ಉತ್ತರ ಸಿಗದ ಪ್ರಶ್ನೆಗಳು....

5

ಮೊನ್ನೆ ಶುಕ್ರವಾರ ಅಪ್ಪ ನನಗೆ ಫೋನ್ ಮಾಡಿದ್ದರು.  ನಾನು ಕಳಿಸಿದ ಹಣ ತಲುಪಿ ಅದೇನೋ ಅರಿಯದ ಕಕ್ಕುಲಾತಿಯಿಂದ, ಅಪರೂಪದ ಪ್ರೀತಿಯಿಂದ "ಹೇಗಿದ್ದೀಯಪ್ಪಾ, ನಿನ್ನ ಆರೋಗ್ಯ ಹೇಗಿದೆ, ಕೆಲಸ ಹೇಗಿದೆ, ಕೋಪ ಕಡಿಮೆ ಮಾಡ್ಕೋ, ಕಾರು ಓಡಿಸುವಾಗ ಜಾಗ್ರತೆಯಾಗಿರು" ಅಂತೆಲ್ಲಾ ಹೇಳುತ್ತಿದ್ದವರ ಮಾತು ಕೇಳುತ್ತಾ ಕಣ್ಗಳಲ್ಲಿ ಕಂಬನಿ ತುಂಬಿ ಹರಿದಿತ್ತು. ಸುಮಾರು, ೧೯೮೩ರಲ್ಲಿ, ೨೬ ವರ್ಷಗಳ ಹಿಂದೆ, ನಡೆದ ಪ್ರಸಂಗ ನೆನಪಾಯಿತು. ತರಗತಿಯಲ್ಲಿ ಎಲ್ಲರಿಗಿಂತ ಮುಂದಿದ್ದು, "ಕ್ಲಾಸ್ ಲೀಡರ್" ಬೇರೆ ಆಗಿದ್ದ ನನಗೆ ಸ್ನೇಹಿತರೆಲ್ಲಾ ಪ್ರವಾಸಕ್ಕೆ ಹೋಗುವಾಗ ಕೇವಲ ನೂರೈವತ್ತು ರೂಪಾಯಿ ಕೊಡದೆ ತನ್ನ ೦೯, ೦೫ ಮಟ್ಕಾ ನಂಬರಿಗೆ ದಿನವೂ ನೂರಾರು ರೂಪಾಯಿ ಕಟ್ಟಿ ಸೋಲುತ್ತಿದ್ದ, ಹಣ ಕೇಳಿದಾಗೆಲ್ಲಾ ಹಿಗ್ಗಾ ಮುಗ್ಗಾ ಬಾರಿಸುತ್ತಿದ್ದ ಅಪ್ಪನ ಮೇಲೆ ವಿಪರೀತ ಕೋಪದಿಂದ, ಅಮ್ಮ ದಿನವೂ ಲಕ್ಷ್ಮಿ ಪೂಜೆ ಮಾಡುತ್ತಿದ್ದ ಎಪ್ಪತ್ತೈದು ರೂಪಾಯಿಗಳ ನಾಣ್ಯಗಳ ಭಂಡಾರವನ್ನು ಕದ್ದು, ಇವರ ಸಹವಾಸವೇ ಬೇಡವೆಂದು,  ಉಡುಪಿಗೆ ಓಡಿ ಹೋಗಿದ್ದೆ.  

