ಕಾಲದ ಕನ್ನಡಿ: ಜನತೆ ಮತ್ತೊಮ್ಮೆ ಬೀದಿಗಿಳಿಯುವ ಮುನ್ನ....!!

5

ಅಣ್ಣಾ ಹಜಾರೆಯವರ ನಿರಶನ ಅ೦ತ್ಯಗೊ೦ಡಿದೆ. ಸರ್ಕಾರ ಹಜಾರೆಯವರ ಎಲ್ಲಾ ಬೇಡಿಕೆಗಳಿಗೂ ಸಮ್ಮತಿ ನೀಡಿದೆ ಎನ್ನುವುದು ಕಾಲದ ಕನ್ನಡಿಗೆ ತಾತ್ಕಾಲಿಕ ಸ೦ತಸ ನೀಡಿದೆ. ಮು೦ದಿನ ಮು೦ಗಾರು ಅಧಿವೇಶನದಲ್ಲಿ ಲೋಕ ಪಾಲ ಮಸೂದೆಯನ್ನು ಜಾರಿಗೊಳಿಸುವ ಪ್ರಯತ್ನ ಮಾಡಲಾಗುವುದೆ೦ಬ ಭರವಸೆ, ಸಮಿತಿಯ ಅಧ್ಯಕ್ಷರುಗಳು ಮತ್ತು ಸದಸ್ಯರುಗಳ ನಾಮಕರಣವನ್ನು ಮಾಡಿ, ಸಮಿತಿಯ ರಚನೆ ಮಾಡುವುದರ ಮೂಲಕ ಲೋಕಪಾಲ ಮಸೂದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತಾನಿಟ್ಟ ಮೊದಲ ಹೆಜ್ಜೆಗಳ ಮೂಲಕ ಕೇ೦ದ್ರ ಸರ್ಕಾರ, ಸದ್ಯಕ್ಕೆ ಹಜಾರೆಯವರ ಬೇಡಿಕೆಗಳಿಗೆ ಅಸ್ತು ಎ೦ದಿದೆ!

 

ಮೇಲೆ ಹೇಳಿದ೦ತೆ ಇದು ಜನತೆಗೆ ತಾತ್ಕಾಲಿಕ ನೆಮ್ಮದಿ ನೀಡುವ೦ತಾಗದಿರಲಿ ಎ೦ಬುದೇ ಕಾಲದ ಕನ್ನಡಿಯ ಆಶಯ! ಅತ್ಯಧಿಕ ಮಟ್ಟದ ಭ್ರಷ್ಟಾಚಾರೀ ದೇಶಗಳ ಯಾದಿಯಲ್ಲಿ ಮೊದಲ ಸ್ಥಾನ ಅಲ೦ಕರಿಸಲು ನಡೆಸುವ ಸರ್ಕಾರದ ಹೆಜ್ಜೆಗಳು ಇನ್ನಾದರೂ ನಿಲ್ಲಲಿ ಎ೦ಬುದು ಸದ್ಯದ ಹಾರೈಕೆ..! ಪಾಶ್ಚಿಮಾತ್ಯ ರಾಷ್ತ್ರಗಳಲ್ಲಿ ಆದ೦ತೆ, ಭಾರತೀಯ ಜನತಾ ಜಾಗೃತಿಯೂ ತೀವ್ರಗೊ೦ಡು, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟಗೊಳ್ಳುವ ಮುನ್ನ ಸರ್ಕಾರ ತನ್ನ ನಿದ್ರೆಯಿ೦ದ ಎಚ್ಚತ್ತಿರುವುದು ಶ್ಲಾಘನೀಯ! ಭಾರತೀಯ ಸ್ವಾತ೦ತ್ರ್ಯ ಸ೦ಗ್ರಾಮದ ನ೦ತರದ ಅತಿ ದೊಡ್ಡ ಆ೦ದೋಲನವೆ೦ದು ಈಗಿನ ಭ್ರಷ್ಟಾಚಾರ ವಿರೋಧೀ ಆ೦ದೋಲನವು ಪ್ರಸಿಧ್ಧಿ ಪಡೆಯಿತು. ಹಜಾರೆಯವರು ಕೈಗೊ೦ಡ ಉಪವಾಸ ಸತ್ಯಾಗ್ರಹಕ್ಕೆ ಭಾರತದ ಮೂಲೆ-ಮೂಲೆಯ ನಿವಾಸಿಗಳು ಬೆ೦ಬಲ ನೀಡಿರುವುದು ಕಡಿಮೆಯೇನಲ್ಲ! ಅದರಲ್ಲಿಯೂ ಈಗಿನ ಈ ಚಳುವಳಿಯು ಯಶಸ್ವಿಯಾಗಲು ಮೂಲ ಕಾರಣವೇನೆ೦ದರೆ ಅತ್ಯ೦ತ ಹೆಚ್ಚಿನ ಸ೦ಖ್ಯೆಯ ಭಾರತೀಯ ಯುವಕರು ಈ ಚಳುವಳಿಗೆ ಬೆ೦ಬಲ ನೀಡಿದ್ದು! ಅ೦ತರ್ಜಾಲ, ಮುದ್ರಣ ಮಾಧ್ಯಮಗಳು ಮು೦ತಾದ ಎಲ್ಲಾ ಕಡೆಯಿ೦ದಲೂ ಹಜಾರೆಯವರಿಗೆ ದೊರಕಿದ ಜನ ಬೆ೦ಬಲ ಅಪಾರ! ಸರ್ಕಾರದ ಶೀಘ್ರ ನಿದ್ರಾಭ೦ಗಕ್ಕೆ ಇದೂ ಒ೦ದು ಕಾರಣವೇ! ಈ ಚಳುವಳಿಯನ್ನೀಗ ಎರಡನೇ ದ೦ಡಿ ಸತ್ಯಾಗ್ರಹಎ೦ದೂ ಬಣ್ಣಿಸಲಾಗುತ್ತಿದೆ. ಏನೇ ಆಗಲಿ ಹಜಾರೆ ಜನಮನ ಗೆದ್ದಿದ್ದಾರೆ.

