ಯಾಂತ್ರಿಕ ಜೀವನದ ನಡುವೆ ಸಿಕ್ಕ ಸುವರ್ಣ ರಜಾದಿನಗಳು......

5

ದುಬೈನ ಯಾಂತ್ರಿಕ ಜೀವನದ ಏಕತಾನತೆಗೆ ಬೇಸತ್ತು ಹೋಗಿದ್ದ ಜೀವಕ್ಕೆ " ರಂಜಾನ್ " ಸಮಯದಲ್ಲಿ ಸಿಕ್ಕ ಸುಮಾರು ಹತ್ತು ದಿನಗಳ ಬಿಡುವು, ತನು ಮನಗಳಿಗೆಲ್ಲಾ ನವ ಚೈತನ್ಯ ತುಂಬಿದೆ. ರಜೆ ಸಿಕ್ಕದ್ದೇ ಸಾಕೆಂದು ಬೆಂಗಳೂರಿಗೆ ಓಡಿದ ನಾನು ಗುರುವಾರ, ೧೭/೦೯/೦೯ ರಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು, ೧೮/೦೯/೦೯ರ ಶುಕ್ರವಾರ ಬೆಳಿಗ್ಗೆ, ಅಂದು " ಮಹಾಲಯ ಅಮಾವಾಸ್ಯೆ " ಅಗಲಿದ ಹಿರಿಯ ಆತ್ಮಗಳಿಗೆಲ್ಲಾ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿ ನನ್ನ ಕಾರು ಹತ್ತಿದೆ. ಸಕುಟುಂಬ ಸಮೇತ ಭದ್ರಾವತಿಯ ಕೃಷ್ಣೆಗೌಡರ ಮನೆಗೆ ಧಾಳಿಯಿಟ್ಟ ನಾವು ಅಲ್ಲಿ " ಭರ್ಜರಿ ಬಾಡೂಟ " ಮುಗಿಸಿಕೊಂಡು ಮಾರನೆಯ ದಿನ, ೧೯/೦೯ ರ ಶನಿವಾರ ಸೀದಾ ಹೋಗಿದ್ದು, ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ. ಕನ್ನಡಿಗರ ಕಣ್ಮಣಿ, ಅಣ್ಣಾವ್ರು ಹಾಡಿದ್ದ " ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ ? ಸಾಯೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗುಂಡಿ, ಹೇರಿಕೊಂಡು ಹೋಗೋದಿಲ್ಲಾ, ಸತ್ತಾಗ್ ಬಂಡಿ, ಇರೋದ್ರೊಳ್ಗೆ ಒಮ್ಮೆ ನೋಡು, ಜೋಗಾದ್ ಗುಂಡಿ " ಹಾಡನ್ನು ಸುಶ್ರಾವ್ಯವಾಗಿ ಹಾಡುತ್ತಾ, ಮಕ್ಕಳಿಗೆ ಅದರ ಅರ್ಥವನ್ನು ತಿಳಿ ಹೇಳುತ್ತಾ, ಜೋಗ ಜಲಪಾತವನ್ನು ತೋರಿಸಿದಾಗ, ಮೊದಲ ಬಾರಿ ಜೋಗದ ಸಿರಿವೈಭವವನ್ನು ಕಂಡ ಮಕ್ಕಳು ಬಿಟ್ಟ ಕಣ್ಣು-ಬಾಯಿ ಬಿಟ್ಟಂತೆಯೇ ಅದರ ಸೊಬಗಿಗೆ ಮಾರು ಹೋದಾಗ, ಅದೇನೋ ಒಂದು ರೀತಿಯ ಸಾರ್ಥಕತೆಯ ಭಾವ ನನ್ನೆದೆಯಲ್ಲಿ ಉದಿಸಿತ್ತು.


