ಅಮಾವಾಸ್ಯೆಯ ರಾತ್ರಿಯಲ್ಲಿ ,,,,೨

4.5

ಮರುದಿನ ಮಧ್ಯಾಹ್ನದ ಹೊತ್ತಿಗೆ ಭೀಮಯ್ಯನನ್ನು ದೆವ್ವ ಹಿಡಿದದ್ದು, ನಾನು ಅಲ್ಲಿಗೆ ಪ್ರವೇಶಿಸಿದ್ದನ್ನು ನೋಡಿ ಅವು ಮಾಯವಾಗಿದ್ದು ಆ  ಕಾರ್ಖಾನೆಯಲ್ಲಿ, ಪಕ್ಕದ ಕಣಿವೆ ಪುರದಲ್ಲಿ ದೊಡ್ಡ ಸುದ್ಧಿಯೇ ಆಗಿ ಹೋಯ್ತು.  ಆದರೆ ಭೀಮಯ್ಯನಿಗೆ ಸಕತ್ತಾಗಿ ಚಳಿ ಜ್ವರ ಅಮರಿಕೊಂಡು ಅವನನ್ನು ಚಿಕ್ಕಬಳ್ಳಾಪುರದ  ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದರು. ಅವನನ್ನೊಮ್ಮೆ ನೋಡಿ ಬರೋಣವೆಂದು ಆಸ್ಪತ್ರೆಗೆ ಬಂದರೆ ಅಲ್ಲಾಗಲೇ ಕಾರ್ಮಿಕರ ಒಂದು ಗುಂಪು ಬಂದು ಸೇರಿತ್ತು, ಜೊತೆಗೆ ಚಿಕ್ಕಬಳ್ಳಾಪುರದ  ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ತಮ್ಮಿಬ್ಬರು ಪೇದೆಗಳ ಜೊತೆ ಅಲ್ಲಿ ಕುಳಿತು ಭೀಮಯ್ಯನ ಹೇಳಿಕೆಯನ್ನು ತೆಗೆದುಕೊಳ್ಳುತ್ತಿದ್ದರು.   ಏನಾಯಿತೆಂದು ಕೇಳಿದರೆ, ಅವರು ಹೇಳಿದ್ದು, ಕೆಲವು ದಿನಗಳ ಹಿಂದೆ ವಿಧವೆಯೊಬ್ಬಳು ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ನಂದಿ ಬೆಟ್ಟದ ಟಿಪ್ಪು ಡ್ರಾಪಿನಿಂದ ಹಾರಿ ಆತ್ಮ ಹತ್ಯೆ ಮಾಡಿಕೊಂಡಿದ್ದು, ಅವರ ಆತ್ಮಗಳು ಅಲ್ಲೇ ಸುತ್ತಾಡುತ್ತಾ ಹಲವಾರು ಜನರಿಗೆ ಅಮಾವಾಸ್ಯೆಯ ಸುತ್ತ ಮುತ್ತಲಿನ ದಿನಗಳಲ್ಲಿ  ತೊಂದರೆ ಕೊಡುತ್ತಿದ್ದು, ಅದರಲ್ಲಿ ಭೀಮಯ್ಯನೂ ಒಬ್ಬನಾಗಿದ್ದ.  ನನ್ನನ್ನು ಕಂಡ ಭೀಮಯ್ಯ ಗದ್ಗದಿತನಾಗಿ ಕೈ ಮುಗಿದು "ಸಾರ್, ನೀವೇನಾದ್ರೂ ಆ ಸಮಯದಲ್ಲಿ ಅಲ್ಲಿಗೆ ಬರದೆ ಇದ್ದಿದ್ದರೆ ಅವ್ಳು ನನ್ನ ಕೊಂದೆ ಬಿಡ್ತಿದ್ಲು" ಅಂದಾಗ ಇನ್ಸ್ಪೆಕ್ಟರ್ ರೆಡ್ಡಿ ನನ್ನನ್ನು ಪ್ರಶ್ನಾರ್ಥಕವಾಗಿ ನೋಡಿದರು.  ನಡೆದಿದ್ದನ್ನು ಅವರಿಗೆ ವಿವರಿಸಿ ಕಾರ್ಖಾನೆಯಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆಯೂ ವಿವರಿಸಿದೆ.  "ಮನುಷ್ಯರಿಂದ ತೊಂದರೆಯಾದರೆ ಏನಾದರೂ ಮಾಡಬಹದು, ಈ ದೆವ್ವಗಳಿಗೆ ನಾವು ಏನು ಮಾಡೋಕ್ಕಾಗುತ್ತೆ ಹೇಳಿ, ಈ ರೀತಿ ನಮ್ಮ ಬಳಿ ಹಲವರು ಕಂಪ್ಲೆಂಟ್ಗಳಿವೆ " ಅಂದವರಿಗೆ ನಾನೇನೂ ಹೇಳದಾದೆ.