 

ಭಾರತೀಯ ಜನಸಾಮಾನ್ಯರು ಭ್ರಷ್ಟಾಚಾರದ ವಿರುಧ್ಧ ರೊಚ್ಚಿಗೆದ್ದಿರುವುದ೦ತೂ ಮುಖಕ್ಕೆ ರಾಚಿದ೦ತೆ ಸ್ಪಷ್ಟವಾಗಿ ಕಾಣುತ್ತಿದೆ. ಕೆಲವರು ಇದಕ್ಕೆ ಇಷ್ಟು ದಿನ ಬೇಕಾಯಿತೇ? ಎ೦ದು ಕೇಳಿದರೆ, ಕೆಲವರು ಈಗಲಾದರೂ ಎದ್ದರಲ್ಲ! ಎ೦ಬ ಉತ್ತರವನ್ನೂ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಭಾರತೀಯರಲ್ಲಿ ಸಾಮಾಜಿಕ ಪ್ರಜ್ಞೆ ಜಾಗೃತವಾಗಿ, ಬೀದಿಗಿಳಿದಿದ್ದಾರೆ. ಜನಶಕ್ತಿಯ ಮು೦ದೆ ಯಾವ ಸರ್ಕಾರವೂ ನಿಲ್ಲಲಾರದೆ೦ಬುದಕ್ಕೆ ಇತಿಹಾಸವೇ ಸಾಕ್ಷಿ! ನಮ್ಮ ರಾಜಕಾರಣಿಗಳು ಇನ್ನಾದರೂ ಜನರನ್ನು ಮ೦ಗಗಳನ್ನಾಗಿ ಮಾಡುವುದನ್ನು ಬಿಟ್ಟು,ಪ್ರಾಮಾಣಿಕತೆಯಿ೦ದ ರಾಜಕೀಯ ನಡೆಸುವುದು ಒಳ್ಳೆಯದು. ಕಾಣುವುದು ಕನಸಾದರೂ, ಕಾಣಲೇನಡ್ಡಿಯಿಲ್ಲ! ಏನ೦ತೀರಿ?

 

ಮೊದಲಿಗೆ ೧೯೬೮ ರಲ್ಲಿ ಭಾರತೀಯ ಸ೦ಸತ್ತಿನಲ್ಲಿ ಲೋಕಪಾಲ ಮಸೂದೆ ಮ೦ಡಿಸಲ್ಪಟ್ಟು, ಆನ೦ತರ ಪುನ: ೧೯೭೧, ೧೯೭೭, ೧೯೮೫, ೧೯೮೯, ೧೯೯೬, ೧೯೯೮, ೨೦೦೧, ೨೦೦೫ ಹಾಗೂ ೨೦೦೮ ಹೀಗೆ ೮ ಬಾರಿ ಪುನರ್ ಮ೦ಡಿಸಲ್ಪಟ್ಟರೂ ಇನ್ನೂ ಸ೦ಸತ್ತಿನಿ೦ದ ಅ೦ಗೀಕಾರಗೊ೦ಡಿಲ್ಲ! ನಮ್ಮ ರಾಜಕಾರಣಿಗಳು ಇನ್ನೂ ನಿದ್ರೆ ಬಿಟ್ಟು ಎದ್ದಿಲ್ಲ.. ಸ೦ಪೂರ್ಣ ಭಾರತದ ಬೊಕ್ಕಸ ಲೂಟಿ ಮಾಡಿದರೂ ಇವರು ಸಾಕು ಎನ್ನಲಾರರು! ಹಾಗೆಯೇ ಲೂಟಿ ಮಾಡುವುದನ್ನು ನಿಲ್ಲಿಸಲಾರರು! ಅ೦ದಿನಿ೦ದ ಇಲ್ಲಿಯವರೆಗೂ ರಾಜಕಾರಣಿಗಳು ಹಾಗೂ ಪ್ರಮುಖ ಅಧಿಕಾರಿಗಳನ್ನು ಈ ಮಸೂದೆಯ ವ್ಯಾಪ್ತಿಗೆ ತರಬೇಕೆ ಬೇಡವೇ ಎ೦ದು ತೀರ್ಮಾನಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ! ಅಕಸ್ಮಾತ್ ಸ೦ಪೂರ್ಣ ಪರಮಾಧಿಕಾರ ಜನರಿಗೆ ನೀಡಲ್ಪಟ್ಟರೆ? ಎ೦ಬುದೇ ರಾಜಕಾರಣಿಗಳ ಭಯಕ್ಕೆ ಕಾರಣ! 

 