ಅಲ್ಲಿಂದ ಸೀದಾ ಹೋಗಿದ್ದು ಹೊನ್ನಾವರಕ್ಕೆ, ಬೆಂಗಳೂರಿನಿಂದ ಹೊರಟರೆ ಎಲ್ಲೆಲ್ಲಿ ನೋಡಿದರೂ " ಬಿ.ಹೆಚ್.ರಸ್ತೆ" ಎಂಬ ಫಲಕ ಕಣ್ಣಿಗೆ ಬೀಳುತ್ತಲೇ ಇರುತ್ತದೆ. ಅದೇನೆಂದು, ಹಾಗೇಕೆಂದು ಅರ್ಥವಾಗದ ಮಕ್ಕಳಿಗೆ ಅದು

" ಬೆಂಗಳೂರು - ಹೊನ್ನಾವರ ರಸ್ತೆ " ಯ ಆಂಗ್ಲ ಅಪಭ್ರಂಶ ರೂಪ ಎಂದು ತಿಳಿಹೇಳುವ ಹೊತ್ತಿಗೆ ಅವರ ನೂರಾರು ಪ್ರಶ್ನೆಗಳಿಗೆ ಉತ್ತರಿಸಬೇಕಾಯ್ತು. ಹೊನ್ನಾವರದ ಪ್ರಖ್ಯಾತ ’ಪವಿತ್ರ ರೆಸ್ಟೋರೆಂಟಿನಲ್ಲಿ’ ಒಳ್ಳೆಯ ಮೀನೂಟ ತಿಂದ ಮಡದಿ ಮಕ್ಕಳು ಇದುವರೆಗೂ ಆ ರೀತಿಯ ಊಟ ತಿಂದಿದ್ದೆ ಇಲ್ಲವೆಂದು ಹೊಟ್ಟೆ ತುಂಬಾ ತಿಂದರು. ಅಲ್ಲಿಂದ ಸೀದಾ ಹೋಗಿದ್ದು, ಮುರುಡೇಶ್ವರಕ್ಕೆ, ಸಾಗರ ತೀರದಲ್ಲಿ ಭವ್ಯವಾಗಿ ನಿಂತ ಈಶ್ವರ, ರಾವಣನ ಆತ್ಮಲಿಂಗದ ಕಥೆ, ಅಲ್ಲಿದ್ದ ಗುಹೆ, ಅದರಲ್ಲಿನ ಚಿತ್ರಗಳು, ರಸವತ್ತಾದ ವರ್ಣನೆ, ಆ ಅಬ್ಬರಿಸುವ ಸಾಗರದಲೆಗಳಲ್ಲಿ ಒದ್ದಾಡುತ್ತಲೇ ರಾಶಿಗಟ್ಟಲೆ ಮೀನು ಹಿಡಿದು ತುಂಬಿ ತರುತ್ತಿರುವ ಮೀನುಗಾರರ ಸಣ್ಣ ದೋಣಿಗಳು, ಎಲ್ಲವೂ ನನ್ನ ಜೊತೆಯಿದ್ದ ಮಡದಿ ಮಕ್ಕಳಿಗೆ ಸಕತ್ ಕುತೂಹಲಕಾರಿಯಾಗಿದ್ದ ದೃಶ್ಯಗಳಾಗಿದ್ದವು.

 

ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲಿ ನಮ್ಮ ಸೈಕಲ್ ಮೇಲೆ ನಾವು ಸ್ನೇಹಿತರೆಲ್ಲ ಸೇರಿ ಕರ್ನಾಟಕ ಟೂರ್ ಹೊಡೆದಾಗಲೇ ಇಂತಹ ಸಾಕಷ್ಟು ತಾಣಗಳನ್ನು ಸುತ್ತಿದ್ದ ನನಗೆ ಅದೇನೂ ವಿಶೇಷವಾಗಿರಲಿಲ್ಲ, ಆದರೆ ತಾಳ್ಮೆಯಿಂದ ಅವರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ಅವರ ಕುತೂಹಲವನ್ನು ತಣಿಸಿದೆ. ರಾತ್ರಿ ಅಲ್ಲಿಯೇ ಉಳಿದು ಬೆಳಿಗ್ಗೆ ಎದ್ದು ಮತ್ತೊಮ್ಮೆ ದೇವಾಲಯ, ಸಮುದ್ರ ತೀರವನ್ನು ಸುತ್ತು ಹೊಡೆದು, ಕಾಮತ್ ಹೋಟೆಲಿನ ಹಳಸಲು ಹಿಟ್ಟಿನ ಇಡ್ಲಿ, ದೋಸೆ ತಿಂದು, ಅಲ್ಲಿಂದ ಸೀದಾ ಬಂದಿದ್ದು ಗೋಕರ್ಣಕ್ಕೆ. ಮಕ್ಕಳಿಗೆ ಅಲ್ಲಿನ ಕ್ಷೇತ್ರ ಮಹಿಮೆಯನ್ನು ತಿಳಿಸಿ, ಆತ್ಮಲಿಂಗದ ದರ್ಶನ ಮಾಡಿ, ಪುರೋಹಿತರ ಮಾರ್ಗದರ್ಶನದಲ್ಲಿ, ಅಗಲಿದ ಅಮ್ಮನ ಆತ್ಮಕ್ಕೆ ಶಾಂತಿ ಕೋರಿ, ಶುಭವಾಗಲೆಂದು ಪ್ರಾರ್ಥಿಸಿ, ಅಲ್ಲಿನ ಸಮುದ್ರ ತೀರದಲ್ಲಿ ಒಂದು ಸುತ್ತು ಹೊಡೆದು, ಅಲ್ಲಿಂದ ಪ್ರಖ್ಯಾತ " ಓಮ್ " ಬೀಚಿಗೆ ಕರೆ ತಂದೆ.ಒಮ್ಮೆ ಸರಿಯಾಗಿ ಪಕ್ಕೆಗೆ ತಿವಿದ ಮಡದಿ ಹುಸಿಕೋಪದಿಂದ ಕೇಳಿದ್ದು ಇನ್ನೂ ನೆನಪಿದೆ, " ಈ ಜಾಗಗಳೆಲ್ಲಾ ನಿಮಗೆ ಹೇಗೆ ಗೊತ್ತು ?" ಬಹುಶ: ಅಲ್ಲಿದ್ದ ಹುವಜೋಡಿಗಳನ್ನು ನೋಡಿ, ಅವಳ ಮನದಲ್ಲಿ ಯಾವುದೋ ಅವ್ಯಕ್ತ ಅನುಮಾನ ಸುಳಿದು ಹಾಗೆ ನನಗೆ ಜೋರಾಗಿ ಪಕ್ಕೆಗೆ ತಿವಿದಿರಬಹುದು ಅನ್ನಿಸಿತು. ಆಗ ಅವಳಿಗೆ ನಾನು ಸೈಕಲ್ ಮೇಲೆ ಸುತ್ತಾಡಿಕೊಂಡು ಸುಮಾರು ವರುಷಗಳ ಹಿಂದೆಯೇ ಅಲ್ಲಿಗೆ ಬಂದು ಹೋಗಿದ್ದದ್ದನ್ನು ಹೇಳಿದರೆ, ಮಹರಾಯ್ತಿ ನಂಬಲು ಸಿದ್ಧಳಿರಲಿಲ್ಲ, ಕೊನೆಗೆ ನನ್ನ ಸೈಕಲ್ ಸವಾರಿಯ ಕಥೆಗಳನ್ನೆಲ್ಲಾ ಓದಿದ್ದ ನನ್ನ ಮಗಳು ನನಗೆ ಆಪದ್ಭಾಂಧವಳಾಗಿ ಬಂದು ಆ ಕಥೆಗಳನ್ನು ಬಿಡಿ ಬಿಡಿಯಾಗಿ ಹೇಳಿದಾಗ, ಮಡದಿಯ ಮುಖದ ತುಂಬಾ ನಗುವೋ ನಗು! ಅದನ್ನು ನೋಡಿ ನಾನೂ " ಫುಲ್ ಖುಷ್ " ಮೂಡಿಗೆ ಹೋಗ್ಬಿಟ್ಟೆ ಅನ್ನಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.