ಜೀವನವೆಂಬ ವನ

5

ಸಾವು ಬಳಿ ಬಂದಿರಲು ಯಾರು ಯಾರನು ಕಾಯುವರು?

ಹಗ್ಗ ಹರಿದಿರಲು ಬಿಂದಿಗೆಯ ಇನ್ಯಾರು ಹಿಡಿಯುವರು?

ಈ ಜಗದ ಬಾಳುವೆಯು ಅಡವಿಯ ಮರಗಳ ಸಾಟಿ

ಕಡಿಯುವುದು ಚಿಗುರುವುದು ನಡೆಯುತಲೆ ಇರುವುದು

 

 

ಸಂಸ್ಕೃತ ಮೂಲ - (ಸ್ವಪ್ನವಾಸವದತ್ತ  ನಾಟಕದ ಆರನೇ ಅಂಕದಿಂದ)

 

ಕಃ ಕಂ ಶಕ್ತೋ ರಕ್ಷಿತುಂ ಮೃತ್ಯುಕಾಲೇ

ರಜ್ಜುಚ್ಛೇದೇ ಕೇ ಘಟಂ ಧಾರಯಂತಿ |

ಏವಂ ಲೋಕಸ್ತುಲ್ಯಧರ್ಮೋ ವನಾನಾಂ

ಕಾಲೇ ಕಾಲೇ ಛಿದ್ಯತೇ ರುಹ್ಯತೇ ಚ ||

 

-ಹಂಸಾನಂದಿ

 

(ಇದೇ ತಾನೇ ಶ್ರೀ ಹರಿಹರೇಶ್ವರ ಅವರ ಸಾವಿನ ಸುದ್ದಿ ಕೇಳಿ ಬಹಳ ಬೇಸರವಾಯಿತು. ಕ್ಯಾಲಿಫೋರ್ನಿಯಾದಲ್ಲಿ ಹಲವಾರು ವರ್ಷಗಳಿದ್ದು, ಈಚೆಗೆ ಮೈಸೂರು ವಾಸಿಯಾಗಿದ್ದ ಹರಿ ಅವರು ಒಳ್ಳೇ ವಿದ್ವಾಂಸ, ಮಾತುಗಾರ, ಬರಹಗಾರ, ಅನುವಾದಕ ಇವೆಲ್ಲಕ್ಕೂ ಹೆಚ್ಚಾಗಿ ಒಬ್ಬ ಸಹೃದಯಿಯಾಗಿದ್ದವರು.

ಹರಿಯವರ ಆತ್ಮಕ್ಕೆ ಶಾಂತಿ ಇರಲಿ, ಮತ್ತೆ ಅವರ ಹತ್ತಿರದವರಿಗೆ ಈ ನೋವನ್ನು ತಡೆವ ಶಕ್ತಿ ದೇವರು ಕೊಡಲೆಂಬುದೊಂದೇ ನನ್ನ ಕೋರಿಕೆ.

http://thatskannada.oneindia.in/news/2010/07/22/shikaripura-harihareshwa... )

 

 

 