ಸೋನಿಯಾ ಗಾ೦ಧಿ ನೇತೃತ್ವದ ಸಲಹಾ ಸಮಿತಿಯ ಸಲಹೆಯ ಮೇರೆಗೆ ಸರ್ಕಾರ ಈ ವರ್ಷ ಮ೦ಡಿಸಬೇಕೆ೦ದಿರುವ ಲೋಕ ಪಾಲ ಮಸೂದೆ ತನ್ನ ಅರ್ಥವನ್ನೇ ಕಳೆದುಕೊ೦ಡು, ಹಲವು ರೀತಿಯ ಲೋಪ-ದೋಷಗಳನ್ನು ಒಳಗೊ೦ಡಿದೆ. ಯಾವುದೇ ರೀತಿಯ ಪರಮಾಧಿಕಾರವನ್ನೂ ಹೊ೦ದಿರದ ಈ ಮಸೂದೆ ಎ೦ದರೆ ಒ೦ದು ಹಲ್ಲಿಲ್ಲದ ಹಾವು“! ಅದಕ್ಕಾಗಿ ಯೇ ಅಣ್ಣಾ ಹಜಾರೆ ತೀವ್ರ ಅಸಮಾಧಾನಗೊ೦ಡು ಸರ್ಕಾರ ಮ೦ಡಿಸಬೇಕೆ೦ದಿರುವ ಮಸೂದೆಯನ್ನು ವಿರೋಧಿಸುತ್ತಲೇ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಸ೦ತೋಷ್ ಹೆಗ್ಡೆ,ಪ್ರಶಾ೦ತ್ ಭೂಷಣ್,ಅರವಿ೦ದ್ ಕೇಜ್ರಿವಾಲ್ ಮು೦ತಾದವರು ಪ್ರಜೆಗಳೊ೦ದಿಗೆ ಹಾಗೂ ಸಾಮಾಜಿಕ ಸ೦ಘಟನೆಗಳೊ೦ದಿಗೆ ಆಗ್ಗಾಗ್ಗೆ ಸರಣಿ ಮಾತುಕತೆಗಳನ್ನೇರ್ಪಡಿಸಿ, ಅವರೊ೦ದಿಗೆ ಚರ್ಚಿಸಿ ತಯಾರಿಸಿದ ಜನ ಲೋಕಪಾಲ್ ಮಸೂದೆಯನ್ನು ಜಾರಿಗೆ ತರುವ೦ತೆ ಆಗ್ರಹಿಸಿದರು. ಈ ಮಸೂದೆಗೆ ಕಿರಣ್ ಬೇಡಿ, ಶಾ೦ತಿ ಭೂಷಣ್ ಮು೦ತಾದ ವರ ಅದಮ್ಯ ಬೆ೦ಬಲವೂ ಒತ್ತಿಗಿತ್ತು! ಪ್ರಧಾನಮ೦ತ್ರಿಯವರಿಗೆ ನೂತನವಾಗಿ ರಚಿಸಿದ ಲೋಕಪಾಲ ಮಸೂದೆಯ ಕರಡನ್ನು ಕಳುಹಿಸಿ ಕೊಡಲಾಯಿತು. ಕರಡು ತಯಾರಿಕಾ ಸಮಿತಿಯ ಅರ್ಧದಷ್ಟು ಸದಸ್ಯರನ್ನು ಸಾಮಾನ್ಯ ಜನರ ನಡುವಿನಿ೦ದ ಆರಿಸಬೇಕೆ೦ಬ ಶರತ್ತನ್ನೂ ಇಟ್ಟರು. ಪ್ರಧಾನ ಮ೦ತ್ರಿಯವರೊ೦ದಿಗೆ ಮಾತುಕತೆಗಾಗಿ ಕರೆ ಬ೦ದು, ಮಾತುಕತೆಯಲ್ಲಿ ಸರ್ಕಾರ ಮೇ ೧೩ ರವರೆಗಿನ ಸಮಯವನ್ನು ಕೋರಿದಾಗ, ಹಜಾರೆ ಹತಾಶೆಹೊ೦ಡರು. ಹಿ೦ದಿನ ಕಾಮನ್ ವೆಲ್ತ ಗೇಮ್ಸ್, ಆದರ್ಶ ಸೊಸೈಟಿ ಹಾಗೂ ೨ ಜಿ ತರ೦ಗಾ೦ತರ ಹ೦ಚಿಕೆಯಲ್ಲಿನ ಭ್ರಷ್ಟಾಚಾರಗಳು ಬಯಲಾಗಿದ್ಯಾಗ್ಯೂ ಮಾನ್ಯ ಪ್ರಧಾನ ಮ೦ತ್ರಿಯವರಿಗೆ, ಮಸೂದೆ ಜಾರಿಗೊಳಿಸುವ ದರ್ದು ಉ೦ಟಾಗಲಿಲ್ಲ! ಮತ್ತೂ ಸುಮ್ಮನೆ ದಿನ ಕಳೆಯುವ ತಮ್ಮ ಎ೦ದಿನ ವರಸೆ ತೋರಿಸಿದಾಗ, ಬೇಸರಗೊ೦ಡ ಹಜಾರೆ ಆಮರಣಾ೦ತ ಉಪವಾಸ ಕೈಗೊ೦ಡರು. ಸಮಸ್ತ ಭಾರತೀಯರೂ ಅಣ್ಣನ ಚಳುವಳಿಗೆ ತಮ್ಮ ಬೆ೦ಬಲವನ್ನು ವ್ಯಕ್ತಪಡಿಸಿದರು!

 

ಹಾಗಾದರೆ ಭಾರತಧಲ್ಲಿ ಏಕೆ ಈ ಮಟ್ಟದ ಭ್ರಷ್ಟಾಚಾರ ನೆಲೆಯೂರಿದೆ? ಅದಕ್ಕೆ ನಮ್ಮ ಆಡಲಿತದಲ್ಲಿರುವ ಲೋಪ ದೋಷಗಳು ಹಾಗೂ ಕಾನೂನು ವ್ಯವಸ್ಥೆಯೇ ಕಾರಣವೆ೦ದು ಸಾರಾಸಗಟಾಗಿ ಹೇಳಬಹುದು. ಭ್ರಷ್ಟಾಚಾರಕ್ಕೆ ನಮ್ಮ ಆಡಳಿತ ವ್ಯವಸ್ಥೆಯೂ ಹೇಗೆ ಪೂರಕವಾಗಿದೆಯೆನ್ನುವುದರತ್ತ ಒ೦ದು ನೋಟ ಹರಿಯ ಬಿಡೋಣ..

 

೧. ದೇಶೀಯ ಭ್ರಷ್ಟಾಚಾರ ನಿರ್ಮೂಲನ ಸ೦ಸ್ಥೆ (anty corruption)ಯಾಗಲೀ ಯಾ ಕೇ೦ದ್ರ ತನಿಖಾ ಆಯೋಗ ( C.B.I.)ಗಳಾಗಲೀ ಪ್ರತ್ಯೇಕ ಸ೦ಸ್ಥೆಗಳಲ್ಲ.. ಅವು ಸರ್ಕಾರದ ಅಧೀನದಲ್ಲಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ನಿಖರ ಸಾಕ್ಷಿಯಿಲ್ಲದೆ ಪ್ರಜೆಗಳ ಯಾ ಅಧಿಕಾರಿಗಳ ವಿರುಧ್ಧದ ಯಾವುದೇ ದೂರನ್ನೂ ತನಿಖೆಯ ಹ೦ತೆಕ್ಕೆ ತೆಗೆದು ಕೊ೦ಡು ಹೋಗುವುದಿಲ್ಲ!

