ವಾರದ ಕೊನೆಯಲ್ಲಿ ನನ್ನ ಓದು

0

ಒಂದು ಕಾಲವಿತ್ತು. ಏನಾದರೂ ಓದಬೇಕು ಅಂತ ಕುಳಿತರೆ ಹಾಗೇ ಗಂಟೆಗಟ್ಟಲೆ ಕೂತು ಮುಗಿಸಿಬಿಡ್ತಿದ್ದೆ. ಅದು ಯಾವ ಜವಾಬ್ದಾರಿ ಇಲ್ಲದ ಕಾಲ ಅಂತ ಹೇಳ್ಬೇಕಾಗಿಲ್ಲ ಮತ್ತೆ. ಆದ್ರೆ, ಎಲ್ಲ ದಿವಸಗಳೂ ಒಂದೇ ತರಹ ಇರೋದಿಲ್ಲ ನೋಡಿ. ಹಾಗಿದ್ರೆ ಚೆನ್ನಾಗೂ ಇರೋದಿಲ್ಲ. ಉದಾಹರಣೆಗೆ ಊಹೆ ಮಾಡ್ಕೊಳಿ - ಚಿಕ್ಕಂದಿನಲ್ಲಿ ಯಾರೋ ಯಾವತ್ತೋ ನಿಮಗೆ ಕೊಟ್ಟಿದ್ದ ಹೊಸ ಬಟ್ಟೆಯೋ, ಪುಸ್ತಕವೋ ಈಗಲೂ ನೆನಪಿರುತ್ತೆ. ಆದ್ರೆ ಅದೇ ತರ್ಹ ನೀವೇ ಸಾವಿರ ಹೊಸ ಬಟ್ಟೆ ತೊಗೊಂಡ್ರೂ ಅಂತಹ ಸಂತೋಷ ಆಗೋದಿಲ್ಲ. ಅಂದ್ರೆ, ಅಪರೂಪಕ್ಕೆ ಸಿಕ್ಕಾಗಲೇ ನಮಗೆ ಅದರ ಬೆಲೆ ತಿಳಿಯೋದು. ಒಂದು ಸುಭಾಷಿತವೇ ಇದೆಯಲ್ಲ, ’ಅತಿಪರಿಚಯಾದವಜ್ಞಾ..’ ಅಂತ - ಪರಿಚಯ ಹೆಚ್ಚಾದ್ರೆ ತಾತ್ಸಾರವೇ ಪ್ರಾಪ್ತಿ. ಮಲೆನಾಡಿನ ಬೇಡಹೆಂಗಸು, ಒಲೆ ಉರಿಸೋದೂ ಗಂಧದ ಕಟ್ಟಿಗೇಲಿ ಅಂತ ಅದರ ಸಾರಾಂಶ.  ಆ ದೃಷ್ಟೀಲಿ ನೋಡಿದ್ರೆ, ಹೀಗೆ ಅಪರೂಪಕ್ಕೆ ಅನ್ನೋಹಾಗೆ ಒಂದೊಂದು ಪುಸ್ತಕ ಓದಿದರೂ, ಅಂತೂ ಓದಿ ಮುಗಿಸಿದೆನಲ್ಲಾ ಅನ್ನೋ ಸಂತೋಷವೇ ಇರುತ್ತೆ. ಒಟ್ಟಲ್ಲಿ ಈಗಂತೂ ನನಗೆ ಒಂದು ಪುಸ್ತಕ ಓದಿ ಮುಗಿಸೋದು ಅನ್ನೋದು ಎಷ್ಟೋ ದಿವಸಗಳ, ಇಲ್ಲವೇ ವಾರಗಳ ಯೋಜನೆ ಆಗಿಹೋಗುತ್ತೆ.