ಅಲ್ಲಿಂದ ಕಾರ್ಖಾನೆಗೆ ಬಂದು ಆಡಳಿತ ವಿಭಾಗದ ಮುಖ್ಯಸ್ಥರಾದ ರಘುನಾಥರಿಗೆ ವಿವರವಾದ ವರದಿಯನ್ನಿತ್ತೆ. ಕಥೆ ಕೇಳಿ ನಗುತ್ತಾ ಅವರು "ಹಾಗಾದ್ರೆ ಈ ದೆವ್ವಗಳನ್ನು ಹೇಗೆ ಹಿಡೀತೀರಿ?  ಇದಕ್ಕೆ ಪರಿಹಾರವೇನು "? ಅಂದಾಗ ನಾನೂ ನಗುತ್ತ 'ಕಾದು ನೋಡಿ' ಅಂದೆ.  ಅಂದಿನ ರಾತ್ರಿ ನಾನು ಕಾರ್ಖಾನೆಗೆ ಬರದೆ ಮನೆಯಲ್ಲೇ ವಿಶ್ರಮಿಸಿದೆ.  'ಮಹಾನ್ ಧೈರ್ಯವಂತ' ವೇದಮೂರ್ತಿಗೆ ರಾತ್ರಿ ಪಾಳಿಯ ಜವಾಬ್ಧಾರಿ ವಹಿಸಿ ಏನಾದರೂ ತೊಂದರೆಯಾದಲ್ಲಿ ತಕ್ಷಣ ಫೋನ್ ಮಾಡುವಂತೆ ತಾಕೀತು ಮಾಡಿದೆ.  ಅಂದು ರಾತ್ರಿ ಯಾವುದೇ ತೊಂದರೆಯಿಲ್ಲದೆ ಸಾಗಿತು, ಆದರೆ ಮರುದಿನದ ರಾತ್ರಿಯಲ್ಲಿ ಕಾದಿತ್ತು, ಮತ್ತೊಂದು ಅಚ್ಚರಿ!