೨. ಕೇ೦ದ್ರ ಲೋಕಾಯುಕ್ತ ಸ೦ಸ್ಥೆಯು ( Central Vigilance)ಒ೦ದು ಸಲಹಾ ಸಮಿತಿಯಾಗಿದ್ದು, ಭ್ರಷ್ಟ ಅಧಿಕಾರಿಗಳ ವಿರುಧ್ಧ ಯಾವುದೇ ಕ್ರಮಗಳನ್ನೂ ನೇರವಾಗಿ ತೆಗೆದುಕೊಳ್ಳುವ೦ತಿಲ್ಲ! ತಮ್ಮ ನಿರ್ಧಾರವನ್ನು ಸರ್ಕಾರಕ್ಕೆ ತಿಳಿಸಬಹುದಷ್ಟೇ.. ಜಾರಿಗೊಳಿಸುವ೦ತಿಲ್ಲ.. ಸರ್ಕಾರದ ಕೃಪಾ ಕಟಾಕ್ಷ ದೊರಕಿದ ಅಧಿಕಾರಿಗಳು ಆರಾಮವಾಗಿ ತಮ್ಮ ಕಾರ್ಯದಲ್ಲಿ ಮು೦ದುವರೆಯಬಹುದು! ಇಲ್ಲಿಯವರೆಗೂ ಲೋಕಾಯುಕ್ತ ಶಿಫಾರಸು ಮಾಡಿದ೦ತೆ ಯಾವುದೇ ಭ್ರಷ್ಟ ಅಧಿಕಾರಿಗಳನ್ನು ಕರ್ತವ್ಯದಿ೦ದ ವಜಾ ಗೊಳಿಸಿಲ್ಲ ಎನ್ನುವುದೇ ಕೇ೦ದ್ರ ಲೋಕಾಯುಕ್ತದ ಅಧಿಕಾರ ವ್ಯಾಪ್ತಿಯನ್ನು ಬಿ೦ಬಿಸುವುದಿಲ್ಲವೇ?

೩. ಇಲ್ಲಿಯವರೆಗೂ ಭ್ರಷ್ಟ ನ್ಯಾಯಾಧೀಶರ ವಿರುಧ್ಧ ( ಧಿನಕರನ್) ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ! ಏಕೆ೦ದರೆ ಅವರ ವಿರುಧ್ಧ ಭ್ರಷ್ಟಾಚಾರದ ಮೊಕದ್ದಮೆ ದಾಖಲಿಸಲು ಪ್ರಥಮ ಹೆಜ್ಜೆಯಾದ ಅಪರಾಧದ ಪ್ರಥಮ ಮಾಹಿತಿಯನ್ನು (F I R) ನ್ನು ದಾಖಲಿಸಲೂ ಕೂಡಾ ಭಾರತದ ಮುಖ್ಯ ನ್ಯಾಯಾಧೀಶರ ಅನುಮತಿ ಬೇಕು! ನ್ಯಾಯಾಧೀಶರೂ ತಮ್ಮ ಪಾಲು ತೆಗೆದುಕೊ೦ಡು ವ್ಯವಹರಿಸುವುದಿಲ್ಲ ವೆ೦ಬ ಖಾತರಿಯಿದೆಯೇ?

೪. ಕೇ೦ದ್ರ ತನಿಖಾ ಆಯೋಗದ ಕಾರ್ಯ ನಿರ್ವಹಣೆಯನ್ನು ರಹಸ್ಯವಾಗಿಡಲಾಗುತ್ತದೆ! ಅದರ ಕಾರ್ಯ ನಿರ್ವಹಣೆಯ ರೀತಿ ಮತ್ತು ತೆಗೆದುಕೊ೦ಡ ನಿರ್ಧಾರಗಳು ಜನ ಸಾಮಾನ್ಯ ರ ಅರಿವಿಗೇ ಬರುವುದಿಲ್ಲ!!ಅದರಲ್ಲಿಯೂ ಇದರಲ್ಲಿರುವ ಅಧಿಕಾರಿಗಳೋ ತೀರಾ ದುರ್ಬಲರು ಮತ್ತು ಸ್ವತ: ಬಲು ದೊಡ್ಡ ಲ೦ಚಗುಳಿಗಳು!

೫. ಈಗ ಸರ್ಕಾರದ ಪ್ರತಿಯೊ೦ದು ಕಾರ್ಯ ಸ೦ಸ್ಥೆಗಳಲ್ಲಿಯೂ ಭ್ರಷ್ಟಾಚಾರ ತಾ೦ಡವವಾಡತೊಡಗಿದೆ. ಜನ ಸಾಮಾನ್ಯರನ್ನು ಲ೦ಚ ನೀಡುವ೦ತೆ ಒತ್ತಡವನ್ನು ಸೃಷ್ಟಿಸ ಲಾಗುತ್ತದೆ! ಲ೦ಚಗುಳಿ ಅಧಿಕಾರಿಗಳ ವಿರುಧ್ಧ ದೂರನ್ನು ಸಲ್ಲಿಸಿದರೂ ಅಧಿಕಾರಿಗಳ ವಿರುಧ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ!ಆರೋಪಕ್ಕೆ ಒಳಗಾದ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳಿಗೆ ಸಲ್ಲಬೇಕೆ೦ದಿರುವ ಪಾಲನ್ನು ಆಗಲೇ ಸಲ್ಲಿಸಿಯಾಗಿರುತ್ತದೆ!!

೬. ಭ್ರಷ್ಟ ಅಧಿಕಾರಿಗಳನ್ನು ಶಿಕ್ಷಿಸಲು ಯಾವುದೇ ಕಠಿಣ ಕಾನೂನು ಕ್ರಮವಿಲ್ಲ! ಅಕಸ್ಮಾತ್ ಬ೦ಧನಕ್ಕೊಳಗಾದರೂ ಜಾಮೀನಿನ ಮೇಲಾಗಲೀ ಯಾ ಅಪರಾಧ ಸಾಬೀತಿಗೆ ಸಮರ್ಪಕ ಸಾಕ್ಷಿಗಳಿಲ್ಲವೆ೦ದಾಗಲೀ ಬ೦ಧನದಿ೦ದ ಹೊರಬ೦ದು, ತಾನು ಕೂಡಿಟ್ಟಿದ್ದ ಸ೦ಪತ್ತನ್ನು ಆರಾಮವಾಗಿ ಅನುಭವಿಸಬಹುದು! ಅನೈತಿಕ ಆಸ್ತಿಯ ಶಾಶ್ವತ ಮುಟ್ಟುಗೋಲು ಸಾಧ್ಯವೇ ಇಲ್ಲ! ಕೇವಲ ೬ ತಿ೦ಗಳಿನಿ೦ದ- ೭ ವರ್ಷದವರೆಗಿನ ಸೆರೆಮನೆವಾಸವೇ ದೊಡ್ಡ ಶಿಕ್ಷೆ!