ಒಂದಷ್ಟು ದಿನದ ಹಿಂದೆ ಶಂಕರಭಟ್ಟರ ಕನ್ನಡ ನುಡಿಯ ಬಗ್ಗೆಯ ಪುಸ್ತಕಗಳೊಂದಷ್ಟನ್ನು ಎರವಲು ಪಡೆದೆ. ಸುಭಾಷಿತ ಗೊತ್ತೇ ಇದೆಯಲ್ಲ - ’ಪುಸ್ತಕಂ ವನಿತಾ ವಿತ್ತಂ ...’ ಅಂತ - ಹಾಗಾಗಬಾರದು, ಹಾಗಾಗೋದಿಲ್ಲ ಅಂತ ಮೊದಲೇ ಅವರಿಗೆ ಭರವಸೆ ಕೊಟ್ಟಿದ್ರಿಂದ ಅದನ್ನ ಉಳಿಸಿಕೊಳ್ಳೋ ಜವಾಬ್ದಾರಿ ಇತ್ತು ಅನ್ನಿ. ಒಂದೊಂದಾಗಿ ಓದ್ತಾ ಹೋದೆ. ಆದರೂ, ಓದಬೇಕು ಅನ್ನೋ ಪುಸ್ತಕಗಳ ಪಟ್ಟಿ ಒಳ್ಳೇ ಹನುಮಂತನ ಬಾಲದ ತರಹ ಬೆಳೀತಲೇ ಇದೆ. ಇದರ ಜೊತೆಗೆ ಗೂಗಲ್ ಬುಕ್ಸನಲ್ಲಿ, ಮತ್ತೆ ಡಿಎಲ್‍ಐ ನಲ್ಲಿ ಇಳಿಸಿಕೊಂಡಿದ್ದ ಪುಸ್ತಕಗಳೋ ನೂರಾರಿವೆ. ಇದು ಸಾಲದು ಅಂತ ಕಳೆದವಾರ ಬಾವಮೈದನ ಮನೆಗೆ ಹೋದರೆ, ಅವನ ಕಂಪ್ಯೂಟರಿನಲ್ಲಿ ಇನ್ನೂ ಹಲವು ನೂರು ಪುಸ್ತಕಗಳು ಸಿಗಬೇಕೇ? ಹಣಗಳಿಸೋದಕ್ಕೆ ದುರಾಸೆ ಪಡಬಾರದು ಅಂತಾರೆ. ಪುಸ್ತಕಗಳಿಸೋದಕ್ಕೆ ದುರಾಸೆ ಅಂತ ಯಾರೂ ಹೇಳಿಲ್ಲ. ಅಲ್ಲದೆ, ಇವೇನು ಕಪಾಟಿನಲ್ಲಿ ಇಟ್ಟುಕೊಳ್ಳೋಕೆ ಜಾಗ ಇಲ್ಲ ಅನ್ನೋ ಪುಸ್ತಕಗಳಲ್ವಲ್ಲ. ಒಟ್ಟಲ್ಲಿ ಒಂತರಹ ದುರಾಸೆಯಿಂದಲೇ ಅದನ್ನೂ ಎಲ್ಲಾ ಥಂಬ್‍ಡ್ರೈವಿನಲ್ಲಿ  ತಂದಿದ್ದಾಯ್ತು. 