ಉಡುಪಿಯ ರಥಬೀದಿಯಲ್ಲಿದ್ದ ಹೋಟೆಲ್ ಚಿತ್ತರಂಜನ್ ನಲ್ಲಿ ಮಾಣಿಯಾಗಿ ಸೇರಿಕೊಂಡಿದ್ದೆ.  ಮಾಲೀಕರು, ಪಾಪ, ತುಂಬಾ ಒಳ್ಳೆಯವರು.  ನಾನೆಷ್ಟು ಮಸಾಲೆ ದೋಸೆ ತಿಂದರೂ, ಜಾಮೂನುಗಳನ್ನು ಅವರಿಗೆ ಕಾಣದಂತೆ ಕಬಳಿಸಿದರೂ, ಸಮೋಸಾಗಳನ್ನು ಸ್ವಾಹಾ ಮಾಡಿದರೂ ತುಟಿ ಪಿಟಕ್ಕೆನ್ನದೆ ನಕ್ಕು ಸುಮ್ಮನಾಗುತ್ತಿದ್ದರು.   ಅಲ್ಲಿ ದಿನವೂ ನೀಟಾಗಿ ಸಮವಸ್ತ್ರ ಧರಿಸಿ ಶಾಲೆಗೆ ಹೋಗುತ್ತಿದ್ದ ನನ್ನ ಓರಗೆಯ ಹುಡುಗ/ಹುಡುಗಿಯರನ್ನು ನೋಡಿದಾಗೆಲ್ಲಾ ಅಪ್ಪನ ಮೇಲೆ ಭಯಂಕರ ಸಿಟ್ಟು ಬಂದು, ಅವರನ್ನು ವಾಚಾಮಗೋಚರವಾಗಿ ಬೈದು, ನನ್ನ ವಿಳಾಸ ಕೊಡದೆ, ಒಂದು "ಇನ್ ಲ್ಯಾಂಡ್ ಲೆಟರ್" ಅಂಚೆಗೆ ಹಾಕುತ್ತಿದ್ದೆ.  ಅದನ್ನು ಓದಿ ಅಪ್ಪ, ಅಮ್ಮನನ್ನು ಯದ್ವಾ ತದ್ವಾ ಬೈದು, ಕೊನೆಗೆ ಅಮ್ಮನ ಅಳು ನೋಡಲಾಗದೆ ನನ್ನದೊಂದು ಫೋಟೋ ಹಿಡಿದುಕೊಂಡು, ಆ ಕಾಗದದ ಮೇಲೆ ಅಂಚೆಯವರು ಒತ್ತಿದ್ದ ಮುದ್ರೆಯನ್ನು ತಪ್ಪಾಗಿ "ಶಿವಮೊಗ್ಗ" ಎಂದು ಓದಿಕೊಂಡು, ಇಡೀ ಶಿವಮೊಗ್ಗವನ್ನೆಲ್ಲಾ ಜಾಲಾಡಿ, ನಾನು ಸಿಗದೆ ಬರಿ ಕೈನಲ್ಲಿ ವಾಪಸ್ಸು ಹೋಗಿದ್ದರಂತೆ.  ಅದಾದ ಒಂದು ವಾರಕ್ಕೆ ನನ್ನ ಪಿತ್ತ ಮತ್ತೊಮ್ಮೆ ನೆತ್ತಿಗೇರಿ, ಇನ್ನೊಂದು ಕಾಗದ ಬರೆದು ಅಪ್ಪನನ್ನು ಹಿಗ್ಗಾ ಮುಗ್ಗಾ ಬೈದಿದ್ದೆ.  ಅದೃಷ್ಟವಶಾತ್, ಆ ಕಾಗದದ ಮೇಲೆ ಬಿದ್ದ ಮುದ್ರೆ ಅಪ್ಪನಿಗೆ ಸರಿಯಾಗಿ "ಉಡುಪಿ" ಎಂದು ಕಂಡಿತ್ತು.  ತಕ್ಷಣ ನನ್ನದೊಂದು ಫೋಟೋ ಹಿಡಿದುಕೊಂಡು ಬಸ್ಸು ಹತ್ತಿ ಉಡುಪಿಗೆ ಬಂದಿದ್ದರು.

ಉಟ್ಟ ಬಟ್ಟೆಯಲ್ಲಿ ಉಡುಪಿಗೆ ಓಡಿ ಹೋಗಿದ್ದ ನನ್ನ ಬಳಿ ಇದ್ದದ್ದು ಒಂದು ಪ್ಯಾಂಟು, ಒಂದು ಷರ್ಟು ಮಾತ್ರ!  ಅದರಲ್ಲಿಯೇ ದಿನ ದೂಡುತ್ತಿದ್ದೆ, ಹೋಟೆಲಿನ ಉಳಿದ ಹುಡುಗರೆಲ್ಲಾ ನಾನು ಯಾವಾಗಲೂ ಪ್ಯಾಂಟಿನಲ್ಲೇ ಇರುತ್ತಿದ್ದುದರಿಂದ, ನನಗೆ "ಫ್ಯಾಂಟಮ್" ಅನ್ನುವ ಬಿರುದು ಕೊಟ್ಟಿದ್ದರು! ಮನೆಯಲ್ಲಿ ದಪ್ಪ ಹಾಸಿಗೆ, ರಗ್ಗು, ತಲೆದಿಂಬಿನೊಂದಿಗೆ ಮಲಗುತ್ತಿದ್ದ ನಾನು ಅಲ್ಲಿ ಎರಡು ದೊಡ್ಡ ಗೋಣಿಚೀಲಗಳಲ್ಲಿ, ಕಾಲುಗಳನ್ನು ಒಂದರಲ್ಲಿ ತೂರಿಸಿ, ತಲೆಯ ಮೇಲಿಂದ ಇನ್ನೊಂದನ್ನು ಗುಬುರು ಹಾಕಿಕೊಂಡು ಮಲಗುತ್ತಿದ್ದೆ!!  