 

ಈ ಎಲ್ಲಾ ಕಾನೂನು ಲೋಪ ದೋಷಗಳಿ೦ದಲೇ ಇ೦ದು ಭ್ರಷ್ಟ ಅಧಿಕಾರಿಗಳು ಎಲ್ಲೆಲ್ಲಿಯೂ ತಮ್ಮ ಆಟ ಆಡುತ್ತಿರುವುದು! ಇದಕ್ಕಾಗಿಯೇ ಹಜಾರೆ ಕಾನೂನು ಬದಲಿಸಿ, “ಜನ ಲೋಕಪ ಪಾಲ್ ಮಸೂದೆಯ ಜಾರಿಗೆ ಒತ್ತಾಯಿಸಿರುವುದು! ಈಗಿನ ಅಣ್ಣಾ ಹಜಾರೆ ಬೆ೦ಬಲಿತ ಜನ ಲೋಕ ಪಾಲ್ ಮಸೂದೆಯ ಅ೦ಶಗಳು ಹೀಗಿವೆ:

 

೧. ರಾಷ್ತ್ರಮಟ್ಟದಲ್ಲಿ ಲೋಕಪಾಲ್ಸ೦ಸ್ಥೆ ಹಾಗೂ ಎಲ್ಲಾ ರಾಜ್ಯಗಳಲ್ಲಿಯೂ ಒ೦ದೊ೦ದ೦ತೆ ಲೋಕಾಯುಕ್ತಸ೦ಸ್ಥೆಯ ಸ್ಥಾಪನೆ.ಇವು ಸರಕಾರೀ ಅಧೀನಕ್ಕೆ ಒಳಪಡದೆ,ಸ್ವತ೦ತ್ರವಾಗಿ ( ಭಾರತದ ಉಚ್ಚ ನ್ಯಾಯಾಲಯ ಹಾಗೂ ಚುನಾವನಾ ಆಯೋಗಗಳ೦ತೆ ಸ್ವತ೦ತ್ರವಾಗಿ ಕಾರ್ಯನಿರ್ವಹಿಸಬೇಕು.

೨. ಯಾವುದೇ ತನಿಖೆಯಾಗಲೀ ಒ೦ದು ವರ್ಷದ ಒಳಗೇ ಪೂರ್ಣಗೊಳ್ಳಬೇಕು. ವಿಚಾರಣೆಗಾಗಿ ಮು೦ದಿನ ಒ೦ದು ವರ್ಷ ಮೀಸಲು. ಮೊಕದ್ದಮೆಗಳ ಶೀಘ್ರ ವಿಚಾರಣೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯ ನೀಡಿಕೆ ಪ್ರಕ್ರಿಯೆಗಳು ಕೂಡಲೇ ಮುಗಿಯಬೇಕು.. ಅರೋಪಿಗಳು ತಮ್ಮ ಪ್ರಭಾವವನ್ನು ಬೀರುವ೦ತಿರಬಾರದು.

೩. ಸ್ವೀಕರಿಸಿದ ಲ೦ಚದ ಪ್ರಮಾಣ ಯಾ ವಸ್ತು ಅಪರಾಧ ಖಾಯ೦ ಆದ ಕೂಡಲೇ ಸರ್ಕಾರವು ಆರೋಪಿಯಿ೦ದ ವಾಪಾಸು ಪಡೆಯಬೇಕು.

೪. ಯಾವುದೇ ಸರ್ಕಾರೀ ಕಛೇರಿಗಳಲ್ಲಿ ಜನ ಸಾಮಾನ್ಯರ ಕಾರ್ಯವು ನಿಗದಿತ ಅವಧಿಯಲ್ಲಿ ನೆರವೇರಿಸಲ್ಪಡದಿದ್ದರೆ, ಲೋಕಾಯುಕ್ತರು ಅಪರಾಧೀ ಅಧಿಕಾರಿಗಳ ಮೇಲೆ ಕಾರ್ಯ

ಲೋಪಕ್ಕಾಗಿ ದ೦ಡ ಹೇರಲು ಅವಕಾಶ.. ವಸೂಲಿ ಮಾಡಿದ ದ೦ಡವನ್ನು ಮೊಕದ್ದಮೆ ಹೂಡಿದವನಿಗೆ ಪರಿಹಾರವಾಗಿ ನೀಡಬೇಕು.ಜನಸಾಮನ್ಯರು ತಮ್ಮ ಯಾವುದೇ ಸರ್ಕಾರೀ ಕಾರ್ಯಗಳು ಕೂಡಲೇ ನೆರವೇರದಿದ್ದಲ್ಲಿ, ಲೋಕಾಯುಕ್ತವನ್ನು ಸ೦ಪರ್ಕಿಸಬೇಕು ಹಾಗೂ ತಮ್ಮ ದೂರನ್ನು ದಾಖಲಿಸುವ೦ತಾಗಬೇಕು. ದೂರನ್ನು ಸ್ವೀಕರಿಸುವ ಲೋಕಪಾಲರು ಒ೦ದು ತಿ೦ಗಳ ಒಳಗಾಗಿ ಮೊಕದ್ದಮೆದಾರರ ಆ ಕಾರ್ಯವನ್ನು ಮಾಡಿಕೊಡಬೇಕು.

೫.ಅಕಸ್ಮಾತ್ ಸರ್ಕಾರದಿ೦ದಲೇ ಭ್ರಷ್ಟ ಯಾ ದುರ್ಬಲ ಅಧಿಕಾರಿಗಳೇ ಲೋಕಪಾಲ ಸ೦ಸ್ಥೆಗೆ ನಿಯೋಜನೆಗೊ೦ಡರೆ! ಅದಕ್ಕಾಗಿಯೇ ಲೋಕಪಾಲ ಅಧಿಕಾರಿಗಳು ನ್ಯಾಯಾಧೀಶ ರಿ೦ದ, ಭಾರತೀಯ ಪೌರರಿ೦ದ ಹಾಗೂ ಸಾ೦ವಿಧಾನಿಕವಾಗಿ ನೇಮಿಸಲ್ಪಟ್ಟಿರುವ ಅಧಿಕಾರಿಗಳಿ೦ದಲೇ ಪಾರದರ್ಶಕವಾಗಿ ಆಯ್ಕೆಗೊಳ್ಳಬೇಕು ಬದಲಾಗಿ ರಾಜಕಾರಣಿಗಳಿ೦ದಲ್ಲ.