ಆದ್ರೂ, ಯಾವುದು ಓದೋದು ಅನ್ನೋದೇ ತಿಳೀದೇ ಹೋಗ್ತಿತ್ತು. ಇದೇ ವಿಷಯದ ಬಗ್ಗೆ ಟ್ವಿಟ್ಟರಿನಲ್ಲಿ ಒಂದು ಟ್ವೀಟ್ ಹಾಕಿದ್ದೆ. ಒಬ್ಬರು ಗೆಳೆಯರು ಒಂದು ಸಲಹೆ ಕೊಟ್ರು - ನಿಮ್ಮ ಹತ್ತಿರ ಇರೋ ಪುಸ್ತಕಗಳಲ್ಲಿ ಸಣ್ಣದಾಗಿರೋ ಒಂದು ಪುಸ್ತಕವನ್ನ ಆಯ್ಕೊಳಿ - ಅದನ್ನ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಕೂತು ಓದಿ. ದೊಡ್ಡ ಪುಸ್ತಕಗಳ ಬಗ್ಗೆ ಎಷ್ಟು ಪ್ರೀತಿ ಇರ್ಲಿ ಪರವಾಗಿಲ್ಲ, ಆದ್ರೆ ಅವನ್ನ ಸದ್ಯಕ್ಕೆ ಪಕ್ಕಕ್ಕಿಡಿ ಅಂತ. ಸರಿ. ಅದೂ ನಿಜ ಅನ್ನಿಸ್ತು. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಕೂತು ಓದೋದಕ್ಕೆ ಅಂದ್ರೆ, ಹಳೇ ಮಾದರಿ ಕಾಗದದ ಮೇಲೆ ಅಚ್ಚಾಗಿರೋ ಪುಸ್ತಕಗಳೇ ಸರಿ. ಇ-ಪುಸ್ತಕಗಳಲ್ಲ. ಯಾಕಂದ್ರೆ ನನ್ನ ಹತ್ತಿರ ಕಿಂಡಲ್ ಆಗ್ಲೀ, ಅಥ್ವಾ ಇನ್ನು ಯಾವ್ದೋ ಇ-ಬುಕ್ ರೀಡರ್ ಇಲ್ಲ. ಲ್ಯಾಪ್ಟಾಪ್ ಕೂಡ ಅಂತಹ ಹಗುರವಾಗಿಲ್ಲ. ಅದಕ್ಕೇ ಹೊಸದಾಗಿ ಸಿಕ್ಕ ಎರಡು ಪುಸ್ತಕಗಳನ್ನ ಆಯ್ಕೊಂಡೆ. ಎರಡೂ ಡಾ.ಕೆ.ಎನ್.ಗಣೇಶಯ್ಯ ಅವರ್ದು.

ಕೆ.ಎನ್.ಗಣೇಶಯ್ಯ ಅವರ ಕೆಲವು ಕಥೆಗಳನ್ನ  ಅಲ್ಲಿ-ಇಲ್ಲಿ ಓದಿದ್ದೆ. ಈಗ ಓದಿದ್ದು ’ಪದ್ಮಪಾಣಿ’ ಅನ್ನೋ ಸಣ್ಣಕತೆಗಳ ಸಂಕಲನ, ಮತ್ತೆ ’ಕಪಿಲಿಪಿಸಾರ’ ಅನ್ನುವ ಒಂದು ಕಾದಂಬರಿ. ಗಣೇಶಯ್ಯ ಅವರು ಚಾರಿತ್ರಿಕ ಸಂಗತಿಗಳ ಬಗ್ಗೆ ಹೊಸ ನೋಟ ಕೊಡುವ ಒಂದು ಶೈಲಿಯಲ್ಲಿ ಚೆನ್ನಾಗಿ ಬರೀತಾರೆ. ಕಪಿಲಿಪಿಸಾರದ ಹಿಂದಿನ ಪುಟದಲ್ಲಿ ’ಈ ರೀತಿಯ ಥ್ರಿಲ್ಲರ್’ ಗಳನ್ನ ಬರೆದವರಲ್ಲಿ ಇವರೇ ಮೊದಲು ಅಂತ ಹೇಳ್ತಾರೆ - ಆದ್ರೆ ಮೂವತ್ತು ವರ್ಷಗಳ ಹಿಂದೆಯೇ ’ಮನು’ (ಪಿ.ಎನ್.ರಂಗನ್) ಅವರು ಇಂತಹ ಶೈಲಿಯಲ್ಲಿ ಬರೆದಿದ್ದರು ಅಂತ ನನಗನ್ನಿಸುತ್ತೆ. ಅದಿರಲಿ. ಓದಿಸಿಕೊಂಡು ಹೋಗುವ ಕಥೆಗಳು. ಕಪಿಲಿಪಿಸಾರ ಸ್ವಲ್ಪ ಮೊದಮೊದಲು ಏನಾಗುತ್ತಿದೆ ಅಂತ ಅರ್ಥವಾಗೋದು ತೊಡಕು ಅನ್ನಿಸ್ತು. ಆದರೆ, ಇದು ಧಾರಾವಾಹಿಯಾಗಿ ಬಂದದ್ದರಿಂದ ಆ ರೀತಿಯಾಗಿ ಬರೆದಿರಬಹುದೇನೋ ಅಂತಲೂ ಅನ್ನಿಸ್ತು. ಕಥೆ ಏನೂ ಎಂತ ಅಂತ ನಾನು ಹೇಳೋದಿಲ್ಲ. ಯಾಕಂದ್ರೆ, ನೀವು ಓದಬೇಕಲ್ಲ :) ಆದರೆ ಕುತೂಹಲ ಹುಟ್ಟಿಸಿಕೊಂಡು ಸರಾಗವಾಗಿ ಓದಿಸಿಕೊಂಡವು ಅಂತ ಮಾತ್ರ ಹೇಳುವೆ. ಅದಕ್ಕೂ ಹೆಚ್ಚಾಗಿ, ಒಂದು ವೀಕೆಂಡಿನಲ್ಲೇ ಎರಡು ಪುಸ್ತಕಗಳನ್ನ ( ಸಣ್ಣದಾಗಿದ್ರೆ ಏನ್ ಸ್ವಾಮೀ! ಪುಸ್ತಕ ಪುಸ್ತಕವೇ!) ಓದಿದ ಖುಶಿಯೂ ಆಗಿ, ಇದೆಲ್ಲ ಹರಟುತ್ತಾ ಹೋದೆ ನೋಡಿ!