ಅಂದು ಅಪ್ಪ ಬೆಳಿಗ್ಗೆಯೇ ಉಡುಪಿಗೆ ಬಂದವರು ಸೀದಾ ಕಾಫಿ ಕುಡಿಯಬೇಕೆಂದು ನಾನಿದ್ದ ಹೋಟೆಲ್ಲಿಗೇ ಬರಬೇಕೇ?  ಕಾಫಿ ಕುಡಿದಾದ ಮೇಲೆ ಅಲ್ಲಿದ್ದ ಇತರ ಹುಡುಗರಿಗೆ ನನ್ನ ಫೋಟೋ ತೋರಿಸಿ ವಿಚಾರಿಸಿದರಂತೆ, ಒಬ್ಬ ಹುಡುಗ ಅಪ್ಪನನ್ನು ಸೀದಾ ನಾನು ಮಲಗಿದ್ದ ಕೋಣೆಯ ಕಡೆಗೆ ಕರೆದುಕೊಂಡು ಬಂದ, "ಏಯ್ ಫ್ಯಾಂಟಮ್, ನಿನ್ನನ್ನು ಯಾರೋ ಹುಡುಕಿಕೊಂಡು ಬಂದಿದ್ದಾರೆ ನೋಡು" ಅಂತ ನನ್ನನ್ನು ಎಬ್ಬಿಸಿದ. ನಾನು ಹಾಗೆ ಗೋಣೀಚೀಲಗಳಲ್ಲಿ ಮಲಗಿದ್ದುದನ್ನು ಬಾಗಿಲಲ್ಲಿ ನಿಂತು ಗಮನಿಸಿದ ಅಪ್ಪ ಮಾತು ಹೊರಡದೆ ಗದ್ಗದಿತರಾಗಿ, ಎಳೆಯ ಮಗುವಿನಂತೆ ಅಳತೊಡಗಿದರು.  ಅವರ ಕೈಗೆ ಸಿಕ್ಕಿ ಹಾಕಿಕೊಂಡ ನನಗೆ ನಾನು ಬರೆದ ಕಾಗದಗಳ ನೆನಪಾಗಿ, ಮುಂದೆ ಬೀಳಬಹುದಾದ ಅಪ್ಪನ ಕೈಗಳ ಭರ್ಜರಿ ಹೊಡೆತಗಳನ್ನು ನೆನಪಿಸಿಕೊಂಡು ನಡುಗುತ್ತಾ ನಿಂತಿದ್ದೆ.  ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು " ನಿನಗ್ಯಾಕೋ ಮಗನೇ ಈ ಕರ್ಮ, ನಿನಗೆ ಯಾವತ್ತು ಒಳ್ಳೆ ಬುದ್ಧಿ ಬರುತ್ತೋ, ಇದಕ್ಕೆಲ್ಲಾ ಹಾಳಾದವನು, ನಾನೇ ಕಾರಣ" ಅಂತ ತಮ್ಮನ್ನೇ ನಿಂದಿಸಿಕೊಂಡು ತುಂಬಾ ಭಾವುಕರಾಗಿ ಬಿಟ್ಟಿದ್ದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಹೋಟೆಲ್ ಮಾಲೀಕರಿಗೆ ನನ್ನ ಕಥೆ ಹೇಳಿ, ಅವರಿಂದ ಅನುಮತಿ ತೊಗೊಂಡು ನನ್ನನ್ನು ತಿಪಟೂರಿಗೆ ಕರೆ ತಂದರು.  ಮನೆಯಲ್ಲಿ ಅಮ್ಮನ ಮುಂದೆ ಕುಳ್ಳಿರಿಸಿಕೊಂಡು ಸಾಕಷ್ಟು ಉಪದೇಶ ಮಾಡಿದರು.  "ಒಂದು ಎಸ್ಸೆಸ್ಸೆಲ್ಸಿ ಅಂತ ಮಾಡ್ಕೋ, ಆಮೇಲೆ ಎಲ್ಲಾದ್ರೂ ಹೋಗು, ಬದುಕ್ತೀಯ, ಅಲ್ಲಿ ತನಕ ಇನ್ಯಾವತ್ತೂ ಮನೆ ಬಿಟ್ಟು ಹೋಗ್ಬೇಡ" ಅಂದ ಅಪ್ಪನಿಗೆ ಏನು ಹೇಳಬೇಕೆಂದು ತೋಚಿರಲಿಲ್ಲ.  ಸಾಕಷ್ಟು ಪ್ರೀತಿ ತೋರಿಸಿದ ಅಮ್ಮ ಪ್ರತಿ ಗುರುವಾರ ನನ್ನನ್ನು ಕೋಟೆಯಲ್ಲಿದ್ದ ರಾಘವೇಂದ್ರ ಸ್ವಾಮಿಯ ವೃಂದಾವನಕ್ಕೆ ಕರೆದುಕೊಂಡು ಹೋಗಲು ಶುರು ಮಾಡಿದರು.  ಅಲ್ಲಿ ಆಣೆ ಮಾಡಿ ಅಮ್ಮನಿಗೆ ಹೇಳಿದೆ, "ಅಮ್ಮಾ, ಇನ್ಯಾವತ್ತೂ ನಾನು ಮನೆ ಬಿಟ್ಟು ಹೋಗೋಲ್ಲ, ಚೆನ್ನಾಗಿ ಓದ್ತೀನಿ, ಜೀವನದಲ್ಲಿ ಮುಂದೆ ಬರ್ತೀನಿ".