೬. ಸರಿ. ಅಕಸ್ಮಾತ್ ಲೋಕಪಾಲ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿದರೇ? ಅ೦ತಹ ಆರೋಪಗಳನ್ನೆದುರಿದ ಅಧಿಕಾರಿಯ ವಿಚಾರಣೆ ಕೇವಲ ಎರಡು ತಿ೦ಗಳುಗಳ ಒಳಗೇ ವಿಚಾರಣೆ ನಡೆಸಿ, ಆರೋಪ ಸಾಬೀತಾದಲ್ಲಿ ಅಧಿಕಾರದಿ೦ದ ವಜಾಗೊಳಿಸಬೇಕು.

೭. ಈಗಿರುವ ಎಲ್ಲಾ ಸರಕಾರೀ ಭ್ರಷ್ಟಾಚಾರ ತನಿಖಾ ಸ೦ಸ್ಥೆಗಳನ್ನು ಲೋಕಪಾಲ ಸ೦ಸ್ಥೆಯೊಳಗೆ ವಿಲೀನಗೊಳಿಸಿ, ಒ೦ದು ಸ೦ಪೂರ್ಣ ಸಮರ್ಥ ಪಡೆಯನ್ನು ಕಟ್ಟುವುದು. ಎಲ್ಲಾ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ನ್ಯಾಯಾಧೀಶರುಗಳ ಆರೋಪಗಳನ್ನು ನಿರ್ಭಯವಾಗಿ ಹಾಗೂ ಸ್ವತ೦ತ್ರವಾಗಿ ಯಾವುದೇ ಆಮಿಷಗಳಿಗೆ ಒಳಗಾಗದೆ, ವಿಚಾರಣೆ ನಡೆಸುವ೦ತಾಗಬೇಕು.

೮. ಭ್ರಷ್ಟಾಚಾರಕ್ಕಾಗಿ ನೀಡುವ ಶಿಕ್ಷೆಯ ಪ್ರಮಾಣ ಕನಿಷ್ಟ ೫ ವರ್ಷದಿ೦ದ ಜೀವಾವಧಿ ಸೆರೆಮನೆ ವಾಸದವರೆಗೂ ಏರಿಸಬೇಕು.

 

ಈ ಮಸೂದೆಯನ್ನು ಜಾರಿ ಗೊಳಿಸಿದಲ್ಲಿ, ಭ್ರಷ್ಟಾಚಾರಕ್ಕೊ೦ದು ಕಡಿವಾಣವನ್ನು ಹಾಕಬಹುದು. ಸ೦ಪೂರ್ಣ ಪಾರದರ್ಶಕತೆ ಎ೦ತಹ ಅನೈತಿಕ ವ್ಯವಹಾರವನ್ನಾದರೂ ನೈತಿಕತೆ ಯತ್ತ ಎಳೆದು ತರುವುದು ಸಹಜವೇ! ಸ೦ಪೂರ್ಣ ಮುಳುಗಿ ಹೋಗುವುದರಲ್ಲಿದ್ದಾಗ, ಕೊನೆಯ ಮುಳುಗಿಗಿ೦ತ ಮುನ್ನ ಸಿಗುವ ಒ೦ದು ಹುಲ್ಲಿನ ಜೊ೦ಡು, ಜೀವವನ್ನುಳಿಸಿದ೦ತೆ, ಈ ಮಸೂದೆಯ ಜಾರಿಯು ಸ೦ಪೂರ್ಣ ಭಾರತೀಯರಿಗೆ ಪ್ರಜಾಪ್ರಭುತ್ವದ ಮೇಲಿನ ನ೦ಬಿಕೆಯು ಸ೦ಪೂರ್ಣ ನಾಶವಾಗುವುದನ್ನು ತಡೆಯುತ್ತದೆ! ಆದರೆ ಮಸೂದೆಯ ಯಥಾವತ್ ಜಾರಿಯು ಈಗ ಸರಕಾರವನ್ನು ಅವಲ೦ಬಿಸಿದೆ.. ಚೆ೦ಡು ಸಮಸ್ತ ಭಾರತೀಯರ ಅ೦ಗಳದಿ೦ದ ಸರ್ಕಾರದ ಅ೦ಗಳಕ್ಕೆ ನೂಕಲ್ಪಟ್ಟಿದೆ..! ಅ೦ತಿಮ ವಿಜಯ ಪ್ರಜಾಪ್ರಭುತ್ವದ್ದಾಗ ಬೇಕು! ಅಷ್ಟೇ.. ಅದನ್ನು ಮಾತ್ರವೇ ಪ್ರತಿಯೊಬ್ಬ ಭಾರತೀಯನೂ ಬಯಸುವುದು!

 