ಅದು, ಅಮಾವಾಸ್ಯೆಯ ನಂತರದ ಮುರನೇ ದಿನ, ಅಂದು ಭೂತಚೇಷ್ಟೆಗೆ ಬಲಿಯಾದವನು ಫೋರ್ ಮ್ಯಾನ್ ಜೋಸೆಫ್!  ತಮಿಳ್ನಾಡಿನ ಸೇಲಂನ ಅವನು ಈ ಕಾರ್ಖಾನೆಯಲ್ಲಿ ಸುಮಾರು ಆರು ವರುಷಗಳಿಂದ ಕೆಲಸ ಮಾಡುತ್ತಿದ್ದ,  ಎಲ್ಲ ಯಂತ್ರೋಪಕರಣಗಳ ದುರಸ್ತಿಯಲ್ಲಿ ಪಳಗಿದ್ದ ಅವನು, ರಾತ್ರಿ ಪಾಳಿಯಲ್ಲಿ ಸಾಕಷ್ಟು ಕೆಲಸವಿಲ್ಲದೆ ಹನ್ನೆರಡು ಘಂಟೆಯ ನಂತರ ಒಂದು ಜಾಗ  ಹಿಡಿದು ಮಲಗಿ ಬಿಡುತ್ತಿದ್ದ.  ಹಾಗೆ ಅವನು ಕಾರ್ಖಾನೆಯ ವೇರ್ ಹೌಸಿನಲ್ಲಿ ಮಲಗಿದ್ದಾಗ ಜೋರಾದ ಶಬ್ದ ಕೇಳಿ ಎಚ್ಚರವಾಗಿದೆ, ಕಣ್ಬಿಟ್ಟು ನೋಡಿದರೆ ಅವನ ದೇಹ ಓಡುತ್ತಿದ್ದ ಕನ್ವೇಯರ್ ಬೆಲ್ಟಿನ ಮೇಲಿದ್ದು ಸ್ವಲ್ಪದರಲ್ಲೇ ಯಂತ್ರದ ಬಾಯಿಗೆ ಸಿಕ್ಕುವುದರಲ್ಲಿದ್ದನಂತೆ !  ಧಬಾರನೇ ಜೋರಾದ ಸದ್ದಿನೊಂದಿಗೆ ಅವನು ಅಷ್ಟೆತ್ತರದ ಬೆಲ್ಟಿನ ಮೇಲಿಂದ ಬೀಳುವುದನ್ನು ಕಂಡ ಇತರ ಕಾರ್ಮಿಕರು ದಿಗ್ಭ್ರಾಂತರಾಗಿ ತಕ್ಷಣವೇ ಅವನನ್ನು ಎತ್ತಿಕೊಂಡು ಮುಖ್ಯದ್ವಾರದ ಹತ್ತಿರವಿದ್ದ ಪ್ರಥಮ ಚಿಕಿತ್ಸಾ ಕೊಠಡಿಗೆ ಓಡಿದ್ದಾರೆ.  ಪ್ರಥಮ ಚಿಕಿತ್ಸೆಯ ನಂತರ ಸುಧಾರಿಸಿಕೊಂಡ ಅವನು ಎಲ್ಲರನ್ನು ಕೇಳಿದ್ದು ಒಂದೆ ಪ್ರಶ್ನೆ, ವೇರ್ ಹೌಸಿನಲ್ಲಿ ಮಲಗಿ ಚೆನ್ನಾಗಿ ನಿದ್ದೆ ಬಂದಿದ್ದ ಅವನನ್ನು  ಅದು ಹೇಗೆ ಮತ್ತು ಯಾರು  ಸುಮಾರು ೫೦೦ ಅಡಿ ದೂರದಲ್ಲಿದ್ದ ಕನ್ವೇಯರ್ ಬೆಲ್ಟಿನ ಮೇಲೆ ಮಲಗಿಸಿದ್ದು ??   ಅವನ ಪ್ರಶ್ನೆಗೆ ಯಾರಲ್ಲೂ ಉತ್ತರವಿರಲಿಲ್ಲ.  ಮರುದಿನ ಕಚೇರಿಗೆ ಬಂದ  ನನಗೆ ಈ ವಿಚಾರ ತುಂಬಾ ಸೋಜಿಗವೆನ್ನಿಸಿ ಮತ್ತೊಮ್ಮೆ ರಾತ್ರಿ ಪಾಳಿಯಲ್ಲಿ ಬರಲು ತೀರ್ಮಾನಿಸಿದೆ.