ಅಮ್ಮ ಈಗಿಲ್ಲ, ಅಪ್ಪ ಎಲ್ಲರಿಂದ ದೂರಾಗಿ ಒಂಟಿಯಾಗಿ ಬದುಕುತ್ತಿದ್ದಾರೆ, ಮೊನ್ನೆ ಶುಕ್ರವಾರ ಫೋನ್ ಮಾಡಿ ಕಕ್ಕುಲಾತಿಯಿಂದ ನನ್ನ ಬಗ್ಗೆ ವಿಚಾರಿಸಿಕೊಂಡಾಗ ಹಳೆಯದೆಲ್ಲ ನೆನಪಾಗಿ ಮನ ನೋವಿನಿಂದ ನರಳಿತು.  ಅಂದು, ತನ್ನ ದುಡುಕುತನದಿಂದ, ಕೆಟ್ಟ ಮುಂಗೋಪದಿಂದ, ಭಯಂಕರ ಹೊಡೆತಗಳಿಂದ ದು:ಸ್ವಪ್ನವಾಗಿದ್ದರು.   ಓಡಿ ಹೋದವನನ್ನು ಹಾಗೇ ಬಿಡದೆ, ಹುಡುಕಿ ಕರೆ ತಂದು, ಪದವೀಧರನಾಗುವಂತೆ ನೋಡಿಕೊಂಡರು.  ಇಂದು, ಅದೇ ಅಪ್ಪ ತುಂಬಾ ಮೇಲೆ ನಿಂತು ದೊಡ್ಡವರಾಗಿ ಕಾಣುತ್ತಾರೆ, ಅಪ್ಪನ ವ್ಯಕ್ತಿತ್ವಕ್ಕೆ ಬೇರೆ ಯಾರೂ ಹೋಲಿಕೆಯಾಗುವುದಿಲ್ಲ.

ಅದೇ ಅಪ್ಪ, ತನ್ನ ಒಂಟಿತನದ ಬಗ್ಗೆ ಹೇಳಿಕೊಳ್ಳುವಾಗ ಮನ ಮೂಕವಾಗಿ ರೋದಿಸುತ್ತದೆ.  ದೇವರೇ, ಅವರಿಗೆ ಯಾಕಿಂಥಾ ಶಿಕ್ಷೆ ನೀಡಿದೆ ಎಂದು ಚೀರುತ್ತದೆ.  ಯಾರ ಮಾತನ್ನೂ ಕೇಳದೆ, ಯಾರ ಹಂಗಿನಲ್ಲೂ ನಾನಿರುವುದಿಲ್ಲವೆನ್ನುವ ಅವರ ಸ್ವಾಭಿಮಾನ, ದುಡುಕುತನದಿಂದ, ಮುಂಗೋಪದಿಂದ ಅವರು ಮಾಡಿದ ಅನಾಹುತಗಳು, ಆ ಕಠೋರ ಮಾತುಗಳು, ಅಪರೂಪಕ್ಕೊಮ್ಮೆ ತೋರುವ ಕಕ್ಕುಲಾತಿ, ಪ್ರೀತಿಸಲೂ ತೋರುವ ಬಿಗುಮಾನ, ಉತ್ತರ ಸಿಗದ ಪ್ರಶ್ನೆಗಳಾಗಿಯೇ ಉಳಿಯುತ್ತವೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಏನು ಬರೆಯಬೇಕೋ ತೋಚುತ್ತಿಲ್ಲ. ಕಣ್ಣು ತುಂಬಿಬಂದವು. - ಕೇಶವ (www.kannada-nudi.blo...)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಕೇಶವ, ನಿಮ್ಮ ಬ್ಲಾಗ್ ನೋಡಿದೆ, ಕೆಲವು ಬರಹಗಳನ್ನು ಓದಿದೆ, ತುಂಬಾ ಚೆನ್ನಾಗಿ ಬರೆದಿದ್ದೀರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ್. ಸ್ಪಲ್ಪ ಹೆಚ್ಚು ಕಡಿಮೆ ನನ್ನ ಕಥೆಯ ಒಂದು ತುಣುಕಿನಂತೆಯೇ ಇದೆ ನಿಮ್ಮ ಕಥೆ!