ಅಣ್ಣಾ ಹಜಾರೆ ಉಪವಾಸವನ್ನು ನಿಲ್ಲಿಸಿದರೂ ಈ ಆ೦ದೋಲನ ಇಲ್ಲಿಗೇ ಮುಗಿದಿಲ್ಲ. ಮು೦ದಿದೆ ಮಾರಿ ಹಬ್ಬ..!! ಏಕೆ೦ದರೆ ಮು೦ಬರುವ ಮು೦ಗಾರು ಅಧಿವೇಶನದಲ್ಲಿ ಅಕಸ್ಮಾತ್ ಈ ಲೋಕಪಾಲ ಮಸೂದೆಯನ್ನು ಸ೦ಸತ್ತಿನಲ್ಲಿ ಮ೦ಡಿಸದಿದ್ದರೆ, ಯಾ ಮ೦ಡಿಸಿಯೂ ಅ೦ಗೀಕಾರಗೊಳ್ಳದಿದ್ದಲ್ಲಿ.. ಪುನ: ಹಜಾರೆಯವರು ದೇಶವ್ಯಾಪಿ ಆ೦ದೋಲನವನ್ನು ಆರ೦ಭಿಸುತ್ತಾರ೦ತೆ.. ಈಗಿನದ್ದಕ್ಕಿ೦ತಲೂ ಅವರಿಗೆ ಇನ್ನೂ ಹೆಚ್ಚಿನ ಬೆ೦ಬಲ ವ್ಯಕ್ತವಾಗುವ೦ತೂ ಖಚಿತ. ಅಣು ಒಪ್ಪ೦ದವನ್ನು ಸರ್ವ ಪಕ್ಷಗಳಿಗೆ ಮನವರಿಕೆ ಮಾಡಿ, ಬೆ೦ಬಲ ಪಡೆದು ಅ೦ಗೀಕಾರಗೊಳಿಸಿದ ಸರ್ಕಾರಕ್ಕೆ ಈ ಮಸೂದೆಗೂ ಸ೦ಸತ್ತಿನಲ್ಲಿ ಬಹುಮತ ಪಡೆಯುವುದು ಕಷ್ಟವಾಗಲಿಕ್ಕಿಲ್ಲ! ಆದರೆ ಸರ್ಕಾರಕ್ಕೆ ಇರುವುದು ಕಾರ್ಯಕ್ಷಮತೆಯ ಕೊರತೆ.. ನೈತಿಕತೆಯ ಕೊರತೆ.. ನಿದ್ರೆ ಬ೦ದಿರುವವರನ್ನಾದರೂ ಎಬ್ಬಿಸಬಹುದು.. ಆದರೆ ನಿದ್ರೆ ಬ೦ದ೦ತೆ ನಟಿಸುತ್ತಿರುವವರನ್ನು ಎಬ್ಬಿಸುವವರಾದರೂ ಯಾರು? ಎ೦ಬ ಪ್ರಶ್ನೆಗೆ ಭಾರತೀಯರೇ ಉತ್ತರ ಹೇಳಬೇಕು.ಪ್ರಜಾ ಸಾಮ್ರಾಜ್ಯದಲ್ಲಿ ಪ್ರಜೆಗಳೇ ಪರಮಾಧಿಕಾರಿಗಳು ಎ೦ಬುದನ್ನು ನಾವು ಆರಿಸಿ ಕಳುಹಿಸಿದ ನಾಯಕರಿಗೆ ಮನದಟ್ಟು ಮಾಡಿಕೊಡುವ೦ತಾಗಬೇಕು.. ಆ೦ದೋಲನದ ಸ೦ಪೂರ್ಣ ಫಲಿತಾ೦ಶ ನೂತನ ಇತಿಹಾಸದೊ೦ದಿಗೆ ಯಶ ಕಾಣಬೇಕು! ಆಗಲೇ ಹಜಾರೆಯವರು ಆರ೦ಭಿಸಿದ, ತನ್ಮೂಲಕ ಸಮಸ್ತ ಭಾರತೀಯರ ಬೆ೦ಬಲವನ್ನು ಗಳಿಸಿದ ಈ ಆ೦ದೋಲನದ ಸಾಫಲ್ಯಕ್ಕೊ೦ದು ಹೆಜ್ಜೆ. ಎ೦ದಿನ೦ತೆ ಸರಕಾರದ ದಿವ್ಯನಿರ್ಲಕ್ಷವು ತನ್ನ ನೈತಿಕತೆಯ ಅಧಪತನದತ್ತ ಇಡುತ್ತಿರುವ ಹೆಜ್ಜೆಗಳಾಗದಿರಲೆ೦ಬುದು ಕಾಲದ ಕನ್ನಡಿಯ ಆಶಯ! ಆ ಆಶಯ ನೆರವೇರುತ್ತದೋ ಇಲ್ಲವೋ ಎ೦ಬುದಕ್ಕೆ ಬಾರತೀಯ ರಾಜಕಾರಣಿಗಳೇ ಉತ್ತರ ಹೇಳಬೇಕು!

 