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪದ್ಯದ ಪೂರ್ವಾರ್ಧವನ್ನು ಪರಾರ್ಧಕ್ಕೆ ಸೇರಿಸಿರುವ ರಜ್ಜುವೂ ಬಹಳ ನಾಜೂಕಿನದು ಎನಿಸುತ್ತೆ :) ನಾನು ಸ್ವಪ್ನವಾಸವದತ್ತವನ್ನು ಕಾಲೇಜಿನಲ್ಲಿ ಓದಿದ್ದೇನೆಂದು ಪ್ರತೀತಿ ಆದರೆ ನಿಜವಾದ ಅರ್ಥದಲ್ಲಿ ಓದಿಲ್ಲ, ಆದರೂ ಒಂದು ಸಾಹಸ ಮಾಡುತ್ತೇನೆ: ಬಹುಶಃ ಇಲ್ಲಿ ಘಟವೆಂದದ್ದು ಬಿಂದಿಗೆಯನ್ನಲ್ಲ, ಮರದ ದೇಹವನ್ನು. ಮರವನ್ನು ಕಡೆಯುತ್ತಾರೆ ಎನ್ನಿ, ಆಗ ಮರಕ್ಕೆ ಹಗ್ಗಗಳನ್ನು ಕಟ್ಟಿ ಆಸರೆಯಾಗಿ ನಿಲ್ಲಿಸಿ ಕಡೆಯಲು ತೊಡಗುತ್ತಾರೆ. ಕಾಂಡವನ್ನು ಪೂರ್ತಿ ಕಡೆದ ನಂತರ, ಎಲ್ಲರೂ ಒಂದು ಬದಿಗೆ ಸರಿದು ಹಗ್ಗವನ್ನು ಕಡೆದರೆ ಮರವು ಯಾರಿಗೂ ಅಪಾಯವಾಗದಂತೆ ಬೀಳುತ್ತದೆ. ಆಗ ಆ ಮರದ ಅಕ್ಕಪಕ್ಕದ ಮರಗಳು ಏನು ಮಾಡಬಲ್ಲವು? ಅಂತಲೆ 'ಕಃ ಕಂ ಶಕ್ತೋ ರಕ್ಷಿತುಂ ಮೃತ್ಯುಕಾಲೇ? ಕಾಲೇ ಕಾಲೇ ಛಿದ್ಯತೇ ರುಹ್ಯತೇ ಚ '. ಇದು ಮರಗಳು ಆಡಿಕೊಳ್ಳುವ ಮಾತು. ಆಗಲೆ 'ಏವಂ' ಸಾರ್ಥಕವಾಗುತ್ತೆ. ಏನಂತೀರಿ? - ವೆಂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಂಕಟೇಶಮೂರ್ತಿ ಅವರೆ, ನೀವು ಬಿಡಿಸಿ ಹೇಳಿದ ಅರ್ಥದಿಂದ ಪದ್ಯದ ಸೊಗಸು ಇನ್ನೂ ಹೆಚ್ಚಿದೆ. ನಾನೂ ಸ್ವಪ್ನವಾಸವದತ್ತವನ್ನು ಅಲ್ಲಲ್ಲಿ ಓದಿರುವೆನೇ ಹೊರತು ಪೂರ್ಣವಾಗಿ ಓದಿಲ್ಲ. ಎಸ್.ವಿ.ಪರಮೇಶ್ವರ ಭಟ್ಟರ ಸಂಪುಟ ಈಗ ಕಣ್ಣ ಮುಂದೇ ಇದೆ! ಈ ಪದ್ಯಕ್ಕೆ ಹೇಗೆ ಅರ್ಥೈಸಿದ್ದಾರೆಂದು ನೋಡುತ್ತೇನೆ. ನನಗೆ ಅನುವಾದಿಸುವಾಗ ಇನ್ನೂ ಒಂದು ವಿಷಯವೂ ಹೊಳೆದಿತ್ತು - ರಜ್ಜು ಅಂದರೆ ಸ್ಪೈನಲ್ ಕಾರ್ಡ್ ಅಲ್ಲವೆ? ಹಾಗೇ ಘಟ ಅನ್ನುವುದಕ್ಕೆ ಜೀವ ಅನ್ನೋ ಅರ್ಥವೂ ಒಂದಿದೆಯಲ್ಲ? ಅದರ ಶ್ಲೇಷವೂ ಏನಾದರೂ ಇರಬಹುದೇ ಎಂದೆನಿಸಿತ್ತು. ಯೋಚನೆ ಅಷ್ಟೇ. ಖಾತ್ರಿಯಾಗಿ ತಿಳಿದಿಲ್ಲ. ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಸ್.ವಿ.ಪರಮೇಶ್ವರ ಭಟ್ಟರ ಮತ್ತೆ ಸಾ.ಶಿ.ಮರುಳಯ್ಯ ಅವರ ಎರಡೂ ಅನುವಾದಗಳನ್ನೂ ಓದಿದೆ. ಎರಡರಲ್ಲೂ ಘಟ ಕ್ಕೆ ಮಡಿಕೆ ಎನ್ನುವರ್ಥವೇ ಬರುವಂತಿದೆ. ಅವುಗಳನ್ನು ಮತ್ತೆ ನಂತರ ಟೈಪಿಸುತ್ತೇನೆ. ಎಸ್ ವಿ ಪರಮೇಶ್ವರ ಭಟ್ಟರ ಅನುವಾದ ನನಗೆ ತುಂಬಾ ಹಿಡಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.