-ಹಂಸಾನಂದಿ

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಿಯ ಹಂಸಾನಂದಿಯವರೇ,
ತಮ್ಮ ಹಾಗೆ ತುಂಬಾ busy ಆಗಿರುವವರಿಗೆ ಓದುವುದಕ್ಕೆ ವಾರಾಂತ್ಯದಲ್ಲಿ ಮಾತ್ರ ಸಮಯ ಸಿಗುತ್ತದೆ. ಆದರೂ ಸಿಕ್ಕ ಸಮಯದಲ್ಲಿ ಓದಿಮುಗಿಸುತ್ತೀರಲ್ಲ ಅದು ಖುಶಿ ಕೊಡುವಂತಹದು. ನನಗೆ ಎಲ್ಲಾ ದಿನಗಳೂ ರಜೆಯ ದಿನಗಳೇ ಆದ ಕಾರಣ ಏನಾದರೂ ಒಂದು ಓದುತ್ತಲೇ ಇರುವುದು ಹವ್ಯಾಸವಾಗಿ ಹೋಗಿದೆ. ಅಂತೂ ಎಲ್ಲರಿಗೂ ಓದುವ ಹವ್ಯಾಸ ಬೆಳೆಸಿಕೊಳ್ಳಲು ಪ್ರಚೋದಿಸುವಂತಿದೆ ನಿಮ್ಮ ಲೇಖನ. ಅದಕ್ಕೆ ಧನ್ಯವಾದಗಳು.
ಶೈಲಾಸ್ವಾಮಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹತ್ರ ಬರಬೇಕಲ್ಲಾ ನನ್ನದೊಂದು ಥಂಬ್ ಡ್ರೈವ್ ಹಿಡ್ಕೊಂಡು :)

ಚಿಕ್ಕ ಪುಸ್ತಕ ಅಷ್ಟೇ ಓದಲಿಕ್ಕೆ ಆಗ್ತಿದೆ ನನಗೂ, ಅದರ ಬಗ್ಗೆ ನನ್ನ ಈಗ defunct ಆಗಿರೊ ಬ್ಲಾಗ್ ಒಂದರಲ್ಲಿ ಬರಕೊಂಡಿದ್ದೆ, ನಿಮ್ಮ ಈ ಬರಹ ನೋಡಿ ಅದನ್ನ ಇಲ್ಲೂ ಹಾಕಬೇಕು ಅನಿಸ್ತಾ ಇದೆ, ಸಾಧ್ಯ ಆದರೆ ಹಾಕ್ತೇನೆ ಈ ವಾರ.

- ಅನಿಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕೇನ್ರೀ ಅನಿಲ್, ಬನ್ನಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.