--ನೆನಪುಗಳನ್ನು ಮರುಕಳಿಸಿದ್ದಕ್ಕೆ ಧನ್ಯವಾದಗಳು. <<...ಅಪ್ಪ ತುಂಬಾ ಮೇಲೆ ನಿಂತು ದೊಡ್ಡವರಾಗಿ ಕಾಣುತ್ತಾರೆ, ಅಪ್ಪನ ವ್ಯಕ್ತಿತ್ವಕ್ಕೆ ಬೇರೆ ಯಾರೂ ಹೋಲಿಕೆಯಾಗುವುದಿಲ್ಲ...>> ನನಗೆ ಮೆಚ್ಚುಗೆಯಾದ ಸಾಲುಗಳಿವು. ಜೀವನ ಎಂದರೆ ಏನು ಎಂಬುದನ್ನು ನಾವು ಅಷ್ಟೋ ಇಷ್ಟೋ ಅರಿಯಲು ಪ್ರಯತ್ನಿಸುತ್ತಿದ್ದೇವೆ ಎಂಬುದಕ್ಕೆ ಈ ಸಾಲುಗಳೇ ಸಾಕ್ಷಿ! `ನಾನು ಹೈಸ್ಕೂಲಿಗೇ ಫಸ್ಟ್ ಬಂದಿದ್ದೇನೆ; ನನಗೆ ಯೂನಿಯನ್ ಡೇ ದಿನ ಪ್ರೈಸ್ ಕೊಡ್ತಾರೆ; ನಾನು ಹೋಗಬೇಕು; ಬಸ್ ಚಾರ್ಜಿಗೆ ದುಡ್ಡು ಕೊಡಿ'' ಎಂದು ನಾನು ಗೋಗರೆದರೂ ಕೊಡದೆ ಉದಾಸೀನ ಮಾಡಿದ್ದ ನಮ್ಮಪ್ಪನ ವರ್ತನೆ, ನಿಮ್ಮ ಈ ಲೇಖನ ಓದಿದ ತಕ್ಷಣ ನನಗೆ ನೆನಪಿಗೆ ಬಂತು! ಆದರೂ ಈಗ ನನಗನಿಸುತ್ತಿರುವುದು ಸ್ವರ್ಗಸ್ಥರಾಗಿರುವ ನನ್ನಪ್ಪನೇ ನನಗೆ ನಿಜಕ್ಕೂ ಗ್ರೇಟ್!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಪ್ರಭಾಕರ್, ಕೆಲವೊಮ್ಮೆ ಅಪ್ಪನ ಬಗ್ಗೆ ಅರಿವಿಲ್ಲದೆ ಕೋಪ ಬರುತ್ತದೆ, ಹಲವೊಮ್ಮೆ ಖುಷಿಯಾಗುತ್ತದೆ. ಆದರೆ ಈಗಲೂ ಅವರು ನನಗೆ ಅರ್ಥವಾಗಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ್; ಬಹುಷಃ ಹಾಗೆ ಅರ್ಥವಾಗದೇ ಇರಲು, ನಮ್ಮ ಅರಿವಿಗೇ ಬಾರದೆ ನಿಧಾನವಾಗಿ ಬದಲಾಗುವ ಮೌಲ್ಯಗಳು ಹಾಗೂ ಜನರೇಷನ್ ಗ್ಯಾಪ್ ಕಾರಣವಿರಬಹುದು ಅಂತ ನನ್ನ ಅನಿಸಿಕೆ. ಮುಂದೆ ನಮ್ಮ ಮಕ್ಕಳೂ ಇದೇ ಮಾತು ಹೇಳುವರೇನೋ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ನಿಜ, ಮುಂದೊಂದು ದಿನ ನಮ್ಮ ಮಕ್ಕಳು ನಮಗೆ ಹೀಗೇ ಹೇಳಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.