂತರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಅಂತೂ ಇಂತೂ ಪ್ಯಾಟರ್ನ್ ಮ್ಯಾಚಿಂಗ್ ಮಾಡ್ತಾನೇ ಓದಿ ಬರ್ಯೋದು
ಭಾಷೆ ಕಲಿಯೋದಕ್ಕೆ ಈ ತಂತ್ರವೇ ಸುಲಭ :)

*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ಇದೇ ರೀತಿಯ ಪ್ಯಾಟರ್ನ್ ಮ್ಯಾಚಿಂಗ್ ಮಾಡಿ ತಮಿಳು ಕಲಿಯೋದಿಕ್ಕೆ ಸತತ ಎಂಟು ವರ್ಷಗಳಿಂದ ಪ್ರಯತ್ನ ಮಾಡ್ತಾ ಇದೀನಿ ಆದ್ರೆ ಆಗ್ತಾನೆ ಇಲ್ಲ. :-)

manjunath s reddy

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.