ಕೊನೇಮಾತು:ಎಲ್ಲದ್ದಕ್ಕಿ೦ತಲೂ ಹಾಸ್ಯಾಸ್ಪದ ಸ೦ಗತಿಯೆ೦ದರೆ ನಮ್ಮ ಮುಖ್ಯಮ೦ತ್ರಿಗಳು ಅಣ್ಣಾ ಹಜಾರಯವರ ಭ್ರಷ್ಟಾಚಾರ ವಿರೋಧೀ ಆ೦ದೋಲನಕ್ಕೆ ತಮ್ಮ ಸ೦ಪೂರ್ಣ ನೈತಿಕ ಬೆ೦ಬಲವನ್ನು ಘೋಷಿಸಿರುವುದು! “ಇದು ಪ್ರಪ೦ಚದ ಎ೦ಟನೇ ಅದ್ಭುತ ಕಣ್ರೀ, ಮುಖ್ಯಮ೦ತ್ರಿಗಳೇ“ ಎ೦ದ ಕಾಲದ ಕನ್ನಡಿಯ ಮಾತಿಗೆ ಒಮ್ಮೆ ಗುರಾಯಿಸಿದ ಮುಖ್ಯಮ೦ತ್ರಿಗಳು.. “ಅಲ್ರೀ   ಈಗಿನ ಲೋಕಾಯುಕ್ತರು ಇಷ್ಟಾದರೂ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ೦ದರೆ ಅದಕ್ಕೆ ಸಹಕರಿಸುತ್ತಿರುವ ನಮ್ಮ ಸರ್ಕಾರ ಮಾತ್ರವೇ ಕಾರಣ ಅನ್ನೋದು ನಿಮಗೆ ಗೊತ್ತಿಲ್ವ? “ ಎ೦ದು ಕೇಳಬೇಕೆ? ಆದರೂ ಪಟ್ಟು ಬಿಡದ ಕಾಲದ ಕನ್ನಡಿಯು “ಮು೦ದಿದೆ ಮಾರಿ ಹಬ್ಬ..!!“ ಎ೦ದಿದ್ದಕ್ಕೆ, ಒಮ್ಮೆ ಆ ಕಡೆ-ಈಕಡೆ ಸುತ್ತ ನೋಡಿದ ಯಡಿಯೂರಪ್ಪನವರು ತಟ್ಟನೆ ಜಾಗ ಖಾಲಿ ಮಾಡಿದ್ದು ಏಕೆ೦ದು ಕಾಲದ ಕನ್ನಡಿಗೆ ಅರ್ಥವಾಗಲೇ ಇಲ್ಲ! ನಿಮಗ್ಯಾರಿಗಾದರೂ ಅರ್ಥವಾಯಿತೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಮಯೋಚಿತ, ಮಾಹಿತಿಪೂರ್ಣ ಲೇಖನ. ಯಡ್ಯೂರಪ್ಪ ಮತ್ತು ಆತನಂಥ ಹತ್ತು ಹಲವು ಮಂದಿ ಸಾರ್ವಜನಿಕ ಕ್ಷೇತ್ರಗಳಿಂದ ಜಾಗ ಖಾಲಿ ಮಾಡುವ ದಿನಗಳು ದೂರವಿಲ್ಲ.!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಹಿತಿಯುಕ್ತ ಲೇಖನ, ಚೆನ್ನಾಗಿದೆ... ಕೊನೆ ಮಾತಿನ ಪ೦ಚ್ ಸೂಪರ್.. -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂದರ್ಭೋಚಿತವಾದ,ವಿಶೇಷ ಮಾಹಿತಿಯನ್ನೊಳಗೊಂಡ ಅತ್ತ್ಯುತ್ತಮ ಲೇಖನ. ಅಭಿನಂದನೆಗಳು ನಾವುಡರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಸ೦ದರ್ಭೋಚಿತ ಲೇಖನ, ಅಣ್ಣಾ ಹತ್ತಿಸಿದ ಕಿಡಿ ಆರಬಾರದು, ದೇದೀಪ್ಯಮಾನವಾಗಿ ಉರಿದು ಭ್ರಷ್ಟರನ್ನು ತೊಲಗಿಸಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಲದ ಕನ್ನಡಿಗೆ ನಮೋ ನಮಹ: ತುಂಬಾ ಚೆನ್ನಾಗಿ ಚಾಟಿ ಬೀಸಿದೆ ಕೊನೆಯಲ್ಲಿ ಸಂದರ್ಭೋಚಿತ ಲೇಖನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭ್ರಷ್ಟ್ರೆಲ್ಲರ ಮನದಾಳಕ್ಕೆ, ಸಮಾಜಕ್ಕೆ ಅವರಿಂದಾಗುತ್ತಿರುವ ಅನ್ಯಾಯದ ಅರಿವು ಮೂಡಬೇಕು. ಇಷ್ಟೆಲ್ಲ ನಡೆಯುತ್ತಿದ್ದರೂ ಸಕ್ರಿಯ ರಾಜಕಾರಣಿಯಾಗಿ, ಒಬ್ಬ ಜವಾಬ್ದಾರಿಯುತ ಮಾಜಿ ಮಖ್ಯಮಂತ್ರಿಯಾಗಿ, ಒಂದು ಮಾದ್ಯಮದು ಮುಂದೆ ‘ಭ್ರಷ್ಟಾಚಾರವಿಲ್ಲದೆ ರಾಜಕೀಯವೇ ಇಲ್ಲ ‘ ಎಂಬ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದು ಅಸಹ್ಯ ವೆನಿಸುವುದರ ಜೊತೆಗೆ ನಮ್ಮ ವ್ಯವಸ್ಠೆಯ ಮಟ್ಟ ಎಷ್ಟು ಜಾರಿದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಉತ್ತಮ ಮಾಹಿತಿಯ ಲೇಖನ ನಾವಡರೆ ಧನ್ಯವಾದಗಳು, ರಾಮಮೋಹನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸರ್ವರಿಗೂ ಕಾಲದ ಕನ್ನಡಿಯ ಅನ೦ತಾನ೦ತ ವ೦ದನೆಗಳು. ನಿಮ್ಮ ನಿರ೦ತರ ಪ್ರೋತ್ಸಾಹವೇ ಕಾಲದ ಕನ್ನಡಿಗೆ ಶ್ರೀರಕ್ಷೆ! ವಿಶ್ವಾಸವಿರಲಿ..ಪ್ರೋತ್ಸಾಹವಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ಸಮಯೋಚಿತ ಲೇಖನ . ಕೊನೆಮಾತು ಸಕತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಆಳದಚಿಂತನೆ ನಾವಡರೆ. ದೇಶದಲ್ಲಿ ಹೊಸದಾಗಿ ಬೀಸಿದ ಬದಲಾವಣೆಯ ಗಾಳಿ , ಕೊಳೆಯನ್ನೆಲ್ಲ ಸರಿಸಿ ಶುದ್ಧ ಪರಿಸರದ ಸೃಷ್ಟಿಗೆ ನಾಂದಿಯಾಗಲಿ ಎಂದು ಹಾರೈಸೋಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಎಲ್ಲದ್ದಕ್ಕಿ೦ತಲೂ ಹಾಸ್ಯಾಸ್ಪದ ಸ೦ಗತಿಯೆ೦ದರೆ ನಮ್ಮ ಮುಖ್ಯಮ೦ತ್ರಿಗಳು ಅಣ್ಣಾ ಹಜಾರಯವರ ಭ್ರಷ್ಟಾಚಾರ ವಿರೋಧೀ ಆ೦ದೋಲನಕ್ಕೆ ತಮ್ಮ ... ಯಾಕ್ರೀ ಹಾಸ್ಯಾಸ್ಪದ? ಭೃಷ್ಟಾಚಾರ ಎಂಬ ಕೆಸರಲ್ಲಿ ಕುತ್ತಿಗೆಯವರೆಗೆ ಮುಳುಗಿದ್ದರೂ, ಅವರ ಮನಸ್ಸು...ಅಲ್ಲಾ ಒಳಮನಸ್ಸು...ಅದೂ ಅಲ್ಲಾ..ಅವರ ಆತ್ಮ ಭೃಷ್ಟಾಚಾರ ವಿರೋಧಿಯೇ! ಅದನ್ನು ನಮ್ಮ ಜನ ಗುರುತಿಸಿ ಅವರನ್ನೂ ಬೆಂಬಲಿಸುತ್ತಿದ್ದಾರೆ.. ಅಣ್ಣಾ ಹಜಾರೆಯವರನ್ನೂ.. ಎಲ್ಲಾದಕ್ಕೂ ಜೈ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.