ಅದೇ ದಿನ ರಾತ್ರಿ ಕಾರ್ಖಾನೆಗೆ ಬಂದ ನಾನು, ಎಲ್ಲ ಕಾರ್ಮಿಕರನ್ನು ಕೂಲಂಕುಶವಾಗಿ ವಿಚಾರಣೆ ನಡೆಸಿದೆ, ಅವರಲ್ಲಿ ಯಾರಿಗಾದರು ಜೋಸೆಫನ ಮೇಲೆ ವೈರತ್ವವಿದೆಯೇ, ಕೆಲಸಕ್ಕೆಂದು ಬಂದವನು ವೇರ್ ಹೌಸಿನಲ್ಲಿ ಮಲಗಿದ್ದು ಹೇಗೆ ಮತ್ತು ಹಾಗೆ ಮಲಗಿದವನು ಕನ್ವೇಯರ್ ಬೆಲ್ಟಿನ ಮೇಲೆ ಹೋಗಿದ್ದು ಹೇಗೆ?   ಅವನು ಮಲಗಿದ್ದ ವೇರ್ ಹೌಸ ಮತ್ತು ಅವನು ಕೆಳಗೆ ಬಿದ್ದ ಕನ್ವೇಯರ್ ಬೆಲ್ಟ್ ಎರಡನ್ನು ಕೂಲಂಕುಷವಾಗಿ ಪರಿಶೀಲಿಸಿದರೆ ಅವನನ್ನು ಹೊತ್ತೊಯ್ದು ಅಲ್ಲಿ ಮಲಗಿಸುವುದು ಸಾಧ್ಯವೇ ಇಲ್ಲ ಅನ್ನುವಂತಿತ್ತು!  ಎಲ್ಲರೊಡನೆ ಸ್ನೇಹ ಭಾವದಿಂದಲೇ ಇರುತ್ತಿದ್ದ ಜೋಸೆಫನ ಮೇಲೆ ಯಾರಿಗೂ ದ್ವೇಷವಾಗಲಿ, ವೃತ್ತಿ ಸಹಜ ಮತ್ಸರವಾಗಲಿ ಇದ್ದಂತೆ ಕಾಣಲಿಲ್ಲ. ಹಾಗಾದರೆ ಅವನು ನಿದ್ದೆಯಲ್ಲಿ ನಡೆಯುತ್ತಾನೆಯೇ?   ಅದಕ್ಕೂ ಉತ್ತರ ಸಿಗಲಿಲ್ಲ, ಅವನ ಆರು ವರುಷಗಳ ಸೇವಾವಧಿಯಲ್ಲಿ ಇದೆ ಮೊದಲ ಬರಿ ಹೀಗಾಗಿತ್ತು!  ರಾತ್ರಿ ಪಾಳಿಯ ಮೇಲ್ವಿಚಾರಕ ಸುಂದರೇಶ ಈ ಘಟನೆಯಿಂದ ತುಂಬಾ ವಿಚಲಿತನಾಗಿದ್ದ.  ನಮ್ಮ ವೇದಮೂರ್ತಿ ಮತ್ತೊಮ್ಮೆ ತನ್ನ ಪುಂಗಿ ಊದಿದ, " ಸಾರ್, ಇದು ದೆವ್ವದ್ದೆ ಕೆಲಸ, ಇಲ್ಲಿ ಶಾಂತಿ ಮಾಡಿಸಬೇಕು ಸಾರ್", ಮೊದಲೇ ತಲೆ ಕೆಟ್ಟಿದ್ದ ನಾನು ಅವನಿಗೆ ಚೆನ್ನಾಗಿ ಉಗಿದು ಇನ್ನೊಮ್ಮೆ ದೆವ್ವ ಅಂದರೆ ಅಲ್ಲಿಂದ ಓಡಿಸುವುದಾಗಿ ಎಚ್ಚರಿಕೆ ಕೊಟ್ಟೆ.  ಒಂದರ ಹಿಂದೆ ಒಂದರಂತೆ ಸಿಗರೇಟುಗಳು ಖಾಲಿಯಾದವೇ ಹೊರತು ಘಟನೆ ಹೇಗೆ ನಡೆದಿರಬಹುದೆಂಬ ಸುಳಿವು ಸಿಗಲಿಲ್ಲ.  ಹಾಗೆಯೆ ಮತ್ತೊಂದು ಸಿಗರೇಟ್ ಹಚ್ಚಿ ಜಯವಂತನನ್ನು ಕರೆದು ಜನರೇಟರ್ ರೂಮಿನ ಕಡೆಗೆ ನಡೆದೆ.  ಅಲ್ಲಿ ಕಾದಿತ್ತು ಮತ್ತೊಂದು ಅಚ್ಚರಿ!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.